ಧಾರ್ಮಿಕ ಸಾಮರಸ್ಯ ಮತ್ತು ಭಾವೈಕ್ಯದ ಹುಣ್ಣಿಮೆ

“Rome was not built in a day” (ರೋಂ ನಗರವು ಒಂದು ದಿನದಲ್ಲಿ ಕಟ್ಟಿದಲ್ಲ) ಎಂಬ ನಾಣ್ಣುಡಿ ಇಂಗ್ಲೀಷ್ ಬಲ್ಲವರೆಲ್ಲರಿಗೂ ಗೊತ್ತಿರುವ ಪ್ರಸಿದ್ದವಾದ ನುಡಿಗಟ್ಟು, ವಾಸ್ತವವಾಗಿ ಫ್ರೆಂಚ್ ಭಾಷೆಯ "Romenes'est pas faite en un jour” ಎಂಬುದರ ಇಂಗ್ಲಿಷ್ ಅನುವಾದವಾದ ಇದು ಆ ನುಡಿ ಗಟ್ಟಿನ ಪೂರ್ವಾರ್ಧ ಮಾತ್ರ. ಇದರ ಮುಂದಿನ ಸಾಲು ಹೀಗಿದೆ: “Every hour a brick Was laid”, ಒಟ್ಟಾರೆ ಈ ನುಡಿಗಟ್ಟಿನ ಅರ್ಥ: 'ರೋಂ ನಗರವು ಒಂದು ದಿನದಲ್ಲಿ ನಿರ್ಮಾಣವಾಗಲಿಲ್ಲ ಪ್ರತಿಯೊಂದು ಗಂಟೆಗೂ ಒಂದೊಂದು ಇಟ್ಟಿಗೆಯನ್ನು ಇಡಲಾಯಿತು'. ಅಂದರೆ ಯಾವುದೇ ಮಹತ್ಕಾರ್ಯವು ದಿಢೀರನೆ ಆಗುವುದಿಲ್ಲ ಅದರ ಹಿಂದೆ ಬಹು ಜನರ ಬಹುಕಾಲದ ಪರಿಶ್ರಮ ಹಾಗೂ ಸೇವೆಯ (Effort and Dedication) ಯೋಗದಾನವಿರುತ್ತದೆ' ಎಂಬುದು ಇದರ ತಾತ್ಪರ್ಯ.
ಈ ನುಡಿಗಟ್ಟನ್ನು ಉಲ್ಲೇಖಿಸಲು ಕಾರಣ ಈ ಬಾರಿ ಹಳೆಬೀಡಿನಲ್ಲಿ ಫೆ.1ರಿಂದ 9ರವರೆಗೆ ಆಯೋಜಿಸಿದ್ದ ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ. ಈ ಮಹೋತ್ಸವಕ್ಕೆ ಸಾಗರೋಪಾದಿಯಲ್ಲಿ ಎಲ್ಲ ಸಮುದಾಯಗಳ ಭಕ್ತಸಮೂಹ ಹರಿದುಬಂದಿತ್ತು. ಇದು ಮಠವೊಂದರ ಸಾಂಪ್ರದಾಯಿಕ ಆಚರಣೆಯಾಗಿದ್ದರೂ ನಾಡಹಬ್ಬದ ಸ್ವರೂಪವನ್ನು ಇಂದು ಪಡೆದಿರುವುದು ದಿಢೀರನೆ ಒಂದೇ ದಿನ ಆದದ್ದಲ್ಲ, ಕೇವಲ ಇಟ್ಟಿಗೆಗಳನ್ನು ಸೇರಿಸಿದರೂ ಯಾವುದೇ ಕಟ್ಟಡದ ನಿರ್ಮಾಣ ಆಗುವುದಿಲ್ಲ. ಅದಕ್ಕೆ ಭದ್ರವಾದ ಬುನಾದಿ ಬೇಕು. ಈ ಮಹೋತ್ಸವಕ್ಕೆ ತಾತ್ವಿಕ ತಳಪಾಯವನ್ನು ಹಾಕಿದವರೆಂದರೆ ಬಸವಣ್ಣನವರ ಹಿರಿಯ ಸಮಕಾಲೀನರಾದ ನಮ್ಮ ಮಠದ ಮೂಲಪುರುಷ ವಿಶ್ವಬಂಧು ಮರುಳಸಿದ್ದರು. ತಮ್ಮ ಶಿಷ್ಯ ತೆಲಗುಬಾಳು ಸಿದ್ದೇಶ್ವರನನ್ನು ಈ ಮಾಘಶುದ್ಧ ಹುಣ್ಣಿಮೆಯಂದು ಸದ್ದರ್ಮಪೀಠದಲ್ಲಿ ಕುಳ್ಳಿರಿಸಿ 'ತರಳಾ, ಬಾಳು' ಎಂದು ಹರಸಿದ ಅವರ ದಿವ್ಯಾನುಗ್ರಹವೇ ಇದರ ಭದ್ರ ಬುನಾದಿ. ಮಠದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದ ಈ 'ಭಾರತ ಹುಣ್ಣಿಮೆ'ಯನ್ನು ತರಳಬಾಳು ಹುಣ್ಣಿಮೆಯಾಗಿ ಆಚರಿಸಲು ಪ್ರೇರಣೆ ನೀಡಿದವರು ತಿಪಟೂರಿನ ಅಪ್ಪಟ ಗಾಂಧಿವಾದಿ ಎಸ್. ಆರ್ ಮಲ್ಲಪ್ಪನವರು. ನಮ್ಮ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಧಾರ್ಮಿಕ ಸಾಮರಸ್ಯವನ್ನು ಮೂಡಿಸುವ ಈ ಮಹೋತ್ಸವದ ಮೊದಲ ಇಟ್ಟಿಗೆಯನ್ನು ಇಟ್ಟಿದ್ದು 1950ರಲ್ಲಿ ಈಗಿನ ದಾವಣಗೆರೆ ತಾಲ್ಲೂಕು ಜಗಲೂರಿನಲ್ಲಿ ಆಗಿನ ಕಾಲದಲ್ಲಿ ಇಮ್ಮಣ್ಣ ಎಂದೇ ಪ್ರಸಿದ್ದರಾದ ಮಹಮ್ಮದ್ ಇಮಾಂ ಸಾಹೇಬರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಈ ಮಹೋತ್ಸವವನ್ನು ಆಚರಿಸಿದರು. ಭಾವೈಕ್ಯತೆಯ ಸಂಗಮವಾದ ಈ ಮಹೋತ್ಸವವು ಮರುವರ್ಷ 1951ರಲ್ಲಿ ಇದೇ ಹಳೆಬೀಡಿನಲ್ಲಿ ನಡೆಯಿತು. ಮತೀಯ ದುರ್ಭಾವನೆಗಳಿಗೆ ಅವಕಾಶವಿಲ್ಲದಂತೆ ನಾಡಿನ ನಾನಾ ಭಾಗಗಳಲ್ಲಿ ನಡೆಯುತ್ತಾ ಬಂದಿರುವ ಈ ಮಹೋತ್ಸವದಲ್ಲಿ ಎಲ್ಲ ಧರ್ಮೀಯರೂ ಪಾಲ್ಗೊಂಡು ಭಾವೈಕ್ಯದ ಬೆಸುಗೆಯಲ್ಲಿ ಧಾರ್ಮಿಕ ಸಾಮರಸ್ಯದ ಮಹಾಸೌಧವನ್ನೇ ನಿರ್ಮಾಣ ಮಾಡಿದ್ದಾರೆ. ಏಳು ದಶಕಗಳ ನಂತರ ಮತ್ತೆ ಅದೇ ಹಳೆಬೀಡಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಭಾಗವಹಿಸುವುದು ಅವರ ಪ್ರವಾಸದ ಪ್ರಮುಖ ಉದ್ದೇಶವಾಗಿತ್ತು. ಹುಣ್ಣಿಮೆಯ ನಿಮಿತ್ತ ಅವರು ಕೈಗೊಂಡ ಧರ್ಮಸ್ಥಳ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಮುಂತಾದ ಸ್ಥಳಗಳ ಪ್ರವಾಸ ಕೇವಲ ಪ್ರವಾಸೀ ತಾಣಗಳ ವೀಕ್ಷಣೆ ಅಷ್ಟೇ ಆಗಿರಲಿಲ್ಲ ಅವರ ಭಕ್ತಿಭಾವಗಳ ಸಮರ್ಪಣೆಯೂ ಆಗಿತ್ತು. ಎರಡು ವರ್ಷ ಹಿಂದೆ ಜಗಲೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಿದ್ದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಅಪೇಕ್ಷೆಯಂತೆ ಜಗಲೂರು ಮತ್ತು ಭರಮಸಾಗರ ಏತ ನೀರಾವರಿ ಯೋಜನೆಗಳನ್ನು ಬಜೆಟ್ನಲ್ಲಿ ಸೇರ್ಪಡೆ ಮಾಡಿದ್ದು, ನಂತರ ಮುಖ್ಯಮಂತ್ರಿಗಳಾಗಿ ಬಂದ ಎಚ್. ಡಿ. ಕುಮಾರಸ್ವಾಮಿಯವರು ನೀರಾವರಿ ನಿಗಮದಲ್ಲಿ ಅನುಮೋದನೆ ನೀಡಿದ್ದು, ನಂತರ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಮೊದಲು 250 ಕೋಟಿ ರೂ. ಮುಂಜೂರು ಮಾಡಿ ನಂತರ ನಮ್ಮ ಒತ್ತಾಸೆಗೆ ಮಣಿದು ಈ ಎರಡೂ ಯೋಜನೆಗಳಿಗೆ ಬೇಕಾದ 1200 ಕೋಟಿ ರೂ.ಗಳನ್ನು ಒಂದೇ ಕಂತಿನಲ್ಲಿ ಮುಂಜೂರು ಮಾಡಿದ್ದು ರೈತರಲ್ಲಿ ಧನ್ಯತಾ ಭಾವ ಮೂಡಿಸಿತ್ತು. ಬರಗಾಲದ ಪ್ರಯುಕ್ತ ಮುಂದೂಡಿದ್ದ ಈ ಹುಣ್ಣಿಮೆಯು ಮತ್ತೆ ಬರುವುದರೊಳಗೆ ವರುಣನ ಕೃಪೆಯಿಂದ ಹಳೆಬೀಡು ಕೆರೆಯು ತುಂಬಿದ್ದು ಈ ಭಾಗದ ರಣಘಟ್ಟ ಯೋಜನೆಗೂ ಸಹ ಸರಕಾರ ತಾತ್ವಿಕ ಒಪ್ಪಿಗೆ ನೀಡಿದ್ದು ಜನರಿಗೆ ಸಂತಸವನ್ನುಂಟುಮಾಡಿತ್ತು.
ತರಳಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ