ಒಳಗೆ ಕುಟಿಲ, ಹೊರಗೆ ವಿನಯ ತೋರುವ ಗೋಮುಖವ್ಯಾಘ್ರರು

  •  
  •  
  •  
  •  
  •    Views  

ಸೆಯಾಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ- ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ, ಅದೇಕೆಂದೊಡೆ ನಿಮ್ಮತ್ತಲೆನ್ನ ಬರಲೀಯವು- ಇದು ಬಸವಣ್ಣನವರು ಮಾಡಿದ ಅಂತರಂಗ ಸಾಧನೆ. ದೇವರ ಒಲುಮೆಯಾಗಬೇಕೆಂದರೆ ಮನದ ಈ ಮೈಲಿಗೆ ಯನ್ನು ಕಳೆದುಕೊಳ್ಳಬೇಕೆಂಬುದು ಅವರು ಕಂಡುಕೊಂಡ ಆಧ್ಯಾತ್ಮಿಕ ಪಥ, 'ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು' ಎಂಬ ಅವರ ಇನ್ನೊಂದು ಮಾತಿನ ತಾತ್ಪರ್ಯವೆಂದರೆ ಬಹಿರಂಗ ದಲ್ಲಿ ಆಡುವ ಮಾತು ಕೇವಲ ಆಕರ್ಷಕವಾಗಿದ್ದರೆ ಸಾಲದು; ಅಂತರಂಗದಲ್ಲಿ ಆಡುವವನ ಮನಸ್ಸು ಶುಚಿಯಾಗಿರಬೇಕು. ಆಗ ವ್ಯಕ್ತಿ ಆಡಿದ ಮಾತು ದೇವರಿಗೂ ಮೆಚ್ಚುಗೆಯಾಗುತ್ತದೆ. ಆದರೆ ಈ ರೀತಿ ತಮ್ಮ ಮನಸ್ಸನ್ನು ಪರಿಮಾರ್ಜನೆಗೊಳಿಸಿಕೊಂಡು ಜೀವನಾದರ್ಶದ ಮಾತುಗಳನ್ನಾಡುವವರು ಈಗ ಸಿಗುವುದು ದುರ್ಲಭ, ವಿರಳಾತಿ ವಿರಳ! ಇದನ್ನು ಕಂಡೇ ಕಬೀರರು ಹೇಳಿದ್ದು: “ಪರ ಉಪದೇಶ್ ಕುಶಲ ಬಹು ತೇರೇ, ಜೇ ಆಚರಹಿಂ ತೇ ನಹಿ ಘನೆರೇ! (ಇನ್ನೊಬ್ಬರಿಗೆ ಉಪದೇಶ ಮಾಡುವವರು ಬಹಳ ಜನ, ಆದರೆ ಅದರಂತೆ ನಡೆಯುವವರು ಬಹಳ ವಿರಳ).

ತಮ್ಮ ಸ್ವಾರ್ಥ ಸಾಧನೆಗಾಗಿ ಬೆಲ್ಲದಂತಹ ಮಾತುಗಳನ್ನಾಡುವ ಜನರೇ ಜಾಸ್ತಿ. ಅಧಿಕಾರಾರೂಢರ ಸುತ್ತ ಗಿರಕಿ ಹೊಡೆಯುವ ಈ ಜನರಿಗೆ ಯಾರ ಹತ್ತಿರ ಏನು ಮಾತನಾಡಿದರೆ ತಮ್ಮ ಕಾರ್ಯ ಸಾಧನೆಯಾಗುತ್ತದೆಯೆಂಬ ವ್ಯಾವಹಾರಿಕ ಜ್ಞಾನ ಚೆನ್ನಾಗಿರುತ್ತದೆ. ಆ ಜ್ಞಾನ ಕಿವಿ ಸೋಲುವವರಿಗೆ ಇರುವುದಿಲ್ಲ. ಸ್ವಾರ್ಥಿಗಳು ಇಲ್ಲ ಸಲ್ಲದ ಚಾಡಿ ಛಿದ್ರದ ಮಾತುಗಳನ್ನಾಡಿ ತಮ್ಮ ಕಾರ್ಯಸಾಧನೆಗೆ ಯತ್ನಿಸುತ್ತಾರೆ. 'ರಾಮಾಯ ಸ್ವಸ್ತಿ! ರಾವಣಾಯ ಸ್ವಸ್ತಿ!' ಎಂಬುದು ಇವರ ಧೋರಣೆ. 'ರಾಮನಿಗೂ ಜೈ, ರಾವಣನಿಗೂ ಜೈ' ಎನ್ನುವ ಈ ಜನ ತಮ್ಮ ಕಾರ್ಯ ಸಾಧನೆಗಾಗಿ ಕತ್ತೆ ಕಾಲು ಹಿಡಿಯಲೂ ಸಿದ್ಧ, ಯಾರ ಉಸಾಬರಿಗೂ ಹೋಗದೆ ತಮ್ಮ ಪಾಡಿಗೆ ತಾವು ಇದ್ದರೂ ಸುಮ್ಮನಿರಲು ಬಿಡುವುದಿಲ್ಲ. ಇವರು ಒಂದು ರೀತಿಯಲ್ಲಿ ಹಸುಗಳಂತೆ ಕಾಣಿಸಿಕೊಂಡು ಹುಲಿಯಂತೆ ಮೈಮೇಲೆ ಎರಗುವ ಗೋಮುಖ ವ್ಯಾಘ್ರರು! 'ಸಲಾಂ ಆಲೆಕುಂ ಮಾ ಸಾಲೇ ಕೋ' ಎನ್ನುವಂತೆ ಎದುರಿಗೆ ಮಾತನಾಡುವುದೇ ಒಂದು, ಮರೆಯಲ್ಲಿ ಮಾತನಾಡುವುದೇ ಮತ್ತೊಂದು. ಎದುರಿಗೆ ಸಿಕ್ಕಾಗ ಒಳ್ಳೆಯ ಮಾತುಗಳನ್ನಾಡಿ ಮನಸ್ಸಿನ ಕಸಾಯಿಖಾನೆಯಲ್ಲಿ ಹರಿತವಾದ ಮಸೆದ ಚೂರಿಯನ್ನು ಇಟ್ಟುಕೊಂಡು ತನಗಾಗದವರನ್ನು ಇರಿಯಲು ಅವಕಾಶಕ್ಕಾಗಿ ಸದಾ ಕಾಯುತ್ತಿರುತ್ತಾರೆ. ‘ಹೊರಗೆ ಬಸಪ್ಪ, ಒಳಗೆ ವಿಷಪ್ಪ' ಎಂಬ ಗಾದೆ ಮಾತಿನ ಹಿಂದಿನ ತಾತ್ಪರ್ಯವೂ ಇದೇ ಆಗಿದೆ.ಈ ಗಾದೆ ಮಾತಿನಿಂದ ಇನ್ನೊಬ್ಬರನ್ನು ಹೀಯಾಳಿಸುವವರೂ ಸಹ ಅನೇಕ ವೇಳೆ ಸ್ವತಃ ಈ ಗಾದೆ ಮಾತಿಗೆ ರೂಪಕವಾಗಿರುತ್ತಾರೆ. ಅಂಥವರು "I am not what I am!' ಎಂದು ಸ್ವಗತದಲ್ಲಿ ಹೇಳುವ ಶೇಕ್ಸ್ಪಿಯರ್ನ ಒಥೆಲೋ ನಾಟಕದ ಇಯಾಗೋ ಪಾತ್ರದಂತಹ ಮನೋಧರ್ಮ ಉಳ್ಳವರಾಗಿರುತ್ತಾರೆ. 

ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾಂಸ, ಬಾಯಲ್ಲಿ ಸುರೆಯ ಗಡಿಗೆ ಇದ್ದರೂ ಕೊರಳಲ್ಲಿ ಲಿಂಗವಿದ್ದರೆ ಸಾಕು ಅಂಥವನನ್ನು ಸಾಕ್ಷಾತ್ ಶಿವನೆಂಬೆ ಎಂದು ಭಾವುಕರಾಗಿ ಶರಣರ ಬರವಿಂಗೆ ಹಾತೊರೆಯುವ ಬಸವಣ್ಣನವರೂ ಸಹ ಕೆಲವೊಮ್ಮೆ ಕಪಟ ಭಕ್ತರನ್ನು ಕಂಡು ಬೇಸತ್ತು ಹೇಳುವ ಮಾತು: 

ಒಳಗೆ ಕುಟಿಲ; ಹೊರಗೆ ವಿನಯವಾಗಿ 
ಭಕ್ತರೆನಿಸಿಕೊಂಬವರ 
ಬಲ್ಲನೊಲ್ಲನಯ್ಯಾ ಲಿಂಗವು !
ಅವರು ಸತ್ಪಥಕ್ಕೆ ಸಲ್ಲರು, ಸಲ್ಲರಯ್ಯಾ. 
ಒಳಹೊರಗೊಂದಾಗದವರಿಗೆ ಅಳಿಯಾಸೆ ದೋರಿ 
ಬೀಸಾಡುವನವರ ಕೂಡಲಸಂಗಮದೇವ!

ಬಸವಣ್ಣನವರ ಪ್ರಕಾರ ಒಳಗೆ ಕುಟಿಲ ಮತ್ತು ಹೊರಗೆ ವಿನಯ ತೋರುವವರನ್ನು ದೇವರು ನೋಡುತ್ತಲೇ ಇರುತ್ತಾನೆ, ಚಿಕ್ಕದೊಂದು ಆಸೆಯನ್ನು ತೋರಿಸಿ ಬಲೆಗೆ ಕೆಡವಿ ಮೂಟೆಕಟ್ಟಿ ಎಸೆ ಯುತ್ತಾನೆ. ಇತಿಹಾಸದಲ್ಲಿ ಇದಕ್ಕೆ ಅನೇಕ ಜೀವಂತ ನಿದರ್ಶನಗಳು ಇಡಿಕಿರಿದಿವೆ. ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿ ಹೋರಾಡಿದ ಕನ್ನಡ ನಾಡಿನ ಕೆಚ್ಚೆದೆಯ ವೀರಾಗ್ರಣಿ ಕಿತ್ತೂರು ರಾಣಿ ಚೆನ್ನಮ್ಮನಿಗೆ ದ್ರೋಹ ಬಗೆದವರು ಯಾರು? ಕಿತ್ತೂರು ಕೋಟೆಯ ಹೊರಗಿದ್ದ - ಶತ್ರುಗಳಲ್ಲ ಕೋಟೆಯೊಳಗೇ ಇದ್ದ ಹಿತಶತ್ರುಗಳಾದ ಮಲ್ಲಪೆಟ್ಟಿ ಮತ್ತು ವೆಂಕಟರಾವ್. ಭಾರಿ ಬಹುಮಾನ ಮತ್ತು ಅಧಿಕಾರ ಸಿಗುತ್ತದೆಂಬ ಆಸೆಯಿಂದ ಪಿತೂರಿ ಮಾಡಿದ್ದ ಅವರಿಗೆ ಕೊನೆಗೆ ಸಿಕ್ಕಿದ್ದೇನು? ನಿಮ್ಮ ರಾಣಿಗೆ ದ್ರೋಹ ಬಗೆದ ನಿಮ್ಮನ್ನು ಉಳಿಸಿದರೆ ನಾಳೆ ನಮಗೂ ದ್ರೋಹ ಬಗೆಯುತ್ತೀರಿ! ಎಂದು ಬ್ರಿಟಿಷರು ಕೊಟ್ಟ ಸರಿಯಾದ ಉಡುಗೊರೆ ಎಂದರೆ ಗುಂಡೇಟು! ತನ್ನ ಮಗಳಾದ ಸಂಯುಕ್ತಿಯನ್ನು ಪ್ರೀತಿಸಿ ವೀರೋಚಿತವಾಗಿ ಮದುವೆಯಾದ ರಜಪೂತ ದೊರೆ ಪೃಥ್ವಿರಾಜನನ್ನು ಯುದ್ಧದಲ್ಲಿ ಗೆಲ್ಲುವ ಎದೆಗಾರಿಕೆ ಕನೌಜ್ ದೊರೆ ಜಯಚಂದ್ರನಿಗೆ ಇರಲಿಲ್ಲ, ಪೃಥ್ವಿ ರಾಜನ ಮೇಲೆ ಆಕ್ರಮಣ ಮಾಡಲು ಮಹಮ್ಮದ್ ಘೋರಿಗೆ ಆಹ್ವಾನ ಕೊಟ್ಟ ತನ್ನ ಮಗಳು ವಿಧವೆಯಾದರೂ ಚಿಂತೆಯಿಲ್ಲ; ಜಯಚಂದ್ರನಿಗೆ ಸೇಡು ಮುಖ್ಯವಾಗಿತ್ತು. 'ಮೈಸೂರು ಹುಲಿ' ಎಂದೇ ಖ್ಯಾತಿಯನ್ನು ಪಡೆದ ಟಿಪ್ಪೂ ಸುಲ್ತಾನನ ವಿರುದ್ಧ ಬ್ರಿಟಿಷರ ಜೊತೆ ಕೈಜೋಡಿಸಿ ವಂಚನೆ ಮತ್ತು ಮೋಸಕ್ಕೆ ಮತ್ತೊಂದು ಹೆಸರಾದವನು ಟಿಪ್ಪುವಿನ ಆಪ್ತಮಂತ್ರಿಯಾಗಿದ್ದ ಮೀರ್ ಸಾದಿಕ್, ಹೆಸರಿಗೆ ತಕ್ಕಂತೆ ಶಾಂತಸ್ವಭಾವದವರಾದ ನಮ್ಮ ಗುರುಪಿತಾಮಹರಾದ ಶ್ರೀ ಗುರುಶಾಂರಾಜ ದೇಶಿಕೇಂದ್ರ ಮಹಾಸ್ವಾಮಿಗಳವರಿಗೆ ಮಜ್ಜಿಗೆಯಲ್ಲಿ ವಿಷ ಬೆರೆಸಿ ಆಹುತಿ ತೆಗೆದುಕೊಂಡವರು ಹೊರಗಿನವರಲ್ಲ ಮಠದೊಳಗೇ ಇದ್ದಹಿತಶತ್ರುಗಳು.

'ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ' ಎನ್ನುತ್ತದೆ ಯೋಗವಾಸಿಷ್ಟ, ಮಾನವನ ಸರ್ವ ಪಾಪಗಳಿಗೂ ಮತ್ತು ಮುಕ್ತಿಗೂ ಮನುಷ್ಯನ ಮನಸ್ಸೇ ಕಾರಣ. ಎದುರಾಳಿಯ ಮಾತುಗಳಿಂದ ಕೆರಳಿದವನು 'ನಿನ್ನ ನಾಲಗೆ ಸೀಳಿ ಬಿಡುತ್ತೇನೆ' ಎನ್ನುವುದನ್ನು ಕೇಳಿರುತ್ತೀರಿ, ಚಾಮರಸನ ಪ್ರಭುಲಿಂಗ ಲೀಲೆ ಕಾವ್ಯದಲ್ಲಿ ತನ್ನನ್ನು ಜರಿದ ಅಲ್ಲಮನ “ನಾಲಗೆಯ ಬೇರುಸಹಿತವೆ ಕೀಳುವೆನು ಎಂದು ಸಿದ್ದರಾಮ ಕನಲಿ ಕೆಂಡವಾಗಿರುವುದರ ಚಿತ್ರಣವಿದೆ. ಕೆರಳಿಸುವಂತಹ ಮಾತುಗಳನ್ನಾಡುವ ನಾಲಗೆಯನ್ನೇ ಶತ್ರು ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಅದರಿಂದ ಆಗುವ ಗಾಯ ಕತ್ತಿಯ ಹೊಡೆತಕ್ಕಿಂತಲೂ ತೀವ್ರತರವೆಂಬುದು ನಿಜ. ಆದರೆ ಹೀಗೆ ಸಾರಾಸಗಟಾಗಿ ನಾಲಗೆಯನ್ನೇ ಖಳನಾಯಕ ನೆಂದು ತೀರ್ಮಾನಿಸುವುದು ತಪ್ಪು. ಏಕೆಂದರೆ ನಾಲಗೆ ಎಲ್ಲ ಇಂದ್ರಿ ಯಗಳಂತೆ ಒಂದು ಇಂದ್ರಿಯವಷ್ಟೇ. ಅದಕ್ಕೆ ಯಾವ ಸ್ವಾತಂತ್ಯವೂ ಇಲ್ಲ; ಅದು ಮನಸ್ಸಿನ ಅಧೀನ. ಮನಸ್ಸು ಆಜ್ಞೆಗೈದಂತೆ ಅದು ಆಡುತ್ತದೆ. ಅದರದೇನಿದ್ದರೂ ನಿಷ್ಠಾವಂತ ರೊಬೋಟಿನ ಕೆಲಸ ಮಾತ್ರ ಕೊಟ್ಟ ಆಜ್ಞೆಯನ್ನು ಸರಿಯೋ ತಪ್ಪೋ ಎಂದು ವಿಮರ್ಶಿಸಲು ಹೋಗದೆ, ಅದರ ಪರಿಣಾಮವೇನಾದೀತೆಂದು ಯೋಚಿಸದೆ ಶಿರಸಾ ವಹಿಸಿ ನಿರ್ವಹಿಸಿ ಸುಮ್ಮನಿದ್ದು ಮುಂದಿನ ನಿರ್ದೇಶನವನ್ನು ಮನಸ್ಸಿನಿಂದ ನಿರೀಕ್ಷಿಸುವುದಷ್ಟೇ ಅದರ ಕೆಲಸ! ನಿಜವಾದ ಅಪರಾಧಿ ಮಾತ್ರ ಮನಸ್ಸೇ ಆಗಿರುತ್ತದೆ. ಯಾರ ಕೈಗೂ ಸಿಗದೆ ಎಲ್ಲೋ ಅಡಗಿ ಕುಳಿತಿರುತ್ತದೆ; ತನ್ನ ಅದೃಶ್ಯ ಅನೂಹ್ಯ ಸೂತ್ರಗಳಿಂದ ಮನುಷ್ಯನನ್ನು ಆಡಿಸುತ್ತಿರುತ್ತದೆ. “ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ” ಎಂದು ಅಕ್ಕಮಹಾದೇವಿ ಹೇಳಿರುವಂತೆ ಮನುಷ್ಯನು ಮಾಡುವ ಎಲ್ಲ ತಪ್ಪು ಒಪ್ಪುಗಳಿಗೆ ಮನಸ್ಸೇ ಕಾರಣ. ಅಂತಹ ಮನಸ್ಸನ್ನು ಮಲಿನಗೊಳ್ಳದಂತೆ ವಿವೇಕ ಬುದ್ದಿಯಿಂದ ನಿಯಂತ್ರಣದಲ್ಲಿಟ್ಟು ಕೊಳ್ಳುವುದರಲ್ಲಿಯೇ ಮಾನವನ ಕಲ್ಯಾಣ ಇರುವುದು. ಅದನ್ನು ಬಿಟ್ಟು ಮತ್ತೆ ಯಾವ ಕಲ್ಯಾಣವೂ ಇಲ್ಲ,

ಎನ್ನ ನುಡಿ ಎನಗೆ ನಂಜಾಯಿತ್ತು 
ಎನ್ನ ಅಲಗೇ ಎನ್ನ ಕೊಂದಿತ್ತು 
ಆಳು ಮುನಿದೊಡೆ ಆಳೇ ಕೆಡುವನು 
ಆಳ್ದ ಮುನಿದೊಡೆ ಆಳೇ ಕೆಡುವನು...

ಮನುಷ್ಯನ ಉನ್ನತಿ ಮತ್ತು ಅವನತಿಗಳು ಇರುವುದು ಅವನ ನಡೆನುಡಿಗಳಲ್ಲಿ ಕೆಲವೊಮ್ಮೆ ಗೊತ್ತಿಲ್ಲದೇ ತಪ್ಪುಗಳು ಆಗುವುದು ಸಹಜ. ವಿವೇಕಶಾಲಿಗಳು ಯಾರೂ ಅವುಗಳನ್ನು ತಪ್ಪು ಎಂದು ಎಣಿಸುವುದಿಲ್ಲ ಆದರೆ ಗೊತ್ತಿದ್ದೂ ಪ್ರಜ್ಞಾಪೂರ್ವಕವಾಗಿ ಮಾಡುವ ತಪ್ಪುಗಳು ಅಕ್ಷಮ್ಯ. ಅಂತಹ ತಪ್ಪು ನಡೆ/ನುಡಿ ಆತ್ಮ ಘಾತುಕ. ಆತ್ಮ ರಕ್ಷಣೆಗೆ/ ಶತ್ರುವಿನ ಸಂಹಾರಕ್ಕೆ ಎಂದು ಇಟ್ಟು ಕೊಂಡಿದ್ದ ಖಡ್ಗವೇ ತನಗೆ ಇರಿದಂತೆ! ಅದನ್ನು ಹಿಡಿದವನೇ ಅದಕ್ಕೆ ಗುರಿಯಾಗುತ್ತಾನೆ. ನುಡಿ ಪಾರದರ್ಶಕವಾಗಿದ್ದರೆ, ಮನದಲ್ಲಿ ಕುಟಿಲವಿಲ್ಲದಿದ್ದರೆ, ಕೇಳುವವರ ಮನಸ್ಸನ್ನು ಪ್ರಸನ್ನಗೊಳಿಸುತ್ತದೆ. ಅದಕ್ಕೆ ತಕ್ಕಂತೆ ಅದನ್ನಾಡುವವನ ಗೌರವ ಹೆಚ್ಚುತ್ತದೆ. ಇಲ್ಲದಿದ್ದರೆ ಅವರಾಡುವ ಮಾತು /ನಡೆ 'ಒಂದನಾಡ ಹೋಗಿ ಒಂಬತ್ತನಾಡುವ' ಢಂಬಕರ ಮಾತುಗಳಾಗಿ ಅವರಿಗೇ ಮುಳುವಾಗುತ್ತವೆ: 

ತನ್ನಾತ್ಮ ತನಗೆ ಹಗೆಯಾದ ಬಳಿಕ 
ಬಿನ್ನಾಣವುಂಟೇ,
ಮಹಾದಾನಿ ಕೂಡಲಸಂಗಮ ದೇವಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.27.2.2020
ಬಿಸಿಲು ಬೆಳದಿಂಗಳು