ಕೇಡಿನತ್ತ ಕರೆದೊಯ್ಯುವ ವಿಷಯಾಸಕ್ತಿ ಮತ್ತು ಅಹಂಕಾರ

  •  
  •  
  •  
  •  
  •    Views  

ತಿಹಾಸದುದ್ದಕ್ಕೂ ಒಳ್ಳೆಯವರು ಮತ್ತು ಕೆಟ್ಟ ವ್ಯಕ್ತಿಗಳ 'ಮಧ್ಯೆ ನಿರಂತರವಾಗಿ ಸಂಘರ್ಷ ನಡೆಯುತ್ತಾ ಬಂದಿದೆ. ಇವರು ಒಳ್ಳೆಯವರು, ಅವರು ಕೆಟ್ಟವರು ಎಂದು ತಿಳಿದುಕೊಳ್ಳಲು ಇರುವ ಮಾನದಂಡವಾದರೂ ಏನು? ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನೊಳಗೆ ಸದ್ಗುಣ ದುರ್ಗುಣಗಳ ತುಮುಲ ನಡೆಯುತ್ತಿರುತ್ತದೆ. ಆ ತುಮುಲದಲ್ಲಿ ಆಯಾಯ ವ್ಯಕ್ತಿಯ ಸಂಸ್ಕಾರ ಮತ್ತು ಪರಿಸರಕ್ಕನುಗುಣವಾಗಿ ಅವುಗಳಲ್ಲಿ ಪ್ರಬಲವಾದುದು ಪ್ರಕಟಗೊಂಡು ಒಳ್ಳೆಯವನು ಅಥವಾ ಕೆಟ್ಟವನು ಎಂದು ಕರೆಸಿಕೊಳ್ಳುತ್ತಾನೆ. ಕಲಿಕಾಲ ತುಂಬಾ ಕೆಟ್ಟದ್ದು ಎಂದು ಬಿಂಬಿತವಾದರೂ ದ್ವಾಪರಯುಗದಲ್ಲಿ ಎಲ್ಲವೂ ಸರಿ ಇತ್ತು ಎಂದು ಹೇಳಲು ಬರುವುದಿಲ್ಲ ಮಹಾಭಾರತ ಯುದ್ದ ನಡೆದದ್ದು ದ್ವಾಪರ ಯುಗದಲ್ಲಿಯೇ ತಾನೆ?

ಕಠೋಪನಿಷತ್ತಿನ ಆರಂಭದಲ್ಲಿ ಒಂದು ರೋಚಕ ಪ್ರಸಂಗ ಬರುತ್ತದೆ: ವಾಜಶ್ರವಸ್ ಎಂಬ ಒಬ್ಬ ಮಹಾರಾಜ ಸ್ವರ್ಗಸುಖವನ್ನು ಬಯಸಿ ಒಂದು ಯಜ್ಞವನ್ನು ಆರಂಭಿಸುತ್ತಾನೆ. ಯಜ್ಞದ ಸಂದರ್ಭದಲ್ಲಿ ಅನೇಕ ಹಸುಗಳನ್ನು ದಾನವಾಗಿ ನೀಡುತ್ತಾನೆ. ಆ ಹಸುಗಳು ಹೇಗಿದ್ದವೆಂಬುದನ್ನು ತಂದೆಯ ಪಕ್ಕದಲ್ಲಿಯೇ ಕುಳಿತಿದ್ದ ರಾಜಕುಮಾರ ನಚಿಕೇತನು ಸೂಕ್ಷ್ಮ ವಾಗಿ ಗಮನಿಸುತ್ತಾನೆ: 

ಪೀತೋದಕಾ ಜಗತ್ರಣಾ ದುಗ್ಗದೋಹಾ ನಿರಿಂದ್ರಿಯಾಃ | 
ಆನಂದಾ ನಾಮ ತೇ ಲೋಕಾಸ್ತಾನ್ ಸ ಗಚ್ಚತಿ ತಾ ದದತ್ ||

ನೀರನ್ನು ಕುಡಿಯಲೂ ಶಕ್ತಿಯಿಲ್ಲದ, ಹುಲ್ಲನ್ನು ತಿನ್ನಲೂ ನಿಶಕ್ತವಾದ, ಹಾಲು ಕೊಡಲು ಅಸಮರ್ಥವಾದ ತೀರಾ ಬಡಕಲು ದೇಹದ ಈ ಹಸುಗಳನ್ನು ದಾನವಾಗಿ ಕೊಟ್ಟು ಯಾವ ಸ್ವರ್ಗಕ್ಕೆ ಹೋಗುತ್ತೀಯಾ? ನನ್ನನ್ನು ಯಾರಿಗೆ ಕೊಡುತ್ತೀಯಾ?” ಎಂದು ರಾಜಕುಮಾರ ನಚಿಕೇತನು ತಂದೆಯನ್ನು ಕೇಳುತ್ತಾನೆ. ಯಜ್ಞಕಾರ್ಯದಲ್ಲಿ ನಿರತನಾಗಿದ್ದ ತಂದೆ ಉತ್ತರಿಸುವುದಿಲ್ಲ, ನಚಿಕೇತ ಸುಮ್ಮನಾಗದೆ ಪದೇ ಪದೆ, ನನ್ನನ್ನು ಯಾರಿಗೆ ಕೊಡುತ್ತೀಯಾ? ಹೇಳು, ಎಂದು ಪೀಡಿಸಿ ಕೇಳಿದ್ದರಿಂದ ಸಿಟ್ಟಿಗೆದ್ದ ತಂದೆ, “ನಿನ್ನನ್ನು ಯಮನಿಗೆ ಕೊಡುತ್ತೇನೆ, ತೊಲಗು ಇಲ್ಲಿಂದ, ಎಂದು ಗದರಿಸುತ್ತಾನೆ. ತಂದೆಯ ಮಾತನ್ನು ಗಂಭೀರವಾಗಿ ತೆಗೆದುಕೊಂಡ ನಚಿಕೇತನು ಯಮಲೋಕಕ್ಕೆ ಹೋಗುತ್ತಾನೆ. ಎಲ್ಲಿಯೋ ಹೋಗಿದ್ದ ಯಮ ಮೂರು ದಿನ ತಡವಾಗಿ ಬರುತ್ತಾನೆ. ಮೂರು ದಿನಗಳ ಕಾಲ ಕಾಯಿಸಿದ್ದಕ್ಕಾಗಿ ಯಮ ವಿಷಾದಿಸಿ, 'ನಿನಗೆ ಮೂರು ವರಗಳನ್ನು ಕೊಡುತ್ತೇನೆ ಏನು ಬೇಕು ಕೇಳು, ಎನ್ನುತ್ತಾನೆ. ಅದಕ್ಕೆ ನಚಿಕೇತನು ಮೊದಲನೆಯ ವರವಾಗಿ, 'ನಾನು ವಾಪಸು ಹೋದ ಮೇಲೆ ನನ್ನ ತಂದೆಯು ಸಿಟ್ಟು ಮಾಡದೆ ನನ್ನನ್ನು ಶಾಂತ ಸುಮನಸ್ಕನಾಗಿ ಬರಮಾಡಿಕೊಳ್ಳುವಂತಾಗಲಿ, ಎಂದು ಕೇಳುತ್ತಾನೆ. ಇನ್ನು ಎರಡನೆಯ ವರವಾಗಿ, 'ಸ್ವರ್ಗ ಲೋಕದಲ್ಲಿ ನಿನ್ನ ಭಯವಾಗಲೀ, ಮುಪ್ಪಿನ ಭಯವಾಗಲೀ ಇರುವುದಿಲ್ಲವಂತೆ. ಅಲ್ಲಿರುವವರು ಹಸಿವುತೃಷೆಗಳ ಬಾಧೆ ಇಲ್ಲದೆ ಯಾವ ದುಃಖವೂ ಇಲ್ಲದೆ ಸುಖಸಂತೋಷಗಳಿಂದ ಇರುತ್ತಾರಂತೆ. ಅಂತಹ ಸ್ವರ್ಗಲೋಕವನ್ನು ಪಡೆಯುವ ಬಗೆ ಹೇಗೆ, ತಿಳಿಸಿಕೊಡು, ಎಂದು ಕೇಳುತ್ತಾನೆ. ಇನ್ನು ಮೂರನೆಯ ಹಾಗೂ ಕೊನೆಯ ವರವಾಗಿ, “ಮನುಷ್ಯ ಸತ್ತ ಮೇಲೆ ಅವನ ಆತ್ಮ ಇರುತ್ತದೆಯೆಂದು ಕೆಲವರೂ, ಇಲ್ಲವೆಂದು ಕೆಲವರೂ ಹೇಳುತ್ತಾರೆ. ಈ ಸಂದೇಹವನ್ನು ನಿವಾರಣೆ ಮಾಡು,” ಎಂದು ನಚಿಕೇತ ಕೇಳುತ್ತಾನೆ. ಮೊದಲನೆಯ ಎರಡು ವರಗಳನ್ನು ತಡಮಾಡದೆ ಅನುಗ್ರಹಿಸಿದ ಯಮನು ಮೂರನೆಯ ವರವನ್ನು ಅನುಗ್ರಹಿಸಲು ಹಿಂದೇಟು ಹಾಕುತಾನೆ. “ಯೇ ಯೇ ಕಾಮಾಃ ದುರ್ಲಭಾಃ ಮರ್ತ್ಯಲೋಕೇ ಸರ್ವಾನ್ ಕಾಮಾಂಶ್ಚಂದತಃ ಪ್ರಾರ್ಥಯಸ್ತ” ಎಂದು ಅನೇಕ - ಪ್ರಲೋಭನೆಗಳನ್ನು ಒಡ್ಡುತ್ತಾನೆ. ಆತ್ಮದ ವಿಚಾರವಾಗಿ ತಿಳಿದುಕೊಳ್ಳಲು ದೇವಾನುದೇವತೆಗಳಿಗೂ ಕಷ್ಟವಾಗಿದೆ, ಅದು ಅಷ್ಟು ಸುಲಭಗ್ರಾಹ್ಯವಲ್ಲ, ಅದನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು. ನಿನಗೆ ರಾಜ್ಯ, ಕೋಶ, ಆನೆ, ಕುದುರೆ, ರಥ, ಏನು ಬೇಕು ಕೇಳು. ಧನಕನಕ ಸಂಪತ್ತು, ಸುರಸುಂದರಿಯರು, ಮಕ್ಕಳು, ಮೊಮ್ಮಕ್ಕಳೊಂದಿಗೆ ನೀನು ಚಿರಕಾಲ ಬದುಕುವಂತೆ ಮಾಡುತ್ತೇನೆ, ಭೂಲೋಕದಲ್ಲಿ ಸಿಗಲಾರದ್ದು ಏನೇ ಇದ್ದರೂ ಕೊಡುತ್ತೇನೆ, ಈ ಆತ್ಮದ ವಿಚಾರ ಮಾತ್ರ ದಯಮಾಡಿ ಕೇಳಬೇಡ, ಎಂದು ಯಮ ಪರಿಪರಿಯಾಗಿ ಪುಸಲಾಯಿಸಿದರೂ ನಚಿಕೇತ ಅದಾವುದಕ್ಕೂ ಮರುಳಾಗದೆ ಹಿಡಿದ ಪಟ್ಟನ್ನು ಬಿಡುವುದಿಲ್ಲ, ಅವಾವೂ ನನಗೆ ಬೇಡ. ಇವೆಲ್ಲವನ್ನೂ ನೀನೇ ಇಟ್ಟುಕೋ. ನನಗೆ ಮಾತ್ರ ಆತ್ಮವನ್ನು ಕುರಿತು ಹೇಳು, ಎಂದು ಆಗ್ರಹಪಡಿಸುತ್ತಾನೆ. ನಚಿಕೇತನ ಮನಸ್ಸಿನಲ್ಲಿರುವ ಆತ್ಮಜ್ಞಾನದ ಹೆಬ್ಬಯಕೆಗೆ ಮಾರುಹೋದ ಯಮ ಮನುಷ್ಯನ ಬದುಕಿನಲ್ಲಿ ಎದುರಾಗುವ ದ್ವಂದ್ವಗಳನ್ನು ಈ ರೀತಿ ವಿಶ್ಲೇಷಣೆ ಮಾಡುತ್ತಾನೆ:

ಶ್ರೇಯಶ್ಚ ಪ್ರೇಯಶ್ಚಮನುಷ್ಯಮೇತಃ 
ತೌ ಸ೦ಪರೀತ್ಯ ವಿವಿನಕ್ತಿ ಧೀರಃ 
ಶ್ರೇಯೋ ಹಿ ಧೀರೋಭಿಪ್ರೇಯಸೋ ವೃಣೀತೇ 
ಪ್ರೇಯೋ ಮಂದೋ ಯೋಗಕ್ಷೇಮಾದ್ ವೃಣೀತೇ 
(ಕಠೋಪನಿಷತ್ 1.2.2)

ಕಠೋಪನಿಷತ್ತಿನ ಪ್ರಕಾರ ಶ್ರೇಯಸ್ಸು ಮತ್ತು ಪ್ರೇಯಸ್ಸು ಎರಡೂ ಒಟೊಟ್ಟಿಗೇ ಮನುಷ್ಯನ ಕಣ್ಮುಂದೆ ಸುಳಿದಾಡುತ್ತವೆ. ವಿವೇಕಿಯು ಸಾಕಷ್ಟು ಆಲೋಚಿಸಿ ತನಗೆ ಶಾಶ್ವತ ಸುಖವನ್ನು ನೀಡುವ ಶ್ರೇಯಸ್ಕರವಾದುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಅವಿವೇಕಿಯು ಬಾಹ್ಯ ಆಕರ್ಷಣೆಗೆ ಒಳಗಾಗಿ ತನಗೆ ತಾತ್ಕಾಲಿಕ ಸುಖವನ್ನು ನೀಡುವ ಪ್ರಿಯವಾದುದನ್ನು ಆಯ್ಕೆಮಾಡಿ ಕೊಳ್ಳುತ್ತಾನೆ. ಒಂದು ಪಾರಮಾರ್ಥಿಕ ಆದರ್ಶ ಮತ್ತೊಂದು ಲೌಕಿಕ ಆಕರ್ಷಣೆ. ನಚಿಕೇತನು ಯಾವ ಲೌಕಿಕ ಆಕರ್ಷಣೆಗೂ ಒಳಗಾಗಲಿಲ್ಲ ಆದಕಾರಣ ಅವನು ಆತ್ತಜ್ಞಾನ ಪಡೆಯಲು ಅರ್ಹನಾದ.

ಬುದ್ದಿಯ ನಿಯಂತ್ರಣಕ್ಕೆ ಒಳಪಡದ ಮನಸ್ಸು ಹೇಗೆ ಮನುಷ್ಯನನ್ನು ಅವನತಿಯತ್ತ ಕರೆದೊಯ್ಯುತ್ತದೆಯೆಂದು ಭಗವದ್ಗೀತೆಯು ಈ ಮುಂದಿನ ಶ್ಲೋಕದಲ್ಲಿ ಮನೋಜ್ಞವಾಗಿ ನಿರೂಪಿಸುತ್ತದೆ. 

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ| 
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೇ|| 
ಕ್ರೋಧಾದ್ ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮಃ। 
ಸ್ಮೃತಿಭ್ರಂಶಾತ್ ಬುದ್ವಿನಾಶಃ ಬುದ್ಧಿನಾಶಾತ್ ಪ್ರಣಶ್ಯತಿ ||

ಇಂದ್ರಿಯಚಾಪಲ್ಯದಿಂದ ಮನುಷ್ಯನಲ್ಲಿ ವಿಷಯಾಸಕ್ತಿ ಮೂಡಿದಾಗ ಮನಸ್ಸಿನಲ್ಲಿ ಆಸಕ್ತಿ/ಸೆಳೆತ ಉಂಟಾಗುತ್ತದೆ. ಆ ಸೆಳೆತ ಉಂಟಾದಾಗ ಅದನ್ನು ಪಡೆಯಬೇಕೆಂಬ ಆಸೆ/ತೃಷೆ ಮನಸ್ಸಿನಲ್ಲಿ ಮೂಡುತ್ತದೆ. ಅದೇ ಕಾಮ. ಕಾಮಿಸಿದ ವ್ಯಕ್ತಿ/ ವಸ್ತು ದೊರೆಯದೇ ಹೋದಾಗ ಅಡ್ಡಿ ಪಡಿಸಿದವರ ಮೇಲೆ ಕೋಪ ಬರುತ್ತದೆ. ಆ ಕೋಪದಿಂದ ಸಂಮೋಹ ಉಂಟಾಗುತ್ತದೆ. ಸಂಮೋಹ ಎಂದರೆ ಅವಿವೇಕತನ. ಯಾವುದು ಸರಿ ಯಾವುದು ತಪ್ಪು ಎಂಬ ಕಾರ್ಯಾಕಾರ್ಯ ಜ್ಞಾನ ಇಲ್ಲದಿರುವುದು. 'ಕ್ರೋಧಾದ್ ಭವತಿ ಸಂಮೋಹಃ' ಎಂಬ ಭಗವದ್ಗೀತೆಯ ಈ ಸಾಲನ್ನು ಶಂಕರಾಚಾರ್ಯರು ತಮ್ಮ ಭಾಷ್ಯದಲ್ಲಿ ಕ್ರುದ್ಧೋ ಹಿ ಸಂಮೂಢಃ ಸನ್ ಗುರುಮಪ್ಯಾಕ್ರೋಶತಿ” ಅಂದರೆ ಕ್ರೋಧಕ್ಕೆ ಒಳಗಾದ ಮೂಢ ಶಿಷ್ಯನು ತನ್ನ ಗುರುವನ್ನೂ ನಿಂದಿಸಲು ಮುಂದಾಗುತ್ತಾನೆ ಎಂದು ಅರ್ಥೈಸಿರುತ್ತಾರೆ. ಅಂತಹ ಯಾವ ಪ್ರಸಂಗವನ್ನು ಗಮನದಲ್ಲಿರಿಸಿಕೊಂಡು ಈ ಮಾತನ್ನು ಶಂಕರಾಚಾರ್ಯರು ಬರೆದಿದ್ದಾರೋ ಗೊತ್ತಿಲ್ಲ, ಆದರೆ ನಮ್ಮ ಅನುಭವಕ್ಕಂತೂ ಇದು ಬಂದಿದೆ. ನಮ್ಮ ಸಾರ್ವಜನಿಕ ಜೀವನದಲ್ಲಿ ಆತ್ಮೀಯ ಶಿಷ್ಯರಾಗಿದ್ದವರು ತಮ್ಮ ಸ್ವಾರ್ಥ ಸಿದ್ದಿಸದೇ ಹೋದಾಗ ಮನಸ್ಸಿನಿಂದಿಸಿದ ಕಹಿ ಪ್ರಸಂಗಗಳು ಅದೆಷ್ಟೋ! ಹೀಗೆ ಕ್ರೋಧದಿಂದ ಉಂಟಾದ ಸಂಮೋಹದಿಂದ ಯಾರ ಮಾತನ್ನೂ ಕೇಳದ ಸೃತಿವಿಭ್ರಮ/ದಾರ್ಷ್ಟ ಉಂಟಾಗುತ್ತದೆ. ಈ ಸೃತಿವಿಭ್ರಮದಿಂದ ಬುದ್ದಿ ನಾಶವಾಗುತದೆ. ಬುದ್ಧಿನಾಶದಿಂದ ಮನುಷ್ಯ ಹಾಳಾಗುತ್ತಾನೆ.

ಮೇಲೆ ಉಲ್ಲೇಖಿಸಿದ ಭಗವದ್ಗೀತೆಯ ಶ್ಲೋಕ ಮನುಷ್ಯನ ಕೇಡಿನ ಮೂಲವು ಮನಸ್ಸಿನ ಒಳತೋಟಿಯಲ್ಲಿರುವ ವಿಷಯಾಸಕ್ತಿ ಎಂದು ಗುರುತಿಸಿದರೆ ಅನುಭಾವಿ ಅಲ್ಲಮಪ್ರಭುಗಳು ‘ನಾನೆಂಬಹಂಕಾರ ತಲೆದೋರಿದಲ್ಲಿ' ಎಂಬ ವಚನದಲ್ಲಿ ಮನುಷ್ಯನ ಕೇಡಿನ ಮೂಲ ನಾನೆಂಬ ಅಹಂಕಾರ ಎಂದು ಗುರುತಿಸಿದ್ದಾರೆ. ಮನುಷ್ಯನ ಮನಸ್ಸಿನಲ್ಲಿ ದುರಹಂಕಾರ ಮೂಡಿದರೆ ಸುಳ್ಳು, ಥಕ್ಕು, ಮೋಸ, ವಂಚನೆ, ಕುಟಿಲ, ಕುಹಕಗಳೆಂಬ ಬಿರುಗಾಳಿ ಬೀಸುತ್ತದೆ. ಆ ಬಿರುಗಾಳಿಯಲ್ಲಿ ಜ್ಞಾನಜ್ಯೋತಿ ನಂದಿಹೋಗುತ್ತದೆ. ಜ್ಞಾನಜ್ಯೋತಿ ನಂದಿದಾಗ ಹಿರಿಯರೆನಿಸಿಕೊಂಡವರು ನಾನೇನು ಕಡಿಮೆ ಎಂದು ಬೀಗಿ ಅಜ್ಞಾನವೆಂಬ ಕತ್ತಲೆಗೆ ಒಳಗಾಗುತ್ತಾರೆ. ಅಜ್ಞಾನವೆಂಬ ಕತ್ತಲೆ ಆವರಿಸಿದಾಗ ಹಾಳಾಗಿ ಹೋಗುತ್ತಾರೆ.

ಭಗವದ್ಗೀತೆ ಮತ್ತು ಅಲ್ಲಮ ಪ್ರಭುಗಳ ವಚನ ಮನುಷ್ಯನ ಕೇಡಿನ ಮೂಲಗಳನ್ನು ವಿಭಿನ್ನ ನೆಲೆಗಳಲ್ಲಿ ಗುರುತಿಸಿದಂತೆ ಕಂಡರೂ ಎರಡರಲ್ಲೂ ಭಾಷಾ ಶೈಲಿ ಮತ್ತು ವಿಚಾರಗಳ ಆವಿರ್ಭಾವದ ದೃಷ್ಟಿಯಿಂದ ಸಾಮ್ಯತೆಗಳಿವೆ. 

ಭಗವದ್ಗೀತೆಯ ಪ್ರಕಾರ: ವಿಷಯಾಸಕ್ತಿ>ಸೆಳೆತ+ಆಸೆ/ ಕಾಮ» ಕೋಪ ಸಂಮೋಹ>ಸ್ಮೃತಿವಿಭ್ರಮ> ಬುದ್ಧಿನಾಶ > ವಿನಾಶ. 

ಅಲ್ಲಮಪ್ರಭುಗಳ ಪ್ರಕಾರ: ದುರಹಂಕಾರ>ಕುಟಿಲ/ಕುಹಕ_>ನಂದಿದ ಜ್ಞಾನಜ್ಯೋತಿ>ತಾಮಸ>ಕೇಡು/ಅವನತಿ. ಎರಡರಲ್ಲೂ ಮನುಷ್ಯನ ಮನಸ್ಸು ಕೆಲಸ ಮಾಡುವ ಪರಿಯನ್ನು ಚಿಂತಿಸಲಾಗಿದೆ. ಎರಡರಲ್ಲೂ ಕಾರ್ಯಕಾರಣ ಭಾವ ಇದೆ. ಕಣ್ಣಿಗೆ ಕಾಣದ, ಗ್ರಹಿಕೆಗೆ ಸಿಗದ ಮನಸ್ಸು ಹೇಗೆ ವಿಕೃತವಾಗುತ್ತಾ ಹೋಗುತ್ತದೆ, ಮನುಷ್ಯನನ್ನು ಯಾವ ದಿಕ್ಕಿಗೆ ಹೇಗೆ ಕರೆದು ಕೊಂಡು ಹೋಗುತ್ತದೆ, ಕೊನೆಗೆ ವಿನಾಶದ ಕಮರಿಗೆ ಹೇಗೆ ದೂಡುತ್ತದೆ ಎಂಬ ಮನಃಶಾಸ್ತ್ರದ ಆಳವಾದ ಅಧ್ಯಯನ ಇಲ್ಲಿದೆ. ಭಗವದ್ಗೀತೆಯ ಪ್ರಕಾರ ಮನುಷ್ಯನ ಅವನತಿಗೆ ವಿಷಯಾಸಕ್ತಿ ಕಾರಣವಾದರೆ ಅಲ್ಲಮ ಪ್ರಭುವಿನ ಪ್ರಕಾರ ಅಹಂಕಾರವೇ ಎಲ್ಲ ಕೇಡಿಗೆ ಕಾರಣ. ಎಂತಹ ಜ್ಞಾನಿಯಾದರೂ ಕೆಟ್ಟು ಹೋಗುತ್ತಾನೆ! ವಚನಗಳು ಕನ್ನಡದ ಉಪನಿಷತ್ತುಗಳು ಎಂದು ಹೇಳುವುದುಂಟು. ಭಗವದ್ಗೀತೆಯ ಶ್ಲೋಕದ ಮುಂದುವರಿದ ಭಾಗವಾಗಿ ಅಲ್ಲಮನ ಈ ವಚನ ಅನೇಕ ರೂಪಕಗಳ ಮೂಲಕ ಓದುಗರ ಮನಸ್ಸಿಗೆ ನಾಟುವಂತಿದೆ ಎಂಬುದನ್ನು ಇಲ್ಲಿ ಗುರುತಿಸಬಹುದಾಗಿದೆ.

ನಾನೆಂಬಹಂಕಾರ ತಲೆದೋರಿದಲ್ಲಿ ಅಟಮಟ 
ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು. 
ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು. 
ಜ್ಞಾನಜ್ಯೋತಿ ಕೆಡಲೊಡನೆ ನಾ ಬಲ್ಲೆ ಬಲ್ಲಿದರೆಂಬ 
ಅರುಹಿರಿಯರೆಲ್ಲರು 
ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.12.3.2020
ಬಿಸಿಲು ಬೆಳದಿಂಗಳು