ಕೊರೊನಾ ಅಲ್ಲ, ಮನುಷ್ಯನೇ ಮನುಕುಲದ ಮಹಾಮಾರಿ!

  •  
  •  
  •  
  •  
  •    Views  

ವಿಶ್ವದೆಲ್ಲೆಡೆ ಕೊರೊನಾ ವೈರಾಣು ವ್ಯಾಪಕವಾಗಿ ಹರಡಿ ಮನುಕುಲವನ್ನೇ ಹೈರಾಣಾಗಿಸಿದೆ. ಒಂದು ರೀತಿಯಲ್ಲಿ ಮೂರನೆಯ ಮಹಾಯುದ್ದವೇ ಆರಂಭಗೊಂಡಂತಿದೆ. ಆದರೆ ಬಾಂಬು ರಾಕೆಟ್ಟುಗಳ ಸ್ಫೋಟವಿಲ್ಲ, ಮದ್ದು ಗುಂಡುಗಳ ಆರ್ಭಟವಿಲ್ಲ, ದೇಶ ದೇಶಗಳ ಮಧ್ಯದ ಕಾಳಗವೂ ಅಲ್ಲ, ಎಲ್ಲ ದೇಶಗಳೂ ಒಟ್ಟಾಗಿ ಒಂದು ಸಣ್ಣ ವೈರಾಣುವಿನ ವಿರುದ್ದ ನಡೆಸುತ್ತಿರುವ ಬಹು ದೊಡ್ಡ ಹೋರಾಟ. ವೈದ್ಯಕೀಯ ಲೋಕದಲ್ಲಿ ಯಾವ ಪರಿಹಾರವೂ ಕಾಣದೆ ಜನರ ಸಾವು-ನೋವು. ನೆಲದಲ್ಲಿರುವ ತಗ್ಗುಗುಂಡಿಗಳಿಗೆ ಕಲ್ಲುದುಂಡಿಗಳನ್ನು ದೂಡುವಂತೆ ಯಾವ ಧಾರ್ಮಿಕ ಸಂಸ್ಕಾರವೂ ಇಲ್ಲದೆ ಹೆಣಗಳನ್ನು ರಾಶಿ ರಾಶಿಯಾಗಿ ಜೆಸಿಬಿ/ಹಿಟಾಚಿಗಳು ದೂಡುತ್ತಿರುವ ಕರಾಳ ದೃಶ್ಯ! ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಈ ಭೂಮಿಯ ಮೇಲೆ ಮನುಕುಲವೇ ಅಳಿಸಿಹೋಗಬಹುದೆಂಬ ಭಯ ಆವರಿಸಿದೆ. ಲಾಕ್ಡೌನ್ ಕಾರಣದಿಂದ ಭಾರತದಲ್ಲಿ ಹಸಿವಿನಿಂದ ಕಂಗಾಲಾದ ಬಡ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನು ಕುರಿತಂತೆ ಅಷ್ಟಾದಶ ಪುರಾಣಗಳಲ್ಲಿ ಒಂದಾದ ಶಿವಪುರಾಣದಲ್ಲಿ ಬಹಳ ಹಿಂದೆಯೇ ಹೇಳಲಾಗಿದೆ ಎನ್ನಲಾದ ಈ ಕೆಳಕಂಡ ಸಂಸ್ಕೃತ ಶ್ಲೋಕಗಳು ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿವೆ: 

ಮೃತ್ಯುಂಜಯ ಮಹಾದೇವ! ಕೊರೋನಾಖ್ಯಾದ್ವಿಷಾಣುತಃ | 
ಮೃತ್ಯೋರಪಿ ಮಹಾಮೃತ್ಯೋ ಪಾಹಿ ಮಾಂ ಶರಣಾಗತಮ್ 11211 
ಮಾಂಸಾಹಾರಾತ್ಸಮುತ್ಪನಾಜ್ಜಗತ್ಸಂಹಾರಕಾರಕಾತ್ | 
ಕರುಣಾಖ್ಯಾದ್ವಿಷಾಣೋರ್ಮಾಂ ರಕ್ಷರಕ್ಷಮಹೇಶ್ವರ ||3|| 
ಚೀನಾದೇಶೇ ಜನಿಂ ಲಬ್ದ್ವಾಭೂಮೌ ವಿಷ್ಟಕ್ ಪ್ರಸರ್ಪತಃ। 
ಜನಾತಂಕಾದ್ವಿಷಾಣೋರ್ಮಾ೦ ಸರ್ವತಃ ಪಾಹಿ ಶಂಕರ ||4|| 
ಸಮುದ್ರಮಥನೋದ್ಬೂತಾತ್ ಕಾಲಕೂಟಾಚ್ಚಬಿಭ್ಯತಃ || 
ತ್ವಯೈವರಕ್ಷಿತಾ ದೇವಾ ದೇವ ದೇವ ಜಗತ್ಪತೇ ||6||

ಇದರ ಸಾರಾಂಶ: 'ಮೃತ್ಯುವಿಗೂ ಮಹಾಮೃತ್ಯುವೆನಿಸಿದ ಮೃತ್ಯುಂಜಯನಾದ ಮಹಾದೇವನೇ! ಕೊರೊನಾ ಎಂಬ ವಿಷಾಣುವಿನಿಂದ ಶರಣಾಗತನಾದ ನನ್ನನ್ನು ಪಾರುಮಾಡು. ಈ ಭೂಮಿಯ ಮೇಲೆ ಎಲ್ಲೆಡೆ ಆವರಿಸಿ ಇಡೀ ಜಗತ್ತನ್ನೇ ಸಂಹಾರ ಮಾಡುತ್ತಿರುವ ಈ ವಿಷಾಣು ಚೀನಾದೇಶದಲ್ಲಿ ಮಾಂಸಾಹಾರ ಸೇವನೆಯಿಂದ ಹುಟ್ಟಿದ್ದು. ಸಮುದ್ರಮಥನದ ಸಂದರ್ಭದಲ್ಲಿ ಹುಟ್ಟಿಬಂದ ಭಯಾನಕವಾದ ಕಾಲಕೂಟ ವಿಷದಿಂದ ದೇವಾನು ದೇವತೆಗಳನ್ನು ರಕ್ಷಿಸಿದವನು ಜಗದೊಡೆಯನಾದ ನೀನೇ ಅಲ್ಲವೇ! ಹೇ ಶಿವನೇ ಈ ವಿಷಾಣುವಿನಿಂದ  ನನ್ನನ್ನು ರಕ್ಷಿಸು, ರಕ್ಷಿಸು!

ಕೊರೊನಾ ವೈರಾಣು ದಾಳಿಗೆ ತುತ್ತಾಗಿರುವ ವಿಶ್ವದ ಪ್ರಸ್ತುತ ಸಂದರ್ಭಕ್ಕೆ ಈ ಶ್ಲೋಕಗಳು ಕನ್ನಡಿ ಹಿಡಿದಂತಿವೆ. ಹಾಗಾದರೆ ಕೊರೊನಾ ವೈರಾಣು ಶಿವಮಹಾಪುರಾಣದಷ್ಟು ಹಳೆಯದೇ? ಆಗಿನ ಕಾಲದ ಜನರು ಇದನ್ನು ತಡೆಗಟ್ಟಲು ಮಾಡಿದ್ದೇನು? ಇಂದಿನಂತೆ ಅಂದೂ ಜನರನ್ನು 21 ದಿನ ಕ್ವಾರಂಟೈನ್ ಮಾಡಲಾಗಿತ್ತೇ? ಏ.14ಕ್ಕೆ ಈ ಕಾರಂಟೈನ್ ಮುಗಿಯುತ್ತದೆಯೇ ಅಥವಾ ಮುಂದುವರಿಯುತ್ತದೆಯೇ ಎಂದು ಕಾತರದಿಂದ ಕಾಯುತ್ತಿರುವ ಜನರಿಗೆ ಶಿವಪುರಾಣದ ಪುಟಗಳನ್ನು ತಿರುವಿ ಹಾಕಿದರೆ ಏನಾದರೂ ಉತ್ತರ ಸಿಕ್ಕೀತೆ? ವಾಸ್ತವವಾಗಿ ಶಿವಪುರಾಣದಲ್ಲಾಗಲೀ ಇನ್ನಾವುದೇ ಪುರಾಣದಲ್ಲಾಗಲೀ ಈ ಶ್ಲೋಕಗಳು ಇಲ್ಲವೇ ಇಲ್ಲ. ಇಂದಿನ ಕಾಲಕ್ಕೆ ಅರ್ಥಪೂರ್ಣವಾದ ಈ ಶ್ಲೋಕಗಳನ್ನು ಆಧುನಿಕ ಸಂಸ್ಕೃತ ಪಂಡಿತರು ಯಾರೋ ಶಿವಪುರಾಣದ ಹೆಸರಿನಲ್ಲಿ ಬರೆದು ಸೇರಿಸಿದ್ದಾರೆ. ಕವಿಗೋಷ್ಠಿಯೊಂದರಲ್ಲಿ 'ನಾನೇ ಬರೆದ ಒಂದು ಕವಿತೆ' ಎಂದು ಹೇಳಿ ಬೇಂದ್ರೆಯವರ ಕವಿತೆಯನ್ನು ನಕಲು ಮಾಡಿಕೊಂಡು ಬೇಂದ್ರೆಯವರ ಎದುರಿಗೇ ಓದಿ ಹೇಳಿ ಸಭಿಕರ ಚಪ್ಪಾಳೆ ಗಿಟ್ಟಿಸಿದ 'ಕವಿಪುಂಗವ'ನಂತೆ ಈ ಪಂಡಿತರು ನಾನೇ ಬರೆದದ್ದು ಎಂದು ಜಂಬ ಕೊಚ್ಚಿಕೊಳ್ಳಲು ಸದ್ಯ ಹೋಗಿಲ್ಲ! ಅಷ್ಟರಮಟ್ಟಿಗೆ ಅವರು ಅಭಿನಂದನಾರ್ಹರು. 'ಪುರಾಣವೆಂಬುದು ಪುಂಡರ ಗೋಷ್ಠಿ ಎಂದು ಅಲ್ಲಮಪ್ರಭುಗಳು ಕಟುಟೀಕೆ ಮಾಡಿದ್ದು ಇದೇ ಕಾರಣಕ್ಕೆ ಇರಬಹುದೆ? ಇತ್ತೀಚೆಗೆ ಅಲ್ಲಮಪ್ರಭುಗಳ ಹೆಸರಿನಲ್ಲಿಯೂ ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿರುವ ವಚನ ಹೀಗಿದೆ: 

ಕಂಡು ಕಂಡುದನೆಲ್ಲವ ಕೊಂಡು 
ಅಟ್ಟಹಾಸದಿ ಮೆರೆವ ಜನಕೆ 
ಕಾಣದ ಜೀವಿಯು ಬಂದು 
ತಲ್ಲಣಿಸುವುದು ಜಗವು ನೋಡಾ ಗುಹೇಶ್ವರಾ!

ಮೇಲ್ಕಂಡ ಸಂಸ್ಕೃತ ಶ್ಲೋಕಗಳಂತೆ ತೀರಾ ವಾಚ್ಯವಾಗಿರದೆ ಒಗಟಿನೋಪಾದಿಯಲ್ಲಿರುವ ಈ ವಚನ ಪ್ರಸ್ತುತ ಸನ್ನಿವೇಶದಲ್ಲಿ ಅರ್ಥಪೂರ್ಣವಾಗಿದೆ. ಯಾರೇ ಓದಿದರೂ ಅಲ್ಲಮಪ್ರಭುಗಳ ಕವಿತೆ ಇರಬಹುದು ಎಂದು ನಂಬುವಂತಿದೆ. ಇದನ್ನು ನಮ್ಮ ಆತ್ತೀಯ ಶಿಷ್ಯರಾದ ಡಾ. ಮಂಜುನಾಥ ಆಲೂರ್ರವರು ನಮ್ಮ ಮೊಬೈಲ್ಗೆ ರವಾನಿಸಿದಾಗ ಎಲ್ಲಿಯೂ ಓದಿದ ನೆನಪಾಗಲಿಲ್ಲ ಕುತೂಹಲದಿಂದ ಎಲ್. ಬಸವರಾಜುರವರು ಸಂಪಾದಿಸಿದ 'ಅಲ್ಲಮನ ವಚನ ಚಂದ್ರಿಕೆ' ಮತ್ತು ಡಾ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಗೊಂಡ 'ಅಲ್ಲಮಪ್ರಭು ದೇವರ ವಚನಸಂಪುಟ' ಪುಸ್ತಕಗಳನ್ನು ತಿರುವಿಹಾಕಿದಾಗ ಎಲ್ಲಿಯೂ ಸಿಗಲಿಲ್ಲ. ಕೊನೆಗೆ ನಾವೇ ಸಿದ್ದಪಡಿಸಿದ 'ಗಣಕವಚನ ಸಂಪುಟ' ಎಂಬ ತಂತ್ರಾಂಶದಲ್ಲಿ(software) ಇದರ ಒಂದೊಂದು ಶಬ್ದವನ್ನೂ ಜಾಲಾಡಿದಾಗ ವಚನಸಾಹಿತ್ಯದಲ್ಲಿ ಇಂತಹ ವಚನ ಇಲ್ಲವೇ ಇಲ್ಲ ಎಂದು ದೃಢಪಟ್ಟಿತು. ಇದನ್ನು ಕಳುಹಿಸಿದ ವೈದ್ಯರಿಗೆ "It is a fake Vachana' ಎಂದು ಉತ್ತರಿಸಿ ಕರೆ ಮಾಡಿದಾಗ ಅವರಿಗೆ ಆಶ್ಚರ್ಯವುಂಟಾಯಿತು.

ಈ ವಚನವನ್ನು ಯಾರೇ ಬರೆದಿರಲಿ ಇಂದಿನ ಸಾಮಾಜಿಕ ಜೀವನದ ಸ್ಥಿತಿಗತಿಗಳನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಆದರೆ ಇಂತಹ ಒಳ್ಳೆಯ ಮಾತುಗಳನ್ನು ಬರೆದು ಅಲ್ಲಮಪ್ರಭುಗಳ ಹೆಸರಿಗೆ ಅಂಟಿಸಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೇಲೆ ಉಲ್ಲೇಖಿಸಿದ ಸಂಸ್ಕೃತ ಶ್ಲೋಕಗಳಾಗಲೀ ಈ ಆಧುನಿಕ ಕನ್ನಡ ವಚನವಾಗಲೀ ಇವುಗಳನ್ನು ಬರೆದವರ ಮನೋಭೂಮಿಕೆ ಒಂದೇ ಆಗಿದೆ. ಅದೆಂದರೆ ಈಗ ನಡೆಯುತ್ತಿರುವುದೆಲ್ಲವನ್ನೂ ನಮ್ಮ ಹಿರಿಯರು ಹಿಂದೆಯೇ ಭವಿಷ್ಯ ನುಡಿದಿದ್ದರು. ಹಿರಿಯರು ಹೇಳಿದ್ದೇ ಸರಿ, ಕಿರಿಯರು ಹೇಳುವುದು ತಪ್ಪು. ಇದು ಭಾರತೀಯರ ಒಂದು ಮನೋದೌರ್ಬಲ್ಯ, ಇದನ್ನು ಕುರಿತೇ ಅಲ್ಲಮಪ್ರಭು ದೇವರು ಎಚ್ಚರಿಸಿದ್ದು: ‘ಹಿರಿಯರಾದರೇನು? ಕಿರಿಯರಾದರೇನು, ಅರಿವಿಂಗೆ ಹಿರಿದು ಕಿರಿದುಂಟೇ?' ಮಹಾಕವಿ ಕಾಳಿದಾಸನೂ ಹಳೆಯ ಕಾಲದ ಸಾಹಿತ್ಯ ಕೃತಿಗಳಿಗೇ ಹೆಚ್ಚಿನ ಪ್ರಾಶಸ್ತ್ಯ, ತಾನು ಬರೆದ ಹೊಸ ನಾಟಕಕ್ಕೆ ಮಾನ್ಯತೆ ಸಿಗುವುದೋ ಇಲ್ಲವೋ ಎಂಬ ಆಶಂಕೆಯನ್ನು ತನ್ನ 'ಮಾಲವಿಕಾಗ್ನಿಮಿತ್ರ' ನಾಟಕದ ಆರಂಭದ ಅಂಕದಲ್ಲಿ 'ಪಾರಿಪಾರ್ಶಿಕ' ಎಂಬ ಪಾತ್ರಧಾರಿಯ ಬಾಯಲ್ಲಿ ವ್ಯಕ್ತಪಡಿಸಿದ್ದಾನೆ. ತನ್ನ ನಿಲುವನ್ನು ಸೂತ್ರಧಾರನ ಮಾತಿನಲ್ಲಿ ಸಷ್ಟಪಡಿಸಿದ್ದಾನೆ: “ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಂ” ಅಂದರೆ, “ಹಳೆಯದೆಂದ ಮಾತ್ರಕ್ಕೆ ಎಲ್ಲವೂ ಶ್ರೇಷ್ಠವಲ್ಲ ಹೊಸದೆಂದ ಮಾತ್ರಕ್ಕೆ ಎಲ್ಲವೂ ಕನಿಷ್ಠವಲ್ಲ”. ಕಾಳಿದಾಸನ ಈ ಮಾತಿಗೆ ಪೂರಕವಾಗಿದನಿಗೂಡಿಸಿಹೇಳುವುದಾದರೆ ಉಪ್ಪಿನಕಾಯಿ ಹಳೆಯದಾದಷ್ಟೂ ರುಚಿಯಾಗಿರುತ್ತದೆ, ನಿಜ. ಉಪ್ಪಿನಕಾಯಿ ಶಬ್ದವನ್ನು ಕೇಳುತ್ತಿದ್ದಂತೆಯೇ ನಿಮ್ಮ ಬಾಯಲ್ಲಿ ನೀರೂರುತ್ತದೆ. ಆದರೆ ಇದೇ ಮಾತನ್ನು ನೀವು ದಿನನಿತ್ಯ ಓಡಾಡುವ ಮೋಟಾರು ಬೈಕ್ ಅಥವಾ ಕಾರು ಇತ್ಯಾದಿ ವಾಹನಗಳನ್ನು ಕುರಿತು ಹೇಳಲು ಸಾಧ್ಯವಿಲ್ಲ, ಹಳೆಯ ಕಾರನ್ನು ಮಾರಿ ಹೊಸತನ್ನು ಕೊಳ್ಳುತ್ತೀರಿ. ಯಾರಾದರೂ  ಕೇಳಿದರೆ ನಿಮ್ಮ ಹತ್ತಿರ Latest Model  ಇದೆಯೆಂದು  ಬೀಗುತ್ತೀರಿ.

ಈಗೀಗ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ವೈರಸ್ನದೇ ಮಾತು! ಸುದ್ದಿ ಚಾನಲ್ಗಳಲ್ಲಿ 24x7 ಪ್ರಸಾರವಾಗುತ್ತಿರುವ ತೊಂದರೆಗೆ ಸಿಲುಕಿದವರ, ಪ್ರಾಣ ತೆತ್ತವರ ಸುದ್ದಿಗಳು ಮತ್ತು ದೃಶ್ಯಾವಳಿಗಳು ಕರುಳು ಹಿಂಡುತ್ತವೆ. ಕೊರೊನಾ ಯೋಧರಾದ ಡಾಕ್ಟರುಗಳು, ವೈದ್ಯಕೀಯ, ಅರೆವೈದ್ಯಕೀಯ ಮತ್ತು ಪೋಲೀಸ್ ಸಿಬ್ಬಂದಿಗಳ ಸೇವೆಯಂತೂ ಈ ಸಂದರ್ಭದಲ್ಲಿ ಶ್ಲಾಘನೀಯ. ದೇವಾಲಯ, ಚರ್ಚು ಮತ್ತು ಮಸೀದಿಗಳು ಬಾಗಿಲು ಹಾಕಿವೆ. ಆದರೆ ಆಸ್ಪತ್ರೆಗಳ ಬಾಗಿಲು ಸದಾ ತೆರೆದಿವೆ. ಸದ್ಯದ ಜಾತ್ಯತೀತ ದೇವಾಲಯಗಳೆಂದರೆ ಆಸ್ಪತ್ರೆಗಳೇ, ರೋಗಿಗಳ ಆರೈಕೆಯಲ್ಲಿ ಹಗಲಿರುಳೂ ತೊಡಗಿರುವ ವೈದ್ಯರೂ ಮತ್ತು ನರ್ಸ್ಗಳೇ ಮಾನವರೂಪಿ ದೇವರುಗಳು ಎನ್ನಬಹುದು.

ಮಾರ್ಚ್ ತಿಂಗಳ ಕೊನೆಯಲ್ಲಿ ಲಂಡನ್ ಮತ್ತು ನಾಟಿಂಗ್ಹ್ಯಾಂ ನಗರಗಳಲ್ಲಿ ನಡೆಯಲಿದ್ದ ಎರಡು ಸಮ್ಮೇಳನಗಳಿಗೆ ಆಹ್ವಾನಿತರಾಗಿ ಹೋಗಬೇಕಾಗಿತ್ತು. ಮಾರ್ಚ್ ಆರಂಭದಲ್ಲಿ ದುಬೈನಿಂದ - ಬೆಂಗಳೂರಿಗೆ ಬಂದ ಟೆಕ್ತಿಯೊಬ್ಬರಿಗೆ ಕೊರೊನಾ ಸೋಂಕು ಉಂಟಾಗಿದೆಯೆಂದು ಮಾಧ್ಯಮಗಳಲ್ಲಿ ಸುದ್ದಿ ಬಂದ ತಕ್ಷಣವೇ ಮುಂಜಾಗರೂಕತೆಯಿಂದ ನಮ್ಮ ವಿದೇಶಪ್ರಯಾಣವನ್ನು ರದ್ದುಪಡಿಸುವ ತೀರ್ಮಾನ ಕೈಗೊಂಡಿದ್ದು ನಮ್ಮ ಗುರುವರ್ಯರ ಕೃಪಾಶೀರ್ವಾದವೆಂದೇ ನಮ್ಮ ಭಾವನೆ. ನಂತರ ಆ ಸಮ್ಮೇಳನಗಳ ಸಂಘಟಕರೂ ರದ್ದುಪಡಿಸಿಕೊಂಡರು. ಚಾನಲ್ಗಳಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ನೋಡಿ ಕೇವಲ ಅಯ್ಯೋ ಪಾಪ ಎಂದರೆ ಸಾಲದು. ಬದಲಾಗಿ ನಾವೆಲ್ಲಿ ಇದ್ದೇವೆಯೋ ಅಲ್ಲಿ ಹೇಗೆ ಇಂತಹ ಸವಾಲುಗಳನ್ನು ಸ್ವೀಕರಿಸಬೇಕು, ನೊಂದವರ ಕಣ್ಣೀರನ್ನು ಹೇಗೆ ಒರೆಸಬೇಕು ಎಂಬುದನ್ನು ಎಲ್ಲರೂ ಯೋಚಿಸಬೇಕು. ಆಂಧ್ರಪ್ರದೇಶದ ನಂದ್ಯಾಲದಲ್ಲಿ ಓದಲು ಹೋಗಿ ಲಾಕ್ಡೌನ್ನಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 200 ಕರ್ನಾಟಕದ ವಿದ್ಯಾರ್ಥಿಗಳಿಗೆ ಅಲ್ಲಿಯ ಶಿಷ್ಯರನ್ನು ಸಂಪರ್ಕಿಸಿ ಕಳೆದ ಎಂಟು ದಿನಗಳಿಂದ ನಿತ್ಯದಾಸೋಹ ವ್ಯವಸ್ಥೆ ಮಾಡಿದ್ದು ನಮಗೆ ತೃಪ್ತಿಯನ್ನುಂಟು ಮಾಡಿದೆ.

ಸಾವಿರಾರು ಜನರು ಕೊರೊನಾ ಮಹಾಮಾರಿಯಿಂದ ಸಾವುನೋವಿಗೆ ಒಳಗಾಗುತ್ತಿರುವ ದೃಶ್ಯವನ್ನು ನೋಡಿಯೂ ನಮ್ಮ ಜನರು ಎಚ್ಚೆತ್ತುಕೊಳ್ಳದೆ ಅಡ್ಡಾದಿಡ್ಡಿ ತಿರುಗಾಡುತ್ತಿರುವದು ತುಂಬಾ ವಿಷಾದನೀಯ ಸಂಗತಿ. ಇದು ಅಕ್ಷಮ್ಯ ಅಪರಾಧ. ಹೀಗೆ ಓಡಾಡುತ್ತಿರುವವರು ನಿಮ್ಮ ಕುಟುಂಬದ ಸದಸ್ಯರಿಗೂ ಮತ್ತು ನಿಮ್ಮ ನೆರೆಹೊರೆಯವರಿಗೂ ನೀವೇ ಮಹಾಮಾರಿಯಾಗುತ್ತೀರೆಂಬುದನ್ನು ಮರೆಯದಿರಿ. ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳಬಹುದೇ? ಪೇಟೆ ಪಟ್ಟಣಗಳಲ್ಲಿ ಆಗುತ್ತಿರುವ ಸಾವು-ನೋವು ಸುದೈವದಿಂದ ಹಳ್ಳಿಗಳಿಗೆ ವ್ಯಾಪಿಸಿಲ್ಲ, ನಿಮ್ಮ ಬೇಜವಾಬ್ದಾರಿ ವರ್ತನೆಯಿಂದ ಈ ಸೋಂಕು ಹಳ್ಳಿಗಳಿಗೇನಾದರೂ ಹರಡಿದರೆ ಇಡೀ ಊರಿಗೆ ಊರೇ ಸ್ಮಶಾನವಾಗುವುದರಲ್ಲಿ ಸಂಶಯವಿಲ್ಲ, ಇನ್ನಾದರೂ ಎಚ್ಚೆತ್ತುಕೊಳ್ಳಿ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಗಿರುವಷ್ಟು ಅನಾಹುತ ನಮ್ಮ ದೇಶದಲ್ಲಿ ಆಗಿಲ್ಲ ನನಗೆ ಏನೂ ಆಗುವುದಿಲ್ಲವೆಂಬ ಒಣ ಜಂಬ ಬೇಡ. ಕೇಂದ್ರ ಹಾಗೂ ರಾಜ್ಯ ಸರಕಾರದ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಿರಿ. ಎಲ್ಲವನ್ನೂ ಸರಕಾರ ಮಾಡಲು ಆಗುವುದಿಲ್ಲ, ಸ್ವಯಂನಿಯಂತ್ರಣ ಅತ್ಯವಶ್ಯಕ. ಮನೆಯಲ್ಲಿಯೇ ಇದ್ದು ಮನೆಯ ದೀಪ ಬೆಳಗಿಸಿರಿ. ನೀವು ಪುಣ್ಯ ಮಾಡಿ ಭಾರತದಲ್ಲಿ ಹುಟ್ಟಿದ್ದೀರಿ. ರಾತ್ರಿ ದೀಪ ಬೆಳಗಿಸಿ ಬೆಳಗಾದೊಡನೆ ಅಡ್ಡಾದಿಡ್ಡಿ ತಿರುಗಾಡುವ ಪಾಪಕೃತ್ಯ ಮಾಡಬೇಡಿ. ಮನುಕುಲದ ಮಹಾಮಾರಿ ಮನುಷ್ಯನೇ ಹೊರತು ಕೊರೊನಾ ಅಲ್ಲ ನೀವೂ ಬದುಕಿ ಬೇರೆಯವರಿಗೂ ಬದುಕಲು ಅವಕಾಶ ಮಾಡಿಕೊಡಿ. 

ವಿಶ್ವದೆಲ್ಲೆಡೆ ವ್ಯಾಪಿಸಿದೆ ಕೊರೊನಾ ವೈರಾಣು/ನರ್ತಿಸುತಿವೆ - ನವಿಲುಗಳು ದಾರಿಯಲಿ/ಜಿಗಿಯುತಿವೆ ಜಿಂಕೆಗಳು ಕಡಲ ತೀರದಲಿ/ ಪೊರೆಯುತಿದೆ ಪ್ರಕೃತಿಯು ಖಗಮೃಗಗಳನು ವನರಾಜಿಯನು/ ದಂಡಿಸುತ ದುರುಳ ಮನುಜರನು ಅವರ ಪಾಪಕೃತ್ಯಗಳಿಗೆ/ ಬೀದಿಗಿಳಿಯದಿರಿ ಮರುಳರೇ! / ಮನುಕುಲದ ಮಹಾಮಾರಿ ನೀವೇ!/ ಸಕುಟುಂಬ ಪರಿವಾರ ಮನೆಯೊಳಗಿದ್ದು ಹಚ್ಚಿರಿ ಹಣತೆಯನು ದಿನರಾತ್ರಿ/ ಪರಿತಪಿಸುತ ಬೇಡಿಕೊಳ್ಳಿರಿ ಅಪರಾಧಗಳ ಮನ್ನಿಸೆಂದು/ ರಕ್ಷಿಸೆಮ್ಮನು ಅನವರ ಪ್ರಭುವೇ ಎಂದು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.9.4.2020
ಬಿಸಿಲು ಬೆಳದಿಂಗಳು