ಹೋದೆಯಾ ಪಿಶಾಚಿ ಅಂದ್ರೆ ಬಂತು ಗವಾಕ್ಷೀಲಿ!

  •  
  •  
  •  
  •  
  •    Views  

ಹೋದೆಯಾ ಪಿಶಾಚಿ ಅಂದರೆ ಬಂತು ಹೊಗವಾಕ್ಷೀಲಿ ಎಂಬ ಗಾದೆ ಮಾತು ಇವತ್ತಿನ ಕೊರೊನಾ ವೈರಾಣುವಿಗೆ ತುಂಬಾ ಚೆನ್ನಾಗಿ ಅನ್ವಯಿಸುತ್ತದೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳನ್ನು ಹಾದು ಮಹಾರಾಷಕ್ಕೆ ಪಾದಾರ್ಪಣೆ ಮಾಡುತ್ತೀರಿ. ಬೆಂಗಳೂರು ಕೆಂಪು ವಲಯ, ಧಾರವಾಡ, ಬೆಳಗಾವಿ ಜಿಲ್ಲೆಗಳೂ ಕೆಂಪು ವಲಯಗಳೇ. ಮಹಾರಾಷ್ಟದ ವಿಷಯವನ್ನು ಹೇಳುವುದೇ ಬೇಡ; ಅದು ಕೆಂಪೋ ಕೆಂಪು! ಇದುವರೆಗೆ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ - ಈ ನಾಲ್ಕು ಜಿಲ್ಲೆಗಳು ಹಸಿರು ವಲಯಗಳಾಗಿದ್ದವು. ಈ ಜಿಲ್ಲೆಗಳ ಜನರು 'ಸದ್ಯ ನಮ್ಮಲ್ಲಿ ಇಲ್ಲವೆಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೊರೊನಾ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡಿದ್ದೇವೆಂಬ ಅರಿವು ಇದ್ದರೂ ಅಪಾಯ ಮನೆ ಬಾಗಿಲು ತಟ್ಟಿಲ್ಲವೆಂಬ ತುಸು ನೆಮ್ಮದಿ ಇತ್ತು. ಈಗ ಇದ್ದಕ್ಕಿದ್ದಂತೆ ಈ ಎಲ್ಲ ಜಿಲ್ಲೆಗಳಿಗೂ ಕೊರೊನಾ ಮಾರಿ ವಕ್ಕರಿಸಿದೆ; ಇದುವರೆಗೆ ಇದ್ದ ಅಲ್ಪ ನೆಮ್ಮದಿಯೂ ಈಗ ಮರೀಚಿಕೆ ಯಾಗಿದೆ. ಹಸಿರು ವಲಯವಾಗಿದ್ದ ದಾವಣಗೆರೆ ಈಗ ಕೊರೊನಾ ಸೋಂಕಿನಲ್ಲಿ ಮೂರನೆಯ Rank ಪಡೆದಿದೆ! ದಾವಣಗೆರೆಯಲ್ಲಿ ಅನೇಕ ರೋಗಿಗಳ ಶುಶ್ರೂಷೆ ಮಾಡಿದ್ದ ನರ್ಸ್ಗೆ ಸೋಂಕು ತಗುಲಿ ಹಾಸಿಗೆ ಹಿಡಿಯಬೇಕಾಯಿತು. ಚಿತ್ರದುರ್ಗದಲ್ಲಿ ಅಹಮದಾಬಾದಿನಿಂದ ಹಿಂದಿರುಗಿದ ಸೋಂಕಿತ ವ್ಯಕ್ತಿಗಳು ಈಗ ಗುಣಮುಖರಾಗುತ್ತಿದ್ದಾರೆ. ಆದರೆ, ಅವರಿಗೆ ಊಟಕ್ಕೆ ಒಯ್ದು ಕೊಟ್ಟ ಒಬ್ಬ ವೃದ್ದ ಕೊನೆ ಯುಸಿರೆಳೆದಿದ್ದಾನೆ. ಮಾನವತೆಯನ್ನು ಮೆರೆದಾತ ಮರಣ ಹೊಂದಬೇಕೇ? ಇದಲ್ಲವೆ ಮಹಾದುರಂತ!  

ದಿನೇದಿನೆ ರಾಜ್ಯದಲ್ಲಿ ಕೊರೋನಾಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಇವರಲ್ಲಿ ಮುಕ್ಕಾಲು ಪಾಲು ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದಿರುವ ಜನರೇ ಆಗಿದ್ದಾರೆ. ದುಡಿಮೆಗಾಗಿಯೋ, ಪೇಟೆಯ ಆಕರ್ಷಣೆಯಿಂದಲೋ ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋದ ಜನ ಈಗ ಹಳ್ಳಿಗಳಿಗೆ ಮರಳಿ ಧಾವಿಸುತ್ತಿದ್ದಾರೆ. ಅವರನ್ನು ಊರೊಳಗೆ ಬಿಟ್ಟುಕೊಳ್ಳಲು ಹಳ್ಳಿಯ ಜನರು ಹೆದರುತ್ತಿದ್ದಾರೆ. ಪೇಟೆಯವರೆಂದರೆ ನಡೆಮಡಿ ಹಾಸಿ ಬರಮಾಡಿಕೊಳ್ಳುತ್ತಿದ್ದ ಹಳ್ಳಿಗರು ಈಗ ಯಾರನ್ನೂ ಬಿಟ್ಟುಕೊಳ್ಳದಂತೆ ಹಲಗೆ ಸಾರಿಸುತ್ತಿದ್ದಾರೆ. ಜಿಲ್ಲಾಡಳಿತಗಳು ಹೊರ ರಾಜ್ಯಗಳಿಂದ ಬಂದವರನ್ನು ತಂತಮ್ಮ ಮನೆಗಳಿಗೆ ಹೋಗದಂತೆ ತಡೆದು ಮೊದಲು ಸಾಂಸ್ಥಿಕ ವಾಸ್ತವದಲ್ಲಿ (Institutional Quarentine) ಇರಿಸಿ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಸೋಂಕಿತರನ್ನು ನಿಗದಿತ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ಚಿಕಿತ್ಸೆಗೆ ಏರ್ಪಾಡು ಮಾಡುತ್ತಿದ್ದಾರೆ. ಹೀಗಾಗಿ ದಿನೇದಿನೆ ಸೋಂಕಿತರ ಸಂಖ್ಯೆ ಪಾದರಸದಂತೆ ಏರುತ್ತಿದೆ. ಸೋಂಕಿತರ ಸಂಖ್ಯೆ ಜಾಸ್ತಿ ಆದಷ್ಟೂ ಅಪಾಯವೆಂದು ಜನರು ತಿಳಿದುಕೊಂಡಿರುವುದು ಸರಿಯಲ್ಲ ಸೋಂಕಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿ ಚಿಕಿತ್ಸೆ ನೀಡಿ ಗುಣಪಡಿಸಿ ಕಳಿಸುವುದು ಸೋಂಕನ್ನು ಎದುರಿಸಲು ಇರುವ ಏಕೈಕ ಮಾರ್ಗವಾಗಿದೆ. ಇದು ನಿಜಕ್ಕೂ ಕಷ್ಟದ ಹಾಗೂ ಸವಾಲಿನ ಕೆಲಸ, ಆರೋಗ್ಯ ಹಾಗೂ ಪೊಲೀಸು ಇಲಾಖೆಗಳು ಸೇರಿದಂತೆ ಸರಕಾರಿ ನೌಕರರು ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಇವರನ್ನು 'ಕೊರೋನಾ ಯೋಧರು' ಎಂದು ಕರೆಯಲಾಗುತ್ತಿರುವುದು ಅರ್ಥಪೂರ್ಣವಾಗಿದೆ. ಇವರಲ್ಲಿ ಅನೇಕರು ತಮ್ಮ ಮಡದಿ ಮಕ್ಕಳಿಂದ ದೂರವಿದ್ದು ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರನ್ನು ಬದುಕಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ, ಕೆಲವರು ಸ್ವತಃ ತಾವೇ ಸೋಂಕಿಗೆ ಒಳಗಾಗಿ ಬಲಿಯಾಗಿರುವ ನಿದರ್ಶನಗಳಿಗೂ ಕೊರತೆಯಿಲ್ಲ. ಒಂದು ಕಡೆ ಇವರ ಮಾನವೀಯ ಸೇವೆಯನ್ನು ಪ್ರಶಂಸೆ ಮಾಡಿ ಚಪ್ಪಾಳೆ ತಟ್ಟಿದ ಜನರೇ ಮತ್ತೊಂದೆಡೆ ಆಸ್ಪತ್ರೆಯಿಂದ ಮನೆಗೆ ಬಂದ ಈ ವೈದ್ಯರನ್ನು ಪಕ್ಕದ ಮನೆಯವರು ಬಿಟ್ಟುಕೊಳ್ಳದೆ ಅಮಾನವೀಯವಾಗಿ ವರ್ತಿಸಿದ ಉದಾಹರಣೆಗಳೂ ಇವೆ. 

ಕೊರೊನಾ ವಿರುದ್ಧದ ಯುದ್ದ ಸಮರ್ಥ ರೀತಿಯಲ್ಲಿ ನಡೆಯುತ್ತಿದ್ದರೂ ಜನರ ಸಹಕಾರವಿಲ್ಲದೆ ಯಾವ ಜಿಲ್ಲಾಡಳಿತವೂ ಏನೂ ಮಾಡಲು ಸಾಧ್ಯವಿಲ್ಲ. ಹೆಚ್ಚು ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸದಿದ್ದರೆ ಸೋಂಕು ನಿಯಂತ್ರಣಕ್ಕೆ ಬರುವುದೇ ಇಲ್ಲ ಗಂಟಲು ದ್ರವ ಪರೀಕ್ಷೆಯ ಫಲಿತಾಂಶಗಳನ್ನು ಅಂದಂದೇ ನೀಡಲು ಸಾಧ್ಯವಾಗದಿರುವುದರಿಂದ, ತಡವಾಗಿ ವರದಿಗಳು ಬರುವುದರಿಂದ ಸಂಖ್ಯೆಯು ಏರುಮುಖವಾಗಿ ಚಲಿಸಿದಂತೆ ಕಾಣುತ್ತದೆ. ಇದಕ್ಕಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಎಷ್ಟೇ ಜನ ಸೋಂಕಿತರಿದ್ದರೂ ಅವರನ್ನೆಲ್ಲಾ ಸಾಂಸ್ಥಿಕ ವಾಸ್ತವ್ಯದಲ್ಲಿ ಇರಿಸಿರುವುದರಿಂದ ಅಪಾಯವಂತೂ ಇರಲಾರದು. ಬಾಟಲಿಯಲ್ಲಿ ತುಂಬಿ ಬಿರಡೆ ಹಾಕಿ ಭೂತವನ್ನು ಬಂಧಿಸಿ ಇಟ್ಟಂತಾಗಿದೆ!

ಚೀನಾದಿಂದ ಸಂಚರಿಸಿದ ವೈರಾಣು ಇಂಗ್ಲೆಂಡ್, ಇಟಲಿ, ಅಮೆರಿಕದಲ್ಲಿ ಉಂಟು ಮಾಡಿರುವ ಸಾವು ನೋವುಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಆಗಿರುವ ಜೀವಹಾನಿ ಅತ್ಯಲ್ಪವೇ ಸರಿ. ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಅಮೆರಿಕ ಮತ್ತು ಐರೋಪ್ಯ ನಗರಗಳಲ್ಲಿ ಅದು ಮಾಡಿರುವ ರುದ್ರನರ್ತನಕ್ಕೆ ಹೋಲಿಸಿದರೆ ಚೀನಾದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ನಮ್ಮ ದೇಶದಲ್ಲಿ ಅದರ ಕೀಟಲೆ ಕಡಿಮೆಯೆಂದೇ ಹೇಳಬೇಕು. ಅಷ್ಟರಮಟ್ಟಿಗೆ ಭಾರತದಲ್ಲಿ ಹುಟ್ಟಿದ ಜನರು ಪುಣ್ಯಜೀವಿಗಳು! 'ಪರದ್ರವೇಷು ಲೋಷ್ಠವತ್' ಅಂದರೆ ಪರರ ಹಣ ಪಾಷಾಣವಿದ್ದಂತೆ; ಅದಕ್ಕೆ ಆಸೆ ಪಡಬಾರದು ಎಂದು ಈ ಪುಣ್ಯಭೂಮಿಯಲ್ಲಿ ಸಾವಿರಾರು ವರ್ಷಗಳಿಂದ ಋಷಿಮುನಿಗಳು, ಸಾಧುಸಂತರು ಬೋಧಿಸುತ್ತಾ ಬಂದಿದ್ದಾರೆ. ಅದು ಈಗ ಕಾರ್ಯರೂಪಕ್ಕೆ ಬರುತ್ತಿದೆ. ದಾರಿಯಲ್ಲಿ ಕರೆನ್ಸಿ ನೋಟು ಬಿದ್ದಿದ್ದರೆ ನೋಡಿದ ಜನ ಮುಟ್ಟಲು ಅಂಜುತ್ತಿದ್ದಾರೆ. ಆದರೆ, ತಾನು ದುಡಿಯದ ಹಣ ತನ್ನದಲ್ಲ ಅದಕ್ಕೆ ಆಸೆ ಪಡಬಾರದು ಎಂಬ ಧಾರ್ಮಿಕ ಪ್ರಜ್ಞೆಯಿಂದ ಅಲ್ಲ ಯಾರೋ ನೋಟಿಗೆ ಉಗುಳು ಹಚ್ಚಿ ಕೊರೊನಾ ಹಬ್ಬಿಸಲು ಮಾಡಿರುವ ಸಂಚು ಇರಬಹುದೆಂಬ ಭಯದಿಂದ!

Lockdown ಸಂದರ್ಭದಲ್ಲಿ ಜನರು ತಿಂಗಳಾನುಗಟ್ಟಲೆ ಗೃಹಬಂಧನಕ್ಕೆ ಒಳಗಾಗಿದ್ದರೂ ಅವರ ಮನಸ್ಸಿನಲ್ಲಿರುವ ಸುಪ್ತ ಪ್ರತಿಭೆ ಮಾತ್ರ Lockdown ಆಗಿಲ್ಲ, ನಿತ್ಯವೂ ವಾಟ್ಸ್ಆ್ಯಪ್ ಗಳಲ್ಲಿ ಹರಿದಾಡುತ್ತಿರುವ ನೂರಾರು ಕವಿತೆ, ಪ್ರಹಸನ, ಚುಟುಕು, ಕಿರುಗಥೆಗಳು, ವ್ಯಂಗ್ಯಚಿತ್ರಗಳು ಇದಕ್ಕೆ ಸಾಕ್ಷಿ 'ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್' ಎನ್ನುವ ಕವಿರಾಜಮಾರ್ಗದ ಪ್ರಸಿದ್ದ ಸಾಲನ್ನು ನೆನಪಿಗೆ ತರುತ್ತವೆ. ಅವುಗಳಲ್ಲಿ ತಿಳಿ ಹಾಸ್ಯ, ವ್ಯಂಗ್ಯ, ಮೂದಲಿಕೆ, ಎಚ್ಚರಿಕೆ, ತಿಳಿವಳಿಕೆಗಳು ಹಾಸುಹೊಕ್ಕಾಗಿವೆ. ಅವು ಬದುಕಿನ ಕಟು ವಾಸ್ತವತೆಯನ್ನು, ಜೀವನ ಸತ್ಯವನ್ನು ನಮ್ಮ ಮುಂದಿರಿಸಿವೆ. ಕಠಿಣವಾದ ಇಂದಿನ ದಾರುಣ ಪರಿಸ್ಥಿತಿಯಲ್ಲಿಯೂ ಸಂದರ್ಭಕ್ಕೆ ತಕ್ಕಂತೆ ನಮ್ಮ ಜನರು ಹೇಗೆ ಸ್ಪಂದಿಸಿದ್ದಾರೆಂಬು ದನ್ನು ಈ ಕೆಳಕಂಡ ಆಯ್ದಸಂದೇಶಗಳಿಂದ ತಿಳಿಯಬಹುದು: 

1.    ಈಗ ಇರೋದು ಎರಡೇ ಕಾಲ: ಮನೆಯೊಳಗೆ ಇದ್ದರೆ ಉಳಿಗಾಲ, ಹೊರಗಡೆ ಬಂದರೆ ಕೊನೆಗಾಲ. 

2.    ಹೊರಗಡೆಯಿಂದ ಗಂಡ ತನ್ನ ಪತ್ನಿ ಭಾರತಿಯನ್ನು ಪ್ರೀತಿಯಿಂದ 'ಬಾರು, ಬಾರು' ಅಂತ ಕೂಗಿದ. ದಾರಿಯಲ್ಲಿ ಹೋಗೂನು 'ಆಣ್ಣಾನಾ ಓಪನ್ ಆಗುತ್ತೆ' ಅನಬೇಕಾ! 

3.     ಅಪ್ಪ ಅಮ್ಮ ಇಬ್ಬರೂ ಸೇರಿಕೊಂಡು ಮಗಳಿಗೆ ಗದರಿಸುತ್ತಿದ್ದಾರೆ. ಅವಳು ಮಾಡಿದ ತಪ್ಪೆಂದರೆ 'ಕೊರೋನಾ ಹಬಕ್ಕೆ ಈ ವರ್ಷ ಮಾತ್ರ ರಜಾ ಕೊಡ್ತಾರೊ, ವರ್ಷ ವರ್ಷಾನೂ ರಜಾ ಕೊಡ್ತಾರೋ! ಎಂದು ಕೇಳಿದ್ದು! 

4.    ಎಲ್ಲ ಪ್ರಾಣಿಗಳೂ ದೇವರ ಹತ್ತಿರ ಹೋಗಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತವೆ. ದೇವರು ಅವುಗಳಿಗೆ ಪರಿಹಾರ ಸೂಚಿಸುತ್ತಾನೆ. ಮನುಷ್ಯರೂ ದೇವರಲ್ಲಿ ಬೇಡಿಕೊಳ್ಳುತ್ತಾರೆ: 'ದೇವಾಧಿದೇವಾ ಈಗ ವಕ್ಕರಿಸಿರುವ ಕೊರೊನಾಮಾರಿಯಿಂದ ಯಾವಾಗ ಮುಕ್ತಿ ಕೊಡುತ್ತೀಯಾ, ಅದಕ್ಕೆ ದೇವರು ತಣ್ಣಗೆ ಹೇಳಿದನಂತೆ “ಅದು ನನ್ನ ಕೈಯಲ್ಲಿಲ್ಲ. ನಿಮ್ಮ ಕೈಯಲ್ಲೇ ಇದೆ!” 

5.    ಒಂದು ವಿಡಿಯೊದಲ್ಲಿ ಪೊಲೀಸರು ಸಾದರಪಡಿಸಿದ ಬೀದಿನಾಟಕ: ಯಮಧರ್ಮ ಕೈಯಲ್ಲಿ ಪಾಶವನ್ನು ಹಿಡಿದು ಠೀವಿಯಂದ ನಡೆಯುತ್ತಿದ್ದರೆ ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿಜೋಗಿಯ ಪದ್ಯವನ್ನು ನೆನಪಿ ಸುವಂತೆ ಅವನನ್ನು ಹಿಂಬಾಲಿಸಿ ಜನರ ಹಿಂಡೋ ಹಿಂಡು! 

6.    ವಿಡಿಯೊಗಳಲ್ಲಿ ನಿರ್ಜನ ರಸ್ತೆಗಳಲ್ಲಿ ವಿಹರಿಸುವ ನವಿಲುಗಳು, ಮರಿಗಳ ಜೊತೆ ವಾಕಿಂಗ್ ಮಾಡುತ್ತಿರುವ ಆನೆಗಳು, ಆಕಳಿಸುತ್ತಾ ಮಲಗಿ ರಸ್ತೆಯನ್ನು ಸೀಲ್ ಮಾಡಿರುವ ಹುಲಿ ಸಿಂಹಗಳು! 

7.    ಪಾಪಗಳನ್ನು ತೊಳೆದುಕೊಳ್ಳುವಂತೆ sanitizer ಕೊಟ್ಟು ಎಚ್ಚರಿಸುತ್ತದೆ. ಕೆಟ್ಟದ್ದು ಮಾತನಾಡಬೇಡಿ ಎಂದು mask ಕೊಟ್ಟು ಗದರಿಸುತ್ತದೆ. ದುಷ್ಟರಿಂದ ದೂರ ಇರಿ ಎಂದು distance ಪಾಲಿಸಲು ಸೂಚಿಸುತ್ತದೆ. ಕಾಲ ಮೌನವಾಗಿ ಎಲ್ಲ ಹೇಳುತ್ತದೆ. ಆದರೆ ನಾವೇ ಕೇಳುವುದಿಲ್ಲ. 

8.    ಕೊರೊನಾ ಮಂಡ್ಯದಲ್ಲಿ ಸಕ್ಕರೆ ತಗೊಂಡು, ದಾವಣ ಗೆರೆಯಲ್ಲಿ ಬೆಣ್ಣೆ ದೋಸೆ ತಿನ್ನೊಂಡು, ಶಿವಮೊಗ್ಗದಲ್ಲಿ ಎಲೆ ಅಡಿಕೆ ಹಾಕ್ಕೊಂಡು, ಚಿಕ್ಕಮಗಳೂರಿನಲ್ಲಿ ಕಾಫಿ ಕುಡ್ಕೊಂಡು, ರಾತ್ರಿ ಉಡುಪಿಗೆ ಮೀನೂಟಕ್ಕೆ ಹೊರಟಿದೆ ಇನ್ನೂ ನಾಳೆಗೆ ಏನ್ ಏನ್ ಪ್ಲಾನ್ ಇದಿಯೋ ಕಾಣೆ? 

9.    ಕೊರೊನಾದಿಂದ ಕಲಿತ ಪಾಠ ಏನು:1. ಅಮೆರಿಕ ಪ್ರಪಂಚದ ಶಕ್ತಿಶಾಲಿ ರಾಷ್ಟ್ರ ಎಂಬುದು ಸುಳ್ಳಾಯಿತು. 2. ಚೀನಾ ಯಾವುದೇ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸದೆ ಮೂರನೇ ಮಹಾಯುದ್ದವನ್ನು ಗೆದ್ದಿತು. 3. ಯೂರೋಪಿಯನ್ನರು ಪ್ರಪಂಚ ತಿಳಿದುಕೊಂಡಷ್ಟು ಜಾಣರಲ್ಲ, 4. ಶ್ರೀಮಂತರಿಗೆ ಬಡಜನರಿಗಿಂತ ರೋಗನಿರೋಧಕ ಶಕ್ತಿ ಕಡಿಮೆ ಎಂಬ ವಿಷಯ ತಿಳಿಯಿತು. 5. ಯಾವ ಪೂಜಾರಿ, ಪಾದ್ರಿ, ಮುಲ್ಲಾರಿಗೂ ರೋಗಿಗಳನ್ನು ಬದುಕಿಸಲು ಸಾಧ್ಯವಿಲ್ಲ ಎಂಬ ಅರಿವಾಯಿತು. 6. ತೈಲಕ್ಕೆ ಬಳಕೆದಾರರಿಲ್ಲದೆ ಬೆಲೆ ಇಲ್ಲ, 7. ಕ್ವಾರಂಟೈನ್ನಿಂದ ನಮಗೆ ಬೇಸರ ಉಂಟಾಗಿರುವಂತೆ Zooನಲ್ಲಿರುವ ಪ್ರಾಣಿಗಳಿಗೂ ಆಗಿರಬಹುದು, 8. ಮನುಷ್ಯನ ಅಡೆತಡೆ ಇಲ್ಲದಿದ್ದರೆ ಪ್ರಕೃತಿ ತ್ವರಿತಗತಿಯಲ್ಲಿ ನಳನಳಿಸುತ್ತದೆ. 9. ಅನೇಕರು ಮನೆಯಲ್ಲಿಯೇ ಇದ್ದುಕೊಂಡು ಸುಲಭವಾಗಿ ಕೆಲಸ ಮಾಡಬಹುದು, 10. ಜ್ಞಟಟಛ ಇಲ್ಲದೆ ಬದುಕಬಹುದು. 11. ಆರೋಗ್ಯಕರವಾದ ಜೀವನ ನಡೆಸುವುದು ಕಷ್ಟವೇನಲ್ಲ, 12. ಗಂಡಸರೂ ಅಡುಗೆ ಮಾಡಬಹುದು.13. ಚಿತ್ರನಟರು ಬರೀ ಮನೋರಂಜನೆ ನೀಡಬಲ್ಲರು ಅಷ್ಟೆ ನಿಜವಾದ ಹೀರೋಗಳ 14. ಜೀವನ ತುಂಬಾ ನಾಜೂಕು, ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು. 

10.    ಒಂದು ನಿಮಿಷವೂ ಸಮಯವಿಲ್ಲವೆಂದು ಒತ್ತಡದಲ್ಲಿ ಅಲೆಯುತ್ತಿದ್ದಿರಿ, ಅನ್ನ ನಿದ್ದೆ ಇಲ್ಲದೆ ಆಸ್ತಿ ಮಾಡಿದಿರಿ, ಸಾಕೀಗ ನೀವು ವಿಶ್ರಾಂತಿ ಪಡೆಯು. 

11.    Note Ban ಆದಾಗ ಅಂಗಡಿಗಳು ತೆರೆದಿದ್ದವು, ಆದರೆ ಕೈಯಲ್ಲಿ ಹಣವಿರಲಿಲ್ಲ, Lockdown ಆದಾಗ ಕೈಯಲ್ಲಿ ಹಣವಿದೆ, ಆದರೆ ಅಂಗಡಿಗಳು ತೆರೆದಿಲ್ಲ. ಮುಂದೆ ಹಣವೂ ಇರುತ್ತೆ, ಅಂಗಡಿಗಳೂ ತೆರೆಯುತ್ತವೆ. ಈಗ ನೀನು ಮನೆಯೊಳಗೆ ಇರದಿದ್ದರೆ ಮುಂದೆ ಕೊಳ್ಳಲು ನೀನೇ ಇರುವುದಿಲ್ಲ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.21.5.2020
ಬಿಸಿಲು ಬೆಳದಿಂಗಳು