ಬುದ್ದಿಗೇಡಿ ಜನರನ್ನು ಯಾವ ದೇವರು ರಕ್ಷಿಸಲು ಸಾಧ್ಯ?
ಎಲ್ಲ ಧರ್ಮಗಳಲ್ಲಿಯೂ ದೇವರು ಕರುಣಾಮಯಿ, ದಯಾಮಯಿ, ಅನಾಥರಕ್ಷಕ, ದೀನಬಂಧು ಎಂದೆಲ್ಲಾ ಬಣ್ಣಿಸಲಾಗಿದೆ. ಸದ್ಯದ ಕೊರೊನಾ ಸಂಕಟದ ಸಮಯದಲ್ಲಿ ಜಗತ್ತಿನಾದ್ಯಂತ ಅದೆಷ್ಟು ಜನರು, “ದೇವರೇ ಕೊರೊನಾ ಮಹಾಮಾರಿಯನ್ನು ತೊಲಗಿಸು, ನಮ್ಮನ್ನು ಕಾಪಾಡು, ಎಂದು ದೈನ್ಯದಿಂದ ಬೇಡುತ್ತಿದ್ದಾರೆ. ವಿವಿಧ ಧರ್ಮದವರು ತಂತಮ್ಮ ಧರ್ಮಗಳ ರೀತಿಯಲ್ಲಿ ಪ್ರಾರ್ಥನೆ, ಪೂಜೆ, ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ಮಠಮಂದಿರಗಳು, ಚರ್ಚು, ಮಸೀದಿ, ಗುರುದ್ವಾರಗಳು ಮುಚ್ಚಿದ್ದರೂ ಆಸ್ತಿಕರು ತಂತಮ್ಮ ಮನೆಗಳಲ್ಲಿರುವ ಪೂಜಾಗೃಹಗಳಲ್ಲಿ ದೇವರ ಪೂಜೆ ಮಾಡುವುದನ್ನು ಬಿಟ್ಟಿಲ್ಲ. ಆದರೂ ಕೊರೊನಾ ತೊಲಗುತ್ತಿಲ್ಲ; ಬದಲಾಗಿ ಮಕ್ಕಳನ್ನು, ಬಸಿರು ಬಾಣಂತಿಯರನ್ನು, ವೃದ್ದರನ್ನು ಗುರಿಯಾಗಿಸಿ ಎರಗಿ ಯಮಪಾಶ ಬೀಸಿ ಸೆಳೆಯುತ್ತಿದೆ. ಭಕ್ತರ ಪೂಜೆ ಪುನಸ್ಕಾರಗಳೆಲ್ಲವೂ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ವ್ಯರ್ಥ ವಾಗುತ್ತಿವೆಯೇ? ಅವರದು ಕೇವಲ ಅರಣ್ಯರೋದನವಾಗುತ್ತಿದೆಯೇ? ಇಂತಹ ಸಂದರ್ಭದಲ್ಲೂ ದೇವರೇಕೆ ಸುಮ್ಮನಿದ್ದಾನೆ! ಜನರ ಶ್ರದ್ಧಾಭಕ್ತಿಗಳಿಗೆ ದೇವರು ಕೊಡುವ ಕಿಮ್ಮತ್ತು ಇಷ್ಟೇನೆ! ದೇವರು ಸರ್ವಶಕ್ತನಲ್ಲವೆ? 'ಅಣೋರಣೀಯಾನ್ ಮಹತೋ ಮಹೀಯಾನ್' ಎಂಬಂತೆ ಅಷ್ಟಸಿದ್ದಿಪುರುಷನಾದ ಅವನು ಮನಸ್ಸು ಮಾಡಿದರೆ ಕೊರೊನಾ ಎಂಬ ಪುಟಗೋಸಿ ವೈರಾಣು ಯಾವ ಲೆಕ್ಕ! ನಿತ್ಯವೂ ಜಗತ್ತಿನಾದ್ಯಂತ ಕೊರೊನಾ ಕಪಿಮುಷ್ಟಿಯಲ್ಲಿ ನಲುಗುತ್ತಿರುವ ಲಕ್ಷಾಂತರ ನಿಷ್ಟಾಪಿ ಜನರ ಪ್ರಾಣ ಹರಣವಾಗುತ್ತಿದ್ದರೂ ದೇವರೇಕೆ ಸುಮ್ಮನಿದ್ದಾನೆ; ತನ್ನ ತ್ರಿಶೂಲ, ಸುದರ್ಶನ ಚಕ್ರ, ಗದೆಗಳಿಗೆ ಏಕೆ ಕೆಲಸ ಕೊಡುತ್ತಿಲ್ಲ? ಭಕ್ತರ ಕಷ್ಟದ ಸಂದರ್ಭದಲ್ಲಿ ರಕ್ಷಣೆಗೆ ಧಾವಿಸದ ದೇವರು ಅವನೆಂಥಾ ದೇವರು? ಅವನನ್ನೇಕೆ ಕರುಣಾಮಯಿ, ಸರ್ವಶಕ್ತ ಎಂದು ನಂಬಬೇಕು? 'ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್' (ಗೀತಾ 4.7) ಅಂದರೆ ಧರ್ಮದ ಗ್ರಾನಿ ಉಂಟಾದಾಗ ಅವತಾರವೆತ್ತಿ ಬರುತ್ತೇನೆ ಎನ್ನುವ ಭಗವದ್ಗೀತೆಯಲ್ಲಿ ದೇವರು ಕೊಟ್ಟ ಭರವಸೆ ಎಲ್ಲಿ ಹೋಯಿತು? ಇವೆಲ್ಲ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿವೆಯಲ್ಲವೆ!
ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ದೇವರನ್ನೇಕೆ ನಿಂದಿಸಬೇಕು? ತನ್ನಲ್ಲಿ ತಪ್ಪು ಇಟ್ಟುಕೊಂಡು ಇನ್ನೊಬ್ಬರನ್ನು ದೂಷಿಸುವುದು ಮನುಷ್ಯನ ಹುಟ್ಟು ಸ್ವಭಾವ, 'ಉದ್ದರೇದಾತ್ಮನಾತ್ಮಾನಂ ನಾತ್ಮಾನ ಮವಸಾದಯೇತ್ | ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪು ರಾತ್ಮನಃ ' (ಗೀತಾ 6.5) ಅಂದರೆ 'ನಿನಗೆ ನೀನೇ ಶತ್ರು, ನಿನಗೆ ನೀನೇ ಬಂಧು. ನಿನ್ನ ಪ್ರಯತ್ನವನ್ನು ನೀನು ಮಾಡದೆ ಬೇರೊಬ್ಬರು ಬಂದು ನಿನ್ನನ್ನು ಉದ್ದರಿಸುತ್ತಾರೆಂದು ಕಾಯುತ್ತಾ ಕುಳಿತುಕೊಳ್ಳಬೇಡ. ನಿನ್ನ ಉದ್ದಾರ ನಿನ್ನ ಕೈಯಲ್ಲೇ ಇದೆ' ಎಂದು ಅದೇ ಗೀತೆ ಮುಂದಿನ 6ನೆಯ ಅಧ್ಯಾಯದಲ್ಲಿ ಎಚ್ಚರಿಸುತ್ತದೆ. 'ದೇವರನ್ನು ನಂಬಿ ಇದುವರೆಗೆ ಯಾರೂ ಕೆಟ್ಟಿಲ್ಲ, ನಂಬಿದವರನ್ನು ಸಾಮಾನ್ಯ ಮನುಷ್ಯರೂ ಮರೆಯುವುದಿಲ್ಲ, ಜಗದಾತ್ಮನು ಮರೆಯುತ್ತಾನೆಂದರೆ ಕುಹಕದ ಮಾತಲ್ಲವೇ? ವಿಪತ್ತು ಬಾರದೆ ಯಾವ ಪ್ರಾಣಿಯೂ ರಕ್ಷಕನನ್ನು ಅಪೇಕ್ಷಿಸುವುದಿಲ್ಲ, ಅವನ ಸ್ಮರಣೆಯನ್ನೂ ಸಹ ಮಾಡುವುದಿಲ್ಲ, ಪರ ಮಾತನ್! ನೀನೇ ಜಗತ್ತಿನ ರಕ್ಷಕನು. ಜಗತ್ತಿನ ಜನರೆಲ್ಲಾ ನಿನ್ನನ್ನು ಸ್ಮರಿಸ ಬೇಕಾದರೆ ವಿಪತ್ತು ಬಾರದೆ ಸರಿಸರು. ನೀನು ತಂದು ಹಾಕುವ ವಿಪತ್ತೇ ನಿನ್ನ ಭಕ್ತ ಜನರಿಗೆ ದಿವ್ಯಾನುಗ್ರಹ, ಎಂದು ನಮ್ಮ ಗುರುವ ರ್ಯರು ತಮ್ಮ ದಿನಚರಿ 'ಆತ್ಮನಿವೇದನೆ'ಯಲ್ಲಿ ಬರೆದಿರುತ್ತಾರೆ. ದೇವರ ಮೇಲೆ ಅಚಲವಾದ ನಿಷ್ಠೆಯುಳ್ಳ ಭಕ್ತರು ಜೀವನದಲ್ಲಿ ಮೇಲಿಂದ ಮೇಲೆ ಬಂದೆರಗುವ ವಿಪತ್ತುಗಳನ್ನು ನೋಡುವ ದೃಷ್ಟಿಯೇ ಬೇರೆ. ಅವು ತಮ್ಮ ನಂಬುಗೆಯನ್ನು ಪರೀಕ್ಷಿಸಲು ದೇವರು ಒಡ್ಡಿದ ಸವಾಲುಗಳೆಂದೇ ಭಾವಿಸುತ್ತಾರೆ. ಭಕ್ತನಿಗೆ ಭಗವಂತನ ಮೇಲಿರುವ ಅದಮ್ಯ ವಿಶ್ವಾಸವೇ ಭಕ್ತಿ. ಅದು ಬುದ್ದಿಯ ಶುಷ್ಕ ತರ್ಕಕ್ಕೆ ನಿಲುಕುವ ವಸ್ತುವಲ್ಲ, ಅದೊಂದು ಹೃದಯಾಂತರಾಳದಿಂದ ಹೊರಹೊಮ್ಮುವ ಅಲೌಕಿಕ ಭಾವನೆಯ ತುಡಿತ.
ಬದುಕಿನ ಎಲ್ಲ ಬಂಧನಗಳಿಂದ ಕಳಚಿಕೊಂಡು ನಿತ್ಯನಿರಂತರವಾದ ಆನಂದಾನುಭೂತಿಯನ್ನು ಪಡೆಯುವ ತವಕ. ಕೆಲವೊಮ್ಮೆ ದೇವರನ್ನು ನಂಬಿಯೂ ನಂಬಲಾರದಂತಹ ಸ್ಥಿತಿಗೆ ಜೀವನದ ವಿಷಮ ಸನ್ನಿವೇಶಗಳು ಎಳೆದೊಯ್ಯುತ್ತವೆ. ಆದರೆ ನಿಜವಾದ ಭಕ್ತನು ಎಂತಹ ವಿಷಮ ಸನ್ನಿವೇಶದಲ್ಲಿಯೂ ದೇವರ ಮೇಲಿನ ತನ್ನ ನಂಬುಗೆಯನ್ನು ಕಳೆದುಕೊಳ್ಳುವುದಿಲ್ಲ ಹಾಗೆ ಬಂದೆರಗಿದ ವಿಪತ್ತುಗಳೆಲ್ಲಾ ದೇವರ ದಿವ್ಯಾನುಗ್ರಹವೆಂದೇ ಭಾವಿಸುತ್ತಾನೆ. ದೇವರ ದಾಸಿಮಯ್ಯನವರ ಮುಂದಿನ ವಚನ ಇಲ್ಲಿ ಗಮನಾರ್ಹ:
ಹರ ತನ್ನ ಭಕ್ತರ ತಿರಿವಂತೆ ಮಾಡುವ