ರೈತರ ಜನ್ಮಕುಂಡಲಿ ಈ ವಿನೂತನ ಬೆಳೆ ಸಮೀಕ್ಷೆ ತಂತ್ರಾಂಶ!

  •  
  •  
  •  
  •  
  •    Views  


ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು
ಮೇಟಿಯಿಂ ರಾಟೆ ನಡೆದುದಲ್ಲದೆ ದೇಶ
ದಾಟವೇ ಕೆಡುಗು ಸರ್ವಜ್ಞ

ಸರ್ವಜ್ಞನ ಈ ತ್ರಿಪದಿಯು ಮೂರೇ ಸಾಲುಗಳಲ್ಲಿ ಕೃಷಿಯ ಮಹತ್ವವನ್ನು ತಿಳಿಸುತ್ತದೆ. ಬೇರೆಲ್ಲಾ ಚಟುವಟಿಕೆಗಳು ನಿಂತರೂ ದೇಶದ ಆಡಳಿತದ ಚುಕ್ಕಾಣಿ ಹಿಡಿದವರ (ಭರಾಟೆ ನಡೆದೀತು; ಆದರೆ ಕೃಷಿ ಮುಗ್ಗರಿಸಿದರೆ ಮಾತ್ರ ದೇಶದ ಆಟವೇ ನಿಲ್ಲುತ್ತದೆ. ಎಂಬ ಈ ಮಾತು ಇಂದಿಗೆ ಬಹಳ ಪ್ರಸ್ತುತವಾಗಿದೆ. ಕೈಗಾರಿಕೆಗಳು ನಡೆಯುತ್ತಿಲ್ಲ ಕಟ್ಟಡ ಕಾಮಗಾರಿಗಳು ನಿಂತುಹೋಗಿವೆ. ರೈಲು ಬಸ್ಸುಗಳ ಸಂಚಾರವಿಲ್ಲ, ವಿಮಾನಗಳ ಹಾರಾಟವಿಲ್ಲ, ಶಾಲಾ ಕಾಲೇಜುಗಳು ಈ ವರ್ಷ ನಡೆಯುತ್ತವೆಯೋ ಇಲ್ಲವೋ ಗೊತ್ತಿಲ್ಲ, ಒಂದು ವರ್ಷ ವಿದ್ಯಾಭ್ಯಾಸ ನಿಂತರೂ ಪರವಾಗಿಲ್ಲ ತಮ್ಮ ಮಕ್ಕಳು ಸುರಕ್ಷಿತವಾಗಿ ಮನೆಯಲ್ಲಿರಲಿ ಎಂಬ ಆಲೋಚನೆ ಪೋಷಕರದು. ಈ ಹಿನ್ನೆಲೆಯಲ್ಲಿ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲೆಂದು ಕೊರೊನಾ ಲಾಕ್ಡೌನ್ ಬಿಕ್ಕಟ್ಟು ತೋರಿಸಿದೆ.

 ಸಕಲ ವ್ಯಾಪಾರ ಉದ್ದಿಮೆಗಳ ಜೀವನಾಡಿ ಎಂದರೆ ಕೃಷಿ, ದೇಶದ ಆರ್ಥಿಕ ಚಟುವಟಿಕೆಗಳಿಗೆ ಕೃಷಿಯೇ ಆಮ್ಲಜನಕವೆಂದರೆ ತಪ್ಪಲ್ಲ, ಹಣದಿಂದ ಏನನ್ನಾದರೂ ಕೊಳ್ಳಬಹುದು ಎಂಬ ಮಾತು - ಪೂರ್ಣ ಸತ್ಯವಲ್ಲ, ರೈತನು ಅನ್ನವನ್ನು ಬೆಳೆಯದಿದ್ದರೆ ಹಣದಿಂದ - ಯಾರು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ? ಆದ್ದರಿಂದ ಕೃಷಿ ಯನ್ನು ಪೋಷಿಸುವುದು ಮತ್ತು ಕೃಷಿಕರನ್ನು ಪ್ರೋತ್ಸಾಹಿಸಿ ರಕ್ಷಿಸುವುದು ಸರಕಾರಗಳ ಆದ್ಯ ಕರ್ತವ್ಯವಾಗಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ನಿಜ. ಆದರೆ ಇಂದಿನ ಕಾಲಮಾನದ ದೃಷ್ಟಿಯಿಂದ ನೋಡಿದಾಗ ಆ ಪ್ರಜೆಗಳಲ್ಲಿ ನಾಡಿನ ಜನರಿಗೆ ಅನ್ನ ನೀಡುವ ರೈತರೇ ನಿಜವಾದ ಧಣಿಗಳು. 

ಸಕಾಲದಲ್ಲಿ ಮಳೆ ಬರದೇ ಹೋದರೆ ರೈತರ ಬವಣೆ ಹೇಳತೀರದು. 'ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ಬಂದಿದ್ದರೂ ಪ್ರಧಾನ ಮಂತ್ರಿ ಮೋದಿಯವರ ಭಾಷಣ ಜನರನ್ನು ಮೋಡಿ ಮಾಡಿದಂತೆ, ಈ ಯೋಜನೆ ರೈತರನ್ನು ಮೋಡಿ ಮಾಡುವಲ್ಲಿ ವಿಫಲವಾಗಿದೆ. ಶೇಕಡ 80ರಷ್ಟು ರೈತರು ಈ ಯೋಜನೆ ಯಡಿಯಲ್ಲಿ ವಿಮೆ ಮಾಡಿಸಿರುವುದಿಲ್ಲ. ವಿಮೆ ಪಾವತಿಸಿದ ಶೇಕಡ 20 ರೈತರೂ ಸಹ ಸ್ವಪ್ರೇರಣೆಯಿಂದ ಪಾವತಿಸಿರುವುದಿಲ್ಲ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಬೆಳೆ ಸಾಲ ಕೊಡುವ ಸಂದರ್ಭ ದಲ್ಲಿ ಕಡ್ಡಾಯವಾಗಿ ಮುರಿದುಕೊಂಡಿದ್ದಾರೆ. ಸಣ್ಣಮೊತ್ತದ ಪ್ರೀಮಿಯಂ ಪಾವತಿಸಿ ಬೆಳೆ ನಷ್ಟವಾದರೆ ವಿಮಾ ರಕ್ಷಣೆ ಪಡೆಯುವ ಈ ಸವಲತ್ತನ್ನು ರೈತರು ಸರಿಯಾಗಿ ಬಳಸಿಕೊಳ್ಳದಿರುವು ದಕ್ಕೆ ರೈತರ ಉಪೇಕ್ಷೆ ಕಾರಣವೇ? ಇಲ್ಲ, ಈ ಯೋಜನೆಯು ರೈತರಿಗಿಂತ ವಿಮಾಕಂಪನಿಗಳಿಗೆ ಹೆಚ್ಚು ಲಾಭದಾಯಕವಾಗಿದೆ ಎನ್ನುವ ರೈತ ಮುಖಂಡರ ಆರೋಪವನ್ನು ತಳ್ಳಿಹಾಕುವಂತಿಲ್ಲ ವಿಮೆಯ ನಿಯಮಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡು ಬಂದರೂ ಏಳು ವರ್ಷಗಳ ಕಾಲಾವಧಿಯಲ್ಲಿ ಬರುವ 'ಹೊಸ್ತಿಲ ಇಳುವರಿ'ಯ (ಠಿಜ್ಟಿಛಿಠಜಿಟ್ಝಛ ಢಜಿಛ್ಝಿಛ) ಸರಾಸರಿ ಆಧಾರದ ಮೇಲೆ ಶೇಕಡ 33 ಬೆಳೆ ನಷ್ಟವಾಗಿದ್ದರೆ ಮಾತ್ರ ಬೆಳೆ ಪರಿಹಾರ ನೀಡುವುದಾಗಿ ಮಾಡಿರುವ ನಿಯಮದಿಂದ ರೈತರಿಗೆ ಯಾವ ಪ್ರಯೋಜನವೂ ಆಗಿಲ್ಲ, ಈ ಹೊಸ್ತಿಲ ಇಳುವರಿ ಎಷ್ಟು ಎಂಬುದನ್ನೂ ಸಹ ರೈತರಿಗೆ ತಿಳಿಸುವುದಿಲ್ಲ, ಇದು ಮೋಸವಲ್ಲದೆ ಮತ್ತೇನು! 

ಇನ್ನು ಇಲಾಖೆಯಿಂದ ಬರಪರಿಹಾರವನ್ನು ಪಡೆಯಲು ರೈತರು ಒಟ್ಟು ಆರು ದಾಖಲೆಗಳನ್ನು ಗ್ರಾಮಲೆಕ್ಕಿಗರಿಗೆ ಸಲ್ಲಿಸಬೇಕಾಗಿತ್ತು. ಚುನಾವಣಾ ಗುರುತು ಪತ್ರ, ರೇಶನ್ ಕಾರ್ಡು, ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ಪುಸ್ತಕ ಮತ್ತು ಭಾವಚಿತ್ರ. ಈ ದಾಖಲೆಗಳನ್ನು ಪಡೆದ ಗ್ರಾಮಲೆಕ್ಕಿಗರು ಮಾಡುತ್ತಿದ್ದುದಿಷ್ಟೇ: ಅದರ ಮೇಲೊಂದು ಸೀಲು ಒತ್ತಿ ಕೊಟ್ಟು ರೈತರನ್ನೇ ತಾಲ್ಲೂಕು ಕಚೇರಿಗೆ ಅಟ್ಟುತ್ತಿದ್ದರು. ತಾಲ್ಲೂಕು ಕಚೇರಿಯಲ್ಲಿಯೂ ಇದರ ಪುನಾವರ್ತನೆ. ಹೀಗೆ ಅಧಿಕಾರಿಗಳ 'ಕೈ ಬೆಚ್ಚಗೆ' ಮಾಡಲು, ಜೆರಾಕ್ಸ್ ಮಾಡಿಸಲು, ಫೋಟೋ ತೆಗೆಸಲು, ಇಲಾಖೆಗಳ ಕಂಬ ದಿಂದ ಕಂಬಕ್ಕೆ ಅಲೆದಾಡಲು ಮಾಡಬೇಕಾದ ವೆಚ್ಚಲೆಕ್ಕ ಹಾಕಿದರೆ ರೈತನಿಗೆ ಉಳಿಯುತ್ತಿದ್ದ ಹಣ 'ಅರೆಕಾಸಿನ ಮಜ್ಜಿಗೆ'! ಅನೇಕ ವೇಳೆ ವ್ಯಾಪಾರಸ್ಥರು, ಪ್ರಭಾವೀ ವ್ಯಕ್ತಿಗಳು ಮತ್ತು ಮಧ್ಯವರ್ತಿಗಳು ದುರ್ಲಾಭ ಮಾಡಿಕೊಳ್ಳುತ್ತಿದ್ದ ಸಂದರ್ಭಗಳೇ ಹೆಚ್ಚು 

ಇವೆಲ್ಲ ರೇಜಿಗೆಗಳಿಂದ ರೈತರನ್ನು ಮುಕ್ತಗೊಳಿಸಲು ನಾಲ್ಕು ವರ್ಷಗಳ ಹಿಂದೆ ನಮ್ಮ ಲಿಂಗೈಕ್ಯ ಗುರುವರ್ಯರ ಶ್ರದ್ದಾಂಜಲಿ ಸಮಾರಂಭದ ದಿನ ರೈತರ ವಾರವಾದ ಸೋಮವಾರದಂದು (19.9.2016) ಸಿರಿಗೆರೆಯಲ್ಲಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಆಗಿನ ರಾಜ್ಯದ ಪ್ರಮುಖ JJ GE: hse: By Tha CHALEINDE Allhistle: Cass 14 : ಸಚಿವರು, ಕೃಷಿ ಇಲಾಖೆ-ಬ್ಯಾಂಕ್ - ವಿಮಾ ಸಂಸ್ಥೆಗಳ ಅಧಿಕಾರಿಗಳು ಹಾಗೂ ರೈತರ ಮಧ್ಯೆ 'ಬೆಳೆ ವಿಮೆ - ಸಂವಾದ' ಏರ್ಪಡಿಸಲಾಗಿತ್ತು. ಇದರಲ್ಲಿ ರಾಜ್ಯ ಸರಕಾರದ ಈಗಿನ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಾದ 'ಭೂಮಿ' ತಂತ್ರಾಂಶದ ರೂವಾರಿ ಗಳೂ ಆದ ರಾಜೀವ್ ಚಾವಲಾ ಭಾಗವಹಿಸಿದ್ದರು. ಬೆಳೆ ವಿಮೆಯಿಂದ ರೈತರಿಗೆ ಹೇಗೆ ಮೂರು ಕಾಸಿನ ಪ್ರಯೋಜನವಿಲ್ಲ ಅದೇನಿದ್ದರೂ ವಿಮಾ ಕಂಪನಿಗಳಿಗೇ ಲಾಭ ಎಂಬ ಕಟುಸತ್ಯವನ್ನು ಪ್ರತಿಪಾದಿಸಿ 'ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ'ಯ ನಿಯಮಗಳು ಹೇಗೆ ದೋಷಪೂರ್ಣವಾಗಿವೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ತೋರಿಸಿದ್ದನ್ನು ಬಹಿರಂಗ ವೇದಿಕೆಯಲ್ಲಿ ಒಪ್ಪಿ ಕೊಂಡ ಚಾವಲಾ ಅವರು ಅಂದಿನಿಂದ ನಮಗೆ ಹತ್ತಿರವಾಗ ತೊಡಗಿದರು. ಸಂವಾದವು ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳದೆ ನಂತರವೂ ನಮೀರ್ವರ ಮಧ್ಯೆ ಅನೇಕ ಸಭೆಗಳು ನಡೆದು ಈ ವಿಷಯವಾಗಿ ಚರ್ಚೆ ಮುಂದುವರಿಯಿತು. ಅದೇ ವರ್ಷ ನವಂಬರ್ ತಿಂಗಳ ಒಂದು ಸಭೆಯಲ್ಲಿ ಬೆಳೆನಷ್ಟ ಪರಿಹಾರಕ್ಕೆ ಸಂಬಂಧಿಸಿ ಹಳೆಯ ಶಾನುಭೋಗರ ಕಾಲದ ಪದ್ದತಿಯನ್ನು ಕೈಬಿಟ್ಟು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಒಂದು ತಂತ್ರಾಂಶವನ್ನು ರೂಪಿಸಬಾರದೇಕೆ? ಎಂಬ ನಮ್ಮ ಸಲಹೆಯನ್ನು ಅವರು ಮನಸಾರೆ ಒಪ್ಪಿಕೊಂಡರು. ಯಾವ ದಾಖಲೆಗಳನ್ನೂ ಸಲ್ಲಿಸಲು ಕೇಳದೆ ಸರಕಾರವು ತನ್ನಲ್ಲಿಯೇ ಇರುವ ದಾಖಲೆಗಳನ್ನು ಪರಿಶೀಲಿಸಿ ಪರಿಹಾರದ ಹಣವು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಆಗುವಂತೆ ‘ಭೂಮಿ ಆನ್ಲೈನ್ ಪರಿಹಾರ' ತಂತ್ರಾಂಶವು ರೂಪುಗೊಂಡಿತು. ಅದರ ಪರಿಣಾಮವಾಗಿ ಆ ವರ್ಷ ಕೇಂದ್ರದ ನೆರವು ಪಡೆದು ರಾಜ್ಯ ಸರಕಾರ ಮುಂಜೂರು ಮಾಡಿದ ಸುಮಾರು 1,782 ಕೋಟಿ ರೂ. ಬೆಳೆನಷ್ಟ ಪರಿಹಾರದ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಯಿತು. ವಿಪತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತ ಆಗಿನ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗಾರಾಂ ಬಡೇರಿಯಾರವರ ಸೇವೆಯೂ ಇಲ್ಲಿ ಸ್ಮರಣೀಯ. 

ಒಂದು ರೀತಿಯಲ್ಲಿ ರೈತರ 'ಭಾಗ್ಯವಿಧಾತ' ಗ್ರಾಮಲೆಕ್ಕಿಗ ಎಂದರೆ ತಪ್ಪಲ್ಲ. ಅವನು ಸರಿಯಾಗಿ ಬೆಳೆಯನ್ನು ದಾಖಲಿಸಿದರೆ ರೈತರಿಗೆ ಪರಿಹಾರ ಉಂಟು ಇಲ್ಲದಿದ್ದರೆ ಇಲ್ಲ ಈ ತೊಂದರೆಯನ್ನು ನಿವಾರಣೆ ಮಾಡಲು ಉನ್ನತ ಅಧಿಕಾರಿಗಳೊಂದಿಗೆ ಖಾಸಗಿಯಾಗಿ ಸಮಾಲೋಚನೆ ನಡೆಸಿದಂತೆ ರೈತರಿಗಾಗಿ ಒಂದು ವಿಶೇಷ ಮೊಬೈಲ್ ಆ್ಯಪ್ ಸಿದ್ಧವಾಯಿತು. ರೈತನೇ ನೇರವಾಗಿ ತನ್ನ ಮೊಬೈಲಿನಿಂದ ತನ್ನ ಬೆಳೆಯ ಮಾಹಿತಿಯನ್ನು ಸರಕಾರಕ್ಕೆ ರವಾನಿಸಬಹುದಾದ ವ್ಯವಸ್ಥೆ ಇದು. ಹೀಗೆ ಮಾಡುವುದರಿಂದ ಮುಂಗಾರು ಬಿತ್ತನೆ ಮುಗಿಯುವುದರೊಳಗೆ ರಾಜ್ಯದ ರೈತರು ಎಲ್ಲೆಲ್ಲಿ ಯಾವಾವ ಬೆಳೆಯನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆಂಬ ವಿವರ ಸರಕಾರದ ಬಳಿ ಇರುತ್ತದೆ. ತಂತ್ರಜ್ಞರು ಅಚ್ಚುಕಟ್ಟಾಗಿ ಈ ತಂತ್ರಾಂಶವನ್ನು ರೂಪಿಸಿದ್ದರೂ ಈ ಪ್ರಕ್ರಿಯೆಯಲ್ಲಿ ರೈತರು ತಮ್ಮ ಮೊಬೈಲಿಗೆ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಂಡು ತಂತಮ್ಮ ಹೊಲಗಳಲ್ಲಿ ನಿಂತು ಬೆಳೆಯ ವಿವರ ಗಳನ್ನು ನಮೂದಿಸಿ ಅಪ್ಲೋಡ್ ಮಾಡಲು ವಿಫಲರಾದರು. ಇದಕ್ಕೆ ಕಾರಣ ನಮ್ಮ ರೈತರು ತಂತ್ರಜ್ಞಾನ ಬಳಸುವಷ್ಟುನಿಪುಣರಲ್ಲ ಅಲ್ಲದೆ ಎಲ್ಲರ ಬಳಿಯೂ ಆಂಡ್ರಾಯಿಡ್ ಮೊಬೈಲ್ ಫೋನ್ ಇರುವುದಿಲ್ಲ: ಹಲವರ ಬಳಿ ಯಾವ ಫೋನೂ ಇರುವುದಿಲ್ಲ ಹೀಗಾಗಿ ಇಡೀ ರಾಜ್ಯದಲ್ಲಿ ಈ ಸೌಲಭ್ಯವನ್ನು ಬಳಸಿಕೊಂಡು ಅಪ್ ಲೋಡ್ ಮಾಡಿದ ರೈತರ ಸಂಖ್ಯೆ ಕೇವಲ 3500! ಇದನ್ನರಿತ ಇ-ಗವರ್ನೆನ್ಸ್ ಇಲಾಖೆಯು 2017ರಲ್ಲಿ ಪ್ರತಿ ಹಳ್ಳಿಯಲ್ಲಿ ಸುಶಿಕ್ಷಿತ ಯುವಕರನ್ನು ಗುರುತಿಸಿ, ಅವರಿಗೆ ಒಂದು ಪ್ಲಾಟಿಗೆ 10ರಿಂದ 15 ರೂ. ಸಂಭಾವನೆ ನೀಡಿ ಬೆಳೆ ಸಮೀಕ್ಷೆ ಮಾಡಿಸಿತು. ಇವರನ್ನು ಪ್ರೈವೇಟ್ ರೆಸಿಡೆಂಟ್ಸ್ (ಪಿಆರ್) ಎಂದು ಕರೆಯುತ್ತಾರೆ. ರಾಜ್ಯಾದ್ಯಂತ ಇಂತಹ 25,000 ಯುವಕ ಪಿಆರ್ಗಳನ್ನು ನೇಮಿಸಿಕೊಂಡು ಕಳೆದ ವರ್ಷದ ಮುಂಗಾರಿನಲ್ಲಿ ರೈತರ 210 ಲಕ್ಷ ಪ್ಲಾಟುಗಳ ಸಮೀಕ್ಷೆ ನಡೆಸಲಾಗಿದೆ. 

ಬರಪೀಡಿತ ಪ್ರದೇಶವೆಂದು ಘೋಷಿಸಲು ತಾಲೂಕನ್ನು ಒಂದು ಘಟಕವನ್ನಾಗಿ ಈ ಹಿಂದೆ ಪರಿಗಣಿಸಲಾಗುತ್ತಿತ್ತು. ಅದು ಅವೈಜ್ಞಾನಿಕ, ಆಗಸದಲ್ಲಿ ಸಂಚರಿಸುವ ಮಳೆಯ ಮೋಡಗಳಿಗೆ ತಾಲ್ಲೂಕಿನ ಗಡಿಬಾಂದುಗಳೇನು ಗೊತ್ತು? ಆಡಳಿತದ ಅನುಕೂಲಕ್ಕೆ ತಕ್ಕಂತೆ ಸರಕಾರ ಮಾಡಿಕೊಂಡ ತಾಲೂಕುಗಳನ್ನು ಗಮನದಲ್ಲಿರಿಸಿಕೊಂಡು ಮೋಡಗಳು ಮಳೆ ಸುರಿಸುವುದಿಲ್ಲ, ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ಮಳೆಯಾದರೆ ಮಳೆಯಾಗದ ಹಳ್ಳಿಗಳ ರೈತರಿಗೆ ಪರಿಹಾರ ಸಿಗುವುದಿಲ್ಲ, ಬರಪೀಡಿತ ತಾಲೂಕು ಎಂದು ಘೋಷಣೆಯಾದ ತಾಲೂಕಿನಲ್ಲಿ ಚೆನ್ನಾಗಿ ಮಳೆಯಾದ ಭೂಭಾಗದ ಹಳ್ಳಿಗರಿಗೂ ಬರಪರಿಹಾರ ನೀಡಬೇಕಾಗುತ್ತದೆ. ತಾಲೂಕಿನ ಯಾವುದೋ ಭೂಭಾಗದ ಸ್ಥಿತಿಗತಿಯನ್ನು ಎಲ್ಲ ಹಳ್ಳಿಗಳಿಗೂ ಅನ್ವಯಿಸುವುದು ಸರಿಯಲ್ಲ, ಬರಪೀಡಿತ ಪ್ರದೇಶವೆಂದು ಘೋಷಿಸಲು ವ್ಯಾಪಕ ಪ್ರದೇಶವಾದ ತಾಲೂಕನ್ನು ಘಟಕವನ್ನಾಗಿರಿಸಿಕೊಳ್ಳದೆ ರಾಜ್ಯದ ಪ್ರತಿಯೊಬ್ಬ ರೈತನ ಜಮೀನಿನ ಪ್ಲಾಟಿನಲ್ಲಿರುವ ಬೆಳೆಸಮೀಕ್ಷೆ ನಡೆಸುವ ಈ ತಂತ್ರಾಂಶ ಬಡ ರೈತರಿಗೆ ವರದಾನವಾಗಿದೆ. ಈ ವೈಜ್ಞಾನಿಕ ಬೆಳೆ ಸಮೀಕ್ಷೆಯಿಂದ ಆಗುವ ಮುಖ್ಯ ಪ್ರಯೋಜನಗಳು ಮತ್ತು ನೆರವು ಇಂತಿವೆ: 

-ಸರಕಾರದ ವಿವಿಧ ಯೋಜನೆಗಳನ್ನು ರೈತರಿಗೆ ದೊರಕಿಸಲು. 
-ಬೆಳೆ ಸಾಲ ನೀಡಲು ಬ್ಯಾಂಕಿನವರು ಪರಿಶೀಲಿಸಲು. 
-ಬೆಳೆವಿಮೆಯ ಪ್ರಪೋಸಲ್ ಪರಿಶೀಲನೆ ನಡೆಸಲು. 
-ಕನಿಷ್ಠ ಬೆಂಬಲ ಬೆಲೆ ನೀಡಲು. 
-ಬೆಳೆ ನಷ್ಟವಾದಾಗ ಸಬ್ಸಿಡಿ ನೀಡಲು. 
-ರಾಜ್ಯದ ಕರಾರುವಾಕ್ಕು ಜಿಡಿಪಿ ಅಂದಾಜು ಮಾಡಲು. 
-ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ವಿತರಕರೊಂದಿಗೆ ರೈತರ 
 ಸಂಪರ್ಕ ಕಲ್ಪಿಸಲು, 
-ಬೆಳೆ ಸಲಹೆಗಾರರೊಂದಿಗೆ ರೈತರ ಸಂಪರ್ಕ ಕಲ್ಪಿಸಲು.

ಈ ಸಂಬಂಧವಾಗಿ ಖುದ್ದಾಗಿ ಸಿರಿಗೆರೆಗೆ ಬಂದು ನಮ್ಮೊಂದಿಗೆ ಸಮಾಲೋಚನೆ ನಡೆಸಲು ರಾಜೀವ್ ಚಾವಾರವರು ಬಯಸಿದ್ದರೂ ಕೊರೊನಾ ಲಾಕ್ಡೌನ್ ಕಾರಣದಿಂದ ಆಗಲಿಲ್ಲ, ಕಳೆದ ಇಡೀ ವಾರ ಅವರು ನಮ್ಮೊಂದಿಗೆ ದೂರವಾಣಿಯಲ್ಲಿ ನಡೆಸಿದ ಸಂಭಾಷಣೆ ಮತ್ತು ವೀಡಿಯೋ ಕಾನ್ನರೆನ್ಸ್ ಮುಖಾಂತರ ನೀಡಿದ ವಿವರಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿಸಿದವು. ಅವರು ವಿನೂತನವಾಗಿ ರೂಪಿಸಿರುವ ಬೆಳೆ ಸಮೀಕ್ಷೆಯ ಈ ವೈಜ್ಞಾನಿಕ ತಂತ್ರಾಂಶವು ರೈತರ ಬಾಳಿನ ಜನ್ಮಕುಂಡಲಿಯಂತಿದೆ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.2.7.2020
ಬಿಸಿಲು ಬೆಳದಿಂಗಳು