ಶತಮಾನದಿಂದ ನಡೆದು ಬಂದ ಶಿಕ್ಷಣದ ಹಾದಿ
ಯಾವುದೋ ಒಂದು ಹಳ್ಳಿಯ ಕಾರ್ಯಕ್ರಮ. ಊರ ಹೊರ ವಲಯದಲ್ಲಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಗ್ರಾಮಸ್ಥರು ಬೀದಿಯಲ್ಲಿ ಕರ್ಪೂರ ಹಚ್ಚಿ ತೆಂಗಿನ ಕಾಯಿ ಒಡೆದು ಜಯಘೋಷ ಮಾಡಿ ಪೂರ್ಣಕುಂಭದೊಂದಿಗೆ ಮಂಗಳ ವಾದ್ಯಗಳನ್ನು ಮೊಳಗಿಸುತ್ತಾ ಪಟಾಕಿಗಳನ್ನು ಸಿಡಿಸುತ್ತಾ ಅಮಿತೋತ್ಸಾಹದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನಮ್ಮನ್ನು ಕರೆದೊಯ್ದರು. ಸಾಂಪ್ರದಾಯಿಕವಾಗಿ ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು. ಸ್ವಾಗತ ಭಾಷಣ ಮಾಡಲು ನಿಂತ ಊರ ಮುಖಂಡರೊಬ್ಬರು ಹಾರತುರಾಯಿ ಅರ್ಪಣೆ ಮಾಡಿ ಒಂದು ಮನವಿ ಪತ್ರವನ್ನು ನಮಗೆ ಸಲ್ಲಿಸಿದರು. 'ನಮ್ಮೂರಿನ ಮಕ್ಕಳು ಎರಡು ಕಿಲೋಮೀಟರ್ ದೂರದಲ್ಲಿರುವ ಶಾಲೆಗೆ ಹೋಗುತ್ತಿದ್ದಾರೆ. ಉರಿಬಿಸಿಲಿನಲ್ಲಿ ಬರಿಗಾಲಲ್ಲಿ ನಡೆದು ಕೊಂಡು ಹೋಗುವುದನ್ನು ನನ್ನಿಂದ ನೋಡಲು ಆಗುತ್ತಿಲ್ಲ. ತಾವು ದೊಡ್ಡ ಮನಸ್ಸು ಮಾಡಿ ಮುಖ್ಯಮಂತ್ರಿಗಳಿಗೆ ಹೇಳಿ ನಮ್ಮೂರಿಗೆ ಒಂದು ಖಾಸಗಿ ಅನುದಾನಿತ ಪ್ರೌಢಶಾಲೆಯನ್ನು ಮುಂಜೂರು ಮಾಡಿಸಿಕೊಡಲು ಬಿನ್ನಹ,” ಎಂದು ಎಲ್ಲರೆದುರಿಗೆ ಆಗ್ರಹಪಡಿಸಿ ದರು. ಸಭಿಕರೆಲ್ಲರೂ ಅವರ ಬೇಡಿಕೆಯನ್ನು ಸಮರ್ಥಿಸಿ ಚಪ್ಪಾಳೆ ತಟ್ಟಿದರು. ಆಗ ಮುಖ್ಯಮಂತ್ರಿಗಳಾಗಿದ್ದವರು ನಮ್ಮ ಮಠದ ಆತ್ಮೀಯ ಶಿಷ್ಯರಾಗಿದ್ದ ಎಸ್.ಆರ್. ಬೊಮ್ಮಾಯಿಯವರು. ಈಗಿನ ಗೃಹಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರ ತಂದೆ. ಅವರಿಗೆ ಗುರುಗಳಿಂದ ಹೇಳಿಸಿದರೆ ಸುಲಭವಾಗಿ ಶಾಲೆ ಮುಂಜೂರಾಗುತ್ತದೆ ಎಂಬುದು ಆ ಮುಖಂಡರ ಲೆಕ್ಕಾಚಾರ.
ಹಳ್ಳಿಯಲ್ಲಿ ಒಂದು ಶಾಲೆ ಆರಂಭಿಸಬೇಕೆಂದರೆ ಲಕ್ಷಾಂತರ ರೂ. ಖರ್ಚು ಬರುತ್ತದೆ. ಅಷ್ಟೆಲ್ಲಾನಿರ್ವಹಿಸಲು ನಿಮ್ಮಿಂದ ಆಗುತ್ತದೆಯೇ ಎಂದು ಕೇಳಿದಾಗ ಹತ್ತು ಲಕ್ಷ ರೂ. ಗಳು ಖರ್ಚು ಬಂದರೂ ಸಿದ್ದನಿರುವುದಾಗಿ ಆ ಊರ ಮುಖಂಡ ಹೇಳಿದರು. ಜನರೆಲ್ಲರೂ ಮತ್ತೊಮ್ಮೆ ಮೆಚ್ಚುಗೆಯ ಚಪ್ಪಾಳೆ ತಟ್ಟಿದರು. ಆದರೆ ಅವರ ಮುಖವನ್ನು ದಿಟ್ಟಿಸಿ ನೋಡಿದಾಗ ಏನನ್ನೋ ಮರೆಮಾಚುತ್ತಿರುವಂತೆ ತೋರಿತು. ಹತ್ತಿರ ಕರೆದು ಸರಕಾರದಿಂದ ಖಾಸಗಿ ಶಾಲೆಯನ್ನು ಮುಂಜೂರು ಮಾಡಿಸುವುದು ಬೇಗನೆ ಆಗುವುದಿಲ್ಲ ಬೇರೊಂದು ಸುಲಭವಾದ ಉಪಾಯವಿದೆ: “ನೀವು ಮಠಕ್ಕೆ ಒಂದು ಲಕ್ಷ ರೂ. ದಾನ ಕೊಟ್ಟರೆ ಸಾಕು, ನಿಮ್ಮೂರಲ್ಲಿ ಹುಟ್ಟುವ ಎಲ್ಲ ಮಕ್ಕಳಿಗೂ ನಿಮ್ಮ ಹೆಸರಿನಲ್ಲಿ ಮಠದಲ್ಲಿಯೇ ಉಚಿತವಾಗಿ ಶಿಕ್ಷಣ ನೀಡುವ ವ್ಯವಸ್ಥೆ ಮಾಡುತ್ತೇವೆ, ಎಂದು ಹೇಳಿದಾಗ ಆ ಊರ ಮುಖಂಡ ಕಂಗಾಲಾದ, ಏನನ್ನೋ ಹೇಳಲು ಅವನು ಅಂಜುತ್ತಿರುವಂತೆ ಕಾಣಿಸಿತು. ಏನೆಂದು ಕೇಳಿದಾಗ ಮೆಲುದನಿಯಲ್ಲಿ 'ತಮಗೆ ಗೊತ್ತಿಲ್ಲದ ಸಂಗತಿ ಏನಿದೆ!?” ಎಂದು ಹಲುಬಿದ. ನಿಜಸಂಗತಿ ಏನೆಂದು ಹೇಳಲು ಒತ್ತಾಯಿಸಿದಾಗ ಅವನು ಕೊಟ್ಟ ಉತ್ತರ: ನನ್ನ ಮಗಳನ್ನು ಮದುವೆ ಮಾಡಿಕೊಟ್ಟು ಇಲ್ಲಿಗೆ ಐದು ವರ್ಷಗಳಾದವು. ಮದುವೆ ಸಂದರ್ಭದಲ್ಲಿ ಅಳಿಯನಿಗೆ ನೌಕರಿ ಕೊಡಿಸುವುದಾಗಿ ಮಾತು ಕೊಟ್ಟಿದ್ದೆ. ಈಗ ಎಲ್ಲಿಯೂ ನೌಕರಿ ಸಿಗುತ್ತಿಲ್ಲ, ಹೀಗೊಂದು ಶಾಲೆಯನ್ನು ತಾವು ಮುಂಜೂರು ಮಾಡಿಸಿಕೊಟ್ಟರೆ ನನ್ನ ಅಳಿಯ ಮತ್ತು ಮಗಳು ಇಬ್ಬರಿಗೂ ನೌಕರಿ ಸಿಕ್ಕುತ್ತದೆ. ಅವರ ಬಾಳಿಗೆ ತಾವು ಆಶೀರ್ವಾದ ಮಾಡಿದಂತಾಗುತ್ತದೆ!' ಕೆಲವು ದಶಕಗಳಿಂದ ಈಚೆಗೆ ಶಾಲೆಗಳನ್ನು ತೆರೆಯುವ ಉದ್ದೇಶ ಹೀಗೆ ವ್ಯಾವಹಾರಿಕ ದೃಷ್ಟಿಯಿಂದ ಕೂಡಿದೆ ಎಂಬುದು ಆಶ್ಚರ್ಯದ ಸಂಗತಿಯಾಗಿ ಉಳಿದಿಲ್ಲ.
ನಮ್ಮ ದೇಶದಲ್ಲಿ ಈಗ ಶಿಕ್ಷಣವು ಲಾಭದಾಯಕ ವಾಣಿಜ್ಯೋದ್ಯಮವಾಗಿದೆ. ಈಗಿನ ಕೊರೊನಾ ಬಿಕ್ಕಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ನೀಡುವ ಕುರಿತು ದೇಶವ್ಯಾಪಿ ಚರ್ಚೆ ನಡೆಯುತ್ತಿದೆ. ಆನ್ಲೈನ್ ಶಿಕ್ಷಣ ನಗರ ಪ್ರದೇಶಗಳಲ್ಲಿ ಯಶಸ್ಸು ಕಾಣಬಹುದೇ ಹೊರತು ಗ್ರಾಮೀಣ ಭಾಗಗಳಲ್ಲಿ ಅಲ್ಲ. ಹಳ್ಳಿಗಳಲ್ಲಿ ಹೆಚ್ಚಿನ ಪೋಷಕರು ತಂತ್ರಜ್ಞಾನದ ವಿಷಯದಲ್ಲಿ ಸುಶಿಕ್ಷಿತರಲ್ಲದವರು ಮತ್ತು ಲ್ಯಾಪ್ ಟಾಪ್/ಸ್ಮಾರ್ಟ್ ಫೋನ್ ಸೌಲಭ್ಯವಿಲ್ಲದವರು. ಹಳ್ಳಿಗಳು ತುಂಬಿರುವುದು ಬಹುತೇಕ ಕೃಷಿಕರು, ಕುಶಲಕರ್ಮಿಗಳು, ಸಣ್ಣಪುಟ್ಟ ವ್ಯಾಪಾರ ಮಾಡುವವ ರಿಂದ. ಅವರಿಗೆ ತಂತ್ರಜ್ಞಾನದ ಪರಿಚಯವೂ ಇಲ್ಲ; ಸೌಲಭ್ಯಗಳೂ ಇಲ್ಲ. ಹೀಗಾಗಿ ಆನ್ಲೈನ್ ಬೋಧನೆ ಹಳ್ಳಿಯ ಮಕ್ಕಳಿಗೆ ತಲುಪುವುದು ಸಾಧ್ಯವಿಲ್ಲ.
ಇದಕ್ಕೆ ಭಿನ್ನವಾದ ಪರಿಸ್ಥಿತಿ ಸ್ವಾತಂತ್ರ್ಯಪೂರ್ವ ಮತ್ತು ನಂತರದ ಎರಡು ಮೂರು ದಶಕಗಳ ಕಾಲದಲ್ಲಿತ್ತು. ಹೋಬಳಿ ಮಟ್ಟದಲ್ಲಿ ಹೆಚ್ಚೆಂದರೆ ಮಾಧ್ಯಮಿಕ ಶಾಲೆಗಳು ಇದ್ದ ಕಾಲವದು. ಪ್ರೌಢಶಾಲೆಯನ್ನು ಓದಬೇಕೆಂದರೆ ಜಿಲ್ಲಾಕೇಂದ್ರಗಳಿಗೆ ಹೋಗಬೇಕಾಗಿತ್ತು. ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದು ಗ್ರಾಮಾಂತರ ಪ್ರದೇಶದ ಜನರ ಶೈಕ್ಷಣಿಕ ಮಟ್ಟವನ್ನು ಎತ್ತರಿಸಿದ ಕೀರ್ತಿ ಕರ್ನಾಟಕದ ಮಠಗಳಿಗೆ ಸಲ್ಲುತ್ತದೆ. ನಮ್ಮ ಮಠದ ಹಿಂದಿನ ಗುರುಗಳೂ ಸೇರಿದಂತೆ ಸುತ್ತೂರು, ಸಿದ್ದಗಂಗಾ ಮತ್ತು ಆದಿಚುಂಚನಗಿರಿ ಮಠಗಳ ಹಿರಿಯ ಗುರುಗಳು ಹಳ್ಳಿಗಾಡುಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ ವಿದ್ಯಾಪ್ರಸಾರ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಇವರಾರೂ ಲಾಭದಾಸೆಗೆ ಶಾಲೆ ತೆರೆದವರಲ್ಲ, ಹಳ್ಳಿಗಾಡುಗಳ ಶೈಕ್ಷಣಿಕ ಪ್ರಗತಿ ಅವರ ಗುರಿಯಾಗಿತ್ತು. ನಮ್ಮ ಗುರುಪಿತಾಮಹರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು 1917 ರಲ್ಲಿ ಪಟ್ಟಕ್ಕೆ ಬಂದ ಕೂಡಲೇ ಮಠದ ಒಂದು ಭಾಗದಲ್ಲಿ ಪ್ರಾಥಮಿಕ ಶಾಲೆಯೊಂದನ್ನು ತೆರೆದು ಇಬ್ಬರು ಶಿಕ್ಷಕರನ್ನು ನೇಮಿಸಿಕೊಂಡು ವಿದ್ಯಾದಾನ ಮಾಡಿದರು. ನಂತರ ಸರಕಾರದೊಂದಿಗೆ ವ್ಯವಹರಿಸಿ ಸಿರಿಗೆರೆಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಸರಕಾರವು ತೆರೆಯುವಂತಾಯಿತು. ಇನ್ನೂ ಹಿಂದಕ್ಕೆ ಹೋದರೆ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ವಿದ್ಯೆಯನ್ನು ದಾನ ಮಾಡಬೇಕೇ ಹೊರತು ವಿಕ್ರಯ ಮಾಡಬಾರದೆಂಬ ಉದಾತ್ತ ಧೈಯ ಅವರದಾಗಿತ್ತು. ಶಿಕ್ಷಣ ಈಗಿನಂತೆ ವ್ಯಾಪಾರದ ಸರಕಾಗಿರಲಿಲ್ಲ, ಶಿಕ್ಷಣ ಪಡೆಯುವ ವಟುಗಳು ಗುರುಕುಲದ ಎಲ್ಲಾ ಕೆಲಸಗಳನ್ನು ಮಾಡುವುದು ಶಿಕ್ಷಣದ ಒಂದು ಭಾಗವಾಗಿತ್ತು.
ನಮ್ಮ ಪರಮಾರಾಧ್ಯ ಗುರುವರ್ಯರು ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯಲು ಬಹಳ ಶ್ರಮ ವಹಿಸಿದರು. ಆ ಕಾರಣದಿಂದಾಗಿಯೇ ಮಧ್ಯ ಕರ್ನಾಟಕದಲ್ಲಿ ಬಹು ದೊಡ್ಡ ಶೈಕ್ಷಣಿಕ ಕ್ರಾಂತಿಯೇ ಆಗಿಹೋಯಿತು. ಅವರು ಮೊದಲು ಸಿರಿಗೆರೆಯಲ್ಲಿ ಪ್ರೌಢಶಾಲೆ ಸ್ಥಾಪಿಸುವಾಗ ಪಟ್ಟ ಕಷ್ಟವನ್ನು ತಮ್ಮ ಆತ್ಮಕತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ: “ಗ್ರಾಮಾಂತರ ಕ್ಷೇತ್ರದಲ್ಲಿ ಹೈಸ್ಕೂಲು ಸ್ಥಾಪಿಸುವುದೆಂದರೆ ಕನಸಿಗೂ ನಿಲುಕದ ಮಾತಾಗಿತ್ತು. ಕಸ್ತೂರಿ ರಾಜಶೆಟ್ಟರು ಆಗ ವಿದ್ಯಾ ಇಲಾಖೆಯ ಮುಖ್ಯಸ್ಥರಾಗಿದ್ದರು. ನಮ್ಮ ಅನೇಕ ಮುಖಂಡರಿಂದ ಹೈಸ್ಕೂಲೊಂದನ್ನು ಸಿರಿಗೆರೆಯಲ್ಲಿ ಪ್ರಾರಂಭಿಸಲು ಬಹಳ ಒತ್ತಾಯ ತರುತ್ತಿದ್ದರು. ನಮಗೆ ಹೈಸ್ಕೂಲು ಎಂದರೆ ಬಹಳ ಭಯ. ಕಟ್ಟಡಕ್ಕೆ, ಉಪಾಧ್ಯಾಯರು, ಸಿಬ್ಬಂದಿವರ್ಗಕ್ಕೆ ಸಂಬಳ, ಬೇರೆ ಬೇರೆ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಊಟ, ವಸತಿ, ಉಪಾಧ್ಯಾಯರ ವಸತಿ, ಈ ಮುಂತಾದವಕ್ಕೆಲ್ಲಾ ಲಕ್ಷಾಂತರ ರೂಪಾಯಿ ಬೇಕು. ಮಠದಲ್ಲಿ ಬಿಡಿಗಾಸೂ ಇಲ್ಲ, ಗ್ರಾಮಾಂತರ ಕ್ಷೇತ್ರದಲ್ಲಿ ಬಡವರೇ ಹೆಚ್ಚು ಹೇಗೆ ಹಣ ಸಂಗ್ರಹಿಸುವುದು? ಇದೊಂದು ದೊಡ್ಡ ಯೋಚನೆಯಾಗಿ ಹೈಸ್ಕೂಲು ಸ್ಥಾಪನೆಯ ಬಗೆಗೆ ನಿರ್ಣಯಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಅದರಲ್ಲೂ ವಿದ್ಯಾರ್ಥಿಗಳು ಪೇಟೆ ಪಟ್ಟಣಗಳಲ್ಲಿ ಓದಲು ಹೋಗುತ್ತಾರೆಯೇ ವಿನಾ ಹಳ್ಳಿಗಳಿಗೆ ಬರುವುದು ಕಡಿಮೆ. ಉಪಾಧ್ಯಾಯರ ಸಮ ಸ್ಯೆಯೂ ಹಾಗೆಯೇ ಇದ್ದಿತು. ಡೈರೆಕ್ಟರ್ ಕಸ್ತೂರಿರಾಜಚೆಟ್ಟರು ನಮ್ಮನ್ನು ಹುಡುಕಿಕೊಂಡು ಬಂದರು. ನಾವು ತಪ್ಪಿಸಿಕೊಂಡೇ ಹೋಗುತ್ತಿದೆವು. ಎರಡನೇ ವರ್ಷ ಅನಿವಾರ್ಯವಾಗಿ ಬೀರೂರಿನಲ್ಲಿ ಭೇಟ್ಟಿಯಾಗೇ ಬಿಟ್ಟರು. ಆಗ ಪ್ರಾರಂಭದಿಂದಲೇ ಗ್ರಾಂಟ್ ಕೊಡುತ್ತಿದ್ದರು. ವಿದ್ಯಾರ್ಥಿಗಳ ಊಟಕ್ಕೋಸ್ಕರ ತಿಂಗಳೊಂದಕ್ಕೆ ಒಬ್ಬ ವಿದ್ಯಾರ್ಥಿಗೆ ಮೂರು ರೂಪಾಯಿ ಕೊಡುತ್ತಿದ್ದರು. ಇವೆಲ್ಲವನ್ನೂ ಕೂಡಲೇ ಕೊಡಿಸುವುದಾಗಿ ಭರವಸೆಯಿತ್ತರು. ಉಪಾಧ್ಯಾಯರು ಸಿಗದಿದ್ದಲ್ಲಿ ಭರಮಸಾಗರ ರೇಂಜಿನ ವಿದ್ಯಾ ಇನ್ಸ್ಪೆಕ್ಟರ್ ಪಾಠ ಹೇಳುತ್ತಾರೆಂದು ಹೇಳಿದರು, ಒಪ್ಪಿಕೊಂಡೆವು. ಜಗಲೂರಿನಲ್ಲಿ ಸರಕಾರಿ ಶಾಲೆಯಲ್ಲಿ ಮಖ್ಯೋಪಾಧ್ಯಾಯರಾಗಿದ್ದ ಚೆನ್ನಬಸವಯ್ಯನವರು ಸಿರಿಗೆರೆಗೆ ಬರಲು ಒಪ್ಪಿದರು. ಆದರೆ ತಮ್ಮ ಹೆಸರಿನಲ್ಲಿ 25 ಸಾವಿರ ರೂಪಾಯಿ ಠೇವಣಿ ಇಡಬೇಕೆಂಬ ಕರಾರು ಹಾಕಿದರು. ನಮ್ಮ ಹತ್ತಿರ ಮೂರು ಕಾಸೂ ಇರಲಿಲ್ಲ1946ರಲ್ಲಿ ಶಾಲೆ ಮುಂಜೂರಾಯಿತು. 73 ವಿದ್ಯಾರ್ಥಿಗಳು ಸೇರಿದರು.
ಈಗಿನಂತೆ ಹಿಂದೆ ಹಳ್ಳಿಗಳಲ್ಲಿ ಶಾಲೆಗಳ ಬಾಹುಳ್ಯ ಇರಲಿಲ್ಲ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯಲು ಜಿಲ್ಲಾಕೇಂದ್ರಗಳಿಗೆ ಹೋಗಬೇಕಾಗಿತ್ತು. ಚಿತ್ರದುರ್ಗದಲ್ಲಿ ಒಂದು, ದಾವಣಗೆರೆಯಲ್ಲಿ ಒಂದು ಮತ್ತು ಶಿವಮೊಗ್ಗದಲ್ಲಿ ಒಂದು ಸರಕಾರಿ ಹೈಸ್ಕೂಲು ಮಾತ್ರ ಇದವು. ತಾಲ್ಲೂಕು ಕೇಂದ್ರಗಳಲ್ಲಿ ಮಾಧ್ಯಮಿಕ ಶಾಲೆಗಳು ಮಾತ್ರ. ಆಗ ಹತ್ತು ಸಾವಿರ ಜನಸಂಖ್ಯೆಗೆ ಒಬ್ಬ ವಿದ್ಯಾವಂತ ಮಾತ್ರ ಸಿಗುತ್ತಿದ್ದ. ಹಳ್ಳಿಗಳಲ್ಲಿ ಯಾವ ಕೆಲಸ ಮಾಡಲೂ ವಿದ್ಯಾರ್ಹತೆಯ ಅಗತ್ಯ ಇರಲಿಲ್ಲ ಕೃಷಿಕನ ಮಗ ಕೃಷಿಯಲ್ಲಿ ತಂದೆಯಿಂದ ಪರಿಣತಿ ಪಡೆಯುತ್ತಿದ್ದ. ಕುಶಲ ಕರ್ಮಿಗಳು, ಕಸಬುದಾರರೂ ಅಷ್ಟೆ ತಂತಮ್ಮ ಕುಲ ಕಸುಬುಗಳನ್ನು ಮುಂದಿನ ಪೀಳಿಗೆಗೆ ಸುಲಭವಾಗಿ ಸಹಜವಾಗಿ ವರ್ಗಾಯಿಸುತ್ತಿದ್ದರು. ಆಗ ವೃತ್ತಿ ಶಿಕ್ಷಣ ಕೌಟುಂಬಿಕ ಶಿಕ್ಷಣವೇ ಆಗಿತ್ತು; ಅದಕ್ಕೆ ವಿದ್ಯಾರ್ಹತೆಯ ಅಗತ್ಯವಿರಲಿಲ್ಲ. ಈಗ ಪ್ರತಿಯೊಂದು ಕಸುಬಿಗೂ ವೃತ್ತಿಶಿಕ್ಷಣದ ಸ್ಪರ್ಶ ಬಂದುಬಿಟ್ಟಿದೆ. ಹಳೆಯ ವೃತ್ತಿಗಳೇ ಆಧುನಿಕತೆಯ ಮೆರುಗು ಪಡೆದಿವೆ. ಹಿಂದೆ ಮನುಷ್ಯನ ಬದುಕಿಗೆ ಏನೇನು ಬೇಕೋ ಅದೆಲ್ಲಾ ಹಳ್ಳಿಗಳಲ್ಲೇ ಸಿಗುತ್ತಿತ್ತು. ಅಗಸರು, ಕಮ್ಮಾರರು, ಚಮ್ಮಾರರು, ಬಡಗಿಗಳು, ಕ್ಷೌರಿಕರು ಹೀಗೆ ವಿವಿಧ ಕಸುಬುಗಳ ಜನರು ಕೃಷಿಕರಿಗೆ ಸೇವೆಯನ್ನು ಒದಗಿಸುತ್ತಿದ್ದರು. ಅವರನ್ನು ಆಯಗಾರರು ಎಂದು ಕರೆಯಲಾಗುತ್ತಿತ್ತು. ಆಯಗಾರರು ತಮ್ಮ ಸೇವೆಗೆ ಅಂದಂದೇ ನಗದಾಗಿ ಯಾವ ಪ್ರತಿಫಲವನ್ನೂ ಪಡೆಯುತ್ತಿರಲಿಲ್ಲ. ವರ್ಷವಿಡೀ ಪಡೆದ ಸೇವೆಗಾಗಿ ಸುಗ್ಗಿ ಕಾಲದಲ್ಲಿ ಇಂತಿಷ್ಟು ಎಂಬ ನಿಗದಿಯಾದ ಪ್ರಮಾಣದ ಕಾಳನ್ನು ಕೃಷಿಕರು ಆಯಗಾರರಿಗೆ ನೀಡುತ್ತಿದ್ದರು. ಹೀಗೆ ಆಯ ಪಡೆಯುತ್ತಿದ್ದವರಲ್ಲಿ ಕೂಲಿಮಠದ ಅಯ್ಯನವರು ಸಹ ಇರುತ್ತಿದ್ದರು. ಮಕ್ಕಳನ್ನು ಓದಿಸುವ ಆ ಅಯ್ಯನವರು ಪ್ರತಿಫಲವನ್ನು ವಾರ್ಷಿಕವಾಗಿ ಸುಗ್ಗಿಯಲ್ಲಿ ಪಡೆಯುತ್ತಿದ್ದರು. –
ಹೀಗೆ ಇಡೀ ಹಳ್ಳಿ ಆತನಿರ್ಭರವಾಗಿತ್ತು. ಹೊರಗಿನಿಂದ ಏನನ್ನೂ ತರಿಸದೆ ಹಳ್ಳಿಗೆ ಬೇಕಾದ್ದು ಹಳ್ಳಿಯಲ್ಲೇ ದೊರೆಯುತ್ತಿತ್ತು. ಯಾವುದಾದರೂ ಮನೆಯಲ್ಲಿ ಮದುವೆ ನಡೆದರೆ ಅದು ಕೇವಲ ಆ ಮನೆಯದ್ದಾಗಿರುತ್ತಿರಲಿಲ್ಲ, ಇಡೀ ಊರೇ ಅದರಲ್ಲಿ ಪಾಲುಗೊಳ್ಳುತ್ತಿತ್ತು. ಮನೆಯ ಮುಂದೆ ಚಪ್ಪರ ಹಾಕಿ ತೋರಣ ಕಟ್ಟಲು ಊರ ಜನರು ಮುಂದಾಗುತ್ತಿದ್ದರು. ಅಡುಗೆ ಕೆಲಸದಲ್ಲಿ ಊರಿನ ಮಹಿಳೆಯರು ಕೈಜೋಡಿಸುತ್ತಿದ್ದರು. ಮದುವೆ ಮನೆಯವರು ಯಾರಿಗೂ ಯಾವುದೇ ಸಂಭಾವನೆ ಕೊಡುವ ಅಗತ್ಯವಿರಲಿಲ್ಲ, ಮದುವೆಗೆ ಬರುವ ಬೀಗರು ಬಿಜ್ಜರಿಗೆ ಜನ ತಮ್ಮ ಮನೆಗಳನ್ನು ಬಿಡದಿ ಮನೆಗಳಾಗಿ ಬಿಟ್ಟುಕೊಡುತ್ತಿದ್ದರು. ಈಗ ಕಾಲ ಬದಲಾಗಿದೆ, ಕಲ್ಯಾಣ ಮಂಟಪದ ಸಂಸ್ಕೃತಿ ಕಾಲಿಟ್ಟಿದೆ. ಹಣ ಕೊಟ್ಟರೆ ಸಾಕು ಎಲ್ಲ ಕೆಲಸಗಳೂ ಯಾಂತ್ರಿಕವಾಗಿ ತಂತಾನೆ ನಡೆದು ಹೋಗುತ್ತದೆ. ನೆಂಟರಿಗೆ ಪನ್ನೀರು ಚಿಮುಕಿಸಲೂ ಯಂತ್ರಗಳು ಬಂದು ಬಿಟ್ಟಿವೆ! ಈಗಲೂ ಹಳ್ಳಿಗಳಿವೆ. ಆದರೆ ಹಳ್ಳಿಗಳ ಸಾಂಘಿಕ ಬದುಕು ಜೀವಂತವಾಗಿಲ್ಲ. ಹಳ್ಳಿಗಳು ಹಿಂದೆ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ತುಂಬಿ ತುಳುಕುತ್ತಿದ್ದವು. ದೇವಸ್ಥಾನದಲ್ಲಿ ಹಳ್ಳಿಯ ಜನರು ತನ್ಮಯತೆಯಿಂದ ಭಜನೆ ಮಾಡುತ್ತಿದ್ದರು. ಯುವಕರು ಕೋಲಾಟದಲ್ಲಿ ತೊಡಗುತ್ತಿದ್ದರು. ನಾಟಕದ ಮೇಸ್ಟರನ್ನು ನೇಮಿಸಿಕೊಂಡು ನಾಟಕವನ್ನು ಕಲಿತು ಇಡೀ ರಾತ್ರಿ ಆಡುತ್ತಿದ್ದರು. ಈಗ ನಾಟಕ ಕಲಿಯುವವರೂ ಇಲ್ಲ ಕಲಿಸುವವರೂ ಇಲ್ಲ: ನೋಡುವವರು ಮೊದಲೇ ಇಲ್ಲ! ಕಾಲಮಾನದಲ್ಲಿ ಆದ ಪಲ್ಲಟಗಳಿಂದ ಜನರ ಸ್ವಭಾವದಲ್ಲಿ ಬದಲಾವಣೆಗಳಾಗಿ ಹಳ್ಳಿಗಳ ಸಾಂಘಿಕ ಮತ್ತು ಸಾಂಸ್ಕೃತಿಕ ಬದುಕು ನಾಶವಾಗಿದೆ.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.30.7.2020
ಬಿಸಿಲು ಬೆಳದಿಂಗಳು