ಧರ್ಮಸಮನ್ವಯದ ಪ್ರತೀಕವಾದ Virtual Wedding!
ಕೊರೊನಾ ವೈರಾಣು ಈಗ ಎಲ್ಲರನ್ನೂ ಸಾಮಾಜಿಕವಾಗಿ ಅಸ್ಪಶ್ಯರನ್ನಾಗಿ ಮಾಡಿದೆ. 'ಮಡಿ ಮಡಿ ಮಡಿ ಯೆಂದು ಅಡಿಗಡಿಗೆ ಹಾರುವೆ, ಮಡಿ ಮಾಡುವ ಬಗೆ ಬೇರುಂಟು! ಎಂದು ಪುರಂದರದಾಸರು ಕರ್ಮಠರನ್ನು ಕುರಿತು ವ್ಯಂಗ್ಯವಾಡಿದ್ದಾರೆ. ಆದರೆ ಕೊರೊನಾ ದೆಸೆಯಿಂದ ಮುಟ್ಟಲು ಮುಟ್ಟಿಸಿಕೊಳ್ಳಲು ಬೆದರಿ 'ಅಡಿಗಡಿಗೆ ಹಾರುವ' ಪರಿಸ್ಥಿತಿ ಈಗ ಸಮಾಜದಲ್ಲಿ ಉಂಟಾಗಿರುವುದಂತೂ ನಿಜ! ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಯ ಕಾರಣಕ್ಕಾಗಿ 'ಅಸ್ಪಶ್ಯತೆ'ಯನ್ನು ಪಾಲಿಸುವುದೀಗ ಅನಿವಾರ್ಯವಾಗಿದೆ. ಮುಟ್ಟುವುದು ಮುಟ್ಟಿಸಿಕೊಳ್ಳುವುದಿರಲಿ ಎದುರಿಗಿದ್ದವರ ಉಸಿರೂ ತಾಗದಂತೆ ಮಾಸ್ಕ್ ಧರಿಸಿ ಮೂಗು ಬಾಯಿ ಮುಚ್ಚಿಕೊಳ್ಳುವುದು ಇಂದಿನ ಶಿಷ್ಟಾಚಾರವೇ ಆಗಿದೆ. ಪಂಚೇಂದ್ರಿಯಗಳಲ್ಲಿ ಮೂರು ಇಂದ್ರಿಯಗಳಿಗೆ ಮೂಗು ದಾರ ಬಿದ್ದಿದೆ! ಕೊರೊನಾದ ದುಷ್ಪರಿಣಾಮದಿಂದ ಕರುಳುಬಳ್ಳಿಯ ಆತ್ಮೀಯ ಸಂಬಂಧಗಳೂ ಮೂರಾಬಟ್ಟೆಯಾಗುವ ಅತಿ ಕೆಟ್ಟ ಸಂಕ್ರಮಣ ಕಾಲದಲ್ಲಿ ಇಡೀ ಜಗತ್ತು ಈಗ ತಲ್ಲಣಿಸುತ್ತಿದೆ. ಹಬ್ಬ ಹರಿದಿನಗಳನ್ನು ಆಚರಿಸಿ ಸಂಭ್ರಮಿಸುವಂತಿಲ್ಲ, ಮದುವೆ ಮಂಗಳ ಕಾರ್ಯಗಳಲ್ಲಿ ಬಂಧು ಬಾಂಧವರು ಭಾಗವಹಿಸಿ ಸಂತಸ ಪಡು ವಂತಿಲ್ಲ, ಅಷ್ಟೇ ಏಕೆ ಹಸೆ ಮಣೆಯನ್ನೇರುವ ವಧೂವರರಿಗೆ ಹೆತ್ತ ತಂದೆತಾಯಂದಿರೇ ಖುದ್ದು ಹಾಜರಾಗಿ ಹರಸಲು ಆಗುತ್ತಿಲ್ಲ ಅಂತಹ ಒಂದು ಮನಮಿಡಿಯುವ ಪ್ರಸಂಗ ಕಳೆದ ವಾರ ನಮ್ಮ ಸ್ವಾನುಭವಕ್ಕೆ ಬಂದಿತು.
ಮುಂಬಯಿನಿಂದ ದುಬೈಗೆ ವಲಸೆ ಹೋದ ಉದಯ್, ಭಾರತೀಯ ನೌಕಾ ಸೇನೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು. ನೌಕೆಯ ಮುಖ್ಯ ಎಂಜಿನಿಯರಾಗಿ ಕಾರ್ಯ ನಿರ್ವಹಿಸಿದ ಅವರು ನಿವೃತ್ತಿಯ ನಂತರ ದುಬೈನಲ್ಲಿ ಸ್ವಂತ ಕಂಪನಿಯೊಂದನ್ನು ಸ್ಥಾಪಿಸಿಕೊಂಡು ವಾಣಿಜ್ಯೋದ್ಯಮದ ಹಡಗುಗಳ ಸುರಕ್ಷತೆಯ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದಾರೆ. ಅವರ ಪತ್ನಿ ಅನಿತಾ ನಮ್ಮ ಮಠದ ಶಿಷ್ಯ. ದುಬೈ ಮಾರ್ಗವಾಗಿ ಪರದೇಶಗಳಿಗೆ ಪ್ರಯಾಣಿಸಿದ ಸಂದರ್ಭಗಳಲ್ಲಿ ಕೆಲವೊಮ್ಮೆ ಅವರ ಮನೆಯಲ್ಲಿಯೇ ಕುಳಿತು ನನ್ನ ಈ ಅಂಕಣವನ್ನು ಬರೆದ ನೆನಪು. ಅವರ ಮಕ್ಕಳಾದ ಋದ್ದಿ ಮತ್ತು ರೋಹನ್ ನಮ್ಮ ಪುಟ್ಟ ಗಣಕಯಂತ್ರಕ್ಕೆ ಬೇಕಾದ ಎಲ್ಲ ತಾಂತ್ರಿಕ ನೆರವನ್ನು ನೀಡುತ್ತಿದ್ದರು. ಆ ಋದ್ದಿಯ ಮದುವೆಯೇ ನಮ್ಮ ಈ ಅಂಕಣ ಬರಹದ ವಿಷಯವಾಗುತ್ತದೆಯೆಂದು ಎಣಿಸಿರಲಿಲ್ಲ ಮಗಳಿಗೆ ಅನುರೂಪನಾದ ವರನ ಅನ್ವೇಷಣೆಗಾಗಿ ತಾಯಿ ಅನಿತಾ ಅನೇಕ ಬಾರಿ ಬೆಂಗಳೂರಿಗೆ ಬಂದು ನಿರಾಸೆಗೊಂಡು ಹಿಂದಿರುಗುತ್ತಿದ್ದರು. ಎಲ್ಲ ತಾಯಂದಿರಂತೆ ಪರಿತಪಿಸುತ್ತಿದ್ದ ಅವರಿಗೆ ಕೊನೆಗೆ ಅಳಿಯನಾಗಿ ದೊರೆತ ವರ 'ಕಾಶ್ಮೀರೇ ವಸತೇ ಕನ್ಯಾ ಲಂಕಾಯಾಂ ವಸತೇ ವರಃ' ಎನ್ನುವಂತೆ ದೂರದ ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೋ ನಗರದ ನಿವಾಸಿಯಾದ ಭಾರತೀಯ ಸಾಫ್ಟ್ ವೇರ್ ಎಂಜಿನಿಯರ್ ಆದಿತ್ಯ, ಅವರ ಮದುವೆಯ ದಿನಾಂಕ ನಿಗದಿಗೊಂಡು ಕಳೆದ ಏಪ್ರಿಲ್ ತಿಂಗಳು ಆಹ್ವಾನಪತ್ರಿಕೆಯನ್ನು ಹಂಚುವ ಮೊದಲು ದೇವರ ಮನೆಯಲ್ಲಿ ಇಟ್ಟಿದ್ದರೂ ದೇವರ ಇಚ್ಛೆಯೇ ಬೇರೆಯಾಗಿತ್ತು! ಕೋವಿಡ್ ಕಾರಣಕ್ಕಾಗಿ ಮದುವೆ ಮಂಗಳ ಕಾರ್ಯವನ್ನು ನೆರವೇರಿಸಲು ಆಗಲಿಲ್ಲ. ತಾಯಿಗೆ ಸಂತಸದ ಬದಲು ಮತ್ತೆ ಚಿಂತೆ ಆವರಿಸಿತು. ದುಬೈನಿಂದ ದೂರವಾಣಿಯಲ್ಲಿ ನಮ್ಮನ್ನು ಸಂಪರ್ಕಿಸಿ ತನ್ನ ಅಳಲನ್ನು ತೋಡಿಕೊಂಡಾಗ ನಮಗೆ ನೆನಪಾಗಿದ್ದು ಈ ಮುಂದಿನ ಸಂಸ್ಕೃತ ಸೂಕ್ತಿ:
ಪುಪ್ರೀತಿ ಜಾತಾ ಮಹತೀಹ ಚಿಂತಾ