ಕಾಳಿದಾಸನನ್ನು ನೆನಪಿಗೆ ತಂದ Virtual Wedding!
ಕೋವಿಡ್ ಕಾರಣದಿಂದ ಈಗ ವಿಶ್ವದೆಲ್ಲೆಡೆ ವರ್ಚುಯಲ್ ಮೀಟಿಂಗ್ಗಳು, ಮಿಡಿಯೋ ಕಾನ್ಫರೆನ್ಸ್ಗಳು ಸರ್ವೇಸಾಮಾನ್ಯವಾಗಿವೆ. ಸೆಮಿನಾರುಗಳ ಬದಲಿಗೆ ವೆಬಿನಾರುಗಳು ನಡೆಯುತ್ತಿವೆ. ಸುರಕ್ಷತೆಯ ಕಾರಣಕ್ಕಾಗಿ ಕೋರ್ಟುಗಳೂ ವೀಡಿಯೋ ಮೂಲಕವೇ ವಿಚಾರಣೆ ನಡೆಸುತ್ತಿವೆ. ಈ ಹಿಂದೆ ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ ಸಾಫ್ಟ್ ವೇರ್ ಎಂಜಿನಿಯರುಗಳಿಗೆ ಅನಿವಾರ್ಯ ಸಂದರ್ಭಗಳಲ್ಲಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಕಲ್ಪಿಸಿಕೊಡುತ್ತಿದ್ದ "Work from Home” ಸೌಲಭ್ಯವು ಈಗ ನವನಾಗರಿಕ ಸಮಾಜದ ಹೊಸ ಸಂಸ್ಕೃತಿಯಾಗಿ (New Culture) ರೂಪುಗೊಂಡಿದೆ. ಸಮಕಾಲೀನ ಸಂದರ್ಭದಲ್ಲಿ ದೈನಂದಿನ ಎಲ್ಲ ವ್ಯವಹಾರಗಳನ್ನು ಆನ್ಲೈನ್ ಮೂಲಕವೇ ನಡೆಸುವ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠಪ್ರವಚನ ಮಾಡುವ ಏರ್ಪಾಡು ಮಾಡಿದ್ದರೂ ನೇರವಾಗಿ ತರಗತಿಗಳಲ್ಲಿ ಪಾಠ ಮಾಡಿದಂತೆ ಆಗುತ್ತಿಲ್ಲ. ಇದೇ ರೀತಿ ಕಲ್ಯಾಣ ಮಂಟಪಗಳಲ್ಲಿ ಸಾಲಂಕೃತರಾಗಿ ಕಿಕ್ಕಿರಿದು ಸೇರುತ್ತಿದ್ದ ಬೀಗರು ಬಿಜ್ಜರ ಸಂಭ್ರಮ ಈಗ ಇಲ್ಲ. ಹಸೆಮಣೆಯ ಮೇಲೆ ಕುಳಿತ ನವ ವಧೂವರರು ಕರ್ಣಾನಂದಕರವಾದ ಮಂಗಳವಾದ್ಯಗಳ ನಿನಾದದ ಮಧ್ಯೆ ಪುರೋಹಿತರ ಮಂತ್ರಘೋಷದೊಂದಿಗೆ ಮಾಂಗಲ್ಯಧಾರಣೆ ಮಾಡುವ ಮಾಂತ್ರಿಕತೆ ಇಲ್ಲ, ಅನ್ಯಮಾರ್ಗೋಪಾಯವಿಲ್ಲದೆ ದೇಶ ವಿದೇಶಗಳಲ್ಲಿ ನೆಲೆಸಿರುವ ನಂಟರಿಷ್ಟರು ಇದ್ದ ಸ್ಥಳದಿಂದಲೇ Onlineನಲ್ಲಿ login ಆಗಿ ವಿವಾಹ ವಿಧಿಗಳನ್ನು ವೀಕ್ಷಿಸಿ ನವದಂಪತಿಗಳನ್ನು ಹರಸಿದ ವಿನೂತನವಾದ Virtual Wedding ಕುರಿತು ಕಳೆದ ಬಾರಿ ಬರೆದ ಅಂಕಣವನ್ನು ನೀವು ಓದಿರಬಹುದು.
ವಧುವಿನ ತಂದೆತಾಯಂದಿರಾದ ಉದಯ್ ಮತ್ತು ಅನಿತಾ ಮುಂಬಯಿಂದ ದುಬೈಗೆ ವಲಸೆ ಹೋಗಿ ನೆಲೆಸಿದವರು. ಮದುವೆಯ ವೇಳೆ ಮುಂಬೈನಲ್ಲಿದ್ದ ವರನ ತಂದೆತಾಯಿ ಕೊರೊನಾ ಕಾರಣದಿಂದ ದುಬೈಗೆ ಹೋಗಿ ವಿವಾಹ ವಿಧಿಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ ನೂತನ ದಂಪತಿಗಳನ್ನು ದೂರದಿಂದಲೇ ಮನಸಾರೆ ಆಶೀರ್ವದಿಸಿದರು; ಸೊಸೆಯನ್ನು ಮನೆದುಂಬಿಸಿಕೊಳ್ಳಲು ಸಾಧ್ಯವಾಗದಿದ್ದರೂ ಮನದುಂಬಿಸಿ ಕೊಂಡರು! ಸರಳವಾಗಿ ವಧುವಿನ ಮನೆಯಲ್ಲಿ ನಡೆದ ಈ ಮದುವೆಯ ಸಂದರ್ಭದಲ್ಲಿ ತಂದೆ ಉದಯ್ ಹಸೆಮಣೆಯ ಮೇಲೆ ಕುಳಿತಿದ್ದ ಅಳಿಯ ಆದಿತ್ಯನನ್ನು ಉದ್ದೇಶಿಸಿ ಆಡಿದ ಹೃದಯಾಂತರಾಳದ ಮಾತುಗಳು: “ನನ್ನ ಮಗಳು ಋದ್ದಿ ಸುಂದರ ಯುವತಿ. ನಾನು ನಿನಗೆ ಮಾತು ಕೊಡುತ್ತೇನೆ ಇವಳಲ್ಲಿನ ಮಾನವೀಯತೆ ದೈಹಿಕ ಸೌಂದರ್ಯಕ್ಕಿಂತ ನೂರು ಪಾಲು ಸುಂದರ! ನಮ್ಮ ಮನೆಯ ಈ 'ಮಿಂಚನ್ನು' ನಿನ್ನ ಕೈಯಲ್ಲಿಡುತ್ತಿ ದ್ದೇವೆ. ಇವಳ ಸಂತಸ ಮತ್ತು ಹೊಣೆಗಾರಿಕೆ ನಿನ್ನ ಕೈಯಲ್ಲಿದೆ! ಇವಳು ಅದ್ಭುತವಾದ ಹುಡುಗಿ, ನಿನಗೆ ಅನುಕೂಲೆಯಾದ ಬಾಳ ಗೆಳತಿಯಾಗುತ್ತಾಳೆ. ಇವಳು ತನಗೆ ಅನುರೂಪನಾದ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ, ಅದಕ್ಕೂ ಹೆಚ್ಚಾಗಿ ಆತ್ಮ ಸಂಗಾತಕ್ಕಾಗಿ ನಿನ್ನನ್ನೇ ನಂಬಿದ್ದಾಳೆ! ಇನ್ನು ಮುಂದೆ ಇವಳ ಅಗಲಿಕೆ ಬಹುವಾಗಿ ನಮ್ಮನ್ನು ಕಾಡುವುದು ದಿಟ. ನಮ್ಮ ಮುಂದೆ ತಂಗಾಳಿ ಸುಳಿದಾಗ, ರುಚಿಯಾದದ್ದನ್ನು ಮೆಲ್ಲುವಾಗ, ಪ್ರೀತಿ ಮತ್ತು ಕಾಳಜಿ ನಮಗೆ ಬೇಕೆಂದಾಗ ಇವಳು ನೆನಪಾಗುತ್ತಾಳೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮ ಉಸಿರುಸಿರಲ್ಲೂ ಇವಳಿರುತ್ತಾಳೆ!' ಮಗಳತ್ತ ತಿರುಗಿ ಅವರು ಹೇಳಿದ ಮಾತು: 'ಮಗಳೇ, ನಮ್ಮನ್ನು ಬಿಟ್ಟು ಹೋಗುತ್ತಿದ್ದೇನೆಂದು ಭಾವಿಸಬೇಡ. ನಿನ್ನ ತಪ್ಪುಗಳನ್ನು ತಿದ್ದಲು ನಮ್ಮ ಮಾರ್ಗದರ್ಶನ ನಿನಗೆ ಸದಾ ಇರುತ್ತದೆ.” ವಧುವಿನ ತಂದೆಯ ಹೃದಯಾಂತರಾಳದಿಂದ ಬಂದ ಈ ಮಾತುಗಳು ಜನಪದ ಗೀತೆಯಲ್ಲಿ ಬರುವ ಈ ಮುಂದಿನ ಸಾಲುಗಳನ್ನು ನೆನಪಿಗೆ ತರುತ್ತವೆ:
ಬಂಗಾರ ಬೆಳೆವವರು ತಿಂಗಳ ಹಾದ್ಯವರು,