ಕೊರೊನಾದಿಂದ ನಾವು ಕಲಿಯಬೇಕಾದ ಪಾಠ ಏನು?
ఇంದು ಇಡೀ ಜಗತ್ತು ಒಂದು ಅಗ್ನಿಕುಂಡವಾಗಿ ಪರಿಣ ಮಿಸಿದೆ. ಕೊರೊನಾ ಮಹಾಮಾರಿಯ ಮೃತ್ಯು ಪಾಶದಲ್ಲಿ ಸಿಲುಕಿ ನಲುಗುತ್ತಿದೆ. ಇದಕ್ಕೆ ಸದ್ಯಕ್ಕೆ ಯಾವ ಲಸಿಕೆಯೂ ಇಲ್ಲ, ಸರಿಯಾದ ಔಷಧೋಪಚಾರವೂ ಇಲ್ಲ. ರೋಗ ತಗುಲಿದವರಷ್ಟೇ ಅಲ್ಲ ಇಡೀ ವೈದ್ಯಲೋಕವೇ ದಿಕ್ಕುಗಾಣದೆ ಬಸವಳಿದಿದೆ. ವಿಜ್ಞಾನಿಗಳು ಲಸಿಕೆಯನ್ನು ಕಂಡುಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಎಲ್ಲ ದೇಶಗಳ ಸರಕಾರಗಳು ಏನೂ ಮಾಡಲು ತೋಚದೆ ಅದಕ್ಕಾಗಿ ಕಾದು ಕುಳಿತಿವೆ. ವಿಶ್ವಾದ್ಯಂತ ಹರಡುತ್ತಿರುವ ಈ ಕೊರೊನಾ ವಿಷವೈರಾಣು ಶಿವಪುರಾಣದಲ್ಲಿ ಬರುವ ಸಮುದ್ರಮಥನದ ಕಥಾಪ್ರಸಂಗವನ್ನು ನೆನಪಿಗೆ ತರುತ್ತದೆ. ದೇವತೆಗಳು ಮತ್ತು ರಾಕ್ಷಸರು ಮಂದರಗಿರಿಯನ್ನು ಕಡಗೋಲನ್ನಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ ಮಾಡಿಕೊಂಡು ಸಮುದ್ರಮಥನ ಮಾಡುವಾಗ ಮೊಟ್ಟಮೊದಲು ಹುಟ್ಟಿದ್ದು ಹಾಲಾಹಲ ವಿಷ. ಅದು ಇಡೀ ಜಗತ್ತನ್ನೇ ಆವರಿಸತೊಡಗಿತು ಎಂಬ ಈ ಶಿವಪುರಾಣದ ಕಥೆ ಈಗ ಪೌರಾಣಿಕ ಕಥೆಯಾಗಿ ಉಳಿದಿಲ್ಲ. ವಾಸ್ತವ ಸತ್ಯವಾಗಿ ಪರಿಣಮಿಸಿದೆ. ಕೊರೊನಾ ವೈರಾಣು ಇಂದು ಮಾನವತೆಗೆ ಹಾಲಾಹಲ ವಿಷವಾಗಿ ಪರಿಣಮಿಸಿದೆ. ದೇವತೆಗಳು ಮತ್ತು ದಾನವರು ಓಡಿಹೋಗಿ ಶಿವನ ಮೊರೆ ಹೊಕ್ಕಂತೆ ಈ ವಿಷಜ್ವಾಲೆಯಿಂದ ತಪ್ಪಿಸಿಕೊಳ್ಳಲು ಓಡುವುದಾದರೂ ಎಲ್ಲಿಗೆ? ರಕ್ಷಕನಾದರೂ ಯಾರು? ದೀಪ ಧೂಪ ಹಚ್ಚಿದ್ದಾಯಿತು. ಗಂಟೆ ಜಾಗಟೆ ಬಾರಿಸಿದ್ದಾಯಿತು, ಹೋಮ ಹವನ ಮಾಡಿದ್ದಾಯಿತು. ಆದರೂ ಕೊರೊನಾ ಮಹಾಮಾರಿ ಎಲ್ಲ ದೇಶಗಳ ಸೀಮೋ ಲಂಘನೆ ಮಾಡಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರಿಂದ ಪಾರು ಮಾಡುವವರು ಯಾರು? ನಮ್ಮ ಧಾರ್ಮಿಕ ನಂಬುಗೆಗಳನ್ನೇ ಬುಡಮೇಲು ಮಾಡುವಂತಹ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭವನ್ನು ಕುರಿತೇ ಬಸವಣ್ಣನವರು ಹೇಳಿದ ಮಾತು:
ಒಲೆ ಹೊತ್ತಿ ಉರಿದೊಡೆ ನಿಲಬಹುದಲ್ಲದೆ