ಪ್ರಶಸ್ತಿ, ಪುರಸ್ಕಾರಗಳ ಒಂದು ಪರಾಮರ್ಶೆ

  •  
  •  
  •  
  •  
  •    Views  

ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | 
ಯತ್ ಕೌಂಚಮಿಥುನಾದೇಕಮವೇ ಕಾಮಮೋಹಿತಮ್ ||

ಇದು ಆದಿಕವಿ ವಾಲ್ಮೀಕಿ ಮಹರ್ಷಿಗಳ ಶೋಕತಪ್ತ ಹೃದಯ ದಿಂದ ಆವಿರ್ಭವಿಸಿದ ಸಾತ್ವಿಕ ಕೋಪದ ನುಡಿ. ರಾಮಾಯಣದ ಓದುಗರೆಲ್ಲರಿಗೂ ಸುಪರಿಚಿತವಾದ ಶ್ಲೋಕ. ವಾಲ್ಮೀಕಿ ಮಹರ್ಷಿ ಗಳು ಒಂದು ದಿನ ಬೆಳ್ಳಂಬೆಳಗ್ಗೆ ತಮಸಾ ನದೀ ತೀರದಲ್ಲಿ ತಮ್ಮ ಶಿಷ್ಯರೊಂದಿಗೆ ಸ್ನಾನ ಮಾಡಲು ಹೋಗುತ್ತಿದ್ದ ಸಂದರ್ಭ. ಅರುಣೋದಯದ ಪ್ರಶಾಂತವಾದ ವಾತಾವರಣ. ಜುಳುಜುಳನೆ ಹರಿಯುವ ತಮಸಾ ನದಿಯ ನೀರು, ಹಕ್ಕಿಗಳ ಕಲರವ, ಮೆಲ್ಲಮೆಲ್ಲನೆ ಸುಳಿಯುವ ಮಂದಾನಿಲ, ಇಡೀ ನಿಸರ್ಗವೇ ಧ್ಯಾನಸ್ಥಿತಿಯಲ್ಲಿರುವಂತೆ ತೋರುತ್ತಿತ್ತು. ಆಕಾಶದತ್ತ ದೃಷ್ಟಿ ಹಾಯಿಸಿದಾಗ ಪ್ರೇಮಸಲ್ಲಾಪದಲ್ಲಿ ತೊಡಗಿದ್ದ ಎರಡು ಕ್ರೌಂಚಪಕ್ಷಿಗಳು ಮಹರ್ಷಿಗಳ ಕಣ್ಣಿಗೆ ಗೋಚರಿಸಿದವು. ನೋಡುತ್ತಾ ನಿಂತರು. ಅದೆಲ್ಲಿದ್ದನೋ ಒಬ್ಬ ಬೇಡ ಕ್ರೌಂಚ ಪಕ್ಷಿಗಳಿಗೆ ಗುರಿಯಿಟ್ಟು ಬಾಣಬಿಟ್ಟ! ಅವುಗಳಲ್ಲಿ ಗಂಡು ಕ್ರೌಂಚಕ್ಕೆ ಬಾಣತಾಗಿ ಅದು ದೊಪ್ಪನೆ ನೆಲಕ್ಕೆ ಉರುಳಿಬಿತ್ತು, ಜೀರ್ಕೊಳವೆಯಂತೆ ಮೈಯಿಂದ ನೆತ್ತರು ಚಿಮ್ಮುತ್ತಿತ್ತು. ಆಕಾಶದಲ್ಲಿ ಹೆಣ್ಣು ಕೌಂಚವು ಚೀತ್ಕಾರ ಮಾಡುತ್ತಾ ಚಕ್ರಗತಿಯಲ್ಲಿ ಸುತ್ತತೊಡಗಿತು. ಈ ಹೃದಯ ವಿದ್ರಾವಕ ದೃಶ್ಯವನ್ನು ನೋಡಿದ ವಾಲ್ಮೀಕಿ ಮಹರ್ಷಿಗಳು ಖಿನ್ನರಾದರು. ತಟ್ಟನೆ ಕ್ರೌಂಚ ಪಕ್ಷಿಯ ಸಾವಿಗೆ ಕಾರಣನಾದ ಆ ಬೇಡನಿಗೆ 'ನೀನೂ ಸಹ ಬಹಳ ಕಾಲ ಬದುಕದೆ ಹೀಗೆಯೇ ಸಾಯುವಂತಾಗಲಿ!' ಎಂದು ಮೇಲಿನಂತೆ ಶಪಿಸಿಬಿಟ್ಟರು. ಆಗಸದಲ್ಲಿ ಹಾಯಾಗಿ ಹಾರಾಡಿಕೊಂಡಿದ್ದು ನಿಷಾರಣವಾಗಿ ದಾರುಣ ಸಾವನ್ನಪ್ಪಿದ ಪಕ್ಷಿಯ ಮೇಲಿನ ಅನುಕಂಪೆಯೇ ಬೇಡನ ಮೇಲಿನ ಕೋಪಕ್ಕೆ ಕಾರಣವಾಯಿತು. ಮರುಕ್ಷಣವೇ 'ಕಿಮಿದಂ ವ್ಯಾಹೃತಂ ಮಯಾ?' (ದುಡುಕಿ ಇದೇನು ಮಾಡಿಬಿಟ್ಟೆ?) ಎಂಬ ಪರಿತಾಪವೂ ಮಹರ್ಷಿಗಳಿಗೆ ಉಂಟಾಯಿತು. ಆದರೆ, ಬೇಡನ ಬಾಣದಂತೆ ಅವರ ವಾಗ್ದಾಣವೂ ಹೊರಬಿದ್ದಾಗಿತ್ತು. ಏನೂ ಮಾಡುವಂತಿರಲಿಲ್ಲ, ಅವರ ಹೃದಯಾಂತರಾಳದಿಂದ ಮೂಡಿಬಂದ ಈ ಶಾಪದ ಮಾತು ಕೇವಲ ಆಡುಮಾತಾಗಿರಲಿಲ್ಲ: ಛಂದೋಬದ್ದವಾದ ಪದ್ಯವಾಗಿತ್ತು. 'ಶೋಕಃ ಶ್ಲೋಕತ್ವಮಾಗತಃ!' ಶೋಕವೇ ಶ್ಲೋಕವಾಗಿ ರೂಪಾಂತರಗೊಂಡಿತ್ತು! ಮುಂದೆ ಅದೇ ಛಂದಸ್ಸಿನಲ್ಲಿ 'ರಾಮಾಯಣ' ಮಹಾಕಾವ್ಯದ ರಚನೆಗೆ ನಾಂದಿಯಾಯಿತು. ಸಹಸ್ರಾರು ವರ್ಷಗಳಿಂದ ಮನೆ ಮನೆಗಳಲ್ಲಿ ಶ್ರದ್ದಾಭಕ್ತಿಯಿಂದ ಪಾರಾಯಣ ಮಾಡಿಕೊಂಡು ಬಂದ, ಭಾರತದ ವಿಭಿನ್ನ ಭಾಷೆಗಳಲ್ಲಿ ರೂಪುಗೊಂಡ ಪ್ರಸಿದ್ಧ ಕವಿಗಳ ಕಾವ್ಯರಚನೆಗಳಿಗೆ ಸ್ಫೂರ್ತಿಯ ಸೆಲೆಯಾದ ರಾಮಾಯಣ 'ಆದಿಕಾವ್ಯ' ಎನಿಸಿತು; ವಾಲ್ಮೀಕಿ ಮಹರ್ಷಿ 'ಆದಿಕವಿ' ಎನಿಸಿದರು. – 

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಚಾರಗಳ ಆಧಾರದ ಮೇಲೆ ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ 'ಅಖಿಲ ಭಾರತೀಯ ಸಾಹಿತ್ಯ ಪರಿಷದ್' ಪ್ರತಿವರ್ಷ 'ಆದಿಕವಿ ಪುರಸ್ಕಾರ' ಎಂಬ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. 1966ರಲ್ಲಿ ದೆಹಲಿಯಲ್ಲಿ ಸ್ಥಾಪಿತಗೊಂಡ ಈ ಸಾಹಿತ್ಯಕ ಸಂಘಟನೆಯು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಿಗೆ ಈ ಪ್ರಶಸ್ತಿಯನ್ನು ನೀಡುವುದಲ್ಲದೆ ಉದಯೋನ್ಮುಖರಿಗೆ 'ವಾಗ್ದೇವಿ ಪ್ರಶಸ್ತಿ' ಎಂಬ ಪ್ರಶಸ್ತಿಯನ್ನೂ ಸಹ ನೀಡುತ್ತಿದೆ. ರಾಷ್ಟ್ರೀಯತೆಯನ್ನು ಉಸಿರಾಡುವ, ಭರವಸೆಯ ಬದುಕಿನ ಚಿತ್ರಣದ ಮೂಲಕ ಭಾರತೀಯ ಮೌಲ್ಯಗಳನ್ನು ಪ್ರೇರೇಪಿಸುವಂತಹ ಸಾಹಿತ್ಯ ಸೃಷ್ಟಿಸುವ, ಮೇಲ್ಪಂಕ್ತಿಯ ಬದುಕನ್ನು ಬಾಳುವ ಸಾಹಿತಿಗಳು ಈ ಪ್ರಶಸ್ತಿ ಪುರಸ್ಕಾರಗಳ ಲಕ್ಷ್ಯ. ಈ ಬಾರಿಯ 'ಆದಿಕವಿ ಪುರಸ್ಕಾರ'ಕ್ಕೆ ತಮ್ಮನ್ನು ಆಯ್ಕೆ ಮಾಡಲು ಸಾಧ್ಯವಾದುದು ನಮ್ಮೆಲ್ಲರ ಸೌಭಾಗ್ಯ. ತಮ್ಮಿಂದ ಪುರಸ್ಕಾರದ ಮೌಲ್ಯ ಅಗಣಿತವಾಗಿ ವೃದ್ಧಿಸುತ್ತದೆ ಎನ್ನುವುದು ನಮ್ಮೆಲ್ಲರ ಹೃದಯಾಂತರಾಳದ ಅಭಿಮತವಾಗಿದೆ' ಎಂದು ಆಯ್ಕೆ ಸಮಿತಿಯು ನಮ್ಮ ಒಪ್ಪಿಗೆಯನ್ನು ಕೇಳಿದಾಗ ತಕ್ಷಣವೇ ನಮ್ಮ ಸಮ್ಮತಿಯನ್ನು ನೀಡುವುದು ಕಷ್ಟವಾಯಿತು. ಪ್ರಾತಃ ಸರಣೀಯರಾದ ನಮ್ಮ ಪರಮಾರಾಧ್ಯ ಗುರುವರ್ಯರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ಕೌಟುಂಬಿಕ ಸಂಬಂಧಗಳನ್ನು ತೊರೆದು ಮಠವನ್ನು ಸೇರಿದವರು ಇಂತಹ ಲೌಕಿಕ ಪ್ರಶಸ್ತಿ ಪುರಸ್ಕಾರಗಳಿಗೆ ಮನಸೋಲುವುದು ಸರಿಯೇ? ಎಂಬ ಪ್ರಶ್ನೆ ನಮ್ಮನ್ನು ಬಲವಾಗಿ ಕಾಡಿಸತೊಡಗಿತು. ಅಲ್ಲದೆ ಆಯ್ಕೆ ಸಮಿತಿಯು ಪುರಸ್ಕಾರವನ್ನು ಪ್ರಕಟಿಸುವ ಮೊದಲು ಪುರಸ್ಕೃತರ ಒಪ್ಪಿಗೆಯನ್ನು ಕೇಳುವುದು ಎಷ್ಟರಮಟ್ಟಿಗೆ ಸರಿ? ಎಂಬ ಪ್ರಶ್ನೆಯೂ ನಮ್ಮ ಮನಸ್ಸಿನಲ್ಲಿ ಮೂಡಿತು. ಮೂಲತಃ ಒಂದು ಮಠದ ಸ್ವಾಮಿಗಳಾಗಿ ಸಮಾಜಸೇವೆಗೆ ಸಮರ್ಪಣೆ ಮಾಡಿಕೊಂಡವರಿಗೆ ಯಾವುದೇ ಪುರಸ್ಕಾರದಿಂದ ಆಗಬೇಕಾದುದು ಏನೂ ಇಲ್ಲ, ಪುರಸ್ಕಾರದಿಂದ ಯಾವುದೇ ಪ್ರಮೋಶನ್ ಪಡೆಯಬೇಕಾಗಿಲ್ಲ. ಕೆರಿಯರ್ ರೂಪಿಸಿಕೊಳ್ಳಲು ಇದು ಚಿಮ್ಮುಹಲಗೆಯಾಗುವ ಅಗತ್ಯವೂ ಇಲ್ಲ, ಮಠದ ಸ್ವಾಮಿಗಳಾಗಿರುವುದೇ ಅತಿ ದೊಡ್ಡ ಗೌರವ, ಭಕ್ತರ ಅಭಿಮಾನಕ್ಕಿಂತ ದೊಡ್ಡ ಪುರಸ್ಕಾರ ಬೇರೆ ಇನ್ನೊಂದು ಇರಲು ಹೇಗೆ ಸಾಧ್ಯ! 

ಆದರೂ ಆಯ್ಕೆ ಸಮಿತಿಯು ಹೀಗೆ ಒಪ್ಪಿಗೆಯನ್ನು ಕೇಳುವುದು ಸೌಜನ್ಯವಷ್ಟೇ ಅಲ್ಲ, ಪುರಸ್ಕಾರವನ್ನು ಪ್ರಕಟಿಸಿದ ಮೇಲೆ ಪುರಸ್ಕೃತರು ಒಂದು ಪಕ್ಷ ನಿರಾಕರಿಸಿದರೆ ಸಾರ್ವಜನಿಕ ವಲಯದಲ್ಲಿ ಉಂಟಾಗುವ ಮುಜುಗರ ಮತ್ತು ಗೊಂದಲಗಳ ನಿವಾರಣೆಯೂ ಇದರಲ್ಲಿ ಅಂತರ್ಗತವಾಗಿದೆಯೆಂದು ಅನ್ನಿಸಿತು. ಯಾವುದೇ ಅರ್ಜಿಯನ್ನು ಹಾಕದೆ, ಶಿಫಾರಸು ಮಾಡಿಸದೆ ತಾನಾಗಿಯೇ ಬಂದ ಗೌರವವನ್ನು ಗೌರವಯುತವಾಗಿ ಸ್ವೀಕರಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದು ನಮ್ಮ ಒಪ್ಪಿಗೆಯನ್ನು ಸೂಚಿಸಿದಾಗ ಆಯ್ಕೆ ಸಮಿತಿಯ ಸದಸ್ಯರಿಗೆ ಉಂಟಾದ ಸಂತೋಷ ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಯಾರಿಂದಲೂ ಅರ್ಜಿಯನ್ನು ಆಹ್ವಾನಿಸದೆ ಆಯ್ಕೆ ಸಮಿತಿಯು ತಾನಾಗಿಯೇ ಪ್ರಶಸ್ತಿ ಪ್ರದಾನದ ಮೂಲ ಉದ್ದೇಶವನ್ನು ಗಮನದಲ್ಲಿರಿಸಿಕೊಂಡು ಆಯ್ಕೆ ಮಾಡುವ ವಿಧಾನವನ್ನು ಅನುಸರಿಸುತ್ತಿರುವುದು ಪ್ರಶಂಸನೀಯವಷ್ಟೇ ಅಲ್ಲ ಸಾರ್ವಜನಿಕ ಜೀವನದಲ್ಲಿ ಒಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಂತಾಗಿದೆ. ಜಗತ್ತಿನೆಲ್ಲೆಡೆ ಹರಡುತ್ತಿರುವ ಕೊರೊನಾ ವೈರಾಣು ಜನರ ಬದುಕನ್ನು ಹೈರಾಣಾಗಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನಮ್ಮ ಮಠದ ಎಲ್ಲ ಪ್ರಮುಖ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಶಿಷ್ಯರು ಸಂಪ್ರದಾಯ ಶರಣರಾಗದೆ ಆರೋಗ್ಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲಾಗುತ್ತಿದೆ. ಆದಕಾರಣ ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಏರ್ಪಡಿಸಿ ಅದರಲ್ಲಿ ಭಾಗವಹಿಸುವಂತೆ ನಮ್ಮನ್ನು ಒತ್ತಾಯಪಡಿಸಬಾರದೆಂಬ ನಮ್ಮ ಅಗ್ರಹಕ್ಕೆ ಸಮಿತಿಯು ಒಪ್ಪಿಗೆ ನೀಡಿದ್ದು ನಮಗೆ ಸಮಾಧಾನವನ್ನುಂಟುಮಾಡಿತು. 

ಪ್ರಶಸ್ತಿಗಳ ಯುಗವಿದು. ಅದರಲ್ಲೂ ನವೆಂಬರ್ ತಿಂಗಳು ಬಂತೆಂದರೆ ರಾಜ್ಯೋತ್ಸವಕ್ಕೆ ಹಾತೊರೆಯುವುದಕ್ಕಿಂತ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಹಾತೊರೆಯುವುದೇ ಜಾಸ್ತಿ. ಏನಕೇನ ಪ್ರಕಾರೇಣ ಪ್ರಶಸ್ತಿಯನ್ನು ಪಡೆದುಕೊಂಡು ಬಿಟ್ಟರೆ ಜನ್ಮ ಸಾರ್ಥಕ ಎಂದು ಭಾವಿಸಿ ಅದಕ್ಕಾಗಿ 'ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ' ಎಂಬಂತೆ ಹಂಬಲಿಸುವ ಜನರಿದ್ದಾರೆ. ಪ್ರಶಸ್ತಿಗಳಿಗಾಗಿ ಅರ್ಜಿ ಗುಜರಾಯಿಸಿ ಜಾತಿಗಳ ಆಧಾರದ ಮೇಲೆ ರಾಜಕೀಯ 'ಗಾಡ್ ಫಾದರ್'ಗಳ ಬೆನ್ನುಹತ್ತುವವರಿದ್ದಾರೆ. ಇವೆಲ್ಲಾ ಪ್ರಶಸ್ತಿಗಳಿಗೆ ಮಾಡುವ ಅವಮಾನ! ಸೇವೆಯಲ್ಲಿ ತೊಡಗಿದವರಿಗೆ ಪ್ರಶಸ್ತಿ ಪುರಸ್ಕಾರಗಳು ನೆರಳಿದ್ದಂತೆ. ಮುಂದೆ ಮುಂದೆ ನಡೆದಂತೆ ನೆರಳು ಹಿಂಬಾಲಿಸಿ ಬರುತ್ತದೆ. ಅದನ್ನು ಬಿಟ್ಟು ನೆರಳನ್ನೇ ಹಿಂತಿರುಗಿ ನೋಡುತ್ತಾ ನಡೆಯುವುದು ಸಲ್ಲದು, ಹಾಗೆ ನಡೆಯಲೂ ಬಾರದು! ಮುಂದೆ ನೋಡಿ ನಡೆಯುವವನು ಗುರಿ ತಲುಪುತ್ತಾನೆ. ಬೆನ್ನ ಹಿಂದಿನ ನೆರಳನ್ನು ನೋಡುತ್ತಾ ನಡೆಯುವವನು ಖಂಡಿತಾ ಪ್ರಪಾತಕ್ಕೆ ಬೀಳುತ್ತಾನೆ. ಪ್ರಶಸ್ತಿಗೆ ಆಯ್ಕೆಯಾದವರನ್ನು 'ಪ್ರಶಸ್ತಿ ವಿಜೇತರು' ಎಂದು ಅಭಿಮಾನಿಗಳು ಕರೆಯುವುದು ರೂಢಿ. ಇದು ಖಂಡಿತಾ ಸರಿಯಲ್ಲ, ಕ್ರೀಡೆಗಳಲ್ಲಿ ಚುನಾವಣೆಗಳಲ್ಲಿ ಅನೇಕ ಸ್ಪರ್ಧಾಳುಗಳು ಇರುತ್ತಾರೆ. ಅವರಲ್ಲಿ ಗೆದ್ದವರನ್ನು 'ವಿಜೇತರು' ಎಂದು ಕರೆಯುವುದು ವಿಹಿತ. ಆದರೆ ಪ್ರಶಸ್ತಿಗಾಗಿ ಸ್ಪರ್ಧೆ ಇರಬಾರದು, ಅರ್ಜಿಗಳನ್ನೂ ಸಲ್ಲಿಸಬಾರದು. ಪ್ರಶಸ್ತಿಗೆ ಪಾತ್ರರಾದವರನ್ನು ವಿಜೇತರು ಎನ್ನುವುದಕ್ಕಿಂತ ಪ್ರಶಸ್ತಿ ಪುರಸ್ಕೃತರು/ಭಾಜನರು ಎಂದು ಕರೆಯುವುದೇ ಹೆಚ್ಚು ಸೂಕ್ತ. 

ಆತ್ಮೀಯರು ತಮ್ಮ ಮಗನ ಮಗಳ ಮದುವೆಗೋ, ಹೊಸದಾಗಿ ಕಟ್ಟಿಸಿದ ಮನೆಯ ಗೃಹಪ್ರವೇಶಕ್ಕೂ ನಿಮ್ಮನ್ನು ಕರೆದಾಗ ನೀವು ಕೊಡುವ ಉಡುಗೊರೆಗಳನ್ನು ಬಿಚ್ಚಿ ನೋಡುವುದಿಲ್ಲ, ಬದಲಾಗಿ ಸಂತೋಷದಿಂದ ಸ್ವೀಕರಿಸಿ ವಂದನೆಗಳನ್ನು ಹೇಳುತ್ತಾರೆ. ಉಡುಗೊರೆ ಕೊಟ್ಟವರಿಗೂ ಸಂತೋಷ; ಪಡೆದವರಿಗೂ ಸಾರ್ಥಕ ಭಾವ, ಪುರಸ್ಕಾರಕ್ಕೆ ನಮ್ಮ ಒಪ್ಪಿಗೆಯನ್ನು ನೀಡಿರುವುದೂ ಸಹ ಇದೇ ಭಾವದಿಂದ ಕಳೆದ 12 ವರ್ಷಗಳಿಂದ ಎಡೆಬಿಡದೆ ಬರೆಯುತ್ತಾ ಬಂದಿರುವ ನಮ್ಮ ಈ 'ಬಿಸಿಲು ಬೆಳದಿಂಗಳು' ಅಂಕಣ ಬರಹಕ್ಕೆ ಸ್ಫೂರ್ತಿ ಎಂದರೆ ಓದುಗರು, ಮಠ, ಸಮಾಜ ಮತ್ತು ನೂರಾರು ಶಾಲಾಕಾಲೇಜುಗಳ ಆಡಳಿತ ನಿರ್ವಹಣೆಯಲ್ಲಿ ಸಿಲುಕಿಕೊಂಡಿರುವ ನಮಗೆ ಸಮಯಾಭಾವದಿಂದ ಇನ್ನು ಮುಂದೆ ಬರೆಯಲು ಆಗುವುದಿಲ್ಲವೆಂದು ಸಂಪಾದಕರಿಗೆ ತಿಳಿಸಿಬಿಡೋಣ ಎಂದು ಅನ್ನಿಸಿದ ದಿನವೇ 'ಬರೆಯುವುದನ್ನು ನಿಲ್ಲಿಸಿದರೆ ಮಠದ ಬಾಗಿಲಲ್ಲಿ ಮುಷ್ಕರ ಮಾಡುತ್ತೇವೆ! ಎಂಬ 'ಭಯೋತ್ಪಾದನೆ'ಯ ಮಿಂಚೋಲೆಗಳು ಬಂದಿರುತ್ತವೆ. ಹೀಗಾಗಿ ನಾವು ಬರೆಯುತ್ತೇವೆ ಎನ್ನುವು ದಕ್ಕಿಂತ ಓದುಗರು ನಮ್ಮಿಂದ ಬರೆಸುತ್ತಿದ್ದಾರೆ ಎನ್ನುವುದೇ ಹೆಚ್ಚು ಸಮಂಜಸ, ವಿಸ್ತಾರವಾದ ಓದುಗರ ಜಾಲದಿಂದ ನಮ್ಮ ಚಿಂತನೆಗಳು ಹರಿತಗೊಳ್ಳಲು ಮತ್ತು ಸಾರ್ವಜನಿಕರಿಗೆ ತಲುಪಲು ಸಾಧ್ಯವಾಗಿದೆ. ಆದ್ದರಿಂದ ನಮಗೆ ಸಂದಿರುವ 'ಆದಿಕವಿ ಪುರಸ್ಕಾರ'ದ ನಿಜವಾದ ವಾರಸುದಾರರೆಂದರೆ ನಮ್ಮ ಈ ಅಂಕಣದ ಸಹೃದಯ ಓದುಗರು! ಈ ಪ್ರಶಸ್ತಿ ಪ್ರಕಟಗೊಂಡ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಶಿಷ್ಯರು ಮತ್ತು ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಲೌಕಿಕ ಜನರು ಪ್ರಶಸ್ತಿಗಳ ಚಂದ್ರನನ್ನು ಅರಸಿಕೊಂಡು ಹೋದಂತೆ ಮಠದ ಸ್ವಾಮಿಗಳಾದವರಿಗೆ ಪ್ರಶಸ್ತಿಗಳ ಮೋಹ ಅಥವಾ ಗೀಳು ಇರಬಾರದು. ಮನದಲ್ಲಿ ಅದುರಿಂದ ಅತೀತರಾಗಿರಬೇಕು. ಬಹಳ ವರ್ಷಗಳ ಹಿಂದೆ ಬರೆದ ನಮ್ಮ ಈ ಮುಂದಿನ ಕವಿತೆ ಇಲ್ಲಿ ಚಿಂತನಾರ್ಹ: 

ರನ್ನಗನ್ನಡಿ 
ಬಾನಿನೊಳ್ ವಿಹರಿಸುವ ಹುಣ್ಣಿಮೆಯ ಚಂದಿರನು 

ವಿರಹಿಗಳ ಹೃದಯವನು ಉರಿಸುತಿಹನು 
ಪ್ರಾಣ ವಲ್ಲಭೆಯೊಡನೆ ಇರುಳ ಕಳೆಯುವ ಪತಿಗೆ 
ಮಧುರ ಮಿಲನದ ಚಣದ ತಂಪನೀಯುವನು 
ಸತ್ಯ-ಶಿವ-ಸೌಂದರ್ಯವನಾಸ್ವಾದಿಸುವ ಯೋಗಿಗಂ 
ರಾಗ-ತಾಪಗಳಿಲ್ಲ ರೋಷ ಹರುಷಗಳಿಲ್ಲ 
ಶೀತೋಷಭಾವಗಳ ಭೇದವಿಲ್ಲ 
ಭೂತಾಯಿ ಬಾನಿನೊಳ್ ಪಿಡಿದೆತ್ತಿ ತೋರುತಿಹ 
ವ್ಯೋಮ ಮೂರುತಿ ಶಿವನ ಚಿತ್ಕಳೆಯ ಬಿಂಬಿಸುವ ರನ್ನಗನ್ನಡಿಯಂತೆ ರಾಜಿಸಿಹನು!!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.5.11.2020
ಬಿಸಿಲು ಬೆಳದಿಂಗಳು