ಹೃದಯದ ಸೆಳೆತ ಬೇರೆ, ಬುದ್ದಿಯ ತರ್ಕ ಬೇರೆ!

  •  
  •  
  •  
  •  
  •    Views  

ಜೀವನದಲ್ಲಿ ಬಂದೊದಗುವ ತೊಂದರೆಗಳಿಗೆಲ್ಲಾ ವಿಧಿಯೇ ಕಾರಣವೆಂದು ಹಲುಬುವುದು ತಪ್ಪು.  ಪ್ರಜ್ಞಾಪೂರ್ವಕವಾಗಿ ತಪ್ಪು ಮಾಡಿದ್ದರೆ ಅದಕ್ಕೆ ತಪ್ಪು ಮಾಡಿದವರೇ ಹೊಣೆಗಾರರು. ಅದರ ಫಲವನ್ನು ಅವರು ಉಪ್ಪಲೇಬೇಕು. ಆದರೆ ತಪ್ಪು ಮಾಡಿದವರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ತಮ್ಮ ತಪ್ಪುಗಳನ್ನು ಬೇರೆಯವರ ಮೇಲೆ ಹೊರಿಸುತ್ತಾರೆ. ಇದು ಮಾನವ ಸಹಜ ಸ್ವಭಾವ. ಇದೇ ರೀತಿ ಮಾಡಿದ ತಪ್ಪುಗಳೇನು ಎಂದು ಆತ್ಮನಿರೀಕ್ಷಣೆ ಮಾಡಿಕೊಳ್ಳದೆ ವಿಧಿಯನ್ನು ದೂಷಣೆ ಮಾಡುವುದು ರೂಢಿಗತವಾಗಿ ಬಂದಿದೆ. ನಿಮ್ಮ ಬುದ್ಧಿ ಹಾಗೂ ತರ್ಕಕ್ಕೆ ನಿಲುಕದ ಘಟನೆ ಏನಾದರೂ ಇದ್ದರೆ ಅದನ್ನು ಮಾತ್ರವೇ ನಿಧಿ ಎನ್ನಬಹುದು ಎಂದು ಕಳೆದ ತಿಂಗಳು ಬರೆದ ನಮ್ಮ 'ಬಿಸಿಲು ಬೆಳದಿಂಗಳು' ಅಂಕಣವನ್ನು ಓದಿದ ಮಹಿಳೆಯೊಬ್ಬರು ನಮಗೊಂದು ಮಿಂಚೋಲೆ ಬರೆದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ: ಅವರು ಎರಡು ಮಕ್ಕಳ ತಾಯಿ, ಮಗ ದೊಡ್ಡವರು, ಇಂಜಿನಿಯರ್, ಕೆಲಸ ಮಾಡುತ್ತಿದ್ದಾನೆ; ಮಗಳು ಓದುತ್ತಿದ್ದಾಳೆ. ಸ್ವಂತದ ಮನೆಯಿದೆ. ಯಜಮಾನರು ತೀರಿಕೊಂಡು ಎರಡು ವರ್ಷಗಳಾದವು. ಸ್ವತಃ ಪದವೀಧರೆಯಾಗಿದ್ದು ಜೀವನ ನಡೆಸಲು, ಹೊಟ್ಟೆ ಬಟ್ಟೆಗೆ ಏನೂ ತೊಂದರೆಯಿಲ್ಲ, ಆದರೆ ಯಜಮಾನರು ಇಲ್ಲ ಎನ್ನುವ ಕೊರಗು ಮನದೊಳಗೆ ಕೊರೆಯುತ್ತಲೇ ಇದೆ. ಕೈಲಾದಷ್ಟು ಜನರಿಗೆ ಒಳಿತು ಮಾಡಿದ್ದು ಯಾರಿಗೂ ಕೇಡು ಬಯಸಿದವರಲ್ಲ, ಅಪ್ಪ, ಅಮ್ಮ ಎಷ್ಟೋ ಒಳ್ಳೆಯ ಕೆಲಸ, ದಾನ ಧರ್ಮ ಮಾಡಿರುವರು. ಹೀಗಿದ್ದರೂ ನನಗೆ ಏಕೆ ಹೀಗಾಯಿತು? ಎಂಬುದು ಅವರ ಪ್ರಶ್ನೆ, ಇದು ನನ್ನ ಪೂರ್ವಜನ್ಮದ ಕರ್ಮಫಲ ಎಂದುಕೊಂಡು ಜೀವಿಸುತ್ತಿದ್ದೇನೆ. ಆದರೆ ಮೊದಲಿನ ಉತ್ಸಾಹ, ಆಸಕ್ತಿ ಇಲ್ಲ. ದಯವಿಟ್ಟು ನನಗೆ ಏನಾದರೂ ಉಪದೇಶ ಮಾಡಿ ಜೀವನ ನಡೆಸಲು ಶಕ್ತಿ ಬರುವಂತೆ ತಿಳಿಸಿಕೊಡಿ, ಎಂದು ನಿವೇದಿಸಿಕೊಂಡಿದ್ದಾರೆ. 

ಬದುಕಿನಲ್ಲಿ, ಹೃದಯ ಮತ್ತು ಬುದ್ದಿಯ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ನೊಂದವರಿಗೆ ನೋಯದವರು ಸಹಾನುಭೂತಿಯನ್ನು ಮಾತ್ರ ವ್ಯಕ್ತಪಡಿಸಬಹುದೇ ಹೊರತು ಸಾಂತ್ವನ ಹೇಳುವುದು ತುಂಬಾ ಕಷ್ಟ ಹೃದಯದ ಸೆಳೆತದ ಮುಂದೆ ಬುದ್ಧಿಯ ತರ್ಕ ಸೋಲುತ್ತದೆ. ಎರಡೂ ವಿಭಿನ್ನ ನೆಲೆಗಳಲ್ಲಿ ನಡೆಯುವ ಕ್ರಿಯೆಗಳು, ಹೃದಯದ ಆರ್ದ ಭಾವನೆಗಳನ್ನು ಬುದ್ಧಿಯ ಶುಷ್ಕ ತರ್ಕದಿಂದ ಉಪಶಮನಗೊಳಿಸಲು ಬರುವುದಿಲ್ಲ. ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ ನೋವು ಉಂಡವರಿಗೆ ಮಾತ್ರ ಅದರ ದಾರುಣತೆ ತಿಳಿಯಬಲ್ಲುದೇ ಹೊರತು ಅದರ ಅನುಭವ ಇಲ್ಲದವರಿಗೆ ನೊಂದವರ ನೋವಿನ ತೀವ್ರತೆ ವೇದ್ಯವಾಗುವುದಿಲ್ಲ. ಗಾಯದ ನೋವು ಗಾಯಗೊಂಡವರಿಗೆ ಆದಂತೆ ನೋಡುವವರಿಗೆ ಆಗುವುದಿಲ್ಲ, ಅಕ್ಕಮಹಾದೇವಿಯ ಈ ವಚನವನ್ನು ಗಮನಿಸಿ: ಬಂಜೆ ತಾಯಿಯ ಬೇನೆಯನರಿವಳೆ? ಮಲತಾಯಿ ಮುದ್ದ ಬಲ್ಲಳೆ? ನೊಂದವರ ನೋವ ನೋಯದವರು ಬಲ್ಲರು? ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೆ ಎಲೆ ತಾಯಿಗಳಿರಾ? 

ಬಂಜೆಗೆ ಹೆರಿಗೆಯ ನೋವು ತಿಳಿಯಲು ಹೇಗೆ ಸಾಧ್ಯ? ಏಕೆಂದರೆ ಅವಳು ಎಂದೂ ಮಕ್ಕಳನ್ನು ಹೆತ್ತವಳಲ್ಲ. ಹೆರುವುದೂ ಇಲ್ಲ. ಹೆರಿಗೆಯ ನೋವೇನೆಂಬುದು ಅವಳ ಅನುಭವಕ್ಕೆ ಬರುವುದಿಲ್ಲ, ಮಲತಾಯಿಗೂ ಮಾತೃವಾತ್ಸಲ್ಯದ ಅನುಭವ ಆಗುವುದಿಲ್ಲ. ಒಂಬತ್ತು ತಿಂಗಳು ಹೊತ್ತು ನೋವನ್ನು ಕತ್ತರಿಸಿ ಮತ್ತ ತಾಯಿಗೆ ಮಗುವಿನ ಜೊತೆ ಕರುಳು ಬಳ್ಳಿಯ ಸಂಬಂಧ ಗಾಢವಾಗಿರುತ್ತದೆ. ನೊಂದವರ ನೋವು ನೋಯದವರಿಗೆ ಅರ್ಥವಾಗುವುದಿಲ್ಲ. ಹಾಗೆಯೇ ಆಧ್ಯಾತ್ಮಿಕ ಸಾಧನೆಯ ಪಥದಲ್ಲಿ ದೃಢವಾದ ಹೆಜ್ಜೆಗಳನ್ನಿಟ್ಟು ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ, ಚೆಲುವ 'ಚೆನ್ನಮಲ್ಲಿಕಾರ್ಜುನನಿಗಾಗಿ ಹಂಬಲಿಸಿದವಳು ವೈರಾಗ್ಯನಿಧಿ ಅಕ್ಕಮಹಾದೇವಿ. ಬಾಲ್ಯದಿಂದಲೂ ಅವಳ ಹೃದಯದಲ್ಲಿ 'ಶರಣ ಸತಿ, ಲಿಂಗ ಪತಿ' ಭಾವ ನೆಲೆಗೊಂಡಿತ್ತು. ಆದ ಕಾರಣ ಆ ದೇವರೇ ತನ್ನ ಒಡಲಲ್ಲಿ ಕತ್ತಿಯನ್ನು ಇರಿದು ಹೊರಳಿಸಿದಂತಹ ನೋವು, ವೇದನೆ ತನಗೆ ಉಂಟಾಗುತ್ತಿದೆ; ಅದು ಬೇರೆಯವರಿಗೆ ಹೇಗೆ ಅರ್ಥವಾಗಲು ಸಾಧ್ಯ ಎಂದು ಪರಿತಪಿಸಿದ್ದಾಳೆ. ಅನುಭಾವಿಗಳಿಗೆ ಮಾತ್ರ ಅದು ತಿಳಿದೀತೇ ಹೊರತು ಸಾಮಾನ್ಯ ಜನರಿಗೆ ವೇದ್ಯವಾಗುವುದಿಲ್ಲ, ಹಾಗೆಯೇ ಲೌಕಿಕ ಜೀವನದಲ್ಲಿ ನೋವನ್ನು ಅನುಭವಿಸಿದವರಿಗೆ ಮಾತ್ರ ನೋವಿನ ತೀವ್ರತೆ ತಿಳಿದೀತೇ ಹೊರತು ಕೇವಲ ನೋವುಂಡವರನ್ನು ನೋಡಿದವರಿಗೆ ಗ್ರಾಹ್ಯವಾಗುವುದಿಲ್ಲ. 

ಈ ಸಂದರ್ಭದಲ್ಲಿ ಬೌದ್ಧ ಧರ್ಮದ ಪ್ರಸಿದ್ದವಾದ ಕಿಸಾಗೌತಮಿಯ ಪ್ರಸಂಗ ನೆನಪಿಗೆ ಬರುತ್ತಿದೆ. ಸಾವಿಗೀಡಾದ ತನ್ನ ಮಗುವನ್ನು ಬದುಕಿಸಿಕೊಡೆಂದು ಬುದ್ಧನಿಗೆ ದುಂಬಾಲು ಬಿದ್ದ ಸಾವಂತಿ ನಗರದ ಕಿಸಾಗೌತಮಿಗೆ ಬುದ್ದ ಉಪದೇಶ ಮಾಡಲು ಮುಂದಾಗುವುದಿಲ್ಲ ಸಾವಿಲ್ಲದ ಮನೆಯಿಂದ ಸಾಸುವೆಯನ್ನು ತಂದರೆ ಬದುಕಿಸಿಕೊಡುವುದಾಗಿ ಭರವಸೆ ಕೊಡುತ್ತಾನೆ. ತನ್ನ ಮಗನನ್ನು ಹೇಗಾದರೂ ಬದುಕಿಸಿಕೊಳ್ಳಬೇಕೆಂಬ ತವಕದಲ್ಲಿದ್ದ ಗೌತಮಿಯು ಮನೆ ಮನೆಗೆ ಓಡುತ್ತಾಳೆ. ಆದರೆ ಆಕೆಗೆ ಎಲ್ಲಿಯೂ ಸಾವಿಲ್ಲದ ಮನೆಯ ಸಾಸುವೆಯ ಕಾಳು ಸಿಗುವುದಿಲ್ಲ, ಎಲ್ಲರ ಮನೆಗಳಲ್ಲೂ ಒಬ್ಬರಲ್ಲ ಒಬ್ಬರುಸಾವಿಗೆ ಈಡಾಗಿಯೇ ಇರುತ್ತಾರೆ. ಸಾವು ಯಾರನ್ನೂ ಬಿಡುವುದಿಲ್ಲ. ತನ್ನ ಮಗನ ಸಾವೂ ಸಹ ತಪ್ಪಿಸಲು ಬರುವಂತಹುದಲ್ಲ ಎಂದು ಆಕೆಗೆ ಮನವರಿಕೆ ಆಗುತ್ತದೆ. ಆದರೆ ನಿಜವಾದ ಸಂಕಟದಲ್ಲಿ ತನ್ನ ಅಳಲನ್ನು ನಿವೇದಿಸಿಕೊಂಡು ನಮಗೆ ಮಿಂಚೋಲೆ ಬರೆದ ಈ ನೊಂದ ತಾಯಿಗೆ ಬುದ್ದಿ ಹೇಳಿದಂತೆ ಹೇಳಲು ಖಂಡಿತಾ ಬಾರದು! ಜೀವನದ ಕಟು ಸತ್ಯವನ್ನು ಮನಗಂಡು ಮನಸ್ಸನ್ನು ಗಟ್ಟಿಗೊಳಿಸಿಕೊಂಡು ಮಕ್ಕಳ ಭವಿತವ್ಯವನ್ನು ರೂಪಿಸುವಲ್ಲಿ ಸುಖವನ್ನು ಕಾಣಬೇಕು. ಗಂಡ ಬಿಟ್ಟು ಹೋದ ಜವಾಬುದಾರಿಯನ್ನು ಅವರು ನಿರ್ವಹಿಸಲೇಬೇಕು! ಬದುಕಿನಲ್ಲಿ ಸಂಕಷ್ಟ ಎದುರಾಗಿರುವುದು ನಿಜವೇ ಆದರೂ ಮನೆಯಿಲ್ಲದ, ನೆಲೆಯಿಲ್ಲದ, ಮಕ್ಕಳಿಲ್ಲದ ವಿಧವೆಯರಿಗೆ ಹೋಲಿಸಿದರೆ ಅವರ ಸ್ಥಿತಿ ಉತ್ತಮವೆಂದೇ ಹೇಳಬೇಕು. ಪತಿಯು ಬದುಕಿದ್ದರೂ ಮಕ್ಕಳು ದಾರಿತಪ್ಪಿದರೆ ಆಗುತ್ತಿದ್ದವೇದನೆ ಅಷ್ಟಿಷ್ಟಲ್ಲ, 

ಎರಡು ವಾರಗಳ ಹಿಂದೆ ದೂರದ ಕಾಶಿಯಿಂದ ನಮ್ಮ ಆತ್ಮೀಯ ಸ್ನೇಹಿತರೊಬ್ಬರು ದೂರವಾಣಿ ಕರೆ ಮಾಡಿದ್ದರು. 50 ವರ್ಷಗಳ ಹಿಂದೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ಒಂದೇ ವಿದ್ಯಾರ್ಥಿನಿಲಯದಲ್ಲಿ ಒಂದೇ ಕೊಠಡಿಯಲ್ಲಿ ಒಟ್ಟಿಗೆ ವಾಸವಾಗಿದ್ದವರು. ಕೋಣೆಯ ಕಪಾಟಿನಲ್ಲಿ ನಮ್ಮ ಪೂಜಾ ಸಾಮಗ್ರಿಗಳನ್ನು ಇಟ್ಟುಕೊಂಡಿದ್ದೆವು. ಪ್ರತಿದಿನ ಇಷ್ಟಲಿಂಗ ಪೂಜೆಯ ನಂತರ ಕಪಾಟನ್ನು ಮುಚ್ಚುತ್ತಿದ್ದೆವು. ನಮ್ಮ ಪೂಜೆಯ ಬಗೆಗೆ, ಪೂಜಾ ಸಾಮಗ್ರಿಗಳ ಬಗೆಗೆ ಅವರಿಗೆ ತುಂಬಾ - ಗೌರವವಿತ್ತು. ಅವರು ಎಂದೂ ನಮ್ಮ ಪೂಜಾ ಸಾಮಗ್ರಿಗಳನ್ನು ಮುಟ್ಟುತ್ತಿರಲಿಲ್ಲ. ಮುಂದೆ ಸಂಶೋಧನೆಗೆ ತೊಡಗಿದಾಗ ನಮ್ಮೊಬ್ಬರಿಗೇ ಪ್ರತ್ಯೇಕ ಕೋಣೆಯನ್ನು ಕೊಡುವವರೆಗೆ ಒಂದೇ ಕೋಣೆಯಲ್ಲಿ ತುಂಬಾ ಅನ್ನೋನ್ಯವಾಗಿದ್ದೆವು. ಓದುವಾಗಲೇ ಅವರಿಗೆ ಮದುವೆಯಾಗಿತ್ತು. ಒಮ್ಮೆ ಅವರ ಊರಾದ ಮೈನ್ ಪೂರ್ಗೆ ನಮ್ಮನ್ನು ಕರೆದುಕೊಂಡು ಹೋಗಿದ್ದರು. ಅವರ ತಾಯಿ ತುಂಬಾ ಪ್ರೀತಿಯಿಂದ ಬರಮಾಡಿಕೊಂಡು ನಮಗೆ ಹಾಲು ಪಾಯಸ ಮಾಡಿ ಉಣಬಡಿಸಿದ್ದರು! ಈಗ ಆ ತಾಯಿ ದೈವಾಧಿನರಾಗಿದ್ದಾರೆ. ಕಾಲೇಜೊಂದರಲ್ಲಿ, ಹಿಂಡಿ ಪ್ರೊಫೆಸರ್ ಆ ನಿವೃತ್ತರಾದ ನಮ್ಮ ಸ್ನೇಹಿತರಿಗೆ ಒಬ್ಬ ಮಗ, ಇಬ್ಬರು ಹೆಣ್ಣುಮಕ್ಕಳು. ಎಲ್ಲಗೂ ಮದುವೆ ಮಾಡಿದ್ದಾರೆ. ಅವರು ನಮ್ಮ ಬಳಿ ಕೆಲವು ಖಾಸಗಿ ವಿಷಯಗಳನ್ನು ಹೇಳಿಕೊಳ್ಳಲು ಬಯಸಿದ್ದರು. ಆದರೆ ಸಂಕೋಚ, ಮೇರಿ ಪತ್ನಿ ಆಪ್ ಸೇ ಬಾತ್ ಕರಾ ಚಾಹತೀ ಹೈ ಎಂದು ಹೇಳಿ ಅವರ ಶ್ರೀಮತಿಯವರಿಗೆ ಫೋನ್ ಕೊಟ್ಟುಬಿಟ್ಟರು. ಬಹಳ ದಿನಗಳ ನಂತರ ಫೋನ್ ಮಾಡಿದ್ದಾರೆ. ತಮ್ಮ ಮಕ್ಕಳು ಮೊಮ್ಮೊಕ್ಕಳ ಯೋಗಕ್ಷೇಮ ಮಾತನಾಡಬಹುದೆಂದು ನಿರೀಕ್ಷಿಸಿದ್ದ ನಮಗೆ ಆವರು ತನ್ನ ವಂಶೋದ್ಧಾರಕ' ಪುತ್ರ ದಶಾವತಾರಗಳನ್ನು ಹೇಳುತ್ತಾ ದುಃಖಿತರಾಗಿ ಮಾತನಾಡಿದ್ದನ್ನು ವೇದನೆಯಾಯಿತು. ಮಗ ದಾರಿ ತಪ್ಪಿದ್ದಾನೆ. ಉದ್ಯೋಗವಿಲ್ಲ. ವಿಪರೀತ ಸಾಲ ಮಾಡಿದ್ದಾನೆ. ಅದನ್ನು ತೀರಿಸಲು ಇದ್ದ ಬದ್ಧ ಜಮೀನನ್ನೆಲ್ಲಾ ಮಾರಿದ್ದಾನೆ. ಈಗ ಅಪ್ಪನ ನಿವೃತ್ತಿ ಸಮಯದ ಇಡುಗಂಟೆಗೆ ಮತ್ತು ಪಿಂಚಣಿ ಹಣಕ್ಕೆ ಗಂಟುಬಿದ್ದಿದ್ದಾನೆ. ವಿರೋಧಿಸಿದರೆ ಅಪ್ಪನನ್ನೇ ಹೊಡೆಯುವುದು ಬಡಿಯುವುದು ಮಾಡುತ್ತಾನೆ. ಆ ಮಗನಿಗೂ ಮದುವೆಯಾಗಿದ್ದು ಮಕ್ಕಳೂ ಇದ್ದಾರೆ, ಮಗನಿಗೆ ಕೊಡುವುದನ್ನು ಕೊಟ್ಟು ಸ್ವತಂತ್ರವಾಗಿರೋಣ ಎಂದರೆ ಮೊಮ್ಮಕ್ಕಳು, ನಾವೇನು ಮಾಡಿದ್ದೇವೆ, ನಮ್ಮನ್ನು ಅನಾಥರನ್ನಾಗಿ ಮಾಡಿ ಎಲ್ಲಿಗೆ ಹೋಗುತ್ತೀರಿ?' ಎಂದು ತೊಳಲಾಡುತ್ತವೆ! ಈಗ ನೀವೇ ಹೇಳಿ: ಆರಂಭದಲ್ಲಿ ಉಲ್ಲೇಖಿಸಿದ ಮಹಿಳೆ ಮತ್ತು ಈಗ ಹೇಳಿದ ನಮ್ಮ ಸ್ನೇಹಿತರು ಇವರಿಬ್ಬರಲ್ಲಿ ಯಾರು ಹೆಚ್ಚು ದುಃಖಿಗಳು?

ಒಂದು ಕಾಲ್ಪನಿಕ ಕಥಾನಕ ನೆನಪಾಗುತ್ತಿದೆ: ಒಬ್ಬನು ತಪಸ್ಸು ಮಾಡುತ್ತಿದ್ದ. ದೇವರು ಪ್ರತ್ಯಕ್ಷನಾಗಿ, 'ನಿನಗೆ ಮೂರು ವರಗಳನ್ನು ಕೊಡುತ್ತೇನೆ. ಏನಾದರೂ ಕೇಳಿಕೋ. ಆದರೆ ಒಂದನ್ನು ನೆನಪಿಡು. ಪ್ರತಿ ಸಲವೂ ನೀನು ಬೇಡಿದ್ದು ಖಂಡಿತಾ ಸಿಗುತ್ತದೆ. ಆದರೆ ಅದರ ಜೊತೆಗೆ ನಿನಗೆ ಇಷ್ಟವಿಲ್ಲದ ಒಂದು ಕೆಟ್ಟದ್ದೂ ಸಹ ಆಗುತ್ತದೆ. ಇದಕ್ಕೆ ನಿನ್ನ ಒಪ್ಪಿಗೆ ಇದ್ದರೆ ಏನು ವರ ಬೇಕೊ ಕೇಳಿಕೋ, ಎಂದ. “ನನಗೆ ಹತ್ತು ಲಕ್ಷ ರೂಪಾಯಿ ಸಿಗುವಂತಾಗಲಿ,” ಎಂದು ಅವನು ವರ ಕೇಳಿಕೊಂಡ. ದೇವರು 'ತಥಾಸ್ತು' ಎಂದ. ಅವನಿಗೆ ಹತ್ತು ಲಕ್ಷರೂಪಾಯಿಯೇನೋ ಸಿಕ್ಕಿತು. ಆದರೆ ಹೇಗೆ ಗೊತ್ತಾ? ಅವನ ಇದ್ದೊಬ್ಬ ಮಗ ಅಪಘಾತದಲ್ಲಿ ತೀರಿಕೊಂಡ. ಪರಿಹಾರವಾಗಿ ಹತ್ತು ಲಕ್ಷ ರೂಪಾಯಿ ಬಂದಿತ್ತು. ಮಗನೇ ಇಲ್ಲದ ಮೇಲೆ ಎಷ್ಟು ಲಕ್ಷ ರೂಪಾಯಿಗಳಿಂದ ಏನಾಗಬೇಕಾಗಿದೆ? ಅವನು ಎರಡನೆಯ ವರ ಕೇಳಿಕೊಂಡ. ಮಗನನ್ನು ಬದುಕಿಸಿಕೊಡು!' ದೇವರು ಕೊಟ್ಟ ಮಾತಿನಂತೆ ಇಷ್ಟಾರ್ಥವನ್ನು ನೆರವೇರಿಸಿದ. ಮಗನು ಬದುಕಿ ಬಂದ! ಆದರೆ ಯಾವ ಸ್ಥಿತಿಯಲ್ಲಿ! ಮುಖದೆಲ್ಲಾ ಜಜ್ಜಿ ಹೋಗಿತ್ತು, ಗುರುತು ಹಿಡಿಯಲಾರದಷ್ಟು ಶರೀರ ಅಷ್ಟಾವಕ್ರವಾಗಿತ್ತು. ಇಡೀ ಮೈಯಿಂದ ಕೀವು- ರಸಿಕೆ ಸುರಿಯುತ್ತಿತ್ತು. ಮೈತುಂಬಾ ಗಾಯಗಳು! ಬುಳಬುಳನೆ ಸುರಿಯುತ್ತಿರುವ ಬಾಲಹುಳುಗಳು! ಕೈಯಿಂದ ಮುಟ್ಟಿಲ ವಾಕರಿಕೆ ಬರುವಷ್ಟು ಅಸಹ್ಯವಾಗುವ ರೀತಿಯಲ್ಲಿದ್ದ ಆ ಸ್ಥಿತಿಯಲ್ಲಿ ಮಗನನ್ನು ನೋಡಲೂ ಸಹ ಆಗುತ್ತಿಲ್ಲ. ಅವನನ್ನು ಜೋಪಾನ ಮಾಡುವುದಾದರೂ ಹೇಗೆ! ಹೀಗೆ ಬದುಕಿರುವುದಕ್ಕಿಂತ ಸಾವೇ ಮೇಲಲ್ಲವೆ? ಮೂರನೆಯ ವರವಾಗಿ ಅವನು ದೇವರನ್ನು ಕೇಳಿಕೊಂಡ: "ದೇವರೇ ಮಗನ ಸ್ಥಿತಿಯನ್ನು ನಾನು ಕಣ್ಣಾರೆ ನೋಡಲಾರೆ, ಕೃಪೆ ಮಾಡಿ ಅವನನ್ನು ನಿನ್ನ ಪಾದದಲ್ಲಿ ಸೇರಿಸಿಕೊಂಡು ಬಿಡು!"

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.19-11-2020
ಬಿಸಿಲು ಬೆಳದಿಂಗಳು