ಲಕ್ ಗಿಂತ ಲಕ್ಷ್ಯ ಮುಖ್ಯ : ಗಿರಿಜಾಶಂಕರ್

  •  
  •  
  •  
  •  
  •    Views  

ಬದುಕಿನಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಆ ಕಷ್ಟಗಳಿಗೆ ಹೆದರಿ ಸೋಲೊಪ್ಪಿಕೊಳ್ಳುವುದು ಹೇಡಿಗಳ ಲಕ್ಷಣ. ನಾವು ಮಾಡುವ ಕೆಲಸಗಳಲ್ಲಿ ಬಹಳಷ್ಟು ಜನ ತಮ್ಮ ಲಕ್ ಚೆನ್ನಾಗಿದ್ದರೆ ಮಾತ್ರ ನಾವು ಮು೦ದೆ ಬರಲು ಸಾಧ್ಯ ಎನ್ನುವ ಸಂಕುಚಿತ ಮನೋಭಾವವನ್ನು ಇಟ್ಟುಕೊಂಡಿರುತ್ತಾರೆ. ಖಂಡಿತ ಮನುಷ್ಯನು ತಾನು ಮಾಡುವ ಎಲ್ಲ ಕೆಲಸಗಳನ್ನು ಲಕ್ ನಿಂದ ಮಾತ್ರ ಗೆಲ್ಲಲು ಸಾಧ್ಯ ಎ೦ದು ನ೦ಬಿದ್ದರೆ ಅದು ಮರ್ಖತನವಾದೀತು.

ಲಕ್ ಗಿಂತ ಲಕ್ಷ್ಯ ಮುಖ್ಯ ಅನ್ನೋದನ್ನು ಯಾರೂ ಮರೆಯಬಾರದು. ಯಾವುದೇ ಕೆಲಸವನ್ನು ಲಕ್ಷ್ಯದಿಂದ ಮಾಡಿದರೆ ಮಾತ್ರ ಅದರಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಬರೀ ಲಕ್ ಅನ್ನು ನಂಬಿ ಕೂತರೆ ಯಾವ ಕೆಲಸಗಳೂ ಆಗಲು ಸಾಧ್ಯವಿಲ್ಲ. ಒಬ್ಬ ರೈತ ತಾನು ಉಳುಮೆ ಮಾಡಿ ಭೂಮಿತಾಯಿಯಿಂದ ಫಸಲನ್ನು ಪಡೆಯಲು ಯಾವ ಯಾವ ಸಂದರ್ಭದಲ್ಲಿ ಹೊಲವನ್ನು ಹಸನು ಮಾಡಬೇಕು, ಯಾವ ಸಂದರ್ಭದಲ್ಲಿ ಬೀಜವನ್ನು ಹಾಕಬೇಕು, ಬಂದ ಬೆಳೆಗೆ ಹೇಗೆ ಪಾಲನೆ ಪೋಷಣೆ ಮಾಡಬೇಕೆನ್ನುವ ಲಕ್ಷ್ಯ ಇಲ್ಲದಿದ್ದರೆ ಸರಿಯಾದ ರೀತಿಯಲ್ಲಿ ಬೆಳೆಯನ್ನು ತೆಗೆಯಲು ಸಾಧ್ಯವಿಲ್ಲ. 

ಅದೇ ರೀತಿ ಒಬ್ಬ ವಿದ್ಯರ್ಥಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕೆಂದರೆ ಓದುವ ಕಡೆ ಲಕ್ಷ್ಯ ವಹಿಸುವುದು ಬಹಳ ಮುಖ್ಯ. ಪರೀಕ್ಷೆ ಬರುವವರೆಗೂ ತಿರುಗಾಡಿ ಇನ್ನೇನು ಪರೀಕ್ಷೆ ಹತ್ತಿರ ಬಂದಾಗ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡರೆ “ಯುದ್ಧಕಾಲದಲ್ಲಿ ಶಸ್ತ್ರಭ್ಯಾಸ” ಎನ್ನುವಂತೆ ಅವನ ಪರಿಸ್ಥಿತಿಯೂ ಆಗುತ್ತದೆ. ಆದ್ದರಿಂದ ಪ್ರತಿದಿನವೂ ಅಧ್ಯಾಪಕರು ಹೇಳಿಕೊಟ್ಟ ಪಾಠವನ್ನು ಸರಿಯಾದ ರೀತಿಯಲ್ಲಿ ಲಕ್ಷ್ಯವಹಿಸಿ ಮನನ ಮಾಡಿಕೊಂಡರೆ ಪರೀಕ್ಷೆಯನ್ನು ಲೀಲಾಜಾಲವಾಗಿ ಬರೆಯಲು ಸಾಧ್ಯ. ನನ್ನ ಲಕ್ ಚೆನ್ನಾಗಿದೆ ಎಂದು ಯಾರೋ ಜ್ಯೋತಿಷಿ ಭವಿಷ್ಯ ಹೇಳಿದ್ದಾರೆ, “ನೀನು ಖಂಡಿತಾ ಈ ವರ್ಷ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಆಗುತ್ತೀಯ ಎಂದು”, ಮತ್ತೇಕೆ ನಾನು ಪ್ರಯತ್ನ ಪಡಬೇಕು ಎಂದು ಕುಳಿತರೆ ಪರೀಕ್ಷೆಯಲ್ಲಿ ಅನುತ್ತರ್ಣನಾಗುವುದರಲ್ಲಿ ಎರಡು ಮಾತಿಲ್ಲ. 

ನಾಳೆಗಳಿಗಾಗಿ ಬದುಕುವ ಪ್ರತಿಯೊಬ್ಬ ವ್ಯಕ್ತಿಯೂ ಮಹಾನ್ ಸಾಧಕರಾಗಿರುವುದನ್ನು ನಾವು ನೋಡುತ್ತೇವೆ. ಇಂದಿಗಾಗಿ ಬದುಕುವವನು ಕೇವಲ ಲಕ್ ಮೇಲೆ ಅವಲಂಬಿತನಾಗಿರುತ್ತಾನೆ. ಸಾಲುಮರದ ತಿಮ್ಮಕ್ಕ ಸಾವಿರಾರು ಸಸಿಗಳನ್ನು ನೆಟ್ಟು ಪಾಲನೆ, ಪೋಷಣೆ ಮಾಡಿದ್ದು ನಾಳೆಯ ಬದುಕು ಚೆನ್ನಾಗಿರಲಿ ಎಂದು. ತಿಮ್ಮಕ್ಕ ಬೆಳೆಸಿದ ಸಾವಿರಾರು ಮರಗಳಿಂದ ಇವತ್ತು ಲಕ್ಷಾಂತರ ಜನ ಅದರ ಸದುಪಯೋಗವನ್ನು ಪಡೆಯುತ್ತಿದ್ದಾರೆ ಎಂದರೆ ಅ೦ದು ತಿಮ್ಮಕ್ಕ ಸಸಿ ನೆಡಲು ವಹಿಸಿದ ಲಕ್ಷ್ಯವೇ ಹೊರತು ಲಕ್ನಿಂದ ಆಗಿದ್ದಲ್ಲ. 

ತನ್ನ ಅದ್ಭುತ ಬುದ್ಧಿಶಕ್ತಿಯಿಂದ ಇಡೀ ಜಗತ್ತನ್ನೇ ತನ್ನತ್ತ ನೋಡುವಂತೆ ಮಾಡಿದವರು ಮೈಸೂರು ಸಂಸ್ಥಾನದ ದಿವಾನರು ಹಾಗು ಇಂಜಿನಿಯರ್ ಆಗಿದ್ದ  ಡಾ. ಸರ್ ಎಂ. ವಿಶ್ವೇಶ್ವರಯ್ಯ. ಅವರು ಹಾಕಿಕೊಂಡ ಯೋಜನೆಗಳು ಒಂದೇ, ಎರಡೇ. ಬಹುಶಃ ಒಬ್ಬ ಮನುಷ್ಯ ತನ್ನ ಮೇಧಾವಿತನ, ಪ್ರಾಮಾಣಿಕತೆ, ನಿಸ್ವರ್ಥತೆಯಿಂದ ಎಂತಹ ಯೋಜನೆಗಳನ್ನಾದರೂ ಮಾಡಬಹುದು ಎನ್ನುವುದಕ್ಕೆ ಸರ್ ಎಂ. ವಿಶ್ವೇಶ್ವರಯ್ಯನವರು ಅತ್ಯುತ್ತಮ ಉದಾಹರಣೆ. ಅವರು ಯಾವುದೇ ಕೆಲಸಗಳನ್ನಾದರೂ ಮಾಡುವಾಗ ಅವರ ಲಕ್ಷ್ಯ ಇದ್ದುದು ಮುಂದಿನ ಭವಿಷ್ಯದ ಬಗ್ಗೆ. ಮುಂದಿನ ಪೀಳಿಗೆಗೆ ಏನಾದರೂ ಅನುಕೂಲವಾಗುತ್ತದೆ ಎಂದರೆ ಆ ಕ್ಷಣವೇ ಅದರ ಕಾರ್ಯರೂಪಕ್ಕೆ ವ್ಯವಸ್ಥಿತವಾದ ಯೋಜನೆಯನ್ನು ಹಾಕಿಕೊಳ್ಳುತ್ತಿದ್ದರು. ಅಂದು ಅವರು ನಿರ್ಮಿಸಿದ ಕೃಷ್ಣರಾಜ ಸಾಗರ, ವಾಣಿವಿಲಾಸ ಸಾಗರ… ಹೀಗೆ ಹಲವಾರು ಅಣೆಕಟ್ಟುಗಳು ಇಂದಿಗೂ ಅವರ ಕಾರ್ಯಕ್ಷಮತೆಯ ದ್ಯೋತಕವಾಗಿವೆ. ಆದ್ದರಿಂದ ಯಾವುದೇ ವ್ಯಕ್ತಿ ತಾನು ಮಾಡುವ ಕೆಲಸದ ಮೇಲೆ ಲಕ್ಷ್ಯವನ್ನು ಇಟ್ಟುಕೊಂಡು ಕಾರ್ಯೋನ್ಮುಖನಾದರೆ ಅದರಲ್ಲಿ ಪ್ರತಿಫಲವನ್ನು ಪಡೆಯಲು ಸಾಧ್ಯ.

- ಗಿರಿಜಾಶಂಕರ್ ಜಿ. ಎಸ್. 

ನೇರಲಕೆರೆ ಪ್ರೌಢಶಾಲೆ.