ನ್ಯಾಯಾಲಯದಲ್ಲಿ ನೂರಕ್ಕೆ ನೂರು ನ್ಯಾಯ ದೊರೆಯುತ್ತದೆಯೇ?

ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದೇ ಇದ್ದರೂ ಪರರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ನಮ್ಮ ನ್ಯಾಯಾಂಗದ ನೀತಿ. ಅಂದರೆ ಇದರ ಅರ್ಥ ಅಪರಾಧಿಗಳಿಗೆ ಶಿಕ್ಷೆ ಯಾಗಬಾರದು ಎಂದಲ್ಲ, ಯಾವ ತಪ್ಪೂ ಮಾಡದ ನಿರಪರಾಧಿಗೆ ಅನ್ಯಾಯವಾಗಿ ಶಿಕ್ಷೆಯಾಗಬಾರದು ಎಂಬುದು ಇದರ ಆಶಯ. ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ ಕಪ್ಪು ಬಟ್ಟೆಯು ಸತ್ಯಾಸತ್ಯತೆಯನ್ನು ಕಾಣದ ಕುರುಡುತನದ ಪ್ರತೀಕವಲ್ಲ, ನ್ಯಾಯಾಧೀಶರಾದವರು ವಿಚಾರಣೆಗೆ ಹಾಜರಾದ ವ್ಯಕ್ತಿಗಳ ಸ್ಥಾನಮಾನ ಮತ್ತು ತಮ್ಮೊಂದಿಗೆ ಇರುವ ಅವರ ಸಂಬಂಧಗಳನ್ನು ನೋಡದೆ ನಿಷ್ಪಕ್ಷಪಾತವಾಗಿ ತೀರ್ಪು ನೀಡಬೇಕು ಎಂಬುದರ ಸಂಕೇತ. ನ್ಯಾಯಾಧೀಶರು ಸತ್ಯಶೋಧಕರು. ಪರಸ್ಪರ ವಿರುದ್ಧವಾದ ಸಾಕ್ಷ್ಯಾಧಾರಗಳಿಂದ ಕಣ್ಣಿಗೆ ಬಟ್ಟೆ ಕಟ್ಟಿದಂತಾದರೂ ಅವೆಲ್ಲವನ್ನೂ ಭೇದಿಸಿ ಸತ್ಯ ಸಂಗತಿಯನ್ನು ಮನಗಾಣಬಲ್ಲ ಅಂಜನ ಉಳ್ಳವರು. ವಕೀಲರು ಮತ್ತು ಸಾಕ್ಷಿದಾರರು ಎಷ್ಟೇ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ ಸಮಚಿತ್ತವುಳ್ಳ ನ್ಯಾಯಾಧೀಶರು ಸತ್ಯಶೋಧನೆ ಮಾಡಬಲ್ಲ ಕ್ಷಮತೆಯುಳ್ಳವರಾಗಿರುತ್ತಾರೆ.
ವಕೀಲರಿಗೆ ತಮ್ಮ ಕಕ್ಷಿದಾರನನ್ನು ಗೆಲ್ಲಿಸುವುದು ಮುಖ್ಯವಾಗಿರುತ್ತದೆಯೇ ಹೊರತು ಸತ್ಯಶೋಧನೆಯ ಗುರಿ ಅವರಿಗಿರುವುದಿಲ್ಲ, ಸಾಕ್ಷಿದಾರನೂ ಸಹ ಕಟಕಟೆಯಲ್ಲಿ ನಿಂತು, “ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ” ಎಂದು ಪ್ರಮಾಣ ಮಾಡಿದರೂ ಅದೊಂದು ಯಾಂತ್ರಿಕ ವಿಧಿಯೇ ಹೊರತು ಅವನು ಹೇಳುವುದು ಖಂಡಿತಾ ಸತ್ಯವನ್ನಲ್ಲ. ಹಿಂದಿನ ದಿನ ತನ್ನ ವಕೀಲರು ಹೇಗೆ ಸುಳ್ಳು ಹೇಳಬೇಕೆಂದು ಹೇಳಿಕೊಟ್ಟಿರುತ್ತಾರೋ ಅದನ್ನೇ ಗಿಳಿಪಾಠದಂತೆ ಒಪ್ಪಿಸುತ್ತಾನೆ! ನ್ಯಾಯಾಲಯದಲ್ಲಿ ಹೇಳಿದ ಮಾತನ್ನೇ ಊರಮುಂದಿನ ಹನುಮಪ್ಪನ ಗುಡಿಯ ಮುಂದೆ ಗಂಟೆ ಹೊಡೆದು ಹೇಳು ಎಂದರೆ ಹೆದರುತ್ತಾನೆ. ಅಪರಾಧಿ ಎಂದು ಗೊತ್ತಿದ್ದೂ ಅಂಥವರ ಪರ ವಕಾಲತ್ತು ವಹಿಸುವುದೂ ಸಹ ಅಪರಾಧ ಎಂಬ ನಿಯಮವನ್ನೇನಾದರೂ ರೂಪಿಸಿದರೆ ಈಗ ನ್ಯಾಯಾಲಯಗಳ ಮುಂದೆ ವಿಲೇವಾರಿ ಆಗದೆ ಹಿಮಾಲಯದ ಎತ್ತರದಷ್ಟು ನಿಂತಿರುವ ಪ್ರಕರಣಗಳು ಹಿಮದಂತೆ ಕರಗಿ ಹೋಗುವುದರಲ್ಲಿ ಅನುಮಾನವಿಲ್ಲ! ಮಾಜಿ ಮುಖ್ಯಮಂತ್ರಿಗಳಾಗಿದ್ದ ಅಪ್ಪಟ ಗಾಂಧಿವಾದಿ ಕಡಿದಾಳ್ ಮಂಜಪ್ಪನವರಿಗೆ ಕೇಸನ್ನು ನಡೆಸುವಾಗ ತಮ್ಮ ಕಕ್ಷಿದಾರ ಕೊಲೆಗಾರ ಎಂದು ಗೊತ್ತಿರಲಿಲ್ಲ. ಕೇಸನ್ನೇನೋ ಗೆದ್ದುಕೊಟ್ಟರು. ನಂತರ ಅವನೇ ನಿಜವಾದ ಕೊಲೆಗಾರ ಎಂದು ಗೊತ್ತಾದ ಮೇಲೆ ಅವರನ್ನು ಅಭಿನಂದಿಸಲು ದೊಡ್ಡ ಹಾರ ತೆಗೆದುಕೊಂಡು ಬಂದ ಆ ವ್ಯಕ್ತಿಯನ್ನು ಕುರಿತು, “ಲಾಯರಾಗಿ ನನ್ನ ಕೆಲಸ ಮಾಡಿದ್ದೇನೆ. ನಿನ್ನಿಂದ ಹಾರ ಹಾಕಿಸಿಕೊಳ್ಳಲು ಬಯಸುವುದಿಲ್ಲ, ಚಾಂಡಾಲ! ತೊಲಗು ಇಲ್ಲಿಂದ” ಎಂದು ಗದರಿಸಿ ಕಳುಹಿಸಿದರಂತೆ!
ಕಣ್ಣಿಗೆ ಕಂಡದ್ದೆಲ್ಲಾ ಸತ್ಯವಲ್ಲ; ಕಣ್ಣಿಗೆ ಕಾಣದ್ದೆಲ್ಲಾ ಸುಳ್ಳಲ್ಲ. ತಾರ್ಕಿಕ ಶಕ್ತಿಯ ಆಧಾರದ ಮೇಲೆ ಅದು ಏನಿರಬಹುದೆಂದು ನಿಖರವಾಗಿ ಗುರುತಿಸುವುದೇ ಪ್ರಮಾಣ. ಪ್ರಮಾಣವೆಂದರೆ ಆಣೆ ಮಾಡುವುದಲ್ಲ, ತೀರ್ಮಾನಕ್ಕೆ ಬರಲು ಅವಲಂಬಿಸುವ ಸಾಧನ. ನ್ಯಾಯಶಾಸ್ತ್ರದ ಪ್ರಕಾರ ಪ್ರಮಾಣಗಳು ಮೂರು: 1) ಪ್ರತ್ಯಕ್ಷ (Perception), 2) ಅನುಮಾನ (Inference) ಮತ್ತು 3) ಶಾಬ್ದ (Verbal Testimony), ಇಂದ್ರಿಯಗಳಿಗೆ ನೇರವಾಗಿ ಗೋಚರಿಸುವುದು ಪ್ರತ್ಯಕ್ಷ ಪ್ರಮಾಣವೆನಿಸುತ್ತದೆ. ಅಂದರೆ ನೇರವಾಗಿ ಕಣ್ಣಿಗೆ ಕಂಡದ್ದು ನೇರವಾಗಿ ಕಿವಿಯಾರೆ ಕೇಳಿದ್ದು ಒಟ್ಟಾರೆ ನೇರವಾಗಿ ಇಂದ್ರಿಯಗ್ರಾಹ್ಯವಾದದ್ದೇ ಪ್ರತ್ಯಕ್ಷ ಪ್ರಮಾಣ. ಅನುಮಾನ ಪ್ರಮಾಣ ಎಂದರೆ ಕನ್ನಡದ ಅನುಮಾನ ಅಲ್ಲ ಕನ್ನಡದಲ್ಲಿ ಅನುಮಾನವೆಂದರೆ ಸಂದೇಹ. ಭಾರತೀಯ ದರ್ಶನ ಶಾಸ್ತ್ರದಲ್ಲಿ ಅನುಮಾನ ಪ್ರಮಾಣವೂ ಒಂದು ನಿಖರವಾದ ಅರಿವು ಮೂಡಿಸುವ ಸಾಧನ (Means of Knowledge). ಇದಕ್ಕೆ ತರ್ಕಶಾಸ್ತ್ರದಲ್ಲಿ ಕೊಡುವ ಉದಾಹರಣೆ: ಯತ್ರ ಯತ್ರ ಧೂಮಃ ತತ್ರ ತತ್ರ ವಹ್ನಿಃ. ಅಂದರೆ ಎಲ್ಲಿ ಹೊಗೆ ಕಾಣಿಸುತ್ತದೆಯೋ ಅಲ್ಲಿ ಬೆಂಕಿ ಇದೆ ಎಂದು ಮಾಡುವ ಊಹೆ. ಹೊಗೆ ಎಂಬುದು ಕಾರ್ಯ, ಬೆಂಕಿ ಅದಕ್ಕೆ ಕಾರಣ. ಅನುಮಾನ ಪ್ರಮಾಣವು ಕಾರ್ಯ ಕಾರಣ ಸಂಬಂಧವುಳ್ಳದ್ದಾಗಿರುತ್ತದೆ. ಹೊಗೆ ಇದ್ದಲ್ಲಿ ಬೆಂಕಿ ಇರುವುದು ನಿಶ್ಚಿತ. ಆದರೆ ಬೆಂಕಿ ಇದ್ದಲ್ಲಿ ಹೊಗೆ ಇರಬೇಕೆಂದೇನೂ ಇಲ್ಲ. ಹೊಗೆ ಇರದಿದ್ದರೂ ಬೆಂಕಿ ಇರಲು ಸಾಧ್ಯ.
ಶಾಬ್ದ ಪ್ರಮಾಣವೆಂದರೆ ಆಪ್ತವಾಕ್ಯ. ತನಗೆ ಗೊತ್ತಿಲ್ಲದ ಸಂಗತಿಯನ್ನು ಬಲ್ಲವರಿಂದ ತಿಳಿದುಕೊಳ್ಳುವುದು ಶಾಬ್ದ ಪ್ರಮಾಣವೆನಿಸುತ್ತದೆ. ಆದರೆ ಅಂತಹ ವ್ಯಕ್ತಿಯು ಆಪ್ತನಾಗಿರಬೇಕಾಗುತ್ತದೆ. ಇಲ್ಲಿ ಆಪ್ತ ಎಂದರೆ ಬಹಳ ಬೇಕಾದವನು ಎಂದರ್ಥವಲ್ಲ, ವಿಶ್ವಾಸನೀಯ ವ್ಯಕ್ತಿ ಎಂದರ್ಥ. ವೇದೋಪನಿಷತ್ತುಗಳನ್ನು ಧರ್ಮಗ್ರಂಥಗಳನ್ನು ಆಪ್ತವಾಕ್ಯಗಳೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಹೇಳಿದವರು ಯಾವುದೇ ರಾಗದ್ವೇಷಗಳಿಲ್ಲದೆ ಅಪಾರ ಅನುಭವದಿಂದ ಹೇಳಿರುತ್ತಾರೆ. ಆದ್ದರಿಂದಲೇ ಅವುಗಳನ್ನು ಅಪೌರುಷೇಯಗಳೆಂದು ಭಾವಿಸಲಾಗುತ್ತದೆ. ‘ಅರ್ಥಾಪತ್ತಿ’ ಎಂಬ ಇನ್ನೊಂದು ಪ್ರಮಾಣವೂ ಇದೆ. ಇದಕ್ಕೆ ಕೊಡುವ ಉದಾಹರಣೆ: “ಪೀನೋ ದೇವದತ್ತಃ ದಿವಾ ನ ಭುಂಕ್ತೆ”. ಅಂದರೆ ದೇವದತ್ತನು ದಪ್ಪಗೆ ಇದ್ದಾನೆ. ಆದರೆ ಹಗಲು ಹೊತ್ತು ಉಣ್ಣುವುದಿಲ್ಲ. ಹಾಗಾದರೆ ರಾತ್ರಿ ಹೊತ್ತು ಉಣ್ಣುತ್ತಿರಬೇಕು, ಇಲ್ಲದಿದ್ದರೆ ದಪ್ಪಗೆ ಇರಲು ಹೇಗೆ ಸಾಧ್ಯ? ಎಂದು ಊಹಿಸುವುದೇ ಅರ್ಥಾಪತ್ತಿ. ಇದನ್ನು ಸ್ವತಂತ್ರವಾದ ಪ್ರಮಾಣವೆಂದು ನೈಯಾಯಿಕರು ಒಪ್ಪುವುದಿಲ್ಲ, ಅನುಮಾನ ಪ್ರಮಾಣದೊಳಗೆ ಇದು ಬರುತ್ತದೆ ಎಂದು ಅವರ ವಾದ.
ಭಾರತೀಯ ದಾರ್ಶನಿಕರು ಈ ಪ್ರಮಾಣಗಳ ಆಧಾರದ ಮೇಲೆ ಮನುಷ್ಯನ ಜೀವನದ ಒಳಹೊರಗಿನ ಪಾರಮಾರ್ಥಿಕ ಸತ್ಯಾಸತ್ಯತೆಗಳನ್ನು ಪರಿಶೋಧಿಸುತ್ತಾರೆ. ಧರ್ಮದ ಮೂಲಭೂತ ಅಂಶಗಳನ್ನೇ ಒಳಗೊಂಡಿರುವ ಕಾನೂನುಗಳ ಪರಿಧಿಯಲ್ಲಿ ನ್ಯಾಯಾಧೀಶರು ಮನುಷ್ಯನ ವ್ಯಾವಹಾರಿಕ ಬದುಕಿನ ಒಳಹೊರಗಿನ ಸತ್ಯಾಸತ್ಯತೆಗಳನ್ನು ಪರಿಶೋಧಿಸುತ್ತಾರೆ. ಕಳೆದ ತಿಂಗಳು ಚೆನ್ನೈಗೆ ಹೋದಾಗ ಮದ್ರಾಸ್ ಹೈಕೋರ್ಟಿನ ಹಿರಿಯ ನ್ಯಾಯಮೂರ್ತಿಗಳಾದ ಪಿ.ಎನ್.ಪ್ರಕಾಶ್‌ರವರು ನಮ್ಮನ್ನು ಅವರ ಛೇಂಬರ್‌ಗೆ ಬರಮಾಡಿಕೊಂಡ ವಿಚಾರವಾಗಿ ಹಿಂದಿನ ಅಂಕಣದಲ್ಲಿ ವಿವರವಾಗಿ ಬರೆಯಲಾಗಿದೆ. ನ್ಯಾಯದಾನದ ಬಗ್ಗೆ ಸುದೀರ್ಘ ಸಂವಾದ ನಡೆದು ಅವರಿಂದ ಬೀಳ್ಕೊಂಡ ಸಂದರ್ಭದಲ್ಲಿ ಇದೇ ಮೇ ತಿಂಗಳು ಒಂದು ಕ್ರಿಮಿನಲ್ ಮೊಕದ್ದಮೆಯಲ್ಲಿ ಅವರು ನೀಡಿದ್ದ ತೀರ್ಪಿನ ಪ್ರತಿಯನ್ನು ನಮ್ಮ ಕೈಗೆ ನೀಡಿದರು. ಬಿಡಾರಕ್ಕೆ ಹಿಂದಿರುಗಿದ ಮೇಲೆ ಕುತೂಹಲದಿಂದ ಓದಿದಾಗ ಸಾಕ್ಷ್ಯಾಧಾರಗಳನ್ನು ಆಧರಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದ ಕೆಳಗಿನ ಕೋರ್ಟಿನ ತೀರ್ಪನ್ನು ಅವೇ ಸಾಕ್ಷಾಧಾರಗಳ ಮೇಲೆ ಅವರು ಅನೂರ್ಜಿತಗೊಳಿಸಿ 9 ವರ್ಷಗಳಿಂದ ಜೈಲಿನಲ್ಲಿದ್ದ ಅಪರಾಧಿಯನ್ನು ಆರೋಪದಿಂದ ವಿಮುಕ್ತಗೊಳಿಸಿದ್ದು ವಿಸ್ಮಯವನ್ನುಂಟು ಮಾಡಿತು. ಆ ಪ್ರಕರಣದ ಸಾರಾಂಶ ಹೀಗಿದೆ:
ತಂಜಾವೂರಿನ ಸೆಶನ್ಸ್ ನ್ಯಾಯಾಲಯವು ನೀಡಿದ್ದ ತೀರ್ಮಾನದ ವಿರುದ್ಧ ಅಪರಾಧಿಯು ಸಲ್ಲಿಸಿದ್ದ ಮೇಲ್ಮನವಿಯು ಮದ್ರಾಸ್ ಹೈಕೋರ್ಟಿನ ಮುಂದೆ ಬಂದಿತು. ಮಣಿಮೇಖಲೈ ಎಂಬ ಮಹಿಳೆ ತಮಿಳುನಾಡಿನ ಕಂಜನೂರು ಗ್ರಾಮದ ಷಣ್ಮುಗಂ ಎಂಬವವರನ್ನು ವಿವಾಹವಾಗಿದ್ದಳು. ವರದಕ್ಷಿಣೆ ಕಿರುಕುಳವನ್ನು ಪತಿ ಮತ್ತು ಅತ್ತೆಮಾವಂದಿರು ನೀಡುತ್ತಿದ್ದರು. ಮದುವೆಯಾದ ಆರು ತಿಂಗಳೊಳಗೆ ಆಕೆಯನ್ನು ಗಂಡನೇ ಕತ್ತು ಹಿಸುಕಿ ಕೊಂದು ಮನೆಯ ಹಿಂಭಾಗದ ಹಿತ್ತಲಲ್ಲಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂಬ ಆರೋಪವನ್ನು ಆಧರಿಸಿ ಆತನಿಗೆ ಕೆಳಗಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೊತೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಕ್ಕೆ ಪ್ರತ್ಯೇಕ ಶಿಕ್ಷೆ ನೀಡಿತ್ತು.
ಈ ಕ್ರಿಮಿನಲ್ ಮೇಲ್ಮನವಿಯು ಮದ್ರಾಸ್ ಉಚ್ಚನ್ಯಾಯಾಲಯದ ಜಸ್ಟೀಸ್ ಪಿ.ಎನ್.ಪ್ರಕಾಶ್ ಅವರ ಮುಂದೆ ವಿಚಾರಣೆಗೆ ಬಂದಿತು. ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರು ಲಭ್ಯವಿದ್ದ ಸಾಕ್ಷ್ಯಾಧಾರಗಳನ್ನೇ ಆಳವಾಗಿ ಒಳಹೊಕ್ಕು ಪರಿಶೀಲಿಸಿ ಕೆಳಗಿನ ನ್ಯಾಯಾಲಯದ ತೀರ್ಪು ದೋಷಯುಕ್ತವೆಂಬುದನ್ನು ಗುರುತಿಸಿದರು. ನ್ಯಾಯಾಧೀಶರು ತೀರ್ಪು ನೀಡುವ ಮೊದಲು ದಾಖಲಿಸಿದ ಮೂರು ಮುಖ್ಯಾಂಶಗಳೆಂದರೆ:
1.ಪ್ರಕರಣದಲ್ಲಿ ಪ್ರತ್ಯಕ್ಷವಾಗಿ ನೋಡಿದ ಸಾಕ್ಷಿಗಳು ಯಾರೂ ಇಲ್ಲ. ಗಂಡನು ಘಟನೆ ಸಂಭವಿಸಿದ ಸಂದರ್ಭದಲ್ಲಿ ತನ್ನ ಮನೆಯಲ್ಲಿಯೇ ಇದ್ದನೆಂಬುದನ್ನು ಸಾಕ್ಷಿಗಳೂ ಹೇಳಿದ್ದಾರೆ ಮತ್ತು ಅವನೂ ಸಹ ಒಪ್ಪಿಕೊಂಡಿದ್ದಾನೆ. ಎದುರು ಮನೆಯವರು ಕೂಗಿ ಹೇಳಿದಾಗ ಆತನೂ ಎಲ್ಲರೊಂದಿಗೆ ಓಡಿಹೋಗಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾನೆ.
2.ಹೆಂಡತಿಯನ್ನು ಗಂಡ ಕತ್ತು ಹಿಸುಕಿ ಕೊಂದು ಅನಂತರ ಹಿತ್ತಲಿನಲ್ಲಿ ಬೆಂಕಿ ಹಚ್ಚಿದ್ದಾನೆ ಎಂಬ ಆರೋಪದಲ್ಲಿ ಹುರುಳಿಲ್ಲ. ಸತ್ತ ಮಹಿಳೆಯ ಮೈಮೇಲೆ ಸುಟ್ಟ ಗಾಯಗಳಾಗಿವೆ, ನಿಜ. ಆದರೆ ಪಾದಗಳಿಂದ ಮೊಳಕಾಲುಗಳವರೆಗೆ ಸುಟ್ಟ ಗಾಯಗಳಿಲ್ಲ, ಬೆಂಕಿ ಹೊತ್ತಿಕೊಂಡು ಉರಿಯುವಾಗ ಆಕೆ ನಿಂತಿದ್ದನ್ನು ಎದಿರು ಮನೆ ಮಹಿಳೆ ನೋಡಿದ್ದಾಗಿ ಹೇಳಿದ್ದಾಳೆ. ಮೊದಲೇ ಕೊಂದು ನಂತರ ಬೆಂಕಿ ಹಚ್ಚಿದ್ದರೆ ನಿಲ್ಲಿಸಿ ಹಚ್ಚಲು ಸಾಧ್ಯವೆ? ಮೃತ ಹೆಣ್ಣಿನ ಬೆನ್ನ ಮೇಲೂ ಸಹ ತೀವ್ರವಾಗಿ ಸುಟ್ಟಗಾಯಗಳಿರುವುದರಿಂದ ಮಲಗಿಸಿ ಬೆಂಕಿ ಹಚ್ಚಿಲ್ಲ ಎಂಬುದು ಸ್ಪಷ್ಟ. ಪಾದಗಳಿಂದ ಮೊಳಕಾಲವರೆಗೆ ಸುಡದೆ ಇರುವುದರಿಂದಲೂ ಸಾಕ್ಷಿಗಳ ಹೇಳಿಕೆ ಪ್ರಕಾರ ಬೆಂಕಿ ಹತ್ತಿದ ಮಹಿಳೆ ನಿಂತ ಭಂಗಿಯಲ್ಲಿದ್ದಳು ಎಂದು ಹೇಳಿರುವುದರಿಂದಲೂ ಆಕೆಯನ್ನು ಬೆಂಕಿ ಹಚ್ಚುವ ಮೊದಲೇ ಕೊಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
3.ಮಹಿಳೆ ಕುತ್ತಿಗೆಯ ಎಡಭಾಗದ ಮೂಳೆ ಮುರಿದಿದೆ ಎಂದು ಪೋಸ್ಟ್ ಮಾರ್ಟಂ ವರದಿ ತಿಳಿಸುತ್ತದೆ. ಕತ್ತು ಹಿಸುಕಿದ್ದರೆ ಕತ್ತಿನ ಬಲಭಾಗದ ಮೂಳೆಗೂ ಹಾನಿ ಆಗಬೇಕಾಗಿತ್ತು. ಕತ್ತಿನ ಒಂದು ಭಾಗದ ಮೂಳೆ ಮುರಿತದಿಂದ ಸಾವು ಸಂಭವಿಸಿದೆ ಎಂದು ಹೇಳಲು ಬರುವುದಿಲ್ಲ. ಸುಟ್ಟ ನಂತರ ಶವವು ನೆಲಕ್ಕೆ ಬೀಳುವಾಗ ಈ ಮೂಳೆ ಮುರಿತ ಆಗಿರಬಹುದು ಅಥವಾ ಪೋಸ್ಟ್ ಮಾರ್ಟಂ ಮಾಡುವ ಸಂದರ್ಭದಲ್ಲೂ ಆಗಿರಬಹುದು.
ಈ ಮೇಲಿನ ಕಾರಣಗಳಲ್ಲದೆ ಇಂತಹ ಸಂದರ್ಭಗಳನ್ನು ಕುರಿತು ಪ್ರಕಟವಾದ ಇನ್ನೂ ಅನೇಕ ವೈದ್ಯಕೀಯ ಪರಿಣತರ ಬರಹಗಳನ್ನು ಆಧರಿಸಿ ನ್ಯಾಯಾಧೀಶರು ಆರೋಪಿಯನ್ನು ಕೊಲೆಯ ಆರೋಪದಿಂದ ಖುಲಾಸೆ ಮಾಡಿದ್ದಾರೆ. ವರದಕ್ಷಿಣೆ ಕಿರುಕುಳದ ಪ್ರಕರಣಕ್ಕೆ ನೀಡಿದ ಶಿಕ್ಷೆಯನ್ನು ಮಾತ್ರ ಎತ್ತಿಹಿಡಿದು ಈಗಾಗಲೇ ವಿಚಾರಣೆಯ ಹಂತದಲ್ಲಿಯೇ ಸಜೆಯ ಅವಧಿಯಷ್ಟು ಕಾಲ ಜೈಲಿನಲ್ಲಿರುವುದರಿಂದ ಅವನನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಆದೇಶಿಸಿದ್ದಾರೆ.
ನಿರಪರಾಧಿಗಳಿಗೆ ಶಿಕ್ಷೆಯಾಗಬಾರದೆಂಬ ನೀತಿಯನ್ನು ಎತ್ತಿಹಿಡಿದಿರುವ ನ್ಯಾಯಾಧೀಶರಾದ ಪಿ.ಎನ್.ಪ್ರಕಾಶ್‌ರವರು ಖಾಸಗಿಯಾಗಿ ನಮ್ಮೊಂದಿಗೆ ಮಾತನಾಡುವಾಗ ಹೇಳಿದ ಮಾತು: ನ್ಯಾಯಾಲಯಗಳು ನೂರಕ್ಕೆ ನೂರು ನ್ಯಾಯ ಒದಗಿಸುತ್ತವೆಯೆಂದು ಹೇಳಲಾಗದು, ಹೆಚ್ಚೆಂದರೆ ಶೇ.70ರಷ್ಟು ನ್ಯಾಯ ಒದಗಿಸಬಹುದಷ್ಟೇ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 4.7.2019