ಇಂದಿನ ರಾಜಕೀಯ ವಿಪ್ಲವಗಳಿಗೆ ಪರಿಹಾರವಿಲ್ಲವೇ?

ನಮ್ಮ ಸಂವಿಧಾನ ಶಿಲ್ಪಿಗಳು ಕನಸಿನಲ್ಲಿಯೂ ಊಹಿಸಿರದ ಬಿಕ್ಕಟ್ಟುಗಳು ಇಂದು ರಾಜಕೀಯ ರಂಗದಲ್ಲಿ ತಲೆದೋರುತ್ತಿವೆ. ದೇಶವು 1947 ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿದರೂ ತನ್ನದೇ ಆದ ಸಂವಿಧಾನ ರೂಪುಗೊಂಡದ್ದು 1950 ರಲ್ಲಿ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಮತ್ತು ಆಗಿನ ಕಾನೂನು ತಜ್ಞರು ವರ್ಷಗಟ್ಟಲೆ ನಾನಾ ದೇಶಗಳ ಸಂವಿಧಾನಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಭಾರತೀಯ ನೆಲಕ್ಕೆ ಹೊಂದುವ ವಿಶ್ವದಲ್ಲಿಯೇ ಮನ್ನಣೆ ಪಡೆದ ಸಂವಿಧಾನವನ್ನು ರೂಪಿಸಿದ್ದಾರೆ. ನಮ್ಮ ಸಂವಿಧಾನವು ರಾಜಕಾರಣಿಗಳನ್ನು "ಚಾಪೆ ಕೆಳಗೆ" ನುಸುಳದಂತೆ ಮಾಡಿದರೂ "ರಂಗೋಲಿ ಕೆಳಗೆ" ನುಸುಳುವ ಚಾಣಾಕ್ಷ ಪ್ರವೃತ್ತಿಯುಳ್ಳ ಇಂದಿನ ರಾಜಕೀಯ ಮುಂದಾಳುಗಳಿಂದ ಸಾಂವಿಧಾನಿಕ ಬಿಕ್ಕಟ್ಟುಗಳು ತಲೆದೋರಿ ಮೇಲಿಂದ ಮೇಲೆ ದೇಶದ ವರಿಷ್ಠ ನ್ಯಾಯಾಲಯದ ಕದ ತಟ್ಟುವ ಪರಿಸ್ಥಿತಿ ಉಂಟಾಗಿದೆ.
ನಮ್ಮ ದೇಶದಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾಷಾವಾರು ಪ್ರಾಂತ್ಯಗಳಿರಲಿಲ್ಲ. ಭಾಷಾವಾರು ಪ್ರಾಂತ್ಯಗಳ ರಚನೆಯಾಗಬೇಕೆಂಬ ಕೂಗು ಅಲ್ಲಲ್ಲಿ ಕೇಳಿಬಂದರೂ ಬ್ರಿಟಿಷರು ಅದಕ್ಕೆ ಮನ್ನಣೆ ನೀಡಲಿಲ್ಲ. ಭಾಷಾ ಸಂಬಂಧಿ ತಿಕ್ಕಾಟಗಳು ಆಗ ಇರಲಿಲ್ಲ. ದೇಶ ಸ್ವತಂತ್ರಗೊಂಡ ಮೇಲೆ ಭಾಷಾವಾರು ಪ್ರಾಂತ್ಯಗಳ ರಚನೆಯಾಗಬೇಕೆಂಬ ಚಳುವಳಿ ಬಲಗೊಂಡಿತು. ಈ ಸಂಬಂಧವಾಗಿ ನೇಮಕಗೊಂಡಿದ್ದ ಧರ್ ಸಮಿತಿಯು ಅಧ್ಯಯನ ನಡೆಸಿ ದೇಶದ ಹಿತದೃಷ್ಟಿಯಿಂದ ಇದು ವಿಹಿತವಲ್ಲವೆಂದು ವರದಿ ನೀಡಿತು. ನಂತರ ಜವಾಹರಲಾಲ್ ನೆಹರು, ವಲ್ಲಭ್ ಭಾಯಿ ಪಟೇಲ್ ಮತ್ತು ಪಟ್ಟಾಭಿ ರಾಮಯ್ಯ ಇವರನ್ನೊಳಗೊಂಡ ಮತ್ತೊಂದು ಸಮಿತಿಯು ರಚನೆಯಾಯಿತು. ಜೆ.ವಿ.ಪಿ. ಸಮಿತಿ ಎಂದು ಹೆಸರು ಪಡೆದ ಈ ಸಮಿತಿಯೂ ಸಹ ಭಾಷೆಯ ಆಧಾರದ ಮೇಲೆ ಪ್ರಾಂತ್ಯಗಳನ್ನು ವಿಂಗಡಿಸುವುದು ಸರಿಯಲ್ಲ. ಇದರಿಂದ ಪ್ರಾಂತೀಯ ಭಾವನೆ ಬೆಳೆಯುತ್ತದೆ. ರಾಷ್ಟ್ರೀಯ ಭಾವನೆಗೆ ಧಕ್ಕೆಯುಂಟಾಗುತ್ತದೆ ಎಂದು ತಿರಸ್ಕರಿಸಿತು. ಆದರೆ ಭಾಷಾವಾರು ಪ್ರಾಂತ್ಯಗಳ ರಚನೆಯಾಗಲೇಬೇಕೆಂಬ ಚಳುವಳಿಯು ತೀವ್ರಗೊಂಡು ಆಂಧ್ರದಲ್ಲಿ ವಿಕೋಪಕ್ಕೆ ಹೋಗಿ ಪೊಟ್ಟಿ ಶ್ರೀರಾಮುಲು ಎಂಬುವವರು ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಆಗಲೂ ಸರಕಾರ ಜಗ್ಗಲಿಲ್ಲ. ಆದರೆ ಆ ಚಳುವಳಿ ನಿರತ ಸತ್ಯಾಗ್ರಹಿಯು ಸಾವನ್ನಪ್ಪಿದ ಅನಂತರ ಜನಾಕ್ರೋಶ ಭುಗಿಲೆದ್ದು ಭಾಷಾವಾರು ಪ್ರಾಂತ್ಯಗಳ ರಚನೆಗೆ ಇಂಬು ದೊರೆಯಿತು.
ಒಂದು ಭಾಷೆಯನ್ನು ಮಾತನಾಡುವ ಜನರು ಏಕಾಡಳಿತಕ್ಕೆ ಬರುವುದು ಸೂಕ್ತ. ಭಾಷೆಯು ಜನರನ್ನು ಒಗ್ಗೂಡಿಸುತ್ತದೆ, ಅಭಿವೃದ್ಧಿ ಅದರಿಂದ ಸಾಧ್ಯ ಎಂಬೆಲ್ಲ ತರ್ಕಗಳು ಮುನ್ನೆಲೆಗೆ ಬಂದವು; ಭಾಷಾವಾರು ಪ್ರಾಂತ್ಯಗಳ ರಚನೆಯೂ ಆಯಿತು. ಆದರೆ ಭಾಷೆ, ನೆಲ, ಜಲಗಳ ಕಾರಣಕ್ಕೆ ರಾಜ್ಯ ರಾಜ್ಯಗಳ ನಡುವೆ ಜಗಳಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಒಂದೇ ರಾಜ್ಯದ ಒಂದೇ ಭಾಷೆಯನ್ನಾಡುವ ಜನರ ನಡುವೆಯೂ ಬಿಕ್ಕಟ್ಟುಗಳು ಬಂದು ಒಡೆದು ಹೋಗಿ ಪ್ರತ್ಯೇಕ ರಾಜ್ಯವಾಗಿರುವುದಕ್ಕೆ ಇತ್ತೀಚೆಗೆ ತೆಲಂಗಾಣವೇ ಜ್ವಲಂತ ನಿದರ್ಶನವಾಗಿದೆ. ಭಾಷಾವಾರು ಪ್ರಾಂತ್ಯಗಳ ಚಳುವಳಿ ಹುಟ್ಟಿದ್ದೇ ಆಂಧ್ರದಲ್ಲಿ! ವಿಘಟನೆ ಆಗಿದ್ದೂ ಆಂಧ್ರದಲ್ಲಿ ಎಂಬುದು ಎಂಥ ವಿಪರ್ಯಾಸ!
ಇತ್ತೀಚಿನ ದಿನಗಳಲ್ಲಿ ಚುನಾವಣೆಗಳ ಅನಂತರ ಸರಕಾರ ರಚನೆ ಮಾಡುವ ಸಂದರ್ಭದಲ್ಲಿ ಅನೇಕ ವಿಪ್ಲವಗಳೇ ನಡೆದು ಹೋಗಿವೆ. ಇದಕ್ಕೆ ತಾಜಾ ನಿದರ್ಶಗಳೆಂದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಆಗಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು. ಕರ್ನಾಟಕದಲ್ಲಿ ಇಂದು (ಡಿಸೆಂಬರ್ 5, 2019) ವಿಧಾನಸಭೆ ಉಪಚುನಾವಣೆಯ ಮತದಾನ. ರಾಜಕೀಯ ನಾಯಕರು ತಂತಮ್ಮ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಹಾವು ಮುಂಗಸಿಯಂತೆ ಹೋರಾಟ ನಡೆದಿದೆ. ಅಧಿಕಾರದ ಲಾಲಸೆಯಿಂದ ನಡೆಯುತ್ತಿರುವ ಈ ಹಾವು ಏಣಿ ಆಟದಲ್ಲಿ ಯಾರು ಗೆಲ್ಲುತ್ತಾರೆಂದು ಮಾಧ್ಯಮಗಳು ಸಮೀಕ್ಷೆ ನಡೆಸಿ ಜ್ಯೋತಿಷಿಗಳಂತೆ ಭವಿಷ್ಯ ನುಡಿಯುತ್ತಿವೆ! ಅಬ್ಬರದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪರಸ್ಪರ ಕೆಸರೆರಚಾಟ, ಚಾರಿತ್ರ್ಯವಧೆ ಎಂದಿನಂತೆ ಎಗ್ಗಿಲ್ಲದೆ ನಡೆದಿದೆ. ಚುನಾವಣೆಯ ಅನೇಕ ಅಕ್ರಮಗಳಿಗೆ ಮೂಗುದಾರ ಏರಿಸಿರುವ ನೀತಿಸಂಹಿತೆಯು ರಾಜಕೀಯ ಧುರೀಣರಿಗೆ ಶಿಷ್ಟಾಚಾರದ ಎಲ್ಲೆ ಮೀರಿ ಮಾತುಗಳನ್ನು ಆಡದಂತೆ ಬಾಯಿಗೆ ಬೀಗ ಹಾಕಲು ಆಗಿಲ್ಲ, “Politics makes strange bedfellows" ಎನ್ನುವಂತೆ ಒಂದು ಚುನಾವಣೆಯಲ್ಲಿ ಬದ್ಧವೈರಿಗಳಂತೆ ಇದ್ದವರು ಮತ್ತೊಂದು ಚುನಾವಣೆಯಲ್ಲಿ ಜಿಗರಿ ದೋಸ್ತಿಗಳಾಗಿ ಪರಿವರ್ತನೆಗೊಳ್ಳುವುದು ಆಶ್ಚರ್ಯಕರ ಸಂಗತಿಯಾಗಿ ಉಳಿದಿಲ್ಲ.
ಈ ಎಲ್ಲ ರಾಜಕೀಯ ವಿಪ್ಲವಗಳಿಗೆ ಕಾರಣವೆಂದರೆ ಯಾವುದೇ ಪಕ್ಷಕ್ಕೆ ಸರಕಾರ ರಚನೆಗೆ ಬೇಕಾದ ಬಹುಮತ ಇಲ್ಲದಿರುವುದು; ಇದ್ದರೂ ನಾನಾ ಕಾರಣಗಳಿಂದ ಅಲ್ಪಮತಕ್ಕೆ ಕುಸಿಯುವುದು. ಸರಕಾರ ರಚನೆಗೆ ಬೇಕಾದ ಬೆಂಬಲ ಗಳಿಸಲು ನಾನಾ ರೀತಿಯ ಕಸರತ್ತುಗಳು ಕಾಣಿಸಿಕೊಳ್ಳುತ್ತವೆ. ಅಗಣಿತ ಗಣಿತದ ಲೆಕ್ಕಾಚಾರಗಳು ಹೊರಹೊಮ್ಮುತ್ತವೆ. ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವು ಬಹುಮತ ಇಲ್ಲದೇ ಹೋದಾಗ ಅನ್ಯ ಪಕ್ಷದ ಶಾಸಕರನ್ನು ಸೆಳೆದುಕೊಂಡೋ ಅಥವಾ ರಾಜೀನಾಮೆ ಕೊಡಿಸಿಯೋ ಬಹುಮತ ಸಾಬೀತಿಗೆ ಮುಂದಾಗುತ್ತದೆ. ಇನ್ನು ಬಹುಮತವಿಲ್ಲದ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವು ಅಧಿಕಾರ ಹಿಡಿಯದಂತೆ ತೊಡರುಗಾಲು ಹಾಕುತ್ತವೆ. "ಅದರ ಬಾಲ ಇದು ಮೂಸಿ, ಇದರ ಬಾಲ ಅದು ಮೂಸಿ ಮಂದೆಯಲಿ ಒಂದಾಗಿ ಸಾಗುವ" ಶಾಸಕರು "ಈಚೆ ದಡ ಗದರಿದರೆ ಆಚೆ ದಡವಿಹುದು; ಆಚೆ ದಡ ಗದರಿದರೆ ಈಚೆ ದಡವಿಹುದು. ಎರಡು ಕಡೆಯೂ ನನಗೆ ಮಂಗಳವೇ ಅಹುದು" ಎಂಬಂತಹ ಬೇಲಿಯ ಮೇಲಿನ ಗುಬ್ಬಿಯಂತೆ ಲೆಕ್ಕಾಚಾರದಲ್ಲಿ ಮುಳುಗಿರುತ್ತಾರೆ. ಅಂತೂ ತಂತಮ್ಮ ಕುರಿಗಳನ್ನು ತಮ್ಮ ದೊಡ್ಡಿಯಲ್ಲಿಯೇ ಸುರಕ್ಷಿತವಾಗಿ ಕಾಪಾಡಿಕೊಳ್ಳಲು "ರೆಸಾರ್ಟ್ ರಾಜಕೀಯ" ಆರಂಭವಾಗುತ್ತದೆ.
ಸಮಕಾಲೀನ ರಾಜಕೀಯ ದೊಂಬರಾಟಗಳಿಗೆ ಮುಖ್ಯ ಕಾರಣವೆಂದರೆ ಸರಕಾರ ರಚಿಸಲು ಬಹುಮತ ಇರಲೇಬೇಕೆಂಬ ನಿಯಮ. ಒಂದು ಪಕ್ಷ ಈ ನಿಯಮ ಇಲ್ಲದೇ ಹೋಗಿದ್ದರೆ ಏನಾಗುತ್ತಿತ್ತು? ಹೆಚ್ಚು ಸ್ಥಾನಗಳನ್ನು ಗಳಿಸಿದ ಪಕ್ಷವು ಬಹುಮತ ಸಾಬೀತು ಪಡಿಸುವ ರೇಜಿಗೆ ಇಲ್ಲದೆ ಸರಕಾರ (Minority Government) ರಚಿಸಲು ಅವಕಾಶ ಇದ್ದಿದ್ದರೆ ಈ ವಿಪ್ಲವಗಳಿಗೆ ಅವಕಾಶ ಇರುತ್ತಿತ್ತೇ? ಕ್ಷಣಕಾಲ ಯೋಚಿಸಿ. ಇದು ಎಲ್ಲಾದರೂ ಸಾಧ್ಯವೆ? ಇದು ಶುದ್ಧ ಪ್ಲೆಟೋನಿಕ್! ಎಂದು ನೀವು ಖಂಡಿತಾ ಟೀಕಿಸುತ್ತೀರಿ. ಅಂತಹ ನಿರ್ಧಾರಕ್ಕೆ ಬರುವ ಮುನ್ನ ಸ್ವಲ್ಪ ಯೋಚಿಸಿ: ಒಂದು ಮತಕ್ಷೇತ್ರದಲ್ಲಿ ಮತಗಳ ಸಂಖ್ಯೆ ಒಂದು ಲಕ್ಷ ಎಂದಿಟ್ಟುಕೊಳ್ಳಿ. ಅದರಲ್ಲಿ 75,000 ಮತಗಳು ಬೇರೆ ಬೇರೆ ಅಭ್ಯರ್ಥಿಗಳಿಗೆ ಹಂಚಿಹೋಗಿ 25,000 ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತನೆಂದು ಘೋಷಿಸಲಾಗುತ್ತದೆ. ಆತ ವಾಸ್ತವವಾಗಿ 25,000 ಮತದಾರರ ಪ್ರತಿನಿಧಿಯೇ ಹೊರತು 75,000 ಮತದಾರರ ಪ್ರತಿನಿಧಿ ಅಲ್ಲ. ಹೀಗೆ ಕಡಿಮೆ ಸಂಖ್ಯೆಯ ಮತಗಳನ್ನು ಪಡೆದವನು ಶಾಸಕನಾಗಿ ವಿಧಾನಸೌಧದ ಮೆಟ್ಟಿಲೇರುತ್ತಾನೆ. ಬಹುಮತ ಎಂದರೆ 50 ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆಯಬೇಕಾಗುತ್ತದೆ. ಹಾಗೆಂದು ಐವತ್ತೊಂದು ಸಾವಿರ ಬರುವ ಎಲ್ಲ ಅಭ್ಯರ್ಥಿಗಳನ್ನು ಸೇರಿಸಿ "ಸಮ್ಮಿಶ್ರ ಶಾಸಕ"ರೆಂದು ಘೋಷಿಸಲು ಸಾಧ್ಯವೆ! ಹೀಗಿರುವಾಗ 224 ಸಂಖ್ಯಾಬಲದ ಸದನದಲ್ಲಿ ಹೆಚ್ಚಿನ ಸಂಖ್ಯೆಯುಳ್ಳ ಶಾಸಕರ ಬಲವಿರುವ ಏಕೈಕ ದೊಡ್ಡ ಪಕ್ಷಕ್ಕೆ (Single largest party) ಸರಕಾರ ರಚಿಸಲು ಅವಕಾಶ ಕೊಡಬಾರದು? ಬಹುಮತ ಸಾಬೀತು ಮಾಡಲು ಕೇಳುವುದರಿಂದಲೇ ಕೊಳಕು ರಾಜಕೀಯ ಮತ್ತು ಕುದುರೆ ವ್ಯಾಪಾರಕ್ಕೆ ಅವಕಾಶವಾಗಿರುವುದು. ಬಹುಮತ ಇರಬೇಕೆಂಬ ನಿಯಮವೇ ಇಲ್ಲದಿದ್ದರೆ ಕುದುರೆಗಳು ತಂತಮ್ಮ ಲಾಯಗಳಲ್ಲಿಯೇ ಇರುತ್ತವೆ! "Loyalty' ಬದಲಿಸಿ ಲಾಯದಿಂದ ಲಾಯಕ್ಕೆ ಲಾಗ ಹಾಕುವುದಿಲ್ಲ! ಯಜಮಾನನಿಗೆ ಒದೆಯುವುದೂ ಇಲ್ಲ! ನೆಮ್ಮದಿಯಿಂದ ಕುಳಿತು ಸವಾರಿ ಮಾಡಿ ರಾಜ್ಯಭಾರ ಮಾಡಬಹುದು.
ಅಲ್ಪಮತದ ಪಕ್ಷಕ್ಕೆ ಬಹುಮತ ಸಾಬೀತು ಪಡಿಸುವ ಹಂಗಿಲ್ಲದೆ ಸರಕಾರವನ್ನು ರಚಿಸಲು ಅವಕಾಶ ಮಾಡಿಕೊಟ್ಟರೆ ಆಡಳಿತ ನಡೆಸುವುದಾದರೂ ಹೇಗೆ ಸಾಧ್ಯ? ಇದು ಯಕ್ಷ ಪ್ರಶ್ನೆಯೇನೂ ಅಲ್ಲ. ರಾಷ್ಟ್ರಪತಿ ಆಡಳಿತವಿದ್ದಾಗ ಕೇವಲ ಒಬ್ಬರೇ ಒಬ್ಬರು ರಾಜ್ಯಪಾಲರು ಆಡಳಿತ ಯಂತ್ರದ ಸಹಾಯದಿಂದ ಇಡೀ ರಾಜ್ಯದ ಆಡಳಿತ ನಡೆಸಲು ಸಾಧ್ಯವಾಗುವುದಾದರೆ ನೂರಾರು ಶಾಸಕರಿರುವ ಏಕೈಕ ದೊಡ್ಡ ಪಕ್ಷದಿಂದ ರಾಜ್ಯಭಾರ ಮಾಡಲು ಏಕೆ ಸಾಧ್ಯವಿಲ್ಲ? ಅಲ್ಪಮತದ ಸರಕಾರಕ್ಕೆ ಬಹುಮತವಿಲ್ಲದೆ ಸದನದಲ್ಲಿ ಮಸೂದೆಗಳು ಪಾಸಾಗುವುದಾದರೂ ಹೇಗೆ? ಎಂಬುದು ಮುಂದಿನ ಪ್ರಶ್ನೆ. ವಿರೋಧ ಪಕ್ಷದವರು ಯಾವುದೇ ಮಸೂದೆಯನ್ನು ಏಕೆ ವಿರೋಧಿಸುತ್ತಾರೆ? ನೌಕರರಿಗೆ ವೇತನ ನೀಡುವುದನ್ನು ವಿರೋಧಿಸಲು ಸಾಧ್ಯವೇ? ದಿನನಿತ್ಯದ ಸಾಮಾನ್ಯ ಕೊಡುಕೊಳ್ಳುವಿಕೆಗಳನ್ನು ವಿರೋಧಿಸಲು ಸಾಧ್ಯವೇ? ಜನರ ಹಿತದೃಷ್ಟಿಯಿಂದ ಒಂದು ಒಳ್ಳೆಯ ಮಸೂದೆಯನ್ನು ಅಲ್ಪಮತದ ಸರಕಾರ ಮಂಡಿಸಿದಾಗ ವಿರೋಧ ಪಕ್ಷದವರು ಬೆಂಬಲಿಸದೆ ಬಿದ್ದುಹೋದರೆ ಜನರೇ ವಿರೋಧ ಪಕ್ಷದಲ್ಲಿ ಕುಳಿತವರಿಗೆ ಛೀಮಾರಿ ಹಾಕುತ್ತಾರೆ. ಅಂತಹ ಸಂದರ್ಭಗಳಲ್ಲಿ ಸರಕಾರವು ಅದನ್ನು ಜನರ ಮುಂದೆ ಕೊಂಡೊಯ್ಯಬೇಕು. ಜನಪ್ರತಿನಿಧಿಗಳು ರಾಜಕೀಯ ಕಾರಣಕ್ಕಾಗಿ ವಿರೋಧಿಸಿದರೂ ಜನರು ಸರಕಾರದ ಬೆನ್ನಿಗೆ ನಿಲ್ಲುತ್ತಾರೆ. ಜನಾಭಿಪ್ರಾಯ ಸಂಗ್ರಹಿಸಲು ಮತದಾನ ಏರ್ಪಡಿಸಿ ಜನತೆಯ ತೀರ್ಪನ್ನು ಜಾರಿಗೊಳಿಸಬೇಕು. ಇದರಿಂದ ಅನಗತ್ಯವಾದ ಜನಪ್ರಿಯ ಯೋಜನೆಗಳಿಗೆ ಕತ್ತರಿ ಬೀಳುತ್ತದೆ!
ಸಂವಿಧಾನ ಶಿಲ್ಪಿಗಳು ನಮ್ಮ ದೇಶದ ಜನತಂತ್ರ ಇಷ್ಟು ಅಧೋಗತಿಗೆ ಇಳಿಯುತ್ತದೆ ಎಂದು ಖಂಡಿತಾ ಭಾವಿಸಿರಲಿಲ್ಲ. ದೇಶದ ಹಿತದೃಷ್ಟಿಯಿಂದ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನದ 370ನೆಯ ವಿಧಿಯನ್ನು ರದ್ದುಗೊಳಿಸಿದಂತೆ ಬಹುಮತ ಸಾಬೀತುಗೊಳಿಸುವ ವಿಧಿಯನ್ನು ರದ್ದುಗೊಳಿಸಿ ಸರಕಾರ ರಚನೆ ಮಾಡಲು ಏಕೈಕ ದೊಡ್ಡ ಪಕ್ಷಕ್ಕೆ (Single largest party) ಅವಕಾಶ ಮಾಡಿಕೊಟ್ಟರೆ ಇವತ್ತಿನ ಕೊಳಕು ರಾಜಕೀಯ ಕೊನೆಗೊಂಡೀತು. ಈ ಬಗ್ಗೆ ಜನಾದೇಶ ಪಡೆಯಲು ಒಂದು "National Mandate" ಕರೆಯುವುದು ಒಳಿತು.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 5.12.2019