ವಿಶ್ವವಿದ್ಯಾನಿಲಯಗಳು ಹಿಂಸಾಚಾರದ ತಾಣವಾಗದಿರಲಿ

  •  
  •  
  •  
  •  
  •    Views  

ದೊಂದು ಕರಾಳ ರಾತ್ರಿ, ಎಪತ್ತರ ದಶಕದಲ್ಲಿ ಕಾಶಿಯಲ್ಲಿ ಓದುತ್ತಿದ್ದಾಗ ನಡೆದ ಒಂದು ದುರ್ಘಟನೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಚುನಾವಣೆ ನಡೆಯಲು ಏರ್ಪಾಡಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ವಿದ್ಯಾರ್ಥಿಗಳ ಮಧ್ಯೆ ಭಾರಿ ಪೈಪೋಟಿ ನಡೆದು ಚುನಾವಣೆಯ ಕಾವು ಏರುತ್ತಾ ಸಾಗಿತ್ತು. ಚುನಾವಣೆ ಮುಗಿದ ರಾತ್ರಿ ಚುನಾವಣಾ ಕಣದಲ್ಲಿ ಸೋತಿದ್ದ ಸ್ಪರ್ಧಿಗಳು ಗೆದ್ದವನ ವಿರುದ್ಧ ರೊಚ್ಚಿನಿಂದ ಕುದಿಯತೊಡಗಿದ್ದರು. ರಾತ್ರಿ ವಿದ್ಯಾರ್ಥಿನಿಲಯಗಳಲ್ಲಿ ಎಲ್ಲರೂ ನಿದ್ದೆಗೆ ಜಾರಿದ್ದ ಸರುವೊತ್ತಿನ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕೋಲಾಹಲ. ಹೊಸದಾಗಿ ಆಯ್ಕೆಯಾದ ಅಧ್ಯಕ್ಷನ ಕೊಲೆ ನಡುರಾತ್ರಿಯಲ್ಲಿ ನಡೆದು ಹೋಗಿತ್ತು! ಈ ಭೀಕರ ಹತ್ಯೆಯ ಸುದ್ದಿ ಕಾಳ್ಗಿಚ್ಚಿನಂತೆ ಕ್ಷಣಾರ್ಧದಲ್ಲಿ ಎಲ್ಲೆಡೆ ಹಬ್ಬಿತು. ಕೈಲಿ ಲಾಠಿ ಹಿಡಿದ ಪೊಲೀಸರು ವಿದ್ಯಾರ್ಥಿಗಳ ಕೊಠಡಿಗಳಿಗೆ ನುಗ್ಗಿ ಸಿಕ್ಕ ಸಿಕ್ಕವರನ್ನು ಕಿಂಚಿತ್ತೂ ಕರುಣೆಯಿಲ್ಲದೆ ಥಳಿಸತೊಡಗಿದರು. ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡತೊಡಗಿದರು. ನಾವು ವಾಸವಾಗಿದ್ದ ಬಿರ್ಲಾ ಹಾಸ್ಟೆಲ್ ಮತ್ತು ಪಕ್ಕದ ಬ್ರೋಚಾ ಹಾಸ್ಟೆಲ್ ಕೊಠಡಿಯ ಬಾಗಿಲುಗಳಂತೂ ರಸ್ತೆಯ ಕಡೆಗೇ ಇದ್ದವು. ಸುಲಭವಾಗಿ ಪೊಲೀಸರು ಒಳಗೆ ನುಗ್ಗಬಹುದಿತ್ತು, ಅಂತಹ ಸಂದರ್ಭದಲ್ಲಿ ನಮ್ಮ ನೆರವಿಗೆ ಬಂದವರೆಂದರೆ ನಮ್ಮ ಪ್ರಾಧ್ಯಾಪಕರಾದ ಪ್ರೊಫೆಸರ್ ಡಾ. ಪದ್ಮಾ ಮಿಶ್ರಾರವರು. ವಿಷಯ ತಿಳಿದು ರಾತ್ರೋರಾತ್ರಿ ನಮ್ಮನ್ನು ತಮ್ಮ ಮನೆಗೆ ಕರೆಸಿಕೊಂಡು ಆಶ್ರಯ ನೀಡಿದರು. ಹಾಗಾಗಿ ಲಾಠಿಯ ಸವಿ ಸ್ವಲ್ಪದರಲ್ಲಿ ತಪ್ಪಿತು! ಏಟು ತಿಂದವರು ಬಹುತೇಕ ಅಮಾಯಕರೇ ಆಗಿದ್ದರು. ಅನಿರ್ದಿಷ್ಟಕಾಲಶಾಲಾ/ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಸಶಸ್ತ್ರ ಪೊಲೀಸರು ತಿಂಗಳುಗಟ್ಟಲೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬೀಡುಬಿಟ್ಟಿದ್ದರು.

ಈ ದುರ್ಘಟನೆ ನಮಗೆ ನೆನಪಾಗಲು ಕಾರಣ ಮೊನ್ನೆ ಮೊನ್ನೆ ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಕೋಲಾಹಲ. ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತಿತರ ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಪರಕೀಯರು ನಮ್ಮಲ್ಲಿಗೆ ಬಂದು ನೆಲೆಸಿದರೆ ನಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡಿದಂತಾಗುತ್ತದೆಯೆಂಬ ಭೀತಿ, ಜಾಮಿಯಾ ಮತ್ತು ಅಲಿಘರ್ ವಿಶ್ವವಿದ್ಯಾನಿಲಯಗಳಲ್ಲಿ ನಡೆದ ಪ್ರತಿಭಟನೆ ಇತರೆ ಸಮುದಾಯದ ನಿರಾಶ್ರಿತರಿಗೆ ಅವಕಾಶ ಮಾಡಿಕೊಟ್ಟು ಮುಸ್ಲಿಂ ನಿರಾಶ್ರಿತರಿಗೆ ಕೊಡದೇ ಇದ್ದರೆ ತಾರತಮ್ಯ ಮಾಡಿದಂತಾಗುತ್ತದೆ ಎಂಬ ಸ್ವಧರ್ಮೀಯರ ಮೇಲಿನ ಕಾಳಜಿ, ಭಾರತದ ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಈ ಕಾಯಿದೆಯಿಂದ ಧಕ್ಕೆ ಉಂಟಾಗುತ್ತದೆಯೆಂದು ಕೆಲವರ ವಾದ. ಭಾರತೀಯ ನಾಗರಿಕರಾಗಿರುವ ಮುಸ್ಲಿಮರಿಗೆ ಇದರಿಂದ ಯಾವುದೇ ತೊಂದರೆಯಿಲ್ಲವೆಂಬುದು ಇನ್ನೊಂದು ವಾದ. ಒಟ್ಟಾರೆ ಭಾರತ ಸ್ವತಂತ್ರಗೊಂಡಾಗ ಧರ್ಮದ ಆಧಾರದ ಮೇಲೆ ಇಬ್ಬಾಗವಾಗಿದ್ದೇ ಈ ಎಲ್ಲಾ ಅನಾಹುತಗಳಿಗೆ ಕಾರಣ. ಜಾಮಿಯಾ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸಾಚಾರ ರೂಪ ತಳೆದು ದೆಹಲಿಯ ಪೊಲೀಸರು ಮತ್ತು ಅವರ ಮಧ್ಯೆ ನಡೆದ ಸಂಘರ್ಷದಲ್ಲಿ ದಿಲ್ಲಿ ಧಗಧಗಿಸಿ ಉರಿಯುವಂತಾಯಿತು.

ಜಾಮಿಯಾ ವಿದ್ಯಾರ್ಥಿಗಳ ಮೇಲೆ ನಡೆದ ಪೋಲೀಸರ ದೌರ್ಜನ್ಯ ಖಂಡಿಸಿ ದಿಲ್ಲಿ ಮತ್ತು ದೇಶಾದ್ಯಂತ ಇನ್ನಿತರೆ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಸಹಾನುಭೂತಿ ಪ್ರತಿಭಟನೆ ನಡೆಸಿ ಶಾಲಾ/ಕಾಲೇಜು ಮತ್ತು ಸರಕಾರಿ ವಾಹನಗಳಿಗೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಇಡುತ್ತಿದ್ದಾರೆ. ಇಂದಿನ ಪ್ರಜಾಪ್ರಭುತ್ವದಲ್ಲಿ ಈ ಪ್ರತಿಭಟನೆಗಳೇ ಹೀಗೆ, ಯಾವುದರ ವಿರುದ್ಧ ಪ್ರತಿಭಟನೆ ಮೊದಲು ಆರಂಭವಾಗಿರುತ್ತದೋ ಅದು ಗೌಣವಾಗುತ್ತದೆ. ಪ್ರತಿಭಟನಾಕಾರರು ಶಾಂತಿಯುತವಾಗಿ ಪ್ರತಿಭಟನೆ ನಡೆಸದೆ ಹಿಂಸಾಚಾರಕ್ಕಿಳಿದಾಗ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಕೈಗೊಳ್ಳುವ ಶಿಸ್ತಿನ ಕ್ರಮವೇ ಪ್ರಧಾನವಾಗಿ ಪ್ರತಿಭಟನಾಕಾರರ ಕೆಂಗಣ್ಣಿಗೆ ಗುರಿಯಾಗುತ್ತದೆ. ಎಷ್ಟೋ ವೇಳೆ ಇಂತಹ ಪ್ರತಿಭಟನೆಗಳು ರಾಜಕೀಯ ಪ್ರೇರೇಪಿತವಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಹಿಂಸಾಚಾರ ನಡೆಸದೇ ಇದ್ದರೆ ಆಡಳಿತಗಾರರು ಸಹ ಕಿವಿಗೆ ಹಾಕಿಕೊಳ್ಳುವುದಿಲ್ಲವೆಂಬುದೂ ಅಷ್ಟೇ ಸತ್ಯ. ಇಂತಹ ಸಂದರ್ಭಗಳಲ್ಲಿ ನೇಮಕಗೊಂಡ ವಿಚಾರಣಾ ಸಮಿತಿಗಳು ತನಿಖೆ ನಡೆಸಿ ಸಲ್ಲಿಸಿದ ವರದಿಗಳು ಕಾಲಾನಂತರ ಮೂಲೆ ಸೇರುತ್ತವೆ.

ವಿದ್ಯಾರ್ಜನೆಯ ತಾಣವಾಗಬೇಕಾದ ವಿವಿಗಳಲ್ಲಿ ಈ ರೀತಿಯ ಹಿಂಸಾಚಾರ, ಕಲಹ, ಕೋಲಾಹಲ ಉಂಟಾಗುವುದು ಎಳ್ಳಷ್ಟೂ ತರವಲ್ಲ. ಇಂತಹ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವುದು ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕಿಂತ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗುತ್ತದೆ. ವರ್ಷದುದ್ದಕ್ಕೂ ನಡೆಯುವ ಮುಷ್ಕರಗಳು, ಹರತಾಳಗಳು ಮತ್ತು ಪ್ರತಿಭಟನೆಗಳಿಂದ ತರಗತಿಗಳು ನಡೆಯದೆ ಅಧ್ಯಯನ ಅಧ್ಯಾಪನಗಳು ಅರ್ಥವನ್ನೇ ಕಳೆದುಕೊಳ್ಳುತ್ತಿವೆ. ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ ಇಂತಹ ಪ್ರಸಂಗಗಳು ಮೇಲಿಂದ ಮೇಲೆ ನಡೆಯುವುದನ್ನು ಗಮನಿಸಿ ನಮ್ಮ ಪ್ರೊಫೆಸರ್ ಆಗಿದ್ದ ಡಾ. ಸಿದ್ಧೇಶ್ವರ ಭಟ್ಟಾಚಾರ್ಯರು ಅಸಹನೆಯಿಂದ ಹೇಳಿದ ಮಾತೆಂದರೆ: “It would be better to give a list of working days rather than that of holidays in this university” (ಈ ವಿಶ್ವವಿದ್ಯಾನಿಲಯದಲ್ಲಿ ರಜಾ ದಿನಗಳ ಪಟ್ಟಿಯನ್ನು ಕೊಡುವುದಕ್ಕಿಂತ ಕೆಲಸ ಮಾಡುವ ದಿನಗಳ ಪಟ್ಟಿಯನ್ನು ಕೊಡುವುದು ಒಳಿತು).

ಇತ್ತೀಚೆಗೆ ಈ ವಿಶ್ವವಿದ್ಯಾನಿಲಯದಲ್ಲಿ ನಡೆದ ಒಂದು ಘಟನೆ ಅನೇಕರಿಗೆ ಗೊತ್ತಿರಲಾರದು. ವಿಜ್ಞಾನ, ಕಲೆ, ಸಂಗೀತ, ವೈದ್ಯಕೀಯ, ತಾಂತ್ರಿಕ ಇತ್ಯಾದಿ ಎಲ್ಲ ಪ್ರಮುಖ ವಿಷಯಗಳಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಈ ವಿಶ್ವವಿದ್ಯಾನಿಲಯದಲ್ಲಿ ವಿಶೇಷವಾಗಿ ಅಧ್ಯಯನ ಮಾಡಲು ಪಾಶ್ಚಾತ್ಯ ದೇಶದ ವಿದ್ಯಾರ್ಥಿಗಳೂ ಬರುತ್ತಾರೆ. ಇಲ್ಲಿ ಸಂಸ್ಕೃತವನ್ನು ಪ್ರಾಚೀನ ಮತ್ತು ಆಧುನಿಕ ಪದ್ಧತಿ ಎರಡೂ ರೀತಿಗಳಲ್ಲಿ ಪಾಠ ಮಾಡಲಾಗುತ್ತದೆ. ಸಂಸ್ಕೃತ ವಿದ್ಯಾ ಧರ್ಮ ವಿಜ್ಞಾನ ಸಂಕಾಯದಲ್ಲಿ ಗುರುಕುಲ ಪದ್ಧತಿಯಲ್ಲಿ ಸಂಸ್ಕೃತದ ಅಧ್ಯಯನ ನಡೆದರೆ, ನಾವು ಓದಿದ Dept of Sanskrit (ಸಂಸ್ಕೃತ ವಿಭಾಗ)ದಲ್ಲಿ ಆಧುನಿಕ ಪದ್ಧತಿಯಲ್ಲಿ ಅಧ್ಯಯನ ಮತ್ತು ಸಂಶೋಧನೆ ನಡೆಯುತ್ತದೆ. ಇತ್ತೀಚೆಗೆ ಸಂಸ್ಕೃತ ವಿದ್ಯಾ ಧರ್ಮವಿಜ್ಞಾನ ಸಂಕಾಯಕ್ಕೆ ಮುಸ್ಲಿಂ ಪ್ರೊಫೆಸರರೊಬ್ಬರ ನೇಮಕವಾಯಿತು. ಪ್ರೊ ಫಿರೋಜ್ ಖಾನ್ ಅವರ ಸಂಸ್ಕೃತ ಪಾಂಡಿತ್ಯದ ಬಗೆಗೆ ಒಡಕು ಸೊಲ್ಲುಗಳಿಲ್ಲದಿದ್ದರೂ, ಹಿಂದೂ ಸಂಪ್ರದಾಯ ಮತ್ತು ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸುವ ಹಿಂದೂ ಪ್ರಾಧ್ಯಾಪಕರು ಮಾತ್ರವೇ ಕೋರ್ಸಿನ ಭಾಗವಾಗಿ ಬೋಧನೆ ಮಾಡಲು ಅವಕಾಶವಿರಬೇಕು. ಬೇರೆಯವರಿಗೆ ಇರಬಾರದು. ಈ ನೇಮಕಾತಿಯು ವಿವಿಯ ಸ್ಥಾಪಕರಾದ ಮದನ ಮೋಹನ ಮಾಲವೀಯರ ಆಶಯಕ್ಕೆ ವಿರುದ್ಧವಾದುದು ಎಂದು ವಿದ್ಯಾರ್ಥಿಗಳ ಒಂದು ಗುಂಪು ಮುಷ್ಕರ ಆರಂಭಿಸಿತು. ಯುಜಿಸಿ ನಿಯಮಾವಳಿಗಳಂತೆ ಅರ್ಹತೆಯ ಆಧಾರದ ಮೇಲೆ ಡಾ. ಫಿರೋಜ್ ಖಾನರನ್ನು ಸಂಸ್ಕೃತ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿದೆ, ತೆಗೆದು ಹಾಕಲು ಸಾಧ್ಯವಿಲ್ಲ ಎಂದು ವಿಶ್ವವಿದ್ಯಾನಿಲಯದ ಆಡಳಿತಮಂಡಳಿಯ ಪ್ರತಿಪಾದನೆ. ಕೆಲವು ವಿದ್ಯಾರ್ಥಿಗಳು ಡಾ.ಫಿರೋಜ್ ಖಾನ್ರವರ ಪರವಾಗಿ ನಿಂತು ಮುಷ್ಕರ ನಿರತ ವಿದ್ಯಾರ್ಥಿಗಳನ್ನು ವಿರೋಧಿಸಿದರು. ಖಾನ್ ಅವರನ್ನು ವಜಾಗೊಳಿಸಿದರೆ ಅದೊಂದು ತಪ್ಪು ಮೇಲ್ಪಂಕ್ತಿಯಾದೀತು. ವಾರಣಾಸಿಯು ಕವಿಗಳ, ಸಂತರ ಮತ್ತು ಸಂಗೀತ ವಿದ್ವಾಂಸರ ನೆಲೆವೀಡು. ತುಳಸೀದಾಸ್ ಮತ್ತು ಬಿಸ್ಮಿಲ್ಲಾಖಾನ್ ಅಂತಹವರ ವಾರಣಾಸಿಯ ಸಮನ್ವಯ ಸಂಸ್ಕೃತಿಯನ್ನು ಅಳಿಸಲು ನಾವು ಬಿಡುವುದಿಲ್ಲ ಎಂದು ಸಮರ್ಥಿಸಿದರು. ಫ್ರೊ. ಖಾನ್ ಅವರನ್ನು ವ್ಯಕ್ತಿಯಾಗಿ ಗೌರವಿಸುತ್ತೇವೆ. ಅವರು ಸಂಸ್ಕೃತವನ್ನು ಬೋಧಿಸಲು ನಮ್ಮ ತಕರಾರೇನೂ ಇಲ್ಲ. ಆದರೆ ಧಾರ್ಮಿಕ ಶ್ರದ್ದೆಯ ವಿಷಯ ಬಂದಾಗ ಹಿಂದೂ ಅಲ್ಲದ ಅವರು ನಮ್ಮ ಸಂಪ್ರದಾಯಗಳನ್ನು ಮತ್ತು ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸದ ಕಾರಣ ಅವರ ನೇಮಕಾತಿಯನ್ನು ವಿರೋಧಿಸುತ್ತೇವೆ, ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಿಡಿದ ಪಟ್ಟು ಸಡಿಲಿಸಲಿಲ್ಲ. ನಾನು ಬಾಲ್ಯದಿಂದಲೂ ಸಂಸ್ಕೃತವನ್ನೇ ಕಲಿತಿದ್ದೇನೆ. ಕುರಾನಿಗಿಂತ ಹೆಚ್ಚಾಗಿ ಸಂಸ್ಕೃತ ಗ್ರಂಥಗಳನ್ನೇ ಓದುತ್ತಾ ಬಂದಿದ್ದೇನೆ. ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ನನ್ನನ್ನು ವಿರೋಧಿಸುವುದು ಸರಿಯಲ್ಲ, ಕ್ರಮೇಣ ವಿದ್ಯಾರ್ಥಿಗಳು ಸರಿದಾರಿಗೆ ಬರುತ್ತಾರೆ, ಎಂದು ಪ್ರೊ. ಖಾನ್ ಪ್ರತಿಕ್ರಿಯೆ. ಏತನ್ಮಧ್ಯೆ ಅವರನ್ನು ನಾವು ಓದುತ್ತಿದ್ದ ಸಂಸ್ಕೃತ ವಿಭಾಗಕ್ಕೆ ವಿವಿ ಆಡಳಿತ ಮಂಡಳಿಯು ವರ್ಗಾವಣೆ ಮಾಡಿದ್ದಂತು ಈಗ ವಿರೋಧ ತಣ್ಣಗಾಗಿದೆ.

BHU ಎಂದೇ ಪ್ರಸಿದ್ಧಿ ಪಡೆದ ಈ ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಿದ ಪಂಡಿತ್ ಮದನ ಮೋಹನ ಮಾಳವೀಯರು (1861-1946) ಹುಟ್ಟಿದ್ದು ಅಲಹಾಬಾದಿನಲ್ಲಿ, ಕವಿ-ಸಾಹಿತಿ, ಪತ್ರಕರ್ತರಾಗಿದ್ದ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ಗಾಂಧೀಜಿಯ ಗೌವರಕ್ಕೆ ಪಾತ್ರರಾಗಿದ್ದರು.  ಈಗ ದೇಶದೆಲ್ಲೆಡೆ ಜನಜನಿತವಾಗಿರುವ ಸತ್ಯಮೇವ ಜಯತೇ ಎಂಬ ಘೋಷವಾಕ್ಯ ಜನಪ್ರಿಯತೆ ಪಡೆದದ್ದೇ ಮಾಳವೀಯರಿಂದ, ದೇಶದ ಪ್ರಪ್ರಥಮ ಮತ್ತು ಏಷ್ಯಾ ಖಂಡದಲ್ಲೇ ಬೃಹತ್ತಾದ, 12000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದ ಬನಾರಸ್ ಹಿಂದೂ ಯೂನಿವರ್ಸಿಟಿಯನ್ನು ಅವರು ಸ್ಥಾಪಿಸಿದರು (1916). ಅದರ ಸ್ಥಾಪನೆಯ ಸಂದರ್ಭದಲ್ಲಿ ಅಗತ್ಯವಾದ ಸಂಪನ್ಮೂಲ ಕ್ರೋಢೀಕರಣಕ್ಕೆ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ದೇಶದಾದ್ಯಂತ ಅನೇಕ ರಾಜ ಮಹಾರಾಜರನ್ನು ಸಂಪರ್ಕಿಸಿ ನಿಧಿ ಸಂಗ್ರಹಣೆ ಮಾಡಿದರು.

ಒಮ್ಮೆ ಹೈದರಾಬಾದಿಗೂ ಹೋಗಿ ನಿಜಾಮರನ್ನು ಭೇಟಿಯಾಗಿ ದಾನ ಬೇಡಿದ ಬಗ್ಗೆ ದಂತಕಥೆ ಇದೆ. ನಿಜಾಮರು ಹಣವನ್ನು ಕೊಡದೆ ತಮ್ಮ ಕಾಲಲ್ಲಿದ್ದ ಬಹುಮೂಲ್ಯ ಚಪ್ಪಲಿಯನ್ನು ಕೊಟ್ಟರಂತೆ. ಮಾಳವೀಯರು ಕಿಂಚಿತ್ತೂ ಬೇಸರಗೊಳ್ಳದೆ ಚಪ್ಪಲಿಯನ್ನು ಎತ್ತಿಕೊಂಡು ಹೊರನಡೆದರು. ಈ ಘಟನೆಯನ್ನು ಯಾರ ಬಳಿಯು ಅವರು ಹೇಳಲಿಲ್ಲ. ಬದಲಾಗಿ ತಮ್ಮ ಬಳಿ ಇರುವ ನಿಜಾಮರ ಚಪ್ಪಲಿಯನ್ನು ನಗರದ ಆಯಕಟ್ಟಿನ ಸ್ಥಳದಲ್ಲಿ ನಿಗದಿತ ದಿನ ತಾವು ಮಾರಾಟ ಮಾಡಲಿರುವುದಾಗಿಯೂ ಹರಾಜಿನಲ್ಲಿ ಹೆಚ್ಚಿನ ಬೆಲೆಗೆ ಕೂಗುವವರಿಗೆ ಅದು ದೊರೆಯುತ್ತದೆಂದೂ ಪ್ರಕಟಿಸಿದರು. ಸೆಲೆಬ್ರಿಟಿಗಳು ಧರಿಸಿದ ವಸ್ತುಗಳನ್ನು ಎಷ್ಟೇ ದುಬಾರಿಯಾದರೂ ಕೊಂಡು ಸಂಗ್ರಹಿಸಿ ಖಯಾಲಿಯ ಜನರು ಈಗಲೂ ಇದ್ದಾರೆ! ಅವರ ಖಯಾಲಿಯನ್ನು ನಗದುಗೊಳಿಸಿಕೊಂಡು ಹಣ ಸಂಗ್ರಹಿಸುವುದು ಮಾಳವೀಯರ ತಂತ್ರವಾಗಿತ್ತು! ಚಪ್ಪಲಿಯ ಹರಾಜಿನ ವಿಷಯ ನಿಜಾಮರ ಕಿವಿಗೂ ಬಿತ್ತು. ಚಪ್ಪಲಿ ಕಡಿಮೆ ದರಕ್ಕೆ ಮಾರಾಟವಾದರೆ ತಮಗೆ ಅವಮಾನವಾಗುವುದೆಂದು ನಿಜಾಮರು ಭಾವಿಸಿದರು. ಹರಾಜಿನ ದಿನ ತಮ್ಮ ಆಪ್ತ ಸಹಾಯಕನನ್ನು ಕಳುಹಿಸಿ ಚಪ್ಪಲಿಯನ್ನು ಅತಿ ಹೆಚ್ಚಿನ ದರಕ್ಕೆ ಹರಾಜಿನಲ್ಲಿ ತಾವೇ ಕೊಂಡುಕೊಂಡರಂತೆ! ಹೈದರಬಾದ್ ನಿಜಾಮರು ತಮಗೆ ಅರಿವಿಲ್ಲದಂತೆಯೇ ಅತಿ ಹೆಚ್ಚು ಹಣವನ್ನು ದಾನವಾಗಿ ನೀಡಿದಂತಾಯಿತು. ಮಾಳವೀಯರ ತಂತ್ರ ಫಲಿಸಿತು! 

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 19.12.2019