ಅಂತಃಕರಣವು ಸದ್ಭಾವನೆಗಳ ಕಣಜ : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ಯಲಹಂಕ 25-11-2022 : “ಅಂಗುಷ್ಠಮಾತ್ರಾಃ ಪುರುಷೊಂsತರಾತ್ಮಾ ಸದಾ ಜನಾನಾಂ ಹೃದಯೆಸನ್ನಿವಿಷ್ಟಃ” ಪರಮಾತ್ಮನು ಸರ್ವ ಜೀವಿಗಳ ಹೃದಯದಲ್ಲಿ ಹೆಬ್ಬೆರಳಿನ ಗಾತ್ರವಾಗಿ ಯಾವಾಗಲೂ ಅಡಗಿ ಕುಳಿತಿರುತ್ತಾನೆ. ದೇವಾಲಯದ ಗರ್ಭಗುಡಿಗಳು ಹೇಗೆ ಸ್ವಚ್ಛ ಹಾಗೂ ಮೃದುವಾಗಿ ಹೂಗಳಿಂದ ಸಿಂಗರಿಸಲ್ಪಟ್ಟಿರುತ್ತವೋ ಹಾಗೆ ನಮ್ಮ ಮನಸ್ಸು ಸದಾಲೋಚನೆ, ಸದ್ಭಾವನೆಗಳಿಂದ ತುಂಬಿಕೊಂಡಿದ್ದರೆ ಮಾತ್ರ ಆ ಶುದ್ಧ ಹೃದಯಮಂದಿರದಲ್ಲಿ ದೇವರು ವಾಸವಾಗಿರುತ್ತಾನೆ ಎಂದು ಬಸವಣ್ಣನವರ “ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ” ವಚನದ ಮೂಲಕ ಯುವಜನತೆಗೆ ಶುದ್ಧ ಚಿಂತನೆಗಳ ಹಾಗೂ ಪರಿಶುದ್ಧ ನಡೆಗಳ ಅವಶ್ಯಕತೆಯನ್ನು ಪರಮ ಪೂಜ್ಯ ಶ್ರೀ ಮದುಜ್ಜಯನಿಸದ್ಧರ್ಮ ಸಿಂಹಾಸನಾಧೀಶ್ವರರಾದ ಶ್ರೀ ತರಳಬಾಳು ಜಗದ್ಗುರು ಶ್ರೀ ಶ್ರೀ 1108 ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಯಲಹಂಕದ ಶ್ರೀ ತರಳಬಾಳು ಜಗದ್ಗುರು ಸಂಸ್ಥಾನಮಠದ ಆವರಣದಲ್ಲಿ ನಡೆದ ಶ್ರೀ ವೀರಭದ್ರಸ್ವಾಮಿಯ ಕಾರ್ತಿಕೋತ್ಸವ ಹಾಗೂ ಸರ್ವಶರಣರ ಸಮ್ಮೇಳನ ಕಾರ್ಯಕ್ರಮದಲ್ಲಿ ಭಕ್ತಸಮೂಹಕ್ಕೆ ಕರೆ ನೀಡಿದರು.


ನಮ್ಮಅಂತಃಕರಣ ಯಾವ ರೀತಿಯಲ್ಲಿ ಆಲೋಚಿಸುತ್ತದೆ ಎಂಬುದನ್ನು ಉದಾಹರಣೆ ಸಹಿತ ಸಾಕ್ಷೀಕರಿಸಿದ ಪೂಜ್ಯರು, 2020ರ ಪೆಬ್ರವರಿ ತಿಂಗಳಲ್ಲಿ ಹಳೆಬೀಡಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯಂದು ಮೃತ ಯೋಧರ ಕುಟುಂಬಗಳಿಗೆ ಸಾಂತ್ವನ ಹಾಗೂ ಧನಸಹಾಯ ಮಾಡಿದ ಧನ್ಯತಾ ಭಾವದ ಕ್ಷಣಗಳನ್ನು ಸ್ಮರಿಸಿಕೊಂಡರು. ಭೂಮಿಯೆಂಬುದೇ ಅದ್ಭುತ ಸೃಷ್ಟಿಗಳಲ್ಲೊಂದು, ಬೇರಾವ ಗ್ರಹಗಳಲ್ಲಿಲ್ಲದ ಅಭೂತಪೂರ್ವ ಸೌಲಭ್ಯಗಳನ್ನು ವಿಶೇಷವಾಗಿ ಪಂಚಭೂತಗಳನ್ನು ಕೊಡುಗೆಯಾಗಿ ಪಡೆದಿರುವ ಭೂಮಿ ಮಾನವನ ಪರಿಪೂರ್ಣ ಬದುಕಿನ ಕಲ್ಪವೃಕ್ಷ. ಭಗವಂತ ಕೊಡಮಾಡಿದ ಈ ಅವಕಾಶವನ್ನು ನಾವೆಲ್ಲರೂ ಮಾತೃಹೃದಯೀ ಮನೋಭಾವನೆ, ವರ್ತನೆಗಳೊಂದಿಗೆ ಬದುಕಿನ ಸಾರ್ಥಕತೆಯನ್ನು ಹೊಂದಬೇಕೆಂದು ಈ ಸಂದರ್ಭದಲ್ಲಿ ತಿಳಿಯಪಡಿಸಿದರು.     

ಮನುಷ್ಯ ತುರ್ತಿನ ಜೀವನದಲ್ಲಿ ಯಂತ್ರವಾಗುತ್ತಾ ಹೋಗುತ್ತಿದ್ದಾನೆ, ಮಠದ ಸ್ವಾಮೀಜಿಗಳ ಪಾದಗಳಿಗೆ ಶಿರಬಾಗುವುದಕ್ಕಿಂತ ಬಹುಮುಖ್ಯವಾದ ಗುರುಭಕ್ತಿ ಅವರ ಉಪದೇಶಗಳನ್ನು ಶಿರಸಾವಹಿಸಿ ಪಾಲಿಸುವುದು ಎಂದು ಪೂಜ್ಯರು ಇದೇ ಸಂದರ್ಭದಲ್ಲಿ ಭಕ್ತಸಮೂಹಕ್ಕೆ ತಿಳಿಯಪಡಿಸಿದರು.

ಲಿಂ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ತತ್ತ್ವಾದರ್ಶಗಳನ್ನು ಸದಾ ಸ್ಮರಿಸುವ ಪೂಜ್ಯರು, ಹಿರಿಯ ಶ್ರೀಗಳ ಆಶಯದಂತೆ ವಚನಸಾಹಿತ್ಯವನ್ನು ಮನೆ-ಮನಗಳಿಗೆ ಮುಟ್ಟಿಸಲು ತಮ್ಮ ಅವಿರತ ಶ್ರಮದಿಂದ ಸಿದ್ಧಪಡಿಸಲಾದ ಸುಮಾರು 22,000 ವಚನಗಳನ್ನೊಳಗೊಂಡ “ಶಿವಶರಣರ ವಚನ ಸಂಪುಟ” ಮೊಬೈಲ್ ಆ್ಯಪ್ ನ ಬಗ್ಗೆ ತಮ್ಮ ಆಶೀರ್ವಚನದಲ್ಲಿ ಮಾಹಿತಿ ನೀಡುತ್ತಾ ನೆರೆದಿದ್ದ ಭಕ್ತಸಮೂಹಕ್ಕೆ ವಚನ ಸಂಪುಟ ವೆಬ್ ಪೇಜ್ ಅನ್ನು ಸ್ಥಳದಲ್ಲಿಯೇ ವೀಕ್ಷಿಸಲು ಮಾರ್ಗದರ್ಶನ ನೀಡಿದರು.

ತರಳಬಾಳು ಶಾಖಾಮಠ, ಯಲಹಂಕ. ಶ್ರೀ ಮಠವು ಸುಮಾರು 150 ಕ್ಕೂ ಹೆಚ್ಚಿನ ವರ್ಷಗಳ ಪುರಾತನ ಕಟ್ಟಡವಾಗಿದ್ದು, ಮಠದ ಕಂಬಗಳು ಗೆದ್ದಲು ಹಿಡಿದು ಶಿಥಿಲಗೊಂಡಿರುತ್ತವೆ. ಅದನ್ನು ರಿಪೇರಿ ಮಾಡಸದಷ್ಟು ಹಳೆಯದಾಗಿದೆ. ಹಳೇ ಮಠದ ಹೊರ ವಿನ್ಯಾಸದಂತೆಯೇ ಮಠದ ಹಿಂಭಾಗದಲ್ಲಿರುವ ವಿಶಾಲ ಜಾಗದಲ್ಲಿ ಯಕಹಂಕ ಶ್ರೀ ಮಠದ ಹೊಸ ಕಟ್ಟಡ ನಿರ್ಮಿಸಲು ಹಾಗೂ ಲಿಂ. ಶ್ರೀ ಶಿವನಂಜುಂಡೇಶ್ವರ ದೇಶೀಕೇಂದ್ರ ಸ್ವಾಮಿಗಳವರ ಗದ್ದುಗೆ ಹಳೇ ಮಠದ ಒಳಭಾಗದಲ್ಲೇ ಇದ್ದು ಅದಕ್ಕೆ ಹೊಸ ಮಂಟಪದ ರೂಪ ಕೊಡುವಂತೆ ಬೇಲೂರಿನ ವೀರಶೈವ ಸಮಾಜದ ಅಧ್ಯಕ್ಷರಾದ ಶರಣ ಎಚ್.ಆರ್.ಕಾಂತರಾಜ್ ರವರ ನೇತೃತ್ವದ ಸಕಲ ಬೇಲೂರಿನ ಭಕ್ತಮಂಡಳಿಗೆ ಹೊಸಮಠ ನಿರ್ಮಾಣದ ಮುಂದಾಳತ್ವ ವಹಿಸಿಕೊಂಡು ಮುಂದಿನ ಕಾರ್ತಿಕ ಮಾಸದೊಳಗೆ ಹೊಸ ಮಠ ಕಟ್ಟಡದ ನಿರ್ಮಾಣ ಕಾರ್ಯಕ್ರಮ ಪೂರ್ಣಗೊಳಿಸಬೇಕೆಂದು ಆದೇಶ ನೀಡಿದರು.

ಶರಣ ನಾಗರಾಜ್ ಕಲ್ಲಕಟ್ಟೆ, ಪ್ರಾಂಶುಪಾಲರು. ತಮ್ಮ ಉಪನ್ಯಾಸದಲ್ಲಿ ಬೇಗಕೆಡುವ ಹಾಲಿನೊಳಗಣ ಬಹಳ ದಿನಗಳವರೆಗೆ ಕೆಡದಂತಿರುವ ತುಪ್ಪ ಅಡಗಿರುತ್ತದೆ, ಹಾಲಿಗೆ ನೀಡಿದ ಸಂಸ್ಕಾರದಿಂದ ಮೊಸರಾಗಿ, ಮೊಸರಿಗೆ ನೀಡಿದ ಸಂಸ್ಕಾರದಿಂದ ಮಜ್ಜಿಗೆ-ಬೆಣ್ಣೆ-ತುಪ್ಪವಾಗುವಂತೆ, ಬದುಕು ಕೆಡದಂತಿರಲು ಅವಶ್ಯವಾದ ಸಂಸ್ಕಾರದ ಮಹತ್ವವನ್ನು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಪಂಚಾಕ್ಷರಯ್ಯನವರು ಸ್ವಾಗತಿಸಿದರು, ಅಧ್ಯಕ್ಷತೆಯನ್ನು ಎಚ್,ಆರ್,ಕಾಂತರಾಜ್ ರವರು ವಹಿಸಿಕೊಂಡಿದ್ದರಲ್ಲದೆ, ಅಶೋಕ್,ಸಿ,ಕೆ, ಗೀತಾಹರೀಶ್, ನಂಜುಂಡಪ್ಪ, ಕೊರಟೀಕೆರೆ ಪ್ರಕಾಶ್, ರಾಜಶೇಖರ್, ಕೊರಟೀಕೆರೆ ರಾಜಣ್ಣ, ರಾಜಶೇಖರ್.ಬಿ.ಎಸ್. ಚೇತನ್ ಗೆಂಡೇಹಳ್ಳಿ. ಸಂತೋಷ್ ಕೆಂಚಾಂಬಾ, ಸಿದ್ದೇಶ್ ನಾಗೇಂದ್ರ, ಹುಲ್ಲಳ್ಳಿ ಸುರೇಶ್, ನಿರಂಜನ್, ಜಗದೀಶ್, ಇತ್ಯಾದಿ ಮುಖಂಡರು ಹಾಜರಿದ್ದರು. ಶಿಕ್ಷಕ ವೀರೇಶ್.ಎ.ಎಸ್. ಶರಣು ಸಮರ್ಪಿದರಲ್ಲದೆ, ಭುವನೇಶ್ ಎಚ್.ಜಿ. ಕಾರ್ಯಕ್ರಮವನ್ನು ನಿರೂಪಿಸಿದರು.