ಅಂಜಿ ಬರುವ ಜೀವಕ್ಕೆ ಕಣ್ಣೀರೊರೆಸುವ ಶ್ರೀ ತರಳಬಾಳು ಮಹಾಗುರು.!

  •  
  •  
  •  
  •  
  •    Views  

ಪ್ರಪಂಚದಲ್ಲಿ ಹಲವರು ಉತ್ತಮರಿದ್ದಾರೆ. ಆದರೆ ನಿಜವಾಗಿಯೂ ಶ್ರೇಷ್ಠರೆನಿಸಿ ಕೊಳ್ಳಬಲ್ಲವರು ಕೆಲವರು ಮಾತ್ರ. ಅವರು ಜೀವನದ ಕ್ಷುಲ್ಲಕತೆಗಳನ್ನು ಮತ್ತು ವ್ಯಕ್ತಿತ್ವದ ದೌರ್ಬಲ್ಯಗಳನ್ನು ಮೀರಿ ಇರುತ್ತಾರೆ; ಸಂಪೂರ್ಣ ಮಾನವ ಜನಾಂಗದೊಂದಿಗೆ ಅವರಿಗೆ ಬಾಂಧವ್ಯವಿರುತ್ತದೆ; ಮನುಕುಲಕ್ಕೆ  ಉಪಕೃತವಾಗುವುದೆ  ಅವರ ತ್ರೀಕರಣ ಪೂರ್ವಕ ಉದ್ದೇಶವಾಗಿರುತ್ತದೆ. ಅಂತಹ ಅಪರೂಪದಲ್ಲಿ ಅನುರೂಪವಾದ ಪೂಜ್ಯ ಶ್ರೇಷ್ಠರಲ್ಲಿ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನಿತ್ಯ ಸ್ಮರಣೀಯರಾಗಿದ್ದಾರೆ. 

ಅವರ ಪರಿಶುದ್ಧ ಜೀವನ ಕ್ರಮ, ಬೌದ್ಧಿಕ ದೃಷ್ಟಿಕೋನ ಮತ್ತು ಕಾರ್ಯ ದಕ್ಷತೆಯ ಹಿಂದೆ ಅತ್ಯಂತ ಕರುಣಾಮಯವಾದ ಪ್ರೀತಿ ತುಂಬಿದ ಹೃದಯ  ಭಕ್ತರ ಜೀವನ  ಉನ್ನತಿಯ ನಿಷ್ಠೆಯು ಜಾತಿ-ಕಾಲ-ದೇಶಗಳಿಂದ ಅಬಾಧಿತವಾದ ಸ್ಥಿರವಾದ, ದೃಢವಾದ ಬಾಂಧವ್ಯವಾಗಿದೆ. ಪರಮಪೂಜ್ಯರು ಸೋಗಿನ ಬೆಕ್ಕುಗಳ ವಂಚನೆಯನ್ನು ಬಯಲಿಗೆಳೆದು ಭಕ್ತರ ಭಕ್ತಿಗೆ ಗೌರವ ತಂದು ಜನರ ವಿವೇಕಕ್ಕೆ ಕವಿದಿದ್ದ ಮಂಕನ್ನು ತೀಡಿದ್ದು ಇವರ ಜನಭಕ್ತಿಯ ಹಿತಚಿಂತನೆಗೆ ಹಿಡಿದ ಕನ್ನಡಿಯಾಗಿದೆ. 

ಶ್ರೀಗಳವರ  ವ್ಯಕ್ತಿತ್ವ ಹಾಗೂ ಅದ್ಭುತ ಸಾಧನೆಯ ಫಲವಾಗಿ ಅವರು ಮತಾತೀತವಾಗಿ, ಜಾತ್ಯಾತೀತವಾಗಿ ಸಕಲರ ಮನ್ನಣೆಗೆ ನಿತ್ಯ ಪೂಜಿತರಾದವರು.

ಅಂಜಿ ಬರುವ ಜೀವಕ್ಕೆ ಗಂಜಿ ಎರೆವ ಗುರುವಾಗಿ, ಉಪಕೃತರಾಗಿ ಅನ್ಯರ ಹೊಗಳುವ ಬೀದಿ ಕುನ್ನಿಗಳ ಕೃತಘ್ನರ ಸೊಲ್ಲಿಗೆ ಸಿಲುಕದೆ, ತಮ್ಮ ಚಿಂತನೆಗಳ ಪಕ್ವತೆಯಲ್ಲಿ ಜನಕಾರ‍್ಯ ಪೂರ್ಣತೆಗಳನ್ನು ಸಾಧಿಸುವುದರ ಜೊತೆಗೆ ಆಧ್ಯಾತ್ಮ ಮತ್ತು ವಚನಗಳ ಸಮ್ಮಿಲನದ ಆದರ್ಶ ತತ್ವಗಳ ಜೊತೆಗೆ ಕಾಯಕದ ಬಿದ್ದಂತೆ ತೋರಿ  ಜನರ ಬಾಳಿಗೆ ಬೆಳಕಾದ, ಸಾತ್ವಿಕ ಸಂತಶ್ರೇಷ್ಠರು ಶ್ರೀ ತರಳಬಾಳು ಜಗದ್ಗುರುಗಳವರು.

ತಮ್ಮ ಸಿದ್ಧಾಂತ ಮತ್ತು ಜನ ಕಾರ‍್ಯಕೃತಿಗಳ ಮೂಲಕ ಜನರಿಗೆ ಆಧ್ಯಾತ್ಮದೊಂದಿಗೆ ಕಾಯಕದ ಬೆಳಕನ್ನು ತೋರಿದ ವಿದ್ವತ್ತು ಕಾರ‍್ಯಸಿದ್ಧಾಂತದಲ್ಲಿ ಅನಾವರಗೊಂಡಿರುವ ಪ್ರಾತ್ಯಕ್ಷಿಕೆಯಂತಿದೆ. ದೇವರಲ್ಲಿ ಭಕ್ತಿ, ಗುರುಹಿರಿಯರಲ್ಲಿ ಗೌರವ, ಸಮಾಜಮುಖಿಯಾದ ಜೀವನ, ಸಕಲರ ಕಲ್ಯಾಣವನ್ನು ಬಯಸುವ ಉದಾತ್ತ ದೃಷ್ಟಿ, ಸದಾ ನಲಿವಿನ ಬದುಕಿನತ್ತ ದೃಷ್ಟಿ, ಮೊದಲಾದವುಗಳನ್ನು ಬೋಧಿಸುವ ಅಪೂರ್ವತೆಯ ಆಗ್ರಶ್ರೇಣಿಯಲ್ಲಿ  ಇದ್ದಾರೆ. 

ಪೂಜ್ಯರದು ತಲಸ್ಪರ್ಶಿಯಾದ ಪಾಂಡಿತ್ಯ ವಿಮರ್ಶಕರನ್ನು ದಿಗ್ಭ್ರಮೆ ಗೊಳಿಸುವ ದಿವ್ಯಶಕ್ತಿ ನೈತಿಕ ಮೌಲ್ಯಗಳ ಸಿದ್ಧಾಂತದಲ್ಲಿ ವೀರನಿಷ್ಠೆಯವರು, ಪ್ರಮಾಣ ಪ್ರಮೇಯಗಳ ಪರಿಜ್ಞಾನ ಶಿವಸಂಪನ್ನರು. ಆಡಿದ ಮಾತೆಲ್ಲ ಗ್ರಂಥವಾಗುವ ಧೀಮಂತರು, ವಿಮತೀಯ ವಿದ್ವಾಂಸರನ್ನೂ ಪುರಸ್ಕರಿಸುವ ಉದಾರಿಗಳು. ಸಾಮಾನ್ಯ ಭಕ್ತರಿಗೆ  ಅನುಗ್ರಹ ಮರ‍್ಗರ‍್ಶನ ಮಾಡುವ  ತೇಜೋರೂಪದ  ಕಾಮಧೇನು.

ಕಾರುಣ್ಯ ಸಿಂಧುಗಳಾದ  ಶ್ರೀ ಜಗದ್ಗುರುಗಳವರು ಕಠಿಣ ಆಶ್ರಮಧರ್ಮ ಪರಿಪಾಲಕರು ತಮ್ಮ ಪೂರ್ವಾಶ್ರಮದ  ಮಾತಾ-ಪಿತೃಗಳು ಲಿಂಗೈಕ್ಯರಾದಾಗ ಅಂತಿಮ  ಸಂಸ್ಕಾರ ಕಾರ‍್ಯದಲ್ಲಿ ಭಾಗವಹಿಸಲು ಸಮಸ್ತ ಭಕ್ತವೃಂದವು ಒಕ್ಕರೂಲಿನ ಆಗ್ರಹಕ್ಕೆ ಮಣಿಯದೆ ನಿಜಸನ್ಯಾಸ ಧರ್ಮ ಪಾಲಿಸಿ, ಮನದಲ್ಲಿಯೇ ಶ್ರದ್ಧಾಂಜಲಿ ಸ್ಮರಿಸಿದ ನಿಜ ಯೋಗಿಗಳು. ಕಳೆದ ನಾಲ್ಕು ದಶಕಗಳಲ್ಲಿ ಭಕ್ತರ ಮನೆಯಲ್ಲಿ ಆಕಸ್ಮಿಕ ಮರಣವಾದಾಗ ಭಕ್ತರ ಕುಟುಂಬವು ಬೃಹನ್ಮಠಕ್ಕೆ ಸೇವೆ ಸಲ್ಲಿಸಿರುವುದನ್ನು ಮರೆಯದೆ ಎಷ್ಟೇ ದೂರ ಪ್ರಯಾಣ, ಒತ್ತಡದ ಕರ‍್ಯಕ್ರಮಗಳಲ್ಲಿ ಇದ್ದರೂ ಸಮಾಜ ಬಾಂಧವರ   ನೋವಿಗೆ  ಸೈರಣೆಯ ಸಾಂತ್ವಾನ ಹೇಳಲು ದಯಮಾಡಿಸುವ ಶ್ರೀ ಜಗದ್ಗುರುಗಳವರ ಮಾತೃ ಹೃದಯದಲ್ಲಿರುವ ಶಿಷ್ಯ ವಾತ್ಸಲ್ಯದಲ್ಲಿ ಮಾನವೀಯತೆಯ ಪರಾಕಾಷ್ಠತೆಯು ಕಾಣಸಿಗುತ್ತದೆ.

ಭಕ್ತರ ಮನೆಯ ಸುಖದುಃಖಗಳನ್ನು ತಮ್ಮ ಕಷ್ಟ ಸುಖಗಳೆಂದು ಅಂತರ್ಗತವಾಗಿಸಿಕೊಂಡಿರುವ ಶ್ರೀ ಜಗದ್ಗುರುಗಳವರು ಸಾವು ಸಂಭವಿಸಿದ ಸಹಸ್ರಾರು ಮನೆಗಳಿಗೆ ಧಾವಿಸಿ ಸಂತೈಸಿದ್ದಾರೆ. ತಮ್ಮ ಬಿಡುವಿಲ್ಲದ ಕಾರ್ಯದೊತ್ತಡದ  ನಡುವೆಯೂ ಶ್ರೀ ಜಗದ್ಗುರುಗಳವರ ಸದ್ದಿಲ್ಲದ ಸಾಂತ್ವನದ ಸೈರಣೆಯು ಸಾವಿನ ಮನೆಗೆ ಹೊಸಬೆಳಕಿನ ಕಿರಣ ತಂದಿದೆ.ಕಳೆದ ತಿಂಗಳು ಎಲ್ಲರೂ ದೀಪಾವಳಿಯ ಮುನ್ನಾದಿನ ಹಬ್ಬದ ಸಂಭ್ರಮದಿ ಆಚರಿಸುತ್ತಾ, ಸಮೃದ್ಧಿ ಮತ್ತು ಸಂಪತ್ತನ್ನು ಸ್ವಾಗತಿಸಲು ಜನರು ತಮ್ಮ ಮನೆಗಳನ್ನು ಹೂವುಗಳು, ದೀಪಗಳು ಮತ್ತು ಆಕಾಶಬುಟ್ಟಿಗಳಿಂದ ಅಲಂಕರಿಸುತ್ತಿರುವಾಗ ದೂರದ ಚೆನ್ನೈ ನಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರು ಮೊಕ್ಕಾಂನಲ್ಲಿದ್ದಾಗ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಸಾಸ್ವಿಹಳ್ಳಿಯ ಹರಪನಹಳ್ಳಿ ತಾಲ್ಲೂಕಿನ ಸಾಧು ಸದ್ಧರ್ಮ ಸಮಾಜದ ಹೆಚ್. ಕೆ ಚನ್ನಬಸವನಗೌಡ್ರು ಲಿಂಗೈಕ್ಯರಾದ ಸುದ್ದಿ ತಿಳಿದು ತಕ್ಷಣವೇ ಸಾಸ್ವೇಹಳ್ಳಿಗೆ ದಯಮಾಡಿಸಿ ಶ್ರದ್ಧಾಂಜಲಿ ಸಮರ್ಪಿಸಿ ಕುಟುಂಬ ಧೈರ್ಯ ತುಂಬಿದರು.

ಮೊನ್ನೆ ಹೊನ್ನಾಳಿಯ ಮಾಜಿ ಶಾಸಕರಾದ ದಿವಂಗತ  ಡಿ.ಜಿ.ಬಸವನಗೌಡರ ಧರ್ಮಪತ್ನಿಯಾದ ಶ್ರೀಮತಿ ಇಂದಿರಮ್ಮರವರು ಅನಾರೋಗ್ಯದಿಂದ ಅಗಲಿದಾಗ ದೂರದ ಕಾರ‍್ಯಕ್ರಮದಲ್ಲಿದ್ದರು ಮೃತರ ಸಗೃಹಕ್ಕೆ ಆಗಮಿಸಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 19ನೆ ಜಗದ್ಗುರುಗಳವರಾದ ಶ್ರೀ ಗುರುಶಾಂತ ರಾಜದೇಶಿಕೇಂದ್ರ ಮಹಾಸ್ವಾಮಿಗಳ ಕಾಲದಿಂದಲೂ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ  ದೊಡ್ಡಮನೆ ಕುಟುಂಬವು ಮಠಕ್ಕೆ ಸಲ್ಲಿಸಿದ ಅನುಪಮ ಸೇವೆಗೆ ಗೌರವೆಂಬಂತೆ ದುಃಖದಲ್ಲಿ ಭಾಗಿಯಾಗಿ ಸಾಂತ್ವಾನದ ಜೊತೆಗೆ ಅವರ ಕುಟುಂಬಕ್ಕೆ ಸ್ಪೂರ್ತಿಯ ನುಡಿಗಳನ್ನು ಹಂಚಿಕೊಂಡರು, ಇತ್ತೀಚೆಗೆ ಲಿಂಗೈಕ್ಯರಾದ ಬೆಂಗಳೂರಿನ  ಎಂ.ಬಿ.ತಿಪ್ಪಣ್ಣ,ದಾನಿಹಳ್ಳಿ. ಶಾಲೆಯ ಸ್ಥಳೀಯ ಸಲಹಾ ಸಮಿತಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಜಿ.ಪರಮೇಶ್ವರಪ್ಪ, ಚಿಕ್ಕಜಾಜೂರು ಶಾಲೆಯ ದ್ವಿತೀಯ ದರ್ಜೆ ಸಹಾಯಕ ಜಿ.ಎಂ.ರುದ್ರಯ್ಯ, ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ದ್ವಿತೀಯ ದರ್ಜೆ ಸಹಾಯಕರಾದ ಶರಣ ಎನ್.ಡಿ.ರಾಜಶೇಖರ್, ಉಕ್ರೇನ್ ನಲ್ಲಿ ಮಡಿದ ಹಲಗೇರಿಯ ನವೀನ್, ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷರೂ ರಾಜ್ಯಸಭೆಯ ಮಾಜಿ ಸದಸ್ಯರೂ ಖ್ಯಾತ ನ್ಯಾಯವಾದಿಗಳೂ ಸಮಾಜ ಸೇವಕರಾದ ಶರಣ ಕೆ.ಆರ್.ಜಯದೇವಪ್ಪ,ಹಾಸನ ಜಿಲ್ಲೆ ಜಾವಗಲ್ ಸಮೀಪದ ಸಿಂದಿಗೆರೆ ಮಲ್ಲಮ್ಮ ಶೇಖರೇಗೌಡ, ಹೊನ್ನಾಳಿಯ ಕೆ.ಕೆರೇಗೌಡಪ್ಪ,  ದಾವಣಗೆರೆಯ ಪ್ರಸಿದ್ಧ ವೈದ್ಯರಾದ ಡಾ.ಆಲೂರು ಮಂಜುನಾಥ್ ರವರ ಮಾತೃಶ್ರೀ ಶರಣೆ ಸುನಂದಮ್ಮ,ಶಿವಮೊಗ್ಗದ ಸಾಂಸ್ಕೃತಿಕ ರಾಯಭಾರಿ ಮೋಹನ್ ಭಾರದ್ವಾಜ್, ಡಾ.ಪಂಚಾಕ್ಷರಪ್ಪನವರು ಶಿವಮೊಗ್ಗದ ಹೆಚ್.ಪಿ.ಸಿ.ಪ್ರಕಾಶ್, ಕೊಳಹಾಳಿನ ಶರಣಪ್ಪ ಸೇರಿದಂತೆ ಅನೇಕ ಗಣ್ಯರು ಸಾಮಾನ್ಯರು ಇಹಲೋಕದ ಯಾತ್ರೆ ಮುಗಿಸಿದ ಕಷ್ಟದ ಸಂದರ್ಭದಲ್ಲಿ ನೋವಿನಲ್ಲಿ ಜೊತೆಗಿದ್ದು,ಸಂತಸದ ಸಮಯದಲ್ಲಿ ಚಪ್ಪಾಳೆ ತಟ್ಟುವ ಹತ್ತು ಬೆರಳಿಗಿಂತ, ದುಃಖದ ಸಮಯದಲ್ಲಿ ಕಣ್ಣೀರು ಒರೆಸುವ ಒಂದು ಬೆರಳು ಶ್ರೇಷ್ಠವಾದದ್ದು ಎಂಬುದನ್ನು ಶ್ರೀ ಜಗದ್ಗುರುಗಳವರು ಸಾಕ್ಷೀಕರಿಸಿದ್ದಾರೆ.

 -ರೂಪಾ ಬಿದರಕೆರೆ
ಜಗಳೂರು ತಾಲ್ಲೂಕು