ಶ್ರೀ ತರಳಬಾಳು ಜಗದ್ಗುರುಗಳವರ ಕೃಪಾಶೀರ್ವಾದ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು
ಕೊಟ್ಟೂರು ಮತ್ತು ಸಾಸ್ವೇಹಳ್ಳಿ ಏತನೀರಾವರಿ ಯೋಜನೆಗಳ ಸಾಕಾರಕ್ಕೆ ಶ್ರೀ ತರಳಬಾಳು ಜಗದ್ಗುರುಗಳವರ ಆಗ್ರಹ
--------------------------
ಬೆಂಗಳೂರು ದಿನಾಂಕ 28-11-2022: ಬೆಂಗಳೂರಿನ ರವೀಂದ್ರನಾಥ ಟ್ಯಾಗೋರ್ ನಗರದಲ್ಲಿರುವ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ನ.28ರ ಸೋಮವಾರ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಶರಣ ಬಸವರಾಜ ಬೊಮ್ಮಾಯಿಯವರು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾಶೀರ್ವಾದ ಪಡೆದರು.
ಮಾನ್ಯ ಮುಖ್ಯಮಂತ್ರಿಗಳು ಶ್ರೀ ಜಗದ್ಗುರುಗಳವರಿಗೆ ಪುಷ್ಪಹಾರ ಸಮರ್ಪಿಸಿ ಆಶೀರ್ವಾದ ಪಡೆದರು. ಮುಖ್ಯಮಂತ್ರಿಗಳಿಗ ಶ್ರೀ ಜಗದ್ಗುರುಗಳವರು ಶಾಲು,ಹಾರದೊಂದಿಗೆ ಅಭಿನಂದಿಸಿದರು.
ಶ್ರೀ ಜಗದ್ಗುರುಗಳವರ ನೇತೃತ್ವದಲ್ಲಿ ಸಾಕಾರಗೊಂಡಿರುವ ಹತ್ತಾರು ಏತ ನೀರಾವರಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದರು. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಬಹು ನಿರೀಕ್ಷಿತ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯು ಫೆಬ್ರವರಿ ವೇಳೆಗೆ ಎಲ್ಲಾ ಕೆರೆಗಳಿಗೆ ಗಂಗಾವತರಣವಾಗುವಂತೆ ಅಂತಿಮ ಹಂತದ ಕಾರ್ಯಗಳ ಬಗ್ಗೆ ಸಂಬಂಧಪಟ್ಟವರಿಗೆ ಸೂಕ್ತಕ್ರಮ ವಹಿಸುವಂತೆ ಶ್ರೀ ಜಗದ್ಗುರುಗಳವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದರು.
ಜನವರಿ ಮತ್ತು ಫೆಬ್ರವರಿ-2023 ರಲ್ಲಿ ಕೊಟ್ಟೂರಿನಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ನಿಮಿತ್ತ ಆ ಭಾಗದ ಕೆರೆಗಳಿಗೆ ನೀರು ತುಂಬಿಸುವ ವಿಶೇಷ ಯೋಜನೆ ರೂಪಿಸಲಾಗಿದೆ. ಒಣ ಭೂಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕೊಟ್ಟೂರು ತಾಲ್ಲೂಕಿನ ಕೆರೆಗಳು ಸಮೃದ್ಧಿಯಾದರೆ ರೈತರ ಬಾಳು ಬೆಳಗಲಿದೆ. ಈ ಯೋಜನೆಯ ಅನುಷ್ಠಾನಕ್ಕೆ ಶೀಘ್ರ ಕ್ರಮ ವಹಿಸುವಂತೆ ಶ್ರೀ ಜಗದ್ಗುರುಗಳವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತರಳಬಾಳು ಕೇಂದ್ರದ ಕಾರ್ಯದರ್ಶಿ ಬಾತಿ ವಿಶ್ವನಾಥ್ ಹಾಗೂ ಚಂದ್ರಪ್ಪ ಅಧ್ಯಕ್ಷರು ಇವರುಗಳು ಹಾಜರಿದ್ದರು