ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಾದ ಪಡೆದ ನಿವೃತ್ತ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

  •  
  •  
  •  
  •  
  •    Views  

ಶ್ರೀ ಜಗದ್ಗುರುಗಳವರ ಸಮಾಜ ಮುಖಿ, ರೈತ ಮುಖಿ, ಕಾರ್ಯಗಳ ಯಶೋಗಾಥೆಯ ಮಾರ್ಗದರ್ಶನ ಕೋರಿದ ಭಾಸ್ಕರ್ ರಾವ್

----------------------------------------

ಬೆಂಗಳೂರು ದಿನಾಂಕ 30-11-2022: ಬೆಂಗಳೂರಿನ ರವೀಂದ್ರನಾಥ ಟ್ಯಾಗೋರ್ ನಗರದಲ್ಲಿರುವ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷರು ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ರವರು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಭೇಟಿ ಮಾಡಿ ಕೃಪಾಶೀರ್ವಾದ ಪಡೆದರು. ಶ್ರೀ ಜಗದ್ಗುರುಗಳವರು ಭಾಸ್ಕರ್ ರಾವ್ ರವರಿಗೆ ಹಾರ, ಶಾಲು ಹೊದಿಸಿ ಗೌರವಿಸಿದರು.

2011 ರ ಕೆ.ಎ.ಎಸ್ 362 ಅಭ್ಯರ್ಥಿಗಳ ಭವಿಷ್ಯವು ಅಧೋಗತಿ ತಲುಪಿದಾಗ, ಶ್ರೀ ಜಗದ್ಗುರುಗಳವರ ನಿರಂತರ ಶ್ರಮ, ಸೂಕ್ತ ಮಾರ್ಗದರ್ಶನದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಮಂಡಲದ  ಉಭಯ ಸದನಗಳಲ್ಲಿ ಆಡಳಿತ ಮತ್ತು ಪ್ರತಿ ಪಕ್ಷಗಳು ಬೆಂಬಲಿಸಿ ವಿಶೇಷ ವಿಧೇಯಕ ದೊಂದಿಗೆ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿದ ಸ್ತುತ್ಯಾರ್ಹ ಕಾರ್ಯವು ಈ ವರ್ಷದ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದೆ  ಎಂದು  ಭಾಸ್ಕರ್ ರಾವ್ ಸ್ಮರಿಸಿದರು.

ಶ್ರೀ ಜಗದ್ಗುರುಗಳವರ ಸಮಾಜ ಮುಖಿ, ರೈತ ಮುಖಿ, ಕಾರ್ಯಗಳ ಯಶೋಗಾಥೆಯ ಬಗ್ಗೆ ಪೂಜ್ಯರೊಂದಿಗೆ ಮಾತನಾಡಿದ ಭಾಸ್ಕರ್ ರಾವ್ ಭ್ರಷ್ಟಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಜ್ಞಾನದ ರಾಜಧಾನಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಎಲ್ಲ ಸೌಲಭ್ಯಗಳು ದೊರೆಯಬೇಕು. ಜನರು ಪಾವತಿಸುವ ಶುಲ್ಕವು ಭ್ರಷ್ಟರ ಪಾಲಾಗುತ್ತಿದ್ದರೆ, ಎಷ್ಟೇ ಶುಲ್ಕ ಏರಿಕೆ ಮಾಡಿದರೂ ಸಂಸ್ಥೆಗಳು ನಷ್ಟದಲ್ಲೇ ಮುಂದುವರಿಯುತ್ತಿವೆ ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕವು ಪ್ರಗತಿಶೀಲ ರಾಜ್ಯವಾಗಿದೆ. ವಿಶ್ವಸಂಸ್ಥೆಯ ಪ್ರಗತಿಶೀಲ, ಸ್ವಚ್ಛ ಆಡಳಿತದ ಸರ್ಕಾರಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರು ಇಲ್ಲದಾಗಿದೆ. ಈ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡುವಂತೆ ಶ್ರೀ ಜಗದ್ಗುರುಗಳವರಲ್ಲಿ ಭಿನ್ನವಿಸಿಕೊಂಡರು.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ವಚನ ಸಾಹಿತ್ಯ ಪ್ರಚಾರಕ್ಕೆ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮಹತ್ಕಾರ್ಯ ನಡೆಯುತ್ತಿರುವುದು ನನಗೆ ಗೊತ್ತಿರುವ ಸಂಗತಿಯಾಗಿದೆ. ನಾಡಿನ ಶ್ರೇಷ್ಠ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವ ಸಮಾರಂಭವನ್ನು ನೆನಪಿಸಿಕೊಂಡ ಭಾಸ್ಕರ್ ರಾವ್ ಹಲವು ತರಳಬಾಳು ಹುಣ್ಣಿಮೆ ಮಹೋತ್ಸವಗಳಲ್ಲಿ ಬಂದೋಬಸ್ತ್ ಕಾರ್ಯ ನಿರ್ವಹಿಸಿದ್ದನ್ನು ಪೂಜ್ಯರೊಂದಿಗೆ ಹಂಚಿಕೊಂಡರು.

ಶ್ರೀ ಜಗದ್ಗುರುಗಳವರ ಸಂಕಲ್ಪದಂತೆ ಸಾಕಾರವಾದ ಬಸವಾದಿ ಶರಣರ 22000 ಕ್ಕೂ ಅಧಿಕ ವಚನಗಳ ಮೊಬೈಲ್ ಆಫ್, ಈ ವಚನಗಳು ಇತರೆ ಭಾಷೆಗಳಲ್ಲಿ ತರ್ಜುಮೆಗೊಂಡು ಜಗತ್ತಿನಾದ್ಯಾಂತ ಬಳಕೆಯಾಗುತ್ತಿರುವ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದರು.

ಭಾಸ್ಕರ್ ರಾವ್ ಅವರು 2019-20ರ ಅವಧಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ ಜಾರಿಗೆ ತಂದ  ಹಲವು ಸುಧಾರಣ ಕ್ರಮಗಳನ್ನು ಶ್ರೀ ಜಗದ್ಗುರುಗಳವರು ಶ್ಲಾಘಿಸಿದರು.