ಜೀನ್ಸ್ ಪ್ಯಾಂಟಿನಂತೆ ಜೀರ್ಣಗೊಂಡ 'ಕನ್ನಡ' ನುಡಿ!

  •  
  •  
  •  
  •  
  •    Views  

ವೆಂಬರ್ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಶ್ವಾದ್ಯಂತ ಆಚರಿಸಿ ಸಂಭ್ರಮಿಸುವ ಕನ್ನಡಿಗರ ಭಾಷಾಭಿಮಾನವನ್ನು ಅಣಕಿಸುವ ಮಾತೊಂದಿದೆ: ವಿದೇಶಗಳಲ್ಲಿ ಇಬ್ಬರು ತಮಿಳರು ಭೇಟಿಯಾದರೆ ತಮಿಳಿನಲ್ಲಿ ಮಾತನಾಡುತ್ತಾರೆ, ಇಬ್ಬರು ತೆಲುಗಿನವರು ಭೇಟಿಯಾದರೆ ತೆಲುಗಿನಲ್ಲಿ ಮಾತನಾಡುತ್ತಾರೆ, ಇಬ್ಬರು ಮಲೆಯಾಳಿಗಳು ಭೇಟಿಯಾದರೆ ಮಲಯಾಳಂನಲ್ಲಿ ಮಾತನಾಡಿ ಖುಷಿ ಪಡುತ್ತಾರೆ. ಆದರೆ ಇಬ್ಬರು ಕನ್ನಡಿಗರು ಭೇಟಿಯಾದರೆ ಇಂಗ್ಲೀಷಿನಲ್ಲಿ ಮಾತನಾಡಿ ಬೀಗುತ್ತಾರೆ. ಈ ಕಾರಣಕ್ಕಾಗಿಯೋ ಏನೋ “ನವೆಂಬರ್ ಕನ್ನಡಿಗರು” ಎಂಬ ಅಪಖ್ಯಾತಿ ಹರಡಿದೆ. “ನನ್ನ ಮಗ ಕಾನ್ವೆಂಟ್ನಲ್ಲಿ ಓದುತ್ತಿದ್ದಾನೆ; ಕನ್ನಡ ಬರುವುದಿಲ್ಲ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಮ್ಮಿ-ಡ್ಯಾಡಿಗಳು ಇದ್ದಾರೆ. ಬಹಳಷ್ಟು ಜನರಿಗೆ ಈಗ ಕನ್ನಡದ ಅಂಕಿ ಸಂಖ್ಯೆಗಳೇ ಗೊತ್ತಿಲ್ಲ. ಕನ್ನಡ ಭಾಷೆಯು ಆಡುಮಾತಿನಲ್ಲಿ ತನ್ನ ಮೂಲ ಸತ್ವವನ್ನು ಕಳೆದುಕೊಂಡು ಗ್ರಾಂಥಿಕ ಭಾಷೆಯಾಗುತ್ತಿದೆ. ಈಗಿನ ವಿದ್ಯಾವಂತ ಯುವಕ ಯುವತಿಯರ ನಾಲಿಗೆಯಲ್ಲಿ ಕನ್ನಡ ಕುಲಗೆಟ್ಟು “ಕಂಗ್ಲೀಷ್” ಆಗಿರುವುದು ವಿಷಾದನೀಯ ಸಂಗತಿ: “ಅರ್ಲಿ ಇನ್ ದ ಮಾರ್ನಿಂಗ್ ನಮ್ಮನೇಲಿ ಒನ್ ಷಾಕಿಂಗ್ ಇನ್ಸಿಡೆಂಟ್ ಆಯ್ತು ಸರ್. ನಮ್ ಫಾದರ್ಗೆ ಸಡನ್ ಹಾರ್ಟ್ ಅಟ್ಯಾಕು. ಇಮ್ಮಿಡಿಯೇಟ್ಟಾಗಿ ಟ್ಯಾಕ್ಸಿ ಮಾಡಿಕೊಂಡು ಹಾಸ್ಪಿಟಲಿಗೆ ಹೋದೆ. ಲಕ್ಕೀಲಿ ಎಡ್ಮಿಶನ್ ಆಯ್ತು. ಹಾರ್ಟ್ ಸ್ಪೆಷಲಿಸ್ಟ್ ಡಾಕ್ಟರ್ ಜಸ್ಟ್ ಬಂದಿದ್ರು, ಟ್ರೀಟ್ಮೆಂಟ್ ಸ್ಟಾರ್ಟ್ ಆಯ್ತು. ಈಗ ಸ್ವಲ್ಪ ಬೆಟರ್”. ಇದು ಇಂದಿನ ವಿದ್ಯಾವಂತರು ಕನ್ನಡದಲ್ಲಿ ಇಂಗ್ಲಿಷ್ ಪದಗಳನ್ನು ಬಳಸಿ ಮಾತನಾಡುವ ಪರಿ. 

ಇಂದು ಕನ್ನಡ ಭಾಷೆಯ ಸತ್ವ ಉಳಿದಿರುವುದು ಹಳ್ಳಿಯ ಜನರಿಂದ; ಅದು ಕೆಟ್ಟಿರುವುದು ಅರೆಬರೆ ಇಂಗ್ಲೀಷ್ ಬಲ್ಲ ವಿದ್ಯಾವಂತರಿಂದ. ಜಗತ್ತಿನ ಎಲ್ಲ ಭಾಷೆಗಳ ಮೇಲೆ ಇಂಗ್ಲೀಷ್ ತನ್ನ ಪ್ರಭಾವವನ್ನು ಬೀರಿರುವುದು ನಿಜ. ಆದರೆ ಭಾರತೀಯ ಭಾಷೆಗಳಲ್ಲಿ ಉಂಟಾಗಿರುವಷ್ಟು ಇಂಗ್ಲೀಷ್ ಶಬ್ದಗಳ ಕಲಬೆರಕೆ ಇಂಗ್ಲೆಂಡಿಗೆ ಹತ್ತಿರವಿರುವ ಐರೋಪ್ಯ ದೇಶಗಳ ಫ್ರೆಂಚ್, ಜರ್ಮನ್, ಇಟಾಲಿಯನ್ ಇತ್ಯಾದಿ ಭಾಷೆಗಳಲ್ಲಿ ಅಷ್ಟಾಗಿ ಆಗಿರುವುದಿಲ್ಲ. ಭಾಷೆ ನಿಂತ ನೀರಲ್ಲ; ಚಲನಶೀಲ. ನದಿಗೆ ಹಳ್ಳಕೊಳ್ಳಗಳು ಸೇರಿ ತುಂಬಿ ಹರಿದಂತೆ ಕಾಲಾನುಗತಿಯಲ್ಲಿ ಭಾಷೆ ಬೆಳೆಯುತ್ತಾ ಹೋಗುತ್ತದೆ ಎನ್ನುತ್ತಾರೆ ಭಾಷಾವಿಜ್ಞಾನಿಗಳು. ಹಾಗಾದರೆ ಬೆಳವಣಿಗೆಯ ಪರಿಭಾಷೆ ಏನು? ತನ್ನಲ್ಲಿರುವುದನ್ನು ಕಳೆದುಕೊ೦ಡು ಬೇರೆಯದನ್ನು ಸ್ವೀಕರಿಸುವುದು ಬೆಳವಣಿಗೆಯ ಲಕ್ಷಣವೇ ಅಥವಾ ತನ್ನಲ್ಲಿರುವುದನ್ನು ಉಳಿಸಿಕೊಂಡು ತನ್ನಲ್ಲಿಲ್ಲದಿರುವುದನ್ನು ಸ್ವೀಕರಿಸುವುದು ಬೆಳವಣಿಗೆಯ ಲಕ್ಷಣವೇ? ಮಳೆಗಾಲದಲ್ಲಿ ಹಳ್ಳಕೊಳ್ಳಗಳ ನೀರು ಹರಿದು ಮೂಲ ನದಿಯ ನೀರು ಎಷ್ಟೇ ಬಗ್ಗಡವಾದರೂ ನಂತರ ತಿಳಿಗೊಳ್ಳುತ್ತದೆ. ಆದರೆ ಇಂದು ವಿದ್ಯಾವಂತ ಯುವಕ ಯುವತಿಯರ ಬಾಯಲ್ಲಿ ಕೇಳಿಬರುವ ಕನ್ನಡದ ಸಂಭಾಷಣೆ ಹೆಚ್ಚು ಹೆಚ್ಚಾಗಿ ಬಗ್ಗಡವಾಗುತ್ತಲೇ ಹೋಗುತ್ತಿದೆ. ತಿಳಿಯಾಗುವ ಲಕ್ಷಣವೇ ಕಾಣಿಸುತ್ತಿಲ್ಲ. ಸ್ವಂತ ಭಾಷೆಯಲ್ಲಿರುವ ಪದಗಳನ್ನು ಮೂಲೆಗೆ ತಳ್ಳಿ ಬೇರೆ ಭಾಷೆಯ ಪದಗಳನ್ನು ಬಳಸುವುದು ಒಂದು ವಿಲಕ್ಷಣ ಬೆಳವಣಿಗೆ ಎನ್ನದೆ ಬೇರೆ ವಿಧಿಯಿಲ್ಲ. 

ತಿಂಗಳ ಹಿಂದೆ ಚೆನ್ನೈಗೆ ಹೋದಾಗ ಮದ್ರಾಸು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರೂ, 52 ವರ್ಷಗಳ ಹಿಂದೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ನಮ್ಮ ಆತ್ಮೀಯರೂ ಆಗಿದ್ದ ಡಾ. ರಾಮನಾಥನ್ ರವರೊಂದಿಗೆ ಸುದೀರ್ಘ ಸಂಭಾಷಣೆ ನಡೆಯಿತು. ತಮಿಳಿನ “ವಾಯ್” ಅಥವಾ ಕನ್ನಡದ “ಬಾಯಿ” ಎಂಬ ಶಬ್ದಕ್ಕೆ ಸಂಸ್ಕೃತದಲ್ಲಿ ಸ್ವತಂತ್ರವಾದ ಪದ ಇದೆಯೇ ಎಂಬ ಜಿಜ್ಞಾಸೆ ಮೂಡಿತು. “ಮುಖ” ಎಂಬ ಶಬ್ದವಿದ್ದರೂ ಅದು face ಮತ್ತು mouth ಎಂಬ ಎರಡೂ ಅರ್ಥಗಳನ್ನು ಕೊಡುತ್ತದೆ. ಮುಖದ ಭಾಗಗಳಾದ ಹಣೆ (ಲಲಾಟ), ಹುಬ್ಬು (ಭ್ರೂ), ಕಣ್ಣು (ನಯನ), ಕಿವಿ (ಕರ್ಣ), ಮೂಗು (ನಾಸಿಕಾ), ತುಟಿ (ಓಷ್ಠ), ಕೆನ್ನೆ (ಕಪೋಲ) ಮೊದಲಾದ ಶಬ್ದಗಳಂತೆ “ಬಾಯಿ”ಗೆ ಸಂಸ್ಕೃತದಲ್ಲಿ ಪ್ರತ್ಯೇಕ ಶಬ್ದವಿಲ್ಲವೇಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 

ಪ್ರಾಚೀನ ಕಾಲದಲ್ಲಿ ಸಂಸ್ಕೃತ ಶಬ್ದಗಳು ಕನ್ನಡದಲ್ಲಿ ಧಾರಾಳವಾಗಿ ಸೇರ್ಪಡೆಯಾದಂತೆ ಈಗ ಇಂಗ್ಲೀಷ್ ಪದಗಳು ಕನ್ನಡಕ್ಕೆ ಅಷ್ಟೇ ಅಲ್ಲ ಎಲ್ಲಾ ಭಾರತೀಯ ಭಾಷೆಗಳಲ್ಲಿ ಎಗ್ಗಿಲ್ಲದೆ ಸೇರ್ಪಡೆಯಾಗುತ್ತಿವೆ. ಹೀಗಾಗಿ ಕನ್ನಡ “ಕಂಗ್ಲೀಷ್” ಆದಂತೆ ತಮಿಳು, ತೆಲುಗು, ಮಲೆಯಾಳಂ, ಹಿಂದಿ ಮತ್ತಿತರ ಭಾರತೀಯ ಭಾಷೆಗಳೂ ಸಹ “ತಂಗ್ಲೀಷ್, ತೆಂಗ್ಲೀಷ್, ಮಂಗ್ಲೀಷ್, ಹಿಂಗ್ಲೀಷ್” ಭಾಷೆಗಳಾಗಿ ಪರಿವರ್ತನೆಗೊಂಡಿವೆ. ಇದರ ಮೂಲ ಬೇರುಗಳನ್ನು ಹುಡುಕುತ್ತಾ ಹೋದರೆ ಕನ್ನಡ ಸಾಹಿತ್ಯದ ಹಿರಿಯ ತಲೆಮಾರಿನ ದಿಗ್ಗಜರಲ್ಲಿ ಒಬ್ಬರಾದ ತೀ.ನಂ.ಶ್ರೀಯವರು “ನಂಟರು” ಎಂಬ ತಮ್ಮ ಪುಸ್ತಕದಲ್ಲಿ ಬರೆದ “ಕಾಸಿನ ಸಂಘ” ಎಂಬ ಲಲಿತ ಪ್ರಬಂಧ ನೆನಪಾಗುತ್ತದೆ. ಆ ಕಾಲದಲ್ಲಿಯೇ ವಿದ್ಯಾವಂತರ ದೈನಂದಿನ ಸಂಭಾಷಣೆಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಪದಗಳ ಕಲಬೆರಕೆಯಾಗಿತ್ತೆಂದು ತಿಳಿಯುತ್ತದೆ. 

“ಇತ್ತ ಕನ್ನಡವಲ್ಲ. ಅತ್ತ ಇಂಗ್ಲೀಷ್ ಅಲ್ಲ. ಇಂಗ್ಲೀಷಿನ ಪರಿಮಾಣವೇ ಹೆಚ್ಚು; ಹರುಕು ಬಟ್ಟೆಗೆ ತೇಪೆ ಹಾಕಿದಂತೆ ಅಲ್ಲೊಂದು ಇಲ್ಲೊಂದು ಕನ್ನಡ ಪದ ಅಥವಾ ಪ್ರತ್ಯಯ” ಎಂದು ತೀ.ನಂ.ಶ್ರೀ ವಿಡಂಬನೆ ಮಾಡಿದ್ದಾರೆ. ಅವರ ಈ ಮಾತಿನ ಎಳೆಯನ್ನು ಮುಂದುವರಿಸಿ ಹೇಳುವುದಾದರೆ ಕನ್ನಡ ಈಗ ಆಧುನಿಕ ಯುವಕ ಯುವತಿಯರು ಧರಿಸುವ ಜೀನ್ಸ್ ಪ್ಯಾಂಟಿನಂತೆ ಜೀರ್ಣಗೊಂಡಿದೆ! ಜಗಳವಾಡುವಾಗ ಪ್ಯಾಂಟು ಷರ್ಟು ಹರಿದು ಹೋಗುವುದು ಸಹಜ. ಆದರೆ ಹೆಚ್ಚಿನ ದುಡ್ಡು ಕೊಟ್ಟು ಹರುಕು ಜೀನ್ಸ್ ಪ್ಯಾಂಟನ್ನು ಖರೀದಿಸುವುದು ಆಧುನಿಕ ಫ್ಯಾಷನ್. ಇದನ್ನು ನೋಡಿದರೆ ಉಡುವ ಬಟ್ಟೆಯ ಮೇಲೆ ವ್ಯಾಮೋಹವಿಲ್ಲದ ವೀರವಿರಾಗಿಗಳಂತೆ ನಮ್ಮ ಯುವಕ-ಯುವತಿಯರು ಕಾಣಿಸುತ್ತಾರೆ! 

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬೋಧಿಸುತ್ತಿದ್ದ ಹಳೆಯ ತಲೆಮಾರಿನ ಪ್ರಾಧ್ಯಾಪಕರಲ್ಲಿ ಕನ್ನಡದ ಹುಚ್ಚು ಕನ್ನಡದ ಅಧ್ಯಾಪಕರಿಗಷ್ಟೇ ಸೀಮಿತವಾಗಿರಲಿಲ್ಲ. ಇಂಗ್ಲೀಷ್, ಸಂಸ್ಕೃತ, ತತ್ವಜ್ಞಾನ, ವಿಜ್ಞಾನ ವಿಷಯಗಳ ಯುವ ಅಧ್ಯಾಪಕರಿಗೂ ಕನ್ನಡದ ಹುಚ್ಚು ಇತ್ತು. ಅವರೆಲ್ಲರೂ ಸೇರಿ ಕನ್ನಡದಲ್ಲಿ ಮಾತನಾಡುವಾಗ ಇಂಗ್ಲೀಷ್ ಪದಗಳನ್ನು ಬಳಸಬಾರದೆಂದು ಕೆಲವು ನಿಬಂಧನೆಗಳನ್ನು ರೂಪಿಸಿ ಒಂದು ಸಂಘವನ್ನು ಸ್ಥಾಪಿಸಿಕೊಂಡಿದ್ದರಂತೆ. ಯಾರು ಕನ್ನಡದಲ್ಲಿ ಇಂಗ್ಲೀಷ್ ಪದಗಳನ್ನು ಬೆರಸಿ ಮಾತನಾಡುತ್ತಾರೋ ಅಂಥವರು ಬಳಸಿದ ಪ್ರತಿಯೊಂದು ಇಂಗ್ಲೀಷ್ ಪದಕ್ಕೂ ಒಂದು “ಕಾಸು” ದಂಡ ಕೊಡಬೇಕೆಂಬುದು ಸಂಘದಲ್ಲಿದ್ದ ಒಂದು ಶಿಕ್ಷೆಯ “ಕಲಂ” (penalty clause). ಈ ಅಧಿನಿಯಮಕ್ಕೆ ಒಳಪಟ್ಟು ದುಬಾರಿ ದಂಡ ತೆತ್ತವರು ನಂತರ ತಿದ್ದುಪಡಿ ತರಬಯಸಿದರಂತೆ! ಕ್ರಿಕೆಟ್ ಆಟದಲ್ಲಿ ಚೆಂಡನ್ನು ಬೌಂಡರಿ ದಾಟಿ ಎಷ್ಟೇ ದೂರ ಹೊಡೆದರೂ ನಾಲ್ಕೇ “ರನ್ ಕೊಡುವಂತೆ ಒಂದು ವಾಕ್ಯದಲ್ಲಿ ಎಷ್ಟೇ ಇಂಗ್ಲೀಷ್ ಪದಗಳನ್ನು ಬಳಸಿದರೂ 3 ಕಾಸು ದಂಡ ಕೊಟ್ಟರೆ ಸಾಕೆಂಬ ರಿಯಾಯಿತಿ ಜಾರಿಗೆ ಬಂತಂತೆ. ನಂತರ ಒಂದು ವಾಕ್ಯವನ್ನು ಪೂರಾ ಇಂಗ್ಲೀಷಿನಲ್ಲಿಯೇ ಮಾತನಾಡಿದರೆ ದಂಡ ವಿಧಿಸಕೂಡದು ಎಂಬ ವಿನಾಯಿತಿಯನ್ನೂ ಜಾರಿಗೆ ತಂದರಂತೆ. ಆದರೂ ಸಂಘಕ್ಕೆ ಆದಾಯ ಬರುವುದು ಕಡಿಮೆಯೇನೂ ಆಗಲಿಲ್ಲ ಎಂದು ತೀ.ನಂ.ಶ್ರೀ ವ್ಯಂಗ್ಯವಾಡುತ್ತಾರೆ.

ಲೆಕ್ಕ ಇಡುತ್ತಿದ್ದ ಅಧ್ಯಾಪಕನು ಕಂಡಾಕ್ಷಣ ಮಾತು ನಿಂತು ಈ “ಕಾಸಿನ ಸಂಘ” ಬಹಳ ಕಾಲ ಉಳಿಯಲಿಲ್ಲ. ಕಾಫಿ ಕುಡಿಯುವಾಗ ತಲೆಯೆತ್ತಿದ ಈ ಸಂಘ ಮಹಾರಾಜಾ ಕಾಲೇಜಿನ ಕ್ಯಾಂಟೀನಿನಲ್ಲಿ ಕಾಫಿ ಕುಡಿಯುವಾಗಲೇ ವಿಸರ್ಜನೆಗೊಂಡಿತಂತೆ! ಕನ್ನಡದ ಕಟ್ಟಾಳುಗಳ ಈ ವಿಫಲ ಪ್ರಯತ್ನದಿಂದ ಕನ್ನಡಿಗರಿಗೆ ಧಾರಾಳವಾಗಿ ಇಂಗ್ಲೀಷಿನಲ್ಲಿ ಮಾತನಾಡಲು ಪರವಾನಗಿ ಸಿಕ್ಕಂತಾಗಿ ಕನ್ನಡಕ್ಕೆ ಮುಳುವಾಯಿತೇನೋ ಎಂದೆನಿಸುತ್ತದೆ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.1-12-2022.