ಗಮನ ಸೆಳೆದ ವಿಜ್ಞಾನ ವಸ್ತುಪ್ರದರ್ಶನ : ಅಧಿಕಾರಿಗಳು ಮತ್ತು ಪೋಷಕರಿಂದ ಮೆಚ್ಚುಗೆ
ಚಿತ್ರದುರ್ಗ- ದಿನಾಂಕ 29 -11 -2022 : ಮಂಗಳವಾರ ಚಿತ್ರದುರ್ಗ ನಗರದ ಬಿ.ಡಿ ರಸ್ತೆಯಲ್ಲಿರುವ ತರಳಬಾಳು ಆಂಗ್ಲ ಮಾಧ್ಯಮ ನರ್ಸರಿ, ಪ್ರೈಮರಿ ಮತ್ತು ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಪ್ರದರ್ಶನದಲ್ಲಿ ಒಂದರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಸುಮಾರು 45ಕ್ಕೂ ಹೆಚ್ಚು ವಿಜ್ಞಾನದ ಮಾದರಿಗಳನ್ನು ಸಿದ್ಧಪಡಿಸಿ ಪ್ರಸ್ತುತಪಡಿಸಿದರು.
ಮಳೆ ನೀರು ಕೊಯ್ಲು, ಹಸಿರು ಮನೆ ಪರಿಣಾಮ, ಹೈಡ್ರೋ ಎಲೆಕ್ಟ್ರಿಸಿಟಿ, ಸೋಲಾರ್ ಎನರ್ಜಿ, ವಾಟರ್ ಸೈಕಲ್, ವಾಯು ಮತ್ತು ಜಲ ಮಾಲಿನ್ಯ, ಕಸ ಹಂಚಿಕೆ , ರಾಕೆಟ್ ಉಡಾವಣೆ, ಸೇವ್ ಅರ್ಥ, ವಿಂಡ್ಎನರ್ಜಿ, ಕೃಷಿ ಮಾದರಿ, ಮಾನವ ಜೀರ್ಣಾಂಗ ವ್ಯವಸ್ಥೆ, ಆರೋಗ್ಯ ಮತ್ತು ಶುಚಿತ್ವ, ನಗರೀಕರಣ, ಹಗಲು ಮತ್ತು ರಾತ್ರಿ, ಕಾಡಿನ ರಕ್ಷಣೆ, ಆದಿಮಾನವ, ಪಕ್ಷಿ ಮತ್ತು ಗೂಡುಗಳು ಇಂತಹ ಹಲವು ಬಗೆಯ ವಿಜ್ಞಾನದ ಮಾದರಿಗಳು ನೋಡುವರ ಗಮನ ಸೆಳೆಯುವಂತಿದ್ದವು.
ಈ ವಸ್ತು ಪ್ರದರ್ಶನ ವೀಕ್ಷಣೆಗೆ ಆಗಮಿಸಿದ ಪೋಷಕರು ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಲೋಚನೆ ಮೂಡಿಸುವ ಕೆಲಸವನ್ನು ಶಿಕ್ಷಕರು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ ಹಾಗೂ ವಿದ್ಯಾರ್ಥಿಗಳು ಆಸಕ್ತಿಯಿಂದ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪೋಷಕರಾದ ನಾವು ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಪ್ರೋತ್ಸಾಹ ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಬೇಕು ಎಂದು ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಸಲುವಾಗಿ ಬಹುಮಾನ ನೀಡಲು ವಿಶೇಷ ತೀರ್ಪುಗಾರರನ್ನು ಆಹ್ವಾನಿಸಿ ಪ್ರಶಸ್ತಿ ನೀಡುವ ಕಾರ್ಯವನ್ನು ಆಯೋಜನೆ ಮಾಡಲಾಯಿತು. ಶಾಲಾ ಅವರಣದ ಮುಂಭಾಗದಲ್ಲಿ ಭಾರತದ ನಕ್ಷೆ ಬರೆದು ಬಣ್ಣ ತುಂಬಿ ಭಾರತದ ಅಂತರಿಕ್ಷ ಉಡಾವಣೆ ಕೇಂದ್ರಗಳನ್ನು ಗುರುತಿಸಿ ಶಿಕ್ಷಕರು ವಿಶೇಷವಾಗಿ ಸಿದ್ಧಪಡಿಸಿದ್ದು ಪ್ರಾರಂಭದಲ್ಲಿ ಪೋಷಕರ ಗಮನ ಸೆಳೆಯಿತು. ವಿಜ್ಞಾನದ ಮಾದರಿಗಳನ್ನು ತಯಾರಿಸಲು ಪ್ರೋತ್ಸಾಹ ನೀಡಿ ಆಸಕ್ತಿ ಬೆಳೆಸಿದ ಶಿಕ್ಷಕರಿಗೆ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದರು.
ಫೈರ್ ಲೆಸ್ ಫುಡ್ - ವಿಜ್ಞಾನ ವಸ್ತು ಪ್ರದರ್ಶನ ಅಷ್ಟೇ ಅಲ್ಲದೆ ಉಳಿದ ವಿದ್ಯಾರ್ಥಿಗಳು ವಿವಿಧ ಬಗೆಯ ಬೇಯಿಸದೆ ತಯಾರಿಸಬಹುದಾದಂತಹ ವಿವಿಧ ಬಗೆಯ ರುಚಿಕರವಾದ ಆಹಾರವನ್ನು ತಯಾರಿಸಿದ್ದು ಮಸಾಲ ಮಂಡಕ್ಕಿ, ವಿವಿಧ ಬಗೆಯ ಹಣ್ಣಿನ ರಸಾಯನ, ಪಾನಿಪುರಿ, ವಿವಿಧ ಬಗೆ ಕೋಸಂಬರಿ, ಮಂಡಕ್ಕಿ ಉಂಡೆ ಸೇರಿದಂತೆ ಬಾಯಲ್ಲಿ ನೀರೂರಿಸುವ ಫೈರ್ ಲೆಸ್ ಫುಡ್ ತಯಾರಿಸಿದ್ದು ವಿಶೇಷವಾಗಿತ್ತು.ಹಾಗೂ LKG , UKG ವಿದ್ಯಾರ್ಥಿಗಳು ತರಕಾರಿ, ಹಣ್ಣು, ಹೂವು, ಪ್ರಾಣಿ ಪಕ್ಷಿಗಳ ಮಾದರಿ ವಿವಿಧ ಬಣ್ಣಗಳು ಇತ್ಯಾದಿಗಳನ್ನು ಪ್ರದರ್ಶಿಸಿದ್ದು ಆಕರ್ಷಿಣಿಯವಾಗಿತ್ತು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಸಲಹಾ ಸಮಿತಿಯ ಕಾರ್ಯದರ್ಶಿಯವರಾದ ಶ್ರೀಯುತ ಸಿ.ರವಿಕುಮಾರ್ ರವರು ಆಗಮಿಸಿ ಮಕ್ಕಳು ಸಿದ್ಧಪಡಿಸಿದ ವಿಜ್ಞಾನದ ಮಾದರಿಗಳನ್ನು ವೀಕ್ಷಿಸಿ, ಅವರಿಂದ ವಿವರಣೆ ಪಡೆಯುತ್ತಾ ಮಕ್ಕಳಿಗೆ ಮಾರ್ಗದರ್ಶನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಸ್ಥಳೀಯ ಸಲಹಾ ಸಮಿತಿಯ ಸದಸ್ಯರಾದ ಶ್ರೀಯುತ ಎಚ್.ಎಸ್.ಚಂದ್ರಶೇಖರಯ್ಯ ನವರು ಮತ್ತು ಆರ್.ಮಹೇಶ್ವರಪ್ಪನವರು ಆಗಮಿಸಿ ವಿದ್ಯಾರ್ಥಿಗಳಿಂದ ವಿವರಣೆ ಪಡೆದು ಮಕ್ಕಳಿಗೆ ವೈಜ್ಞಾನಿಕ ಮನೋಭಾವನೆ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿ ಶುಭ ಕೋರಿದರು.