ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ : ಸಂಪನ್ಮೂಲ ವ್ಯಕ್ತಿ ಟಿ.ಎಂ.ಪಾರ್ಥಸಾರಥಿ
ಚಿತ್ರದುರ್ಗ ದಿನಾಂಕ 1-12-2022: ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶಯದಂತೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕೆಂಬ ಉದ್ದೇಶದಿಂದ ಚಿತ್ರದುರ್ಗ ವಲಯದಲ್ಲಿ ವಿಜ್ಞಾನ ಪ್ರಾತ್ಯಕ್ಷಿಕೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗುತ್ತು.
“ಪಾಲಕರು ಹಾಗೂ ಶಿಕ್ಷಕರು ಮಕ್ಕಳ ಸಂಶಯದ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಿದರೆ ಮಾತ್ರ ಮಕ್ಕಳು ಜ್ಞಾನಿಗಳಾಗುತ್ತಾರೆ”. ಮಕ್ಕಳ ಪ್ರಶ್ನೆಗೆ ಉತ್ತರಿಸದಿದ್ದರೆ ಅವರ ಆಸಕ್ತಿಯನ್ನೇ ಮೊಟಕುಗೊಳಿಸಿದಂತಾಗುತ್ತದೆ ಎಂದು ಚಿತ್ರದುರ್ಗ ವಲಯದ ವಿಜ್ಞಾನ ಪ್ರಾತ್ಯಕ್ಷಿಕೆ ಕಾರ್ಯಾಗಾರವನ್ನು ಸೋಮವಾರದಂದು ಬೆಳಗ್ಗೆ 9.00 ಗಂಟೆಗೆ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಉದ್ಘಾಟಿಸಿ ಪ್ರಾದೇಶಿಕ ಅಧಿಕಾರಿ ಎಂ.ಎಸ್.ರಾಥೋಡ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಟಿ.ಎಂ.ಪಾರ್ಥಸಾರಥಿ ಅವರು ಉಪಸ್ಥಿತರಿದ್ದು, “ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ” ಬೆಳೆಸಲು ಹಾಗೂ ಪ್ರತಿಯೊಬ್ಬರಿಗೂ ವಿಜ್ಞಾನ ವಿಷಯದ ಕುತೂಹಲ ಬೆಳೆಸುವ ದಿಸೆಯಲ್ಲಿ ಇಂತಹ ವಿಜ್ಞಾನ ಕಾರ್ಯಗಾರಗಳನ್ನು ನಿರಂತರವಾಗಿ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.
ಚಿತ್ರದುರ್ಗ ವಲಯದ ಪ್ರೌಢಶಾಲೆಗಳಾದ ಹಿರೇಗುಂಟನೂರು, ಚಿತ್ರಹಳ್ಳಿ, ಗೊಡಬನಾಳು ಹಾಗೂ ತರಳಬಾಳು ಪ್ರೌಢಶಾಲೆ ಚಿತ್ರದುರ್ಗ ಶಾಲೆಗಳಿಂದ ಸುಮಾರು 130 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರ. ಸದರಿ ಶಾಲೆಗಳ ಮುಖ್ಯ ಶಿಕ್ಷಕರುಗಳು ಹಾಗೂ ವಿಜ್ಞಾನ ಶಿಕ್ಷಕರುಗಳು ಭಾಗವಹಿಸಿದ್ದರು
ಶರಣ ಪಿ.ಎಂ.ಪಾರ್ಥಸಾರಥಿ ರವರು 10ನೇ ತರಗತಿ ವಿಜ್ಞಾನ ಪಠ್ಯಕ್ರಮದ ರಾಸಾಯನಿಕ ಸಮೀಕರಣಗಳು, ಆಮ್ಲಗಳು ಪ್ರತ್ಯಾಮ್ಲಗಳು, ಆವರ್ತ ಕೋಷ್ಟಕ, ಆಯಸ್ಕಾಂತಗಳು, ವಿದ್ಯುತ್ ಶಕ್ತಿ ಅಧ್ಯಾಯಗಳ ಬಗ್ಗೆ ಸುಮಾರು 100 ಪ್ರಯೋಗಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾಡಿ ತೋರಿಸಿದರು.