ಸಾಹಿತ್ಯ ಕೃತಿಗಳು ಆಧುನಿಕ ಜೀವನಕ್ಕೆ ಹಿಡಿದ ಕೈಗನ್ನಡಿ!

  •  
  •  
  •  
  •  
  •    Views  

ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನ ಮತ್ತು ಗಣಿತದ ಒಳ್ಳೆಯ ವಿದ್ಯಾರ್ಥಿಯಾಗಿ ಮೆಲ್ದರ್ಜೆಯಲ್ಲಿ ಉತ್ತೀರ್ಣರಾದ (1964) ನಮ್ಮನ್ನು ಪಕ್ಕದ ಮಹಾರಾಜ ಕಾಲೇಜಿಗೆ ಸೇರಿಸಿ ಕನ್ನಡ ಮತ್ತು ಸಂಸ್ಕೃತ ಓದಲು ಪ್ರೇರೇಪಿಸಿದವರು ನಮ್ಮ ಪರಮಾರಾಧ್ಯ ಗುರುವರ್ಯರು. ಶಿವಮೊಗ್ಗದ ಸರಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ “ಕೈಲಾಸಂ” ಕುರಿತ ಯಾವುದೋ ಕಾರ್ಯಕ್ರಮವನ್ನು ಯಾರದೋ “ಕೈಲಾಸ ಸಮಾರಾಧನೆ”ಯೆಂದು ತಿಳಿದಿದ್ದ ನಮಗೆ ಕನ್ನಡ ಸಾಹಿತ್ಯದ ಗಂಧವೇ ಇರಲಿಲ್ಲ, ನಮ್ಮ ಹೃದಯದಲ್ಲಿ ಕನ್ನಡ ಸಾಹಿತ್ಯಾಭಿರುಚಿ ಚಿಗುರೊಡೆಯುವಂತೆ ಮಾಡಿದವರು ಹಿರಿಯ ತಲೆಮಾರಿನ ಕನ್ನಡ ಕಾವ್ಯರ್ಷಿಗಳಾದ ಜಿ.ಎಸ್.ಎಸ್. ರನ್ನನ “ಗದಾಯುದ್ಧ”ವನ್ನು ಪಾಠ ಮಾಡುವಾಗ ಅದರಲ್ಲಿ ಭಾಸನ “ಊರುಭಂಗ” ಮತ್ತು ಭಟ್ಟನಾರಾಯಣನ “ವೇಣೀಸಂಹಾರ” ಮೊದಲಾದ ಸಂಸ್ಕೃತ ನಾಟಕಗಳ ಸನ್ನಿವೇಶ, ಕಲ್ಪನೆಗಳು ಹೇಗೆ ಎರವಲಾಗಿ ಬಂದಿವೆ ಎಂಬುದನ್ನು ವಿವರಿಸಿ “ಜಗತ್ತಿನ ಯಾವುದೇ ಸಾಹಿತ್ಯವಿರಲಿ ಒಬ್ಬ ಕವಿಯ ಕೈ ಮತ್ತೊಬ್ಬ ಕವಿಯ ಜೇಬಿನಲ್ಲಿರುತ್ತದೆ” ಎಂದು ವಿಮರ್ಶಿಸಿದ ಅವರ ಮಾರ್ಮಿಕ ನುಡಿ ಈಗಲೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಸಾಹಿತ್ಯದಲ್ಲಿ ಕೊಡುಕೊಳೆ ಹೇಗೆ ನಡೆಯುತ್ತದೆ ಎನ್ನುವುದಕ್ಕೆ ಉತ್ತಮವಾದ ಉದಾಹರಣೆ. ಇಲ್ಲಿಗೆ ಸರಿಯಾಗಿ ನೂರು ವರ್ಷಗಳ ಹಿಂದೆ ಎಲಿಯಟ್ ಬರೆದ “The Waste Land” (ಬಂಜರು ಭೂಮಿ) ಎಂಬ ಕವಿತೆ. ಇದರ ಬಗ್ಗೆ ಬಹಳ ಹಿಂದೆ ಇದೇ ಅಂಕಣದಲ್ಲಿ ವಿಸ್ತೃತವಾಗಿ ಬರೆಯಲಾಗಿದೆ. ಸಂಸ್ಕೃತದ ಬೃಹದಾರಣ್ಯಕ ಉಪನಿಷತ್ತು ಎಲಿಯಟ್ ಮೇಲೆ ಪ್ರಭಾವ ಬೀರಿದರೆ, ಎಲಿಯಟ್ ನ ಇಂಗ್ಲೀಷ್ ಪದ್ಯಗಳು ಕನ್ನಡದ ಹಿರಿಯ ತಲೆಮಾರಿನ ಕವಿಗಳ ಮೇಲೆ ದಟ್ಟವಾದ ಪ್ರಭಾವವನ್ನು ಬೀರಿವೆ. ಮೂಲ ಕೃತಿಗಳು ನದಿಗಳ ಉಗಮ ಸ್ಥಾನವಿದ್ದಂತೆ. ಭಾರತದ ಅಥವಾ ಯಾವುದೇ ದೇಶದ ನದಿಗಳು ಒಂದು ನಿರ್ದಿಷ್ಟ ಜಾಗದಲ್ಲಿ ಜನಿಸಿ ತಮ್ಮ ಮೂಲಸ್ರೋತದಿಂದ ಮುಂದೆ ಹರಿದು ಪ್ರಾದೇಶಿಕವಾಗಿ ಒಂದು ನಿರ್ದಿಷ್ಟ ಭೂಭಾಗದಲ್ಲಿ ತಮ್ಮ ಹರಿವನ್ನು ವಿಸ್ತರಿಸಿಕೊಳ್ಳುತ್ತಾ ಸಮುದ್ರದತ್ತ ಸಾಗುತ್ತವೆ. ಆದರೆ ಭಾರತದ ಪ್ರಾಚೀನ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಒಂದು ನಿರ್ದಿಷ್ಟ ಭೂಭಾಗಕ್ಕೆ ಸೀಮಿತಗೊಳ್ಳದೆ ಭಾರತದ ಉದ್ದಗಲಕ್ಕೂ ವ್ಯಾಪಿಸಿವೆ. ವಿಭಿನ್ನ ಕಾಲಘಟ್ಟದಲ್ಲಿ ವಿಭಿನ್ನ ಭಾಷೆಗಳಲ್ಲಿ ಹೊಸ ಹೊಸ ಕೃತಿಗಳು ರಚನೆಯಾಗಲು ಕಾರಣೀಭೂತವಾಗಿವೆ.

ಒಂದು ಕೃತಿಯನ್ನು ಬೇರೊಂದು ಭಾಷೆಗೆ ತರ್ಜುಮೆ ಮಾಡಿದರೆ ಅದೊಂದು ಅನುವಾದ ಕೃತಿ ಆಗುತ್ತದೆ. ಒಬ್ಬರು ಲೇಖನಿಸಿದ ವಿಚಾರಗಳನ್ನು ಮತ್ತೊಬ್ಬರು ಮೂಲ ಲೇಖಕರನ್ನು ಹೆಸರಿಸದೆ ತಮ್ಮ ವಿಚಾರಗಳೇನೋ ಎನ್ನುವಂತೆ ಯಥಾವತ್ತಾಗಿ ಲೇಖನಿಸಿದರೆ ಅದು “ಕೃತಿಚೌರ್ಯ” ಎನಿಸುತ್ತದೆ. ಒಂದು ಕೃತಿಯ ಕಥಾವಸ್ತುವನ್ನು ಆಧರಿಸಿ ಅದನ್ನು ಪರಿಮಾರ್ಜನೆ ಮಾಡಿ ವಿಭಿನ್ನ ರೀತಿಯಲ್ಲಿ ಕಾವ್ಯರಚನೆ ಮಾಡಿದರೆ ಅದೊಂದು ಸೃಜನಶೀಲ ಕೃತಿ ಆಗುತ್ತದೆ. ಕಾಳಿದಾಸನ ಅಭಿಜ್ಞಾನ ಶಾಕುಂತಲ , ಕುವೆಂಪುರವರ ಶೂದ್ರತಪಸ್ವಿ ನಾಟಕಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳು. ಮೂಲ ರಾಮಾಯಣದ ಉತ್ತರಕಾಂಡದಲ್ಲಿ ಒಂದು ಪ್ರಸಂಗ ಬರುತ್ತದೆ. ಶೂದ್ರನಾದ ಶಂಭೂಕನು ವರ್ಣಾಶ್ರಮವನ್ನು ಧಿಕ್ಕರಿಸಿ ಕಾಡಿನಲ್ಲಿ ತಪಸ್ಸು ಮಾಡುತ್ತಿರುವ ಕಾರಣ ತನ್ನ ಮಗ ಸತ್ತಿದ್ದಾನೆಂದು ವೃದ್ಧ ಬ್ರಾಹ್ಮಣನೊಬ್ಬ ಮಗನ ಮೃತಶರೀರವನ್ನು ತಂದು ಶ್ರೀರಾಮನ ಮುಂದೆ ಗೋಳಿಡುತ್ತಾನೆ. ಶ್ರೀರಾಮನು ಕಾಡಿಗೆ ಹೋಗಿ ಶೂದ್ರ ಶಂಭೂಕನ ತಲೆಯನ್ನು ತನ್ನ ಖಡ್ಗದಿಂದ ಸಂಹರಿಸುತ್ತಾನೆ. ಮೂಲ ರಾಮಾಯಣದಲ್ಲಿರುವ ಈ ಕಥಾ ಪ್ರಸಂಗವನ್ನು ಬದಲಾಯಿಸಿ “ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ ಸಾಕಿನ್ನು ಸೇರಿರೈ ಮನುಜ ಮತಕೆ” ಎಂದು ವಿಶ್ವಪಥದತ್ತ ಸಾಗಲು ಕರೆ ನೀಡಿದ ರಾಷ್ಟ್ರಕವಿ ಕುವೆಂಪುರವರು ತಮ್ಮ ಶೂದ್ರತಪಸ್ವಿ ನಾಟಕದಲ್ಲಿ ಈ ಕಥಾನಕವನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಷ್ಕರಿಸಿದ್ದಾರೆ. 

ಶ್ರೀರಾಮನು ಕಾಡಿಗೆ ಹೋಗಿ ಶೂದ್ರತಪಸ್ವಿಯಾದ ಶಂಭೂಕನಿಗೆ ಗೌರವಾದರಗಳಿಂದ ನಮಸ್ಕರಿಸಿದನೆಂದು, ದೂರು ತಂದ ಬ್ರಾಹ್ಮಣನ ಮನಸ್ಸನ್ನು ಪರಿವರ್ತನೆ ಮಾಡಿದನೆಂದು ಪರಿಷ್ಕರಿಸಿ “ಮರ್ಯಾದಾ ಪುರುಷ, ಪುರುಷೋತ್ತಮ” ಎಂಬ ಶ್ರೀರಾಮನ ಗುಣವಾಚಕಗಳು ಸಾರ್ಥಕವಾಗುವಂತೆ ಮಾಡಿರುತ್ತಾರೆ.

ಕಾಳಿದಾಸನ ಶಾಕುಂತಲ ನಾಟಕದಲ್ಲಿ ಕಣ್ವಮಹರ್ಷಿಗಳ ಸಾಕುಮಗಳಾದ ಶಕುಂತಲೆಯು ತುಂಬುಗರ್ಭಿಣಿಯಾಗಿ ಗಂಡನಾದ ದುಷ್ಯಂತನ ಅರಮನೆಗೆ ಹೋದಾಗ ದುಷ್ಯಂತ ಆಕೆಯನ್ನು ಗುರುತಿಸುವುದೇ ಇಲ್ಲ. ಅದಕ್ಕೆ ಕಾಳಿದಾಸನ ಕಲ್ಪನೆಯ ಪ್ರಕಾರ ದೂರ್ವಾಸ ಮುನಿಯು ಕಣ್ವಾಶ್ರಮಕ್ಕೆ ಬಂದಾಗ ಗಂಡನ ಯೋಚನೆಯಲ್ಲಿ ಅನ್ಯಮನಸ್ಕಳಾಗಿದ್ದ ಶಕುಂತಲೆಯು ತನಗೆ ಸರಿಯಾಗಿ ಅತಿಥಿಸತ್ಕಾರವನ್ನು ಮಾಡಲಿಲ್ಲವೆಂದು ದೂರ್ವಾಸಮುನಿ ಸಿಟ್ಟಿಗೆದ್ದು ಕೊಟ್ಟ ಶಾಪ ಕಾರಣ. ತನ್ನ ಗಂಡನಿಗೆ ಮದುವೆಯ ನೆನಪು ಮಾಡಿಕೊಡಲು ಶಕುಂತಲೆಯು ಮುಂದಾಗುತ್ತಾಳೆ. ಆದರೆ ದುಷ್ಯಂತ ಆಶ್ರಮಕ್ಕೆ ಬಂದಾಗ ಗಾಂಧರ್ವ ವಿವಾಹವಾದ ಸಂದರ್ಭದಲ್ಲಿ ಆಕೆಗೆ ಕೊಟ್ಟಿದ್ದ ಉಂಗುರ ಕೈಬೆರಳಲ್ಲಿ ಇರುವುದಿಲ್ಲ. ದಾರಿ ಮಧ್ಯೆ ನದಿಯಲ್ಲಿ ಸ್ನಾನಮಾಡುವಾಗ ಜಾರಿಬಿದ್ದು ಕಳೆದುಹೋಗಿರುತ್ತದೆ. ಪಾಪ, ದುಷ್ಯಂತನಾದರೂ ಏನು ಮಾಡಿಯಾನು, ಎಲ್ಲಾ ವಿಧಿವಿಲಾಸ ಎನ್ನುವಂತೆ ಕಾಳಿದಾಸ ದುಷ್ಯಂತನನ್ನು ನಿಷ್ಕಳಂಕ ವ್ಯಕ್ತಿಯನ್ನಾಗಿ ಚಿತ್ರಿಸಿದ್ದಾನೆ.

ಆದರೆ ಮೂಲ ಮಹಾಭಾರತವು ದುಷ್ಯಂತನನ್ನು ಹೀಗೆ ನಿರಪರಾಧಿಯೆಂದು ಕಟ್ಟುಕತೆ ಕಟ್ಟಿಲ್ಲ. ಶಕುಂತಲೆ ಅವನ ಅರಮನೆಗೆ ಬಂದಾಗ ಎಲ್ಲರ ಎದುರಿಗೆ ಆಕೆಯನ್ನು ತನ್ನ ಹೆಂಡತಿಯೆಂದು ಗುರುತಿಸಿಯೂ ತನ್ನ ಮರ್ಯಾದೆ ಹೋಗುತ್ತದೆಯೆಂದು ನಿರಾಕರಿಸುತ್ತಾನೆ. ಆತನು ತನ್ನೊಂದಿಗೆ ಮದುವೆಯಾಗಿ ಸರಸಸಲ್ಲಾಪವಾಡಿದ ದಿನಗಳನ್ನು ಮತ್ತು ತನ್ನ ಮಗನನ್ನೇ ಯುವರಾಜನನ್ನಾಗಿ ಮಾಡುವುದಾಗಿ ಮಾತು ಕೊಟ್ಟಿದ್ದನ್ನು ನೆನಪು ಮಾಡಿಕೊಡಲು ಶಕುಂತಲೆಯು ಬಹಳವಾಗಿ ಪ್ರಯತ್ನಿಸುತ್ತಾಳೆ. ಆದರೆ ದುಷ್ಯಂತ ಸುತರಾಂ ಒಪ್ಪುವುದಿಲ್ಲ. ತನ್ನ ರಾಜ್ಯವನ್ನು ಲಪಟಾಯಿಸಲು ಸೋಗುಹಾಕಿಕೊಂಡು ಕಾಡಿನಿಂದ ಬಂದ ದುಷ್ಟತಾಪಸಿ ನೀನು ಎಂದು ಅವಳ ತೇಜೋವಧೆ ಮಾಡುತ್ತಾನೆ. ತನ್ನ ಗಂಡ ತನ್ನನ್ನು ಗುರುತಿಸಿಯೂ ಗೊತ್ತಿಲ್ಲವೆಂಬಂತೆ ನಾಟಕ ವಾಡುತ್ತಿದ್ದಾನೆಂದು ಶಕುಂತಲೆಗೆ ಸಿಟ್ಟು ಬಂದು ಕೆರಳಿದ ಸಿಂಹಿಣಿಯಾಗುತ್ತಾಳೆ. ನಿನ್ನ ಆತ್ಮ ಮುಟ್ಟಿಕೊಂಡು ಹೇಳು ಎಂದು ಸವಾಲು ಹಾಕುತ್ತಾಳೆ. ಇಷ್ಟೆಲ್ಲಾ ಒಳ್ಳೆಯ ಮಾತಿನಲ್ಲಿ ನಡೆದ ಸಂಗತಿಯನ್ನು ಹೇಳಿದ ಮೇಲೂ ನೀನು ನನ್ನನ್ನು ಹೆಂಡತಿಯೆಂದು ಒಪ್ಪಿಕೊಳ್ಳಲು ಸಿದ್ಧನಾಗದಿದ್ದರೆ “ನಿನ್ನ ತಲೆ ನುಚ್ಚು ನೂರಾಗಿ ಒಡೆದು ಹೋಗಲಿ” ಎಂದು ಶಪಿಸುತ್ತಾಳೆ.

ಯದಿ ಮೇ ಯಾಚಮಾನಾಯಾ ವಚನಂ ನ ಕರಿಷ್ಯಸಿ : 

ದುಃಷ್ಯಂತ ಶತಧಾ ಮೂರ್ಧಾ ತತಸ್ತೇsದ್ಯ ಪತಿಷ್ಯತಿ ||

ಅಂಡಾನಿ ಬಿಭ್ರತಿ ಸ್ವಾನಿ ನ ಭಿನ್ದಂತಿ ಪಿಪೀಲಿಕಾಃ |

ನ ಭರೇಥಾಃ ಕಥಂ ನು ತ್ವಂ ಧರ್ಮಜ್ಞ: ಸನ್ ಸ್ವಮಾತ್ಮಜಮ್ ||

ಸಾಮಾನ್ಯ ಇರುವೆಗಳೂ ಸಹ ತಾವು ಇಟ್ಟ ಮೊಟ್ಟೆಗಳನ್ನು ಒಡೆದು ಹಾಕುವುದಿಲ್ಲ; ಪೋಷಣೆ ಮಾಡುತ್ತವೆ. ಅಂಥದ್ದರಲ್ಲಿ ದೊಡ್ಡಮನುಷ್ಯನಾದ (ಧರ್ಮಜ್ಞನಾದ) ನೀನು ನಿನ್ನ ವಂಶದ ಕುಡಿಯನ್ನು ಪೋಷಣೆ ಮಾಡಲು ಆಗುವುದಿಲ್ಲವೆಂದರೆ ನಿನಗೆ ನಾಚಿಕೆ ಯಾಗುವುದಿಲ್ಲವೇ? ಎಂದು ಹಂಗಿಸುತ್ತಾಳೆ. ಮೂಲ ಮಹಾಭಾರತದ ಶಕುಂತಲೆಯು ಆಡಿದ ಈ ಮಾತುಗಳ ಹಿಂದೆ ಎಂತಹ ಕೆಚ್ಚೆದೆ ಇದೆ! ಸಂಸ್ಕೃತ ವಾಂಙ್ಮಯದಲ್ಲಿ “ಕಾವ್ಯೇಷು ನಾಟಕಂ ರಮ್ಯಂ ತತ್ರಾಪಿ ಚ ಶಕುಂತಲಾ” (ಕಾವ್ಯಗಳಲ್ಲೆಲ್ಲಾ ನಾಟಕವು ರಮ್ಯ, ಅದರಲ್ಲಿಯೂ ಶಾಕುಂತಲ ನಾಟಕ ಹೆಚ್ಚು ರಮ್ಯ) ಎಂದು ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕವು ಎಷ್ಟೇ ಮನ್ನಣೆಯನ್ನು ಪಡೆದಿದ್ದರೂ ಮೂಲ ಮಹಾಭಾರತದ ಶಕುಂತಲೋಪಾಖ್ಯಾನವು ವಾಸ್ತವತೆಗೆ ತೀರಾ ಹ ತ್ತಿರವಾಗಿದೆ.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.15-12-2022.