ಶ್ರೀ ತರಳಬಾಳು ಜಗದ್ಗುರುಗಳವರ ಆಶಯದಂತೆ ಹಳೇಬಾತಿ ಗ್ರಾಮದಲ್ಲಿ ಪ್ರಾಣಿಬಲಿ ನಿಷೇಧ

  •  
  •  
  •  
  •  
  •    Views  

ಹಳೇಬಾತಿ :  ಪೂಜಿಸುವ ದೇವಾಲಯಗಳು ದಿವ್ಯಾಲಯಗಳಾಗಿ, ಧ್ಯಾನಾಲಯಗಳಾಗಿ,  ಪರಿಶುದ್ಧ, ಆಧ್ಯಾತ್ಮಿಕ ಕೇಂದ್ರಗಳಾಗಬೇಕು, ಅವೆಂದೂ ವಧಾಲಯಗಳಾಗಬಾರದು. ಪ್ರಾಣಿ ಬಲಿಯು ಅವೈಜ್ಞಾನಿಕ ಅಂಧಶ್ರದ್ಧೆ ಮೌಢ್ಯತೆಯ ಕೂಪವೆಂದು 12ನೆ ಶತಮಾನದಲ್ಲಿಯೇ ಪ್ರತಿಪಾದಿಸಿದ ತಮ್ಮ ಆಶಯಗಳ ಮೇಲೆ ಅನುಷ್ಠಾನಕ್ಕೆ ಸದ್ಧರ್ಮ ಪೀಠ ಸಂಸ್ಥಾಪಿಸಿ ಸರ್ವರನ್ನು ಉದ್ಧರಿಸುವ “ತರಳಾ ಬಾಳು” ಎಂದು ಅನುಗ್ರಹಿಸಿದ ಪ್ರಥಮ ಮಾನವತಾವಾದಿ ಕ್ರಾಂತಿಯೋಗಿ ಶ್ರೀ ವಿಶ್ವಬಂಧು ಮರುಳಸಿದ್ಧರು.

ಪೀಠ ಸಂಸ್ಥಾಪನಾಚಾರ್ಯ ವಿಶ್ವಬಂಧು ಮರುಳಸಿದ್ಧರ ಆದರ್ಶ ಧ್ಯೇಯಗಳ ಅನುಷ್ಠಾನದ ಜೊತೆಗೆ ಆಚರಿಸಿ ಶಿಷ್ಯ ವತ್ಸಲರೆಂದು ಪೂಜಿಸಲ್ಪಡುವ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ  ಮಾದರಿ ನಡೆಯು ಸದಾ  ಜನಸಂಪ್ರೀತಿಗೆ ಪಾತ್ರವಾಗಿದೆ.

ದಾವಣಗೆರೆ, ಡಿ.14 ಬಸವಣ್ಣನವರು ಹಾಗೂ ವಿಶ್ವಬಂಧು ಮರುಳಸಿದ್ಧರ ಆಶಯದಂತೆ ಈ ಬಾರಿಯ ಶ್ರೀ ಚೌಡೇಶ್ವರಿದೇವಿ ಜಾತ್ರಾ ಮಹೋತ್ಸವದಲ್ಲಿ ಗ್ರಾಮಸ್ಥರು ಕೈಗೊಂಡಿರುವ ಪ್ರಾಣಿಬಲಿ ನಿಷೇಧದ ದೃಢನಿರ್ಧಾರ ತಮಗೆ ಅತೀವ ಸಂತಸ ಉಂಟು ಮಾಡಿದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. 

ತಾಲ್ಲೂಕಿನ ಹಳೇಬಾತಿ ಗ್ರಾಮದಲ್ಲಿ ಲಿಂ. ಹೆಚ್.ಎಂ. ಷಡಾಕ್ಷರಯ್ಯ ಸ್ಮರಣಾರ್ಥ ನಿರ್ಮಿಸಿರುವ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ “ಡಿಜಿಟಲ್ ಗ್ರಂಥಾಲಯ”ದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರತಿವರ್ಷ ಗ್ರಾಮದಲ್ಲಿ ಚೌಡೇಶ್ವರಿ ದೇವಿ ಜಾತ್ರೆ ಅಂಗವಾಗಿ ನಡೆಯುತ್ತಿದ್ದ ಪ್ರಾಣಿಬಲಿ ನಿಷೇಧಿಸುವ ಮೂಲಕ ಮೂಢನಂಬಿಕೆ, ಕಂದಾಚಾರಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದ ಮತ್ತು ಚೌಡೇಶ್ವರಿ ದೇವಸ್ಥಾನದ ಪಕ್ಕದಲ್ಲೇ ಗ್ರಂಥಾಲಯ ಸ್ಥಾಪನೆ ಮಾಡಿರುವುದು ವಿಶೇಷ ಎಂದರು. ವಿಶ್ವಗುರು ಬಸವಣ್ಣನವರ ವಚನಗಳ ಆಶಯ ಮತ್ತು ಮರುಳಸಿದ್ಧರ ಪ್ರಾಣಿಬಲಿ ನಿಷೇಧದ ಕಾರ್ಯವನ್ನು ಗ್ರಾಮದ ಯುವಕರು, ಮುಖಂಡರು ಸಾಕಾರಗೊಳಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಮೊಬೈಲ್ ನಲ್ಲಿ ಸುಮಾರು 22 ಸಾವಿರ ಬಸವಾದಿ ಶಿವಶರಣರ ವಚನಗಳನ್ನು ಅಳವಡಿಸಲಾಗಿದೆ. ಜನ ಸಾಮಾನ್ಯರು ಇದರ ಸದುಪಯೋಗ ಪಡೆದು ಕೊಳ್ಳಬೇಕಾಗಿದೆ  ಎಂದು ಮಾರ್ಗದರ್ಶನ  ಮಾಡಿದರು.

ಹಿಂದೆ ಪುಸಕ್ತವನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಲಾಗಿತ್ತು. ಆದರೆ ಬದಲಾದ ತಂತ್ರಜ್ಞಾನದ ಪರಿಸ್ಥಿತಿಗೆ ತಕ್ಕಂತೆ ಪುಸ್ತಕಗಳ ಡಿಜಿಟಲೀಕರಣವಾಗಿ ಮೊಬೈಲ್ ಮೂಲಕವೇ ಪುಸ್ತಕ ಓದುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಅದರಂತೆ ಹಳೇಬಾತಿಯಲ್ಲಿ ಆರಂಭಿಸಿರುವ ಡಿಜಿಟಲ್ ಗ್ರಂಥಾಲಯದ ಸದುಪಯೋಗವನ್ನು ಪಡೆಯುವಂತೆ ಕರೆ ನೀಡಿದರು. ಜನರಲ್ಲಿ ಧರ್ಮಪ್ರಜ್ಞೆ ಬಹಳ ಇದೆ. ಅದನ್ನು ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ. ಕೊಳಕು ಮನಸ್ಸನ್ನು ದೂರ ಮಾಡಿ, ಪರಿಶುದ್ಧ ಮನಸ್ಸಿನಿಂದ ಮಾಡಿದ ಕಾರ್ಯಗಳೆಲ್ಲವೂ ಯಶಸ್ಸನ್ನು ಕಾಣಲು ಸಾಧ್ಯ ಎಂದರು. ಹಳೇಬಾತಿ ಯುವಕರು ತಮ್ಮನ್ನು ಅಭಿಮಾನಪೂರ್ವಕವಾಗಿ ಬರಕೊಂಡಿದ್ದು ವಿಶೇಷವಾಗಿತ್ತು. ಚೌಡೇಶ್ವರಿ ದೇವಿಯ ಜಾತ್ರೆ ಯನ್ನು ಮರುಳಸಿದ್ಧರ ಆಶಯಕ್ಕೆ ಅನುಗುಣವಾಗಿ ಆಚರಿಸಿದ್ದು, ದೇವಸ್ಥಾನದ ಪಕ್ಕದಲ್ಲೇ ಗ್ರಂಥಾಲಯ ನಿರ್ಮಿಸಿದ್ದು ಕೂಡ ವಿಶೇಷ. ಇದಕ್ಕಾಗಿ ಗ್ರಾಮಸ್ಥರು ಅಭಿನಂದನಾರ್ಹರು ಎಂದು ಹೇಳಿದರು. 

ಬೆಂಗಳೂರು ತರಳಬಾಳು ಕೇಂದ್ರದ ಕಾರ್ಯದರ್ಶಿ ಬಾತಿ ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ಪ್ರಮುಖ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಮತ್ತು ಸಿರಿಗೆರೆಯಲ್ಲಿ ನ್ಯಾಯಪೀಠವನ್ನು ಸಮರ್ಥವಾಗಿ ನಿಭಾಯಿಸಿ, ಭಕ್ತರ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಫಲತೆ ಪಡೆದಿರುವ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹೋಸ್ವಾಮೀಜಿಯವರ ಸಮಾಜ ಸೇವಾ ಕಾರ್ಯ ಶ್ಲ್ಯಾಘನೀಯ ಎಂದರು. 

ಹಳೇಬಾತಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಪಿ. ಕೆಂಚಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗದಿಗೆಮ್ಮ ವಿ.ಡಿ. ಬಸವರಾಜಪ್ಪ, ಮಾಜಿ ಮೇಯರ್ ಎಸ್.ಟಿ.ವೀರೇಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್.ಜೆ.ಆನಂದ್, ಬಾತಿ ಸತೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಮುಖಂಡರಾದ ಬೇತೂರು ಕರಿಬಸಪ್ಪ, ಮಾಗಾನಹಳ್ಳಿ ಬಿ.ಕೆ.ಪರಶುರಾಮ್, ಹರಪನಹಳ್ಳಿ ನಂಜನಗೌಡ್ರು, ಬಾತಿ ಕೆ.ಆರ್. ಶಿವಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎಸ್.ಸಿದ್ಧೇಶ್, ಕೆ.ಜಿ.ಉಮೇಶ್, ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ನರಸಿಂಹ ಜೋಷಿ ಮತ್ತಿತರರಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಗಳು ಪ್ರಾರ್ಥಿಸಿ,ನೃತ್ಯ ರೂಪಕ ಪ್ರಸ್ತುತಪಡಿಸಿ ದರು. ಎ.ಮಾರುತಿ ನಿರೂಪಿಸಿದರು. ಅಶೋಕ ಹಳೇಬಾತಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಶ್ರೀ ಜಗದ್ಗುರುಗಳು ಹಾಗೂ ಬಾತಿ ವಿಶ್ವನಾಥ್ ಅವರನ್ನು ಗೌರವಿಸಲಾಯಿತು.