ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣೆಗೆ ಬಂದ ಹಿನ್ನೆಲೆ ನಿಮಗೆ ಗೊತ್ತೇ?
1949 ಸಿರಿಗೆರೆ : ಇದರ ಪ್ರವರ್ತಕರು ತಿಪಟೂರಿನ ಶರಣ ಎಸ್.ಆರ್.ಮಲ್ಲಪ್ಪನವರು. ಅರಮನೆ, ಗುರುಮನೆ, ದೇವರಮನೆ (ಗುಡಿ) ಇವುಗಳಲ್ಲಿ ಪ್ರತಿವರ್ಷ ವಿಜಯ ದಶಮಿ ಹಬ್ಬವು ಆಶ್ವಯುಜ ಪಾಡ್ಯಮಿಯಿಂದ ಪ್ರಾರಂಭವಾಗಿ ದಶಮಿಯವರೆಗೆ ನಡೆಯುತ್ತದೆ. ಅದರಂತೆ ನಮ್ಮ ಮಠದಲ್ಲೂ ಮೊದಲಿನಿಂದಲೂ ನಡೆಯುತ್ತಿತ್ತು. ನಮ್ಮ ಕಾಲದಲ್ಲೂ ಸಹ ಹೊಳಲ್ಕೆರೆ ಮತ್ತು ಮಾಡಾಳು ಗ್ರಾಮಗಳಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಮಾಡಾಳು ಕಾರ್ಯಕ್ರಮಕ್ಕೆ ಎಸ್.ಆರ್. ಮಲ್ಲಪ್ಪನವರು ಬಂದಿದ್ದರು. ಅದೇ ನಮಗೆ ಅವರ ಹೊಸ ಪರಿಚಯ. ಅವರು ಪ್ರತಿದಿನ ನಮ್ಮಲ್ಲಿ ಮರುಳಸಿದ್ಧನ ಇತಿಹಾಸ, ಶಿವಶರಣರ ಸಾಹಿತ್ಯದ ಪ್ರಚಾರ ಈ ಬಗ್ಗೆ ಗುರು ಮಠಗಳು ಕಾರ್ಯಕ್ರಮ ಹಾಕಿಕೊಳ್ಳಬೇಕೆಂದು ಸಲಹೆಯಿತ್ತರು. ವಿಜಯದಶಮಿ ಹಬ್ಬದಲ್ಲೂ ಈ ಕಾರ್ಯಕ್ರಮ ಹಾಕಿಕೊಳ್ಳಬಹುದು. ಆದರೆ ಈ ಹಬ್ಬಕ್ಕೂ ಸಾಹಿತ್ಯ ಚಟುವಟಿಕೆಗಳಿಗೂ ಐತಿಹಾಸಿಕ ಹಿನ್ನೆಲೆಯಿಲ್ಲ. ವಿಜಯದಶಮಿ ಹಬ್ಬವು ಶತ್ರುಗಳ ಮೇಲೆ ವಿಜಯದ ಸಿದ್ಧತೆಯ ಸಂಕೇತವಾಗಿದೆ. ನ್ಯಾಯವಾಗಿ ಗುರುಮನೆ, ದೇವರ ಮನೆಗಳಲ್ಲಿ ಇವು ನಡೆಯಬಾರದು. ಅರಮನೆಗೆ ಶತ್ರುಗಳುಂಟು. ಆದರೆ ಗುರುವು ಧರ್ಮದ ಪ್ರತಿನಿಧಿ. ಧರ್ಮಕ್ಕೆ ವೈರಿ ಯಾರು? ದೇವರಿಗೆ ವೈರಿ ಯಾರು? ಗುರುಮನೆಗಳಿಗೂ ಶತ್ರುಗಳುಂಟೆಂದರೆ ಗುರುಮನೆಯ ಪಾವಿತ್ರ್ಯಕ್ಕೆ ಹಾನಿ. ಇದೊಂದು ಕಂದಾಚಾರದ ಪದ್ಧತಿ. ಹೀಗಿರುವಾಗ ಬಿಲ್ಲು ಬಾಣಗಳ ಚಟುವಟಿಕೆಯು ಉಚಿತವಲ್ಲ. ಕ್ಷತ್ರಿಯ (ಅರಮನೆಯವರು) ಮಾಡಬಹುದು. ಖಡ್ಗವೇ ಅವರ ಶೌರ್ಯದ ಸಂಕೇತ. ಅವರು ಆ ಸಂಕೇತವನ್ನಿಟ್ಟುಕೊಂಡು ತಮ್ಮ ಶೌರ್ಯ ಪರಾಕ್ರಮಗಳನ್ನು ಬೆಳೆಸಿಕೊಳ್ಳಲೇಬೇಕು. ಇಷ್ಟಕ್ಕೂ ವಿಜಯದಶಮಿಯ ಕಾಲವು ಒಳ್ಳೆಯ ಮಳೆಗಾಲ, ಜನರಿಗೂ, ಅದರಲ್ಲೂ ಕೃಷಿಕರಿಗೆ ವಿಶೇಷವಾಗಿ ಹೊಲಮನೆಗಳಲ್ಲಿ ಹಗಲೂ ರಾತ್ರಿ ಕೆಲಸ. ಅವರಿಗೆ ಇದರಿಂದ ಯಾವ ಉಪಯೋಗವೂ ಆಗುವುದಿಲ್ಲ, ಸುಮ್ಮನೆ ಒಂದು ಆಡಂಬರದ ಉತ್ಸವ. ಈ ದೃಷ್ಟಿಯಿಂದ ವಿಜಯದಶಮಿ ಹಬ್ಬವನ್ನು ಬಿಡಬೇಕೆಂದು ಎಸ್.ಆರ್. ಮಲ್ಲಪ್ಪನವರೂ ನಾವು ನಿರ್ಣಯಿಸಿದೆವು.
ನಮ್ಮ ಪೀಠಕ್ಕೆ ಮರುಳಸಿದ್ದನೇ ಮೂಲ ಪುರುಷನಾಗಿರುವುದರಿಂದ, ಮರುಳಸಿದ್ಧನು ಮಾಘ ಶುದ್ಧ ಹುಣ್ಣಿಮೆಯಂದು ತನ್ನ ಉತ್ತರಾಧಿಕಾರಿಗೆ, “ತರಳಾ ಬಾಳು” ಎಂದು ಆಶೀರ್ವದಿಸಿದನೆಂಬ ಐತಿಹ್ಯವನ್ನು ಆಧಾರವಾಗಿಟ್ಟುಕೊಂಡು ಉಜ್ಜಯಿನಿಯಲ್ಲಿ ಮರುಳಸಿದ್ದನ ಕಾಲದಲ್ಲಿ ಸ್ಥಾಪಿತವಾದ 9 ಪಾದುಗಟ್ಟಿಗಳಿಗೂ ಈಗಲೂ ಜಾತ್ರೆಯ ಸಂದರ್ಭದಲ್ಲಿ ಹೋಗುವ ಪದ್ಧತಿಯಿದೆ. ಈ ಆಧಾರದ ಮಾಘ ಶುದ್ಧ ಹುಣ್ಣಿಮೆಯನ್ನೇ 9ನೇ ದಿನವಾಗಿಟ್ಟುಕೊಂಡು ಬಸವಾದಿ ಶರಣರ ತತ್ವ್ತಗಳನ್ನು ಏಕೆ ಪ್ರಚಾರ ಮಾಡಬಾರದು? ಎಂಬ ಪ್ರಶ್ನೆ ಹುಟ್ಟಿತು. ಇದು ಮರುಳಸಿದ್ಧನ ಪರಂಪರೆಯ ಇತಿಹಾಸಕ್ಕೆ ಬಹಳ ಸಮೀಪವಾದುದು ಎಂಬ ತೀರ್ಮಾನಕ್ಕೆ ಬಂದೆವು. ಈ ಆಲೋಚನೆಯ ಅಂಗವಾಗಿ ಮೊಟ್ಟ ಮೊದಲು ಮರುಳಸಿದ್ಧನ ಶಿಷ್ಯರಲ್ಲೊಬ್ಬನಾದ ಗದ್ದುಗೆ ರಾಮಿತಂದೆ ಯಿಂದ ರಚಿತವಾದ “ಗುರು ಬೋಧೆ ಮಹಾತ್ಮೆ” ಎಂಬ ಗ್ರಂಥದ ಆಧಾರದ ಮೇಲೆ ದೇವಕವಿಯು ಬರೆದಿರುವ “ಸಿದ್ಧಲಿಂಗ ಚಾರಿತ್ರ್ಯ”(ಮರುಳಸಿದ್ಧ ಕಾವ್ಯ)ವನ್ನು ಅಚ್ಚು ಹಾಕಿಸಬೇಕೆಂಬ ಕಾರ್ಯವನ್ನು ಕೈಗೊಂಡೆವು. ಇದಕ್ಕಾಗಿ ದೇವಕವಿಯ ಸಿದ್ಧಲಿಂಗ ಚಾರಿತ್ರ್ಯವನ್ನು ಎಸ್.ಆರ್.ಮಲ್ಲಪ್ಪನವರು ಸುಪ್ರಸಿದ್ಧ ಸಾಹಿತಿ ಅ.ನ.ಕೃಷ್ಣರಾಯರ ಕಡೆಗೆ ತೆಗೆದುಕೊಂಡು ಹೋಗಿ ಕೊಟ್ಟು “ನಿಮ್ಮ ಹೆಸರಿನಲ್ಲಿ ಇದು ಪ್ರಕಟವಾಗಬೇಕು. ಏಕೆಂದರೆ ನೀವು ಜಾತಿ ಮತ ವಿರೋಧಿಗಳು. ಈ ಕಾರಣದಿಂದ ಇದರ ಪ್ರಕಟಣೆಗೆ ನೀವೇ ಅರ್ಹರು” ಎಂದು ಹೇಳಿ ಅವರಿಗೆ ಒಪ್ಪಿಸಿದರು. ದೇವಕವಿಯ ಕಾವ್ಯವು ಪ್ರಕಟವಾದ ಮೇಲೆ ಗೋವಿಂದ ಪೈಗಳವರು ಫ.ಗು.ಹಳಕಟ್ಟಿಯವರು, ಹರ್ಡೇಕರ್ ಮಂಜಪ್ಪನವರು, ಎಚ್.ದೇವಿರಪ್ಪನವರು ಹುಲ್ಲೂರು ಶ್ರೀನಿವಾಸ ಜೋಯಿಸರು, ಜೀರಿಗೆ ಕಟ್ಟೆ ಬಸಪ್ಪನವರು ದೇವಕವಿಯ ಸಿದ್ಧಲಿಂಗ ಚಾರಿತ್ರ್ಯದ ಆಧಾರವನ್ನಿಟ್ಟುಕೊಂಡು ಅನೇಕ ಅವಶೇಷಗಳನ್ನು ಗುರ್ತಿಸಿ, ತಮ್ಮ ವಿಮರ್ಶಾತ್ಮಕ ಲೇಖನಗಳನ್ನು ಅನೇಕ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಮರುಳಸಿದ್ಧನ ನಡೆಗಳು ಅನೇಕವುಂಟು. ನುಡಿಗಳು ಅನೇಕವು ಸಿಕ್ಕಿಲ್ಲ; ಒಂದೇ ಒಂದು ಸಿಕ್ಕಿದೆ. ಅದು ಹೀಗಿದೆ.
ಆಲಿ ಆಲಯದಲ್ಲಿ ಕರಿಗೊಳಲು,
ಶ್ರವಣವು ಆಕಾಶವನಡರಲು,
ಉಲುಹು ನಿರ್ಭೂತ ಚಿತ್ತ ಸಮಾಧಾನವನೈದಲು,
ಕಾಲ ಕರ್ಮಂಗಳ ಗೆಲುವುದಿದೇನು ಸೋಜಿಗವು
ಹೇಳಾ! ರೇವಣ್ಣ ಪ್ರಭುವೆ.
ಸಿದ್ಧರಾಮಣ್ಣನ ವಚನದಲ್ಲಿ ಮರುಳಸಿದ್ಧನ ವಚನಗಳು 68 ಸಾವಿರ ಎಂದು ಉಲ್ಲೇಖವಿದೆ. ಈ ಎಲ್ಲವನ್ನೂ ಗಮನಿಸಿದಲ್ಲಿ ಮರುಳಸಿದ್ಧನು ನಡೆದನೆಂದು ಬಸವಣ್ಣನು ನುಡಿದನೋ, ಬಸವಣ್ಣ ನುಡಿದನೆಂದು ಮರುಳಸಿದ್ದನು ನಡೆದನೋ ಎಂಬ ನಿರ್ಣಯಕ್ಕೆ ನಾವು ಬರಲೇಬೇಕಾಗುತ್ತದೆ. ಬಸವಣ್ಣನು ಪ್ರಾಣಿ ಹಿಂಸೆ, ಜಾತಿಮತಗಳ ತಾರತಮ್ಯ, ಯಜ್ಞಯಾಗಾದಿಗಳು, ಕಾಯಕ ಗೌರವ ಇತ್ಯಾದಿ ಎಲ್ಲವನ್ನೂ ತನ್ನ ಸಾಹಿತ್ಯದಲ್ಲಿ ಹೇಳಿದ್ದಾನೆ. ಮರುಳಸಿದ್ದನು ಬೇತೂರಿನಲ್ಲಿ ಯಜ್ಞಗಳನ್ನು ನಾಶಪಡಿಸಿದ್ದಾನೆ. ಉಜ್ಜಯಿನಿಯಲ್ಲಿ ನಡೆಯುತ್ತಿದ್ದ ಪಶು ಬಲಿಯನ್ನು ನಿಲ್ಲಿಸಿದ್ದಾನೆ. ಜಾತಿಮತಗಳ ತಾರತಮ್ಯವನ್ನು ನಿವಾರಿಸಿದ್ಧಾನೆ. ತಾನೇ ಸ್ವತಃ ಕರುಗಳನ್ನು ಕಾಯ್ದು ಕಾಯಕ ಗೌರವವನ್ನು ಪುರಸ್ಕರಿಸಿದ್ದಾನೆ. ಮರುಳಸಿದ್ಧನ ಚರಿತ್ರೆಯನ್ನು ಮುಂದಿಟ್ಟು ಕೊಂಡರೆ ಇವನು ನಡೆದಾಗ ಬಸವಣ್ಣನಾಗಿ ಕಾಣುತ್ತಾನೆ. ಈ ಕಾರಣದಿಂದ ಇಂದು ಮರುಳಸಿದ್ಧಾದಿಗಳು ಆಚಾರ್ಯ ಪಂಥದವರೆಂದು ಬಸವಾದಿಗಳು ವಿರಕ್ತಪಂಥದವರೆಂದೂ ಹೇಳುವುದರಲ್ಲಿ ಯಾವ ಅರ್ಥವೂ ಇಲ್ಲ. ಎಲ್ಲರೂ ಒಂದೇ ಸಿದ್ಧಾಂತಕ್ಕಾಗಿ, ಒಂದೇ ತತ್ತ್ವದ ಆಧಾರದ ಮೇಲೆ ನಡೆದವರು. ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳು ಮರುಳಸಿದ್ಧ, ರೇವಣಸಿದ್ಧ, ಬಸವ, ಪ್ರಭು ಇವರೆಲ್ಲರಿಗೂ ಸಾಮಾನ್ಯ ಲಕ್ಷಣಗಳು. ಇದರಲ್ಲಿ ಯಾರ ಹೆಚ್ಚಳಿಕೆಯೂ ಇಲ್ಲ. ಯಾರ ಕೀಳ್ಮೆಯೂ ಇಲ್ಲ. ಆದರೆ ಈ ನಿಜತತ್ತ್ವ ಅನೇಕ ಧರ್ಮಾಧಿಕಾರಿಗಳಿಂದ ಮರೆಮಾಡಲ್ಪಟ್ಟಿದೆ. ಈ ಕಾರಣದಿಂದ ಶರಣ ತತ್ತ್ವವು ವಿನಾಶದತ್ತ ಸಾಗುತ್ತಿದೆ. ಈ ದೃಷ್ಠಿಯಿಂದ ಮಠಾಧಿಪತಿಗಳ ಕರ್ತವ್ಯ ಇಲ್ಲಿದೆ. ಈ ಕಾರಣದಿಂದಲೇ 9 ಪಾದುಗಟ್ಟೆಗಳ ಸಂಕೇತವಾಗಿ 9 ದಿನಗಳು ತರಳಬಾಳು ಹುಣ್ಣಿಮೆಯನ್ನು ನಡೆಸುವ ಮೂಲಕ ಜ್ಞಾನಪ್ರಸಾರ ಮಾಡುವುದು. ನಿಜವಾದ ಕರ್ತವ್ಯವೆಂದು ತಿಳಿದು ಮಾಮೂಲಿನಂತೆ ಸಂಕ್ಷಿಪ್ತವಾಗಿ ಶ್ರೀಮಠದಲ್ಲಿ ಆಚರಿಸಿಕೊಂಡು ಬರುತ್ತಿದ್ದ ತರಳಬಾಳು ಹುಣ್ಣಿಮೆಗೆ ವಿಶೇಷ ಮಹತ್ವ ಕೊಟ್ಟೆವು, ಮಳೆಯಿಲ್ಲದ ಬಿಸಿಲಿಲ್ಲದ ಚಳಿಯಿಲ್ಲದ ಕಾಲವೆಂದರೆ ಮಾಘಮಾಸ. ಮಾಘ ಹುಣ್ಣಿಮೆಯೇ “ತರಳಬಾಳು” ಎಂದು ಆಶೀರ್ವಾದ ಪಡೆದ ದಿನ. ಈ ದೃಷ್ಠಿಯಿಂದ ವಿಜಯದಶಮಿಯನ್ನು ನಿಲ್ಲಿಸಿ ತರಳಬಾಳು ಹುಣ್ಣಿಮೆಯನ್ನು ನಾಡಿನ ನಾನಾ ಭಾಗಗಳಲ್ಲಿ ಆಚರಿಸಬೇಕೆಂಬ ನಿರ್ಣಯಕ್ಕೆ ಬಂದೆವು.
- ಶ್ರೀ ತರಳಬಾಳು ಜಗದ್ಗುರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು
ಗ್ರಂಥ: ದಿಟ್ಟ ಹೆಜ್ಜೆ ಧೀರಕ್ರಮ
ಪುಟ : 229, 230