ಅಂತರಂಗ ಶುದ್ಧಿ - ಬಹಿರಂಗ ಶುದ್ಧಿ

  •  
  •  
  •  
  •  
  •    Views  

ಮ್ಮ ದೇಶದ ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಸ್ವಚ್ಛ ಭಾರತದ ಕರೆ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರಧಾನಿ ಎಂಬ ಸ್ಥಾನಮಾನದ ಬಿಗುಮಾನವಿಲ್ಲದೆ ಸ್ವತಃ ಅವರೇ ಕಸಪೊರಕೆ ಹಿಡಿದು ಕಸಗುಡಿಸಿದ್ದು ಮೆಚ್ಚಬೇಕಾದ ಸಂಗತಿ. "ಮತ್ತೆ ಯಾವಾಗ ಕಸಗುಡಿಸಲು ಬರುತ್ತೀರಿ?" ಎಂದು ನಮ್ಮ ಜನ ಕೇಳದಿದ್ದರೆ ಅವರ ಪುಣ್ಯ! ಇಂದಿನ ಪ್ರಧಾನಿ ಮೋದಿಯವರು ಕೊಟ್ಟ ಕರೆ "ಸ್ವಚ್ಛ ಭಾರತ" ನಿರ್ಮಾಣದ ಕರೆಯಾದರೆ, 12ನೆಯ ಶತಮಾನದಲ್ಲಿ ಕನ್ನಡ ನಾಡಿನ ಕಲ್ಯಾಣದ ಪ್ರಧಾನಿಯಾಗಿದ್ದ ಬಸವಣ್ಣನವರು ಕೊಟ್ಟ ಕರೆ "ಸ್ವಚ್ಛ ಸಮಾಜ" ನಿರ್ಮಾಣದ ಕರೆ! ಮೋದಿಯವರದು ಬಹಿರಂಗ ಶುದ್ಧಿಯ ಕರೆಯಾದರೆ ಬಸವಣ್ಣನವರದು ಅಂತರಂಗ ಶುದ್ಧಿಯ ಕರೆ:

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, 
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ 
ಇದೇ ನಮ್ಮ ಕೂಡಲ ಸಂಗಮದೇವರನೊಲಿಸುವ ಪರಿ!

ಕಳ್ಳತನ ಮಾಡದಿರುವುದು, ಹಿಂಸಿಸದಿರುವುದು, ಸುಳಾಡದಿರುವುದು. ಕೋಪಮಾಡಿಕೊಳ್ಳದಿರುವುದು, ಅನ್ಯರ ಬಗೆಗೆ ಅಸಹನೆ ಪಡದಿರುವುದು, ತನ್ನನ್ನು ತಾನು ಹೊಗಳಿಕೊಳ್ಳದಿರುವುದು, ಇತರರನ್ನು ನಿಂದಿಸದಿರುವುದು - ಈ ಸಪ್ತ ಶೀಲಗಳನ್ನು ಪಾಲಿಸುವುದರಿಂದ ಅಂತರಂಗ ಶುದ್ಧಿಯೂ ಉಂಟಾಗುತ್ತದೆ, ಬಹಿರಂಗ ಶುದ್ಧಿಯೂ ಉಂಟಾಗುತ್ತದೆ ಎನ್ನುತ್ತಾರೆ ಬಸವಣ್ಣನವರು. ಮೇಲುನೋಟಕ್ಕೆ ಈ ಸಪ್ತಶೀಲಗಳು ಅಂತರಂಗಶುದ್ಧಿಯನ್ನು ಮಾತ್ರ ಕುರಿತು ಹೇಳಿದಂತೆ ತೋರಿದರೂ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ದಿ ಎಂದು ಒತ್ತಿ ಹೇಳುವ ಮೂಲಕ ಅಂತರಂಗ ಶುದ್ಧಿಯಿಂದ ಬಹಿರಂಗ ಶುದ್ಧಿಯೂ ಸಾಧಿತವಾಗುತ್ತದೆಯೆಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ದೇವರನ್ನು ಒಲಿಸುವ ಮಾರ್ಗವೂ ಇದೇ ಆಗಿದೆ ಎಂಬುದು ಅವರ ಆಶಯ. ಮಹರ್ಷಿ ಪತಂಜಲಿಯು ಯೋಗಶಾಸ್ತ್ರದಲ್ಲಿ ಹೇಳಿರುವುದು ಇದನ್ನೇ. ಅಷ್ಟಾಂಗಯೋಗದ ಮೊದಲ ನಾಲ್ಕು ಮೆಟ್ಟಿಲುಗಳಾದ "ಯಮ, ನಿಯಮ, ಆಸನ, ಪ್ರಾಣಾಯಾಮ" ಬಹಿರಂಗ ಸಾಧನಗಳಾದರೆ ಕೊನೆಯ ನಾಲ್ಕು ಮೆಟ್ಟಿಲುಗಳಾದ "ಪ್ರತ್ಯಾಹಾರ, ಧಾರಣಾ, ಧ್ಯಾನ, ಸಮಾಧಿ" ಅಂತರಂಗದ ಸಾಧನಗಳು. ಮೊದಲ ಎರಡು ಮೆಟ್ಟಿಲುಗಳಾದ ಯಮ ಮತ್ತು ನಿಯಮಗಳು ಅನುಕ್ರಮವಾಗಿ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ನೈತಿಕ ಮೌಲ್ಯಗಳಿಗೆ ಮತ್ತು ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ ಎಂಬ ಬಹಿರಂಗಶುದ್ಧಿಗೆ ಒತ್ತು ಕೊಟ್ಟರೂ ಸಾಧಕನು ಅಂತರಂಗ ಶುದ್ಧಿಯ ಕಡೆ ಮುಖ ಮಾಡಿ ಆ ದಿಕ್ಕಿನಲ್ಲಿ ಸಾಗಬೇಕೆಂದು ಸೂಚಿಸುತ್ತವೆ.

ಅಂತರಂಗ ಶುದ್ದಿ ಬಹಿರಂಗ ಶುದ್ಧಿಗಿಂತ ಬಹಳ ಮುಖ್ಯ. ಅದು ಹೊರಗಿನ ಕಸವನ್ನು ಕಸಪೊರಕೆಯಿಂದ ಗುಡಿಸಿ, ಸಾರಣೆ ಕಾರಣೆ ಮಾಡಿ, ಸ್ನಾನ ಲೇಪನ ಮಾಡಿ ಕೈತೊಳೆದುಕೊಳ್ಳುವಷ್ಟು ಸುಲಭದ ಕೆಲಸವಲ್ಲ, "ಮಂಡೆ ಮಾಸಿದೊಡೆ ಮಹಾಮಜ್ಜನವ ಮಾಡುವುದು, ವಸ್ತ್ರ ಮಾಸಿದೊಡೆ ಮಡಿವಾಳಂಗಿಕ್ಕುವುದು, ಮನ ಮಾಸಿದೊಡೆ ಕೂಡಲಚೆನ್ನಸಂಗಯ್ಯನ ಶರಣರೊಡನೆ ಅನುಭಾವವ ಮಾಡುವುದು" ಎನ್ನುತ್ತಾನೆ ಅನುಭಾವಿ ಚೆನ್ನಬಸವಣ್ಣ, ಅಂತರಂಗ ಶುದ್ಧಿ ಇದ್ದರೆ ಬಹಿರಂಗ ಶುದ್ಧಿ ತಾನೇ ತಾನಾಗಿ ಸಿದ್ಧಿಸುತ್ತದೆ. ಆದರೆ ಬಹಿರಂಗ ಶುದ್ಧಿಯಿಂದ ಅಂತರಂಗ ಶುದ್ದಿ ಸಾಧಿತವಾಗುತ್ತದೆಯೆಂದು ನಂಬಲು ಸಾಧ್ಯವಿಲ್ಲ. ಅಂತರಂಗ ಶುದ್ಧಿಗೆ ಬಹಿರಂಗ ಶುದ್ದಿ ಸಹಕಾರಿ ಆಗಬಹುದು ಅಷ್ಟೆ. ಅಂತರಂಗ ಶುದ್ಧಿಯಿಲ್ಲದ ಬಹಿರಂಗ ಶುದ್ಧಿಯನ್ನು "ಹೆಂಡದ ಮಡಕೆಯ ಹೊರಗೆ ತೊಳೆದಂತೆ ಕೂಡಲಸಂಗಮದೇವಾ" ಎಂದು ವಿಡಂಬಿಸುತ್ತಾರೆ ಬಸವಣ್ಣನವರು. ಹೊರಗಿನ ಕೊಳೆಯೇನೋ ಹೋಗುತ್ತದೆ; ಆದರೆ ಒಳಗಿನ ಕೊಳೆ ಮತ್ತು ದುರ್ವಾಸನೆ ಇದ್ದೇ ಇರುತ್ತದೆ. "ಮೀಂಬುಲಿಗನ ಹಕ್ಕಿಯಂತೆ ನೀರ ತಡಿಯಲ್ಲಿದ್ದು ಮೂಗ ಹಿಡಿದು ಧ್ಯಾನಮಾಡುವಿರಯ್ಯಾ" ಎಂದು ಇನ್ನೊಂದು ವಚನದಲ್ಲಿ ಮೂದಲಿಸುತ್ತಾರೆ. ಅಂತರಂಗ ಶುದ್ಧಿಯಿಲ್ಲದೆ ನದಿಯ ನೀರಿನಲ್ಲಿ ಮುಳುಗೇಳುವವರು ಮೀನಿಗಾಗಿ ಹೊಂಚುಹಾಕುತ್ತಾ ಮೌನಮುದ್ರೆ ಧರಿಸಿ ನಿಂತಿರುವ ನದೀತೀರದ ಬಕಪಕ್ಷಿಯಂತೆ ಬಸವಣ್ಣನವರಿಗೆ ಕಾಣಿಸುತ್ತಾರೆ. "ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ ತೊರೆಯಿಂಭೋ ತೊರೆಯಿಂಭೋ ಪರನಾರಿಯರ ಸಂಗವ ತೊರೆಯಿಂಭೋ, ಪರಧನದಾಮಿಷವ ತೊರೆಯಿಂಭೋ" ಎಂದು ಅಂತರಂಗ ಶುದ್ಧಿಗೆ ಆಗ್ರಹಪಡಿಸುತ್ತಾರೆ. ಇದೇ ರೀತಿ "ಹೀನಗುಣವ ಮನದೊಳಿಟ್ಟು, ತಾನು ವಿಷದ ಪುಂಜನಾಗಿ, ಮೌನಿ ಪುರಂದರವಿಠಲನ ಧ್ಯಾನ ಮಾಡುವವನ ಕಂಡು, ನಗೆಯು ಬರುತಿದೆ ಎನಗೆ ನಗೆಯು ಬರುತಿದೆ, ಜಗದೊಳಿರುವ ಜಾಣರೆಲ್ಲ ಹಗರಣ ಮಾಡುವುದ ಕಂಡು" ಎಂದು ನಗೆಯಾಡಿದ್ದಾರೆ ಪುರಂದರದಾಸರು.

ಮೀವೊಡೆ ಪೋಪಡೆ ಪಾಪವೇನದು ಕೆಸರೆ 
ಮೀವೊಡೆ ಮೈಯ ಮಲ ಪೋಪುದಾ ಪಾಪ
ಲೇಪವಾಗಿಪ್ಪುದು ಸರ್ವಜ್ಞ

ಸ್ನಾನ ಮಾಡಿದರೆ ಹೋಗಲು ಪಾಪವೆಂಬುದೇನು ಮೈಗೆ ಅಂಟಿದ ಕೆಸರೇ? ಸ್ನಾನದಿಂದ ಮೈಯಲ್ಲಿನ ಕೊಳೆ ಹೋದೀತು, ಆದರೆ ಪಾಪ ಮಾತ್ರ ವಜ್ರಲೇಪವಾಗಿಯೇ ಉಳಿಯುತ್ತದೆ ಎನ್ನುತ್ತಾನೆ  ಸರ್ವಜ್ಞ.

ನನ್ನವ್ವ ಕಲ್ಲ ಬಿಡೆ
ಈ ಧೋತ್ರವ ಚೆನ್ನಾಗಿ ಒಗೆಯಬೇಕು
ಉಟ್ಟ ಧೋತ್ರವು ಮಾಸಿತು ಮನದೊಳಗಿರುವ 
ದುಷ್ಟರೈವರುಗಳಿಂದ ಕಷ್ಟದುರಿತಗಳು
ಬಿಟ್ಟು ಹೋಗುವ ಹಾಗೆ ಮುಟ್ಟಿ ಜಲದೊಳು 
ಗಟ್ಟಾಗಿ ಒಗೆಯಬೇಕು

ಕನಕದಾಸರ ಈ ಕೀರ್ತನೆಯಲ್ಲಿ ಬರುವ "ಉಟ್ಟ ಧೋತ್ರ" ಬೇರಾವುದೂ ಅಲ್ಲ, ಆತನ ನೆಲೆಯಾದ ದೇಹ. ಅದನ್ನು ಪಂಚೇಂದ್ರಿಯಗಳು ಆವರಿಸಿ ಕೆಡಿಸಿವೆ. ಆ ಹಾವಳಿಯನ್ನು ಕೊನೆಗಾಣಿಸಲು ಧೋತ್ರವನ್ನು ಸ್ವಚ್ಛವಾಗುವ ಹಾಗೆ ಒಗೆಯಬೇಕು ಎನ್ನುತ್ತಾರೆ ಅವರು. 

ಕಾನೂನು ಬಹಿರಂಗ ಶುದ್ಧಿಗೆ ಮಾತ್ರ ಒತ್ತು ಕೊಡುತ್ತದೆ. ಸುಳ್ಳು, ಠಕ್ಕು, ಮೋಸ, ವಂಚನೆ, ಕಳ್ಳತನ, ಕೊಲೆ ಮೊದಲಾದ ಅಪರಾಧಗಳಿಗೆ ನಿರ್ದಿಷ್ಟವಾದ ಕಾನೂನಿನ ಸೆಕ್ಷನ್/ಕಾಲಂಗಳಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸುತ್ತದೆ. ಆದರೆ ಕಾನೂನಿನ ಕೈಗಳು ಎಷ್ಟೇ ಉದ್ದವಿದ್ದರೂ ಅವು ತನಗೆ ತಾಗದ ಹಾಗೆ ಸುರಕ್ಷಿತ ದೂರದಲ್ಲಿ ನಿಂತು ಕಾನೂನನ್ನೇ ಆಟವಾಡಿಸಬಲ್ಲ ಪಾತಕಿಗಳಿಗೆ ಮತ್ತು ಅವರನ್ನು ಕಾನೂನಿನ ಅಡಿಯಲ್ಲಿಯೇ ರಕ್ಷಿಸಬಲ್ಲ ನ್ಯಾಯವಾದಿಗಳಿಗೆ ಕೊರತೆ ಇದೆಯೇ? ಸಮಾಜ ಮತ್ತು ವ್ಯಕ್ತಿಗಳ ಸಂಬಂಧದಲ್ಲಿ ಕಂಡುಬರುವ ಬಾಹ್ಯ ಅಪರಾಧಗಳನ್ನು ಕಾನೂನು ತಡೆಯುತ್ತದೆ; ಶಿಕ್ಷೆ ವಿಧಿಸುತ್ತದೆ. ಜನರಲ್ಲಿ ಶಿಕ್ಷೆ ಎಂಬ ಭಯವನ್ನು ಬಿತ್ತಿ ಮನುಷ್ಯನ ಮನಃಸ್ಥಿತಿಯನ್ನು ಪರೋಕ್ಷವಾಗಿ ತಿದ್ದಲು ಯತ್ನಿಸುತ್ತದೆ. ಆದರೆ ಕಾನೂನಿನಿಂದ ಪರಿಪೂರ್ಣವಾದ ಅಂತರಂಗ ಶುದ್ದಿಯನ್ನು ತರಲು ಸಾಧ್ಯವಿಲ್ಲ. ಗೊತ್ತಿಲ್ಲದೆ ತಪ್ಪು ಮಾಡುವುದು ಬೇರೆ, ತಿಳಿದೂ ತಿಳಿದೂ ಪ್ರಜ್ಞಾಪೂರ್ವಕವಾಗಿಯೇ ತಪ್ಪು ಮಾಡುವುದು ಬೇರೆ. ಗೊತ್ತಿಲ್ಲದೆ ತಪ್ಪು ಮಾಡುವುದು ಅಜ್ಞಾನ; ತಿಳಿದೂ ತಿಳಿದೂ ತಪ್ಪು ಮಾಡುವುದು ಮಹಾ ಪಾಪ.

ಕೊಳದಲ್ಲಿ ನೀರು ಬಗ್ಗಡವಾಗಿದ್ದರೆ, ಅಲೆಗಳು ಇದ್ದರೆ ಅದರ ತಳವನ್ನು ಕಾಣಲು ಸಾಧ್ಯವಿಲ್ಲ. ಕೊಳದ ತಳ ಕಾಣಿಸಬೇಕಾದರೆ ಜಲ ನಿಸ್ತರಂಗವಾಗಿರಬೇಕು, ನಿರ್ಮಲವಾಗಿರಬೇಕು. ಅಲೆಗಳನ್ನು ನಿವಾರಿಸಿ, ಪ್ರಶಾಂತಗೊಳಿಸಿದರೆ, ಬಗ್ಗಡಗೊಂಡ ನೀರನ್ನು ತಿಳಿಗೊಳಿಸಿದರೆ ಕೊಳದ ತಳವನ್ನು ನೋಡಲು ಸಾಧ್ಯ. ಅದೇ ರೀತಿ ಕ್ಷೋಭೆಗೊಂಡ ಮನಸ್ಸನ್ನು ತಿಳಿಗೊಳಿಸಿದರೆ ಆತ್ಮದರ್ಶನಕ್ಕೆ ದಾರಿಮಾಡಿಕೊಡುತ್ತದೆ. ಆತ್ಮ ದರ್ಶನಕ್ಕೆ ಬಹಿರಂಗ ಶುದ್ದಿಯ ಜತೆಗೆ ಅಂತರಂಗ ಶುದ್ದಿ ಅತ್ಯಗತ್ಯ, ಅಂತರಂಗ ಶುದ್ದಿಯ ಮೂಲಕ ಆತ್ಮದರ್ಶನವನ್ನು ಮಾಡಿಸುವುದೇ ಜಗತ್ತಿನ ಎಲ್ಲ ಧರ್ಮಗಳ ತಿರುಳೂ ಆಗಿದೆ.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 5.3.2015