ಪಾದ್ರಿಯೊಬ್ಬರು ಶಾಸ್ತ್ರಿಗಳ ಮನೆಗೆ ಬಂದಾಗ!
ಕನ್ನಡ ಸಾಹಿತ್ಯ ಚರಿತ್ರೆಯನ್ನು ಚರಿತ್ರಕಾರರು ನಾನಾರೀತಿಯಲ್ಲಿ ವರ್ಗೀಕರಿಸಿದ್ದಾರೆ. ಕನ್ನಡ ಕವಿಚರಿತೆಕಾರರಾದ ಆರ್. ನರಸಿಂಹಾಚಾರ್ಯರು "ಜೈನ ಯುಗ, ವೀರಶೈವ ಯುಗ, ಬ್ರಾಹ್ಮಣ ಯುಗ" ಎಂದು ಮತಧರ್ಮಗಳ ಆಧಾರದ ಮೇಲೆ ವರ್ಗೀಕರಿಸಿದರೆ, ರೆವರೆಂಡ್ ಎಫ್. ಕಿಟಲ್ ರವರು "ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಸಾಹಿತ್ಯವೆಂದು" ಭಾಷಾಸ್ವರೂಪದ ಆಧಾರದ ಮೇಲೆ ವರ್ಗೀಕರಿಸಿದರು. ಇನ್ನೂ ರಂ.ಶ್ರೀ ಮುಗಳಿಯವರು "ಪಂಪಪೂರ್ವಯುಗ, ಪಂಪಯುಗ, ಬಸವಯುಗ, ಕುಮಾರವ್ಯಾಸಯುಗ" ಎಂದು ಆಯಾಯ ಕಾಲಘಟ್ಟದ ಪ್ರಸಿದ್ಧ ಕವಿಗಳ ಹೆಸರಿನಲ್ಲಿ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಿದರು. ಮಹಾದಾರ್ಶನಿಕರಾದ ಬಸವಣ್ಣನವರನ್ನು ಕವಿಗಳ ಸಾಲಿನಲ್ಲಿ ಕುಳ್ಳಿರಿಸಬಯಸದ ತ.ಸು.ಶಾಮರಾಯರು ಬಸವಯುಗವನ್ನು "ಹರಿಹರಯುಗ"ವೆಂದು ಬದಲಾಯಿಸಿದರು. ಒಟ್ಟಾರೆ ಮತಧರ್ಮಗಳ ಹೆಸರಿನಲ್ಲಿ ವರ್ಗೀಕರಣ ಸಾಧುವಲ್ಲ ಎಂಬ ಅಭಿಪ್ರಾಯಕ್ಕೆ ಚಾಲನೆ ದೊರೆಯಿತು. ವಿದ್ವಾಂಸರ ಅಭಿಪ್ರಾಯವೇನೇ ಇರಲಿ ಮತಧರ್ಮಗಳು ಸಾಹಿತ್ಯ ನಿರ್ಮಿತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದಂತೂ ನಿರ್ವಿವಾದ. ಪ್ರಾರಂಭದಲ್ಲಿ ಸಾಹಿತ್ಯಕ್ಕೆ ಪ್ರೇರಣೆ ನೀಡಿರುವುದು ಧರ್ಮವೇ ಆಗಿದೆ. ಕಾವ್ಯ ನಿರ್ಮಿತಿಯಲ್ಲಿ ಕವಿಯ ಧಾರ್ಮಿಕ ನಂಬುಗೆಗಳು ಗಾಢವಾದ ಪ್ರಭಾವವನ್ನು ಬೀರಿವೆ.
ಹಿಂದಿನ ಸಾಹಿತ್ಯ ನಿರ್ಮಾತೃಗಳಿಗೆ ಮತಧರ್ಮವೇ ಪ್ರೇರಣಾ ಶಕ್ತಿ. ಹೀಗಾಗಿ ಅವರುಗಳು ತಂತಮ್ಮ ಮತಧರ್ಮಗಳ ಮಿತಿಯಲ್ಲಿಯೇ ಸಾಹಿತ್ಯ ರಚನೆ ಮಾಡಿದ್ದಾರೆ. ತಮ್ಮ ಮತಧರ್ಮದ ಪ್ರಭಾವದ ಮಿತಿಗಳನ್ನು ಮೀರಲು ಅವರಿಗೆ ಸಾಧ್ಯವಾಗಲಿಲ್ಲ. ಆ ರೀತಿ ಯಾರಾದರೂ ಮಿತಿಯನ್ನು ಮೀರಿದರೆ ಅದು ಸ್ವಧರ್ಮಕ್ಕೆ ಅಪಚಾರವೆಂದೇ ಪರಿಭಾವಿಸಲಾಗುತ್ತಿತ್ತು. ಕವಿ ರಾಘವಾಂಕ ವಿರಚಿಸಿದ "ಹರಿಶ್ಚಂದ್ರ ಮಹಾಕಾವ್ಯ" ರಾಜನ ಮನ್ನಣೆ ಪಡೆಯಿತು. ಆದರೆ ಅದನ್ನು ಅರ್ಪಿಸಲು ರಾಘವಾಂಕ ತನ್ನ ಗುರು ಹಾಗೂ ಸೋದರ ಮಾವನಾದ ಹರಿಹರನ ಹತ್ತಿರ ಹೋದಾಗ ಹರಿಹರ ರಾಘವಾಂಕನಿಗೆ ಕಪಾಳಮೋಕ್ಷ ಮಾಡಿದನಂತೆ. "ನರ ಮಾನವನಾದ ಹರಿಶ್ಚಂದ್ರ"ನನ್ನು ಕುರಿತು ಕಾವ್ಯ ರಚನೆ ಮಾಡಿದ್ದು ಅವನಿಗೆ ಸುತರಾಂ ಇಷ್ಟವಾಗಲಿಲ್ಲ, ನಂತರ ರಾಘವಾಂಕನೂ ಹರಿಹರನ ದಾರಿಯಲ್ಲಿಯೇ ಸಾಗಿ ಶಿವಶರಣರನ್ನು, ಶಿವನನ್ನು ಕುರಿತು "ಸಿದ್ಧರಾಮ ಚಾರಿತ್ರ" ಮುಂತಾದ ಕಾವ್ಯಗಳನ್ನು ಬರೆದ. ಮತಧರ್ಮಗಳ ಕಟ್ಟನ್ನು ಕವಿ ಮೀರಕೂಡದು ಎಂಬ ಮಿಥ್ಯಾನಿಷ್ಠೆ ಎಷ್ಟು ಬಲವತ್ತರವಾಗಿತ್ತು ಎಂಬುದಕ್ಕೆ ಈ ದಂತಕತೆ ಉತ್ತಮ ನಿದರ್ಶನವಾಗಿದೆ.
ಆಧುನಿಕ ಕಾಲದ ಸಾಹಿತ್ಯ ರಚನೆಯಲ್ಲಿ ಮತಧರ್ಮದ ಚೌಕಟ್ಟುಗಳು ಸಡಿಲಗೊಂಡಿವೆ. ಅನೇಕರು ಈ ಕಟ್ಟುಪಾಡುಗಳನ್ನು ಮೀರಿ ಸಾಹಿತ್ಯ ನಿರ್ಮಾಣ ಮಾಡಿದ್ದಾರೆ. ಪ್ರತಿಯೊಬ್ಬರ ಬದುಕಿನಲ್ಲಿ ತಮ್ಮ ನಾಡು, ನುಡಿ, ಧರ್ಮಗಳ ಬಗೆಗೆ ಸಹಜವಾದ ಅಭಿಮಾನವಿದ್ದೇ ಇರುತ್ತದೆ. ಬೇರೊಂದು ನಾಡು, ನುಡಿ, ಧರ್ಮಗಳ ಬಗೆಗೆ ಅಂತಹ ಭಾವನಾತ್ಮಕ ಸಂಬಂಧ ಇಲ್ಲದೇ ಹೋದರೂ ಕೆಲವು ಉದಾತ್ತ ವ್ಯಕ್ತಿಗಳು ಬೌದ್ಧಿಕ ಸ್ತರದಲ್ಲಿ ಗಾಢವಾದ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಈ ಸಂಬಂಧ ಎಷ್ಟು ಗಟ್ಟಿಯಾಗಿರುತ್ತದೆ ಎಂದರೆ ಆಯಾ ನಾಡು, ನುಡಿ, ಧರ್ಮಗಳ ವಾರಸುದಾರರಿಗಿಂತ ಹೆಚ್ಚು ನಿಷ್ಠೆಯಿಂದ ಇವರು ತಾವು ಪ್ರೀತಿಸಿದ ಭಾಷೆಯ ಸೇವೆಗೆ ಕಟಿಬದ್ಧವಾಗಿ ನಿಲ್ಲುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಕಿಟೆಲ್ ಮಹಾಶಯ. ಹುಟ್ಟಾ ಜರ್ಮನ್ ಆಗಿದ್ದರೂ ಅವರಿಗೆ ಕನ್ನಡದ ಬಗೆಗೆ ಅಪಾರ ಪ್ರೇಮಾದರ, ಅದರ ಫಲಶ್ರುತಿಯೇ ಇಂದಿಗೂ ಅಭೂತಪೂರ್ವ ಎನಿಸಿರುವ ಕಿಟೆಲ್ ನಿಘಂಟು. ಅದೊಂದು ಕೇವಲ ಶಬ್ದಕೋಶವಲ್ಲ. ಅದರಲ್ಲಿ ಕನ್ನಡ ಕಾವ್ಯವಿದೆ, ವ್ಯಾಕರಣವಿದೆ, ಭಾಷಾಶಾಸ್ತ್ರವಿದೆ, ಜಾನಪದ ಸಂಪತ್ತಿದೆ. ಭಾಷಾಭ್ಯಾಸಿಗಳಿಗೆ, ಭಾಷಾಪ್ರೇಮಿಗಳಿಗೆ ಅದೊಂದು ರಸದೌತಣವೇ ಸರಿ.
ಮತಧರ್ಮದ ಬಂಧನದಿಂದ ಸಾಹಿತ್ಯವನ್ನು ಬಿಡಿಸಿ ಮಿತಿಗಳನ್ನು ಮೀರಿ ಅದರ ಶುದ್ಧರೂಪವನ್ನು ಆಧುನಿಕ ಕಾಲದ ಅನೇಕರು ಪರಿಚಯಿಸಿದ್ದಾರೆ. ಕನ್ನಡ ಸಾಹಿತ್ಯ ಮತಧರ್ಮಗಳನ್ನು ಮೆಟ್ಟಿನಿಂತು ವಿಶ್ವಮಾನವತೆಯ ಮೆಟ್ಟಿಲುಗಳನ್ನೇರಿ ಈಗ ಬೆಳೆದಿದೆ. ಯಾವುದೇ ಮತಧರ್ಮದವರಾದರೂ ಶುದ್ಧ ಸಾಹಿತ್ಯದ ಅಭಿರುಚಿಯನ್ನು ಆಧುನಿಕ ಕಾಲದಲ್ಲಿ ಬೆಳೆಸಿಕೊಂಡಿದ್ದಾರೆ. ಅಂತಹವರಲ್ಲಿ ರೆವರೆಂಡ್ ಉತ್ತಂಗಿ ಚೆನ್ನಪ್ಪನವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಅವರ ಪೂರ್ವಜರು ಲಿಂಗಾಯತರು. ಕ್ರೈಸ್ತ ಧರ್ಮವನ್ನು ಸ್ವೀಕರಿಸಿ ಕ್ರಿಸ್ತನ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡವರು. ಮತಾಂತಗೊಂಡರೂ ಸಹ ಹುಟ್ಟು ಧರ್ಮದ ಆಕರ್ಷಣೆ ಅವರನ್ನು ಬಿಡಲಿಲ್ಲ. ಏಸುಕ್ರಿಸ್ತನಂತೆಯೇ ಬಸವಣ್ಣ ಅವರಿಗೆ ಆರಾಧ್ಯ ದೈವ. ಇತ್ತೀಚೆಗೆ ನಮ್ಮ ಮಠದಿಂದ ಪ್ರಕಟಗೊಂಡ "ಅನುಭವ ಮಂಟಪದ ಐತಿಹಾಸಿಕತೆ" ಎಂಬ ಅವರ ಸಂಶೋಧನಾ ಗ್ರಂಥ (2ನೇ ಆವೃತ್ತಿ - ಸಂ. ಎಸ್. ಆರ್. ಗುಂಜಾಳ) ಉತ್ತಂಗಿಯವರ ಪ್ರಕಾಂಡ ವಿದ್ವತ್ತು, ಇತಿಹಾಸ ಪ್ರಜ್ಞೆ, ವಚನ ಸಾಹಿತ್ಯ ಹಾಗೂ ಅದನ್ನು ಆಧರಿಸಿದ ಸಮಗ್ರ ಗ್ರಂಥರಾಶಿಯ ಆಳವಾದ ಜ್ಞಾನದ ಫಲವಾಗಿದೆ.
ರೆವರೆಂಡ್ ಉತ್ತಂಗಿ ಚೆನ್ನಪ್ಪನವರ ಹೆಸರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಜರಾಮರ, ಏಸುಕ್ರಿಸ್ತನ ನಮ್ಮ ಸೇವಕರಾದ ಅವರು ಬೈಬಲ್ ನಂತೆಯೇ ಬಸವ ತತ್ವಗಳನ್ನೂ ಹೃದ್ಗತ ಮಾಡಿಕೊಂಡವರು. ವೇದೋಪನಿಷತ್ತುಗಳ ಹಾಗೂ ರಾಮಾಯಣ-ಮಹಾಭಾರತಗಳ ಅವರ ಪ್ರಗಲ್ಭ ಪಾಂಡಿತ್ಯ, ಇತಿಹಾಸವನ್ನು ಕುರಿತ ಅವರ ಒಳನೋಟಗಳು ಎಂಥವರನ್ನೂ ದಿಙ್ಮೂಢರನ್ನಾಗಿ ಮಾಡುತ್ತವೆ. ಅನೇಕ ದಶಕಗಳ ಕಾಲ ಸರ್ವಜ್ಞ ಕವಿಯನ್ನು ಕುರಿತು ಮಾಡಿದ ಅವರ ವಿಸ್ತೃತ ಅಧ್ಯಯನ, ತ್ರಿಪದಿಗಳ ಸಂಸ್ಕರಣೆ, ಪ್ರಕ್ಷೇಪಗಳ ಕುರಿತ ಆಳವಾದ ಸಂಶೋಧನೆ ಅವಿಸ್ಮರಣೀಯ. ಅತಿ ಸುಲಭವಾದ ತ್ರಿಪದಿಯ ಛಂದಸ್ಸನ್ನು ಬಳಸಿಕೊಂಡು ಬೇಕಾದವರು ಬೇಕಾದ ಹಾಗೆ ಸಾಲುಗಳನ್ನು ರಚಿಸಿ ಕೊನೆಗೆ "ಸರ್ವಜ್ಞ" ಎಂಬ ಅಂಕಿತವನ್ನು ಅಂಟಿಸಿ ಅವೆಲ್ಲವನ್ನೂ ಸರ್ವಜ್ಞ ಕವಿಯ ತಲೆಗೆ ಕಟ್ಟಿದ್ದರು. ಸರ್ವಜ್ಞ ಕವಿಯು ಸರಸ್ವತಿಯ ನವರತ್ನ ಭಂಡಾರದಲ್ಲಿ ತುಂಬಿಸಿದ ಅಮೂಲ್ಯ ವಜ್ರಗಳ ಜತೆಗಿದ್ದ ಇಂಥಹ ನಕಲಿ ವಜ್ರಗಳನ್ನು ಪತ್ತೆಹಚ್ಚಿ ಹೆಕ್ಕಿ ತೆಗೆಯುವುದು ಸುಲಭ ಸಾಧ್ಯವಾದ ವಿಷಯವೇನೂ ಆಗಿರಲಿಲ್ಲ, ಉತ್ತಂಗಿ ಚೆನ್ನಪ್ಪನವರು ಆ ಕೆಲಸವನ್ನು ಮಾಹೇಶ್ವರ ನಿಷ್ಠೆಯಿಂದ ಮಾಡಿ ಸರ್ವಜ್ಞನ ವಚನಗಳನ್ನು ನೇರ್ಪುಗೊಳಿಸಿ ನಾಡಿಗೆ ಮಹದುಪಕಾರ ಮಾಡಿದರು.
ಉತ್ತಂಗಿ ಚೆನ್ನಪ್ಪನವರು 1928 ರ ಮೇ ತಿಂಗಳಲ್ಲಿ ಬೆಂಗಳೂರಿಗೆ ಹೋಗಿದ್ದರು. ಅವರ ಪ್ರಗಲ್ಭಪಾಂಡಿತ್ಯವನ್ನು ಮನಗಂಡಿದ್ದ ದೇವುಡು ನರಸಿಂಹ ಶಾಸ್ತ್ರಿಗಳು ಉತ್ತಂಗಿಯವರನ್ನು ತಮ್ಮ ಮನೆಗೆ ಬರಬೇಕೆಂದು ಆಹ್ವಾನಿಸಿದರು. ದೇವುಡು ನರಸಿಂಹಶಾಸ್ತ್ರಿಗಳು ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಅಪಾರವಾದ ವಿದ್ವತ್ತನ್ನು ಗಳಿಸಿದವರು. "ಮಹಾಬ್ರಾಹ್ಮಣ", "ಮಹಾಕ್ಷತ್ರಿಯ", "ಮಹಾದರ್ಶನ" ಎಂಬ ಬೃಹತ್ ಕಾದಂಬರಿಗಳ ಕರ್ತೃ. ಮಾರನೇ ದಿನ ಕೈಸ್ತ ಧರ್ಮ ಗುರುವಾದ ಚೆನ್ನಪ್ಪನವರನ್ನು ಮನೆಯೊಳಕ್ಕೆ ಹೇಗೆ ಸ್ವಾಗತಿಸಬೇಕೆಂಬ ಬಗ್ಗೆ ಶಾಸ್ತ್ರಿಗಳಿಗೆ ಜಿಜ್ಞಾಸೆಗೆ ಇಟ್ಟುಕೊಂಡಿತು. ಅವರು ತಮ್ಮ ಧರ್ಮಗುರುಗಳನ್ನು ಕೇಳಿದರು. ಗುರುಗಳು "ನಿನ್ನ ಗುರುಗಳು ಬಂದರೆ ಹೇಗೆ ಸ್ವಾಗತಿಸುತ್ತೀಯೋ ಹಾಗೆಯೇ ಸ್ವಾಗತಿಸು" ಎಂದು ಹೇಳಿದರು. ಮರುದಿನ ಮುಂಜಾನೆ ಉತ್ತಂಗಿಯವರು ಅವರ ಮನೆಗೆ ಬಂದಾಗ ದೇವುಡು ನರಸಿಂಹ ಶಾಸ್ತ್ರಿಗಳು ರೆವರೆಂಡ್ ಉತ್ತಂಗಿ ಚೆನ್ನಪ್ಪನವರ ಪಾದ ತೊಳೆದು ಮನೆಯೊಳಗೆ ಬರಮಾಡಿಕೊಂಡರು. "ನಾನು ಸಂಧ್ಯಾವಂದನಾದಿಗಳನ್ನು ಮಾಡಿ ಸಿದ್ಧನಾಗಿದ್ದೆ. ಶ್ರೀ ಉತ್ತಂಗಿಯವರು ಬರಲು ಅವರಿಗೆ ಕಾಲು ತೊಳೆಯಲು ಹೋದೆ. ಅವರು ಮೊದಲು ಹಿಂತೆಗೆದರು. ಅನಂತರ ಬಲವಂತವಾಗಿ ಕಾಲು ತೊಳೆದು ಊಟ ಮಾಡಿಸಿದೆ. ಅವರು ಪೂರ್ವಾಭಿಮುಖವಾಗಿ ನಾನು ಉತ್ತರಾಭಿಮುಖವಾಗಿ ಕುಳಿತಿದ್ದೆವು" ಎಂದು ಶಾಸ್ತ್ರಿಗಳು ತಮ್ಮ ದಿನಚರಿಯಲ್ಲಿ ದಾಖಲು ಮಾಡಿದ್ದಾರೆ.
ಶಾಸ್ತ್ರಿಗಳು ಮತ್ತು ಉತ್ತಂಗಿಯವರು ವಿಭಿನ್ನ ಧರ್ಮೀಯರಾಗಿದ್ದರೂ ಆ ಎರಡು ಜೀವಗಳ ಮಧ್ಯೆ ಇದ್ದ ಸೆಳೆತವೆಂದರೆ ಅಪ್ಪಟ ಕನ್ನಡ ಸಾಹಿತ್ಯ! ರಾಜಕೀಯ ಲಾಭದ ಲೆಕ್ಕಾಚಾರ, ಧರ್ಮ ಧರ್ಮಗಳ ತಿಕ್ಕಾಟ, ಜಾತಿ ಉಪಜಾತಿಗಳ ಉಪಟಳ ಕಾಣಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಈ ಘಟನೆ ಎಲ್ಲರ ಕಣ್ಣು ತೆರೆಸುವಂತಹುದಾಗಿದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 2.4.2015