ಅಂತರ್ಜಾಲ ವರ್ಗಾವಣೆಯ ಮಹಾಪರ್ವ!
ಇದೀಗ ಸುಡುಬೇಸಿಗೆಯ ಬಿಸಿಲು ಜನರನ್ನು ಕಂಗಾಲುಗೊಳಿಸಿದೆ. ಶಾಲೆಗಳಿಗೆ ಬೇಸಿಗೆ ರಜೆ ಆರಂಭ. ಪಾದರಸದಂತೆ ಏರುವ ತಾಪಮಾನ. ಒಂದೆಡೆ ಆಬಾಲವೃದ್ಧರಿಗೆ ಬಿಸಿಲಿನ ತಾಪವಾದರೆ ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಫಲಿತಾಂಶದ ತಾಪ, ಪರಿತಾಪ! ಎರಡೂ ಸಹ ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಆದರೆ ಒಂದು ವ್ಯತ್ಯಾಸ. ಅಕಾಲಿಕ ಮಳೆಯ ಸಿಂಚನದಿಂದ ಬಿಸಿಲಿನ ತಾಪ ಒಂದೆರಡು ದಿನಗಳ ಮಟ್ಟಿಗೆ ಕಡಿಮೆಯಾದರೂ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯ ತಾಪ ಮಾತ್ರ ಕಡಿಮೆಯಾಗುವುದಿಲ್ಲ, ಮತ್ತೊಂದು ತಾಪವೆಂದರೆ ಪ್ರತಿವರ್ಷದಂತೆ ಈ ಬಾರಿಯೂ ಸರಕಾರೀ/ಖಾಸಗೀ ನೌಕರವರ್ಗದವರನ್ನು ಮಾಮೂಲಿಯಾಗಿ ಕಾಡುವ ವರ್ಗಾವಣೆಯ ತಾಪ! ಅದಕ್ಕಾಗಿ ಕಂಡ ಕಂಡ ಪ್ರಭಾವೀ ವ್ಯಕ್ತಿಗಳ ಬಳಿ ಶಿಫಾರಿಸ್ಸಿಗಾಗಿ ಎಡತಾಕುವುದು ಸರ್ವೇಸಾಧಾರಣವಾಗಿ ಕಾಣುವ ದೃಶ್ಯ.
ಎಪ್ಪತ್ತರ ದಶಕದ ಕೊನೆಯಲ್ಲಿ ಮಠದ ಅಧಿಕಾರ ವಹಿಸಿಕೊಂಡಾಗಿನಿಂದ ಹೆಗಲೇರಿದ ನಮ್ಮ ಶಿಕ್ಷಣಸಂಸ್ಥೆಯ ಆಡಳಿತ ನಿರ್ವಹಣೆ ಮತ್ತು ಸಾಮಾಜಿಕ ಹೊಣೆಗಾರಿಕೆ ನಮಗೆ ಅತಿ ದೊಡ್ಡ ಸವಾಲಾಯಿತು. ಪಟ್ಟಾಭಿಷೇಕ ಪೂರ್ವದಲ್ಲಿ ದೇಶ-ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಅನೇಕ ವರ್ಷಗಳ ಕಾಲ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಮುಳುಗಿ ಬೌದ್ಧಿಕ ಜಗತ್ತಿನಲ್ಲಿ ನಿರುಮ್ಮಳವಾಗಿದ್ದ ನಮಗೆ ದಿಢೀರನೆ ಮಠದ ಗದ್ದುಗೆಯನ್ನೇರಿ ಕುಳಿತಾಗ ಶಿಷ್ಯರ ಹಾರತುರಾಯಿಗಳ ಜೊತೆಗೆ ನಮಗೆ ಅರಿವಿಲ್ಲದೆ ನಮ್ಮ ಕೊರಳನ್ನು ಸುತ್ತಿಕೊಂಡದ್ದು ವ್ಯಾವಹಾರಿಕ ಜಗತ್ತಿನ ಸವಾಲುಗಳ ಸರಮಾಲೆ! ರಾಜ್ಯಾದ್ಯಂತ ಇರುವ ಶಾಲಾ ಕಾಲೇಜುಗಳ ಖಾಲಿಹುದ್ದೆಗಳ ನೇಮಕಾತಿ, ನೌಕರರು, ಅವರ ವರ್ಗಾವರ್ಗಿ, ಅಹವಾಲುಗಳು, ರಾಜಕೀಯ ಸಾಮಾಜಿಕ ಒತ್ತಡಗಳನ್ನು ತಾಳಿಕೊಳುವುದು; ಬರುವ ದೂಷಣೆಗಳನ್ನು ಸಹಿಸಿಕೊಳುವುದು - ಇವೆಲ್ಲ ಶಿವನು ಹಾಲಾಹಲವನ್ನು ಕುಡಿದಷ್ಟೇ ಸವಾಲಿನ ಕೆಲಸವಾಗಿತ್ತು. ಸಾಮಾಜಿಕ ಹಿತವನ್ನು ಬಲಿಗೊಡಲು ಬಯಸದವರು ಎಲ್ಲರಿಂದಲೂ ಒಳೆಯವರು ಎನ್ನಿಸಿಕೊಳ್ಳುವುದು ಅಸಾಧ್ಯವೆಂಬ ಅರಿವು ನಮಗೆ ಆಗಲು ಬಹಳ ಕಾಲ ಹಿಡಿಯಲಿಲ್ಲ ‘ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಲದೇ?" ಎಂದು ಬಸವಣ್ಣನವರು ಹೇಳುವಂತೆ ದೇವರಿಂದ ಲೇಸೆನಿಸಿಕೊಂಡು ಬದುಕಬಹುದೇ ಹೊರತು ಜನರಿಂದ ಲೇಸೆನಿಸಿಕೊಂಡು ಒಂದು ದಿನವೂ ಬದುಕಲು ಸಾಧ್ಯವಿಲ್ಲವೆಂಬ ಕಟು ಸತ್ಯ ಕೆಲವೇ ದಿನಗಳಲ್ಲಿ ಮನದಟ್ಟಾಯಿತು. ಆಗ ನಮ್ಮ ಆಸರೆಗೆ ಬಂದದ್ದು "ಜನರ ಅಪವಾದಗಳಿಗೆ ಅಂಜಬೇಡ. ಸ್ವಾರ್ಥವು ಸಿಗದಿದ್ದರೆ ದೂಷಿಸುತ್ತಾರೆ. ಸಿಕ್ಕರೆ ಹೊಗಳುತ್ತಾರೆ. ಅವರ ಹೊಗಳಿಕೆಗೂ ಬೆಲೆಯಿಲ್ಲ, ಉಗುಳುವಿಕೆಗೂ ಬೆಲೆಯಿಲ್ಲ" ಎಂದು ನಮ್ಮ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ದಿನಚರಿ (1937) "ಆತ್ಮನಿವೇದನೆ"ಯಲ್ಲಿ ಬರೆದ ಸ್ವಾನುಭವದ ಮಾತು.
ನಮ್ಮ ನೌಕರರು ತಮಗೆ ಬೇಕಾದ ಸ್ಥಳಗಳಿಗೆ ಆದ್ಯತೆಯನುಸಾರ ವರ್ಗಾವಣೆ ಅರ್ಜಿ ಸಲ್ಲಿಸಬಹುದು, ಸಹಾನುಭೂತಿಯಿಂದ ಪರಿಶೀಲಿಸಲಾಗವುದು, ಆದರೆ ಯಾರಿಂದಲೂ ಶಿಫಾರಸ್ಸು ಮಾಡಿಸಬಾರದು, ಒಂದು ವೇಳೆ ಹಾಗೆ ಮಾಡಿದರೆ ಅದನ್ನು ಅಶಿಸ್ತು ಎಂದು ಪರಿಗಣಿಸಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂಬ ಸುತ್ತೋಲೆಯನ್ನು ಹೊರಡಿಸಲಾಯಿತು. ಆದರೂ ನಮ್ಮ ವಿದ್ಯಾಸಂಸ್ಥೆಯ ಅಧ್ಯಾಪಕನೊಬ್ಬ ಪ್ರತಿಷ್ಠಿತ ಮಂತ್ರಿಗಳೊಬ್ಬರಿಂದ ವರ್ಗಾವಣೆಯ ಶಿಫಾರಸ್ಸು ಪತ್ರವನ್ನು ಪಡೆದು ಸಲ್ಲಿಸಿದ್ದ. ನಿಯಮೋಲ್ಲಂಘನೆ ಮಾಡಿದ್ದಕ್ಕಾಗಿ ಆಡಳಿತಾಧಿಕಾರಿಗಳು ಶಿಸ್ತಿನ ಕ್ರಮ ಏಕೆ ಕೈಗೊಳಬಾರದೆಂದು ಕಾರಣ ಕೇಳಿ ಆತನಿಗೆ ನೋಟೀಸು ನೀಡಿದರು. ಆ ನೋಟೀಸಿಗೆ ಉತ್ತರ ನೀಡುವ ಬದಲು ಅದನ್ನೇ ಆತ ನೇರವಾಗಿ ಮಂತ್ರಿಗಳ ಬಳಿ ಒಯ್ದು ಕೊಟ್ಟ. ಆ ಮಂತ್ರಿಗಳು ಓದಿಕೊಂಡು ನಮಗೇ ನೇರವಾಗಿ ಇನ್ನೊಂದು ಪತ್ರ ಬರೆದರು. ಅದನ್ನು ಆ ಅಧ್ಯಾಪಕನೇ ರಿಜಿಸ್ಟರ್ಡ್ ಅಂಚೆಯಲ್ಲಿ ನಮಗೆ ಕಳುಹಿಸಿದ್ದ. "ಕಷ್ಟದಲ್ಲಿರುವವರಿಗೆ ಮರುಗಿ ಶಿಫಾರಿಸು ಮಾಡಿ ಪತ್ರ ಬರೆದರೆ ಅದನ್ನೇ ಅಪರಾಧವೆಂದು ಪರಿಗಣಿಸಿ ತಮ್ಮ ಆಡಳಿತಾಧಿಕಾರಿಗಳು ಹೀಗೆ ನೋಟೀಸು ಕೊಡಬಹುದೇ?" ಎಂದು ಪ್ರಶ್ನಿಸಿದ ಮಂತ್ರಿಗಳು ಆ ಅಧ್ಯಾಪಕನ ಮಾವ ತನಗೆ ಬಹಳ ಬೇಕಾದವನು, ತನ್ನ ಕ್ಷೇತ್ರದವನು, ಆದಕಾರಣ ಅವನು ಕೇಳಿದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡಬೇಕೆಂದು ಒತ್ತಾಯಿಸಿ ಬರೆದಿದ್ದರು. ಆ ಪತ್ರವನ್ನು ಆಡಳಿತ ಮಂಡಳಿಯ ಸಭೆಯ ಮುಂದೆ ಇಟ್ಟಾಗ ಸದಸ್ಯರೆಲ್ಲರೂ ಅವರು ತುಂಬಾ ಪ್ರಭಾವೀ ಮಂತ್ರಿಗಳು, ಸಂಸ್ಥೆಯು ಅವರನ್ನು ಎದುರುಹಾಕಿಕೊಳ್ಳುವುದು ಬೇಡ, ಅವರು ಬಯಸಿದಂತೆ ವರ್ಗಾವಣೆ ಮಾಡುವುದು ಒಳ್ಳೆಯದು" ಎಂಬ ವ್ಯಾವಹಾರಿಕ ಸಲಹೆಯನ್ನು ನೀಡಿದರು. ಅದು ನಮಗೆ ಇಷ್ಟವಾಗಲಿಲ್ಲ, ಪ್ರಭಾವೀ ವ್ಯಕ್ತಿಗಳಿಂದ ಶಿಫಾರಿಸ್ಸು ಮಾಡಿಸಿದವರಿಗೆ ಒಂದು ನೀತಿ, ಮಾಡಿಸಲಾಗದವರಿಗೆ ಇನ್ನೊಂದು ನೀತಿ ಅನುಸರಿಸುವುದು ಸರಿಯಲ್ಲವೆಂದು ನಮಗೆ ಅನಿಸಿತು. ಸದಸ್ಯರ ಸಲಹೆಗೆ ವಿರುದ್ದವಾಗಿ ಸಚಿವರ ಪತ್ರಕ್ಕೆ ಮಾನ್ಯತೆ ಕೊಡದೆ ‘ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಕೊಟ್ಟರೂ ಅದನ್ನು ಬಳಕೆ ಮಾಡಿಕೊಳ್ಳದೆ ನಿಮ್ಮಿಂದ ಶಿಫಾರಿಸ್ಸು ಮಾಡಿಸಿದ್ದು ತಪ್ಪು, ಆತನ ಮಾವ ನಿಮ್ಮ ಕ್ಷೇತ್ರದವನಾಗಿರಬಹುದು. ಆದರೆ ಜಗತ್ತೇ ನಮ್ಮ ಕ್ಷೇತ್ರ, ಅವನು ವ್ಯಾಪಾರ ವಹಿವಾಟು ಮಾಡುತ್ತಿರುವ ತನ್ನ ಹುಟ್ಟಿದೂರಿಗೆ ವರ್ಗಾವಣೆ ಕೇಳಿಕೊಂಡಿದ್ದಾನೆ, ನಿಮ್ಮ ಶಿಫಾರಸ್ಸಿಗೆ ಮಾನ್ಯತೆ ಕೊಟ್ಟು ವರ್ಗಾವಣೆ ಮಾಡಿದರೆ ಅವನ ಕಾರಣದಿಂದ ಎತ್ತಂಗಡಿಮಾಡಬೇಕಾದ ಇನ್ನೋರ್ವ ಅಮಾಯಕ ಅಧ್ಯಾಪಕನಿಗೂ ಮತ್ತು ವಿದ್ಯಾರ್ಥಿಗಳಿಗೂ ಅನ್ಯಾಯವಾಗುತ್ತದೆ, ಆದ ಕಾರಣ ಈ ವರ್ಗಾವಣೆ ಮಾಡಲು ಆಗುವುದಿಲ್ಲ’ ಎಂದು ವಿಷಾದಿಸಿ ನಮ್ಮಿಂದ ಅವರಿಗೆ "ರಿಜಿಸ್ಟರ್ಡ್ ಪೋಸ್ಟ್ ಅಕನಾಲೆಡ್ಜ್ಮೆಂಟ್ ಡ್ಯೂ ಪತ್ರ ಹೋಯಿತು". ನಮ್ಮ ಪತ್ರದಿಂದ ಆ ಮಂತ್ರಿಗಳಿಗೆ ಅಸಮಾಧಾನ ಉಂಟಾದರೂ ನಮ್ಮ ಮೇಲೆ ಸಿಟ್ಟಾಗಲಿಲ್ಲ, ಬದಲಾಗಿ ನಮ್ಮ ಆಪ್ತರಾದ ಇನ್ನೊಬ್ಬ ಮಂತ್ರಿಗಳ ಬಳಿ ಏನಾದರೂ ಮಾಡಿ ಗುರುಗಳಿಗೆ ಹೇಳಿ ಈ ಕೆಲಸ ಮಾಡಿಸಿ ಕೊಡಿ ಎಂದು ಖುದ್ದಾಗಿ ಹೇಳಿ ಕಳುಹಿಸಿದರು. ಆದರೂ ಯಾವ ರಾಜಕೀಯ ಒತ್ತಡಕ್ಕೂ ಮಣಿಯದ ನಮ್ಮ ನಿಲುವು ಅಚಲವಾಗಿತ್ತು.
ಯಾವುದೇ ಸಂಸ್ಥೆ ಇರಲಿ ಅದರ ಮುಖ್ಯಸ್ಥರು ಯಾರೊಂದಿಗೆ ಹೆಚ್ಚು ಆತ್ಮೀಯರಾಗಿದ್ದಾರೆ ಎಂಬ ಸಂಶೋಧನೆಯನ್ನು ಯಾರ ಮಾರ್ಗದರ್ಶನವೂ ಇಲ್ಲದೆ ಅತ್ಯಂತ ಯಶಸ್ವಿಯಾಗಿ ಮಾಡುವ ನಿಪುಣರು ನೌಕರರು. ನಮ್ಮ ಅನುಭವದಿಂದಲೇ ಹೇಳುವುದಾದರೆ ಒಮ್ಮೆ ನಮ್ಮ ಸಂಸ್ಥೆಯ ನೌಕರನೊಬ್ಬ ಆಸ್ಟ್ರೇಲಿಯಾದಲ್ಲಿರುವ ಅವರ ಹತ್ತಿರದ ಸಂಬಂಧಿಯನ್ನು ಸಂಪರ್ಕಿಸಿ ಅವರಿಂದ ವರ್ಗಾವಣೆಗೆ ಶಿಫಾರಿಸ್ಸು ಮಾಡಿಸಲು ಪ್ರಯತ್ನಿಸಿದ್ದ. ಸಿಡ್ನಿಗೆ ಹೋದಾಗಲೆಲ್ಲಾ ವಿಮಾನನಿಲ್ದಾಣಕ್ಕೆ ಬಂದು ನಮ್ಮನ್ನು ಸ್ವಾಗತಿಸಿ ಆದರಾತಿಥ್ಯ ಮಾಡುತ್ತಿದ್ದ ಆತ್ಮೀಯ ಶಿಷ್ಯರಾದ ಶ್ರೀ ಓಂಕಾರಮೂರ್ತಿಯವರು ನಮ್ಮ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳಲು ಇಷ್ಟಪಡಲಿಲ್ಲ, "ಕಳೆದ 30 ವರ್ಷಗಳಿಂದ ಹುಟ್ಟಿದೂರಿನಿಂದ ಒಂಭತ್ತು ಸಾವಿರ ಕಿ.ಮೀ. ದೂರದ ಸಿಡ್ನಿಯಲ್ಲಿ ನಾನೇ ಕೆಲಸಮಾಡುತ್ತಿರುವಾಗ ನೂರೈವತ್ತು ಕಿ.ಮೀ. ಗಿಂತ ಹೆಚ್ಚು ದೂರದಲ್ಲಿರದ ಶಾಲೆಯಲ್ಲಿ ಕೆಲಸಮಾಡಿಕೊಂಡಿರಲು ನಿನಗೇನಾಗಿದೆ ಧಾಡಿ?” ಎಂದು ಆತನಿಗೆ ದಬಾಯಿಸಿ ಮಿಂಚೋಲೆ ಬರೆದಿದ್ದ ವಿಚಾರವನ್ನು ಅಲ್ಲಿಗೆ ಹೋದಾಗ ತಿಳಿಸಿದರು.
ದೂರದ ಶಿಷ್ಯರೊಬ್ಬರ ಪ್ರತಿಕ್ರಿಯೆ ಹೀಗಿರುತ್ತದೆ ಎಂದರೆ ಎಲ್ಲರೂ ಹೀಗೆಯೇ ಪ್ರತಿಕ್ರಿಯಿಸುತ್ತಾರೆಂದು ಹೇಳಲಾಗದು. "ನಾನು ಎಂದೂ ಏನೂ ಕೇಳಿಲ್ಲ. ಇದೊಂದನ್ನು ಮಾಡಿಕೊಡಿ" ಎಂದು ಒತ್ತಾಯ ತರುವವರೇ ಹೆಚ್ಚು ಹೇಳಿದಂತೆ ಮಾಡಿಕೊಡದೆ ಹೋದರೆ ಬೇಸರಪಟ್ಟುಕೊಳ್ಳುತ್ತಾರೆ. ವರ್ಗಾವಣೆ ಕಾರಣಕ್ಕೇನೆ ಅನೇಕರು ನಮ್ಮ ಜೊತೆ ಮನಸ್ತಾಪ ಮಾಡಿಕೊಂಡಿರುವುದೂ ಉಂಟು. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಅನಿವಾರ್ಯ! ವರ್ಗಾವಣೆಗಾಗಿ ಒಂದು ಸಮಿತಿಯನ್ನು ನೇಮಕ ಮಾಡಿದರೂ ಆ ಸಮಿತಿಯು ಯಾವ ಹಿತಾಸಕ್ತಿಯೂ ಇಲ್ಲದೆ ನಿಷ್ಪಕ್ಷಪಾತವಾಗಿ ಮಾಡುತ್ತದೆ ಎಂದು ನಂಬಲು ಸಾಧ್ಯವಿಲ್ಲ. ಸಮಿತಿಯು ಏನೇ ಮಾಡಿದರೂ "ಭೃತ್ಯಾಪರಾಧೋ ಸ್ವಾಮಿನೋ ದಂಡಃ" (ಆಳು ಮಾಡಿದ ತಪ್ಪಿಗೆ ಒಡೆಯನಿಗೆ ಶಿಕ್ಷೆ) ಎಂಬ ಸಂಸ್ಕೃತ ನಾಣ್ಣುಡಿಯಂತೆ ಸಂಸ್ಥೆಯ ಮುಖ್ಯಸ್ಥರು ಬೇಕಾದವರಿಗೇ ಒಂದು ಬೇಡವಾರದವರಿಗೇ ಒಂದು ಮಾಡಿದ್ದಾರೆಂಬ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳ ಹಿಂದೆ ಚಿಂತಿಸಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ಶಿಕ್ಷಣಸಂಸ್ಥೆಯ ನೌಕರರಿಗೆ ಅಂತರಜಾಲದ transfer,taralabalu.org ತಾಣದಲ್ಲಿ ಪಾರದರ್ಶಕವಾಗಿ ವರ್ಗಾವಣೆ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ನೌಕರರು ತಮಗೆ ಅನುಕೂಲವಾದ ಸ್ಥಳಗಳನ್ನು ತಾವೇ ಆದ್ಯತೆಯ ಮೇಲೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇಂತಹ ಸೌಲಭ್ಯ ಒದಗಿಸಿದ ಮೇಲೂ ಸಾರ್ವಜನಿಕ ಟೀಕೆ-ಟಿಪ್ಪಣಿಗಳಿಂದ ಮುಕ್ತರಾಗುತ್ತೇವೆಂಬ ಭ್ರಮೆ ನಮಗಿಲ್ಲ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 16.4.2015