ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಕೈಗೊಂಡ ಭರವಸೆಯ ಕಾಲ್ನಡಿಗೆ!
ಎಂತಹ ಸುಡು ಬೇಸಗೆಯೇ ಇರಲಿ, ಕೇರಳದಲ್ಲಿ ಬಿರುಗಾಳಿ ಎದ್ದರೆ ಕರ್ನಾಟಕದಲ್ಲಿ ಧಾರಾಕಾರ ಮಳೆ ಸುರಿಯುವುದು ನಿಶ್ಚಿತ. ಇದೇ ಎಪ್ರಿಲ್ 21 ರ ಬಸವ ಜಯಂತಿ ದಿನದಂದು ಕೇರಳದಿಂದ ಬೀಸಿದ ಗಾಳಿ ಸಿರಿಗೆರೆಯಲ್ಲಿ ಮಳೆಗರೆದು ಬಿಸಿಲ ಧಗೆಯನ್ನು ನಿವಾರಿಸಿತು. ಆದರೆ ಬಿರುಗಾಳಿ ಎದ್ದದ್ದು ಅರಬ್ಬಿ ಸಮುದ್ರದಲ್ಲಿ ಅಲ್ಲ. ತಂಪಾದ ಮಳೆಯ ಮಾರುತವನ್ನು ತಂದವರು ಶ್ರೀ ಎಂ ಎಂಬ ಸಂಕ್ಷಿಪ್ತನಾಮದಿಂದ ವಿಶ್ವವಿಖ್ಯಾತರಾಗಿರುವ ಸಮಾಜ ಸುಧಾರಕ, ಅನುಭಾವಿ ಮವಾಜ್ ಆಲಿ ಖಾನ್! ಅವರು ತಮ್ಮ ಸಹಯಾತ್ರಿಕರೊಂದಿಗೆ ಸಿರಿಗೆರೆಗೆ ಪಾದಯಾತ್ರೆಯಲ್ಲಿ ಆಗಮಿಸಿದ ದಿನ ಮನುಕುಲದ ಹೃದಯವನ್ನು ಬೆಸೆಯುವ ಭಾವೈಕ್ಯದ ಹರ್ಷಧಾರೆ ಸುರಿಯಿತು. ಮಾರನೆಯ ದಿನ ಆಗಸದಿಂದ ವರ್ಷಧಾರೆಯೂ ಆಯಿತು.
"ಮಾನವ ಏಕತಾ ಮಿಶನ್" ಸಂಸ್ಥಾಪಕರಾದ ಶ್ರೀ ಎಂ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 6500 ಕಿಲೋಮೀಟರ್ ದೂರ ಜನಮಾನಸದಲ್ಲಿ ಶಾಂತಿ, ಸೌಹಾರ್ದ, ಸದ್ಭಾವನೆಗಳನ್ನು ಮೂಡಿಸುವ ಉನ್ನತ ಧೈಯವುಳ್ಳ "Walk of Hope" ಪಾದಯಾತ್ರೆ ಕೈಗೊಂಡಿದ್ದಾರೆ. 500 ದಿನಗಳ ಕಾಲ 11 ರಾಜ್ಯಗಳ ಮೂಲಕ ಹಾಯುವ ಈ ಮಹಾನ್ ಯಾತ್ರೆಯಲ್ಲಿ ಎಲ್ಲಾ ಸಮುದಾಯಗಳ ಒಂದು ಕೋಟಿ ಜನರನ್ನು ಒಳಗೊಳ್ಳುವ ನಿರೀಕ್ಷೆ ಇದೆ. ಪ್ರತಿ ಧರ್ಮದ ಆಳಕ್ಕಿಳಿದು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಸದ್ಗುಣವನ್ನು ಪೋಷಿಸುವ ಸತ್ವವನ್ನು ಕಂಡುಕೊಳ್ಳಲು ಸರ್ವಧರ್ಮಗಳ ಏಕಮೂಲವನ್ನು ಗುರುತಿಸುವ ಸಂದೇಶವನ್ನು ಜನರಿಗೆ ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಯಾವುದೇ ಧರ್ಮಕ್ಕೆ ಸೇರಿದರೂ ಅನೇಕ ಭಿನ್ನತೆಗಳ ನಡುವೆಯೂ ಮಾನವ ಕುಲ ಒಂದೇ ಎಂಬ ಪ್ರಬಲ ನಂಬಿಕೆಯನ್ನು ಬೆಳೆಸುವ ಉದ್ದೇಶ ಅವರದು. "ನಾಳಿನ ಭಾರತಕ್ಕೆ ಇಂದಿನ ಹೆಜ್ಜೆ" ಎಂಬುದೇ ಅವರ ಪಾದಯಾತ್ರೆಯ ಧ್ಯೇಯವಾಕ್ಯ.
ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ಅವರ ಭರವಸೆಯ ನಡಿಗೆ (walk of hope) ಸಿರಿಗೆರೆ ತಲುಪಿದಾಗ 100 ದಿನಗಳನ್ನು ಪೂರೈಸಿತ್ತು. 101 ನೇ ದಿನದ ನಡಿಗೆಯು ರಾಷ್ಟ್ರೀಯ ಹೆದ್ದಾರಿಯಿಂದ ಸಿರಿಗೆರೆ ವರೆಗಿನ 7 ಕಿಲೋಮೀಟರ್ ದೂರದ ಪಾದಯಾತ್ರೆಯಲ್ಲಿ ನಮ್ಮನ್ನೂ ಒಳಗೊಂಡಂತೆ ನಮ್ಮ ಶಾಲಾ ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ಪುರಜನರು ಹೆಜ್ಜೆಗೆ ಹೆಜ್ಜೆ ಹಾಕಿದರು. ಮಧ್ಯಾಹ್ನದ ಸುಡುಬಿಸಿಲು, ಬಿಸಿಗಾಳಿ ಸಹಯಾತ್ರಿಕರನ್ನು ಧೃತಿಗೆಡಿಸಲು ಆಗಲಿಲ್ಲ, ಬಹಿರಂಗದಲ್ಲಿ ಪ್ರಕೃತಿ ಇಷ್ಟು ಬಿಸಿಯಾಗಿದ್ದರೂ ಅಂತರಂಗದಲ್ಲಿ ಸೌಹಾರ್ದತೆಯ ತಂಪಾದ ಅಂತರ್ಜಲವು ಎಲ್ಲರ ಮನಸ್ಸನ್ನು ಉಲ್ಲಸಿತಗೊಳಿಸಿತ್ತು. ಸುಮಾರು 80 ಜನ ಇದ್ದ ಈ ಪಾದಯಾತ್ರಾ ತಂಡದಲ್ಲಿ ಪಾಲ್ಗೊಂಡಿದ್ದವರು ನಿವೃತ್ತ ಐ.ಎ.ಎಸ್ ಅಧಿಕಾರಿಗಳು, ದೊಡ್ಡ ದೊಡ್ಡ ವಾಣಿಜ್ಯೋದ್ಯಮಿಗಳು. "ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಕೂಡಲ ಸಂಗನ ಶರಣರೇ ಕುಲಜರು" ಎಂಬ ವಚನವನ್ನು ಜ್ಞಾಪಿಸುವ ಆಧ್ಯಾತ್ಮಿಕ ಸೆಳೆತವುಳ್ಳ ಸಾಧಕರ ತಂಡ ಅದಾಗಿತ್ತು.
ಅಂದು ಸಂಜೆ ಸಿರಿಗೆರೆಯ ಬಾಲಕರ ವಿದ್ಯಾರ್ಥಿನಿಲಯದ ಒಳಚೌಕದಲ್ಲಿ ಶ್ರೀ ಎಂ ಅವರ ಗೌರವಾರ್ಥ ಏರ್ಪಡಿಸಿದ್ದ ಸಭೆಯಲ್ಲಿ ಅವರು ಹೇಳಿದ್ದು: “ಗುರುಗಳ ಸಮೀಪದಲ್ಲಿ ಕುಳಿತುಕೊಳಲು ನಾನೆಷ್ಟು ಅರ್ಹನೋ ಅರಿಯೆ. ನಾನು ಸನ್ಯಾಸಿಯಲ್ಲ, ಸಾಂಸಾರಿಕ; ಇಬ್ಬರು ಮಕ್ಕಳ ತಂದೆ. ಆದರೂ ನಾನು ಕಂಡುಂಡ ಸತ್ಯವನ್ನು ಹೇಳುತ್ತೇನೆ. ಎಲ್ಲ ಧರ್ಮಗಳ ತಿರುಳೂ ಒಂದೇ. ಮಗುವಿಗೆ ಜನ್ಮ ನೀಡುವಾಗ ಎಲ್ಲ ಧರ್ಮಗಳ ತಾಯಂದಿರು ಅನುಭವಿಸುವ ವೇದನೆ ಒಂದೇ. ಹಿಂದೂ ತಾಯಿಗೆ ಆಗುವ ನೋವೇ ಮುಸ್ಲಿಂ ತಾಯಿಗೂ ಆಗುತ್ತದೆ, ಕ್ರಿಶ್ಚಿಯನ್ ತಾಯಿಗೂ ಆಗುತ್ತದೆ. ಯಾವುದೇ ಧರ್ಮದ ತಾಯಿಯು ಅನುಭವಿಸುವ ಹೆರಿಗೆಯ ನೋವು ಒಂದೇ ತೆರನಾಗಿರುತ್ತದೆ. ಹಾಗೆಯೇ ಯಾವುದೇ ಧರ್ಮಕ್ಕೆ ಸೇರಿದ್ದರೂ ಮಾನವ ಕುಲ ಒಂದೇ. ಇದನ್ನು ಸಾರಲಿಕ್ಕೇ ಈ ಪಾದಯಾತ್ರೆ”.
ಅವರ ಮಾತುಗಳನ್ನು ಆಲಿಸುತ್ತಿದ್ದಾಗ ನಮ್ಮ ಸ್ಮರಣೆಗೆ ಬಂದದ್ದು ತನ್ನ ತಪಃಶಕ್ತಿಯಿಂದ ಬಲಾಕ ಪಕ್ಷಿಯನ್ನು ಸುಟ್ಟು ಬೂದಿ ಮಾಡಿ ಬೀಗುತ್ತಿದ್ದ ಋಷಿಯ ಗರ್ವವನ್ನು ಇಳಿಸಿದ ಒಬ್ಬ ಗೃಹಿಣಿ ಮತ್ತು ಧರ್ಮವ್ಯಾಧನ ಮಾರ್ಮಿಕ ಕಥೆ. ಇದರ ಬಗ್ಗೆ ಈ ಹಿಂದೆ ಇದೇ ಅಂಕಣದಲ್ಲಿ ಬರೆಯಲಾಗಿದೆ. ಆಧ್ಯಾತ್ಮಿಕ ಸಾಧನೆಗೆ ಸನ್ಯಾಸಿಯೇ ಆಗಬೇಕೆಂದೇನೂ ಇಲ್ಲ, ಸನ್ಯಾಸಿ ಶ್ರೇಷ್ಠ, ಗೃಹಸ್ಥ ಕನಿಷ್ಠ ಎಂಬ ಧೋರಣೆಯೇ ಸರಿಯಲ್ಲ, ಬಸವಣ್ಣನವರೂ ಸಹ ಗೃಹಸ್ಥರಾಗಿದ್ದವರು, ಆಧ್ಯಾತ್ಮಿಕ ಸಾಧನೆಯಲ್ಲಿ ಉತ್ತುಂಗಕ್ಕೇರಿದವರು. ಅವರು ಸನ್ಯಾಸಿಗಳಿಗಿಂತಲೂ ಹೆಚ್ಚಿನ ಗೌರವಕ್ಕೆ ಭಾಜನರಾದವರು. ನಮ್ಮ ಗುರುವರ್ಯರು ಬಸವಣ್ಣನವರನ್ನು ಗೃಹಸ್ಥ ಜಗದ್ಗುರು" ಎಂದೇ ಗೌರವಿಸುತ್ತಿದ್ದರು. ಸ್ವತಃ ಬಸವಣ್ಣನವರೇ ಹೀಗೆ ಹೇಳುತ್ತಾರೆ:
ಸತಿ-ಪತಿ ರತಿಸುಖವ ಬಿಟ್ಟರೆ ಸಿರಿಯಾಳ ಚಂಗಳೆಯರು?
ಸತಿ-ಪತಿ ರತಿಸುಖ ಭೋಗೋಪಭೋಗ ವಿಳಾಸವ ಬಿಟ್ಟನೆ ಸಿಂಧುಬಲ್ಲಾಳನು?
ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳಸಿದಡೆ
ನಿಮ್ಮ ಚರಣಕ್ಕೆ ದೂರ, ಕೂಡಲ-ಸಂಗಮದೇವಾ!
ಶ್ರೀ ಎಂ ಅವರು ಸಿರಿಗೆರೆಯಿಂದ ನಿರ್ಗಮಿಸುವ ಸಂದರ್ಭದಲ್ಲಿ ನಮ್ಮನ್ನು ಒಬ್ಬರೇ ಖಾಸಗಿಯಾಗಿ ಭೇಟಿಯಾದಾಗ ತಮ್ಮ ಗುರುಗಳಾದ ಹಿಮಾಲಯದ "ಮಹೇಶ್ವರನಾಥ ಬಾಬಾ ಅವರನ್ನು ಭಕ್ತಿಯಿಂದ ಸ್ಮರಿಸಿಕೊಂಡರು. "ನೀನು ಯಾರೇ ಸಾಧು-ಸನ್ಯಾಸಿಗಳನ್ನು ಭೇಟಿಯಾದಾಗ ದಕ್ಷಿಣೆ ಕೊಡುವುದನ್ನು ಮರೆಯಬೇಡ" ಎಂದು ಆಜ್ಞಾಪಿಸಿದ್ದರಂತೆ. ಅವರ ಆದೇಶಕ್ಕೆ ಅನುಗುಣವಾಗಿ ತಮಗೆ ನನ್ನ ಕಾಣಿಕೆಯನ್ನು ಅರ್ಪಿಸಲು ಬಯಸುತ್ತೇನೆ ಎಂದು ಮುಂದಾದಾಗ ಅವರ ಕೈಯಿಂದ ಕಾಣಿಕೆಯನ್ನು ಸ್ವೀಕರಿಸಲು ಮನಸ್ಸು ಬರಲಿಲ್ಲ, ಉನ್ನತ ಧ್ಯೇಯವನ್ನಿರಿಸಿಕೊಂಡು ಸಾವಿರಾರು ಕಿ.ಮೀ ದೂರದ ಪಾದಯಾತ್ರೆಯ ಕಠಿಣ ವ್ರತವನ್ನು ಕೈಗೊಂಡ ಅವರಿಗೆ ಮತ್ತು ಅವರ ತಂಡದವರಿಗೆ ನಾವೇ ನೆರವಾಗಬೇಕೆಂದು ಅನಿಸಿತು. "ಕಾಣಿಕೆಯನ್ನು ಸ್ವೀಕರಿಸದಿದ್ದರೆ ನನ್ನ ಗುರುವಿನ ಆಜ್ಞೆಯನ್ನು ಉಲ್ಲಂಘಿಸಿದಂತಾಗುತ್ತದೆ" ಎಂದು ಅವರು ತಮ್ಮ ಅಂತರಂಗದ ಅಳಲನ್ನು ವ್ಯಕ್ತಪಡಿಸಿ ನಮ್ಮನ್ನು ಧರ್ಮಸಂಕಟಕ್ಕೆ ಗುರಿಮಾಡಿದರು. ಅವರ ಭಾವನೆಗಳನ್ನು ಗೌರವಿಸುವ ದೃಷ್ಟಿಯಿಂದ ಅನಿವಾರ್ಯವಾಗಿ ಅವರು ಕೊಟ್ಟ ಕಾಣಿಕೆಯನ್ನು ಮರುಮಾತಿಲ್ಲದೆ ಸ್ವೀಕರಿಸಿ ನಮ್ಮ ಮಠದ ವತಿಯಿಂದ ಅವರಿಗೆ ಏನಾದರೂ ಕೊಡಬೇಕೆನಿಸಿತು. ಸಭೆ-ಸಮಾರಂಭಗಳಲ್ಲಿ ಹಾರ-ತುರಾಯಿ-ಶಾಲು ಕೊಡುವುದು ಮಾಮೂಲು ಪದ್ಧತಿಯಾಗಿದೆ. ಏನು ಕೊಡಬಹುದೆಂದು ಆಪ್ತರೊಡನೆ ಸಮಾಲೋಚಿಸಿದಾಗ ನಮ್ಮ ನೆರವಿಗೆ ಬಂದದ್ದು ದೇವಾಲಯದ ಶಿಖರದ ಮೇಲೆ ಕಾಗೆ ಹೊಲಸು ಮಾಡುವ ಬಂಗಾರದ ಕಳಸವಾಗಬಯಸದೆ ಶರಣರ ಪಾದಕ್ಕೆ ಪಾದರಕ್ಷೆಯಾಗ ಬಯಸಿದ ಬಸವಣ್ಣನವರ ಮುಂದಿನ ವಚನ:
ಕಾಗೆ ವಿಷ್ಟಿಸುವ ಹೊನ್ನ ಕಳಸವಹುದರಿಂದ
ಒಡೆಯರು ಜೋರೈಸುವ ಚಮ್ಮಾವುಗೆಯ ಮಾಡಯ್ಯಾ!
ಅಯ್ಯಾ, ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯಾ!
ಈ ವಚನದ ಆಶಯಕ್ಕನುಗುಣವಾಗಿ ಶ್ರೀ ಎಂ ಮತ್ತು ಅವರ 80 ಜನ ಸಹಯಾತ್ರಿಕರೆಲ್ಲರಿಗೂ ದಾವಣಗೆರೆಯಿಂದ ಉತ್ತಮ ದರ್ಜೆಯ ಷೂಗಳನ್ನು ತರಿಸಿ ನೀಡಿ ಬೀಳ್ಕೊಟ್ಟಾಗ ಯಾತ್ರಿಕರಲ್ಲಿ ಹೊಸ ಉತ್ಸಾಹ ಚಿಗುರೊಡೆಯಿತು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 30.4.2015