ಬದುಕಿನ ಒಳನೋಟದಿಂದ ಮೂಡಿಬರುವ ಅನುಭಾವ ಸಾಹಿತ್ಯ

  •  
  •  
  •  
  •  
  •    Views  

ನಪದ ಸಾಹಿತ್ಯ ಹಾಗೂ ಶಿಷ್ಟ ಸಾಹಿತ್ಯಗಳು ಸಾಹಿತ್ಯಗಂಗೆಯ ಎರಡು ಪ್ರಮುಖ ಸ್ರೋತಗಳು. ಜನಪದ ಸಾಹಿತ್ಯದ ಬಗೆಗೆ ಕೆಲವರು ಕವಿಗಳು ಅಪಹಾಸ್ಯದ ಮಾತುಗಳನ್ನಾಡಿದ್ದಾರೆ:

ಪಂಡಿತರುಂ ವಿವಿಧ ಕಲಾ 
ಮಂಡಿತರುಂ ಕೇಳತಕ್ಕ ಕೃತಿಯಂ ಕ್ಷಿತಿಯೊಳ್ 
ಕಂಡರ್ ಕೇಳೊಡೆ ಅದೇಂ ಗೊರವರ 
ದುಂಡುಚಿಯೇ ಬೀದಿವರೆಯ ಬೀರನ ಕಥೆಯೇ?

ಆದರೆ ಜನಪದ ಸಾಹಿತ್ಯವು ಜನರಿಗಾಗಿ ಜನರಿಂದ ರಚಿತವಾದ ಜನರ ಸಾಹಿತ್ಯವೇ ಆಗಿದೆ. ಶಿಷ್ಟ ಸಾಹಿತ್ಯ ರಚಿಸಿದ ಕವಿಗಳು ತಮ್ಮ ಕೃತಿಗಳಿಗೆ ರಾಜ ಮಹಾರಾಜರುಗಳಿಂದ ಮನ್ನಣೆ ಮರ್ಯಾದೆಗಳನ್ನು ಪಡೆದರು. ಈಗಲೂ ಸರಕಾರದ ಪ್ರಶಸ್ತಿ ಪುರಸ್ಕಾರಗಳು ಶಿಷ್ಟ ಸಾಹಿತಿಗಳ ಹೆಗಲೇರುವುದೂ ಉಂಟು. ಆದರೆ ಜನಪದರು ಅಂಥ ಯಾವ ಪ್ರಶಸ್ತಿ ಪುರಸ್ಕಾರಗಳನ್ನು ಹುಡುಕಿಕೊಂಡು ಹೋಗಲೂ ಇಲ್ಲ, ಅವು ಅವರ ಬಳಿ ಸುಳಿಯಲೂ ಇಲ್ಲ. ಕುಕ್ಕೆಯಲ್ಲಿ ಜೋಳ ಮುಗಿದರೂ ಹಾಡುಗಳು ಉಳಿದವು. ಹಾಡಿದ ಹಾಡುಗಳೂ ಸಹ ಹಾಡಿದವರಾರೆಂಬ ದಾಖಲೆಯೂ ಇಲ್ಲದೆ ತಲೆಮಾರಿನಿಂದ ತಲೆಮಾರಿಗೆ ಹರಿದುಕೊಂಡು ಬಂದಿವೆ. ಅವರು ಹಾಡಿದ್ದು ಬಸವಣ್ಣನವರು ಹೇಳುವಂತೆ "ಆನು ಒಲಿದಂತೆ ಹಾಡುವೆ, ನಿನಗೆ ಕೇಡಿಲ್ಲವಾಗಿ" ಎಂಬ ಭಾವತೀವ್ರತೆಯಿಂದಲೇ ಹೊರತು ತಾವು ಸಾಹಿತ್ಯ ನಿರ್ಮಾಣ ಮಾಡುವೆವೆಂಬ ಭಾವದಿಂದಲ್ಲ, ಅವರದು ಒಂದು ರಸಾವೇಶ; ಅದು ಹೊರಬಂದ ನಂತರ ಹಾಡು ಅವರದಾಗಿ ಉಳಿಯದೆ, ಎತ್ತಿಕೊಂಡವರ ಕೈಕೂಸಾಗುತ್ತದೆ; ಮುತ್ತಿಟ್ಟವರೆಲ್ಲ ಅದರ ಹೆತ್ತ ತಾಯಂದಿರಾಗುತ್ತಾರೆ.

ಜನಪದರು ನಿರಕ್ಷರ ಕುಕ್ಕಿಗಳಾಗಿರಬಹುದು; ಪಂಡಿತರಂತೆ ಮೇಧಾವಿಗಳಲ್ಲದಿರಬಹುದು. ಅಂದ ಮಾತ್ರಕ್ಕೆ ಅವರ ಅನುಭವ ಕಡಿಮೆಯೇನೂ ಅಲ್ಲ, ಕವಿಯು ತನ್ನ ಸಾಹಿತ್ಯ ಕೃತಿಯಲ್ಲಿ ಕಟ್ಟಿಕೊಡುವ ಅನುಭವವು ಅವನ ಸ್ವಂತದ್ದಾಗಿರಬಹುದು ಅಥವಾ ಅನ್ಯರ ಅನುಭವವನ್ನು ಕಲ್ಪನಾಲೋಕದಲ್ಲಿ ವಿಹರಿಸಿ ಪರಿಕಲ್ಪನೆ ಮಾಡಿಕೊಂಡದ್ದೂ ಆಗಿರಬಹುದು. ಆದರೆ ಜನಪದರು ಕಟ್ಟಿಕೊಡುವ ಅನುಭವ ಮಾತ್ರ ಅವರು ಸ್ವತಃ ಕಂಡುಂಡದ್ದೇ ಆಗಿರುತ್ತದೆ. ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ನೊಂದು ಬೆಂದು ಅಥವಾ ಸಂತೋಷದಿಂದ ನಲಿದಾಡಿ ಅನುಭವ ತೀವ್ರತೆಯುಳ್ಳವರಾಗಿರುತ್ತಾರೆ. ಹೀಗಾಗಿ ಎರಡನ್ನೂ ತುಲನೆ ಮಾಡಿ ನೋಡಿದಾಗ ಕವಿಯ ಕಲ್ಪನೆಗಿಂತ ಜನಪದರ ಅನುಭವವೇ ಉನ್ನತವಾದುದು. ಸಾಹಿತ್ಯ ರಚನೆಗೆ ಮುಖ್ಯವಾಗಿ ಬೇಕಾಗಿರುವುದು ಈ ಅನುಭವ ತೀವ್ರತೆ. ಜನಪದರು ಬದುಕಿನಲ್ಲಿ ಒಳಹೊಕ್ಕು ಬದುಕಿನ ಸ್ವಾನುಭವದಿಂದ ಸ್ಫೂರ್ತಿಗೊಂಡಿರುತ್ತಾರೆ. ಅವರು ತಮ್ಮ ತೀವ್ರ ಅನುಭವಗಳನ್ನು ಯಾವ ಅಲಂಕಾರಿಕ ಶಾಸ್ತ್ರದ ಕಟ್ಟುಪಾಡಿಗೂ ಒಳಗಾಗದೆ ಸಹಜವಾಗಿ ತಮ್ಮ ಆಡುನುಡಿಯಲ್ಲಿ ಅಭಿವ್ಯಕ್ತಗೊಳಿಸುತ್ತಾರೆ. ಅವರ ಬದುಕು ಅನೇಕ ಕವಿಗಳ ಕಾವ್ಯರಚನೆಗೆ ಸ್ಫೂರ್ತಿಯ ಸೆಲೆಯಾಗಿದೆ. ಅದನ್ನೇ ಬಿ.ಎಂ.ಶ್ರೀ ಅವರು ಹೇಳಿದ್ದು: “ಜನವಾಣಿ ಬೇರು, ಕವಿವಾಣಿ ಹೂವು”!

ಸಾಹಿತ್ಯಕ್ಕೆ ಪ್ರೇರಣೆಯೇ ಜೀವನನಾನುಭವ. ಶಿಷ್ಟ ಸಾಹಿತ್ಯದ ಸಂದರ್ಭದಲ್ಲಿ ಜೀವನಾನುಭವವು ಮೇಲೆ ಹೇಳಿದಂತೆ ಸ್ವಂತದ್ದೂ ಆಗಿರಬಹದು, ಎರವಲು ಪಡೆದದ್ದೂ ಆಗಿರಬಹುದು. ಕಾದಂಬರಿಗಳನ್ನು ಬರೆಯುವವರು ಯೂರೋಪ್ ಮತ್ತು ಅಮೇರಿಕಾ ಪ್ರವಾಸ ಮಾಡದೇ ಇರಬಹುದು. ಆದರೂ "ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಅವರು ಕಣ್ಣಾರೆ ಕಾಣದ್ದನ್ನು ಸಹ ಕಣ್ಣಾರೆ ಕಂಡವರಂತೆ ಬರೆಯುವ ಪ್ರತಿಭೆಯುಳ್ಳವರಾಗಿರುತ್ತಾರೆ. ಉದಾಹರಣೆಗೆ ಕಾಳಿದಾಸನ ಪ್ರಸಿದ್ದ ಕಾವ್ಯ "ಮೇಘದೂತ"ವನ್ನು ಓದುತ್ತಾ ಹೋದರೆ ಹೆಲಿಕಾಪ್ಟರ್ ನಲ್ಲಿ ಸಂಚರಿಸಿದ ಅನುಭವವಾಗುತ್ತದೆ. ಕವಿಗಳು ಇದ್ದಲ್ಲಿಯೇ ಇದ್ದು ವೈನತೇಯನ ವಿಹಂಗಮ ಅನುಭವವನ್ನು ತಮ್ಮದಾಗಿಸಿಕೊಳ್ಳಬಲ್ಲರು. ಹೀಗೆ ಶಿಷ್ಟ ಸಾಹಿತ್ಯವು ಕಲ್ಪನೆಯ ಗರಿಮೂಡಿ ಅಕ್ಷರರೂಪದಲ್ಲಿ ಕಂಗೊಳಿಸುವ ಕಲ್ಪನಾ ಸಾಹಿತ್ಯವೇ ಆಗಿದೆ. ಆದರೆ ಜನಪದರ ಸಾಹಿತ್ಯವು ಅನುಭವದ ಮೂಸೆಯಿಂದ ಹೊರಹೊಮ್ಮಿದ ಜೀವನಸಾಹಿತ್ಯವಾಗಿದೆ. ತಮ್ಮದಲ್ಲದ ಅನುಭವವನ್ನು ಅವರು ಕಟ್ಟಿಕೊಡುವವರಲ್ಲ. ತಾವು ಕಂಡುಂಡ ಅನುಭವಗಳಿಗೆ ಮಾತ್ರ ನುಡಿದೀಕ್ಷೆಯನ್ನು ಅವರು ನೀಡಿದ್ದಾರೆ. ಅವರು ಬೀಸುವ ಜೋಳ ಮುಗಿಯಬಹುದೇ ಹೊರತು ಬಾಯಿಂದ ಹರಿದು ಬರುವ ಹಾಡುಗಳಲ್ಲ, "ಮುಗಿದಾವು ನಮ್ಮ ಜೋಳ, ಉಳಿದಾವು ನಮ್ಮ ಹಾಡು" ಎಂಬುದೇ ಆವರ ಧ್ಯೇಯವಾಕ್ಯ.

ಅನೇಕ ವರ್ಷಗಳ ಹಿಂದೆ ಪ್ರಸಿದ್ದ ಅಂಕಣಕಾರರಾಗಿದ್ದ ಹಾ.ಮಾ ನಾಯಕರ ಅಭಿನಂದನಾ ಸಮಾರಂಭವು ಚಿಕ್ಕಮಗಳೂರಿನಲ್ಲಿ ನಮ್ಮ ಸಮ್ಮುಖದಲ್ಲಿ ನಡೆಯಿತು. ಅಂದು ಅವರೊಂದಿಗೆ ನಡೆದ ಆತ್ಮೀಯ ಸಂಭಾಷಣೆಯಲ್ಲಿ ಅವರು ಹೇಳಿದ "ನಿತ್ಯ ಜೀವನದಲ್ಲಿ ಕಂಡು ಉಂಡದ್ದನ್ನೇ ಬರೆಯಬೇಕು. ಆಗ ಬರೆದದ್ದು ಉತ್ತಮ ಸಾಹಿತ್ಯವಾಗುತ್ತದೆ" ಎಂಬ ಮಾತುಗಳು ಈಗಲೂ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಹಚ್ಚ ಹಸಿರಾಗಿವೆ. ಬರೆಯುವ ವಸ್ತುವಿಗಾಗಿ ಅಲ್ಲಿ ಇಲ್ಲಿ ಹುಡುಕಿಕೊಂಡು ಹೋಗಬೇಕಾಗಿಲ್ಲ, ಷಣ್ಮುಖನಂತೆ ಮೂರು ಲೋಕಗಳನ್ನು ಧಾವಂತದಿಂದ ಸುತ್ತಿ ಬರಬೇಕಾಗಿಲ್ಲ, ಗಣಪ ತನ್ನ ಮಾತಾಪಿತರನ್ನು ಇದ್ದಲ್ಲಿಯೇ ಸುತ್ತಿ ಮೂರು ಲೋಕಗಳನ್ನು ಸುತ್ತಿದಂತೆ ನಮ್ಮ ಮತ್ತು ನಮ್ಮ ನೆರೆಹೊರೆಯನ್ನು ಅವಲೋಕಿಸಿದರೆ ಸಾಕು ಉತ್ತಮ ಸಾಹಿತ್ಯ ನಿರ್ಮಾಣಕ್ಕೆ ಬೇಕಾದ ಸರಕು ಧಾರಾಳವಾಗಿ ದೊರೆಯುತ್ತದೆ.

ಈ ಹಿನ್ನೆಲೆಯಲ್ಲಿ ಜನರ ಮಧ್ಯೆ ಬದುಕುವ ನಮಗೆ ಮೊದಲು ವಾರಕ್ಕೊಮ್ಮೆ ಬರೆಯುತ್ತಿದ್ದು ನಂತರ ಪಾಕ್ಷಿಕವಾಗಿ ಬರೆಯುತ್ತಾ ಬಂದಿರುವ ಈ "ಬಿಸಿಲು ಬೆಳದಿಂಗಳು" ಅಂಕಣ ಬರಹ ಒಂದು ಸವಾಲಿನ ಕೆಲಸವಾಗಿದೆ. ಸಹೃದಯ ಓದುಗರಿಗೆ ಇದು ಮುದ ನೀಡುತ್ತದೆಂದು ಮನವರಿಕೆಯಾಗಿದ್ದರೂ ಜನರ ಬದುಕನ್ನು ಕಟ್ಟಿಕೊಡುವಲ್ಲಿ ಮಾಡಬೇಕಾದ ಕಾರ್ಯಗಳಲ್ಲಿ ತೊಡಗಿದಾಗ ಅಂಕಣ ಬರಹದ ಕಡೆಗೆ ಗಮನ ಹರಿಸುವುದು ಕಷ್ಟವಾಗುತ್ತದೆ. ಈ ವಾರವೂ ಅಂತಹುದೇ ತಳಮಳವಿತ್ತು. ಕಾರ್ಯಗೌರವದ ಕಾರಣ ಬರೆಯಲು ಆಗುತ್ತದೆಯೋ ಇಲ್ಲವೋ ಎಂಬ ಆತಂಕ ಕಾಡಿಸಿತು. ಈ ವಾರ ಬರೆಯಲು ಸಾಧ್ಯವಾಗಲಾರದು ಎಂದು ಮುಂಚಿತವಾಗಿಯೇ ಸಂಪಾದಕರಿಗೆ ಸೂಚಿಸಿದ್ದರೂ ಈ ಮದ್ಯೆ ಮಾಡಬೇಕಾಗಿದ್ದ ಕಾರ್ಯ ನಿನ್ನೆ ರಾತ್ರಿಗೆ ಪೂರ್ಣಗೊಂಡ ತೃಪ್ತಿ ಅಂಕಣ ಬರಹಕ್ಕೆ ನಾಂದಿ ಹಾಡಿತು. ಕೈ ಬೆರಳುಗಳು ನಮ್ಮ ಲ್ಯಾಪ್ಟಾಪ್ ಕೀಲಿಮಣೆಯ ಮೇಲೆ ಸರಾಗವಾಗಿ ಆಡತೊಡಗಿದವು. ಮನದಾಳದಲ್ಲಿದ್ದ ವಿಚಾರಗಳು ಹರಳುಗಟ್ಟಿದವು.

ಸಾಹಿತ್ಯದ ರಚನೆ ಮತ್ತು ಆಸ್ವಾದನೆ ಶ್ರೇಷ್ಠವಾದುದು. ಕಾವ್ಯ ರಸವೆಂಬುದು ಸಹ ಒಂದು ಸಿದ್ದಿಯೇ. ಅದನ್ನು ಬ್ರಹ್ಮಾನಂದ ಸಹೋದರ" ಎಂದು ಲಾಕ್ಷಣಿಕರು ಹೇಳಿದ್ದಾರೆ. ಬೇಂದ್ರೆಯವರು ರಸಾನುಭವವನ್ನು "ಸಚ್ಚಿದಾನಂದಕಿಂತ ಕಿಂಚಿತ್ ಊನ" ಎನ್ನುತ್ತಾರೆ. ಆದರೆ ಬದುಕು ಸಾಹಿತ್ಯರಸಾನುಭೂತಿಗಿಂತಲೂ ಮಿಗಿಲಾದುದು. ಆತ್ಮಾನುಸಂಧಾನದ ಮೂಲಕ ನಡೆಸುವ ಆಧ್ಯಾತ್ಮಿಕ ಬದುಕಿನಿಂದ ದೊರೆಯುವ ಆನಂದವು ಬ್ರಹ್ಮಾನಂದ ಸಹೋದರನಾಗಿರದೆ ತಾನೇ ಬ್ರಹ್ಮಾನಂದವಾಗಿರುತ್ತದೆ. ಆದ್ದರಿಂದಲೇ ವಚನಕಾರರು ಕಟ್ಟಿಕೊಡುವ ಅನುಭಾವವು ಸರಳ ಶಬ್ದಗಳಾಚೆ ಇರುವ ಅನಂತ ಅಮಿತಾನಂದವನ್ನು ಪ್ರದಾನ ಮಾಡುತ್ತದೆ. ಶರಣರು ಜನಸಾಮಾನ್ಯರ ಬದುಕನ್ನು ತೀವ್ರವಾಗಿ ಗಮನಿಸಿದ್ದಾರೆ. ಅಂದಿನ ಜನಜೀವನದ ಒಳನೋಟ ಅವರ ವಚನಗಳಲ್ಲಿ ಹೇರಳವಾಗಿ ಸಿಗುತ್ತದೆ. ಉದಾಹರಣೆಗೆ "ಬಸಿರ ಬಾಳುವೆಗೆ ಮಸಿಯ ಹೂಸಿ ನೇರಿಲಹಣ್ಣ ಮಾರುವಂತೆ" ಎನ್ನುವ ಬಸವಣ್ಣನವರ ವಚನ. ನೇರಿಲ ಹಣ್ಣು ಕಪ್ಪಾಗಿದ್ದಷ್ಟೂ ರುಚಿಕರ. ಗ್ರಾಹಕರ ಕಣ್ಣಿಗೆ ರುಚಿಕರವಾಗಿದೆಯೆಂಬ ಭ್ರಮೆ ಹುಟ್ಟಿಸಲು ತನ್ನ ಬುಟ್ಟಿಯಲ್ಲಿರುವ ನೇರಿಲಹಣ್ಣಿಗೆ ಕಪ್ಪು ಬಣ್ಣವನ್ನು ಬಳಿದು ಮಾರಾಟ ಮಾಡುತ್ತಿದ್ದ ಹುಡುಗನ ಮೋಸದ ಕೃತ್ಯವನ್ನು ನೋಡಿ ಚಿತ್ರಿಸಿದರೂ ಅದರ ಹಿಂದೆ ಹೊಟ್ಟೆಯ ಪಾಡಿಗಾಗಿ ಮಾಡುತ್ತಿರಬಹುದೆಂಬ ಅನುಕಂಪ ಇದೆ. ಜನಸಾಮಾನ್ಯರ ದೈನಂದಿನ ಬದುಕಿನ ಒಳನೋಟ ಅನುಭಾವದ ಮಟ್ಟಕ್ಕೇರುತ್ತದೆ. ಕೋಡಗ, ಕೋಲು, ಗೊಂಬೆ, ನೇಣು (ಹಗ್ಗ ಮುಂತಾದ ಸಾಧಾರಣ ಶಬ್ದಗಳನ್ನು ಬಳಸಿ ಅಕ್ಕಮಹಾದೇವಿಯು ಕಟ್ಟಿಕೊಡುವ ಅನುಭಾವ ಇದಕ್ಕೆ ಮತ್ತೊಂದು ಒಳ್ಳೆಯ ಉದಾಹರಣೆ:

ಕೋಲ ತುದಿಯ ಕೋಡಗನಂತೆ 
ನೇಣ ತುದಿಯ ಬೊಂಬೆಯಂತೆ 
ಆಡಿದೆನಯ್ಯಾ ಆಡಿದೆನು ನೀನಾಡಿಸಿದಂತೆ ಆಡಿದೆನು 
ಆನು ನುಡಿದೆನಯ್ಯಾ ನೀನು ನುಡಿಸಿದಂತೆ 
ಆನು ಇದ್ದೆನಯ್ಯಾ ನೀನು ಇರಿಸಿದಂತೆ 
ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನಾ ಸಾಕೆಂಬನ್ನಕ್ಕ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 14.5.2015