ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ!

  •  
  •  
  •  
  •  
  •    Views  

ಗತ್ತಿನಲ್ಲಿ ನಾನಾ ಧರ್ಮಗಳಿವೆ. ಸಮಕಾಲೀನ ಸಂದರ್ಭದಲ್ಲಿ ಅವು ಮತೀಯ ಕಲಹಗಳಿಗೆ ದಾರಿ ಮಾಡಿಕೊಟ್ಟಿವೆ. ಆದರೆ ವಾಸ್ತವವಾಗಿ ಎಲ್ಲ ಧರ್ಮಗಳ ಮೂಲಧ್ಯೇಯ ಒಂದೇ. ಅದುವೇ ವ್ಯಕ್ತಿಯ ಆತ್ಮೋನ್ನತಿ, ಆತ್ಮವಿಕಾಸ. ಎಲ್ಲ ಧರ್ಮಗಳಲ್ಲಿ ವಿಶ್ವದ ವಿರಾಟ್ ರೂಪದ ವಿವೇಚನೆ ಇದೆ, ವಿಶ್ಲೇಷಣೆಯಿದೆ. ಒಂದು ಕಡೆ ವಿಶ್ವವೆಂದರೇನು ಎಂಬ ಚಿಂತನೆ ಇದ್ದರೆ ಮತ್ತೊಂದೆಡೆ ವ್ಯಕ್ತಿಯ ಅಂತರಂಗದ ಒಳನೋಟವಿದೆ. ಒಂದು, ಕಣ್ಣಿಗೆ ಕಾಣಿಸುವ ಬಾಹ್ಯ ಪ್ರಪಂಚವನ್ನು ತಿಳಿಯುವ ಕುತೂಹಲ; ಇನ್ನೊಂದು ಅದರಾಚೆ ಇರುವ ಕಣ್ಣಿಗೆ ಕಾಣದ ಅಗೋಚರವಾದ ಚೈತನ್ಯವನ್ನು ತಿಳಿಯುವ ತುಡಿತ. ಒಂದು ಕಡೆ ಲೌಕಿಕ ಕಾಮನೆಗಳ ಈಡೇರಿಕೆಯ ಹಂಬಲ ಮತ್ತೊಂದು ಕಡೆ ಪಾರಮಾರ್ಥಿಕ ಸತ್ಯವನ್ನು ಅರಿಯುವ ಹಂಬಲ, ಬೆಟ್ಟ ಗುಡ್ಡಗಳನ್ನು ದಾಟಿ ಕಡಲಿನ ಕಡೆಗೆ ಧಾವಿಸುವ ತೊರೆಯಂತೆ ಎಂದೂ ಕಾಣದ, ಆದರೆ ಪರಂಪರೆಯಲ್ಲಿ ಕೇಳಿ ಬಂದ ವಿಶ್ವ ಚೈತನ್ಯವೆಂಬ ಅಪಾರ ವಾರಿಧಿಯ ತೋಳ್ತೆಕ್ಕೆಯಲ್ಲಿ ಲೀನವಾಗುವ ಆಸೆ. ಜಗದ ಜಂಜಡಗಳಲ್ಲಿ ಮುಳುಗಿದ ಜೀವಕ್ಕೆ ಊಹೆಗೂ ನಿಲುಕದ ಅನಂತ ಆನಂದ ಸಾಗರವನ್ನು ಸೇರಿ ಮಿಂದು ನಲಿದಾಡುವ ಬಯಕೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಮುಂದಿನ ಕವಿತೆಯನ್ನು ಗಮನಿಸಿ:

ಕಾಣದ ಕಡಲಿಗೆ ಹಂಬಲಿಸಿದೆ ಮನ 
ಕಾಣಬಲ್ಲೆನೆ ಒಂದು ದಿನ?
ಕಡಲನು ಕೂಡಬಲ್ಲೆನೆ ಒಂದು ದಿನ? 

"ಜಟಿಲ ಕಾನನದ ಕುಟಿಲ ಪಥಗಳಲ್ಲಿ ಹರಿವ" ತೊರೆಯಾಗಿ ಜಿ.ಎಸ್.ಎಸ್ ಕಾಣದ ಕಡಲಿಗೆ ಹಂಬಲಿಸಿದರೆ, ಅದನ್ನು ಸೇರಿದ ಮೇಲೂ ಅದರ ಆಳ ಅಗಲವನ್ನು ಅರ್ಥಮಾಡಿಕೊಳ್ಳುವ ಕ್ಷಮತೆ ತನಗೆ ಇದೆಯೇ ಎಂದು ಪ್ರಶ್ನಿಸಿಕೊಳ್ಳುತ್ತಾರೆ ಅವರ ಶಿಷ್ಯರಾದ ಎಚ್.ಎಸ್ ವೆಂಕಟೇಶ್ ಮೂರ್ತಿಯವರು:

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ 
ಅರಿತೆವೇನು ನಾವು ನಮ್ಮ ಅಂತರಾಳವ? 
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ 
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ?... 
ಸಾವಿರಾರು ಮುಖದ ಚೆಲುವು ಹಿಡಿದು ತೋರಿಯೂ
`ಒಂದಾದರೂ ಉಳಿಯಿತೆ ಕನ್ನಡಿಯ ಪಾಲಿಗೆ! 

ಎಚ್ಚೆಸ್ವಿಯವರ ಈ ಪದಕ್ಕೆ ಎರಡು ಮಗ್ಗುಲುಗಳಿವೆ. ಒಂದು: ಲೌಕಿಕ ಬದುಕಿಗೆ ಅನ್ವಯಿಸುವ ಮಗ್ಗುಲು, ಲೌಕಿಕ ಬದುಕಿನಲ್ಲಿ ಆಪ್ತರಾಗಿ ಆಜೀವಪರ್ಯಂತ ಬದುಕುವ ಬಾಳ ಸಂಗಾತಿಗಳ ಮತ್ತು ಒಡನಾಡಿಗಳ ಮಧ್ಯೆ ಉಂಟಾಗುವ ಮನಸ್ತಾಪಗಳು, ತಾಕಲಾಟಗಳು, ತಿಕ್ಕಾಟಗಳು, "ಹತ್ತಿರವಿದ್ದೂ ದೂರ ನಿಲ್ಲುವ" ಅಹಮ್ಮಿನ ಕೋಟೆಯೊಳಗೇ ಗಿರಕಿ ಹೊಡೆಯುವ ಬಿಗುಮಾನದ ಬದುಕು.

ಈ ಪದ್ಯಕ್ಕೆ ನಮ್ಮ ದೃಷ್ಟಿಯಲ್ಲಿ ಪಾರಲೌಕಿಕ ಜಗತ್ತಿಗೆ ಅನ್ವಯಿಸುವ ಮತ್ತೊಂದು ಮಗ್ಗಲು ಇದೆ. ಹುಟ್ಟಿನಿಂದಲೇ ಶರೀರ ಮತ್ತು ಆತ್ಮ ಒಟ್ಟಾಗಿರುತ್ತವೆಯಲ್ಲವೆ? ಹಾಗಿದ್ದೂ ಮನುಷ್ಯನಿಗೆ ಆತ್ಮದ ಅರಿವನ್ನು ಪಡೆಯಲು ಸಾಧ್ಯವಾಗಿಲ್ಲ. ಸಾವಿರಾರು ಮೈಲಿ ಹೋದರೂ ಹಾಯಿದೋಣಿಗೆ ಸಮುದ್ರದ ಆಳ ತಿಳಿಯುವುದಿಲ್ಲ, ಅಕ್ಕ ಹೇಳುವಂತೆ "ಅಗಸ ನೀರೊಳಗಿದ್ದು ಬಾಯಾರಿ ಸತ್ತಂತೆ ತಮ್ಮೊಳಗಿರ್ದ ಮಹಾಘನವನರಿಯಲು" ಸಾಧ್ಯವಾಗಿಲ್ಲ. ನೀರಲ್ಲಿಯೇ ನಿಂತ ಅಗಸ ಬಾಯಾರಿದಾಗ ಒಂದು ಬೊಗಸೆ ನೀರನ್ನು ಕುಡಿಯದೆ ಸತ್ತರೆ ಎಂಥ ನಗೆಪಾಟಲು! ಅಂಥದೇ ವ್ಯಂಗ್ಯ ಹುಟ್ಟಿನಿಂದ ತನ್ನೊಳಗೇ ಅಡಗಿರುವ ಆತ್ಮವನ್ನು ಮನುಷ್ಯ ಅರಿಯಲು ಸಾಧ್ಯವಾಗದೇ ಇರುವುದು.

ಮನುಷ್ಯ ಐಹಿಕ ಸುಖ ಲೋಲುಪತೆಯಲ್ಲಿ ಮೈಮರೆತಿರುತ್ತಾನೆ. ಹಾಗಿರುವವನನ್ನು ಯಾವುದೋ ಒಂದು ಘಟನೆ ಕಲಕಿ ಎಚ್ಚರಿಸುತ್ತದೆ, ಚಿಂತನೆಗೆ ಪ್ರೇರೇಪಣೆ ಮಾಡುತ್ತದೆ. ಬುದ್ದ ಅರಮನೆಯ ವಾತಾವರಣದಲ್ಲಿ ದುಃಖದ ಪರಿಕಲ್ಪನೆಯೇ ಇಲ್ಲದೆ ಬೆಳೆದ. ಅವನ ತಂದೆ ಶುದ್ಧೋದನ ಮಗ ಕೈತಪ್ಪಿ ಹೋದಾನೆಂಬ ಭಯದಿಂದ ದುಃಖ ಪರಿತಾಪದ ಸಂದರ್ಭಗಳೇ ಅವನಿಗೆ ಎದುರಾಗದಂತೆ ಎಚ್ಚರ ವಹಿಸಿ ಬೆಳೆಸಿದ. ಆದರೆ ಅಂತಹ ಸಂದರ್ಭಗಳನ್ನು ಅಚಾನಕ್ಕಾಗಿ ನೋಡಿದ ಬುದ್ದ ಅರಮನೆಯ ಸುಖಸಂಪತ್ತನ್ನು ತೊರೆದು ಲೋಕದ ನೋವಿಗೆ ಕಾರಣವನ್ನು ಹುಡುಕಿಕೊಂಡು ಹೊರ ಹೊರಟ.

ಬದುಕಿನಲ್ಲಿ ನೋವು ಮತ್ತು ದುಃಖದ ಪ್ರಸಂಗಗಳನ್ನು ಕಂಡೂ ಸಹ ಲೌಕಿಕ ಸುಖಸಂಪತ್ತಿಗೆ ಹಾತೊರೆಯುವುದು ಸಾಮಾನ್ಯ ವ್ಯಕ್ತಿಯ ಮನೋಧರ್ಮ, ಬಸವಣ್ಣನವರು ಹೇಳುವಂತೆ `ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆ" ಅವನ ಬದುಕು, ನಾಯಿ ರಕ್ತಸಿಕ್ತ ಕತ್ತಿಯನ್ನು ನೆಕ್ಕಿದರೆ ನಾಲಿಗೆ ಕೊಯ್ಯದಿರುತ್ತದೆಯೇ! ನೆತ್ತರು ಸುರಿಯದಿರುತ್ತದೆಯೇ! ತನ್ನ ನಾಲಗೆಯ ನೆತ್ತರನ್ನೇ ಪುನಃ ಪುನಃ ನೆಕ್ಕಿ ನಾಲಿಗೆಯನ್ನು ಗಾಯಗೊಳಿಸಿಕೊಳ್ಳುವ ನಾಯಿಯಂತೆ ಅವನ ಬದುಕು, ದುಃಖದ ಮೂಲವನ್ನು ಹುಡುಕಿ ಹೊರಟ ಸಿದ್ಧಾರ್ಥ ಬುದ್ದನಾದರೆ ಇವನು ಸದಾ ಬದ್ದ! ಅಕ್ಕಮಹಾದೇವಿ ಹೇಳುವಂತೆ "ತೆರಣಿಯ ಹುಳು ತನ್ನ ಸ್ನೇಹದಿ ಮನೆ ಮಾಡಿ ತನ್ನನೇ ಸುತ್ತಿ ಸಾವಂತೆ"! ಅಂದರೆ ರೇಷ್ಮೆ ಹುಳು ತನ್ನ ಜೊಲ್ಲಿನಿಂದ ನೆಯ್ದ ನೂಲಿನಲ್ಲಿ ತಾನೇ ಸುತ್ತಿಕೊಂಡು ಸಾಯುವ ತೆರನಂತೆ ಮನುಷ್ಯ ತನ್ನ ಸುತ್ತ ಕಟ್ಟಿಕೊಂಡ ಮಡದಿ-ಮಕ್ಕಳೆಂಬ ಬಂಧುತ್ವದ ಮೋಹದಲ್ಲಿ ವಿಲವಿಲನೆ ಒದ್ದಾಡುತ್ತಾನೆ! ಯಾವುದೋ ಹಂತದಲ್ಲಿ ಅತೃಪ್ತಿ ಹೊಗೆಯಾಡುತ್ತದೆ. ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುತ್ತಿದ್ದರೂ ಯಾವುದೋ ಅನಿರೀಕ್ಷಿತ ಘಟನೆಯಿಂದ ಘಾಸಿಗೊಂಡ ಮನಸ್ಸು ಸುಖದ ಮೂಲ ನೆಲೆಯನ್ನು ಅರಸುತ್ತದೆ. ಆತ್ಮದ ಹಸಿವು ಅನುಭವಕ್ಕೆ ಬರುತ್ತದೆ. ಆಗ ಎಚ್ಚೆತ್ತುಕೊಳ್ಳುತ್ತಾನೆ. ಪರಿವರ್ತನೆ ಆರಂಭವಾಗುತ್ತದೆ. ಇದಕ್ಕೆ ಪುರಂದರ ದಾಸರ ಜೀವನ ಉತ್ತಮ ಉದಾಹರಣೆ. "ಈಸು ದಿನ ಕಂಡಿದ್ದೆ ಬಾಗಿಲಿಲ್ಲದ ಕೋಟೆ, ಇಂದು ಕೋಟೆಯ ಬಾಗಿಲಾಯಿತಲ್ಲಾ" ಎಂಬ ದಿವ್ಯಾನುಭೂತಿ!

ಸುಖದಲ್ಲಿ ಮುಳುಗಿ ಓಲಾಡುವುದೂ ತಪ್ಪು, ಹಾಗೆಯೇ ಹತಾಶನಾಗಿ ವಿಷಣ್ಣ ಹೃದಯಿಯಾಗಿ ಕೊರಗುವುದೂ ತಪ್ಪು. ಪ್ರಕೃತಿಯಲ್ಲೂ ಈ ದ್ವಂದ ಇದೆ. ಒಂದು ಕಡೆ ಮಂದಮಾರುತ, ಮತ್ತೊಂದು ಕಡೆ ಚಂಡಮಾರುತ. ಒಂದು ಆಹ್ಲಾದಕರ, ಇನ್ನೊಂದು ಆಘಾತಕರ. ಅರುಣೋದಯದ ನೇಸರ ಮನಸ್ಸನ್ನು ಅರಳಿಸಿದರೆ ನಡುನೆತ್ತಿಯ ಮೇಲೆ ಬರುವ ಸುಡುವ ಸೂರ್ಯ ಮನಸ್ಸನ್ನು ಕಮರಿಸುತ್ತಾನೆ. ಬದುಕಿನಲ್ಲಿ ಬಿಸಿಲೂ ಇದೆ, ಬೆಳದಿಂಗಳೂ ಇದೆ. ಇವೆರಡನ್ನೂ ಸಮಾನ ರೀತಿಯಿಂದ ಸ್ವೀಕರಿಸುವ ಸಮಚಿತ್ತ ಮಾತ್ರ ತುಂಬಾ ಅಪರೂಪ! ಬದುಕಿಗೆ ಈ ಸಮಚಿತ್ತ ಮತ್ತು ಸೈರಣೆ ಬೇಕು. ಸೈರಣೆ ಎಂಬ ಪದ ಎರಡು ಅರ್ಥಗಳಲ್ಲಿ ಬಳಕೆಯಲ್ಲಿದೆ. ಬೇರೊಬ್ಬನ ಅಭಿವೃದ್ದಿಯನ್ನು ನೋಡಿ ಕರುಬುವವನನ್ನು "ಸೈರಣೆಯಿಲ್ಲದವನು" ಎನ್ನುತ್ತಾರೆ. ಬದುಕಿನಲ್ಲಿ ಏನೇ ಬರಲಿ ಘಾಸಿಗೊಳ್ಳದೆ ಸಹನಾಶೀಲನಾಗಿ ಬದುಕುವುದು ನಿಜವಾದ ಸೈರಣೆ. ಬಸವಣ್ಣನವರು ಹೇಳುವಂತೆ "ಉರಿ ಬರಲಿ ಸಿರಿ ಬರಲಿ ಬೇಕು ಬೇಡೆನ್ನದ" ಮನಃಸ್ಥಿತಿ. ಮನಸ್ಸನ್ನು ವಿಚಲಿತಗೊಳಿಸಿಕೊಳದ ಸಮಚಿತ್ತದ ಬದುಕು ಅದು. "ಸಮತ್ವಂ ಯೋಗ ಉಚ್ಯತೇ" ಎನ್ನುತ್ತದೆ ಭಗವದ್ಗೀತೆ, ಸಮಚಿತ್ತವನ್ನು ಕಾಪಾಡಿಕೊಳ್ಳುವುದು ಯೋಗ. ಅದು ವರ್ಷದಲ್ಲಿ ಒಂದು ದಿನ ಆಚರಿಸುವ ವಿಶ್ವಯೋಗ ದಿನಾಚರಣೆ ಯಲ್ಲ, ನಿತ್ಯಜೀವನದಲ್ಲಿ ಬರುವ ಬದುಕಿನ ಸವಾಲುಗಳನ್ನು ವಿಚಲಿತಗೊಳ್ಳದೆ ಎದುರಿಸುವ ಮನಸ್ಸಿನ ಗಟ್ಟಿತನ. ಅದು ಒಂದು ದಿನದ ಆಚರಣೆಯಿಂದ ಬರುವಂತಹದಲ್ಲ; ನಿತ್ಯ ಸಾಧನೆಯಿಂದ ಬರುವಂತಹುದು. ಅದಕ್ಕೆ ಬೇಕಾಗಿರುವುದು ಅಲ್ಲಮ ಪ್ರಭುದೇವರ ಮಾತಿನಲ್ಲಿ ಹೇಳುವುದಾದರೆ ಸಮತೆ ಮತ್ತು ಸೈರಣೆ. ಎಂತಹ ವಿಷಮ ಸನ್ನಿವೇಶಗಳಲ್ಲಿಯೂ ಉದ್ವಿಗ್ನಗೊಳದೆ ಮನಸ್ಸಿಗೆ ಸಮತೆ-ಸೈರಣೆಯೆಂಬ ಬೇಲಿಯನ್ನು ಹಾಕಿಕೊಳ್ಳುವುದೇ ಮನಃಶಾಂತಿಗೆ, ಆತ್ಮವಿಕಾಸಕ್ಕೆ ನಾಂದಿ:

ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ 
ಅಗೆದು ಕಳೆದೆನಯಾ ಭ್ರಾಂತಿಯ ಬೇರ 
ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ... 

ಬಸವಗಳೆವರು ಹಸಗೆಡಿಸಿಹವೆಂದು 
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ 
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು 
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 25.6.2015