ಪ್ರೀತಿಯ ಮಂದಾನಿಲ ಬೇಕೋ ಸೇಡಿನ ದಾವಾನಲ ಬೇಕೋ?

  •  
  •  
  •  
  •  
  •    Views  

ಜಗತ್ತಿನಲ್ಲಿ ಕೋಟ್ಯಂತರ ಜನರಿದ್ದಾರೆ. ಎಲ್ಲರೂ ಎಲ್ಲರನ್ನೂ ತಂತಮ್ಮ ಜೀವಿತಾವಧಿಯಲ್ಲಿ ನೋಡಲು, ಸಂಧಿಸಲು, ಮಾತನಾಡಿಸಲು ಸಾಧ್ಯವಾಗುವುದಿಲ್ಲ, ಆಧುನಿಕ ಜೀವನ ಶೈಲಿಯಲ್ಲಿ ರೈಲು, ಬಸ್ಸು, ವಿಮಾನಗಳಲ್ಲಿ ಆಕಸ್ಮಿಕವಾಗಿ ಸಂಧಿಸಿದರೂ, ಪಕ್ಕದಲ್ಲಿಯೇ ಕುಳಿತು ಗಂಟೆಗಟ್ಟಲೆ ಪ್ರಯಾಣಿಸಿದರೂ ತುಟಿಪಿಟಿಕ್ ಎನ್ನದೆ ಇಳಿದು ಹೋಗುವವರೇ ಜಾಸ್ತಿ. ವಿಮಾನದಲ್ಲಿ ಪ್ರಯಾಣಿಸುವವರಂತೂ ಎದುರಿಗಿರುವ ಪತ್ರಿಕೆಗಳ ಮೇಲೆ ಕಣ್ಣು ಹಾಯಿಸುತ್ತಾರೆಯೇ ಹೊರತು ಪಕ್ಕದಲ್ಲಿ ಕುಳಿತಿರುವವರನ್ನು ಕತ್ತೆತ್ತಿಯೂ ಸಹ ನೋಡುವುದಿಲ್ಲ, ಕೇವಲ ಶಿಷ್ಟಾಚಾರಕ್ಕಾಗಿ "ಹಾಯ್" ಎಂದು ಹೇಳಿ ಸುಖಾಸೀನರಾಗಿ ವಿಮಾನ ಗಗನಕ್ಕೆ ಏರುತ್ತಿದ್ದಂತೆಯೇ ಕಣ್ಮುಚ್ಚಿ "ಧ್ಯಾನಾಸಕ್ತ"ರಾಗಿಬಿಡುತ್ತಾರೆ. ಒಮ್ಮೆ ಮುಂಬೈಯಿಂದ ಲಂಡನ್ಗೆ ಪ್ರಯಾಣಿಸುವಾಗ ಅದೇ ವಿಮಾನದಲ್ಲಿ ಆಸ್ಟ್ರೇಲಿಯಾದಿಂದ ಬಂದಿದ್ದ ಬ್ರಿಟಿಷ್ ಸಹಪ್ರಯಾಣಿಕನನ್ನು ಮಾತಿಗೆ ಎಳೆದು ಅವನ "ಮೌನಮುದ್ರೆ"ಗೆ ಕಾರಣವೇನೆಂದು ತಿಳಿಯಲು ಪ್ರಯತ್ನಿಸಿದಾಗ ಅವನು ನೀಡಿದ ಪ್ರತಿಕ್ರಿಯೆ ಚಿಂತನಶೀಲವಾಗಿತ್ತು. “We neither Want to trouble others, nor we want to get into trouble!” (ನಾವು ಇನ್ನೊಬ್ಬರಿಗೆ ತೊಂದರೆ ಕೊಡಲು ಇಷ್ಟಪಡುವುದಿಲ್ಲ, ನಾವೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳಲು ಬಯಸುವುದಿಲ್ಲ. ಮೊದಲನೆಯ ಮಾತಿನ ಹಿಂದಿನ ಕಾಳಜಿ ಸುಲಭವಾಗಿ ಅರ್ಥವಾದರೂ, ಒಗಟಿನಂತಿರುವ ಎರಡನೆಯ ಮಾತಿನ ಹಿಂದಿನ ಕಳವಳಕ್ಕೆ ಆತ ನೀಡಿದ ವಿವರಣೆ: “Well, the person sitting next to you may be a gentleman or a rogue; who knows!” (ಪಕ್ಕದಲ್ಲಿರುವ ವ್ಯಕ್ತಿ ಸಭ್ಯನಿರಬಹುದು, ಇಲ್ಲವೇ ಕೇಡಿ ಇರಬಹುದು, ಯಾರಿಗೆ ಗೊತ್ತು?) ಅವನ ಈ ಮಾತು ಕಟುವಾಗಿದ್ದರೂ ನಿಷ್ಟುರ ಸತ್ಯದಿಂದ ಕೂಡಿತ್ತು. ಋಷಿಯ ವೇಷದಲ್ಲಿ ಬಂದು "ಭಿಕ್ಷಾಂ ದೇಹಿ" ಎಂದು ಸೀತೆಯನ್ನು ಮೋಸಗೊಳಿಸಿದ ರಾವಣ, ಮಹರ್ಷಿ ಗೌತಮನ ವೇಷದಲ್ಲಿ ಬಂದು ಅಹಲೈಯನ್ನು ಮೋಸಗೊಳಿಸಿದ ಇಂದ್ರ ನೆನಪಾದರು. ಆತ್ಮೀಯರಂತೆ ನಟಿಸಿ ವಂಚಿಸುವ ಕ್ಷುದ್ರಜನರು ಈಗಲೂ ಇದ್ದಾರೆ. ಹಾಗೆಂದು ಜೀವನದಲ್ಲಿ ಯಾರನ್ನೂ ನಂಬದೇ ಇರಲು ಸಾಧ್ಯವಿಲ್ಲ, ಎಲ್ಲರನ್ನೂ ಎಲ್ಲ ಸಂದರ್ಭಗಳಲ್ಲಿಯೂ ಸಂಶಯ ದೃಷ್ಟಿಯಿಂದ ನೋಡುತ್ತಾ ಹೋದರೆ ವ್ಯಕ್ತಿ ನೆಮ್ಮದಿಯಿಂದ ಬದುಕಲು ಆಗುವುದಿಲ್ಲ.

ಪ್ರತಿಯೊಬ್ಬ ವ್ಯಕ್ತಿಯ ಸುತ್ತಲೂ ಪ್ರೀತಿ-ಸ್ನೇಹ-ವಿಶ್ವಾಸಗಳ ಒಂದು ಪರಿಧಿ ಇರುತ್ತದೆ. ಒಬ್ಬ ವ್ಯಕ್ತಿಯ ಸ್ನೇಹ-ವಿಶ್ವಾಸಗಳ ವೃತ್ತ ರೇಖೆ ಇನ್ನೊಬ್ಬ ವ್ಯಕ್ತಿಯ ಸ್ನೇಹ-ವಿಶ್ವಾಸಗಳ ಪರಿಧಿಯೊಳಗೆ ವ್ಯಾಪಿಸಿ ಸಮಾನ ಸ್ನೇಹಿತರು ಇರಬಹುದು. ಇಲ್ಲವೇ ಸಮಾನ ಗುಣಧರ್ಮ ಹೊಂದಿದ ಅಪರಿಚಿತ ವ್ಯಕ್ತಿಯ ಪರಿಧಿಯ ಹತ್ತಿರ ತಲುಪಬಹುದು. ಯಾವುದೋ ಸಂದರ್ಭದಲ್ಲಿ ಆ ವ್ಯಕ್ತಿಯ ಪರಿಚಯವಾಗಿ ಸತಾಂ ಸದ್ಮೀಃ ಸಂಗಃ ಕಥ ಮಪಿ ಪುಣ್ಯೇನ ಹಿ ಭವತಿ ಎಂದು ಯಾವುದೋ ಜನ್ಮದ ಪುಣ್ಯ ವಿಷೇಶವೆಂದು ಉದ್ಗರಿಸಬಹುದು. ಈ ರೀತಿ ಪ್ರೀತಿ ವಿಶ್ವಾಸಗಳ ವೃತ್ತವಿದ್ದಂತೆ ದ್ವೇಷ ವೈರತ್ವಗಳ ವೃತ್ತವೂ ಇರುವುದನ್ನು ಅಲ್ಲಗಳೆಯಲಾಗದು. ಇವೆರಡೂ ವೃತ್ತಗಳು ಕಾಲಚಕ್ರ ತಿರುಗಿದಂತೆ ಬೆಳೆಯುತ್ತಾ ಹೋಗಬಹುದು. ಇಲ್ಲವೇ ಬದಲಾಗುತ್ತಾ ಹೋಗಬಹುದು. ಲೋಕವ್ಯವಹಾರದಲ್ಲಿ ಹಿಂದೊಮ್ಮೆ ಆತ್ಮೀಯರಾಗಿದ್ದವರು ಕಾರಣಾಂತರಗಳಿಂದ ಹಿತಶತ್ರುಗಳಾಗಿ ಪರಿಣಮಿಸಿ ಸೇಡಿನ ಪ್ರವೃತ್ತಿ ಬೆಳೆಸಿಕೊಳ್ಳಬಹುದು. ಆ ಕಾರಣಗಳೇನೆಂದು ಒಳಹೊಕ್ಕು ನೋಡಿದಾಗ ಅಲ್ಲಿ ಸಂದೇಹ-ಸ್ವಾರ್ಥ-ಲಾಲಸೆಗಳು ಸುಪ್ತವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆಗ ಹಿಂದಿನ ಸ್ನೇಹ-ವಿಶ್ವಾಸಗಳ ನೈಜತೆ ಪ್ರಶ್ನಾರ್ಹವಾಗುತ್ತದೆ; ನಂಬಿದವರ ಮನಸ್ಸು ಘಾಸಿಗೊಳುತ್ತದೆ.

"ಕ್ರಿಯೆ ಮತ್ತು ಪ್ರತಿಕ್ರಿಯೆ ಪರಸ್ಪರ ಸಮ ಮತ್ತು ವಿರುದ್ದ" (Action and reaction are equal and opposite) ಎಂಬ ನ್ಯೂಟನ್ ಸಿದ್ದಾಂತ ಬಾಹ್ಯಪ್ರಪಂಚದ ಜಡವಸ್ತುಗಳ ಚಲನೆಗೆ ಅನ್ವಯಿಸಬಹುದೇ ಹೊರತು ಮನುಷ್ಯನ ಅಂತರಂಗದ ಮನಃಸ್ಥಿತಿಗೆ ಅನ್ವಯಿಸುವುದಿಲ್ಲ, ಒಬ್ಬರ ಮಾತಿನಿಂದ ಸಿಟ್ಟಿಗೆದ್ದ ಇನ್ನೊಬ್ಬ ತೋರುವ ಪ್ರತಿಕ್ರಿಯೆ ವಿರುದ್ದವಾಗಿದ್ದರೂ ಸಮನಾಗಿರುವುದಿಲ್ಲ, It will be always disproportionate. ಆಟಗಾರನ ಕೈಯಿಂದ ನೆಲಕ್ಕೆ ಅಪ್ಪಳಿಸಿದ ಚಂಡು ಅಷ್ಟೇ ರಭಸದಲ್ಲಿ ಪುಟಿದೆದ್ದು ಕ್ರಮೇಣ ತನ್ನ ಗತಿಯನ್ನು ಕಳೆದುಕೊಂಡು ನಿಂತರೂ ಆಕ್ರೋಶಗೊಂಡ ಮನುಷ್ಯನ ಮನಸ್ಸಿನ ಕ್ರಿಯೆ ಮತ್ತು ಪ್ರತಿಕ್ರಿಯೆ ಎಂದಿಗೂ ನಿಲ್ಲುವುದಿಲ್ಲ. ವೈರತ್ವದಿಂದ ಸೇಡಿನ ಪ್ರವೃತ್ತಿ ಮನುಷ್ಯನನ್ನು ಸೇಡಿನ ಪ್ರವೃತ್ತಿ ಬೆಳೆಯುತ್ತದೆ; ಸೇಡಿನಿಂದ ವೈರತ್ವ ವರ್ಧಿಸುತ್ತದೆ. ವಿಚಾರಹೀನನನ್ನಾಗಿ ಮಾಡಿ ಕೊನೆಯಲ್ಲಿ ಕೇಡಿಗೆ ದಾರಿಮಾಡಿಕೊಡುತ್ತದೆ.

ಸೇಡಿಗೆ ಬಲಿಯಾಗುವವರು ಜಿದ್ದಿಗೆ ಬಿದ್ದವರಷ್ಟೇ ಅಲ್ಲ, ಅನೇಕ ಅಮಾಯಕರೂ ನಿಷ್ಕಾರಣವಾಗಿ ಬಲಿಯಾಗುತ್ತಾರೆ. ವಿಶ್ವಾಮಿತ್ರನ ಸೇಡಿನ ಮನೋಭಾವ ಎಲ್ಲರಿಗೂ ಗೊತ್ತು. ಅವನ ಸೇಡು ಪ್ರತಿಸ್ಪರ್ಧಿ ವಶಿಷ್ಟರನ್ನು ಏನೂ ಮಾಡಲಿಲ್ಲ, ನಿಷ್ಟಾಪಿ ಹರಿಶ್ಚಂದ್ರನು ದೇಶಕೋಶಗಳನ್ನು ಕಳೆದುಕೊಂಡು ಮಡದಿ ಮಕ್ಕಳನ್ನು ಮಾರಿ ಸ್ಮಶಾನ ಕಾಯುವಂತಾಯಿತು. ಈ ಜಗತ್ತಿನ ಇತಿಹಾಸದ ಸಿಂಹಾವಲೋಕನ ಮಾಡಿದರೆ ಸೇಡು ಮತ್ತು ಪ್ರತೀಕಾರಗಳ ಕಾರಣದಿಂದ ನಡೆದ ಸಾಲು ಸಾಲು ಯುದ್ಧಗಳು, ಕಲಹಗಳು ಕಣ್ಣೆದುರಿಗೆ ಬಂದು ನಿಲ್ಲುತ್ತವೆ. ಸೇಡಿನ ಜ್ವಲಂತ ಉದಾಹರಣೆ ಎಂದರೆ ಮಹಾಭಾರತ, ಸೇಡು, ಜಿದ್ದು ಮತ್ತು ಹಠಕ್ಕೆ ಬಿದ್ದ ದಾಯಾದಿಗಳು ಹೊಡೆದಾಡಿಕೊಂಡು ಸತ್ತರು. ಮಹಾಭಾರತದ ಘನಘೋರ ಯುದ್ದದಲ್ಲಿ ಅನೇಕ ಮುಗ್ಗರ ನೆತ್ತರು ಹರಿಯಿತು. ಮಹಾಕವಿ ಪಂಪ ವರ್ಣಿಸುವಂತೆ ಯುದ್ಧಾನಂತರ "ದ್ವಾಪರ ಯುಗಪುರುಷ"ನು ಭೂಮಿಗೆ ವಿದಾಯ ಹೇಳುವ ಸಂದರ್ಭದಲ್ಲಿ “ಧರೆಯನಗಲುವ ಮುನ್ನ ನೆತ್ತರಿಂ ಕಾಲೆಳೆಯುವಂತಾಯ್ತ!” ಎಂದು ಪರಿತಾಪ ಪಟ್ಟನಂತೆ!

ಸೇಡಿನ ರಾಜಕಾರಣ ವಿಜೃಂಭಿಸಿ ಜನಹಿತ ಬಲಿಯಾಗುವುದನ್ನು ಸ್ವತಂತ್ರ ಭಾರತದ ರಾಜಕೀಯ ವಿದ್ಯಮಾನಗಳಲ್ಲಿಯೂ ಕಾಣಬಹುದಾಗಿದೆ. ಗೆದ್ದು ಬಂದ ಕೂಡಲೇ ತನ್ನ ರಾಜಕೀಯ ಎದುರಾಳಿಯನ್ನು ತೇಜೋವಧೆ ಮಾಡುವ ಅಜೆಂಡಾ ಇಟ್ಟುಕೊಂಡ ರಾಜಕೀಯ ನಾಯಕರು ಹೇಳುವ ಮಾತೆಂದರೆ “ಸೇಡಿನ ರಾಜಕಾರಣ ಮಾಡುತ್ತಿಲ್ಲ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ!”

ಸೇಡಿನ ಪ್ರವೃತ್ತಿ ಮನುಷ್ಯನ ಮನಸ್ಸನ್ನು ವಿಕಾರಗೊಳಿಸುತ್ತದೆ. ಸೇಡು ತೀರಿಸಿಕೊಳ್ಳುವ ಸಲುವಾಗಿ ಸಂಚು ಮಾಡುವಂತೆ ಪ್ರೇರೇಪಿಸುತ್ತದೆ. ತನ್ನ ಎದುರಾಳಿಗೆ ಕೆಟ್ಟದ್ದಾಗಬೇಕೆಂಬ, ಹೇಗಾದರೂ ಸರಿ ಕೆಟ್ಟದ್ದನ್ನು ಮಾಡಲೇಬೇಕೆಂಬ ಕೆಟ್ಟ ಆಲೋಚನೆ ಉಂಟಾಗುತ್ತದೆ. ಸೇಡಿನ ಪ್ರವೃತ್ತಿ ಉಳ್ಳವನು ವಿವೇಕಶೂನ್ಯನಾಗುತ್ತಾನೆ. ತನ್ನ ಸ್ವಾರ್ಥಕ್ಕೆ ಅಡ್ಡಿಯಾದಾಗ ಅಡ್ಡ ಬಂದವರ ಮೇಲೆ ಹರಿಹಾಯುತ್ತಾನೆ. ಸೇಡಿಗೆ ಒಳಗಾದವನ ದ್ವೇಷವು ಇಳಿಜಾರಿನಲ್ಲಿ ಸಾಗುವ ಬ್ರೇಕಿಲ್ಲದ ವಾಹನದಂತೆ. "ಸೇರಿಗೆ ಸವ್ವಾಸೇರು" ಎನ್ನುವ ಸೇಡು ಅವನನ್ನು ಬಲಿ ತೆಗೆದುಕೊಳ್ಳದೆ ಬಿಡುವುದಿಲ್ಲ, ನನ್ನ ಒಂದು ಕಣ್ಣು ಹೋದರೂ ಸರಿಯೆ ಎದುರಾಳಿಯ ಎರಡೂ ಕಣ್ಣುಗಳೂ ಕುರುಡಾಗಲಿ ಎಂಬ ಮನೋಭಾವದಿಂದ ಸುಖವಿಲ್ಲ, "ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡುವುದೇ?" ಎಂದು ಹೇಳುವ ಬಸವಣ್ಣನವರ ಮಾತು ಅಂಥವರಿಗೆ ದಾರಿದೀಪವಾಗಬೇಕಾಗಿದೆ.

ಯಾರು ನೋವುಂಟು ಮಾಡುತ್ತಾರೋ ಅವರ ಬಗ್ಗೆ ಆಕ್ರೋಶ ಮತ್ತು ಸೇಡಿನ ಮನೋಭಾವ ಇರುವುದು ಸಹಜ. ಆದರೆ ಇದನ್ನು ಎಲ್ಲ ಸಂದರ್ಭಗಳಿಗೂ ಅನ್ವಯಿಸಿ ಹೇಳಲು ಸಾಧ್ಯವಿಲ್ಲ. ಯಾವ ತಾಯಿಯೂ ಹೆರಿಗೆಯ ಸಂದರ್ಭದಲ್ಲಿ ಅಪಾರ ನೋವನ್ನು ನೀಡಿ ಹೊರಬಂದ ಮಗುವನ್ನು ಕತ್ತು ಹಿಸುಕಿ ಸಾಯಿಸಿ ಸೇಡು ತೀರಿಸಿಕೊಂಡ ಉದಾಹರಣೆಗಳಿಲ್ಲ. ತನ್ನ ವೇದನೆಗೆ ಮಗು ಕಾರಣವಾದರೂ ಮಗುವಿನ ಮುದ್ದು ಮುಖವನ್ನು ನೋಡಿ ಹೆರಿಗೆಯ ನೋವನ್ನು ಮರೆಯುತ್ತಾಳೆ. ಕ್ಷಣಾರ್ಧದಲ್ಲಿ ತಾಯ್ತನದ ಸುಖ ಆಕೆಯ ಮುಖದ ಮೇಲೆ ಅಪಾರ ಆನಂದ ಚಿಮ್ಮುವಂತೆ ಮಾಡುತ್ತದೆ. ನೋವೇನೂ ಹೋಗಿರುವುದಿಲ್ಲ, ಮಗುವಿನ ಮೇಲಿನ ಮಮತೆ, ಪ್ರೀತಿ, ವಾತ್ಸಲ್ಯದ ಮುಂದೆ ಅದು ನಗಣ್ಯವಾಗಿಬಿಡುತ್ತದೆ. ಹಾಗೆಯೇ ಗಂಡ ಹೆಂಡಿರ ಮಧ್ಯೆ ಯಾವುದೇ ಕಾರಣಕ್ಕೆ ನೋವಾದರೂ ಪರಸ್ಪರರಲ್ಲಿ ಪ್ರೀತಿ ಅನುರಾಗವಿದ್ದರೆ ಸಂಬಂಧ ಹದಗೆಡಲು ಸಾಧ್ಯವಿಲ್ಲ. ಪ್ರೀತಿಯ ಮಂದಾನಿಲ ಸುಳಿಯುವವರೆಗೆ ಸೇಡಿಗೆ ಠಾವಿಲ್ಲ; ಸೇಡಿನ ಬೆಂಕಿ ಸುಡುತ್ತಿರುವ ಠಾವಿನಲ್ಲಿ ಪ್ರೀತಿಗೆ ನೆಲೆಯಿಲ್ಲ, ಪ್ರೀತಿಯನ್ನು ಕೊಂದು ಸೇಡು ಕಿಚ್ಚಾಗಿ ಸುಡುತ್ತದೆ.

ಪ್ರೀತಿಯ ಮಂದಾನಿಲ ಬೇಕೋ, ಸೇಡಿನ ದಾವಾನಲ ಬೇಕೋ? ಆಯ್ಕೆ ನಿಮ್ಮ ಕೈಯಲ್ಲಿದೆ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 23.7.2015