ಹಣದ ಝಣತ್ಕಾರ ಪ್ರೀತಿಗೆ ಸಂಚಕಾರ

  •  
  •  
  •  
  •  
  •    Views  

ರವತ್ತರ ದಶಕದ ಆರಂಭದ ವರ್ಷಗಳಲ್ಲಿ (1960-63) ಶಿವಮೊಗ್ಗದ ಸರಕಾರಿ ಪ್ರೌಢಶಾಲೆಯಲ್ಲಿ ಜೊತೆಗೂಡಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮಿತ್ರರನೇಕರು ವಾರದ ಹಿಂದೆ ತಮ್ಮ ಮಡದಿ ಮಕ್ಕಳು ಮತ್ತು ಮೊಮ್ಮೊಕ್ಕಳೊಂದಿಗೆ ಸಿರಿಗೆರೆಗೆ ಬಂದಿದ್ದರು. ಪ್ರತಿ ಸೋಮವಾರ ನಾವು ನಡೆಸುವ "ಸದ್ಧರ್ಮ ನ್ಯಾಯಪೀಠದ" ಕಾರ್ಯಕಲಾಪಗಳನ್ನು ವೀಕ್ಷಿಸುವ ಉತ್ಕಟೇಚ್ಛೆ ಅವರದಾಗಿತ್ತು. ಹಿಂದಿನ ದಿನವೇ ಮಠಕ್ಕೆ ಬಂದು ತಂಗಿದ್ದರು. ಅವರಲ್ಲಿ ಅನೇಕರು ಸರಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಅವರನ್ನು ನಮ್ಮತ್ತ ಕರೆತಂದದ್ದು ಬಾಲ್ಯದ ಆತ್ಮೀಯ ಗೆಳೆತನ ಮತ್ತು ಅವರ ಸುಪ್ತಮನಸ್ಸಿನಲ್ಲಿರುವ ಆಧ್ಯಾತ್ಮಿಕ ಸೆಳೆತ. ಸಾಂಸಾರಿಕ ಜಂಜಾಟದಲ್ಲಿ ಅನೇಕ ಏಳುಬೀಳುಗಳನ್ನು ಕಂಡ ಅವರಿಗೆ ತಮ್ಮ ಮಧ್ಯೆ ಇದ್ದ ಗೆಳೆಯನೊಬ್ಬ ಒಂದು ಮಠದ ಪೀಠಾಧಿಪತಿಯಾಗಿರುವುದು ಅತ್ಯಂತ ಅಭಿಮಾನ ಮತ್ತು ಹೆಮ್ಮೆಯ ಸಂಗತಿಯಾಗಿತ್ತು. ವಿಭಿನ್ನ ಸಂಪ್ರದಾಯದವರಾಗಿದ್ದರೂ ಅವೆಲ್ಲ ಕಟ್ಟುಪಾಡುಗಳನ್ನು ಮೀರಿದ ನಿರ್ವ್ಯಾಜ ಬಾಲ್ಯಸ್ನೇಹ ಅವರದು. ಸಂಜೆ ಹೊತ್ತು ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದಾಗ ಒಬ್ಬರು ಮತ್ತೊಬ್ಬರನ್ನು ಸ್ನೇಹದ ಸಲುಗೆಯಿಂದ ಏಕವಚನದಲ್ಲಿ ಝಂಕಿಸಿ ಮಾತನಾಡಿಸಿದರೂ ನಮ್ಮೊಂದಿಗೆ ಮಾತನಾಡುವಾಗ ಮಾತ್ರ ಎಲ್ಲರೂ ಗಂಭೀರ ವದನರಾಗಿಬಿಡುತ್ತಿದ್ದರು. ಅದು ಅವರ ಧಾರ್ಮಿಕ ಶ್ರದ್ಧೆ ಮತ್ತು ಬಾಲ್ಯ ಸಂಸ್ಕಾರ. ಎಲ್ಲರೂ ನಮ್ಮೆದುರಿನಲ್ಲಿ ತಮ್ಮ ಬದುಕಿನ ಅನೇಕ ಸಿಹಿ ಕಹಿ ಘಟನೆಗಳನ್ನು ಹಂಚಿಕೊಂಡರು, ಮನಸ್ಸನ್ನು ಹಗುರ ಮಾಡಿಕೊಂಡರು.

ಸ್ನೇಹದ ಸೆಳೆತ ಬಂಧುತ್ವದ ಸೆಳೆತಕ್ಕಿಂತಲೂ ಮಿಗಿಲಾದುದು. “ಸ್ನೇಹದ ತಳಹದಿ ಪ್ರೇಮ, ಋಜುತ್ವ. ಬಾಂಧವ್ಯದ ತಳಹದಿ ಗೌರವ, ಬಿಗುಮಾನ” ಎನ್ನುತ್ತಾರೆ ತೀ.ನಂ.ಶ್ರೀ. “ಸ್ನೇಹಿತನೊಂದಿಗೆ ಸರಸವಾಡುವಂತೆ ನಂಟನೊಂದಿಗೆ ಆಡಲಾದೀತೆ? ಯಾವ ಘಳಿಗೆಗೆ ನಗೆ ಹೋಗಿ ಹೊಗೆಯಾಗುವುದೋ ಎಂಬ ಭೀತಿ” ಎಂದು ಅವರು ತಮ್ಮ "ನಂಟರು" ಎಂಬ ಲೇಖನದಲ್ಲಿ ಅತಂಕ ವ್ಯಕ್ತಪಡಿಸುತ್ತಾರೆ. ನೀವು ಮೈಮೇಲೆ ಸಾಧಾರಣ ಬನಿಯನ್ ಹಾಕಿಕೊಂಡಿದ್ದರೆ ಮನೆಗೆ ಬಂದವರು ನಿಮ್ಮ ಸ್ನೇಹಿತರು, ನಿಮ್ಮ ಮಡದಿ ದಪ್ಪಂಚಿನ ಸೀರೆ ಉಟ್ಟುಕೊಂಡರೆ, ಶಾವಿಗೆ ಪಾಯಸ ಮಾಡಿದರೆ ಆ ದಿನ ಮನೆಗೆ ಬರುವವರು ಬೀಗರು ಎಂದು ತೀ.ನಂ.ಶ್ರೀ ನಗೆಯಾಡುತ್ತಾರೆ. ಸ್ನೇಹ ವಿಶ್ವಾಸದಲ್ಲಿ ಯಾವುದೇ ಬಿಗುಮಾನ ಇರುವುದಿಲ್ಲ. ಅದರಲ್ಲಿ ಯಾವುದೇ ಜಾತಿ ಮತಗಳ ಕಟ್ಟುಪಾಡುಗಳಾಗಲೀ, ಯಾವುದೇ ವ್ಯಾವಹಾರಿಕ ಲೆಕ್ಕಾಚಾರವಾಗಲೀ ಇರುವುದಿಲ್ಲ, ಬಾಲ್ಯ ಸ್ನೇಹವಂತೂ ಅತ್ಯಂತ ನಿಷ್ಕಳಂಕ.

ಆತ್ಮೀಯ ಸ್ನೇಹಿತರೊಂದಿಗೆ ನಿಮ್ಮ ಮನದಾಳದ ಮಾತುಗಳನ್ನು ನಿರಾತಂಕವಾಗಿ ಹೇಳಿಕೊಳ್ಳಬಹುದು. “ಮನದೊಳ್ ದುಃಖಂ ಕೂರ್ಪರೊಳ್ ಪೇಳ್ದೊಡಲ್ಲದೆ ಪೋಕುಮೇ?" ಎಂಬ ಕಿವಿಮಾತೊಂದು ಕನ್ನಡದ ಪ್ರಾಚೀನ ಗ್ರಂಥಗಳಲ್ಲೊಂದಾದ "ವಡ್ಡಾರಾಧನೆ"ಯಲ್ಲಿ ಬರುತ್ತದೆ. ಕಳೆದ ವಾರ ನಡೆದ ಸಂಭಾಷಣೆಯ ಸಂದರ್ಭದಲ್ಲಿ ಬಾಲ್ಯ ಸ್ನೇಹಿತರೊಬ್ಬರು ನಿರೂಪಿಸಿದ ಘಟನೆ ತುಂಬಾ ಚರ್ಚೆಗೆ ಗ್ರಾಸವಾಯಿತು. ಘಟನೆಯ ವಿವರ ಹೀಗಿದೆ: ಅವರ ತಂದೆ ಅಂತಹ ಸ್ಥಿತಿವಂತರೇನೂ ಆಗಿರಲಿಲ್ಲ, ಮಧ್ಯಮ ವರ್ಗಕ್ಕೆ ಸೇರಿದ ದೊಡ್ಡ ಕುಟುಂಬ. 4 ಜನ ಗಂಡು ಮಕ್ಕಳು ಮತ್ತು 4 ಜನ ಹೆಣ್ಣು ಮಕ್ಕಳು. ಜೀವನ ನಿರ್ವಹಣೆಗೆ ಪುಟ್ಟದೊಂದು ಚಿನ್ನ ಬೆಳ್ಳಿ ಅಂಗಡಿ. ಅಕ್ಕನ ಮದುವೆಯನ್ನು ಮಾಡಿದ ನಂತರ ತಂದೆ ತೀರಿಕೊಂಡರು. ಗಂಡುಮಕ್ಕಳಲ್ಲಿ ಹಿರಿಯ ಮಗನಾದ ಗೆಳೆಯನ ಹೆಗಲ ಮೇಲೆ ಕುಟುಂಬದ ಜವಾಬ್ದಾರಿಯ ಹೊರೆ ಬಿತ್ತು. ಕಷ್ಟಪಟ್ಟು ದುಡಿದು ಇಬ್ಬರು ಅಕ್ಕಂದಿರ ಮದುವೆಯನ್ನು ಮಾಡಿಕೊಟ್ಟರು. ದುರದೃಷ್ಟವಶಾತ್ ಒಬ್ಬ ಭಾವ ಕೆಲವೇ ದಿನಗಳಲ್ಲಿ ತೀರಿಕೊಂಡರು. ನಾಲ್ಕನೆಯ ತಂಗಿಯ ಮದುವೆಗೆ ಸಹಾಯವಾಗಲೆಂದು ಒಂದು ನಿವೇಶನವನ್ನು ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ಖರೀದಿಸಿದರು. ಅದನ್ನು ಚಿಕ್ಕವಯಸ್ಸಿನಲ್ಲಿಯೇ ತಂಗಿಯ ಹೆಸರಿಗೆ ರಿಜಿಸ್ಟರ್ ಮಾಡಿಸಿದರು. ಆಕೆಯ ಮದುವೆ ಮಾಡುವಾಗ ಅವರಿಗೆ ಸೈಟನ್ನು ಮಾರುವ ಅಗತ್ಯ ಬೀಳಲಿಲ್ಲ. ತಂಗಿಯ ಮೇಲಿನ ಪ್ರೀತಿವಿಶ್ವಾಸದಿಂದ ತಮ್ಮ ಹೆಸರಿಗೂ ಮಾಡಿಸಿಕೊಳ್ಳಲು ಮುಂದಾಗಲಿಲ್ಲ. ಹಣಕಾಸಿನ ಸ್ಥಿತಿ ಸುಧಾರಿಸಿದ್ದರಿಂದ ಕೈಯಲ್ಲಿದ್ದ ಹಣದಿಂದಲೇ 25 ವರ್ಷಗಳ ಹಿಂದೆ 25 ತೋಲೆ ಬಂಗಾರ ಹಾಕಿ ಧಾಂಧೂಂ ಎಂದು ಮದುವೆ ಮಾಡಿಕೊಟ್ಟರು. ಒಬ್ಬ ತಮ್ಮ ಅನಿರೀಕ್ಷಿತವಾಗಿ ತೀರಿಕೊಂಡಿದ್ದರಿಂದ ಅವನ ಮಗಳ ಮದುವೆಯನ್ನೂ ಇವರೇ ಮಾಡಬೇಕಾಯಿತು. ನಿನ್ನ ಹೆಸರಿನಲ್ಲಿರುವ ಸೈಟನ್ನು ನೀನೇ ಇಟ್ಟುಕೊಂಡು ಮಾರುಕಟ್ಟೆ ದರಕ್ಕಿಂತ 3-4 ಲಕ್ಷ ರೂ. ಕಡಿಮೆ ಕೊಡು, ಪರವಾಯಿಲ್ಲ ಎಂದು ತಂಗಿಯನ್ನು ಕೇಳಿದರು. "ನನಗೆ ಮನೆ ಇದೆ, ಎಲ್ಲಾ ಇದೆ, ಸೈಟನ್ನು ತೆಗೆದುಕೊಂಡು ನಾನೇನು ಮಾಡಲಿ?" ಎಂದು ಆಕೆ ಹೇಳಿದಳು. ಆಗಲೂ ತಂಗಿಯ ಹೆಸರಿನಲ್ಲಿದ್ದ ಆ ನಿವೇಶನವನ್ನು ಮಾರಾಟಮಾಡದೆ ಹೇಗೋ ತಮ್ಮನ ಮಗಳ ಮದುವೆಯನ್ನು ಮಾಡಿಕೊಟ್ಟರು. ಇತ್ತೀಚೆಗೆ ಆ ನಿವೇಶನಕ್ಕೆ ಬಹಳ ಬೇಡಿಕೆ ಬಂದಿತು. ಬೇಕಾದವರೊಬ್ಬರು ಸುಮಾರು 50 ಲಕ್ಷ ರೂ. ಗಳಿಗೆ ಕೊಳ್ಳಲು ಮುಂದೆ ಬಂದಾಗ ಮಾರಲು ನಿರ್ಧರಿಸಿ ಒಂದು ಲಕ್ಷ ರೂ. ಅಡ್ವಾನ್ಸ್ ಪಡೆದುಕೊಂಡರು. ಈ ಸಂಬಂಧವಾಗಿ ತಂಗಿಯ ಬಳಿಗೆ ತಮ್ಮನನ್ನು ಕಳಿಸಿದರು. ವಾಪಾಸು ಬಂದ ತಮ್ಮ ಅಕ್ಕ ಏನೆಂದಳೆಂದು ತಕ್ಷಣವೇ ಹೇಳಲಿಲ್ಲ. ಈ ಮಧ್ಯೆ ತಂದೆ ತಾಯಿಗಳ ಶ್ರಾದ್ದಕ್ಕೂ ತಂಗಿ ಬಂದು ಹೋದಳು. ನಂತರ ತಮ್ಮ ನಿಧಾನವಾಗಿ ಬಾಯಿಬಿಟ್ಟ. ವಿಚಾರ ತಿಳಿದು ಸ್ವತಃ ಅವರೇ ತಂಗಿಯ ಮನೆಗೆ ಹೋದರು. “ಸೈಟನ್ನು ನಾನು ಬಿಲ್ ಕುಲ್ ಮಾರುವುದಿಲ್ಲ!” ಎಂದು ತಂಗಿ ಕಡ್ಡಿ ಮುರಿದಂತೆ ಅಣ್ಣನಿಗೆ ಹೇಳಿಬಿಟ್ಟಳು. ತಂಗಿಯ ಮಾತುಗಳನ್ನು ಕೇಳಿ ಅಣ್ಣನಿಗೆ ಸಿಟ್ಟು ನೆತ್ತಿಗೇರಿತು. “ಹಾಗಿದ್ದರೆ ಅದನ್ನು ನೀನೇ ಜೀರ್ಣಿಸಿಕೋ. ದೇವರು ನೋಡಿಕೊಳ್ಳುತ್ತಾನೆ. ಆದರೆ ನನ್ನ ಮನೆಯ ಮೆಟ್ಟಿಲನ್ನು ಇನ್ನು ಮುಂದೆ ಹತ್ತಬೇಡ!” ಎಂದು ಖಂಡತುಂಡವಾಗಿ ಹೇಳಿ ವಾಪಾಸು ಬಂದರು. ಮೊದಲೇ ರಕ್ತದ ಒತ್ತಡದಿಂದ ಬಳಲುತ್ತಿದ್ದ ಗೆಳೆಯ "ಈಗ ಮಾನಸಿಕ ಒತ್ತಡ ಹೆಚ್ಚಿ ಗುಳಿಗೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕಾಗಿ ಬಂದಿದೆ ಎಂದು ಮುಚ್ಚುಮರೆಯಿಲ್ಲದೆ ಹೇಳಿಕೊಂಡರು.

ಮೇಲೆ ನಿರೂಪಿಸಿದ ಘಟನೆ ಗೆಳೆಯರ ಮಧ್ಯೆ ತುಂಬಾ ಚರ್ಚೆಗೆ ಗ್ರಾಸವಾಯಿತು: “ನಿಮ್ಮ ತಂಗಿಯ ಮದುವೆಯಾದ ನಂತರ ನಿಮ್ಮ ಹೆಸರಿಗೆ ಆ ಸೈಟನ್ನು ಮಾಡಿಸಿಕೊಂಡಿದ್ದರೆ ಇಂತಹ ಸಂದರ್ಭ ಒದಗಿಬರುತ್ತಿರಲಿಲ್ಲ, “ಸೈಟು ಆಕೆಯ ಹೆಸರಿನಲ್ಲಿ ಇದ್ದುದರಿಂದ ಆಕೆಯನ್ನು ವಿಶ್ವಾಸಕ್ಕೆ ತೆಗೆದುಕೊಳದೆ ಮಾರಲು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡದ್ದು ತಪ್ಪು”, “ನಿಮ್ಮ ತಂಗಿ ಸರಿಯಾಗಿಯೇ ಇರಬಹುದು. ಆದರೆ ಆಕೆಯ ಗಂಡ ಕೀ ಕೊಟ್ಟು ಕುಣಿಸುತ್ತಿರುವಂತೆ ಕಾಣುತ್ತದೆ!”, “ತಂಗಿಗೆ ನೀವು ಹಾಗೆ ಹೇಳಬಾರದಾಗಿತ್ತು. ಅದರಿಂದ ನೀವು ಸೈಟನ್ನೂ ಕಳೆದುಕೊಂಡಿರಿ, ಜೊತೆಗೆ ತಂಗಿಯನ್ನೂ ಕಳೆದುಕೊಂಡಿರಿ!” ಹೀಗೆ ನಾನಾ ಅಭಿಪ್ರಾಯಗಳು ಮೂಡಿಬಂದವು. ಎಲ್ಲರೂ ನಮ್ಮ ಅಭಿಪ್ರಾಯ ಏನಿರಬಹುದೆಂದು ಕುತೂಹಲದಿಂದ ನೋಡತೊಡಗಿದರು. "ನಿಮ್ಮ ತಂಗಿಯನ್ನು ಕರೆಸಿ ವಿಚಾರ ಮಾಡೋಣವೇ?” ಎಂದು ಕೇಳಿದ್ದಕ್ಕೆ ಗೆಳೆಯ ಬೇಡವೆಂದರು. ನನಗೇ ಬೇಕೆಂದು ತಂಗಿ ಕೇಳಿದ್ದರೆ ಧಾರಾಳವಾಗಿ ಕೊಡುತ್ತಿದ್ದೆ ಎಂದು ಒಂದು ದನಿಯಲ್ಲಿ ಹೇಳಿದರೆ, "ಸೈಟು ಎಲ್ಲಿದೆಯೆಂದು ಆಕೆಗೆ ಏನೂ ಗೊತ್ತಿಲ್ಲ, ನಾನೇ ತೆರಿಗೆಯನ್ನು ಕಟ್ಟುತ್ತಾ ಬಂದಿದ್ದೇನೆ. ಮೂಲ ರಿಜಿಸ್ಟ್ರೇಷನ್ ಪತ್ರ ಮತ್ತಿತರ ದಾಖಲೆಗಳೆಲ್ಲವೂ ನನ್ನ ಹತ್ತಿರವೇ ಇವೆ, ಬೇಕಾದರೆ ಆಕೆ ಸಬ್ರಿಜಿಸ್ಟ್ರಾರ್ ಆಫೀಸಿನಲ್ಲಿ ಹುಡುಕಿಕೊಳ್ಳಲಿ" ಎಂದು ಮತ್ತೊಂದು ದನಿಯಲ್ಲಿ ಹೇಳಿದರು. ಧರ್ಮದ ದೃಷ್ಟಿಯಿಂದ ಆ ಸೈಟು ನಿಮ್ಮದೇ, ಆದರೆ ಕಾನೂನು ದೃಷ್ಟಿಯಿಂದ ಅದು ನಿಮ್ಮ ತಂಗಿಯದು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಿಮ್ಮ ಹತ್ತಿರ ಇಟ್ಟುಕೊಂಡು ನಿಮ್ಮ ತಂಗಿಯನ್ನು ಸತಾಯಿಸುವುದು ಬೇಡ. “ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡುವುದೇ?” ಎಂದು ಬಸವಣ್ಣನವರು ಹೇಳುವಂತೆ ಆ ದಾಖಲೆಗಳು ನಿಮ್ಮ ಹತ್ತಿರ ಇರುವವರೆಗೂ ನಿಮ್ಮ ಮನಸ್ಸನ್ನು ಉದ್ವಿಗ್ನಗೊಳಿಸುತ್ತವೆ. ನಿಮ್ಮ ತಂಗಿಗೆ ಕೊಟ್ಟುಬಿಡಿ” ಎಂದು ಕಿವಿಮಾತು ಹೇಳಿದ್ದಕ್ಕೆ ಎಲ್ಲ ಗೆಳೆಯರೂ ದನಿಗೂಡಿಸಿದರು. ಹಾಗೆಯೇ ಮಾಡುವುದಾಗಿ ಆ ಗೆಳೆಯನೂ ಸಮ್ಮತಿಸಿದರು. ಆಸ್ತಿಯ ಕಾರಣಕ್ಕೆ ಪ್ರೀತಿಯೆಲ್ಲವೂ ಟೊಳ್ಳಾಯಿತು. ಅಷ್ಟಲ್ಲದೆ ಗಾದೆ ಹೇಳುತ್ತದೆಯೇ?

 “ತಾಮ್ರದ ಕಾಸು ತಾಯಿ ಮಕ್ಕಳನ್ನು ಅಗಲಿಸಿತು!”

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 20.8.2015