ಕಾಲ ಕೆಳಗಿನ ಅಗ್ನಿಕುಂಡ, ಕಣ್ಣಮುಂದಿನ ಬೆಳಕು!
ದೂರದರ್ಶನದತ್ತ ಕಣ್ಣು ಹಾಯಿಸದೆ ಹತ್ತಾರು ತಿಂಗಳುಗಳೇ ಆಗಿದ್ದವು. ಮೊನ್ನೆ ಭಾನುವಾರ (ಅಗಸ್ಟ್ 30, 2015) ಬೆಳಗ್ಗೆ ಧಾರವಾಡದಲ್ಲಿ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ನಾಡಿನ ಹಿರಿಯ ಸಂಶೋಧಕ ಡಾ. ಎಂ.ಎಂ ಕಲಬುರ್ಗಿಯವರ ಹತ್ಯೆಯಾಗಿದೆ ಎಂಬ ಆಘಾತಕಾರಿ ಸುದ್ದಿ ಕೇಳಿದಾಗ ಕಿರುತೆರೆಯಲ್ಲಿ ಅವರ ಬದುಕಿನ ಅಂತಿಮ ಕ್ಷಣಗಳನ್ನು ನೋಡದಿರಲು ಸಾಧ್ಯವಾಗಲಿಲ್ಲ, ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ನಗುಮುಖದ ಭಾವಚಿತ್ರಗಳು "ಜಗವೆಲ್ಲ ನಗುತಿರಲು ನೀ ಅಳುತ ಬಂದೆ, ಜಗವೆಲ್ಲ ಅಳುತಿರಲು ನೀ ನಗುತ ಹೋಗು" ಎನ್ನುವ ಡಿ.ವಿ.ಜಿ ಯವರ ಮಾತಿನ ಆಶಯಕ್ಕೆ ಅನುಗುಣವಾಗಿದ್ದವು. ವಿಶ್ವಾದ್ಯಂತ ಈ ಭೀಕರ ಕಗ್ಗೊಲೆಯ ಖಂಡನೆ ವ್ಯಕ್ತವಾಗಿದೆ. ಇಲ್ಲಿಯವರೆಗೆ ರಾಜಕೀಯ ಮತ್ತು ಸಾಮಾಜಿಕ ರಂಗಗಳಲ್ಲಿ ಹಿಂಸೆ ತಾಂಡವವಾಡುತ್ತಿತ್ತು, ಈಗ ಕನ್ನಡ ನಾಡಿನಲ್ಲಿ ಮೊದಲಬಾರಿಗೆ ಎಂಬಂತೆ ಅದು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೂ ಕಾಲಿಟ್ಟಿರುವುದು ನಿಜಕ್ಕೂ ಆತಂಕದ ಸಂಗತಿಯಾಗಿದೆ. ದುಷ್ಕರ್ಮಿಗಳು ಗುಂಡಿನ ಧಾಳಿಯಿಂದ ಕಲಬುರ್ಗಿಯವರ ಭೌತಿಕ ಶರೀರವನ್ನು ಕಗ್ಗೂಲೆಗೈದಿರಬಹುದೇ ಹೊರತು ಅವರ ಗಂಡೆದೆಯ ವೈಚಾರಿಕ ನಿಲುವನ್ನಲ್ಲ, ಅವರ ವಿಚಾರಗಳನ್ನು ಸರಿಗಟ್ಟುವಂತೆ ವಿಚಾರ ಮಂಡನೆ ಮಾಡಲು ಅಸಮರ್ಥರಾದ ಅವಿವೇಕಿಗಳಿಂದ ಈ ಕಗ್ಗೊಲೆ ನಡೆದಿದೆ. ಲೇಖನಿಗೆ ಲೇಖನಿಯಿಂದ ಉತ್ತರಿಸಬೇಕೇ ಹೊರತು ಪಿಸ್ತೂಲಿನ ಗುಂಡಿನಿಂದ ಅಲ್ಲ ಅವರ ಈ ಬರ್ಬರ ಹತ್ಯೆ ನಾಡಿನ ಜನರಿಗೆ ಆಘಾತವನ್ನುಂಟುಮಾಡಿದೆ. ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವಂತೆ ಡಾ. ಕಲಬುರ್ಗಿಯವರು ಶಾರೀರಿಕವಾಗಿ ಕಣ್ಮರೆಯಾದರೂ ಕನ್ನಡ ಸಾರಸ್ವತ ಲೋಕದಲ್ಲಿ ಜೀವಂತವಾಗಿದ್ದಾರೆ.
ಅವರ ಮತ್ತು ನಮ್ಮ ಸಂಬಂಧ ಕೇವಲ ಸಭೆ ಸಮಾರಂಭಗಳ ವೇದಿಕೆಗಳಿಗೆ ಸೀಮಿತವಾಗಿರಲಿಲ್ಲ. ವಚನ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಯಾವುದೇ ಸಂದಿಗ್ಧತೆ ಉಂಟಾದಾಗಲೆಲ್ಲ ನೇರವಾಗಿ ದೂರವಾಣಿಯಲ್ಲಿ ಅವರೊಂದಿಗೆ ನಮ್ಮ ಸಂಭಾಷಣೆ ನಡೆಯುತ್ತಿತ್ತು. ಮನಸ್ಸಿನಲ್ಲಿ ಉಂಟಾದ ಅನುಮಾನಗಳು ನಿವಾರಣೆಯಾಗುತ್ತಿದ್ದವು. ನಮ್ಮ ಈ "ಬಿಸಿಲು ಬೆಳದಿಂಗಳು" ಅಂಕಣ ಬರಹ ಅವರಿಗೆ ವೈಚಾರಿಕ ತೃಪ್ತಿಯನ್ನು ನೀಡಿದ್ದರೂ ಸಂಶೋಧಕರಾಗಿ ತಮ್ಮ ಅಸಂತುಷ್ಟಿಯನ್ನು ವ್ಯಕ್ತಪಡಿಸುತ್ತಿದ್ದರು. ದೇಶ ವಿದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಓದಿದ ತಾವು ಸಾಮಾಜಿಕ ಸಮಸ್ಯೆಗಳನ್ನು ಕುರಿತು ಲೇಖನಗಳನ್ನು ಬರೆಯುವುದಕ್ಕಿಂತ ಸಂಶೋಧನಾತ್ಮಕವಾದ ಲೇಖನಗಳನ್ನು ಬರೆಯಬೇಕು? ಎಂದು ನಿರ್ಭಿಡೆಯಿಂದ ಹೇಳುತ್ತಿದ್ದರು. ಪ್ಯಾರಿಸ್ ಮಹಾನಗರದ ರಾಷ್ಟ್ರೀಯ ಗ್ರಂಥಾಲಯದಲ್ಲಿ ಬಸವಣ್ಣನವರ ವಚನಗಳ ತಮಿಳು ಅನುವಾದದ (ಕಾಲ:1780) ಓಲೆಗರಿ ಗ್ರಂಥ ಇರುವುದನ್ನು ನಾವು ಪತ್ತೆ ಹಚ್ಚಿದ ವಿಚಾರ ಅವರಿಗೆ ತುಂಬಾ ತೃಪ್ತಿಯನ್ನು ತಂದಿತ್ತು. ಇಂಥದೊಂದು ಪ್ರಾಚೀನ ಅನುವಾದ ಗ್ರಂಥ ಇದೆಯೆಂಬುದೇ ಗೊತ್ತಿರಲಿಲ್ಲವೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ತಮಿಳು ಅನುವಾದದ ನೆರವಿನಿಂದ ಬಸವಣ್ಣನವರ ವಚನಗಳ ಕೆಲವು ಪಾಠಾಂತರ ಸಂದಿಗ್ಧತೆಯನ್ನು ಹೇಗೆ ನಿವಾರಿಸಬಹುದೆಂಬುದನ್ನು ಇದೇ ಅಂಕಣದಲ್ಲಿ ಹಿಂದೆ ಬರೆಯಲಾಗಿದೆ. ಇಂತಹ ಸಂಶೋಧನಾತ್ಮಕ ಸಂಗತಿಗಳನ್ನು ಕುರಿತು ಹೆಚ್ಚು ಹೆಚ್ಚು ಬರೆಯಬೇಕೆಂಬುದು ಅವರ ನಿರೀಕ್ಷೆಯಾಗಿತ್ತು, ಬಸವಣ್ಣನವರ ವಚನಗಳನ್ನು ಆಧರಿಸಿ 1994ರಲ್ಲಿ ಮೊಟ್ಟಮೊದಲಿಗೆ ನಾವು ರೂಪಿಸಿದ "ಗಣಕ ವಚನ ಸಂಪುಟ" ಎಂಬ ತಂತ್ರಾಂಶವನ್ನು (software) ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದಲ್ಲಿ ಖಾಸಗಿಯಾಗಿ ಅವರಿಗೆ ತೋರಿಸಿದಾಗ ಅವರು ತುಂಬಾ ಖುಷಿಪಟ್ಟಿದ್ದರು. ವಚನಗಳ ಓದಿಗೆ, ಸಂಶೋಧನೆಗೆ, ಈ ತಂತ್ರಾಂಶ ಹೇಗೆ ಉಪಯುಕ್ತವೆಂಬುದರ ಬಗೆಗೆ ಆ ಸಂದರ್ಭದಲ್ಲಿ ನಡೆದ ನಮ್ಮ ಮತ್ತು ಅವರ ಸಂಭಾಷಣೆ ಇಲ್ಲಿ ಸ್ಮರಣೀಯ.
"ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು, ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು" ಎಂಬ ಬಸವಣ್ಣನವರ ವಚನದಲ್ಲಿ ‘ಉಡುವಲ್ಲಿ" ಎಂಬ ಶಬ್ದ ಒಮ್ಮೆ ನಮ್ಮ ಮನಸ್ಸಿನಲ್ಲಿ ಅರ್ಥಸಂದಿಗ್ಧತೆಗೆ ಎಡೆಮಾಡಿಕೊಟ್ಟಿತ್ತು. ಇಲ್ಲಿ ಬಸವಣ್ಣನವರು ಭಾರತೀಯ ಸಮಾಜದಲ್ಲಿ ಪೆಡಂಭೂತವಾಗಿ ಕಾಡುತ್ತಿರುವ ಜಾತಿಜಾಡ್ಯವನ್ನು ಪ್ರಸ್ತಾಪಿಸಿದ್ದಾರೆಂಬುದು ಸ್ಪಷ್ಟ. ಊಟೋಪಚಾರಗಳಲ್ಲಿ ಜಾತಿಯ ಆಧಾರದ ಮೇಲೆ ಪಂಕ್ತಿಭೇದ ಮಾಡುವ, ಮದುವೆ ವಯಸ್ಸಿಗೆ ಬಂದ ಮಕ್ಕಳಿಗೆ ಗಂಡು ಹೆಣ್ಣುಗಳನ್ನು ಸ್ವಜಾತಿಯಲ್ಲಿಯೇ ಹುಡುಕಾಡುವ ಮತೀಯ ದೃಷ್ಟಿಯನ್ನು ಬಸವಣ್ಣನವರು ವಿಷಾದದಿಂದ ಇಲ್ಲಿ ಪ್ರಸ್ತಾಪಿಸಿದ್ದಾರೆ. "ಉಂಬಲ್ಲಿ" ಎಂದರೆ ಊಟ ಮಾಡುವಾಗ ಜಾತಿಯನ್ನು ಎತ್ತೆಣಿಸುತ್ತಾರೆ ಎಂಬುದೇನೋ ಸರಿ, ಆದರೆ "ಉಡುವಲ್ಲಿ" ಅಂದರೆ ಬಟ್ಟೆಯನ್ನು ತೊಡುವಾಗ ಆಚಾರ/ಜಾತಿ ಕೆಡುತ್ತದೆಯೆಂದು ಹೇಗೆ ಅರ್ಥೈಸಬೇಕು? ಈ ಸಂದಿಗ್ಧತೆಯನ್ನು ಕಲಬುರ್ಗಿಯವರು ಒಂದೇ ಮಾತಿನಲ್ಲಿ ಪರಿಹರಿಸಿದರು. ವಚನದಲ್ಲಿ ಬರುವ "ಉಡುವಲ್ಲಿ ಎಂಬುದನ್ನು ಊಡುವಲ್ಲಿ" ಎಂದು ಓದಿಕೊಂಡು “ಉಣಬಡಿಸುವಾಗ" ಎಂದು ಅರ್ಥ ಮಾಡಿಕೊಳ್ಳಬೇಕೆಂದು ವಿವರಣೆ ನೀಡಿದರು. ಅವರ ಸಲಹೆಯಂತೆ ಈ ಪಾಠಾಂತರವನ್ನು ಒಪ್ಪಿಕೊಂಡರೆ ‘ಉಂಬಲ್ಲಿ ಊಡುವಲ್ಲಿ ಕ್ರೀಯಳಿಯತ್ತೆಂಬರು" ಎಂಬ ಸಾಲನ್ನು ಅರ್ಥಮಾಡಿಕೊಳ್ಳುವುದು ಬಹಳ ಸುಲಭ. "ಉಂಬಲ್ಲಿ" ಎಂದರೆ ಜೊತೆಗೆ ಕುಳಿತು ಉಣ್ಣುವಾಗ, "ಊಡುವಲ್ಲಿ" ಎಂದರೆ ಊಟಕ್ಕೆ ಬಡಿಸುವಾಗ ಕುಲವನ್ನು ನೋಡುತ್ತಾರೆ ಎಂಬ ಮಾತು ಪರಸ್ಪರ ಪೂರಕವಾಗುತ್ತದೆ. ಇನ್ನು "ಕೊಂಬಲ್ಲಿ ಕೊಡುವಲ್ಲಿ" ಎಂದರೆ ಹೆಣ್ಣನ್ನು ಮದುವೆ ಮಾಡಿಕೊಡುವಾಗ ತರುವಾಗ ಕುಲಜಾತಿಗಳನ್ನು ನೋಡುವುದು ಇಂದಿಗೂ ಇದೆಯಲ್ಲವೇ? ಡಾ.ಕಲಬುರ್ಗಿಯವರು ಈ ತಿದ್ದುಪಡಿಯನ್ನು ಸೂಚಿಸಿದಾಕ್ಷಣ ನಮ್ಮ "ಗಣಕ ವಚನ ಸಂಪುಟ" ತಂತ್ರಾಂಶವನ್ನು ಜಾಲಾಡಿ (Search) ನೋಡಿದಾಗ "ಊಡು" ಎಂಬ ಶಬ್ದಪ್ರಯೋಗ ಬಸವಣ್ಣನವರ ಅನೇಕ ವಚನಗಳಲ್ಲಿ ಕಂಡುಬಂದಿತು: 1."ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ" 2."ಊಡುವ ಉಣಿಸುವ ಗಂಡನಿದ್ದಂತೆ ಜೋಡೆ ಮಿಂಡಂಗೆ ಕಣ್ಣು ಚೆಲ್ಲುವಳ ಕೇಡಿಂಗೆ ಬೆರಗಾದೆ", 3."ಊಡಿಸಿದಡೆ ಉಂಬನೊ ಉಣ್ಣನೊ?" 4.ಆಡಿ ಬಹ ಮಕ್ಕಳಿಗೆ ಊಡುವ ತಾಯಂತೆ ನೋಡಿ ಇತ್ಯಾದಿ. "ಊಡು" ಎಂಬ ಶಬ್ದ ಹೀಗೆ ‘ಉಣ್ಣಿಸು" ಎಂಬ ಅರ್ಥದಲ್ಲಿ, ಪ್ರಯೋಗವಾಗಿದ್ದರೂ "ಸಿರಿಯಾಳನಂತೆ ಉಣಲಿಕ್ಕಬಲ್ಲೆನೆ? ದಾಸಿಮಯ್ಯನಂತೆ ಊಡಬಲ್ಲೆನೆ?" ಎಂಬ ವಚನದಲ್ಲಿ "ಉಡಿಸು" ಅಂದರೆ ಬಟ್ಟೆ ತೊಡಿಸು ಎಂಬ ಅರ್ಥದಲ್ಲಿಯೂ ಈ ಶಬ್ದವನ್ನು ಬಸವಣ್ಣನವರು ಪ್ರಯೋಗಿಸಿದ್ದಾರೆಂಬುದು ಇಲ್ಲಿ ಗಮನಾರ್ಹ.
ಡಾ. ಕಲಬುರ್ಗಿಯವರು ವಿಚಾರವಾದಿಗಳಾಗಿದ್ದರು ನಿಜ. ಆದರೆ ನಾಸ್ತಿಕರಾಗಿರಲಿಲ್ಲ, ದೇವರ ಬಗ್ಗೆ ಅಪಾರ ವಿಶ್ವಾಸವುಳ್ಳವರಾಗಿದ್ದರು. ಅವರು ಕರ್ಮಠತನವನ್ನು ಖಂಡಿಸುತ್ತಿದ್ದರೇ ಹೊರತು ದೇವರ ಮೇಲಿನ ನಂಬುಗೆಯನ್ನಲ್ಲ "ನ್ಯಾಯನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ" ಎಂಬ ಬಸವಣ್ಣನವರ ನಿರ್ದಾಕ್ಷಿಣ್ಯವಾದ ವೈಚಾರಿಕ ನಿಲುವು ಅವರದಾಗಿತ್ತು. ಸತ್ಯವನ್ನು ಒರೆಹಚ್ಚಿ ನೋಡುವ ಕುಶಾಗ್ರಮತಿಗಳು ಅವರಾಗಿದ್ದರು. "ವಾದೇ ವಾದೇ ಜಾಯತೇ ತತ್ವಬೋಧಃ" ಎನ್ನುತ್ತದೆ ಭಗವದ್ಗೀತೆ, ಅಂದರೆ ಯಾವುದೇ ವಿಚಾರವನ್ನು ತಾತ್ವಿಕವಾಗಿ ವಿರೋಧಿಸುವ ಹಕ್ಕು ಅವಕಾಶ ಎಲ್ಲರಿಗೂ ಇದ್ದೇ ಇದೆ. ಇದು ನಮ್ಮ ಭಾರತೀಯ ಪರಂಪರೆಯಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಮಾತು ಮಾತು ಮಥಿನಿಸಿ ಅನುಭಾವ ಹುಟ್ಟುತ್ತದೆ ಎಂದು ವಚನಕಾರರು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಅಭಿಪ್ರಾಯ ಭೇದ ತಲೆದೋರಿದಾಗ ಅದನ್ನು ನಿರ್ವಹಿಸುತ್ತಿದ್ದ ಕಲಬುರ್ಗಿಯವರ ರೀತಿ ಆದರ್ಶವಾಗಿದೆ. ಅವರೆಂದೂ ತಮ್ಮನ್ನು ವೈಚಾರಿಕವಾಗಿ ವಿರೋಧಿಸಿದವರನ್ನು ಕುರಿತು ಕೆಟ್ಟ ಮಾತು ಆಡಿದವರಲ್ಲ, ನಗುಮುಖದಿಂದ ಅಂತಹ ಸಂದರ್ಭಗಳನ್ನು ಎದುರಿಸುತ್ತಿದ್ದರು. ವಿರೋಧಿಸಿದವರಿಗೆ ವೈಚಾರಿಕ ನೆಲೆಯಲ್ಲಿ ಉತ್ತರ ನೀಡುತ್ತಿದ್ದರು. "ಸೌಜನ್ಯ" ಎಂದು ತಮ್ಮ ನಿವಾಸಕ್ಕೆ ಹೆಸರನ್ನಿಟ್ಟುಕೊಂಡಿದ್ದ ಅವರು ಎಂಥಹ ಕಠಿಣ ಸವಾಲುಗಳು ಬಂದರೂ ಸಹನೆಯನ್ನು ಕಳೆದುಕೊಂಡವರಲ್ಲ, ಸೌಜನ್ಯದ ಎಲ್ಲೆಯನ್ನು ಎಂದೂ ಮೀರಿದವರಲ್ಲ,
ಬಹಳ ಹಿಂದೆ ಅವರಿಗೆ ಜೀವ ಬೆದರಿಕೆ ಇದ್ದಾಗ ಅವರು ಹೇಳಿದ್ದರು “ನಾನು ಧರ್ಮದಲ್ಲಿನ ಕೆಲವು ಅಂಶಗಳನ್ನು ನನ್ನ ಮನೆಯವರ ಜೀವಕ್ಕಾಗಿ ಹೇಳದೇ ಮುಚ್ಚಿಡಬಹುದು. ಆದರೆ ಅಂದೇ ನನ್ನೊಳಗಿನ ಚಿಂತಕ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. "ಕಾಲ ಕೆಳಗಿನ ಬೆಂಕಿಗಿಂತ ಕಣ್ಣಮುಂದಿನ ಬೆಳಕು ದೊಡ್ಡದೆಂಬ" ನಂಬಿಕೆ ಅವರದಾಗಿತ್ತು. ಈಗ ಡಾ.ಕಲಬುರ್ಗಿಯವರ ಜೀವ ಹೋಗಿದೆ; ಆದರೆ ಅವರೊಳಗಿನ ಚಿಂತಕ ಮಾತ್ರ ಚಿರಂಜೀವಿಯಾಗಿ ಉಳಿದಿದ್ದಾನೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 3.9.2015