ಪರಿಸರದ ಪ್ರಭಾವದಿಂದ ವ್ಯಕ್ತಿ ಬದಲಾಗುತ್ತಾನೆಯೇ?
ಋಷ್ಯಾಶ್ರಮದ ಗಿಳಿ ಮತ್ತು ಕಟುಕನ ಮನೆಯ ಗಿಳಿ - ಎರಡೂ ಒಂದೇ ತಾಯಿಯ ಮರಿಗಳಾಗಿದ್ದರೂ ಪರಿಸರದ ಪ್ರಭಾವದಿಂದ ಹೇಗೆ ವಿಭಿನ್ನ ಗುಣ ಧರ್ಮಗಳನ್ನು ಪಡೆಯುತ್ತವೆ ಎಂಬ ಕಥೆಯನ್ನು ನೀವು ಕೇಳಿರುತ್ತೀರಿ. ಋಷಿಗಳ ಸಂಪರ್ಕದಲ್ಲಿದ ಗಿಳಿ ಅತಿಥಿಗಳು ಬಂದರೆ “ರಾಮ, ರಾಮ, ಬನ್ನಿ ಕುಳಿತುಕೊಳ್ಳಿ, ಕ್ಷೇಮವೇ? ತಿನ್ನಲು ಹಣ್ಣು ಕೊಡಲೇ?” ಎಂದು ಕೇಳಿದರೆ ಕಟುಕನ ಮನೆಯಲ್ಲಿ ಬೆಳೆದ ಸಹೋದರ ಗಿಳಿ “ಹಿಡಿ, ಹೊಡಿ, ಬಡಿ, ಕಡಿ” ಎಂದು ಅಬ್ಬರಿಸುತ್ತಿತ್ತಂತೆ! ಬದುಕುವ ಪರಿಸರದಿಂದ ಮನುಷ್ಯನ ಮನೋಧರ್ಮ ಹೇಗೆ ಮಾರ್ಪಾಡಾಗುತ್ತದೆ ಎಂಬುದಕ್ಕೆ ಈ ಕಥೆ ಒಂದು ಉತ್ತಮ ರೂಪಕವಾಗಿದೆ.
ಸತ್ಪುರುಷರ ಸಹವಾಸದಿಂದ ದುಷ್ಟವ್ಯಕ್ತಿ ಬದಲಾಗುತ್ತಾನೆಯೇ? ಈ ಪ್ರಶ್ನೆಗೆ ಉತ್ತರ ಹೌದು, ಇಲ್ಲ ಎರಡೂ ಆಗಿವೆ. ಹೌದು ಎಂಬುದಕ್ಕೂ ಉದಾಹರಣೆಗಳು ಸಿಕ್ಕುತ್ತವೆ; ಇಲ್ಲ ಎಂಬುದಕ್ಕೂ ಉದಾಹರಣೆಗಳು ಸಿಕ್ಕುತ್ತವೆ. ಹೌದು ಎಂಬುದಕ್ಕೆ ಸಿಗುವ ಉದಾಹರಣೆಗಳು: ದರೋಡೆಕೋರನಾಗಿದ್ದ ಬೇಡ ಪಶ್ಚಾತ್ತಾಪಗೊಂಡು ತಪಸ್ಸಿಗೆ ತೊಡಗಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆಗೊಂಡದ್ದು, ಅತ್ಯಂತ ಕ್ರೂರಿಯಾದ ಅಂಗುಲೀಮಾಲ ಬುದ್ದನ ಪ್ರಭಾವಲಯಕ್ಕೆ ಬಂದು ಹಿಂಸೆಯ ಮಾರ್ಗವನ್ನು ತ್ಯಜಿಸಿ “ಬುದ್ದಂ ಶರಣಂ ಗಚ್ಛಾಮಿ” ಎಂದು ಶರಣಾಗತನಾಗಿದ್ದು, "ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ" ಎಂದು ಸರ್ವಜ್ಞ ಬಣ್ಣಿಸುತ್ತಾನೆ. "ಸಾರ, ಸಜ್ಜನರ ಸಂಗವ ಮಾಡುವುದು, ದೂರ, ದುರ್ಜನರ ಸಂಗ ಬೇಡವಯ್ಯಾ" ಎಂದು ಬಸವಣ್ಣನವರು ಸಜ್ಜನರ ಸಹವಾಸಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಅಂತರಂಗ ಶುದ್ಧವಿಲ್ಲದ ದುರ್ಜನರ ಸಹವಾಸ "ಕಾಳಕೂಟ ವಿಷ" ವೆಂದು ಎಚ್ಚರಿಸುತ್ತಾರೆ. ಸಜ್ಜನರ ಸಹವಾಸ ಎಂತಹ ಗಾಢವಾದ ಪ್ರಭಾವವನ್ನು ಬೀರುತ್ತದೆ ಎಂಬುದಕ್ಕೆ ಅವರು ಕೊಡುವ ಉದಾಹರಣೆ:
ಆರಾರ ಸಂಗವೇನೇನ ಮಾಡದಯ್ಯಾ?
ಕೀಡಿ ಕುಂಡಲಿಗನಾಗದೆ ಅಯ್ಯಾ?
ಚಂದನದ ಸನ್ನಿಧಿಯಲ್ಲಿ ಪರಿಮಳ ತಾಗಿ
ಬೇವು, ಬೊಬ್ಬುಳಿ ತರೆಯ ಗಂಧಂಗಳಾಗವೆ?
ಕಡಜದ ಮಣ್ಣಿನ ಗೂಡಿನಲ್ಲಿ ಬೆಳೆದ ಕೀಟದ ಹುಳು ಕೆಲದಿನಗಳಲ್ಲಿಯೇ ಚಿಟ್ಟೆಯಾಗಿ ಹೊರಬಂದು ಹಾರುತ್ತದೆ. ಶ್ರೀಗಂಧದ ಮರಗಳ ಮಧ್ಯೆ ಇರುವ ಬೇವಿನ ಮರವೂ ಸಹ ಸುಗಂಧವನ್ನು ಬೀರುತ್ತದೆ.
ಇದಕ್ಕೆ ತದ್ವಿರುದ್ದವಾದ ಉದಾಹರಣೆಗಳು ಬಸವಣ್ಣನವರ ಈ ಮುಂದಿನ ವಚನಗಳಲ್ಲಿ ದೊರೆಯುತ್ತವೆ: "ಕಾಗೆ ನಂದನವನದೊಳಗಿದ್ದಡೇನು ಕೋಗಿಲೆಯಾಗಬಲ್ಲುದೇ? ಕೊಳನ ತಡಿಯಲ್ಲೊಂದು ಹೊರಸು ಕುಳಿರ್ದಡೇನು ಕಳಹಂಸಿಯಾಗಬಲ್ಲುದೇ?" ಅಂದರೆ ಕಾಗೆ ನಂದನವನಲ್ಲಿದ್ದ ಮಾತ್ರಕ್ಕೆ ಕೋಗಿಲೆಯಾಗಲು ಸಾಧ್ಯವಿಲ್ಲ. ಎಲ್ಲಿದ್ದರೇನಂತೆ ಎರಡೂ ನೋಡಲು ಕಪ್ಪಾಗಿದ್ದರೂ ಕಾಗೆ ಕಾಗೆಯೇ, ಕೋಗಿಲೆ ಕೋಗಿಲೆಯೇ! ವಸಂತಕಾಲದಲ್ಲಿ ಬಾಯ್ದೆರೆದಾಗ ಕಾಗೆಯ ಕರ್ಕಶ ಧ್ವನಿಯೆತ್ತ, ಕೋಗಿಲೆಯ ಪಂಚಮಸ್ವರವೆತ್ತ? (ವಸಂತಕಾಲೇ ಸಂಪ್ರಾಪ್ತ ಕಾಕಃ ಕಾಕಃ, ಪಿಕಃ ಪಿಕಃ ). ಹಾಗೇನೆ ಸರೋವರದ ದಡದಲ್ಲಿರುವ ಕೊಕ್ಕರೆ ನೋಡಲು ಎಷ್ಟೇ ಬಿಳಿಯದಾಗಿದ್ದರೂ ಹಂಸವಾಗಲು ಎಂದಿಗೂ ಸಾಧ್ಯವಿಲ್ಲ
ಪರಸ್ಪರ ವಿರುದ್ದವಾಗಿ ಕಂಡುಬರುವ ಈ ಉದಾಹರಣೆಗಳ ಹಿಂದಿರುವ ಆಶಯವಾದರೂ ಏನು? ಸಜ್ಜನರ ಸಹವಾಸದಿಂದ ದುರ್ಜನರು ಪರಿವರ್ತನೆಗೊಳ್ಳುತ್ತಾರೆ ಎಂಬ ಮಾತಿನಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿಯೆಂದರೆ ಪರಿವರ್ತನೆಗೊಂಡ ವ್ಯಕ್ತಿ ಮೂಲತಃ ಒಳ್ಳೆಯವನು. ಪರಿಸ್ಥಿತಿಯ ಕಾರಣದಿಂದಾಗಿ ಕೆಟ್ಟವನಾಗಿರುತ್ತಾನೆ. ತನ್ನ ಕೆಟ್ಟ ಪ್ರವೃತ್ತಿಯ ಬಗೆಗೆ ಅವನ ಅಂತರಂಗದಲ್ಲಿ ಯಾವಾಗಲೂ ಅಸಂತುಷ್ಟಿ, ಅತೃಪ್ತಿ ಬೇರೆಯವರಿಗೆ ಕಾಣಿಸಿಕೊಳ್ಳದ ರೀತಿಯಲ್ಲಿ ಸುಪ್ತವಾಗಿ ಹೊಗೆಯಾಡುತ್ತಲೇ ಇರುತ್ತವೆ. ಸತ್ಪುರುಷರ ಪ್ರಭಾವವಲಯಕ್ಕೆ ಬಂದಾಗ ಅವನ ಮೂಲಗುಣ ಉದ್ದೀಪನಗೊಳ್ಳುತ್ತದೆ. ತಾನು ಹಿಡಿದ ಅಡ್ಡದಾರಿಯನ್ನು ಕೈಬಿಡಲು ನಿಶ್ಚಯಿಸಿ ಹೊಸದಾರಿಯಲ್ಲಿ ಮುನ್ನಡೆಯುತ್ತಾನೆ. ಮೂಲಭೂತವಾಗಿ ಅವನಲ್ಲಿ ಆ ಗುಣವೇ ಇಲ್ಲದಿದ್ದಲ್ಲಿ ಪರಿವರ್ತನೆ ಸಾಧ್ಯವಿರಲಿಲ್ಲ, “ಪರುಷ ಮುಟ್ಟಲು ಕಬ್ಬುನ ಸುವರ್ಣವಹುದಲ್ಲದೆ ಕರಿಹಂಚು ಹೊನ್ನಹುದೆ?” ಅಂದರೆ ಪರುಷಮಣಿಯ ಸಂಸರ್ಗದಿಂದ ಕಬ್ಬಿಣವು ಬಂಗಾರವಾಗಬಹುದೇ ಹೊರತು ಕರಿಹೆಂಚು ಆಗುವುದಿಲ್ಲ ಎಂದು ಪ್ರಭುಲಿಂಗ ಲೀಲೆಯಲ್ಲಿ ಚಾಮರಸ ಕವಿ ಉದ್ಗರಿಸುತ್ತಾನೆ. ದುಷ್ಟ ವ್ಯಕ್ತಿ ಸಜ್ಜನರ ಸಹವಾಸದಿಂದ ಒಳ್ಳೆಯವನಾಗುತ್ತಾನೆ ಎಂಬುದು ಪೂರ್ಣ ಸತ್ಯವಲ್ಲ. ಕೊನೆಯಪಕ್ಷ ಅವನು ಕಬ್ಬಿಣದಂತಿದ್ದರೂ ಅವನ ಬಾಳು ಬಂಗಾರವಾಗಬಹುದು. ಕರಿಹಂಚಿನಂತಿದ್ದರೆ ಪರಿವರ್ತನೆ ಅಸಾಧ್ಯ! ಅಯಸ್ಕಾಂತಕ್ಕೆ (magnet) ಚುಂಬಕ ಶಕ್ತಿ ಇದೆಯಾದರೂ ಅದರ ಆಕರ್ಷಣೆಗೆ ಕಬ್ಬಿಣದ ರಜ (iron filings) ಒಳಗಾಗಬಹುದೇ ಹೊರತು ಹುಲ್ಲಿನಲ್ಲಿ ಆ ಕ್ಷಮತೆ ಇಲ್ಲ "ಎನಿಸುಕಾಲ ಕಲ್ಲು ನೀರೊಳಗಿದ್ದರೇನು, ನೆನೆದು ಮೃದುವಾಗಬಲ್ಲುದೇ?" ಎಂದು ಬಸವಣ್ಣನವರೂ ಸಹ ಪ್ರಶ್ನಿಸುತ್ತಾರೆ. ಅವರೇ ಇನ್ನೊಂದು ವಚನದಲ್ಲಿ ನಿಚ್ಚಳವಾಗಿ ಹೇಳುವಂತೆ ‘ಬೇವಿನ ಬೀಜವನ್ನು ಬಿತ್ತಿ, ಬೆಲ್ಲದ ಕಟ್ಟೆಯನ್ನು ಕಟ್ಟಿ, ಆಕಳ ಹಾಲನೆರೆದು, ಜೇನುತುಪ್ಪ ಹೊಯ್ದರೆ ಆ ಬೇವಿನ ಮರ ಎಲ್ಲಿಯಾದರೂ ಸಿಹಿಯಾದ ಮಾವಿನ ಹಣ್ಣನ್ನು ಕೊಡಲು ಸಾಧ್ಯವೇ?
ಆದರೆ ಇದರ ಇನ್ನೊಂದು ಮಗ್ಗಲೂ ಸಹ ಇದೆ. ವ್ಯಕ್ತಿಯ ಸಾತ್ವಿಕ ಸ್ವಭಾವ ಸತ್ಪುರುಷರ ಸಹವಾಸದಿಂದ ವಿಕಸನಗೊಳ್ಳುತ್ತದೆಯೆಂದು ಹೇಳಬಹುದಾದರೂ ದುಷ್ಟಜನರ ಸಹವಾಸದಿಂದ ವಿಕೃತಗೊಳುವ ಸಾಧ್ಯತೆಯೂ ಇದೆ. ಸಜ್ಜನ ಎನ್ನಿಸಿಕೊಂಡವನಲ್ಲಿ ಸಂಸ್ಕಾರಗಳು ಪ್ರಬಲವಾಗಿಲ್ಲದೇ ಹೋದರೆ "ಸೂಳೆಯ ಸಹವಾಸದಿಂದ ಸನ್ಯಾಸಿ ಕೆಟ್ಟ" ಎಂಬ ಗಾದೆಮಾತಿನಂತೆ ದುರ್ಜನರ ಸಹವಾಸದಿಂದ ಸಜ್ಜನನೂ ಕೆಟ್ಟು ಹೋಗಬಹುದು. ‘ಬೇವು ಬೊಬ್ಬುಳಿಯಿಂದ ಶ್ರೀಗಂಧ ದುರ್ಗಂಧವಾಗದೆ?" ಎಂಬ ವಿಪರೀತ ಸ್ಥಿತಿಯುಂಟಾಗಬಹುದು. “ನಮ್ಮ ಮಗ ಬಹಳ ಒಳ್ಳೆಯವನು, ಆದರೆ ಸಹವಾಸ ದೋಷದಿಂದ ಕೆಟ್ಟ” ಎಂದು ತಂದೆ-ತಾಯಂದಿರು ಉದ್ಗರಿಸುವುದನ್ನು ಕೇಳಿರಬಹುದು. ಒಳ್ಳೆಯತನ ಪ್ರಬಲವಾಗಿದ್ದರೆ ಸಹವಾಸ ದೋಷದಿಂದ ಮಗ ಕೆಡಲು ಸಾಧ್ಯವಿಲ್ಲ ಎಂಬುದನ್ನು ಅವರು ಮರೆಯುತ್ತಾರೆ. ಆದ ಕಾರಣ ಯಾವುದೇ ವ್ಯಕ್ತಿಯ ಪರಿವರ್ತನೆಗೆ ಅವನ ಅಂತರಂಗದಲ್ಲಿ ಸುಪ್ತವಾಗಿರುವ ಸಂಸ್ಕಾರಗಳು ಪ್ರಧಾನ ಪಾತ್ರ ವಹಿಸುತ್ತವೆ.
ಒಳ್ಳೆಯ ಮತ್ತು ಕೆಟ್ಟ ಸಂಸ್ಕಾರಗಳೆರಡೂ ಎಲ್ಲರಲ್ಲೂ ಒಬ್ಬೊಟ್ಟಿಗೆ ಇರುತ್ತವೆ. ಆದರೆ ಅವುಗಳ ಅನುಪಾತ ಮಾತ್ರ ಬೇರೆ ಬೇರೆ. ಸಂಸ್ಕಾರಗಳ ತೀವ್ರತೆಗನುಗುಣವಾಗಿ ವ್ಯಕ್ತಿಯ ಬದಲಾವಣೆ/ಪರಿವರ್ತನೆ ಆಗುತ್ತದೆ. ಅತ್ಯುತ್ತಮ ಸಂಸ್ಕಾರವುಳ್ಳ ವ್ಯಕ್ತಿ ಯಾವ ಸಹವಾಸ ದೋಷದಿಂದಲೂ ಕೆಟ್ಟವನಾಗಲಾರ; ಯಾವ ಕಾರಣಕ್ಕೂ ಕೆಟ್ಟ ದಾರಿಯನ್ನು ಹಿಡಿಯಲಾರ. ಪರಿಸ್ಥಿತಿಯ ಒತ್ತಡ ಬಂದರೆ ಆತ ಆತ್ಮ ಸಮರ್ಪಣೆ ಮಾಡಿಕೊಳ್ಳಲು ಮುಂದಾಗಬಲ್ಲನೇ ಹೊರತು ಬದಲಾಗಲಾರ, ಅಕ್ಕಮಹಾದೇವಿ ಹೇಳುವಂತೆ ಗಂಧದ ತುಂಡನ್ನು ಸಾಣೇಕಲ್ಲಿನ ಮೇಲೆ ಎಷ್ಟೇ ತೇಯ್ದರೂ ಅದು ನೊಂದೆನೆಂದು ತನ್ನ ಕಂಪನ್ನು ಬಿಡುವುದಿಲ್ಲ, ಸ್ವರ್ಣಕಾರನು ಬೆಂಕಿಯಲ್ಲಿ ಬಂಗಾರವನ್ನು ಎಷ್ಟೇ ಕಾಯಿಸಿದರೂ ಅದು ಬೆಂದೆನೆಂದು ತನ್ನ ಹೊಳಪನ್ನು ಬಿಡುವುದಿಲ್ಲ, ಕಬ್ಬಿನ ಕೋಲನ್ನು ಎಷ್ಟೇ ತುಂಡು ಮಾಡಿ ಕತ್ತರಿಸಿ ಗಾಣದಲ್ಲಿ ಹಾಕಿ ಅರೆದರೂ, ಬೆಂಕಿಯಲ್ಲಿ ಪಾಕ ಮಾಡಿದರೂ ಅದು ಅಯ್ಯೋ ಎಂದು ತನ್ನ ಸಿಹಿಯನ್ನು ಬಿಡುವುದಿಲ್ಲ!
ಚಂದನವ ಕಡಿದು ಕೊರೆದು ತೇದಡೆ
ನೊಂದೆನೆಂದು ಕಂಪ ಬಿಟ್ಟಿತ್ತೆ
ತಂದು ಸುವರ್ಣವ ಕಡಿದೋರೆದಡೆ
ಬೆಂದು ಕಳಂಕ ಹಿಡಿಯಿತ್ತೆ
ಸಂದುಸಂದ ಕಡಿದ ಕಬ್ಬನು ತಂದು ಗಾಣದಲ್ಲಿ ಅರೆದಡೆ
ಬೆಂದು ಪಾಕಗೂಳ ಸಕ್ಕರೆಯಾಗಿ ನೊಂದೆನೆಂದು ಸಿಹಿಯ ಬಿಟ್ಟಿತ್ತೆ
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು
ನಿಮಗೇ ಹಾನಿ |
ಎನ್ನ ತಂದೆ ಚೆನ್ನಮಲ್ಲಿಕಾರ್ಜುನಯ್ಯಾ
ನೀ ಕೊಂದಡೆಯೂ ಶರಣೆಂಬುದ ಮಾಣೆ!.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 1.10.2015