ನಿಂದೆಗೆ ಪ್ರತಿನಿಂದೆ ಮಾಡುವುದರಿಂದ ಪ್ರಯೋಜನವಿಲ್ಲ

  •  
  •  
  •  
  •  
  •    Views  

ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ” ಎಂಬ ಪ್ರಸಿದ್ಧ ಗಾದೆಯನ್ನು ನೀವು ಕೇಳಿರುತ್ತೀರಿ. "ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲವೆಂದು ಗಾದೆಯನ್ನೇ ಕುರಿತ ಗಾದೆ ಮಾತೂ ಇದೆ. ಗಾದೆ ಜೀವನಾನುಭವದ ರಸಪಾಕ. ಕೆಲವೇ ಶಬ್ದಗಳಲ್ಲಿ ಹೊರಹೊಮ್ಮುವ ಪ್ರಾಸಬದ್ದ ಹಾಗೂ ಸತ್ವಯುತವಾದ ಮಾರ್ಮಿಕ ನುಡಿಗಟ್ಟು. ಆದರೆ ಮೇಲಿನ ಗಾದೆ ಮಾತಿನಲ್ಲಿ ಏನೋ ಸ್ವಲ್ಪ ಊನವಿದೆ ಎನ್ನಿಸುತ್ತದೆ. ಕಳ್ಳನಲ್ಲದಿದ್ದರೆ ತನ್ನ ಹೆಗಲನ್ನೇಕೆ ಮುಟ್ಟಿ ನೋಡಿಕೊಳ್ಳಬೇಕಾಗಿತ್ತು? ತನ್ನ ಹೆಗಲನ್ನು ಮುಟ್ಟಿನೋಡಿಕೊಂಡಿದ್ದರಿಂದ ನಿನ್ನೆ ರಾತ್ರಿ ತೋಟದಲ್ಲಿದ್ದ ಕುಂಬಳಕಾಯನ್ನು ಕದ್ದ ಕಳ್ಳ ಈತನೇ ಇರಬೇಕೆಂದು ಊಹಿಸುವುದು ದುಡುಕಿನ ತೀರ್ಮಾನವೆನಿಸುತ್ತದೆ. ನಿಜವಾದ ಕಳ್ಳನು ತನ್ನ ಕಳ್ಳತನ ಬಯಲಾಗುವಂತಹ ಯಾವ ದಡ್ಡತನದ ವರ್ತನೆಯನ್ನೂ ಮಾಡುವುದಿಲ್ಲ. ತನ್ನ ಅಪರಾಧವನ್ನು ಮರೆಮಾಚಲು ಏನೆಲ್ಲ ನಟನೆ ಮಾಡಬಹುದೋ ಅದೆಲ್ಲವನ್ನೂ ಮಾಡುತ್ತಾನೆ. "ಕಳ್ಳ ಕಳ್ಳ" ಎಂದು ಕೂಗಿದೊಡನೆ ಕಳ್ಳನನ್ನು ಹಿಡಿಯುವ ಗುಂಪಿನಲ್ಲಿ ಅವನೂ ಸೇರಿಕೊಂಡು ತಾನು ಸಜ್ಜನನೆಂಬ ಮುಖವಾಡ ಧರಿಸಿ ಓಡುತ್ತಾನೆ. ಯಾರಿಗೂ ತನ್ನ ಮೇಲೆ ಅನುಮಾನದ ಲವಲೇಶವೂ ಬರದಂತೆ ನಾಟಕ ಮಾಡುತ್ತಾನೆ.

ಸಜ್ಜನನು ಎಷ್ಟೇ ನಿರ್ಭೀತನಾಗಿದ್ದರೂ ಕಳ್ಳತನದ ಮಿಥ್ಯಾರೋಪ ತನ್ನ ಮೇಲೆ ಬಂದೀತೆಂಬ ಒಳ ಎಚ್ಚರದಿಂದಲಾದರೂ ತನ್ನ ಹೆಗಲನ್ನು ಮುಟ್ಟಿ ನೋಡಿಕೊಳ್ಳುವ ಅಗತ್ಯ ಇದ್ದೇ ಇದೆ. ಸಜ್ಜನ ವೇಷಧಾರಿಯಾದ ಕಳ್ಳನು ತಾನು ಬಚಾವಾಗಲು ಯಾರ ವಿರುದ್ಧ ಯಾವಾಗ ಏನು ತಂತ್ರಗಾರಿಕೆ ಮಾಡುತ್ತಾನೆಂದು ಹೇಳಲು ಬರುವುದಿಲ್ಲ, ಮೊಸರನ್ನವನ್ನು ತಿಂದ ಮಂಗ ಮೇಕೆ ಬಾಯಿಗೆ ಒರೆಸಿದ ಕತೆ ಎಲ್ಲರಿಗೂ ಗೊತ್ತೇ ಇದೆ. ಕೊಲೆಗಾರನು ತನ್ನ ಮೇಲೆ ಆರೋಪ ಬರದಂತೆ ಅಸಹಾಯಕ ವ್ಯಕ್ತಿಗೆ ಆಮಿಷಗಳನ್ನೊಡ್ಡಿ ಜೈಲಿಗೆ ಕಳುಹಿಸಿದ ಉದಾಹರಣೆಗಳೂ ಇವೆ. ತನ್ನ ತಪ್ಪುಗಳಿಗಾಗಿ ತಾನು ಆತ್ಮನಿರೀಕ್ಷಣೆ ಮಾಡಿಕೊಳ್ಳದೆ ಇನ್ನೊಬ್ಬರನ್ನು ಹೊಣೆಗಾರರನ್ನಾಗಿ ಮಾಡುವ ಕೇಡಿಗರೂ ಸಮಾಜದಲ್ಲಿ ಇಡಿಕಿರಿದಿದ್ದಾರೆ. ಇನ್ನೊಬ್ಬರ ಬದುಕಿನಲ್ಲಿ ಇಣುಕಿ ನೋಡುವ ಕೆಟ್ಟ ಪ್ರವೃತ್ತಿಯುಳ್ಳ ಮತ್ತು ಅವರ ಪಾಡಿಗೆ ಅವರನ್ನು ಇರಲು ಬಿಡದೆ ನಿಂದನೆ ಮಾಡಿ ವಿಕೃತ ಆನಂದವನ್ನು ಪಡೆಯುವ ಕೆಟ್ಟಜನರೂ ಇದ್ದಾರೆ.

ಹೊಗಳುವವರಿಗಿಂತ ನಿಂದಿಸುವವರೇ ನಿಜವಾದ ಹಿತೈಷಿಗಳೆಂದು ಭಾವಿಸುತ್ತಾರೆ ಪುರಂದರದಾಸರು. “ನಿಂದಕರಿರಬೇಕು, ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಾಗೆ, ಅಂದಂದು ಮಾಡಿದ ಪಾಪವೆಂಬ ಮಲತಿಂದು ಹೋಗುವರಯ್ಯಾ ನಿಂದಕರು” ಎಂದು ಅವರು ಮಾರ್ಮಿಕವಾಗಿ ನುಡಿಯುತ್ತಾರೆ. ಇದು ನಿಂದಕರನ್ನು ಹಂದಿಗಳಿಗೆ ಹೋಲಿಸಿ ನಿಂದಿಸುವ ವ್ಯಂಗ್ಯದ ಮಾತಲ್ಲ, ಸಜ್ಜನರನ್ನು ಎಚ್ಚರಿಸುವ ಮಾತು. ಹಂದಿಯು ಕೇರಿಯ ಹೊಲಸನ್ನು ತಿಂದು ಹೇಗೆ ಶುದ್ಧಗೊಳಿಸುತ್ತದೆಯೋ ಹಾಗೆ ನಿಂದಕರ ಕಟುವಾದ ಮಾತುಗಳನ್ನು ಕೇಳಿ ಸಜ್ಜನರು ಘಾಸಿಗೊಳ್ಳದೆ ಆತ್ಮನಿರೀಕ್ಷಣೆ ಮಾಡಿಕೊಂಡು ಅಂತಹ ತಪ್ಪುಗಳೇನಾದರೂ ಇದ್ದರೆ ತಿದ್ದಿಕೊಂಡು ಪರಿಶುದ್ದರಾಗಬೇಕೆಂಬ ವಿವೇಕದ ಮಾತು ಇಲ್ಲಿದೆ. ಹೀಗೆ ಸಜ್ಜನರಲ್ಲಿ ಅವರಿಗೆ ಅರಿವಿಲ್ಲದೆಯೇ ಇರಬಹುದಾದ ಕಲ್ಮಶವನ್ನು ತೊಳೆದು ಹಾಕಲು ನೆರವಾಗುವ ನಿಂದಕರು ನಿಜವಾಗಿಯೂ ಪಾಪ ಪರಿಮಾರ್ಜಕರು. ಇನ್ನು ಹೊಗಳುವವರನ್ನು ಕುರಿತು ಅವರು ಹೇಳುವ ಮಾತು: “ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ ಪೊಂದಿದ ಪುಣ್ಯವನೊಯ್ಯುವರಯ್ಯಾ”, ಹೊಗಳಿಕೆಯ ಭರಾಟೆಯಲ್ಲಿ ಸಜ್ಜನ ಮೈಮರೆತು ಅಹಂಕಾರದಿಂದ ಬೀಗುವ ಸಾಧ್ಯತೆ ಇದೆ.

ನಿಂದಕರನ್ನು ಕುರಿತು ನಮ್ಮ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ "ಆತ್ಮ ನಿವೇದನೆ" (1937) ಯಲ್ಲಿ ತಮ್ಮ ಸ್ವಾನುಭವದಿಂದ ಹೀಗೆ ದಾಖಲಿಸಿದ್ದಾರೆ: “ಪರರ ನಿಂದೆಗೆ ವೃಥಾ ವ್ಯಾಕುಲ ಪಡಬೇಡ. ಸ್ವಾರ್ಥವು ಸಿಗದಿದ್ದರೆ ದೂಷಿಸುತ್ತಾರೆ. ಸಿಕ್ಕರೆ ಹೊಗಳುತ್ತಾರೆ. ಅವರ ಹೊಗಳಿಕೆಗೂ ಬೆಲೆಯಿಲ್ಲ, ಉಗುಳುವಿಕೆಗೂ ಬೆಲೆಯಿಲ್ಲ”. ಸ್ವಾರ್ಥಿಗಳ ಹೊಗಳಿಕೆಗೂ ಬೆಲೆಯಿಲ್ಲ, ತೆಗಳಿಕೆಗೂ ಬೆಲೆಯಿಲ್ಲ ಎಂಬುದು ತಾತ್ವಿಕವಾಗಿಯೇನೋ ಸರಿ. ಹೊಗಳುವವರಾಗಲೀ ತೆಗಳುವವರಾಗಲೀ ಕೈಯಲ್ಲಿ ಭೂತಗನ್ನಡಿ ಹಿಡಿದೇ ಇರುತ್ತಾರೆ. ಹೊಗಳುವವರು ಗುಣಗಳನ್ನು ಅನ್ವೇಷಣೆ ಮಾಡಿದರೆ, ತೆಗಳುವವರು ದೋಷಗಳನ್ನು ಹುಡುಕುತ್ತಾರೆ. ಆದರೆ ಸ್ವಾರ್ಥಕ್ಕಾಗಿ ಹೊಗಳುತ್ತಾರೆಂದು ತಿಳಿದೂ ಸಹ ಹೊಗಳಿಕೆ ಆಪ್ಯಾಯಮಾನವಾಗುತ್ತದೆ; ಮನಸ್ಸು ಪ್ರಸನ್ನವಾಗುತ್ತದೆ, ಪ್ರಫುಲ್ಲವಾಗುತ್ತದೆ. ಸ್ವಾರ್ಥವು ಗಿಟ್ಟದೆ ಇರುವುದರಿಂದ ತೆಗಳುತ್ತಾರೆ ಎಂದು ತಿಳಿದೂ ಸಹ ತೆಗಳಿಕೆಗೆ ಮನಸ್ಸು ಮುದುಡುತ್ತದೆ; ಅಪ್ರಿಯವಾಗುತ್ತದೆ, ವ್ಯಾಕುಲಗೊಳುತ್ತದೆ. ಮನುಷ್ಯನಿಗೆ ಹೊಗಳಿಕೆ ಇಷ್ಟವಾಗುತ್ತದೆ, ತೆಗಳಿಕೆ ಅಪ್ರಿಯವಾಗುತ್ತದೆ. ಹೊಗಳಿಕೆ ಇಷ್ಟವಾಗುವುದರಿಂದ ಹೊಗಳುವ ವ್ಯಕ್ತಿಯೂ ಇಷ್ಟವಾಗಿ ಹತ್ತಿರವಾಗುತ್ತಾನೆ. ತೆಗಳಿಕೆ ಅಪ್ರಿಯವಾಗುವುದರಿಂದ ತೆಗಳುವ ವ್ಯಕ್ತಿಯೂ ಅಪ್ರಿಯನಾಗಿ ದೂರವಾಗುತ್ತಾನೆ. ಅವನ ಬಗ್ಗೆ ಅಸಹನೆ ಉಂಟಾಗುತ್ತದೆ. ದ್ವೇಷವೂ ಬೆಳೆಯುತ್ತದೆ. ಈ ಅಸಹನೆ ಮತ್ತು ದ್ವೇಷಗಳು ಕೋಪಕ್ಕೆ ಎಡೆಮಾಡಿಕೊಡುತ್ತವೆ. ಕೋಪ-ತಾಪಗಳಿಂದ ವ್ಯಕ್ತಿ ವಿವೇಕಶೂನ್ಯನಾಗುತ್ತಾನೆ.

ಈ ಹಿನ್ನೆಲೆಯಲ್ಲಿ ಬಸವಣ್ಣನವರು ಹೇಳುವ ಕಿವಿಮಾತು: "ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ". ಈ ವಚನದ ಸಾಲಿನ ಪೂರ್ವಾರ್ಧ ‘ತನ್ನ ಬಣ್ಣಿಸ ಬೇಡ" ಎಂಬಲ್ಲಿ ಯಾವ ಅರ್ಥಸಂದಿಗ್ಧತೆಯೂ ಇಲ್ಲ, ಉತ್ತರಾರ್ಧದಲ್ಲಿ ಬರುವ "ಇದಿರ ಹಳಿಯಲು ಬೇಡ’ ಎಂಬಲ್ಲಿ "ಇದಿರ" ಶಬ್ದವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಎದುರಿಗೆ ಹಳಿಯದೆ ಮರೆಯಲ್ಲಿ ಹಳಿಯಬಹುದೇ? ಎಂದು ತಪ್ಪು ಗ್ರಹಿಸುವ ಸಾಧ್ಯತೆ ಇದೆ. ‘ಬಣ್ಣಿಸಬೇಡ" ಮತ್ತು "ಹಳಿಯಬೇಡ" ಇವೆರಡೂ ಪರಸ್ಪರ ವಿರುದ್ಧ ಪದಗಳು (antonyms). ಈ ಎರಡೂ ಪದಗಳ ಸಾಹಚರ್ಯದಿಂದ, "ತನ್ನನ್ನು ಹೊಗಳಿಕೊಳಬೇಡ - ಇತರರನ್ನು ತನಗಾಗದವರನ್ನು ನಿಂದಿಸಬೇಡ" ಎಂದು ಅರ್ಥೈಸಿಕೊಳ್ಳಬೇಕು.

ನಿಂದೆಯ ಮಾತುಗಳನ್ನು ಕೇಳಿದಾಗ ಸಹಜವಾಗಿ ಪ್ರತಿನಿಂದೆಯ ಮನೋಭಾವ ಹುಟ್ಟುತ್ತದೆ. ಈ ವಿಚಾರದಲ್ಲಿ ನಮ್ಮ ಗುರುವರ್ಯರು ತಮ್ಮ "ಆತ್ಮನಿವೇದನೆ’ಯಲ್ಲಿ ಮಾಡಿರುವ ವಿಶ್ಲೇಷಣೆ ತುಂಬಾ ಮನೋಜ್ಞವಾಗಿದೆ: “ನಿಂದೆಗೆ ಪ್ರತಿಯಾಗಿ ನಿಂದಿಸತೊಡಗಿದರೆ ನಿಂದಕನು ಇನ್ನೊಂದು ಕೈ ಮುಂದು ಮಾಡುತ್ತಾನೆ. ಯಾವನು ತಾನು ಸತ್ಯವಂತನಾದರೂ ನಿಂದೆಗೆ ಪ್ರತಿನಿಂದೆ ಮಾಡುತ್ತಾನೋ ಅವನು ತನ್ನ ವಾತಾವರಣವನ್ನು ಕೆಡಿಸಿಕೊಳುತ್ತಾನೆ. ಕಾಲಾಂತರದಲ್ಲಿ ತಾನೂ ನಿಂದಕನಾಗುವ ಸಂಭವ ಒದಗಿ ತನ್ನ ನಿಜಸ್ಥಿತಿಯನ್ನು ಮರೆತು ಸತ್ಯಭ್ರಷ್ಟನಾಗುತ್ತಾನೆ. ಪರರ ನಿಂದೆಯನ್ನು ಮಾಡುವವನೇ ದುಷ್ಟಪುರುಷನು. ಸತ್ಪುರುಷನು ಅವನನ್ನು ಪ್ರತಿಯಾಗಿ ನಿಂದಿಸದೆ ಅವನ ವಿಷಯದಲ್ಲಿ ಉದಾಸೀನನಾಗಿರುತ್ತಾನೆ. ದುಷ್ಟನು ನಿಂದಿಸಿ ನಿಂದಿಸಿ ಬೇಜಾರಾಗುತ್ತಾನೆ. ಅವನಿಗೆ ಸಾಕಾಗಿ ಹೋಗುತ್ತದೆ...”

ಸಿಟ್ಟಿಗೆದ್ದು ಪ್ರತಿನಿಂದೆ ಮಾಡಿದರೆ ನಿಂದಕನಿಗೂ ಸಜ್ಜನನಿಗೂ ಯಾವ ವ್ಯತ್ಯಾಸ ಉಳಿಯುವುದಿಲ್ಲ. ಇಂದು ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ನಿಂದೆ ಮತ್ತು ಪ್ರತಿನಿಂದೆಗಳೇ ಕಾರಣ. ದುರ್ಜನನು ಕೆಸರನ್ನು ಎರಚಿದನೆಂದು ಸಜ್ಜನನು ಅಮೇಧ್ಯವನ್ನು ಎರಚಿದರೆ ಅವನು ದುರ್ಜನನನ್ನು ಮೀರಿಸುವಷ್ಟು ಕೆಟ್ಟವನಾಗುತ್ತಾನೆ. ಆದಕಾರಣ ನಿಂದೆಗೆ ಪ್ರತಿನಿಂದೆ ಪರಿಹಾರ ಅಲ್ಲವೇ ಅಲ್ಲ, ಈ ಸಂದರ್ಭದಲ್ಲಿ ನಮ್ಮ ನೆನಪಿಗೆ ಬರುವ ಬುದ್ಧನ ಬದುಕಿನಲ್ಲಿ ನಡೆದ ಒಂದು ಘಟನೆ:

ಒಮ್ಮೆ ಬುದ್ಧ ತನ್ನ ಶಿಷ್ಯರಿಗೆ ಧರ್ಮೋಪದೇಶ ಮಾಡುತ್ತಿದ್ದ. ಆ ಸ್ಥಳಕ್ಕೆ ಒಬ್ಬ ಬಂದ. ಬುದ್ಧನನ್ನು ಹೀನಾ ಮಾನವಾಗಿ ಬೈದ. ಎಷ್ಟೆಲ್ಲ ಅವಾಚ್ಯ ಶಬ್ದಗಳಿವೆಯೋ ಅವೆಲ್ಲವನ್ನೂ ಎಗ್ಗಿಲ್ಲದೆ ಬಳಸಿ ಬೈದ, ಬೈದ ಬೈದ. ಬುದ್ಧ ತುಟಿ ಪಿಟಕ್ ಎನ್ನಲಿಲ್ಲ. ಆಗಂತುಕ ಬೈದೂ ಬೈದೂ ಸಾಕಾಗಿ ಹಾಗೆಯೇ ಕೋಪಾವಿಷ್ಟನಾಗಿ ನಿಂತ. ಆ ಸಮಯದಲ್ಲಿ ಬುದ್ದ ಕೇಳಿದ “ಸಹೋದರಾ! ನಿನ್ನ ಮನೆಗೆ ಅತಿಥಿಗಳು ಬರುವುದುಂಟೆ?” “ಬರದೆ ಏನು! ಬರುತ್ತಾರೆ, ತಿಂದು ತೇಗುತ್ತಾರೆ!” ಎಂದ. “ಒಂದು ವೇಳೆ ನೀನು ಕೊಟ್ಟದ್ದನ್ನು ಅವರು ಬೇಡವೆಂದರೆ ಏನು ಮಾಡುತ್ತೀಯ?” “ಇನ್ನೇನು ಮಾಡುತ್ತೇನೆ, ಅವರಿಗೆ ಬೇಡವೆಂದರೆ ನನಗೇ ಉಳಿಯಿತು ಬಿಡು ಎಂದು ನಾನೇ ಇಟ್ಟುಕೊಳ್ಳುತ್ತೇನೆ.” ಆಗ ಬುದ್ಧ ತಣ್ಣಗೆ ಹೇಳಿದ “ಹಾಗಾದರೆ ನೀನು ಇಷ್ಟು ಹೊತ್ತು ಬೈದದ್ದು ನನಗೆ ಬೇಡ, ನೀನೇ ಇಟ್ಟುಕೋ!”

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 15.10.2015