ವಿದ್ಯೆ ಬಂತು ಬುದ್ದಿ ಹೋಯ್ತು ಢುಂ ಢುಂ...!
ಬಹುತೇಕ ತಾಯಂದಿರು ತಮ್ಮ ಮಕ್ಕಳನ್ನು ಮಠ-ಮಂದಿರಗಳಿಗೆ ಕರೆದುಕೊಂಡು ಹೋದಾಗ ಗುರುಗಳ/ದೇವರ ಮುಂದೆ ನಿಲ್ಲಿಸಿ ಮಕ್ಕಳ ಕೈಜೋಡಿಸಿ "ವಿದ್ಯಾಬುದ್ದಿ ಕೊಡಪ್ಪಾ" ಎಂದು ಬೇಡಿಕೊಳುವಂತೆ ತಿಳಿಹೇಳುತ್ತಾರೆ. ಹಾಗಾದರೆ ವಿದ್ಯೆಗೂ ಬುದ್ದಿಗೂ ಸಂಬಂಧವಿಲ್ಲವೇ? ವಿದ್ಯಾವಂತರೆಲ್ಲರೂ ಬುದ್ದಿವಂತರಲ್ಲವೇ? ಅವಿದ್ಯಾವಂತರೆಲ್ಲರೂ ದಡ್ಡರೇ? "ವಿದ್ಯೆ ಬಂತು ಬುದ್ದಿ ಹೋಯ್ತು ಢುಂ, ಢುಂ" ಎಂದು ಸಾರಣೆ ಮಾಡುತ್ತಾರೆ ದಾರ್ಶನಿಕ ಕವಿ ಸಿದ್ದಯ್ಯ ಪುರಾಣಿಕರು. "ಈಗಿನ ವಿದ್ಯಾವಂತರಿಂದಲೇ ಜಗತ್ತಿಗೆ ಮಹಾಹಾನಿಯಾಗುತ್ತಿರುವುದು" ಎಂದು ನಮ್ಮ ಪರಮಾರಾಧ್ಯ ಗುರುವರ್ಯರು 1937 ರ ತಮ್ಮ ದಿನಚರಿ "ಆತ್ಮನಿವೇದನೆ"ಯಲ್ಲಿ ಬರೆದಿದ್ದಾರೆ. ವಿದ್ಯಾವಂತರು ಬುದ್ದಿಗೇಡಿಗಳಾಗಿ ಲೇಖನಿಯ ಬದಲು ಕೋವಿಯನ್ನು ಹಿಡಿದು "ಢಂ, ಢಂ" ಎನ್ನಿಸಿ ಅಮಾಯಕರ ಹತ್ಯೆಗೈದು ಜಗತ್ತಿನ ಅಶಾಂತಿಗೆ ಕಾರಣರಾಗುತ್ತಿರುವುದು ಮೇಲಿನ ಮಾತಿಗೆ ಸಾಕ್ಷಿಯಾಗಿದೆ. ವಿದ್ಯೆ ಮತ್ತು ಬುದ್ದಿಯನ್ನು ಕುರಿತಂತೆ "ಪಂಚತಂತ್ರ"ದಲ್ಲಿ ಎರಡು ರೋಚಕ ಕಥೆಗಳಿವೆ:
ಒಂದು ಹಳ್ಳಿಯಲ್ಲಿ ನಾಲ್ಕು ಜನ ಆತ್ಮೀಯ ಸ್ನೇಹಿತರಿದ್ದರು. ಅವರಲ್ಲಿ ಮೂವರು ಸಕಲವಿದ್ಯಾಪಾರಂಗತರು. ನಾಲ್ಕನೆಯವನು ಅಷ್ಟಾಗಿ ಶಾಸ್ತ್ರದ ಅರಿವಿಲ್ಲದವನು. ಹಳ್ಳಿಯಲ್ಲಿಯೇ ಇದ್ದರೆ ಕಲಿತ ವಿದ್ಯೆಯಿಂದ ಏನು ಪ್ರಯೋಜನ? ಪೂರ್ವದೇಶಕ್ಕೆ ಹೋಗಿ ರಾಜಮಹಾರಾಜರುಗಳಲ್ಲಿ ತಮ್ಮ ವಿದ್ಯೆಯನ್ನು ಪ್ರದರ್ಶಿಸಿ ಅಪಾರ ಸಂಪತ್ತನ್ನು ಸಂಪಾದಿಸಬಹುದು ಎಂದು ಯೋಚಿಸಿ ನಾಲ್ವರೂ ದೇಶಾಂತರ ಹೊರಡುತ್ತಾರೆ. ಸ್ವಲ್ಪ ದೂರ ಹೋದ ಮೇಲೆ ಅವರಲ್ಲಿ ಹಿರಿಯವನು ಶಾಸ್ತ್ರದ ಗಂಧಗಾಳಿಯಿಲ್ಲದ ನಾಲ್ಕನೆಯವನನ್ನು ಕರೆದುಕೊಂಡು ಹೋಗುವುದರಿಂದ ಏನು ಪ್ರಯೋಜನ? ಅವನಿಗೆ ರಾಜಮನ್ನಣೆ ದೊರೆಯುವುದಿಲ್ಲ ಎಂಬ ಆಶಂಕೆ ವ್ಯಕ್ತಪಡಿಸುತ್ತಾನೆ. ಅದಕ್ಕೆ ಎರಡನೆಯವನು “ಹೌದು, ನೀನು ಹೇಳುವುದು ಸರಿಯಾಗಿಯೇ ಇದೆ. ಪಾಂಡಿತ್ಯವಿಲ್ಲದ ಅವನಿಗೆ ನಾವು ಗಳಿಸಿದ್ದರಲ್ಲಿ ಸಮಪಾಲು ಕೊಡುವುದು ಆಗದ ಮಾತು, ಅವನು ಹಳ್ಳಿಗೆ ವಾಪಾಸು ಹೋಗಲಿ” ಎಂದು ದನಿಗೂಡಿಸುತ್ತಾನೆ. ಆದರೆ ಮೂರನೆಯವನು ಮಾತ್ರ ಅದಕ್ಕೆ ಒಪ್ಪುವುದಿಲ್ಲ. “ನಾವು ಹುಟ್ಟಿದಾಗಿನಿಂದ ಒಟ್ಟಿಗೆ ಆಟವಾಡಿ ಬೆಳೆದಿದ್ದೇವೆ. ನಮ್ಮ ಸಂಪಾದನೆಯಲ್ಲಿ ಅವನಿಗೆ ಪಾಲು ಸಿಗಲಿ ಬಿಡಲಿ, ನಾವು ಮೂವರೂ ಗಳಿಸಿದ ಸಂಪತ್ತಿನ ಗಂಟನ್ನು ಹೊರಲಿಕ್ಕಾದರೂ ಅವನು ನಮ್ಮ ಜತೆ ಇರಲಿ!” ಎಂದು ಹೇಳುತ್ತಾನೆ.
ಸರಿ, ನಾಲ್ವರೂ ಒಟ್ಟಿಗೆ ಮುಂದೆ ನಡೆಯುತ್ತಾರೆ. ಮಾರ್ಗಮಧ್ಯೆ ಒಂದು ಕಾಡು ಸಿಗುತ್ತದೆ. ಬದಿಯಲ್ಲಿ ಒಂದು ಸತ್ತ ಸಿಂಹದ ಮೂಳೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಅದನ್ನು ನೋಡಿ ಹಿರಿಯವನು ತಾನು ಕಲಿತ ವಿದ್ಯೆಯನ್ನು ಪ್ರಯೋಗಿಸಬೇಕೆಂದು ಯೋಚಿಸಿ ಬಿದ್ದ ಮೂಳೆಗಳನ್ನು ಆಯ್ದು ಜೋಡಿಸಿ ಅಸ್ಥಿಪಂಜರವನ್ನು ನಿರ್ಮಿಸುತ್ತಾನೆ. ಎರಡನೆಯವನು ಅವನಿಗಿಂತ ನಾನೇನು ಕಡಿಮೆ ಎಂದು ಆ ಅಸ್ಥಿಪಂಜರಕ್ಕೆ ಚರ್ಮ-ರಕ್ತ-ಮಾಂಸ ತುಂಬಿ ಬೀಗುತ್ತಾನೆ. ಮೂರನೆಯವನು ತನ್ನ ಪರಿಣತಿಯನ್ನು ತೋರಿಸಬೇಕೆಂದು ಅದಕ್ಕೆ ಜೀವ ತುಂಬಲು ಮುಂದಾಗುತ್ತಾನೆ. ದಡ್ಡನಾದ ನಾಲ್ಕನೆಯವನು ಎಷ್ಟೇ ಬೇಡವೆಂದರೂ ಕೇಳುವುದಿಲ್ಲ, ಕಲಿತ ವಿದ್ಯೆ ನಿಷ್ಟ್ರಯೋಜಕವಾಗಲು ಬಿಡುವುದಿಲ್ಲ ಎಂದು ಹಠ ಮಾಡುತ್ತಾನೆ. ಹಾಗಾದರೆ ಸ್ವಲ್ಪ ತಾಳು ಎಂದು ಆ ದಡ್ಡನು ಸರಸರನೆ ಮರ ಹತ್ತಿ ಕುಳಿತುಕೊಳ್ಳುತ್ತಾನೆ. ಮೂರನೆಯವನು ಸಿಂಹಕ್ಕೆ ಜೀವ ನೀಡಿದ್ದೇ ತಡ, ಮರು ಜೀವ ಪಡೆದ ಆ ಸಿಂಹ ಮೇಲೆದ್ದು ಘರ್ಜಿಸುತ್ತಾ ಮೂವರನ್ನೂ ಒಂದೊಂದೇ ಪ್ರಹಾರದಲ್ಲಿ ಕೊಂದು ತನ್ನ ಯುಗಯುಗಾಂತರದ ಹಸಿವನ್ನು ಹಿಂಗಿಸಿಕೊಂಡು ಗುಹೆಯತ್ತ ಹೊರಟುಹೋಗುತ್ತದೆ. ಇಷ್ಟು ದಿನ "ಮಂಕು ದಿಣ್ಣೆ’ ಎಂದು ಗೆಳೆಯರ ವ್ಯಂಗ್ಯಕ್ಕೆ ಗ್ರಾಸವಾಗಿದ್ದ ಕೊನೆಯವನು ಮರದಿಂದ ಇಳಿದು ಅವರ "ಸಂಪತ್ತಿನ ಗಂಟಿ"ನ ಬದಲು ಅವರ ಹೆಣಗಳನ್ನು ಹೊರಬೇಕಾಗುತ್ತದೆ!
ಪ್ರಕಾಂಡ ಪಾಂಡಿತ್ಯವಿದ್ದರೂ ಲೋಕಜ್ಞಾನವಿಲ್ಲದವನ ಬಾಳು ಹೇಗೆ ದುರಂತಕ್ಕೆ/ಹಾಸ್ಯಾಸ್ಪದಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಅದೇ ಪಂಚತಂತ್ರದಲ್ಲಿ ಮತ್ತೊಂದು ರೋಚಕ ಕಥಾನಕವಿದೆ: ನಾಲ್ಕು ಜನ ಗೆಳೆಯರು ವಿದ್ಯಾರ್ಜನೆ ಮಾಡಲು ಕಾನ್ಯಕುಬ್ಜಕ್ಕೆ ಹೋಗುತ್ತಾರೆ. ಅಲ್ಲಿಯ ವಿದ್ಯಾಮಠದಲ್ಲಿದ್ದು ಹನ್ನೆರಡು ವರ್ಷಗಳ ಕಾಲ ಅಧ್ಯಯನ ಮಾಡಿ ಸಕಲವಿದ್ಯಾಪಾರಂಗತರಾಗಿ ಊರಿಗೆ ಹಿಂತಿರುಗುವಾಗ ಎರಡು ಕವಲು ದಾರಿ ಸಿಗುತ್ತವೆ. ತಮ್ಮ ಊರಿಗೆ ಹೋಗಲು ಯಾವುದು ಸರಿಯಾದ ದಾರಿ ಎಂದು ಯಾರನ್ನಾದರೂ ಕೇಳಿದ್ದರೆ ಹೇಳುತ್ತಿದ್ದರು. ಹಾಗೆ ಮಾಡದೆ ಅವರು ತಮ್ಮ ಶಾಸ್ತ್ರಗಂಥಗಳ ಪುಟಗಳನ್ನು ತಿರುವಿ ಹಾಕಿದರು. "ಮಹಾಜನೋ ಯೇನ ಗತಃ ಸ ಪಂಥಾಃ" ಅಂದರೆ ದೊಡ್ಡವರು ಹೋದ ದಾರಿಯೇ ಸರಿಯಾದ ದಾರಿ ಎಂಬ ಸೂಕ್ತಿಯೊಂದು ಕಣ್ಣಿಗೆ ಬಿತ್ತು. ಸುತ್ತ ಕಣ್ಣು ಹಾಯಿಸಿದರು. ಆ ನಗರದಲ್ಲಿ ಮರಣ ಹೊಂದಿದ ವಣಿಕ ಶ್ರೇಷ್ಠನೊಬ್ಬನ ಶವವನ್ನು ಹೊತ್ತುಕೊಂಡು ಅನೇಕರು ಹೋಗುತ್ತಿದ್ದರು. ಶಾಸ್ತ್ರ ಹೇಳುವ ರೀತ್ಯಾ ಅವರು ಹೋಗುತ್ತಿರುವ ದಾರಿಯೇ ಸರಿಯಾದ ದಾರಿಯೆಂದು ಆ ನಾಲ್ವರೂ ಯುವ ಪಂಡಿತರು ಅವರನ್ನು ಹಿಂಬಾಲಿಸಿ ಸ್ಮಶಾನ ಸೇರಿದರು. ಶವಸಂಸ್ಕಾರವನ್ನು ಮುಗಿಸಿಕೊಂಡು ಎಲ್ಲರೂ ಹಿಂದಿರುಗಿದ ಮೇಲೆ ಮುಂದಿನ ದಾರಿ ಕಾಣದೆ ಮತ್ತೆ ಶಾಸ್ತ್ರದ ಮೊರೆಹೊಕ್ಕರು. "ರಾಜದ್ವಾರೇ ಸ್ಮಶಾನೇ ಚ ಯಸ್ತಿಷ್ಠತಿ ಸ ಬಾಂಧವಃ" (ರಾಜದ್ವಾರದಲ್ಲಾಗಲೀ ಸ್ಮಶಾನದಲ್ಲಿಯೇ ಆಗಲಿ ಯಾರು ಇರುತ್ತಾರೋ ಅವರೇ ನಿಜವಾದ ಬಂಧುಗಳು") ಎಂಬ ಮತ್ತೊಂದು ಸೂಕ್ತಿ ಕಣ್ಣಿಗೆ ಬಿತ್ತು. ಕತ್ತೆತ್ತಿ ನೋಡಿದಾಗ ಹತ್ತಿರದಲ್ಲಿಯೇ ಒಂದು ಕತ್ತೆ ನಿಂತಿತ್ತು. ತಮ್ಮ ಶಾಸ್ತ್ರದ ಪ್ರಕಾರ ಇದೇ ನಿಜವಾದ ಬಂಧುವೆಂದು ಭಾವಿಸಿ ಅದರ ಮೈದಡವಿ ಪಾದಗಳನ್ನು ತೊಳೆಯತೊಡಗಿದರು! ಕತ್ತೆಯಿಂದ ಝಾಡಿಸಿ ಒದೆಸಿಕೊಂಡ ಅವರು ದಿಕ್ಕಾಪಾಲಾಗಿ ಓಡಿದರು! ವ್ಯಾವಹಾರಿಕ ಜ್ಞಾನವಿಲ್ಲದ ಕೇವಲ ಗ್ರಂಥಜ್ಞಾನವು ಎಷ್ಟು ಅರ್ಥಶೂನ್ಯ ಎಂಬುದನ್ನು ಈ ಎರಡು ಕಥೆಗಳು ಚೆನ್ನಾಗಿ ನಿರೂಪಿಸುತ್ತವೆ.
ಇಂದಿನ ಶಾಲಾಕಾಲೇಜು ಶಿಕ್ಷಣ ಇದಕ್ಕಿಂತ ಭಿನ್ನವಾಗಿಲ್ಲ. ವಿಶ್ವವಿದ್ಯಾನಿಲಯಗಳಿಂದ ಗಳಿಸುವ ಪದವಿಗಳಿಗೂ ಬದುಕಿಗೂ ಏನೂ ಸಂಬಂಧವಿಲ್ಲ. ಪದವಿಗೆ ತಕ್ಕ ಪರಿಜ್ಞಾನ ಇಲ್ಲವೇ ಇಲ್ಲ, ಡಿಗ್ರಿಗಳು ಹೆಸರಿಗೆ ಅಂಟಿಕೊಂಡಿದ್ದು ಪ್ರಯೋಜನವೇನು! ನಮ್ಮ ವಿಶ್ವವಿದ್ಯಾನಿಲಯಗಳು ಮದುವೆಯ ಮಾರುಕಟ್ಟೆಯಲ್ಲಿ ದುಬಾರಿ ಗಂಡುಗಳನ್ನು ತಯಾರು ಮಾಡುವ ಕಾರ್ಖಾನೆಗಳಾಗಿವೆ ಎಂಬ ಮಾತನ್ನು ಬಹಳ ಹಿಂದೆ ಈ ಅಂಕಣದಲ್ಲಿ ಬರೆದ ನೆನಪು. ಪದವಿಗಳ ಗೀಳಿನಿಂದ ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ. ಇದರಿಂದ ಸಮಾಜಕ್ಕಾಗಲೀ ದೇಶಕ್ಕಾಗಲೀ ಉಪಯೋಗವಿಲ್ಲ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಾವು ಕಂಡಂತೆ, ಯಾವ ಕ್ಷೇತ್ರದಲ್ಲಿ ಯಾವ ಪರಿಣತಿಯ (expertise) ಕೊರತೆ ಇದೆ ಎಂಬುದನ್ನು ಕರಾರುವಾಕ್ಕಾಗಿ ಸಮೀಕ್ಷೆ ನಡೆಸಿ ಅದಕ್ಕೆ ಅನುಗುಣವಾಗಿ ತಜ್ಞರನ್ನು ತಯಾರು ಮಾಡುವ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಾರೆ. ಅಂಥ ಶಿಕ್ಷಣಕ್ಕೆ ಮಾತ್ರ ಪ್ರೋತ್ಸಾಹವನ್ನು ಕೊಡುತ್ತಾರೆ. ನಮ್ಮ ದೇಶದಲ್ಲಿ ಪರಿಣತಿಯನ್ನು ಪಡೆದವರಿಗೆ ಪ್ರೋತ್ಸಾಹ ಅವಕಾಶಗಳು ಇಲ್ಲ. ಹೀಗಾಗಿ ಅವರು ಬೇರೆ ದೇಶಗಳಿಗೆ ವಲಸೆ ಹೋಗುತ್ತಾರೆ. ಪ್ರತಿಭಾ ಪಲಾಯನ ಎಂಬುದು ನಮ್ಮ ದೇಶಕ್ಕೆ ಅಂಟಿದ ದೊಡ್ಡ ಶಾಪ! ಪರಿಣತಿ ಪಡೆಯುವುದು ನಮ್ಮ ದೇಶದಲ್ಲಿ ಅದೂ ಸರಕಾರದ ವೆಚ್ಚದಲ್ಲಿ ಅಂದರೆ ಬಡಬೋರೇಗೌಡನ ತೆರಿಗೆಯ ಹಣದಲ್ಲಿ, ಅವರ ಪ್ರಯೋಜನ ದೊರೆಯುವುದು ಮಾತ್ರ ಬೇರೆ ದೇಶಗಳಿಗೆ, ಸರಕಾರವು ಮನಸ್ಸು ಮಾಡಿದರೆ ಇಂತಹ ಪರಿಣಿತರನ್ನು ಇಲ್ಲಿಯೇ ಉಳಿಸಿಕೊಳ್ಳಬಹುದು.
ವಿದೇಶಗಳ ಮಾತು ಒಂದು ಕಡೆ ಇರಲಿ. ನಮ್ಮ ದೇಶದಲ್ಲೇ ಹೊಸದಾಗಿ ವೈದ್ಯಕೀಯ ಪದವಿ ಪಡೆದವರು ಹಳ್ಳಿಗಳಲ್ಲಿ ಕೆಲಸ ಮಾಡಲು ಬಯಸುವುದಿಲ್ಲ, ಅವರು ದೌಡಾಯಿಸುವುದು ನಗರಗಳಿಗೆ, ನರ್ಸಿಂಗ್ ಹೋಂಗಳಿಗೆ! ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯರೇ ಇಲ್ಲ, ನಮ್ಮ ಸಮ್ಮುಖದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ವಿಷಾದದಿಂದ ಹೇಳಿದ ಮಾತು “ನನ್ನ ಕ್ಷೇತ್ರದಲ್ಲಿಯೇ ಗ್ರಾಮಾಂತರ ಪ್ರದೇಶದ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ”! ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯದ ಸಾಮಾನ್ಯ ಜನರು ಮೂಢನಂಬಿಕೆಗಳಿಗೆ ಬಲಿಯಾದರೆ ಆಶ್ಚರ್ಯವಿಲ್ಲ, ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸೇವೆ ಮಾಡುವಂತೆ ಕಟ್ಟು ನಿಟ್ಟಾದ ಮಸೂದೆಯನ್ನು ತರುವುದಾಗಿ ಸರಕಾರ ಹೇಳುತ್ತದೆ. ಅಲ್ಲಿಯವರೆಗೂ ಮೇಲೆ ಪಂಚತಂತ್ರದ ಕಥೆಯಲ್ಲಿ ಹೇಳಿದಂತೆ ನಮ್ಮ ಹಳ್ಳಿಯ ಜನ ಯಾವ ಮರ ಹತ್ತಿ ಜೀವ ಉಳಿಸಿಕೊಳ್ಳಬೇಕು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 26.11.2015