ಗೌರವ ಡಾಕ್ಟರೇಟ್ ಪದವಿ - ಒಂದು ಸೀಳುನೋಟ

  •  
  •  
  •  
  •  
  •    Views  

ಇಂದಿನ ದಿನಮಾನಗಳಲ್ಲಿ ಹಣಗಳಿಕೆಯೇ ಸರ್ವಸ್ವವಾಗಿದೆ. ಸಾವಿರಾರು ವರ್ಷಗಳ ಹಿಂದೆ ಹೇಳಿದ "ನ ವಿತ್ತೇನ ತರ್ಪಣೀಯೋ ಮನುಷ್ಯಃ" (ಹಣದಿಂದ ಮನುಷ್ಯನನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ) ಎಂಬ ಕಠೋಪನಿಷತ್ತಿನ ಅನುಭವ ವಾಣಿ ಈಗಲೂ ನಿತ್ಯಸತ್ಯವಾಗಿದೆ. ಕಾಲ ಗತಿಸಿದಂತೆ ಜನರ ಜೀವನ ಶೈಲಿ ಬದಲಾಗುತ್ತಿದೆಯೇ ಹೊರತು ಮೂಲ ಸ್ವಭಾವ ಬದಲಾಗುತ್ತಿಲ್ಲ ಕಂತೆ ಕಂತೆ ಹಣವನ್ನು ತಂದುಕೊಡುವ ಉದ್ಯೋಗಗಳತ್ತ ಯುವ ವಿದ್ಯಾವಂತರ ಚಿತ್ತ, ಹಣದ ಝಣತ್ಕಾರ ಅವರನ್ನು ಮಾಯೆಯಾಗಿ ಕಾಡುತ್ತಿದೆ. ಹೀಗಾಗಿ ವೈದ್ಯಕೀಯ ಮತ್ತು ತಂತ್ರಜ್ಞಾನ ಶಿಕ್ಷಣಗಳು ವಿಜೃಂಭಿಸುತ್ತಿವೆ. "ಹಿರಣ್ಯಮೇವಾರ್ಜಯ ನಿಷ್ಪಲಾಃ ಕಲಾಃ" (ಹಣವನೊಂದನೆ ಗಳಿಸು, ಫಲವಿಲ್ಲ ಕಲೆಗೆ) ಎಂಬುದೇ ಇಂದಿನ ಗುರಿಯಾಗಿದೆ. ಭಾರತದ ಪ್ರಾಚೀನ ಬೌದ್ದಿಕ ಪ್ರತಿಭೆಗಳ ತವನಿಧಿಯಾದ ಸಂಸ್ಕೃತ ಭಾಷೆಯ ಅಧ್ಯಯನ ಯಾರಿಗೂ ಬೇಡವಾಗಿದೆ. ಸಂಸ್ಕೃತ ಭಾಷೆಯ ಅಧ್ಯಯನಕ್ಕೆ ಕಠಿಣ ಪರಿಶ್ರಮ ಬೇಕು ಅಪಾರ ಆಸಕ್ತಿಯೂ ಬೇಕು. ಸಾಹಿತ್ಯ, ವಿಜ್ಞಾನ ಮತ್ತು ಕಲೆಗಳ ಕೀಲಿಕೈ ಇರುವುದೇ ನಮ್ಮ ಪಾರಂಪರಿಕ ಜ್ಞಾನದ ಗಂಗೋತ್ರಿಯೆನಿಸಿದ ಸಂಸ್ಕೃತದಲ್ಲಿ ಕಷ್ಟಪಟ್ಟು ಅದನ್ನು ಅಧ್ಯಯನ ಮಾಡಿದರೂ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವೆಂದಾದರೆ ಕಲಿಯಲು ಯಾರು ಮುಂದೆ ಬಂದಾರು! ಇಂಥ ಸವಾಲುಗಳ ಮಧ್ಯೆಯೂ ಸಂಸ್ಕೃತ ಭಾಷೆಯ ಅಧ್ಯಯನವನ್ನು ಪ್ರೋತ್ಸಾಹಿಸಲು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯವು ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದ ಸಂಗತಿ.

ಈ ಮಾತುಗಳನ್ನು ಬರೆಯಲು ಕಾರಣ ಕಳೆದ ತಿಂಗಳು ಬೆಂಗಳೂರಿನಿಂದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪದ್ಮಾ ಶೇಖರ್ ಅವರು ಹಿಂದಿನ ಕುಲಪತಿ ಡಾ. ಮಲ್ಲೇಪುರಂ ವೆಂಕಟೇಶ್ ಹಾಗೂ ಡಾ.ಸೋಮಶೇಖರ ಗೌಡರೊಂದಿಗೆ ಅನಿರೀಕ್ಷಿತವಾಗಿ ಸಿರಿಗೆರೆಗೆ ಬಂದಿದ್ದರು. ಉಭಯ ಕುಶಲೋಪರಿಯ ನಂತರ ಕುಲಪತಿಗಳು ಒಂದು ಪತ್ರವನ್ನು ನಮಗೆ ನೀಡಿ ವಿಶ್ವವಿದ್ಯಾಲಯವು ಈ ವರ್ಷ ಮೂವರು ಹಿರಿಯ ವಿದ್ವಾಂಸರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿದೆಯೆಂದು ತಿಳಿಸಿ ಘಟಿಕೋತ್ಸವಕ್ಕೆ ಆಗಮಿಸಬೇಕೆಂದು ತುಂಬಾ ಗೌರವದಿಂದ ಆಮಂತ್ರಿಸಿದರು. ಡಿಸೆಂಬರ್ 2 ರಂದು ಏರ್ಪಾಡಾಗಿದ್ದ ನಾಲ್ಕನೆಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪಡೆಯಲು ಆಯ್ಕೆಯಾಗಿದ್ದ ಮೂವರಲ್ಲಿ ನಾವೂ ಒಬ್ಬರು ಎಂಬ ಸಂಗತಿ ಮಾತ್ರ ನಮಗೆ ತೀರಾ ಅನಿರೀಕ್ಷಿತ ಹಾಗೂ ಮುಜುಗರದ ಪ್ರಸಂಗವಾಗಿತ್ತು. ಒಂದು ರೀತಿಯಲ್ಲಿ ನಮ್ಮ ಸತ್ವಪರೀಕ್ಷೆಯೂ ಆಗಿತ್ತು.

ವಿಶ್ವವಿದ್ಯಾಲಯವು ನೀಡಬಯಸಿದ ಈ ಗೌರವ ಪದವಿಯನ್ನು ಸ್ವೀಕರಿಸಬೇಕೇ, ಬೇಡವೇ? ಸ್ವೀಕರಿಸದೆ ತಿರಸ್ಕರಿಸಿದರೆ ವಿಶ್ವವಿದ್ಯಾಲಯಕ್ಕೆ ಅಗೌರವ ತೋರಿದಂತೆ ಆಗುವುದಿಲ್ಲವೆ? ನಮ್ಮ ವಿದ್ಯಾರ್ಥಿ ದೆಸೆಯಲ್ಲಿ ದೇಶ-ವಿದೇಶಗಳ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ್ದರೂ ನಾವು ಗಳಿಸಿದ ಪದವಿಗಳನ್ನು ಯಾವ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿಯೂ ವೈಯಕ್ತಿಕವಾಗಿ ಭಾಗವಹಿಸಿ ಪಡೆಯಲು ಸಾಧ್ಯವಾಗಿಲ್ಲ, ಮೈಸೂರು ವಿಶ್ವವಿದ್ಯಾನಿಲಯದ ಬಿ.ಎ ಪದವಿಪರೀಕ್ಷೆಯಲ್ಲಿ 7ನೆಯ Rank  ಪಡೆದು ಸಂಸ್ಕೃತದಲ್ಲಿ ಹೆಚ್ಚಿನ ಅಂಕ ಗಳಿಸಿದ್ದಕ್ಕಾಗಿ ಪಂಡಿತ್ ನವೀನಂ ರಾಮಾನುಜಾಚಾರ್ಯ ಬಂಗಾರದ ಪದಕ ಲಭಿಸಿದ್ದರೂ ಘಟಿಕೋತ್ಸವ ನಡೆದಾಗ ಕಾಶಿಯಲ್ಲಿದ್ದೆವು. ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಯು.ಜಿ.ಸಿ ಫೆಲೋಷಿಪ್ ಪಡೆದು 1976 ರಲ್ಲಿ ಸಂಶೋಧನಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪದವಿ ದೊರೆತಾಗ ಐರೋಪ್ಯ ದೇಶದ ವಿಯೆನ್ನಾ ವಿಶ್ವವಿದ್ಯಾನಿಲಯದ ಫೆಲೋಷಿಪ್ ಪಡೆದು ಉನ್ನತ ವ್ಯಾಸಂಗದಲ್ಲಿ ನಿರತರಾಗಿದ್ದೆವು. ಆಗ ಪ್ರತ್ಯಕ್ಷವಾಗಿ ಪಡೆಯಲು ದೊರೆಯದ ಸೌಭಾಗ್ಯ ಈಗ ಒದಗಿ ಬಂದಿದ್ದರೂ ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ" ಎನ್ನುವಂತೆ ಒಂದು ಮಠದ ಗುರುಗಳಾಗಿ ಇಂತಹ ಉಪಾಧಿಗಳನ್ನು ಪಡೆಯಲು ಉತ್ಸುಕರಾಗಬೇಕೇ? ಎಂಬ ಸಾತ್ವಿಕ ಪ್ರಶ್ನೆ ನಮ್ಮನ್ನು ಬಲವಾಗಿ ಕಾಡಿಸತೊಡಗಿತು.

ಯೋಗಶಾಸ್ತ್ರದಲ್ಲಿ ಪಾರಮಾರ್ಥಿಕ ಪಥದಲ್ಲಿರುವವರಿಗೆ ಎದುರಾಗುವ ವಿಭೂತಿಗಳ ಪ್ರಸ್ತಾಪ ಬರುತ್ತದೆ. ವಿಭೂತಿಗಳು ವಾಸ್ತವವಾಗಿ ಸಿದ್ಧಿಗಳು. ಅಣಿಮಾ, ಗರಿಮಾ, ಲಘಿಮಾ ಇತ್ಯಾದಿ ಈ ಸಿದ್ಧಿಗಳು ಸಾಧಕನನ್ನು ಸಾಧನೆಯ ಪಥದಲ್ಲಿ ತಡೆ ಹಾಕುತ್ತವೆ, ದಿಕ್ಕು ತಪ್ಪಿಸುತ್ತವೆ. ಅವನಿಗೆ ಬೇಕಾದುದು ಅವುಗಳಿಗಿಂತ ಮಿಗಿಲಾದ ಆತ್ಯಂತಿಕವಾದ ಸಿದ್ಧಿ ಅಥವಾ ಮೋಕ್ಷ ಆ ಪಥದಲ್ಲಿ ಮುಂದಾದಾಗ ಬರುವ ಈ ಸಿದ್ಧಿಗಳಿಗೆ ಮಾರುಹೋದರೆ ಆತ್ಯಂತಿಕ ಸಿದ್ಧಿಯಿಂದ ವಿಮುಖನಾಗಿ ಕವಲು ದಾರಿಯಲ್ಲಿ ಸಾಗಿದಂತಾಗುತ್ತದೆ. ಆದಕಾರಣ "ಸ್ಥಾನ್ಯುಪನಿಮಂತ್ರಣೇ ಸಂಗಸ್ಮಯಾಕರಣಂ ಪುನರನಿಷ್ಟಪ್ರಸಂಗಾತ್" (ಯೋಗಸೂತ್ರ 3.52) ಎನ್ನುವ ಮಹರ್ಷಿ ಪತಂಜಲಿಯ ಯೋಗಸೂತ್ರದ ಒಳ ಎಚ್ಚರದ ಮಾತುಗಳು ನೆನಪಾದವು.

ಇಂತಹ ಇನ್ನೊಂದು ಪ್ರಸಂಗ ಬಹಳ ಹಿಂದೆಯೇ ನಮಗೆ ಎದುರಾಗಿತ್ತು. ಆಸ್ಟ್ರೇಲಿಯಾದ ಮೆಲ್ಬರ್ನ್ ವಿಶ್ವವಿದ್ಯಾನಿಲಯದಲ್ಲಿ 9 ನೆಯ ವಿಶ್ವ ಸಂಸ್ಕೃತ ಸಮ್ಮೇಳನ ನಡೆದಾಗ ಮಹರ್ಷಿ ಪಾಣಿನಿಯ ವ್ಯಾಕರಣ ಸೂತ್ರಗಳನ್ನು ಆಧರಿಸಿ ರೂಪಿಸಿದ ನಮ್ಮ "ಗಣಕಾಷ್ಟಾಧ್ಯಾಯಿ" ತಂತ್ರಾಂಶವನ್ನು ಮೊಟ್ಟಮೊದಲಿಗೆ ಪ್ರಸ್ತುತ ಪಡಿಸಿದಾಗ ಬೆರಗಾದ ಅಂತಾರಾಷ್ಟ್ರೀಯ ಸಂಸ್ಕೃತ ವಿದ್ವಾಂಸರ ಮಂಡಲಿಯು ನಮ್ಮನ್ನು 10 ನೆಯ ವಿಶ್ವ ಸಂಸ್ಕೃತ ಸಮ್ಮೇಳನದ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. 1997 ರಲ್ಲಿ ಬೆಂಗಳೂರಿನಲ್ಲಿ ನಡೆಸಲು ಏರ್ಪಾಡಾಗಿದ್ದ ಈ ಸಮ್ಮೇಳನದ ಹೊಣೆಗಾರಿಕೆಯನ್ನು ನಿರ್ವಹಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದಲ್ಲಿ ಆಗಾಗ ಸಭೆಗಳು ನಡೆಯುತ್ತಿದ್ದವು. ಆಗ ನಮ್ಮ ಮಠದ ಶಿಷ್ಯರಾದ ಎಸ್ ಆರ್ ಬೊಮ್ಮಾಯಿಯವರು ಮಾನವ ಸಂಪನ್ಮೂಲ ಸಚಿವರಾಗಿದ್ದರು. ಒಮ್ಮೆ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದಾಗ ಸಂಸ್ಕೃತ ವಿಶ್ವವಿದ್ಯಾನಿಲಯವೊಂದರ ಕುಲಪತಿ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆ ಸ್ಥಾನಕ್ಕೆ ನಮ್ಮ ಹೆಸರು ಶಿಫಾರಿಸ್ತುಗೊಂಡು ಸಚಿವರ ಅಂಕಿತಕ್ಕೆ ಹೋಗಲಿದೆಯೆಂಬ ಸಂಗತಿ ಸಚಿವಾಲಯದ ಅಧಿಕಾರಿಗಳಿಂದ ತಿಳಿದು ಬಂದಿತು. ಇಂತಹ ಲೌಕಿಕ ಹುದ್ದೆಗಳಿಗೆ ಮಠಾಧೀಶರನ್ನು ಆಯ್ಕೆ ಮಾಡುವುದು ಸರಿಯಲ್ಲವೆಂದು ಆಯ್ಕೆ ಪ್ರಕ್ರಿಯೆಯನ್ನು ತಡೆಗಟ್ಟಿ ಸಂಸ್ಕೃತ ಸಾರಸ್ವತ ಲೋಕದಲ್ಲಿ ಅನನ್ಯ ಸಾಧನೆ ಮಾಡಿದ ಬೇರೆ ವಿದ್ವಾಂಸರ ಹೆಸರನ್ನು ಸೂಚಿಸಿದ್ದು ಹತ್ತಿರ ಇದ್ದವರಿಗೆ ಮಾತ್ರ ಗೊತ್ತು.

ಇತ್ತೀಚಿನ ದಿನಮಾನಗಳಲ್ಲಿ ವಿಶ್ವವಿದ್ಯಾನಿಲಯಗಳು ನೀಡುವ ಗೌರವ ಡಾಕ್ಟರೇಟ್ ಪದವಿಗಳು ವ್ಯಕ್ತಿಯ ವಿಶಿಷ್ಟ ಸಾಧನೆಗೆ ಸಲ್ಲುವ ಗೌರವಕ್ಕಿಂತ ರಾಜಕೀಯ ಪ್ರಭಾವ ಮತ್ತು ಒತ್ತಡಕ್ಕೆ ಮಣಿದು ನೀಡುವ ಸಾಮಾಜಿಕ ಸ್ಥಾನಮಾನಗಳ ಹೆಗ್ಗಳಿಕೆಯ ಪ್ರತೀಕವಾಗಿವೆ. ಹೀಗಾಗಿ ಘಟಿಕೋತ್ಸವಗಳು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ದೀಕ್ಷಾಂತ ಸಮಾರಂಭಗಳಾಗುವ ಬದಲು ಪ್ರಭಾವಿ ವ್ಯಕ್ತಿಗಳ ಸನ್ಮಾನ ಸಮಾರಂಭಗಳಾಗಿ ಪರಿಣಮಿಸುತ್ತಿವೆ. ಮುದ್ದುಮಕ್ಕಳನ್ನು ಹಸೆಮಣೆಯ ಮೇಲೆ ಕುಳ್ಳಿರಿಸಿ ಹರಸುವ ಬದಲು ಅವರ ತಂದೆತಾಯಿಗಳೇ/ಅತ್ತೆಮಾವಂದಿರೇ ಹಸೆಯ ಮೇಲೆ ಕುಳಿತು ಬಾಸಿಂಗ ಧರಿಸಿ ವಿಜೃಂಭಿಸಿದಂತೆ ಆಭಾಸವಾಗುತ್ತಿವೆ!

ಈ ದೃಷ್ಟಿಯಿಂದಲೂ ಘಟಿಕೋತ್ಸವದಲ್ಲಿ ಕುಲಾಧಿಪತಿ ರಾಜ್ಯಪಾಲರು ಪ್ರದಾನ ಮಾಡಲಿದ್ದ ಗೌರವ ಡಿ.ಲಿಟ್ ಪದವಿಯನ್ನು ಸ್ವೀಕರಿಸುವುದಕ್ಕೆ ಹೋಗಲು ನಮ್ಮ ಅಂತಃಸಾಕ್ಷಿ ಒಪ್ಪಲಿಲ್ಲ. "ತಾತ್ವಿಕ ನೆಲೆಗಟ್ಟಿನ ಮೇಲೆ ಕೈಗೊಂಡ ನಮ್ಮ ಈ ನಿರ್ಧಾರವನ್ನು ಅತ್ಯಂತ ಗೌರವಾದರಗಳಿಂದ ಪ್ರದಾನ ಮಾಡಲು ಬಯಸಿದ್ದ ವಿಶ್ವವಿದ್ಯಾನಿಲಯಕ್ಕೆ ಅಗೌರವವೆಂದು ಭಾವಿಸಬಾರದಾಗಿ ಆಶಿಸಿ "ಘಟಿಕೋತ್ಸವವು ಯಶಸ್ವಿಯಾಗಿ ಜರುಗಿ ವಿದ್ಯಾರ್ಥಿಗಳ ಪ್ರತಿಭೆ ಅರಳಲಿ" ಎಂದು ಹಾರೈಸಿ ಕುಲಪತಿಗಳಿಗೆ ವೈಯಕ್ತಿಕ ಪತ್ರ ಬರೆದು ಈ ಮೊದಲೇ ಒಪ್ಪಿಕೊಂಡಿದ್ದ ಶಿಷ್ಯರೊಬ್ಬರ ಮಗಳ ಮದುವೆಯ ಸಮಾರಂಭಕ್ಕೆ ಹೋಗಿದ್ದು ಶಿಷ್ಯಸಮೂಹಕ್ಕೆ ಆಶ್ಚರ್ಯವನ್ನುಂಟುಮಾಡಿತ್ತು. ಹಿಂದಿನ ದಿನ ಪತ್ರಿಕೆಗಳಲ್ಲಿ ವರದಿಯಾದಂತೆ ಗುರುಗಳು ಘಟಿಕೋತ್ಸವಕ್ಕೆ ಹೋಗಬಹುದೆಂದು ನಿರೀಕ್ಷಿಸಿದ್ದ ಮದುಮಗಳ ತಂದೆತಾಯಂದಿರ ಹೃನ್ಮನಗಳಲ್ಲಿ ನಮ್ಮ ಅನಿರೀಕ್ಷಿತ ಆಗಮನದಿಂದ ಆನಂದದ ಕೋಡಿ ಹರಿದಿತ್ತು!

ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ, 
ರುದ್ರಪದವಿಯನೊಲ್ಲೆ ಮತ್ತಾವ ಪದವಿಯನೊಲ್ಲೆನಯ್ಯಾ,
ಕೂಡಲ ಸಂಗಮ ದೇವಾ
ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯನೆ ಕರುಣಿಸಯ್ಯಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 10.12.2015