ಅರಿವಿನ ಹಿರಿಮೆ ಗರಿಮೆ

  •  
  •  
  •  
  •  
  •    Views  

ದುವೆಗಳಲ್ಲಿ ಮದುಮಗ ಕಚ್ಚೆಪಂಜೆ ಶಲ್ಯ ಧರಿಸಿ ಛತ್ರಿ ಹಿಡಿದು ಕಾಶಿಯಾತ್ರೆಗೆ ಹೊರಡುವ ಶಾಸ್ತ್ರದ ಪ್ರಹಸನವನ್ನು ನೀವು ನೋಡಿರುತ್ತೀರಿ. ಈ ಶಾಸ್ತ್ರದ ಹಿನ್ನೆಲೆ: ಹೆಚ್ಚಿನ ಅಧ್ಯಯನಕ್ಕೆಂದು ಕಾಶಿಗೆ ಹೊರಟು ನಿಂತಿದ್ದ ಅಳಿಯನ ಮನವೊಲಿಸಿ ವಾಪಾಸು ಕರೆದುಕೊಂಡು ಬಂದ ಮಾವ ಅವನ ಕಾಲು ತೊಳೆದು ಕನ್ಯಾದಾನ ಮಾಡಿ ಸಂಸಾರವಂದಿಗನನ್ನಾಗಿ ಮಾಡುತ್ತಾನೆ. ಬ್ರಹ್ಮಚಾರಿಯಾಗಿ ದಂಡ ಕಮಂಡಲ ಹಿಡಿದು ಅಧ್ಯಯನ ಮಾಡಬೇಕಾಗಿದ್ದವನು "ಮಾವನ ಒತ್ತಾಸೆ"ಗೆ ಮಣಿದು ಮದುಮಗನಾಗಿ ಕನ್ಯಾಮಣಿಯ ಕೋಮಲವಾದ ಕೈಗಳನ್ನು ಹಿಡಿದು ಸಪ್ತಪದಿ ತುಳಿದು "ಸಂಸಾರ" ಬಂಧನದ ಬೇಡಿ"ಗಳನ್ನು ಶಾಸ್ತ್ರೋಕವಾಗಿ ಧರಿಸುತ್ತಾನೆ! ಹಿಂದೆ ಎಂದೋ ನಡೆದಿರಬಹುದಾದ ಒಂದು ಘಟನೆಯ ನಾಟಕೀಯ ಅಭಿನಯ ಈಗಲೂ ಮದುವೆಗಳಲ್ಲಿ ಸಾಂಗವಾಗಿ ನಡೆಯುತ್ತಿದೆ!

ಕಾಶೀ ಭಾರತದ ಪುರಾತನ ನಗರೀ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಐತಿಹಾಸಿಕವಾಗಿ ಈ ನಗರಕ್ಕೆ ವಿಶೇಷ ಮಹತ್ವವಿದೆ. ಈಗಿನ ಯುವಪೀಳಿಗೆಗೆ ಕಾಶೀಯಾತ್ರೆಗಿಂತ ಜೀವನದಲ್ಲಿ ಒಮ್ಮೆಯಾದರೂ ಅಮೆರಿಕ, ಯೂರೋಪ್ ದೇಶಗಳಿಗೆ ಹೋಗಬೇಕೆಂಬ ಕನಸುಗಳಿರುತ್ತವೆ. ಸಾಧ್ಯವಾದರೆ ಅಲ್ಲಿಯೇ ನೆಲೆಸಿ ಡಾಲರುಗಳನ್ನು ಗಳಿಸಿ ಕುಬೇರರಾಗಬೇಕೆಂಬ ಹಂಬಲ ಅವರದು. ಆದರೆ ಹಿಂದಿನ ತಲೆಮಾರಿನವರ ಕನಸೇ ಬೇರೆ. ಅವರಿಗೆ ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ತೀರ್ಥಕ್ಷೇತ್ರವಾದ ಕಾಶಿಗೆ ಹೋಗಿ ಬರಬೇಕೆಂಬ ತುಡಿತ ಇರುತ್ತಿತ್ತು. ಕೊನೆಗಾಲದಲ್ಲಿ ಅಲ್ಲಿಯೇ ಜೀವ ಸವೆಸಿ ಕಾಶೀ ವಿಶ್ವನಾಥನ ಸನ್ನಿಧಿಯಲ್ಲಿಯೇ ಕೊನೆಯುಸಿರನ್ನು ಬಿಡಬೇಕೆಂಬ ಉತ್ಕಟೇಚ್ಛೆಯಿರುತ್ತಿತ್ತು. ಆ ಶ್ರದ್ಧಾಳು ಜನರಿಗೆ ಕಾಶಿಯ ನೆನಪೇ ಪುಣ್ಯಕರ. ಹಿಂದಿನ ಕಾಲದಲ್ಲಿ ಬಸ್ಸು, ರೈಲು, ವಿಮಾನಗಳು ಇರಲಿಲ್ಲ. ಶ್ರದ್ಧಾಳು ಭಕ್ತರು ವರ್ಷಗಟ್ಟಲೆ ನಡೆದುಕೊಂಡೋ ಕುದುರೆಯ ಮೇಲೆ ಸವಾರಿ ಮಾಡಿಕೊಂಡೋ ಹೋಗಬೇಕಾಗುತ್ತಿತ್ತು. ಅವರು ಸಾಮಾನ್ಯವಾಗಿ ಸಂಸಾರದಲ್ಲಿ ವಿರಕ್ತಿ ಪಡೆದವರಾಗಿರುತ್ತಿದ್ದರು. ವೃದ್ಧಾಪ್ಯದ ಕಾರಣದಿಂದ ವಾಪಾಸು ಬರಲು ಶಕ್ತಿ ಸಾಲದೆ ಕಾಶೀ ಕ್ಷೇತ್ರದಲ್ಲಿಯೇ ದೇವರ ಧ್ಯಾನ ಮಾಡಿಕೊಂಡು ಕಾಲನ ಕರೆ ಬರುವವರೆಗೆ ಕಾದಿದ್ದು ನಿರುಮ್ಮಳವಾಗಿ ಕಣ್ಣು ಮುಚ್ಚುತ್ತಿದ್ದರು. ಈಗಲೂ ಯಾರಾದರೂ ಕೊನೆಯುಸಿರೆಳೆಯುವಾಗ ದೇವರ ಮನೆಯಲ್ಲಿ ಪೂಜೆಗೆ ಇರಿಸಿದ ತಾಮ್ರದ ಗಿಂಡಿಯ ಗಂಗಾಜಲವನ್ನು ಒಂದು ಗುಟುಕು ಕುಡಿಸಿದಾಗಲೇ ಇಹಲೋಕದಿಂದ ಬಿಡುಗಡೆ, ಪರಲೋಕ ಪ್ರಾಪ್ತಿ! 

ಕಾಶಿಗೆ ಹೋಗುವ ಜನರಲ್ಲಿ ಎರಡು ಬಗೆ. ಅದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಿಕೊಂಡು ಹೋಗುವ ಪ್ರವಾಸಿಗರು ಒಂದು ವರ್ಗವಾದರೆ ಧಾರ್ಮಿಕ ಶ್ರದ್ಧಾ ಭಾವನೆಯನ್ನು ಇಟ್ಟುಕೊಂಡು ಹೋಗುವ ಯಾತ್ರಿಕರು ಮತ್ತೊಂದು ವರ್ಗ. ಭಾರತೀಯರು ಬಹುತೇಕ ಕಾಶಿಗೆ ಹೋಗುವುದು ಯಾತ್ರಿಕರಾಗಿ, ವಿದೇಶೀಯರು ಬರುವುದು ಪ್ರವಾಸಿಗರಾಗಿ, ಅವರಿಗೆ ಕಾಶೀ ಪ್ರವಾಸಿ ತಾಣ. ನಮ್ಮವರಿಗೆ ಪವಿತ್ರ ತೀರ್ಥಕ್ಷೇತ್ರ! ಇಬ್ಬರನ್ನೂ ಆಕರ್ಷಿಸುವ ನಗರ ಕಾಶೀ! ಆದರೆ ಇಬ್ಬರ ಮನೋಭಾವದಲ್ಲಿ ಅಜಗಜಾಂತರ ವ್ಯತ್ಯಾಸ!

ಅಂತಹ ಕಾಶಿಯು ಹಿಂದೆ ಪ್ರಖ್ಯಾತ ಶೈಕ್ಷಣಿಕ ಕೇಂದ್ರವೂ ಆಗಿತ್ತು. ಸಂಸ್ಕೃತ ಅಧ್ಯಯನದ ತವರು ಮನೆಯಾಗಿತ್ತು. ಆದರೆ ಈಗ ಅಂತಹ ಪಾರಂಪರಿಕ ಶಿಕ್ಷಣ ಕ್ಷೀಣಗೊಳ್ಳುತ್ತಿದೆ. ಸಂಸ್ಕೃತ ಪಂಡಿತರೂ ಸಹ ತಮ್ಮ ಮಕ್ಕಳಿಗೆ ಸಂಸ್ಕೃತ ಕಲಿಸಲು ಇಷ್ಟಪಡದೆ ಸಾಫ್ಟ್ ವೇರುಳ್ಳ  ಇಂಜಿನಿಯರಿಂಗ್ ಓದಿಸುತ್ತಾರೆ. ಕೇವಲ ನಾಲ್ಕಾರು ವರ್ಷ ಕಲಿತರೆ ಸಾಕು ಪ್ರತಿಭಾವಂತರು ಸಾಫ್ಟ್ ವೇರ್  ಕ್ಷೇತ್ರದಲ್ಲಿ ಲಕ್ಷ್ಮೀಪುತ್ರರಾಗಿ ರಾರಾಜಿಸುತ್ತಾರೆ. ಇಡೀ ಜೀವನವನ್ನು ಸಂಸ್ಕೃತ ಅಧ್ಯಯನಕ್ಕೆ ಧಾರೆಯೆರೆದ ವಿದ್ವಜ್ಜನರನ್ನು ಹಿಂದೆ ರಾಜ ಮಹಾರಾಜರುಗಳು ಆಸ್ಥಾನ ರತ್ನರನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ಉದಾರವಾಗಿ ಅಗ್ರಹಾರಗಳ ಉಂಬಳಿಗಳನ್ನು ಹಾಕಿ ಕೊಡುತ್ತಿದ್ದರು. ಆಸ್ಥಾನ ವಿದ್ವಾನ್ ಎಂಬ ಘನತೆ ಗೌರವಗಳು ಅವರಿಗೆ ಇರುತ್ತಿದ್ದವು. ಹೀಗಾಗಿ ಅವರಿಗೆ ಆರ್ಥಿಕ ದುಃಸ್ಥಿತಿ ಇರುತ್ತಿರಲಿಲ್ಲ. ಈಗ ರಾಜರೂ ಇಲ್ಲ, ಮಹಾರಾಜರೂ ಇಲ್ಲ; ಅವರ ವಂಶೀಕರು ತಮ್ಮ ಜೀವನ ನಿರ್ವಹಣೆಗೇ ಹೆಣಗಾಡುತ್ತಿರುವಾಗ ಇನ್ನು ಸಂಸ್ಕೃತ ಪಂಡಿತರ ಪಾಡು ಕೇಳುವವರು ಯಾರು? "ಹನುಮಂತರಾಯನೇ ಹಗ್ಗ ಜಗಿಯುವಾಗ ಪೂಜಾರಿ ಶಾವಿಗೆ ಬೇಡಿದರೆ ಸಿಕ್ಕೀತೆ!"

ಹಿಂದಿನ ರಾಜಮಹಾರಾಜರುಗಳು ಗಂಗಾನದಿ ಹಾಗೂ ಕಾಶೀ ವಿಶ್ವನಾಥನ ಮೇಲಣ ಧಾರ್ಮಿಕ ಶ್ರದ್ಧೆಯಿಂದ ಗಂಗಾ ನದಿಯ ದಂಡೆಯ ಮೇಲೆ ಛತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಇವು ಆಯಾ ರಾಜರ ಪುರಾತನ ಅರಮನೆಗಳನ್ನು ಹೋಲುತ್ತವೆ. ಆಯಾ ರಾಜರ ಕಾಲದ ವಾಸ್ತುಶಿಲ್ಪದ ಜೀವಂತ ಸಾಕ್ಷಿಗಳಾಗಿವೆ. ರಾಜಪರಿವಾರ ಮತ್ತು ಪ್ರಜೆಗಳು ಕಾಶಿಗೆ ಬಂದಾಗ ಉಳಿದುಕೊಳ್ಳಲು ಇವುಗಳ ನಿರ್ಮಾಣವಾಗಿತ್ತು. ಅಂತಹ ಮಹಲುಗಳು ಈಗ ಪ್ರವಾಸಿಗರ ಐಷಾರಾಮಿ ಹೋಟೆಲುಗಳಾಗಿ ಪರಿವರ್ತನೆಗೊಂಡಿವೆ.

ಏಳನೆಯ ಶತಮಾನದಲ್ಲಿ ಭಾರತಕ್ಕೆ ಬಂದ ಚೀನೀ ಯಾತ್ರಿಕ  ಹ್ಯುಯೆನ್  ‍ತ್ಸಾಂಗ್  ತನ್ನ ಪ್ರವಾಸ ಕಥನದಲ್ಲಿ ಎಂಟು ಹತ್ತು ವರ್ಷದ ಚಿಕ್ಕ ಮಕ್ಕಳು ಪಾಣಿನಿಯ ವ್ಯಾಕರಣದ ಎಲ್ಲ ನಾಲ್ಕು ಸಾವಿರ ಸೂತ್ರಗಳನ್ನು ಕಂಠಪಾಠ ಮಾಡಿ ಒಪ್ಪಿಸುತ್ತಿದ್ದುದನ್ನು ಕಣ್ಣಾರೆ ನೋಡಿರುವುದಾಗಿ ದಾಖಲಿಸಿದ್ದಾನೆ. ಅಂತಹ ಅಪರೂಪದ ದೃಶ್ಯವನ್ನು ನಾವು ನೋಡಿದ್ದು ಕಳೆದ ತಿಂಗಳು ಕಾಶಿಗೆ ಹೋದ ಸಂದರ್ಭದಲ್ಲಿ ಭೇಟಿ ಮಾಡಿದ "ಪಾಣಿನೀಯ ಕನ್ಯಾ ಗುರುಕುಲದಲ್ಲಿ. ಈ ಸಂಸ್ಥೆಯನ್ನು ಸ್ಥಾಪಿಸಿದವರು "ಬ್ರಹ್ಮದತ್ತ ಜಿಜ್ಞಾಸು" ಎಂಬ ಕಾಶ್ಮೀರದ ಸಾಧು. ದೇಶವಿಭಜನೆಯಾದ ನಂತರ ಅವರು ತಮ್ಮ ಹುಟ್ಟಿದ ಊರನ್ನು ತೊರೆದು (ಈಗ ಅದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ) ಕಾಶಿಗೆ ಬಂದು ನೆಲೆಸಿದರು. ಪರಂಪರಾಗತವಾಗಿ ಸಂಸ್ಕೃತ ಜ್ಞಾನವನ್ನು ಸಂಪಾದಿಸಿದ ಅವರು ಈ ಗುರುಕುಲದ ಆವರಣದೊಳಗೆ ಅಮೃತಶಿಲೆಯಲ್ಲಿ ಪಾಣಿನಿಯ ಸ್ಮಾರಕ ಭವನವನ್ನು ಸ್ಥಾಪಿಸಿದ್ದಾರೆ. ಅದರ ಗೋಡೆಗಳ ಒಳಹೊರಗೆ ಕ್ರಿ.ಪೂ 5 ನೆಯ ಶತಮಾನದಲ್ಲಿ ಪಾಣಿನಿಯಿಂದ ವಿರಚಿತವಾದ "ಅಷ್ಟಾಧ್ಯಾಯೀ" ವ್ಯಾಕರಣ ಗ್ರಂಥದ ಎಲ್ಲ ನಾಲ್ಕು ಸಾವಿರ ಸೂತ್ರಗಳನ್ನು ಬರೆಸಿದ್ದಾರೆ. ಗುರುಕುಲದ ನಿವಾಸಿಗಳಾದ ಏಳೆಂಟು ವರ್ಷದ ಪುಟಾಣಿ ಬಾಲೆಯರು ಪಾಣಿನಿಯ ಈ ವ್ಯಾಕರಣ ಸೂತ್ರಗಳನ್ನು ಪಟಪಟನೆ ಅರಳು ಹುರಿದಂತೆ ಹೇಳುತ್ತಾರೆ, ವ್ಯಾಖ್ಯಾನಿಸುತ್ತಾರೆ. ಈ ಗುರುಕುಲದಲ್ಲಿ ಪಾಣಿನಿಯ "ಅಷ್ಟಾಧ್ಯಾಯಿ" ಕ್ರಮದಲ್ಲಿಯೇ ವ್ಯಾಕರಣ ಸೂತ್ರಗಳನ್ನು ಕಲಿಸಿಕೊಡಲಾಗುತ್ತದೆ.

ಸಾಮಾನ್ಯವಾಗಿ ಹಿರಿಯರ ಮಾತಿಗೆ ನಮ್ಮ ಸಮಾಜದಲ್ಲಿ ಗೌರವ ಹೆಚ್ಚು. ವಯಸ್ಸಿನಲ್ಲಿ ಹೆಚ್ಚು ಹೆಚ್ಚು ಹಿರಿಯರಾದಷ್ಟೂ ಅವರಿಗೆ ಸಲ್ಲುವ ಗೌರವ ಹೆಚ್ಚುತ್ತಾ ಹೋಗುತ್ತದೆ. ಆದರೆ ವ್ಯಾಕರಣ ಶಾಸ್ತ್ರದ ವಿಷಯದಲ್ಲಿ "ಮುನಿತ್ರಯ"ರೆಂದು ಪ್ರಸಿದ್ಧರಾದ ಪಾಣಿನಿ, ಕಾತ್ಯಾಯನ ಮತ್ತು ಪತಂಜಲಿ ಈ ಮೂವರೂ ಮಹರ್ಷಿಗಳಿಂದ ವಿರಚಿತವಾದ ಗ್ರಂಥಗಳಲ್ಲಿ ಮತಭೇದವೇನಾದರೂ ಕಂಡುಬಂದರೆ "ಯಥೋತ್ತರಂ ಮುನೀನಾಂ ಪ್ರಾಮಾಣ್ಯಮ್" ಅಂದರೆ ನಂತರದ ಮುನಿಗಳು ಹೇಳಿರುವುದೇ ಸ್ವೀಕಾರಾರ್ಹವೆಂದು ಪರಿಗಣಿಸಲಾಗಿದೆ. ಅಂದರೆ ಪಾಣಿನಿ ಮತ್ತು ಕಾತ್ಯಾಯನರ ಮಧ್ಯೆ ಮತಭೇದ ಉಂಟಾದರೆ ಕಿರಿಯವರಾದ ಕಾತ್ಯಾಯನ ಹೇಳಿದ್ದೇ ಸರಿ. ಪಾಣಿನಿ, ಕಾತ್ಯಾಯನ ಮತ್ತು ಪತಂಜಲಿ ಈ ಮೂವರ ಮಧ್ಯೆ ಮತಭೇದವಿದ್ದರೆ ಎಲ್ಲರಿಗಿಂತ ಕಿರಿಯವರಾದ ಪತಂಜಲಿಯ ಮಾತೇ ಅಂತಿಮ. ಕಾಲಮಾನದಲ್ಲಿ ಯಾವುದೇ ಭಾಷೆ ಬದಲಾವಣೆ ಹೊಂದುವುದರಿಂದ ಆಯಾಯ ಕಾಲಘಟ್ಟದಲ್ಲಿ ಬರುವ ಕಿರಿಯ ವಯಸ್ಸಿನವರಿಂದ ವಿರಚಿತವಾದ ವ್ಯಾಕರಣ ಗ್ರಂಥಗಳಿಗೆ ಹೆಚ್ಚಿನ ಮಹತ್ವ ನೀಡಿರುವುದು ಅತ್ಯಂತ ವೈಜ್ಞಾನಿಕವಾಗಿದೆ. ದೊಡ್ಡವರಿಗೇ ಬೆಲೆ, ಚಿಕ್ಕವರಿಗೆ ಬೆಲೆಯಿಲ್ಲ ಎಂಬುದಕ್ಕೆ ಭಿನ್ನವಾದ ನಿಲುವನ್ನು ಇಲ್ಲಿ ಕಾಣಬಹುದಾಗಿದೆ.

ಈ ಹಿನ್ನೆಲೆಯಲ್ಲಿ ನಮ್ಮ ನೆನಪಿಗೆ ಬಂದದ್ದು ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ನಾರಾಯಣ ಮೂರ್ತಿಯವರ ಪತ್ನಿ ಸುಧಾಮೂರ್ತಿಯವರು ಆಡಿದ ಮಾತು. ಒಮ್ಮೆ ಅವರು ದಾವಣಗೆರೆಯ ನಮ್ಮ ಅನುಭವ ಮಂಟಪ ವಸತಿ ಶಾಲೆಗೆ ಅತಿಥಿಗಳಾಗಿ ಬಂದಿದ್ದರು. ಅವರ ಅಜ್ಜಿಗೆ ಭಗವದ್ಗೀತೆ ಓದುವ ಹಂಬಲ, ಆದರೆ ಓದಲು ಬರೆಯಲು ಬರುತ್ತಿರಲಿಲ್ಲ. ಶಾಲೆಗೆ ಹೋಗುತ್ತಿದ್ದ ಸುಧಾ, ಅಜ್ಜಿಗೆ ಅಕ್ಷರಾಭ್ಯಾಸವನ್ನು ಆರಂಭಿಸಿ ಓದಲು ಬರೆಯಲು ಕಲಿಸಿ ಸಾಕ್ಷರರನ್ನಾಗಿ ಮಾಡಿದರು. ಕಲಿಕೆ ಮುಗಿದ ನಂತರ ಅಜ್ಜಿ ಮೊಮ್ಮಗಳಿಗೆ ಹರಿವಾಣದಲ್ಲಿ ಹಣ್ಣುಕಾಯಿ ಇಟ್ಟು ದಕ್ಷಿಣೆ ಕೊಟ್ಟು ನಮಸ್ಕಾರ ಮಾಡಿದರಂತೆ!

ಹಿರಿಯ ವಯಸ್ಸಿನ ಅಜ್ಜಿ ತನಗೆ ನಮಸ್ಕಾರ ಮಾಡಲು ಬಂದಾಗ ಹೌಹಾರಿದ ಮೊಮ್ಮಗಳಿಗೆ ಅಜ್ಜಿ ಹೇಳಿದ್ದು: “ನೀನು ನನಗೆ ಅಕ್ಷರ ಕಲಿಸಿದ ವಿದ್ಯಾಸರಸ್ವತಿ ಕಣೇ!”

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 21.1.2016