ಕಮಲದ ಹೂವಿನಂತಿರಲಿ ಬದುಕು
ಹಿಂದಿನ ಕಾಲದಲ್ಲಿ ರಾಜಧಾನಿ ಬೆಂಗಳೂರಿಗೆ ಹಳ್ಳಿಯ ಜನರು ಹೋಗುವುದು ಅಪರೂಪವಾಗಿತ್ತು. ಗ್ರಾಮೀಣ ಜನರು ತಮ್ಮ ಹಳ್ಳಿಗಳಲ್ಲಿ ನಡೆಯುವ ನಾಟಕಗಳ ಪರದೆಗಳಲ್ಲಿಯೇ ವಿಧಾನಸೌಧದ ಭವ್ಯವಾದ ಕಟ್ಟಡದ ಸೀನರಿಯನ್ನು ನೋಡಿ ಅಚ್ಚರಿಪಡುತ್ತಿದ್ದರು. ಈಗ ರಾಜಕೀಯ ಪ್ರಜ್ಞೆ ಬೆಳೆದ ಮೇಲೆ ಬೆಂಗಳೂರಿಗೇ ಏಕೆ ದೇಶದ ರಾಜಧಾನಿ ದೆಹಲಿಗೂ ಹೋಗುವುದು ಸರ್ವೇಸಾಮಾನ್ಯ ಸಂಗತಿಯಾಗಿದೆ. ದೆಹಲಿಗೆ ಹೋಗುವವರಲ್ಲಿ ಪ್ರವಾಸಿಗರಾಗಿ ಹೋಗುವವರೂ ಇದ್ದಾರೆ, ರಾಜಕೀಯ ಕಾರಣಗಳಿಗೆ ಹೋಗುವವರೂ ಇದ್ದಾರೆ. ತಂತಮ್ಮ ಪಕ್ಷದ ವರಿಷ್ಠರನ್ನು ಕಂಡು ಮನವೊಲಿಸಿ ಚುನಾವಣಾ ಟಿಕೆಟ್ ಪಡೆಯುವ ಆಕಾಂಕ್ಷಿಗಳೂ, ‘ನಿಗಮಾಗಮ’ ಮಂಡಳಿಗಳ ಸ್ಥಾನಾಕಾಂಕ್ಷಿಗಳೂ ಇದ್ದಾರೆ. ಹಳ್ಳಿಗಳಲ್ಲಿ ಚಿಟ್ ಫಂಡ್ ಮಾಡಿಕೊಂಡು ಅದರಿಂದ ಬಂದ ಲಾಭಾಂಶದಲ್ಲಿ ಕಾಶೀಯಾತ್ರೆ, ದಿಲ್ಲಿ ಯಾತ್ರೆ ಮಾಡುವವರೂ ಇದ್ದಾರೆ.
ಪ್ರವಾಸಿಗರಾಗಿ ದೆಹಲಿಗೆ ಹೋದವರಿಗೆ ಅತ್ಯಾವಶ್ಯಕವಾಗಿ ನೋಡಬೇಕಾದ ಪ್ರೇಕ್ಷಣೀಯ ಸ್ಥಳಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. ಕುತುಬ್ ಮೀನಾರ್, ಜಂತರ್ ಮಂತರ್, ರಾಷ್ಟ್ರಪತಿ ಭವನ, ಪಾರ್ಲಿಮೆಂಟ್ ಭವನ, ಗಾಂಧಿ ಸಮಾಧಿ ಇತ್ಯಾದಿ. ದೆಹಲಿಯಲ್ಲಿ ಪ್ರಾಚೀನ ಮತ್ತು ಸ್ವತಂತ್ರಭಾರತದ ಸ್ಮಾರಕಗಳಲ್ಲದೆ ಇತ್ತೀಚೆಗೆ ಸ್ಥಾಪಿತಗೊಂಡಿರುವ ಪ್ರಮುಖ ದೇವಾಲಯಗಳಾದ ಲೋಟಸ್ ಟೆಂಪಲ್ ಮತ್ತು ಅಕ್ಷರಧಾಮ ಪ್ರವಾಸಿಗರ ಮತ್ತು ಶ್ರದ್ಧಾಳುಗಳ ಆಕರ್ಷಣೀಯ ಕೇಂದ್ರಗಳಾಗಿವೆ. ಇವೆರಡೂ ದೇವಾಲಯಗಳು ಆಗ್ರಾದ ತಾಜ್ ಮಹಾಲ್ ಮತ್ತು ಪ್ಯಾರಿಸ್ಸಿನ ಐಫೆಲ್ ಟವರ್ಗಿಂತಲೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ವಿಶ್ವಾದ್ಯಂತ ತಮ್ಮತ್ತ ಸೆಳೆದುಕೊಂಡಿವೆ. ಅವುಗಳ ಅದ್ಭುತವಾದ ವಾಸ್ತುಶಿಲ್ಪ ಮತ್ತು ಸುತ್ತ ಇರುವ ಸುಂದರ ಉದ್ಯಾನವನ ಎಂತಹ ನಾಸ್ತಿಕರನ್ನೂ ಆಕರ್ಷಿಸುವ ಮನಮೋಹಕಶಕ್ತಿಯನ್ನು ಹೊಂದಿವೆ.
ಇದೇ ಅಂಕಣದಲ್ಲಿ ಈ ಹಿಂದೆ ಬರೆದಂತೆ ಶ್ರೀ ಎಂ ಎಂಬ ಸಂಕ್ಷಿಪ್ತನಾಮದಿಂದ ವಿಶ್ವವಿಖ್ಯಾತರಾಗಿರುವ ಸಮಾಜ ಸುಧಾರಕ, ಅನುಭಾವಿ ಮಮ್ತಾಜ್ ಆಲಿ ಖಾನ್ ಮತ್ತು ಅವರ ತಂಡದವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಶಾಂತಿ ಹಾಗೂ ಸೌಹಾರ್ದತೆಗಾಗಿ ಕೈಗೊಂಡ "ಭರವಸೆಯ ಕಾಲ್ನಡಿಗೆ" ಕಳೆದ ತಿಂಗಳು ದೆಹಲಿ ತಲುಪಿದಾಗ ಆರು ಸಾವಿರ ಕಿ.ಮೀ ದೂರ ಕ್ರಮಿಸಿತ್ತು. ಆ ಸಂದರ್ಭದಲ್ಲಿ ಸಿರಿಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನಿತರಾಗಿ ಹೋದಾಗ ಒಂದೆಡೆ ವೇದಿಕೆಯ ಮೇಲಿಂದ ಶಾಂತಿ ಸೌಹಾರ್ದತೆಯ ಕಹಳೆ ಮೊಳಗಿದರೆ ಮತ್ತೊಂದೆಡೆ ಮೀಸಲಾತಿಗಾಗಿ ಒತ್ತಾಯಿಸಿ ಜಾಟ್ಸ್ ಸಮುದಾಯ ನಡೆಸುತ್ತಿದ್ದ ಉಗ್ರ ಪ್ರತಿಭಟನೆಯ ಕಾಳ್ಗಿಚ್ಚು ಇಡೀ ದಿಲ್ಲಿಯನ್ನು ಆವರಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಆದರೂ ಶ್ರೀ ಎಂ ಅವರ "ಭರವಸೆಯ ಕಾಲ್ನಡಿಗೆ" ತನ್ನ ದೃಢವಾದ ಹೆಜ್ಜೆಗಳನ್ನು ದೆಹಲಿಯ ರಸ್ತೆಗಳಲ್ಲಿ ಮುಂದುವರಿಸಿತ್ತು. ಮಾರನೆಯ ದಿನ ಬೆಳಗ್ಗೆ ಸಾಂಕೇತಿಕವಾಗಿ ಸ್ವಲ್ಪ ದೂರ ಅವರೊಟ್ಟಿಗೆ ಹೆಜ್ಜೆ ಹಾಕುವಾಗ ಪ್ರಾಸಂಗಿಕವಾಗಿ ಬಹಾಯೀ ಆರಾಧನಾ ಮಂದಿರವಾದ "ಲೋಟಸ್ ಟೆಂಪಲ್" ನೋಡುವ ಸಂದರ್ಭ ಒದಗಿಬಂತು.
ಬಹಾಯೀ ಧರ್ಮದ ಅನುಯಾಯಿಗಳು ವಿಶ್ವಾದ್ಯಂತ ಸುಮಾರು 55 ಲಕ್ಷದಷ್ಟು ಇದ್ದು 190 ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. 19ನೆಯ ಶತಮಾನದಲ್ಲಿ ಬಹಾಉಲ್ಲಾರವರಿಂದ ಸ್ಥಾಪಿತಗೊಂಡ ಈ ಧರ್ಮವು ದೇವರು ಒಬ್ಬನೇ, ಮಾನವ ಜನಾಂಗ ಒಂದೇ, ಸ್ತ್ರೀಪುರುಷರು ಸಮಾನರು ಎಂದು ಪ್ರತಿಪಾದಿಸುತ್ತದೆ. ಪ್ರಾರ್ಥನೆಗೆ ಹೆಚ್ಚು ಒತ್ತುಕೊಡುವ ಈ ಧರ್ಮದಲ್ಲಿ ಯಾವುದೇ ಪುರೋಹಿತ ವರ್ಗ ಇಲ್ಲವೆಂಬುದು ಗಮನಾರ್ಹ. ಕಮಲದ ಹೂವಿನ ಶಿಲ್ಪವಿನ್ಯಾಸವನ್ನು ಹೊಂದಿದ ದೆಹಲಿಯ ಲೋಟಸ್ ಮಂದಿರವು ವಿಶ್ವದಾದ್ಯಂತವಿರುವ ಏಳು ಬಹಾಯಿ ಆರಾಧನಾ ಮಂದಿರಗಳಲ್ಲಿ ವಿನೂತನವಾಗಿದೆ. ಸಾಮಾನ್ಯವಾಗಿ ಕಮಲದ ಹೂವು ಕೆಸರು ಮತ್ತು ನಿಂತ ನೀರಿನಲ್ಲಿ ಪುಷ್ಕಳವಾಗಿ ಬೆಳೆಯುತ್ತದೆ. ಹಾಗಿದ್ದರೂ ಅದು ತನ್ನ ಸುತ್ತಲಿನ ಮಲಿನತೆಯನ್ನು ಅಂಟಿಸಿಕೊಳ್ಳದೆ ನಿರ್ಮಲವಾಗಿ ಪರಿಶುಭ್ರತೆಯಿಂದ ಕೂಡಿರುತ್ತದೆ. ಹಾಗೆಯೇ ಮಾನವ ಚೈತನ್ಯವೂ ಸಹ ಸುತ್ತುಗಟ್ಟಿರುವ ಮತಭೇದಗಳು ಮತ್ತು ಪೂರ್ವಾಗ್ರಹಗಳೆಂಬ ಕೆಸರಿನಿಂದ ಮೇಲೆದ್ದು ಕಮಲದ ಹೂವಿನಂತೆ ಪರಿಶುದ್ಧವಾಗಿ ದೇವರ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಬೇಕೆಂಬ ಆಶಯವನ್ನು ಕಮಲಾಕಾರವುಳ್ಳ ಈ ಮಂದಿರದ ವಿಶಿಷ್ಟವಾದ ವಿನ್ಯಾಸವು ಸೂಚಿಸುತ್ತದೆ. ಪಾದಯಾತ್ರೆ ಆರಂಭಗೊಂಡ ಬೆಳಿಗ್ಗೆ ಈ ದೇವಾಲಯದೊಳಗೆ ಪ್ರವೇಶಿಸಿದಾಗ ವಿದೇಶೀ ವೃದ್ಧ ಮಹಿಳೆಯೊಬ್ಬಳು ಕೈಯಲ್ಲಿ ಪ್ರಾರ್ಥನಾ ಪುಸ್ತಕವನ್ನು ಹಿಡಿದು ಅಂತರ್ಮುಖಿಯಾಗಿ ಧ್ಯಾನಮಗ್ನಳಾಗಿದ್ದಳು. ಬಂದು ಹೋಗುವವರ ಯಾರ ಪರಿವೆಯೂ ಆಕೆಗೆ ಇರಲಿಲ್ಲ!
ಭಾರತೀಯ ಧಾರ್ಮಿಕ ಹಾಗೂ ತಾತ್ವಿಕ ವಿಚಾರಗಳಿಗೆ ಬಂದರೆ ಅರಳಿದ ಕಮಲಕ್ಕೂ ಭಾರತೀಯ ಧಾರ್ಮಿಕ ವಿಚಾರಗಳಿಗೂ ಹತ್ತಿರದ ಸಂಬಂಧವಿದೆ. ಭಾರತೀಯರ ಧಾರ್ಮಿಕ ನಂಬುಗೆಗಳಲ್ಲಿ ಕಮಲದ ಹೂವಿನ ಉಪಮೆ, ಉಪಮಾನ ಅಡಿಗಡಿಗೆ ಸಿಗುತ್ತವೆ. ಉಪನಿಷತ್ ನಿಂದ ಆರಂಭಗೊಂಡ ಇದು ಇಂದಿಗೂ ಮುಂದುವರಿಯುತ್ತಿದೆ. ದೇವರು ಹೃದಯದಲ್ಲಿದ್ದಾನೆ ಎಂದು ಹೇಳುವಾಗ ಹೃದಯ ಕಮಲದಲ್ಲಿ ನೆಲೆಸಿದ್ದಾನೆ ಎಂದು ಹೇಳುತ್ತಾರೆ. ಗುರುವಿನಿಂದ ಅನುಗ್ರಹ ಪಡೆದ ಶಿಷ್ಯನನ್ನು ಶ್ರೀಗುರುವಿನ ‘ಕರಕಮಲ ಸಂಜಾತ" ಎಂದು ಬಣ್ಣಿಸುತ್ತಾರೆ. ಬ್ರಹ್ಮನೂ ಅಂಬುಜೋದ್ಭವ! ದೇವರಿಗೆ, ಗುರುಗಳಿಗೆ ಭಕ್ತಿಯಿಂದ ನಮಸ್ಕರಿಸುವಾಗ ಶ್ರದ್ಧಾಳುಗಳಿಗೆ ಕಾಣಿಸುವುದು ಬರೀ ಪಾದವಲ್ಲ ಪವಿತ್ರವಾದ ಪಾದಕಮಲ! ಸಾಹಿತ್ಯದಲ್ಲಿ ಕವಿಗಳು ಸುಂದರವಾದ ಕಣ್ಣುಗಳನ್ನು ಕಮಲದ ಹೂವಿಗೆ ಹೋಲಿಕೆ ಮಾಡುತ್ತಾರೆ. ದಾಸರ ಕೀರ್ತನೆಗಳಲ್ಲಿ ಕಮಲದ ಹೂವು ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಿದೆ. ಹರಿಪಾರಮ್ಯದ ಕೀರ್ತನೆಗಳಲ್ಲಿ ದೈವವನ್ನು ಅವರು ಕೊಂಡಾಡುವುದು ಕಮಲನಾಭ, ಅಂಬುಜನಾಭ, ನೀರಜಾಕ್ಷ, ಪಂಕಜನಾಭ ಪುರಂದರ ವಿಠಲ, ಬಿಸಜಾಕ್ಷ ಪುರಂದರ ವಿಠಲ. ಹೀಗೆ ವಿಷ್ಣುವಿನ ಸುಂದರವಾದ ಕಣ್ಣುಗಳನ್ನು ಕಮಲದ ಹೂವಿಗೆ ಹೋಲಿಸಿ "ಕಮಲ ನಯನ" ಎಂದು ಬಣ್ಣಿಸುತ್ತಾರೆ. ಅಕ್ಕನ ವಚನದಲ್ಲಿ "ಗೋವಿಂದನ ನಯನವು ಅವನ ಉಂಗುಟದ ಮೇಲಿಪ್ಪುದು" ಎಂಬ ಉಲ್ಲೇಖವಿದೆ. ಶಿವಸಹಸ್ರನಾಮಾವಳಿಯನ್ನು ಪಠಿಸುತ್ತಾ ಶಿವನ ಅರ್ಚನೆಗೆ ತೊಡಗಿದಾಗ ಅರ್ಚನೆಗೆಂದು ಇಟ್ಟುಕೊಂಡಿದ್ದ ಕಮಲದ ಹೂಗಳಲ್ಲಿ ಒಂದು ಹೂವು ಕಡಿಮೆ ಬಿದ್ದುದನ್ನು ಕಂಡು "ಕಮಲನಯನ" ಎನಿಸಿದ ವಿಷ್ಣುವು ತನ್ನ ಕಣ್ಣನ್ನೇ ಕಿತ್ತು ಶಿವನ ಪಾದಕ್ಕೆ ಅರ್ಪಿಸಿದ ಎಂದು ಪುರಾಣದ ಕಥೆ.
ಬಸವಣ್ಣನವರ ವಚನಗಳಲ್ಲಿ ಅನೇಕ ಕಡೆ ಕಮಲದ ಹೂವಿನ ಪ್ರಸ್ತಾಪ ಬರುತ್ತದೆ. "ಅಂಬುಜಕೆ ಭಾನುವಿನ ಉದಯದ ಚಿಂತೆ", "ಎನ್ನ ಹೃದಯಕಮಲದಲ್ಲಿ ನಿಮ್ಮ ಕಂಡೆನು", "ಎನ್ನ ಹೃದಯಕಮಲದಲ್ಲಿ ಬೆಳಗಿ ತೋರುವ ಪರಂಜ್ಯೋತಿ ನೀನು", "ಕೂಡಲಸಂಗಮದೇವಾ, ನಿಮ್ಮ ಚರಣಕಮಲದೊಳಗಾನು ತುಂಬಿ". ಮರದ ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಜಿಗಿಯುವ ಮಂಗನಂತೆ ಚಂಚಲವಾದ ಮನಸ್ಸನ್ನು "ಕೂಡಲ ಸಂಗಮದೇವಾ, ನಿಮ್ಮ ಚರಣಕಮಲದೊಳಗೆ ಭ್ರಮರನಾಗಿರಿಸು ನಿಮ್ಮ ಧರ್ಮ" ಎಂದು ಅವರು ದೇವರನ್ನು ಪ್ರಾರ್ಥಿಸಿದ್ದಾರೆ.
ಭಗವದ್ಗೀತೆಯೂ ಸಹ ಕಮಲದ ಹೂವಿನ ಉದಾಹರಣೆಯನ್ನು ಕೊಟ್ಟು ಬದುಕಿಗೆ ಒಂದು ದೊಡ್ಡ ಮಾರ್ಗದರ್ಶನವನ್ನೇ ಮಾಡಿದೆ. ಕಮಲದ ಹೂವಿನ ಎಲೆಯ ಮೇಲೆ ಬೀಳುವ ನೀರಿನ ಹನಿ ಎಲೆಯ ಮೇಲಿದ್ದರೂ ಎಲೆಗೆ ಅಂಟಿಕೊಳ್ಳುವುದಿಲ್ಲ. ಹಾಗೆಯೇ ಮನುಷ್ಯನು ಈ ಸಂಸಾರದಲ್ಲಿದ್ದೂ ಮೋಹಕ್ಕೆ ಒಳಗಾಗದೆ ತನ್ನ ಕರ್ತವ್ಯಗಳನ್ನು ಮಾಡುತ್ತಾ ದೇವರನ್ನು ಆರಾಧಿಸಿ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಪ್ರಪಂಚ ಎನ್ನುವ ವಿಶಾಲವಾದ ಎಲೆಯ ಮೇಲೆ ಇದ್ದೂ ಅದಕ್ಕೆ ಅಂಟಿಕೊಳ್ಳದಂತಿರಬೇಕು ಎಂಬ ಮಹೋನ್ನತ ಆಶಯವನ್ನು ಬೋಧಿಸುವ ಭಗವದ್ಗೀತೆಯ ಜೀವನಾದರ್ಶ:
“ಪದ್ಮಪತ್ರಮಿವಾಂಭಸಾ”
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 31.3.2016