ತುಲಾಭಾರ: ಭಕ್ತಿಯನ್ನು ತೂಗಲು ಸಾಧ್ಯವೇ?
ಏಪ್ರಿಲ್-ಮೇ ತಿಂಗಳು ಬಂತೆಂದರೆ ಹಳಿಗಳಲ್ಲಿ ಜಾತ್ರಾ ಸಂಭ್ರಮ. ಸುಡುಬಿಸಿಲಿನ ಮಧ್ಯೆಯೂ ಹಳ್ಳಿಯ ಜನರು ಊರ ದೇವರನ್ನು ತೇರಿನ ಮೇಲೆ ಕೂರಿಸಿ ಶ್ರದ್ಧಾಭಕ್ತಿಯಿಂದ ನಾಮುಂದು ತಾಮುಂದು ಎಂದು ಮಿಣಿಗೆ ಕೈಹಚ್ಚಿ ತೇರನೆಳೆಯುತ್ತಾರೆ. ತೇರು ಹರಿದ ಮೇಲೆ ಅದನ್ನು ಅಲಂಕರಿಸಲು ಬಳಸಿದ ಬಾವುಟ, ಬಾಳೆಯ ಗೊನೆ ಇತ್ಯಾದಿಗಳನ್ನು ಹರಾಜು ಹಾಕಿ ದೇವರ ಕಾರ್ಯಕ್ಕೆ ನಿಧಿಸಂಗ್ರಹ ಮಾಡುತ್ತಾರೆ. ಯಾವ ಊರಲ್ಲಿ ತೇರು ಹರಿಯುವುದಿಲ್ಲವೋ ಆ ಊರಲ್ಲಿ ಯಾವುದೋ ಕಾರಣಕ್ಕಾಗಿ ವೈಮನಸ್ಸು ಉಂಟಾಗಿದೆಯೆಂದು ನಿಃಸಂಶಯವಾಗಿ ಹೇಳಬಹುದು. ಕೆಲವೊಮ್ಮೆ ತೇರು ಹರಿಸುವುದೇ ಜನರ ವೈಮನಸ್ಸಿಗೆ ಕಾರಣವಾಗಲೂಬಹುದು. ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅವೆಲ್ಲವನ್ನೂ ಮರೆತು ಒಂದುಗೂಡಿ ಜಾತ್ರೆ ಮಾಡುವ ಶ್ರದ್ಧಾಳು ಜನರೂ ಇದ್ದಾರೆ. "ಜನ ಮರುಳೋ ಜಾತ್ರೆ ಮರುಳೋ" ಎಂಬ ಗಾದೆ ಮಾತಿಗೆ ಅಪವಾದವೆಂಬಂತೆ ನಮ್ಮ ಮಠದ ನಿಕಟ ಸಂಪರ್ಕವುಳ್ಳ ಹಳ್ಳಿಗಳಲ್ಲಿ "ಸರ್ವಶರಣ ಸಮ್ಮೇಳನ"ಗಳು ಅಚ್ಚುಕಟ್ಟಾಗಿ ನಡೆಯುತ್ತಾ ಬಂದಿವೆ. ಜನರು ಸದ್ದುಗದ್ದಲವಿಲ್ಲದೆ ಶಿಸ್ತಾಗಿ ಕುಳಿತು ವಿಚಾರಪೂರ್ಣ ಮಾತುಗಳನ್ನು ಕೇಳುವ ಪ್ರವೃತ್ತಿಯನ್ನು ಬೆಳೆಸಿದವರು ನಮ್ಮ ಲಿಂಗೈಕ್ಯ ಗುರುವರ್ಯರು.
ಇತ್ತೀಚೆಗೆ ಅಂತಹ ಒಂದು ಜಾತ್ರೆಯ ಕಾರ್ಯಕ್ರಮಕ್ಕೆ ಬ್ಯಾಡಗಿ ತಾಲ್ಲೂಕು ಆಣೂರು ಗ್ರಾಮಕ್ಕೆ ಹೋದಾಗ ನಮ್ಮ ಸತ್ವಪರೀಕ್ಷೆಯನ್ನು ಮಾಡುವ ಒಂದು ಚಿಕ್ಕ ಘಟನೆ ಸಂಭವಿಸಿತು. ವೇದಿಕೆಯ ಮೇಲೆ ಕುಳಿತು ಸುತ್ತ ಕಣ್ಣುಹಾಯಿಸಿದಾಗ ಕಂಡದ್ದು ವೇದಿಕೆಯ ಬಲಭಾಗದಲ್ಲಿ ಸುಂದರವಾಗಿ ಅಲಂಕೃತವಾದ ಒಂದು ತೂಗುವ ತಕ್ಕಡಿ. ಆತ್ಮೀಯ ಶಿಷ್ಯರೊಬ್ಬರು ನಮಗೆ ಗೊತ್ತಿಲ್ಲದಂತೆ ಭಕ್ತಿಯಿಂದ ನಮ್ಮ "ತುಲಾಭಾರ’ದ ವ್ಯವಸ್ಥೆ ಮಾಡಿದ್ದರು. ಹೀಗೆ ಬಹಿರಂಗವಾಗಿ ತೂಕಮಾಡಿಸಿಕೊಂಡು ಕಾಣಿಕೆ ಪಡೆಯುವುದು ನಮಗೆ ಇಷ್ಟವಾಗಲಿಲ್ಲ. ನಿರಾಕರಿಸಿ ಶಿಷ್ಯರ ಮನಸ್ಸಿಗೆ ನೋವುಂಟುಮಾಡುವುದೂ ಸರಿಕಾಣಲಿಲ್ಲ. ಈ ತೊಳಲಾಟದಲ್ಲಿ "ಭಕ್ತಿಕಂಪಿತ ನಮ್ಮ ಕೂಡಲ ಸಂಗಮದೇವ" ಎಂಬ ಬಸವಣ್ಣನವರ ವಚನದ ನುಡಿಗಟ್ಟು ನಮ್ಮ ಸ್ವಾನುಭವಕ್ಕೆ ಬಂದಿತು. ಸಭೆಯ ಕಾರ್ಯಕ್ರಮಗಳು ನಡೆಯುತ್ತಿದ್ದಂತೆ ಮನಸ್ಸಿನೊಳಗೆ ವಿಚಾರಗಳು ತೂಗುಯ್ಯಾಲೆ ನಡೆಸಿದವು. ಆಗ ನೆನಪಿಗೆ ಬಂದ ಬಸವಣ್ಣನವರ ವಚನ:
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ
ಹರದ ಕುಳ್ಳಿರ್ದ ನಮ್ಮ ಮಹದೇವಸೆಟ್ಟಿ
ಒಮ್ಮನವಾದರೆ ಒಡನೆ ನುಡಿವನು,
ಇಮ್ಮನವಾದರೆ ನುಡಿಯನು
ಕಾಣಿಯ ಸೋಲ, ಅದ್ದಗಾಣಿಯ ಗೆಲ್ಲ
ಜಾಣ ನೋಡವ್ವಾ ನಮ್ಮ ಕೂಡಲ ಸಂಗಮದೇವಾ!
ದೇವರೂ ಒಬ್ಬ ಹರದ (ವ್ಯಾಪಾರಿ). ಅವನು ಭಕ್ತರ ಭಕ್ತಿಯನ್ನು ತೂಗಿ ನೋಡುತ್ತಾನೆ. ಅವರವರ ಭಕ್ತಿಗೆ ಅನುಸಾರವಾಗಿ ಒಂದಿನಿತೂ ಸೋಲದೆ, ಮೋಸಮಾಡದೆ ಕರಾರುವಕ್ಕಾಗಿ ಅನುಗ್ರಹವನ್ನು ನೀಡುತ್ತಾನೆ. ಭಕ್ತನಿಗೆ ದೇವರ ಮೇಲೆ ಗಾಢವಾದ ಅಚಲ ವಿಶ್ವಾಸವಿದ್ದರೆ ಅನುಗ್ರಹ ದೊರೆಯುತ್ತದೆ, ಇಲ್ಲವಾದರೆ ಇಲ್ಲ. ಭಕ್ತನ ಭಕ್ತಿಗನುಗುಣವಾದ, ಅರ್ಹವಾದಷ್ಟೇ ಅನುಗ್ರಹ ಮಾತ್ರ ಸಿಗುತ್ತದೆ. ಒಂದು ಕಾಣಿ ಹೆಣ್ಣೂ ಅಲ್ಲ; ಅರ್ಧ ಕಾಣಿ ಕಡಿಮೆಯೂ ಅಲ್ಲ.
ವ್ಯಾಪಾರದಲ್ಲಿ ಇಬ್ಬರು ಇರುತ್ತಾರೆ: ಒಬ್ಬ ವ್ಯಾಪಾರಿ ಮತ್ತೊಬ್ಬ ಗ್ರಾಹಕ. ವ್ಯಾಪಾರಿಯು ತಕ್ಕಡಿಯ ಒಂದು ತಟ್ಟೆಯಲ್ಲಿ ತೂಕದ ಬೊಟ್ಟನ್ನು ಇಟ್ಟು ಇನ್ನೊಂದು ತಟ್ಟೆಯಲ್ಲಿ ಗ್ರಾಹಕ ಬಯಸಿದ ಪದಾರ್ಥವನ್ನಿಟ್ಟು ತೂಗಿ ಕೊಡುತ್ತಾನೆ. ಅದಕ್ಕೆ ನಿಗದಿಪಡಿಸಿದ ಹಣವನ್ನು ಗ್ರಾಹಕ ವ್ಯಾಪಾರಿಗೆ ತೆತ್ತು ಆ ಬೆಲೆಗೆ ತಕ್ಕುದಾದ ತೂಕದ ಪದಾರ್ಥವನ್ನು ಪಡೆಯುತ್ತಾನೆ. ಈ "ತುಲಾಭಾರ"ದಲ್ಲಿ ಗುರುಗಳೇ ತೂಕದ ಬೊಟ್ಟು". ಹಾಗಾದರೆ ತೂಗುವ ವಸ್ತು ಯಾವುದು? ಗ್ರಾಹಕ ಯಾರು? ವ್ಯಾಪಾರಿ ಯಾರು? ಇಲ್ಲಿ ಗ್ರಾಹಕ ಬೇರೆ ಯಾರೂ ಅಲ್ಲ, ಭಕ್ತನೇ ಎಂಬುದು ನಿರ್ವಿವಾದ. ಹಾಗಾದರೆ ಅವನು ಪಡೆಯಲುಬಯಸುವುದು ಏನನ್ನು? ಗುರುಗಳ ಆಶೀರ್ವಾದವನ್ನು! ಏನನ್ನು ಕೊಟ್ಟು? ಗುರುಗಳ ತೂಕದಷ್ಟು ನಾಣ್ಯಗಳನ್ನು ದಾನವಾಗಿ ಕೊಟ್ಟು! ತೂಕದ ಬೊಟ್ಟಾಗಿ ಕುಳಿತ ಗುರುಗಳೇ ಭಕ್ತ ಕೊಟ್ಟ ಹಣವನ್ನು ಪಡೆಯುವುದಾದರೆ ಗುರುಗಳು ತಮ್ಮ ಆಶೀರ್ವಾದವನ್ನು ಮಾರಾಟದ ಸರಕನ್ನಾಗಿ ಮಾಡಿಕೊಂಡ ವ್ಯಾಪಾರಿಗಳು ಆಗುವುದಿಲ್ಲವೇ? ಬಹವೋ ಗುರವ:ಸಂತಿ ಶಿಷ್ಯಸ್ಯ ವಿತ್ತಾಪಹಾರಕ: ಎಂವ ಸೂಕ್ತಿ ಈ ಕಾರಣದಿಂದಲೇ ಬಂದಿರಬೇಕು ಗುರುಗಳಾದವರು ಭಕ್ತರ ಭಕ್ತಿಯನ್ನು ಅವರು ಕೊಡುವ ಕಾಣಿಕೆಯಿಂದ ತೂಗಿ ನೋಡಬಾರದು. ಶಿಷ್ಯರ ಭಕ್ತಿಯ ತೂಕ ಗುರುಗಳ ಶರೀರದ ತೂಕಕ್ಕಿಂತ ನಿಸ್ಸಂಶಯವಾಗಿ ಹೆಚ್ಚು ಎಂದು ಸಭೆಯಲ್ಲಿಹೇಳಿದಾಗ ಆ ಶಿಷ್ಯರು ನಮ್ಮನ್ನು ಒತ್ತಾಯಿಸದೆ ತಕ್ಕಡಿಯನ್ನು ಕಾಣದಂತೆ ಪಕ್ಕಕ್ಕೆ ಸರಿಸಿದರು.
ಶರೀರದ ತೂಕ ಬೇರೆ, ವ್ಯಕ್ತಿತ್ವದ ತೂಕ ಬೇರೆ. ವ್ಯಕ್ತಿಯು ಶರೀರದ ತೂಕ ಕಡಿಮೆ ಮಾಡಿಕೊಂಡಷ್ಟೂ ತನ್ನ ಆರೋಗ್ಯಕ್ಕೆ ಒಳ್ಳೆಯದು; ವ್ಯಕ್ತಿತ್ವದ ತೂಕ ಹೆಚ್ಚು ಮಾಡಿಕೊಂಡಷ್ಟೂ ಸಮಾಜದ ಆರೋಗ್ಯಕ್ಕೆ ಒಳ್ಳೆಯದು. ಸಾಂಪ್ರದಾಯಿಕವಾಗಿ ನಡೆಯುತ್ತಾ ಬಂದಿರುವ ಈ ತುಲಾಭಾರದಲ್ಲಿ ಭಕ್ತರು ತಾವೇ ತೂಕದ ಬೊಟ್ಟಾಗಿ ತಮ್ಮಷ್ಟೇ ತೂಕದ ವಸ್ತುಗಳನ್ನು- ಶ್ರೀಮಂತರಾದರೆ ಬಂಗಾರ, ಬೆಳ್ಳಿ; ಬೇರೆಯವರಾದರೆ ಬೇಳೆ, ಬೆಲ್ಲ, ಅಕ್ಕಿ, ನಾಣ್ಯಗಳನ್ನು - ಹರಕೆಯಾಗಿ ಅರ್ಪಿಸುತ್ತಾರೆ. ಭಕ್ತಿಯ ಸ್ತರದಲ್ಲಿ ನಡೆಯುವ ಈ ತುಲಾಭಾರದಲ್ಲಿ ಭಕ್ತನು ತನ್ನನ್ನೇ ದೇವರಿಗೆ ಅರ್ಪಿಸಿಕೊಳ್ಳಬೇಕೆಂಬ ಸಾಂಕೇತಿಕ ಅರ್ಥವಿದೆ ಎಂಬುದನ್ನು ಮನಗಾಣಬೇಕು. ಅಂತಹ ಉಲ್ಲೇಖ ಮಹಾಭಾರತದಲ್ಲಿ ಬರುತ್ತದೆ. ಶಿಬಿ ಎಂಬ ಚಕ್ರವರ್ತಿ ಇದ್ದ ಮೊರೆಹೊಕ್ಕವರನ್ನು ಕಾಪಾಡಲು ಯಾವ ತ್ಯಾಗಕ್ಕೂ ಅವನು ಸಿದ್ಧನಾಗಿರುತ್ತಿದ್ದ ಅವನನ್ನು ಪರೀಕ್ಷಿಸಲು ಇಂದ್ರ ಮತ್ತು ಅಗ್ನಿ ಬರುತ್ತಾರೆ. ಒಬ್ಬರು ಪಾರಿವಾಳದ ರೂಪ ಧರಿಸಿ, ಇನ್ನೊಬ್ಬರು ಗಿಡುಗ (ಹದ್ದಿನ) ನ ರೂಪ ಧರಿಸಿ, ಪಾರಿವಾಳವು ಗಿಡುಗನಿಂದ ತನ್ನನ್ನು ಕಾಪಾಡಬೇಕೆಂದು ಶಿಬಿಯ ಮೊರೆ ಹೋಗುತ್ತದೆ. ಶಿಬಿ ರಕ್ಷಣೆ ನೀಡುವುದಾಗಿ ಮಾತು ಕೊಡುತ್ತಾನೆ. ಪಾರಿವಾಳದ ಬದಲಿಗೆ ಏನು ಬೇಕಾದರೂ ಕೇಳುವಂತೆ ಗಿಡುಗಕ್ಕೆ ಶಿಬಿ ಹೇಳುತ್ತಾನೆ. ಪಾರಿವಾಳದ ತೂಕದಷ್ಟು ನಿನ್ನ ದೇಹದ ಮಾಂಸವನ್ನು ಕೊಡು ಎಂದು ಗಿಡುಗ ಕೇಳುತ್ತದೆ. ಶಿಬಿಯು ತನ್ನ ದೇಹವನ್ನು ಸ್ವಲ್ಪ ಸ್ವಲ್ಪವಾಗಿ ಕತ್ತರಿಸಿ ತಕ್ಕಡಿಯಲ್ಲಿಡುತ್ತಾ ಹೋಗುತ್ತಾನೆ. ಆದರೆ ತಟ್ಟೆಯು ಮೇಲೇಳುವುದೇ ಇಲ್ಲ. ಕೊನೆಗೆ ಶಿಬಿಯೇ ತಟ್ಟೆಯಲ್ಲಿ ನಿಲ್ಲುತ್ತಾನೆ. ಆಗ ತಟ್ಟೆಗಳು ಸಮವಾಗುತ್ತವೆ!
ಈ ತುಲಾಭಾರದ ಇನ್ನೊಂದು ಕಥೆ ಇದೆ: ರುಕ್ಮಿಣಿ ಮತ್ತು ಸತ್ಯಭಾಮೆ ಇಬ್ಬರೂ ಕೃಷ್ಣನ ಪತ್ನಿಯರು. ರುಕ್ಮಿಣಿ ಸರಳ ಹಾಗೂ ಮುಗ್ಧ ಹೆಣ್ಣು. ಆಕೆಯದು ಪರಿಶುದ್ಧವಾದ ಭಕ್ತಿ ಮತ್ತು ಪ್ರೇಮ. ಸತ್ಯಭಾಮೆ ಅಂದಗಾತಿ, ಜಂಭಗಾತಿ. ಹೇಗಾದರೂ ಮಾಡಿ ಕೃಷ್ಣನನ್ನು ತಾನೇ ಸಂಪೂರ್ಣವಾಗಿ ಪಡೆಯಬೇಕೆಂಬ ಹಟ. ಹೀಗಿರುವಾಗ ದೇವರ್ಷಿ ನಾರದ ಒಂದು ದಿನ ಸತ್ಯಭಾಮೆಯ ಬಳಿಗೆ ಪಾಠ ಕಲಿಸಲೆಂದೇ ಬರುತ್ತಾನೆ. ಕೃಷ್ಣನನ್ನು ತನ್ನತ್ತ ಆಕರ್ಷಿಸುವ ಉಪಾಯವನ್ನು ಹೇಳಿಕೊಡುತ್ತಾನೆ. ಉಪಾಯವೇನೆಂದರೆ ಕೃಷ್ಣನನ್ನು ದಾಸನನ್ನಾಗಿ ತನಗೆ ಅರ್ಪಿಸುವುದು. ನಂತರ ಬಂಗಾರದಲ್ಲಿ ದಾಸ(ಕೃಷ್ಣ)ನ ತುಲಾಭಾರ ಮಾಡಿ ಆ ಬಂಗಾರವನ್ನು ತೆಗೆದುಕೊಂಡು ಕೃಷ್ಣನನ್ನು ವಾಪಾಸು ಪಡೆಯುವುದು. ಹೇಗಿದ್ದರೂ ಸತ್ಯಭಾಮೆಯ ಬಳಿ ಹೇರಳವಾಗಿ ಬಂಗಾರ, ವಜ್ರ, ವೈಢೂರ್ಯದ ಆಭರಣಗಳು ಇದ್ದವಲ್ಲ! ಪಾಪ, ರುಕ್ಮಿಣಿಗೆ ಕೃಷ್ಣನನ್ನು ತೂಗುವಷ್ಟು ಆಭರಣಗಳು ಎಲ್ಲಿಂದ ಬರಬೇಕು? ಹೀಗೆ ಕೃಷ್ಣನನ್ನು ಕೊಂಡುಕೊಂಡರೆ ದಾಸನಾದ ಕೃಷ್ಣ ಹೇಳಿದಂತೆ ಕೇಳಿಕೊಂಡು ಸತ್ಯಭಾಮೆಯ ಹತ್ತಿರ ಇರಲೇಬೇಕಾಗುತ್ತದೆ. ಸತ್ಯಭಾಮೆಯ ಆಟಕ್ಕೆ ಕೃಷ್ಣನೂ ಒಪ್ಪಿಕೊಳ್ಳುತ್ತಾನೆ. ಆದರೆ ಸತ್ಯಭಾಮೆಯ ರಾಶಿ ರಾಶಿ ಆಭರಣಗಳು ಕೃಷ್ಣನ ತೂಕಕ್ಕೆ ಏರಲೇ ಇಲ್ಲ! ಅವನ ಇತರೆ ಪತ್ನಿಯರೂ ತಂತಮ್ಮ ಒಡವೆಗಳನ್ನು ಪೇರಿಸಿದರೂ ತಕ್ಕಡಿ ಮೇಲೇಳಲಿಲ್ಲ.ಸೋಲಿನ ಅವಮಾನದಿಂದ ನತಮಸ್ತಕಳಾಗಿ ಹನಿಗಣ್ಣಾಗಿ ನಿಂತ ಸತ್ಯಭಾಮೆಗೆ ಕೊನೆಗೆ ಕೃಷ್ಣನೇ ಪರಿಹಾರವೆಂಬಂತೆ ಹೇಳುತ್ತಾನೆ: “ರುಕ್ಮಿಣಿಯನ್ನು ಕೇಳಿ ನೋಡು, ಅವಳೇ ಇದಕ್ಕೆ ಪರಿಹಾರ ನೀಡಬಹುದು!” ತನ್ನ ಅಹಂಕಾರ, ಜಂಭವನ್ನೆಲ್ಲಾ ಬದಿಗಿಟ್ಟು ಅವಳು ರುಕ್ಮಿಣಿಯ ಸಹಾಯ ಬೇಡುತ್ತಾಳೆ. ರುಕ್ಮಿಣಿ ಯಾವ ಬಂಗಾರದ ಒಡವೆಯನ್ನೂ ಇಡುವ ಗೋಜಿಗೆ ಹೋಗಲಿಲ್ಲ. ಒಂದೇ ಒಂದು ತುಳಸೀದಳವನ್ನು ಪರಮಾತ್ಮನನ್ನು ನೆನೆದು ತಟ್ಟೆಯಲ್ಲಿ ಇಡುತ್ತಾಳೆ. ಪವಾಡವೆಂಬಂತೆ ತಕ್ಕಡಿ ಸಮವಾಗುತ್ತದೆ. ಪರಡಿಯಲ್ಲಿರುವ ಎಲ್ಲ ಆಭರಣಗಳನ್ನು ತೆಗೆಯಲು ಕೃಷ್ಣ ಹೇಳುತ್ತಾನೆ. ಎಲ್ಲಾ ಆಭರಣಗಳನ್ನು ತೆಗೆದರೂ ಒಂದೇ ತುಳಸೀದಳ ಕೃಷ್ಣನ ಸಮಕ್ಕೆ ತೂಗುತ್ತದೆ. ಸತ್ಯಭಾಮೆಗೆ ಬುದ್ದಿ ಬರುತ್ತದೆ.
ಪರಮಾತ್ಮನನ್ನು ಬೆಳ್ಳಿ, ಬಂಗಾರದಿಂದ ಒಲಿಸಲು ಸಾಧ್ಯವಿಲ್ಲ; ಪರಿಶುದ್ಧವಾದ ಭಕ್ತಿಯಿಂದ ಮಾತ್ರ ಸಾಧ್ಯ!
“ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತಾ ಪ್ರಯಚ್ಛತಿ!”
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 14.4.2016