ಪ್ರಜೆಯ ಪದತಲದಲ್ಲಿ ರಾಜನ ಮಕುಟ!
ಹಿಮಾಲಯದಲ್ಲಿ ಆಧ್ಯಾತ್ಮ ಸಾಧನೆಗಾಗಿ ಗುರುವನ್ನು ಅರಸುತ್ತಾ ಪರ್ಯಟನೆ ಮಾಡುತ್ತಿದ್ದ ಸಾಧಕನೊಬ್ಬ ಸಂಜೆಯ ಚಳಿಯಲ್ಲಿ ಕರ್ಣಪ್ರಯಾಗವೆಂಬ ಪುಟ್ಟ ಪಟ್ಟಣವನ್ನು ತಲುಪಿದ. ಹೊರವಲಯದಲ್ಲಿ ಹರಿಯುತ್ತಿದ್ದ ನದಿಯ ತೀರದಲ್ಲಿ ಒಂದು ಶಿವದೇವಾಲಯ. ಆ ರಾತ್ರಿ ಅಲ್ಲಿ ತಂಗಲು ದೇಗುಲದ ಅರ್ಚಕ ಅವಕಾಶ ಮಾಡಿಕೊಟ್ಟ; ತಿನ್ನಲು ಎರಡು ಬಾಳೆಹಣ್ಣು ಮತ್ತು ಒಂದು ಚೂರು ಬೆಲ್ಲವನ್ನು ಕೊಟ್ಟು ಊರಿಗೆ ಹೋದ. ತುಂಬಾ ಹಸಿದಿದ್ದ ಸಾಧಕ ಬಾಳೆಹಣ್ಣು ಬೆಲ್ಲವನ್ನು ಮೆಲ್ಲುತ್ತಿರುವಾಗ ಹೊರಗಿನಿಂದ ಒಂದು ದನಿ ಕೇಳಿಸಿತು: “ರಾಮ್ ರಾಮ್ ಮಹರಾಜ್”! ಬಾಗಿಲಲ್ಲಿ ಬಿಳಿಯ ಕುರ್ತಾ, ಪೈಜಾಮಾ ಮತ್ತು ಟೊಪ್ಪಿಗೆ ಧರಿಸಿದ್ದ ಒಬ್ಬ ಕಪ್ಪನೆಯ ವ್ಯಕ್ತಿ ಕೈಜೋಡಿಸಿ ನಿಂತಿದ್ದ. ಯಾರೆಂದು ವಿಚಾರಿಸಿದಾಗ ಆತ ಹೇಳಿದ: “ನಾನು ರಾಮಪ್ರಸಾದ್, ಈ ಪಟ್ಟಣದಲ್ಲಿರುವ ಚಮ್ಮಾರ. ನಮ್ಮ ಮನೆಗೆ ಸಾಧುಗಳೊಬ್ಬರು ಬಂದು ಪ್ರಸಾದ ಸ್ವೀಕರಿಸುವರೆಂದು ನಿನ್ನೆ ನನ್ನ ಹೆಂಡತಿಗೆ ಕನಸು ಬಿದ್ದಿತ್ತು. ನಾನೊಬ್ಬ ಅಸ್ಪಶ್ಯ, ಈ ದೇವಾಲಯದೊಳಗೆ ಬರುವಂತಿಲ್ಲ. ಆದರೆ ನೀವಿಲ್ಲಿ ಒಳಬಂದದ್ದು, ಆ ಅರ್ಚಕರು ಹೊರಹೋದದ್ದನ್ನು ನೋಡಿ ಹೇಗೋ ಧೈರ್ಯ ಮಾಡಿ ಒಳಗೆ ಕಾಲಿಟ್ಟೆ, ಮಹಾರಾಜ್! ನನ್ನ ಹೆಂಡತಿ ಲುಚಿ, ದಾಲ್ ಮತ್ತು ಹಲ್ವಾ ತಯಾರಿಸಿ ತಾನು ಕನಸಿನಲ್ಲಿ ಕಂಡ ಪುಣ್ಯಾತ್ಮನಿಗಾಗಿ ಕಾಯುತ್ತಿದ್ದಾಳೆ. ನಿಮ್ಮನ್ನು ಮನೆಗೆ ಕರೆಯುವುದು ಅತಿಯಾಗುತ್ತದೇನೋ! ಇಲ್ಲಿಯೇ ನಿಮ್ಮ ಊಟಕ್ಕೆ ತಂದುಕೊಡಬಹುದೇ”? ತುಂಬಾ ಗದ್ಗದಿತನಾಗಿ ನಿಂತಿದ್ದ ಆತನನ್ನು ನೋಡಿ ಆ ಸಾಧು ನಿನ್ನ ಮನೆಗೆ ಬರುತ್ತೇನೆಂದು ಹೇಳಿದಾಗ ಆತ ತನ್ನ ಕಿವಿಯನ್ನು ನಂಬಲಾರದೇ ಹೋದ. ಸಡಗರದಿಂದ ಮನೆಗೆ ಕರೆದುಕೊಂಡು ಹೋಗಿ ಗಂಡ ಹೆಂಡತಿ ಆತನ ಪಾದಗಳನ್ನು ತೊಳೆದು ಪೂಜೆ ಮಾಡಿ ರುಚಿ ರುಚಿಯಾದ ಅಡುಗೆಯನ್ನು ಭಕ್ತಿಯಿಂದ ಉಣಬಡಿಸಿದರು. ಊಟವಾದ ನಂತರ ಬಿಸಿಬಿಸಿ ಹಲ್ವ ಸವಿದು ದೇವಾಲಯಕ್ಕೆ ಆ ಸಾಧು ಮರಳಿದ.
ಮರುದಿನ ಬೆಳಗ್ಗೆ ಪೂಜಾರಿ ಕೆರಳಿ ಕೆಂಡವಾಗಿದ್ದ. “ನೀನೆಂಥ ಸಾಧು? ಅಸೃಶ್ಯನ ಮನೆಯಲ್ಲಿ ಉಂಡು ಬಂದಿದ್ದೀಯ". ಚಪ್ಪಲಿ ಹೊಲಿಯುವ ಕೀಳು ಜಾತಿಯವನ ಮನೆಯಲ್ಲಿ ಮಾಡಿದ ಅಡುಗೆಯನ್ನು ಊಟ ಮಾಡುವ ನೀನು ಅದೆಂಥಾ ಬ್ರಹ್ಮಾಚಾರಿ? ನೀನೀಗ ನಿನ್ನನ್ನಷ್ಟೇ ಅಲ್ಲ, ದೇವಸ್ಥಾನದ ಆವರಣವನ್ನೂ ಅಪವಿತ್ರಗೊಳಿಸಿದ್ದೀಯೆ. ಯಾರನ್ನಾದರೂ ಕರೆಸಿ ನಿನ್ನನ್ನು ಹೊಡೆಸಿ ಹೊರಹಾಕುವ ಮುನ್ನ ಇಲ್ಲಿಂದ ಹೊರಟು ಹೋಗು! ನದಿಯ ನೀರಿನಲ್ಲಿ ಮುಳುಗಿ ಪ್ರಾಯಶ್ಚಿತ್ತ ಮಾಡಿಕೊಂಡು ಶುದ್ಧನಾಗು. ನಾನೀಗ ಈ ಕೋಣೆಯನ್ನು ಪವಿತ್ರ ಗಂಗಾ ಜಲದಿಂದ ತೊಳೆದು ಶುದ್ಧಗೊಳಿಸಬೇಕು. ನಡಿ, ನಡಿ!” ಎಂದು ಗದರಿಸಿದ. ಕಂ ಕಿಂ ಎನ್ನದೆ ತನ್ನ ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಆ ಸಾಧು ಹೊರನಡೆದ. ಜಾತಿಯಿಂದ ಮುಸ್ಲಿಂ ಆದ ಆತನನ್ನು ಶಿವದೇಗುಲದಲ್ಲಿ ತಂಗಲು ಅವಕಾಶ ಮಾಡಿಕೊಟ್ಟಿದ್ದೇ ಒಂದು ಸೋಜಿಗ! ಮಡಿವಂತ ಅರ್ಚಕನೊಂದಿಗೆ ಮಾತನಾಡಿ ಪ್ರಯೋಜನವಿರಲಿಲ್ಲ, ಹೃದಯದಲ್ಲಿ ವೇದನೆ ಮಡುಗಟ್ಟಿತ್ತು. ಒಬ್ಬ ಮನುಷ್ಯ ಮತ್ತೊಬ್ಬನನ್ನು ಕೀಳುಜಾತಿಯವನೆಂದು ಹೀಗಳೆಯುವುದು ಸರಿಯೇ? ಮಹಾನ್ ಯೋಗಿಗಳು ಬದುಕಿದ ಪುಣ್ಯಭೂಮಿ ಇದೇ ಏನು! ಸಂಶಯಗಳು ಆತನ ವಿಚಾರಶೀಲ ಮನಸ್ಸಿನಲ್ಲಿ ಧಾಳಿಯಿಟ್ಟವು. ಆ ಸಾಧು ಬೇರೆ ಯಾರೂ ಅಲ್ಲ ಶ್ರೀ ಎಂ ಎಂದೇ ವಿಶ್ವಖ್ಯಾತಿ ಪಡೆದ ಕೇರಳ ಮೂಲದ ಮಮ್ತಾಜ್ ಆಲಿ ಖಾನ್. ಕಳೆದ ಒಂದು ವರ್ಷದಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 7,500 ಕಿ.ಮೀ ದೂರದ “ಭರವಸೆಯ ಕಾಲ್ನಡಿಗೆಯನ್ನು (Walk of Hope) ಯಶಸ್ವಿಯಾಗಿ ನಡೆಸಿ ನಾಡಿನ ಜನಮಾನಸದಲ್ಲಿ ಭಾವೈಕ್ಯದ ಬೀಜವನ್ನು ಬಿತ್ತಲು ಯತ್ನಿಸಿದ ಅವರನ್ನು ಕಳೆದ ಶನಿವಾರ ಅಭಿನಂದಿಸಲಾಯಿತು. ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಮ್ಮ ಸಮ್ಮುಖದಲ್ಲಿ ಏರ್ಪಡಿಸಲಾಗಿದ್ದ ಈ ಸಮಾರಂಭದಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯನವರು ಶ್ರೀ ಎಂ ಅವರಿಗೆ "ಮಾನವಶ್ರೀ" ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿರಿಗೆರೆಯಿಂದ ಬೆಂಗಳೂರಿಗೆ ಪ್ರಯಾಣಿಸುವಾಗ ದಾರಿಯುದ್ದಕ್ಕೂ ಶ್ರೀ ಎಂ ಅವರ ಆತ್ಮಕಥನ “Apprenticed to Himalayan Master” (ಕನ್ನಡಾನುವಾದ: “ಹಿಮಾಲಯದ ಗುರುವಿನ ಗರಡಿಯಲ್ಲಿ” ಡಾ.ನಯನಾ ಕಾಶ್ಯಪ್) ಎಂಬ ಪುಸ್ತಕದ ಪುಟಗಳ ಮೇಲೆ ನಮ್ಮ ಕಣ್ಣುಗಳು ಕೀಲಿಸಿದ್ದವು. ಈ ಪುಸ್ತಕದಲ್ಲಿ ದಾಖಲಾಗಿರುವ ಶ್ರೀ ಎಂ ಅವರ ಮೇಲ್ಕಂಡ ಕಹಿ ಅನುಭವ ಬಸವಣ್ಣನವರ ವಚನದಲ್ಲಿ ಉಲ್ಲೇಖಗೊಂಡಿರುವ ಮಾದಾರ ಚೆನ್ನಯ್ಯನ ಕಥಾನಕವನ್ನು ನಮ್ಮ ಸ್ಮರಣೆಗೆ ತಂದಿತು:
ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ!
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತ್ತಯ್ಯಾ!
ಆಗಮ ಹೆರತೊಲಗಿ ಅಗಲಿದ್ದಿತ್ತಯ್ಯಾ,
ನಮ್ಮ ಕೂಡಲ ಸಂಗಯ್ಯನು
ಮಾದಾರ ಚನ್ನಯ್ಯನ ಮನೆಯಲುಂಡ ಕಾರಣ!
ಮಾದಾರ ಚನ್ನಯ್ಯನು ಕರಿಕಾಲ ಚೋಳನೆಂಬ ಮಹಾರಾಜನ ಕುದುರೆಗಳಿಗೆ ಹುಲ್ಲು ಮೇಯಿಸುತ್ತಿದ್ದ ಒಬ್ಬ ಸಾಮಾನ್ಯ ಸೇವಕ. ಮಹಾಶಿವಭಕ್ತನಾದ ಅವನದು ಗುಪ್ತಭಕ್ತಿ. ಜಾತಿಯಿಂದ ಚಮ್ಮಾರನಾದ ಅವನು ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಕಾಡಿಗೆ ಹೋಗಿ ನಯನಮನೋಹರವಾದ ನಿಸರ್ಗದ ನಡುವೆ ರಹಸ್ಯವಾಗಿ ಲಿಂಗಾರ್ಚನೆ ಮಾಡುತ್ತಿದ್ದ. ನಂತರ ಕೊಯ್ದ ಹುಲ್ಲನ್ನು ಎತ್ತಿನ ಮೇಲೂ ಭಕ್ತಿಯ ಪುಳಕವನ್ನು ತನ್ನ ಮೈಮೇಲೂ ಹೇರಿಕೊಂಡು ಅರಮನೆಗೆ ಬಂದು ಕುದುರೆಗಳಿಗೆ ಹುಲ್ಲು ಹಾಕಿ ಮನೆಗೆ ಹೋಗುತ್ತಿದ್ದನೆಂದು ಹರಿಹರ ತನ್ನ ರಗಳೆಯಲ್ಲಿ ಸುಂದರವಾಗಿ ವರ್ಣಿಸುತ್ತಾನೆ. ಒಮ್ಮೆ ಕರಿಕಾಲ ಚೋಳನು ದೇಗುಲಕ್ಕೆ ಹೋಗಿ ಚಿನ್ನದ ಹರಿವಾಣಗಳಲ್ಲಿ ಷಡ್ರಸಭರಿತ ಭಕ್ಷಭೋಜ್ಯಗಳನ್ನು ನೈವೇದ್ಯ ಮಾಡಿದರೂ ಶಿವನು ಸ್ವೀಕರಿಸಲಿಲ್ಲ. ಮಾದಾರ ಚೆನ್ನಯ್ಯ ನೀಡಿದ "ರುಚಿಯಾದ ಅಂಬಲಿಯನ್ನು ಉಂಡ ಕಾರಣ ಹಸಿವಿಲ್ಲ" ಎಂದು ಶಿವ ಹೇಳಿದನಂತೆ! ಆಗ ಚೋಳನು ಶಿವಭಕ್ತಿಸಂಪನ್ನನಾದ ಚೆನ್ನಯ್ಯನನ್ನು ಹುಡುಕುತ್ತಾ ಮಾದಾರ ಕೇರಿಯಲ್ಲಿದ್ದ ಅವನ ಗುಡಿಸಿಲಿಗೇ ಹೋಗುತ್ತಾನೆ. ಅವನ ಪಾದಗಳನ್ನು ಹಿಡಿದು “ಸರ್ವಜ್ಞ ನಿನ್ನ ಕೆರ್ಪಿಂಗೆನ್ನ ಶಿರ ಸರಿಯೇ?” (ನಿನ್ನ ಕೆರಗಳಿಗೆ ನನ್ನ ಶಿರಸ್ಸು ಸಮಾನವೇ) ಎಂದು ನತಮಸ್ತಕನಾಗಿ ಮಾದಾರ ಚೆನ್ನಯ್ಯನನ್ನು ಆನೆಯ ಮೇಲೆ ಕೂರಿಸಿ ತಾನು ಕುದುರೆಯ ಮೇಲೆ ಮುಂದೆ ಸಾಗಿ ನಗರದ ಬೀದಿಗಳಲ್ಲಿ ದೇವಾಲಯದವರೆಗೆ ಮೆರವಣಿಗೆ ಮಾಡಿಸುತ್ತಾನೆ.
ಮಾದಾರ ಚನ್ನಯ್ಯನ ಭಕ್ತಿಯ ಹಿರಿಮೆಯನ್ನು ಹರಿಹರ ಮನೋಜ್ಞವಾಗಿ ಬಣ್ಣಿಸಿದ್ದಾನೆ ನಿಜ. ಆದರೆ ಈ ಕಥೆಗೆ ಇನ್ನೊಂದು ಮಗ್ಗುಲೂ ಇದೆ. ಅಪರಿಮಿತ ಶಿವಭಕ್ತಿಯನ್ನು ಹೊಂದಿದ ತನ್ನ ಪ್ರಜೆಯ (ಸೇವಕನ) ಬಗ್ಗೆ ಚೋಳರಾಜನಿಗೆ ಇದ್ದ ಹೃದಯವೈಶಾಲ್ಯದ ಗರಿಮೆಯೂ ಇಲ್ಲಿ ಕಾಣಿಸುತ್ತದೆ. ಮೇಲುನೋಟಕ್ಕೆ ಚೆನ್ನಯ್ಯನ ಭಕ್ತಿಯ ಹಿರಿಮೆ ಕಾಣಿಸಿದರೂ ಅಂತಹ ಭಕ್ತಿಯ ಹಿರಿಮೆಯುಳ್ಳ ಸಾಮಾನ್ಯ ವ್ಯಕ್ತಿಯನ್ನು ಆನೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡುವಷ್ಟು ಉನ್ನತ ಗುಣ ರಾಜನಾದ ಚೋಳನಲ್ಲಿ ಕಾಣಿಸುತ್ತದೆ. ಸಾಮಾನ್ಯ ಪ್ರಜೆ ಧರಿಸುವ ಪಾದರಕ್ಷೆಗಿಂತ ತನ್ನ ರಾಜಮುಕುಟ ದೊಡ್ಡದಲ್ಲವೆಂಬ ಚೋಳ ಮಹಾರಾಜನ ನಿಲುವು ಉದಾತ್ತವಾದುದು.
ಈಗಲೂ ನಮ್ಮ ಸಚಿವರುಗಳು ಗ್ರಾಮವಾಸ್ತವ್ಯವನ್ನು ಮಾಡುತ್ತಿರುತ್ತಾರೆ. ಹಳ್ಳಿಗಳಿಗೆ ಹೋಗಿ ರೈತರ ಮನೆಗಳಲ್ಲಿ ಊಟ ಮಾಡಿ, ತಂಗಿದ್ದು ಮಾರನೆಯ ದಿನ ಸಭೆಗಳನ್ನು ನಡೆಸಿ ವಾಪಾಸು ಬರುತ್ತಾರೆ. “ನಮ್ಮ ಮನೆಗೆ ಸಚಿವರು ಬಂದಿದ್ದರು, ನಮ್ಮೊಂದಿಗೆ ಊಟ ಮಾಡಿದರು, ರಾತ್ರಿ ನಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದರು” ಎಂಬ ಹೆಗ್ಗಳಿಕೆ ಮಾತ್ರ ಮನೆಯ ಯಜಮಾನನಿಗೆ ಉಳಿದಿರಬಹುದೇ ಹೊರತು ಅದರಿಂದ ಮೂರು ಕಾಸಿನ ಲಾಭ ಆ ರೈತನಿಗೂ ಇಲ್ಲ, ಆ ಊರಿಗೂ ಇಲ್ಲ, ಸಚಿವರನ್ನೂ ಮತ್ತು ಅವರ ದಂಡನ್ನೂ ಸತ್ಕರಿಸಲು ಅವರು ಮಾಡುವ ಖರ್ಚು ಶಿಷ್ಟಾಚಾರ ಕಾಪಾಡಲು ತೆರಬೇಕಾದ "ದಂಡ" ಅಷ್ಟೆ! ಚೋಳ ಮಹಾರಾಜನ ಸದ್ವರ್ತನೆ ಈಗಿನ ಸಚಿವರುಗಳಿಗೆ ಮತ್ತು ಅಧಿಕಾರಿಗಳಿಗೆ ಪಾಠವಾಗಬೇಕು! ಆಡಳಿತ ನಡೆಸುವವರ ಕಣ್ಣನ್ನು ತೆರೆಸಬೇಕು.
ಹರಿಹರನ ರಗಳೆಯಲ್ಲಿ ಬರುವ ಈ ಕಥಾನಕವನ್ನು ಭಕ್ತಿಯ ಸ್ತರದಿಂದ ನೋಡುವ ದೃಷ್ಟಿ ಬೇರೆ. ಶಿವನು ಚೆನ್ನಯ್ಯನನ್ನು ಕೈಲಾಸಕ್ಕೆ ಕರೆದೊಯ್ದನೆಂದು ಕಾವ್ಯದಲ್ಲಿ ಬಣ್ಣಿಸಲಾಗಿದೆ. ಆದರೆ ಇದನ್ನು ಅರಸ ಚೋಳನಿಗೆ ಇದ್ದ ಜನಪರಕಾಳಜಿ ಎಂದು ಅಧಿಕಾರಾರೂಢ ಜನನಾಯಕರು ಮತ್ತು ಅಧಿಕಾರಿಗಳು ಅರ್ಥಮಾಡಿಕೊಂಡು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದರೆ ಈ ಭೂಮಿಯೇ ಕೈಲಾಸವಾಗುತ್ತದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 26.5.2016