ಸಂಸ್ಕೃತ ಮತ್ತು ಕನ್ನಡದ ಸಂಬಂಧ ತಾಯಿ-ಮಗಳ ಸಂಬಂಧವೇ?

  •  
  •  
  •  
  •  
  •    Views  

ಪೊಲೀಸು ಕಾರ್ಯಾಚರಣೆಯಲ್ಲಿ ಶಂಕಿತ ವ್ಯಕ್ತಿಯೊಬ್ಬನನ್ನು ಬಂಧಿಸಿ ಲಾಕಪ್ ನಲ್ಲಿಟ್ಟು ಮೇಲಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಯಿತು. ಮೇಲಧಿಕಾರಿಗಳು ವರದಿಯನ್ನು ಪರಿಶೀಲಿಸಿ ತಂತಿಯ ಮೂಲಕ ಕೆಳಗಿನ ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ತಂತಿಯಲ್ಲಿದ್ದ ಮೇಲಧಿಕಾರಿಯ ಆದೇಶ ಹೀಗಿತ್ತು: “ರೋಕೋ, ಮತ್ ಜಾನೇ ದೋ” (ತಡೆದು ನಿಲ್ಲಿಸು, ಬಿಡುಗಡೆ ಮಾಡಬೇಡ). ಹೀಗೆ ಬಂಧಿತನನ್ನು ತಡೆದು ನಿಲ್ಲಿಸಲು, ಬಿಡುಗಡೆ ಮಾಡದಿರಲು ಸ್ಪಷ್ಟ ಆದೇಶವಿದ್ದರೂ ಕೆಳಗಿನ ಅಧಿಕಾರಿಗಳು ಬಂಧಿತನನ್ನು ಲಾಕಪ್ ನಿಂದ ಬಿಡುಗಡೆ ಮಾಡಿದರು. ಹಾಗೆ ಮಾಡಲು ಅವರ ಅವಿಧೇಯತೆಯಾಗಲೀ, ಇತ್ತೀಚೆಗೆ ಬಹಳವಾಗಿ ಕೇಳಿ ಬರುತ್ತಿರುವ ರಾಜಕೀಯ ನೇತಾರರ "ಹುಕುಂ" ಆಗಲೀ ಆಗಿರಲಿಲ್ಲ; ಮೇಲಧಿಕಾರಿಗಳ ಆದೇಶದ ತಪ್ಪು ಗ್ರಹಿಕೆಯಾಗಿತ್ತು. “ರೋಕೋ (ಹಿಡಿದು ನಿಲ್ಲಿಸು), ಮತ್ ಜಾನೇ ದೊ (ಬಿಡುಗಡೆ ಮಾಡಬೇಡ)” ಎಂದು ತಿಳಿದುಕೊಳ್ಳುವ ಬದಲು ರೋಕೊ ಮತ್ (ತಡೆದು ನಿಲ್ಲಿಸಬೇಡ), ಜಾನೇ ದೋ (ಹೋಗಲಿ ಬಿಡು)!” ಎಂದು ಕೆಳಗಿನ ಅಧಿಕಾರಿಗಳು ತಪ್ಪಾಗಿ ಗ್ರಹಿಸಿದ್ದರು. ಆದೇಶದಲ್ಲಿರುವ ಅರ್ಧವಿರಾಮ ಚಿಹ್ನೆಯನ್ನು ಹಿಂದುಮುಂದು ಮಾಡಿ ಓದಿಕೊಂಡಿದ್ದರಿಂದ ಅನರ್ಥಕ್ಕೆ ಎಡೆಮಾಡಿಕೊಟ್ಟಿತ್ತು!

ಈ ಪ್ರಸಂಗದ ಪೀಠಿಕೆಗೆ ಕಾರಣ ಜುಲೈ 1 ರಂದು ಶುಕ್ರವಾರ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮ. ಅಂದು ಲೋಕಾರ್ಪಣೆಗೊಂಡ ನಾಡೋಜ ಹಂಪನಾ ಅವರ ದೇಸಿ ಕಾವ್ಯದ ಸಂಸ್ಕೃತ ಅನುವಾದ ಕೃತಿ “ಚಾರುವಸಂತೀಯಮ್” ಕುರಿತು ಹಿಂದಿನ ಅಂಕಣದಲ್ಲಿ ಈಗಾಗಲೇ ಬರೆಯಲಾಗಿದೆ. ಕಾರ್ಯಕ್ರಮ ಮುಗಿಸಿಕೊಂಡು ವೇದಿಕೆಯಿಂದ ಕೆಳಗಿಳಿಯುವಾಗ ಆಗತಾನೇ ಬಂದ ಕೆಲವು ಮಾಧ್ಯಮದವರು ಕ್ಯಾಮರಾದ ಕಣ್ಣುಗಳನ್ನು ನಮ್ಮತ್ತ ಕೀಲಿಸಿ ಸಮಾರಂಭ ಕುರಿತು ಏನಾದರೂ ಹೇಳಲು ಕೇಳಿದರು. “ಹೇಳಬೇಕಾದನ್ನೆಲ್ಲ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿಯೇ ಹೇಳಿಯಾಗಿದೆಯಲ್ಲಾ?” ಎಂದರೂ ಕೇಳದ ಅವರು ಪ್ರಶ್ನೆಗಳ ಬಾಣಗಳನ್ನು ತೂರುತ್ತಲೇ ಹೋದರು. ಆಗ ಪ್ರಶ್ನೆಯೊಂದಕ್ಕೆ ನೀಡಿದ ನಮ್ಮ ಪ್ರತಿಕ್ರಿಯೆ: “ಹಿಂದೆ ಸಂಸ್ಕೃತ ಮತ್ತು ಕನ್ನಡದ ಸಂಬಂಧ ತಾಯಿ-ಮಗಳ ಸಂಬಂಧದಂತೆ ಇತ್ತು. ಈಗ ಅದು ಅತ್ತೆ-ಸೊಸೆ ಸಂಬಂಧದಂತೆ ಆಗಿದೆ!”. ಪ್ರಾಸಂಗಿಕವಾಗಿ ಆಡಿದ ನಮ್ಮ ಈ ಮಾತು ಮಾಧ್ಯಮದಲ್ಲಿ ವರದಿಯಾಗಿ ಚರ್ಚೆಗೆ ಗ್ರಾಸವಾಗಿದೆ.

ಈ ಮಾತು ಕನ್ನಡ ಭಾಷೆಯ ಉಗಮವನ್ನು ಕುರಿತು ಹೇಳಿದ್ದಲ್ಲ. ಸಂಸ್ಕೃತ ಮತ್ತು ಕನ್ನಡದ ಸಂಬಂಧದ ಬಗೆಗೆ ಹಿಂದಿನ ತಲೆಮಾರಿನ ವಿದ್ವಾಂಸರ ಮನೋಧರ್ಮವನ್ನು ಸಮಕಾಲೀನ ಸಾಹಿತ್ಯವಲಯದಲ್ಲಿ ಕಂಡುಬರುತ್ತಿರುವ ಟೀಕಾಪ್ರಹಾರಗಳೊಂದಿಗೆ ಹೋಲಿಸಿ ಹೇಳಿದ ಮಾತು. ಹಿಂದಿನ ತಲೆಮಾರಿನ ವಿದ್ವಾಂಸರು ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಗಳೆರಡರಲ್ಲೂ ಪಾರಂಗತರಾಗಿದ್ದರು. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಸಂಸ್ಕೃತದ ಅಪಾರ ಕೊಡುಗೆಯನ್ನು ಬಲ್ಲವರಾಗಿದ್ದರು. ತೀ.ನಂ.ಶ್ರೀ ಅವರ "ಭಾರತೀಯ ಕಾವ್ಯ ಮೀಮಾಂಸೆ" ಇದಕ್ಕೊಂದು ಉತ್ತಮ ಉದಾಹರಣೆ. ಆದರೆ ಕಾಲ ಬದಲಾಗಿದೆ. ಸಾಹಿತ್ಯವಲಯದಲ್ಲಿ ಹಿಂದಿನವರಿಗಿದ್ದ ಮಧುರ ಭಾವನೆ ಈಗ ಇಲ್ಲ. ಸಾಮಾಜಿಕವಾಗಿಯೂ ಕನ್ನಡ ನೆಲ, ಜಲದ ವಿಷಯವಾಗಿ ಭಾಷಾಭಿಮಾನ ಬೆಳೆದು ಕುಟುಂಬದೊಳಗಿನ ಕಲಹದಂತೆ ಒಂದೇ ಭಾಷಾಕುಟುಂಬಕ್ಕೆ ಸೇರಿದವರ ಮಧ್ಯೆಯೂ ಆಗಿಂದಾಗ್ಗೆ ಕಲಹಗಳು ಉಂಟಾಗುತ್ತಿವೆ. ಕನ್ನಡ ಭಾಷೆಯ ಬೆಳವಣಿಗೆಗೆ ಸಂಸ್ಕೃತದ ಕೊಡುಗೆ ಅಪಾರವಾಗಿರುವುದು ನಿಜವಾದರೂ ಕನ್ನಡ ಸಂಸ್ಕೃತದಿಂದ ಹುಟ್ಟಿದ ಭಾಷೆ ಎಂದು ಯಾರೂ ಭಾವಿಸಬೇಕಾಗಿಲ್ಲ. ಈ ವಿಷಯವಾಗಿ ಇದೇ ಅಂಕಣದಲ್ಲಿ ಬಹಳ ಹಿಂದೆ ಸ್ಪಷ್ಟವಾಗಿ ಬರೆಯಲಾಗಿದೆ.

ಜಗತ್ತಿನಲ್ಲಿ ಅನೇಕ ಭಾಷೆಗಳು ಇವೆ. ಅವುಗಳ ಉಗಮವನ್ನು ಅಧ್ಯಯನ ಮಾಡಿ ಪರಸ್ಪರ ಸಂಬಂಧವಿರುವ ಭಾಷೆಗಳನ್ನು ಗುರುತಿಸಿ ಒಟ್ಟು 250 ಭಾಷಾಕುಟುಂಬಗಳು ಇವೆಯೆಂದು ಭಾಷಾವಿಜ್ಞಾನಿಗಳು ವಿಭಾಗಿಸಿದ್ದಾರೆ. ಅವುಗಳಲ್ಲಿ ಎರಡು ಪ್ರಮುಖ ಭಾಷಾಕುಟುಂಬಗಳೆಂದರೆ ಒಂದು ಇಂಡೋ-ಯೂರೋಪಿಯನ್ ಭಾಷಾ ಕುಟುಂಬ (Indo-European Languages) ಮತ್ತೊಂದು ದ್ರಾವಿಡ ಭಾಷಾಕುಟುಂಬ (Dravidian Languages). ಲ್ಯಾಟಿನ್, ಜರ್ಮನ್, ಫ್ರೆಂಚ್, ಇಂಗ್ಲಿಷ್ ಮೊದಲಾದ ಭಾಷೆಗಳಂತೆ ಸಂಸ್ಕೃತವೂ ಸಹ ಇಂಡೋ-ಯೂರೋಪಿಯನ್ ಭಾಷಾಕುಟುಂಬಕ್ಕೆ ಸೇರಿದ ಭಾಷೆ. ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳು. ಭಾಷಾವಿಜ್ಞಾನ (Linguistics) ಅಸ್ತಿತ್ವಕ್ಕೆ ಬರುವ ಮುಂಚೆ ಸಂಸ್ಕೃತ ಮೂಲದಿಂದ ಕನ್ನಡ ಹುಟ್ಟಿತು ಎಂಬ ತಪ್ಪು ತಿಳಿವಳಿಕೆ ಶತಮಾನಗಳ ಕಾಲ ಇತ್ತು. ಕನ್ನಡ ಸಾಹಿತ್ಯವು ಸಂಸ್ಕೃತ ಸಾಹಿತ್ಯದ ಸಾರವನ್ನು ಹೀರಿಕೊಂಡು ಸಮೃದ್ಧವಾಗಿ ಬೆಳೆದಿದೆಯೇ ವಿನಾ ಕನ್ನಡವು ಒಂದು ಭಾಷೆಯಾಗಿ ಸಂಸ್ಕೃತದಿಂದ ಹುಟ್ಟಿದುದಲ್ಲ. ಸಂಸ್ಕೃತ ಮತ್ತು ಕನ್ನಡದ ಸಂಬಂಧ ವಾಸ್ತವವಾಗಿ ತಾಯಿ ಮಗಳ ಸಂಬಂಧ ಅಲ್ಲ. ಸಾಕುತಾಯಿ ಸಾಕುಮಗಳ ಸಂಬಂಧ. ಸಾಕುಮಗಳು ಸಾಕುತಾಯಿಯನ್ನೇ ಹೇಗೆ ತನ್ನ ನಿಜವಾದ ತಾಯಿಯೆಂದು ಭಾವಿಸುತ್ತಾಳೋ ಹಾಗೆ ಕನ್ನಡವು ಹಿಂದಿನ ಕಾಲದಿಂದಲೂ ಸಂಸ್ಕೃತವನ್ನು ತಾಯಿಯಂತೆ ಆದರಿಸಿಕೊಂಡು ಬಂದಿದೆ. ಕನ್ನಡ ವ್ಯಾಕರಣ ಗ್ರಂಥಗಳಂತೂ ಸಂಸ್ಕೃತ ವ್ಯಾಕರಣವನ್ನೇ ಅನುಸರಿಸಿಕೊಂಡು ಬಂದಿವೆ.

ಈಗ ಆಂಗ್ಲ ಭಾಷೆಯಿಂದ ಅನೇಕ ಶಬ್ದಗಳು ಕನ್ನಡಕ್ಕೆ ಬಂದಿವೆ, ಇನ್ನೂ ಬರುತ್ತಿವೆ. ರೈಲು, ಸಿಗ್ನಲ್, ಬಸ್ಸು, ಬ್ಯಾಂಕು, ಫೋನು, ಮೊಬೈಲ್ ಇತ್ಯಾದಿ ಇಂಗ್ಲಿಷ್ ಪದಗಳು ದೈನಂದಿನ ವ್ಯವಹಾರದಲ್ಲಿ ಬಳಕೆಯಲ್ಲಿರುವಂತೆ ಅನೇಕ ಶಬ್ದಗಳು ಹಿಂದೆ ಸಂಸ್ಕತದಿಂದ ಕನ್ನಡಕ್ಕೆ ಬಂದಿವೆ. ಕೆಲವು ಕನ್ನಡದ ದೀಕ್ಷೆ ಪಡೆದು ತದ್ಭವಗಳಾದರೆ ಅನೇಕ ಶಬ್ದಗಳು ಮೂಲ ರೂಪದಲ್ಲಿಯೇ ಉಳಿದುಕೊಂಡು ತತ್ಸಮಗಳಾಗಿ ಕನ್ನಡದಲ್ಲಿ ವಿಲೀನಗೊಂಡಿವೆ. ಶಬ್ದರೂಪ ಒಂದೇ ಆದರೂ ಹಲವಾರು ಸಂಸ್ಕೃತ ಪದಗಳಿಗೆ ಕನ್ನಡದಲ್ಲಿ ಇರುವ ಅರ್ಥವೇ ಬೇರೆ, ಸಂಸ್ಕೃತದಲ್ಲಿ ಇರುವ ಅರ್ಥವೇ ಬೇರೆ! ಭಾಷೆಗಳು ಪರಸ್ಪರ ಸಂಪರ್ಕದಲ್ಲಿದ್ದಾಗ ಇವೆಲ್ಲ ಅನಿವಾರ್ಯ. ಸಂಸ್ಕೃತದ ಅತಿ ಬಳಕೆ ಕನ್ನಡದಲ್ಲಿ ಆದಾಗ ಹಿಂದೆ ಕವಿ ನಯಸೇನ "ತಕ್ಕುದೇ ಬೆರಸಲ್ಕೆ ಘೃತಮುಮಂ ತೈಲಮುಮಂ" ಎಂದು ಅದನ್ನು ವಿರೋಧಿಸಿದ್ದೂ ಉಂಟು!

ಒಂದು ಕಾಲದಲ್ಲಿ ಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತ ಭಾಷೆಯ ಪ್ರಭಾವ ಉಂಟಾದಂತೆ ಆಧುನಿಕ ಕಾಲದ ಕನ್ನಡ ಸಾಹಿತ್ಯದಲ್ಲಿ ಆಂಗ್ಲ ಭಾಷೆಯ ದಟ್ಟವಾದ ಪ್ರಭಾವ ಕಂಡುಬರುವುದು ಅಚ್ಚರಿಯೇನೂ ಅಲ್ಲ. ಹೊಸ ಹೊಸ ಶಬ್ದಪ್ರಯೋಗಗಳೂ ಆವಿಷ್ಕಾರಗೊಂಡಿವೆ. ಉದಾಹರಣೆಗೆ ಆಧುನಿಕ ಕನ್ನಡ ಲೇಖಕರು ಬಳಸುವ "ಸಮಾಜೋ ಧಾರ್ಮಿಕ", "ಸಮಾಜೋ ಆರ್ಥಿಕ" ಇತ್ಯಾದಿ ಪದಗಳು ಆಂಗ್ಲಭಾಷೆಯ Socio-religious, Socio-economic ಎಂಬ ಪದಗಳ ಪಡಿಯಚ್ಚು. ಇವು ಸಂಸ್ಕೃತ ಭಾಷೆಯ ದೃಷ್ಟಿಯಿಂದ ಅಶುದ್ಧ ಪ್ರಯೋಗಗಳೆನಿಸಿದರೂ ವ್ಯಾಕರಣದ ನಿಯಮಾವಳಿಗಳಿಂದ ಯಾವುದೇ ಭಾಷೆಯ ಬೆಳವಣಿಗೆಯನ್ನು ನಿಯಂತ್ರಿಸಲು ಬರುವುದಿಲ್ಲ. ಸ್ವತಃ ಪಾಣಿನಿ ಮಹರ್ಷಿಯೇ (ಕ್ರಿ.ಪೂ 5ನೆಯ ಶತಮಾನ) ಸಂಸ್ಕೃತ ವ್ಯಾಕರಣದ ಮೇರುಕೃತಿಯಾದ ತನ್ನ "ಅಷ್ಟಾಧ್ಯಾಯೀ" ಗ್ರಂಥದಲ್ಲಿ "ಜನಪದೇ ಲುಪ್’ (4.2.081), "ಲುಪಿ ಯಕ್ತವದ್ ವ್ಯಕ್ತಿವಚನೇ" (1.2.51), "ತದ ಶಿಷ್ಯಂ ಸಂಜ್ಞಾಪ್ರಮಾಣತ್ವಾತ್ (1.2.53) ಇತ್ಯಾದಿ ಸೂತ್ರಗಳಲ್ಲಿ ಇದನ್ನು ಪ್ರತಿಪಾದಿಸಿದ್ದಾನೆ. ತನಗೂ ಹಿಂದೆ ಇದ್ದ ವೈಯಾಕರಣಿಗಳು ರೂಪಿಸಿದ್ದ ಕೆಲವು ನಿಯಮಗಳನ್ನು ತಳ್ಳಿ ಹಾಕುವ ಪಾಣಿನಿ ಒಟ್ಟಾರೆ ಜನಪದರು ಆಡುವ ಮಾತನ್ನು ವ್ಯಾಕರಣದ ಸೂತ್ರಗಳಿಂದ ನಿರ್ಬಂಧಿಸಲು ಬರುವುದಿಲ್ಲವೆಂಬ ಸಂಗತಿಯನ್ನು ಬಲವಾಗಿ ಪ್ರತಿಪಾದಿಸಿದ್ದಾನೆ.

ಭಾಷೆ ಹುಟ್ಟಿದ ಮೇಲೆ ವ್ಯಾಕರಣ ನಿಯಮಗಳು ರಚನೆಯಾಗುತ್ತವೆಯೇ ಹೊರತು ವ್ಯಾಕರಣ ಸೂತ್ರಗಳಿಂದ ಯಾವುದೇ ಭಾಷೆ ಹುಟ್ಟುವುದಿಲ್ಲ. ಸಂಸ್ಕೃತದಲ್ಲಿ "ಕಲತ್ರಮ್, "ದಾರಾಃ" ಎಂದರೆ ಹೆಂಡತಿ. ಆದರೆ ಈ ಶಬ್ದಗಳು ಅನುಕ್ರಮವಾಗಿ ನಪುಂಸಕ ಲಿಂಗ ಏಕವಚನ, ಪುಲ್ಲಿಂಗ ನಿತ್ಯಬಹುವಚನ. ಇದೇ ರೀತಿ ಜರ್ಮನ್ ಭಾಷೆಯಲ್ಲಿ "ಮೇಡ್ಷನ್ (madchen) ಎಂದರೆ ಹುಡುಗಿ. ನಪುಂಸಕ ಲಿಂಗದಲ್ಲಿರುವ ಶಬ್ದ. ಹೆಂಡತಿಯಾಗಲೀ, ಹುಡುಗಿಯಾಗಲೀ ಜೋಗತಿಯರೆನಲ್ಲ.ಕನ್ನಡದಲ್ಲಿ ಈ ಶಬ್ದಗಳೂ ಅರ್ಥಕ್ಕನುಗುಣವಾಗಿ ಸ್ತ್ರೀಲಿಂದಲ್ಲಿವೆ. ಆದರೆ ಸಂಸ್ಕೃತಲ್ಲಿ ಹಾಗಲ್ಲ. ಇದು ಪ್ರಾಚೀನ ಇಂಡೋ-ಐರೋಪ್ಯ ಭಾಷೆಗಳ ಒಂದು ವೈಶಿಷ್ಟ್ಯ. ಸಂಸ್ಕೃತ ಭಾಷೆಯಲ್ಲಾಗಲೀ, ಜರ್ಮನ್ ಭಾಷೆಯಲ್ಲಾಗಲೀ ಯಾವುದೇ ಶಬ್ದದ ಲಿಂಗವಚನಗಳು ಕನ್ನಡದಲ್ಲಿರುವಂತೆ ಹೆಣ್ಣು-ಗಂಡು ಎಂಬ ಲಿಂಗ ಭೇದದಿಂದ ನಿರ್ಧಾರವಾಗುವುದಿಲ್ಲ. ಜನರು ಹೇಗೆ ಬಳಸುತ್ತಾ ಬಂದಿದ್ದಾರೆಂಬುದರ ಆಧಾರದ ಮೇಲೆ ನಿಂತಿರುತ್ತವೆ.ಈ ಹಿನ್ನೆಲೆಯಲ್ಲಿ ಸಂಸ್ಕೃತವು ಆಡುಭಾಷೆಯಾಗಿರಲಿಲ್ಲ, ಪಂಡಿತರ ಭಾಷೆ ಎಂದು ಹೀಗಳೆಯುವುದು ವಿಹಿತವಲ್ಲ. ಹಿಂದೊಂದು ಕಾಲದಲ್ಲಿ ಜನಸಾಮಾನ್ಯರ ಆಡುಭಾಷೆಯಾಗಿತ್ತು ಎಂಬುದಕ್ಕೆ "ಜನಪದ" ಶಬ್ದ ಪ್ರಯೋಗವುಳ್ಳ ಮೇಲ್ಕಂಡ ಪಾಣಿನಿಯ ಸೂತ್ರವೂ ಸೇರಿದಂತೆ ಅವನ ಹಲವಾರು ಸೂತ್ರಗಳೇ ಸಾಕ್ಷಿ.

ಮೇಲೆ ಸೂಚಿಸಿದಂತೆ ಸಂಸ್ಕೃತ ಶಬ್ದಗಳು ಅರ್ಥವನ್ನು ಅನುಲಕ್ಷಿಸಿ ಲಿಂಗವನ್ನು ಪಡೆಯುವುದಿಲ್ಲ. ವ್ಯಾಕರಣ ಸೂತ್ರಗಳ ನಿಯಮಗಳಿಂದಲೂ ಶಬ್ದದ ಲಿಂಗ ನಿರ್ಧಾರವಾಗುವುದಿಲ್ಲ. ಜನರ ಆಡುಮಾತಿನಲ್ಲಿ ಯಾವ ಶಬ್ದ ಯಾವ ಲಿಂಗದಲ್ಲಿ ಬಳಕೆಯಾಗಿದೆ ಎನ್ನುವುದರ ಮೇಲೆ ಶಬ್ದದ ಲಿಂಗ ನಿರ್ಧಾರವಾಗುತ್ತದೆ. ಆದ ಕಾರಣ ಸಂಸ್ಕೃತ ಶಬ್ದಗಳು ಯಾವ ಲಿಂಗದಲ್ಲಿವೆ ಎಂಬುದನ್ನು ತಿಳಿದು ಕೊಳ್ಳುವುದ ಕಷ್ಟ. ಅದಕ್ಕಾಗಿಯೇ ಹುಟ್ಟಿದ್ದು "ಅಮರ ಸಿಂಹನ ನಾಮಲಿಂಗಾನುಶಾಸನ". ಅಮರ ಕೋಶ ಎಂದೇ ಪ್ರಸಿದ‍್ಧವಾದ ಈ ಗ್ರಂಥ ಕೇವಲ ಸಮಾನಾರ್ಥಕ ಪದಗಳ (Synonyms) ಶಬ್ದಕೋಶ ಮಾತ್ರವಲ್ಲ: ಸಂಸ್ಕೃತ ಭಾಷೆಯಲ್ಲಿ ಯಾವ ಯಾವ ಶಬ್ದಗಳು ಯಾವ ಯಾವ ಅರ್ಥದಲ್ಲಿ ಯಾವ ಯಾವ ಲಿಂಗದಲ್ಲಿ ಬಳಕೆಯಲ್ಲಿವೆ ಎಂಬ ಖಚಿತವಾದ ಮಾಹಿತಿಯನ್ನು ನೀಡುವ ಅಪರೂಪದ ಗ್ರಂಥ. ಪ್ರಾಚೀನ ಕಾಲದಲ್ಲಿ ಭಾಷಾ ಪರಿಶುದ್ಧಿ ಮತ್ತು ಭಾಷಾ ಪ್ರೌಢಿಮೆಯನ್ನು ಪಡೆಯಲು ಚಿಕ್ಕ ವಯಸಿನಲ್ಲಿ ಮಕ್ಕಳಿಗೆ ಕಂಠಪಾಠ ಮಾಡಿಸುತ್ತಿದ್ದ ಗ್ರಂಥಗಳೆಂದರೆ ವ್ಯಾಕರಣ ಗ್ರಂಥವಾದ ಪಾಣಿನಿಯ "ಅಷ್ಟಾಧ್ಯಾಯೀ" ಮತ್ತು ಸಮಾನಾರ್ಥಕ ಶಬ್ದಕೋಶವಾದ ಅಮರಸಿಂಹನ "ಅಮರಕೋಶ"

ಮೇಲೆ ಉಲ್ಲೇಖಿಸಿದ ಉದಾಹರಣೆಗಳಂತೆ ಸಂಸ್ಕೃತದಲ್ಲಿ "ಮನಸ್" ಎಂಬ ಶಬ್ದವು ನಪುಂಸಕಲಿಂಗ. ರಸಿಕ ಕವಿಯೊಬ್ಬನು ಇದನ್ನು ನೆಪವಾಗಿಟ್ಟುಕೊಂಡು ರಚಿಸಿದ ರೋಚಕವಾದ ಶ್ಲೋಕ ಹೀಗಿದೆ:

ಸಪುಂಸಕಮಿತಿ ಮತ್ವಾ ಪ್ರಿಯಾಯೈ ಪ್ರೇಷಿತಂ ಮನಃ|
ತತ್ತು ತತ್ರೈವ ರಮೇತೆ ಹತಾಃ ಪಾಣಿನಿನಾ ವಯಮ‍್||


(ಕನ್ನಡ ಭಾವಾನುವಾದ)
ಕಳುಹಿದೆನು ಎನ್ನ ನಲ್ಮೆಯ ನಲ್ಲೆಯ ಬಳಿ ಮನವನು
ನಪುಂಕವೆಂದು ತಿಳಿದು ವ್ಯಾಕರಣದೊಳು 
ನೆಚ್ಚಿದ ಮನ ರಮಿಸುತಿದೆ ನನ್ನ ನೆಲೆಯನು ಅಲ್ಲಿಯೇ 
ಮೋಸ ಹೋದೆನು ನಂಬಿ ಪಾಣಿನಿಯನು!
ಆ ಋಷಿಗೇನು ಗೊತ್ತು ಮನಸ್ಸಿನ ಮರ್ಮ ಬಾಳಿನೊಳು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 21.7.2016