ಹಿಮಾಲಯದ ತಪ್ಪಲಿನಿಂದ ಒಂದು ಪತ್ರ

  •  
  •  
  •  
  •  
  •    Views  

ವಾರದ ಹಿಂದೆ ದೆಹಲಿಯಿಂದ ಕಠ್ಮಂಡುವಿಗೆ Air India ವಿಮಾನದಲ್ಲಿ ಪ್ರಯಾಣಿಸುವಾಗ ಗಗನಸಖಿಯೊಬ್ಬಳು ಹತ್ತಿರ ಬಂದು ಗಂಭೀರವದನಳಾಗಿ "ಆಪ್ ಮೇರಾ ಹಾಥ್ ದೇಖೇಂಗೆ?" ಎಂದು ಸಂಕೋಚದಿಂದಲೇ ನಮ್ಮತ್ತ ಕೈಚಾಚಿದಳು. ಕಿಟಕಿಯಾಚೆ ದಿಟ್ಟಿಸಿ ಬೆಳ್ಳಿಮೋಡಗಳ ಪ್ರಾಕೃತಿಕ ಸೊಬಗನ್ನು ಸವಿಯುತ್ತಾ ಕುಳಿತಿದ್ದ ನಮಗೆ ಆಕೆಯ ಪ್ರಶ್ನೆ ತೀರಾ ಅನಿರೀಕ್ಷಿತವಾಗಿತ್ತು. "ಆಪ್ ಕಾ ಭವಿಷ್ಯ್ ಆಪ್ ಕೇ ಹಾಥ್ ಮೇಂ ಹೈ" (ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ) ಎಂಬ ನಮ್ಮ ಉತ್ತರವೂ ಸಹ ಆಕೆಗೆ ಅನಿರೀಕ್ಷಿತವಾಗಿತ್ತು. ನಮ್ಮ ಈ ಚುಟುಕು ಉತ್ತರದಿಂದ ಆಕೆಗೆ ಸಮಾಧಾನವಾಗಲಿಲ್ಲವೆಂಬುದನ್ನು ಆಕೆಯ ಮುಖಭಾವದಿಂದ ಮನಗಂಡು ಆಕೆಯ ಮನಸ್ಸನ್ನು ಕಾಡಿಸುತ್ತಿರುವ ಸಮಸ್ಯೆಗಳೇನೆಂಬುದನ್ನು ಸಂಕ್ಷಿಪ್ತವಾಗಿ ಕೇಳಿ ತಿಳಿದು ಕೆಲವೊಂದು ಕಿವಿ ಮಾತು ಹೇಳಿದಾಗ ಆಕೆ ಕೃತಜ್ಞತೆಯಿಂದ ಕೈಜೋಡಿಸಿ ತನ್ನ ಕ್ಯಾಬಿನ್ಗೆ ಹಿಂದಿರುಗಿದಳು. ಭವಿಷ್ಯ ಜೀವನದಲ್ಲಿ ಏನಾಗಬಹುದೆಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಅದು ತಪ್ಪಲ್ಲ. ಆದರೆ ಅದಕ್ಕೆ ಜ್ಯೋತಿಷ್ಯವನ್ನೇ ಆಶ್ರಯಿಸಬೇಕೇ ಎಂಬುದು ಮುಖ್ಯ ಪ್ರಶ್ನೆ.

ವಿಮಾನಯಾನದಲ್ಲಿ ಪೈಲೆಟ್ ಗೆ ಬೇಕಾಗಿರುವುದು ವಾಯುಮಾರ್ಗದಲ್ಲಿ ಮುಂದೆ ಎದುರಾಗಲಿರುವ ಹವಾಮಾನದ ಮಾಹಿತಿ. ಪ್ರತಿಕೂಲ ವಾತಾವರಣದ ಮಾಹಿತಿ ಇದ್ದರೆ ಅದಕ್ಕನುಗುಣವಾಗಿ ವಿಮಾನವನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ. ಈ ವಿಚಾರವಾಗಿ ಅವನು ಜೋತಿಷಿಗಳನ್ನು ಕೇಳಿ ವಿಮಾನ ನಡೆಸಲು ಸಾಧ್ಯವೇ? ಜೋತಿಷ್ಯವು ಒಂದು ವಿಜ್ಞಾನವೇ ಅಥವಾ ನಂಬಿಕೆಯೇ ಎಂಬ ಬಗ್ಗೆ ವಾದವಿವಾದಗಳು ಇವೆ. ಅದೊಂದು ನಿಜವಾದ ವಿಜ್ಞಾನವಾಗಿದ್ದರೆ ಪೈಲೆಟ್ ಹಿಂಬದಿಯಲ್ಲಿರುವ ಫ್ಲೈಟ್ ಇಂಜಿನಿಯರ್ ಜಾಗದಲ್ಲಿ ಎಂದೋ ಜೋತಿಷಿ ತನ್ನ ಪಂಚಾಂಗವನ್ನು ಹಿಡಿದು ಕುಳ್ಳಿರುತ್ತಿದ್ದ! ಹವಾಮಾನದ ವೈಪರೀತ್ಯ ಉಂಟಾದಾಗ ಅಥವಾ ಅನಿರೀಕ್ಷಿತ ಆಪತ್ಕಾಲೀನ ಪರಿಸ್ಥಿತಿ ಉದ್ಭವಿಸಿದಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳೇನೆಂಬುದರ ಬಗ್ಗೆ ವಿಮಾನವು ಮೇಲೇರುತ್ತಿದ್ದಂತೆಯೇ ಸೂಚನೆಗಳನ್ನು ನೀಡುವ ಅದೇ ಗಗನಸಖಿ ತನ್ನ ಜೀವನದ ಗತಿವಿಧಾನಗಳನ್ನು ಗುರುತಿಸದೇ ಹೋಗಿದ್ದಳು. ಅವಳು ಎಷ್ಟೇ ಸುರಕ್ಷತಾ ಕ್ರಮಗಳನ್ನು ಕುರಿತು ವಿವರಣೆ ನೀಡಿದರೂ ಅದೊಂದು ನಿಯಮಪಾಲನೆಗಾಗಿ ಮಾಡುವ ಪ್ರದರ್ಶನವೇ ಹೊರತು ಪ್ರಯಾಣಿಕರೂ ಸಹ ಯಾರೂ ಅವುಗಳನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಹಾಗೆಯೇ ಜೀವನ ಯಾನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯವನ್ನು ಜೀವನಾನುಭವವುಳ್ಳವರಿಂದ ಪಡೆಯದೆ ಅವರ ಹಿತನುಡಿಯಂತೆ ನಡೆಯದೆ ಜೋತಿಷಿಗಳ ಮೊರೆ ಹೋಗುವುದು ಅವರವರ ನಂಬಿಕೆಯೇ ಹೊರತು ವೈಜ್ಞಾನಿಕ ಸತ್ಯವಲ್ಲ. ಕೆಲವರಿಗೆ ಜೋತಿಷ್ಯವು ಆತ್ಮವಿಶ್ವಾಸವನ್ನೂ ಉಂಟುಮಾಡಬಹುದು, ಹತಾಶಭಾವನೆಯನ್ನೂ ತಂದೊಡ್ಡಬಹುದು. "ಅಂದು ಇಂದು ಮತ್ತೊಂದೆನಬೇಡ, ದಿನವಿಂದೇ ಕೂಡಲ ಸಂಗನ ಮಾಣದೆ ನೆನೆವವಂಗೆ" ಎನ್ನುತ್ತಾರೆ ಬಸವಣ್ಣನವರು. ಬದುಕಿನ ಯಶಸ್ಸಿಗೆ ಬೇಕಾಗಿರುವುದು ಆತ್ಮವಿಶ್ವಾಸ, ಅಳೆದೆಯವನಿಂದ ಏನನ್ನೂ ಸಾಧಿಸಲು ಆಗುವುದಿಲ್ಲ.

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಮೇಲೆ ಹೇಳಿದ ಮಾತು ಪೂರ್ಣ ಸತ್ಯವಲ್ಲ ಮನುಷ್ಯ ಸತತ ಕಠಿಣ ಪರಿಶ್ರಮದಿಂದ ಮೇಲೆ ಬರಲು, ತನ್ನ ತಪ್ಪುಹೆಜ್ಜೆಗಳಿಂದ ತಾನಾಗಿ ದುಷ್ಪ್ರಸಂಗಗಳನ್ನು ತಂದುಕೊಳ್ಳದಿರಲು ಹೇಳಿದ ಕಿವಿಮಾತು. "ಯತ್ನೇ ಕೃತೇ ಯದಿ ನ ಸಿಧ್ಯತಿ ಕೋsತ್ರ ದೋಷಃ?" ಎನ್ನುವಂತೆ ಮಾಡಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡಿದ ಮೇಲೂ ಕಾರ್ಯ ಕೈಗೂಡದಿದ್ದರೆ ಅದರಿಂದ ಹತಾಶನಾಗದೆ ತನ್ನ ಪ್ರಯತ್ನದಲ್ಲಿ ಯಾವ ಕೊರತೆಯೂ ಇಲ್ಲ, ಇದೆಲ್ಲಾ ದೈವೇಚ್ಛೆ ಎಂದು ಮನುಷ್ಯ ಪ್ರಯತ್ನಕ್ಕಿಂತ ಮೀರಿದ ಕಾಣದ ಶಕ್ತಿಯ ಕೈವಾಡವೆಂದು ಸಮಾಧಾನವನ್ನು ತಂದುಕೊಂಡು ಮುಂದೆ ಸಾಗಬೇಕೆಂಬ ಹಿತನುಡಿ.

ವಿಮಾನಯಾನದ ವೇಳಾಪಟ್ಟಿಯನ್ನು ನೋಡಿ ಮನೆಯಿಂದ ಹೊರಟರೆ ವಿಮಾನ ಸಿಕ್ಕಿತೇ ಹೊರತು ಪಂಚಾಂಗ ನೋಡಿ ರಾಹುಕಾಲವೆಂದು ತಡವಾಗಿ ಹೊರಟರೆ ಸಿಕ್ಕೀತೇ? ಕೆಲವೊಮ್ಮೆ ಸರಿಯಾದ ಸಮಯಕ್ಕೆ ಹೊರಟರೂ ದಾರಿಯಲ್ಲಿ ಎದುರಿಸಬೇಕಾಗಿಬರುವ ವಾಹನ ದಟ್ಟಣಿಯೇ (heavy traffic) "ರಾಹುಕಾಲ"! ಈಗೀಗಲಂತೂ ಪಂಚಾಂಗದ ಬದಲು ವೃತ್ತಪತ್ರಿಕೆಯನ್ನು ನೋಡಿಯೇ ಮನೆಯಿಂದ ಹೊರಡಬೇಕಾಗುತ್ತದೆ. ಕಾರಣ: ಸಾರಿಗೆ ಸಿಬ್ಬಂದಿ ಮುಷ್ಕರನಿರತರಾಗಿದ್ದರೆ ಬಸ್ಸು-ರೈಲು-ವಿಮಾನ ಸಿಗುವುದಾದರೂ ಹೇಗೆ ಸಾಧ್ಯ?

ವಿಮಾನವು ಮೇಲೇರಿದಂತೆ ಕೆಲವೊಮ್ಮೆ ಆಮ್ಲಜನಕದ ಕೊರತೆಯುಂಟಾದಾಗ ಆಕ್ಸಿಜನ್ ಮಾಸ್ಕ್ ತಂತಾನೆ ಕೆಳಗೆ ಇಳಿಬೀಳುವುದಾಗಿಯೂ, ಅದನ್ನು ಮೂಗಿಗೆ ಏರಿಸಿಕೊಂಡು ಉಸಿರಾಡಬೇಕೆಂದೂ ಗಗನಸಖಿ ಸೂಚನೆ ಕೊಡುತ್ತಾಳೆ. ಪಕ್ಕದಲ್ಲಿ ಮಕ್ಕಳಿದ್ದರೆ ಪೋಷಕರು ಮೊದಲು ಹಾಕಿಕೊಂಡು ನಂತರ ಮಕ್ಕಳಿಗೆ ತೊಡಿಸಬೇಕೆಂದು ಸೂಚಿಸುತ್ತಾಳೆ. ಅನೇಕ ದಶಕಗಳ ನಮ್ಮ ವಿಮಾನಯಾನದ ಅನುಭವದಲ್ಲಿ ಅಂತಹ ಪ್ರಸಂಗ ಇದುವರೆಗೂ ಬಂದೊದಗಿರುವುದಿಲ್ಲ. ಹಿರಿಯರು ಮೊದಲು ಆಕ್ಸಿಜನ್ ಮಾಸ್ಕ್ ಧರಿಸಿ ನಂತರ ಮಕ್ಕಳಿಗೆ ಧರಿಸಬೇಕೆಂಬುದಕ್ಕೆ ಕೊಡುವ ವೈಜ್ಞಾನಿಕ ಕಾರಣ ಏನಾದರೂ ಇರಲಿ ಅಂತಹ ಪ್ರಸಂಗವೇನಾದರೂ ಉದ್ಭವಿಸಿದರೆ ನಮ್ಮ ಪರಿಕಲ್ಪನೆಯಲ್ಲಿ ಯಾವ ತಾಯಂದಿರೂ ಹಾಗೆ ಮಾಡಲು ಮುಂದಾಗಲಾರರು. ತಾಯಿಗೆ ತನಗಿಂತ ತನ್ನ ಮಗುವಿನ ಪ್ರಾಣ ಮುಖ್ಯವಾಗುತ್ತದೆ. ಅದುವೇ ತ್ಯಾಗ. ಅಂತಹ ತ್ಯಾಗಭಾವನೆ ಇದ್ದರೆ ಜಗತ್ತಿನ ಅನೇಕ ಸಮಸ್ಯೆಗಳು ಸುಲಭವಾಗಿ ಪರಿಹಾರಗೊಳ್ಳುತ್ತವೆ.

ಮೇಲೆ ವಿವರಿಸಿದಂತೆ ಗಗನಸಖಿ ತನ್ನ ವೈಯಕ್ತಿಕ ಭವಿಷ್ಯ ಜೀವನದ ಬಗ್ಗೆ ಕಾತುರಳಾಗಿ ಪ್ರಶ್ನೆಯನ್ನು ಕೇಳಿದರೆ ಇಡೀ ವಿಶ್ವದ ನಾಗರೀಕ ಸಮಾಜವನ್ನು ಕಾಡಿಸುತ್ತಿರುವ "ಭಯೋತ್ಪಾದನೆ"ಯನ್ನು ಕುರಿತು ಕಳೆದ ವಾರ ಮೂರು ದಿನಗಳ ಕಾಲ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಚಿಂತನೆ ನಡೆಯಿತು. ಇತ್ತೀಚೆಗೆ ತಾನೆ ರಾಜೀನಾಮೆ ನೀಡಿದ ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಓಲಿ ಈ ಅಂತಾರಾಷ್ಟ್ರೀಯ ಸಮ್ಮೇಳನವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಭಾರತವನ್ನೂ ಒಳಗೊಂಡಂತೆ ಏಷ್ಯಾದ ಎಲ್ಲ ಪ್ರಮುಖ ರಾಷ್ಟ್ರಗಳಿಂದ ಸುಮಾರು 150 ಪಾರ್ಲಿಮೆಂಟ್ ಸದಸ್ಯರು ಮತ್ತು ಅನೇಕ ಮಂತ್ರಿ ಮಹೋದಯರು ಪಾಲ್ಗೊಂಡಿದ್ದರು. ಭಯೋತ್ಪಾದನೆಯ ನಿವಾರಣೆಗೆ ಶಾಂತಿಯುತ ಪರಿಹಾರಗಳೇನು, ಸರಕಾರ, ಸಮಾಜ ಮತ್ತು ಧಾರ್ಮಿಕ ಸಂಸ್ಥೆಗಳ ಪಾತ್ರವೇನು ಎಂಬ ವಿಷಯವಾಗಿ ಸುದೀರ್ಘ ಚರ್ಚೆ ನಡೆಯಿತು. ಯೂರೋಪಿಯನ್ ಪಾರ್ಲಿಮೆಂಟ್ ಮಾದರಿಯಲ್ಲಿ ಏಷ್ಯನ್ ಪಾರ್ಲಿಮೆಂಟನ್ನು ಸ್ಥಾಪಿಸಬೇಕೆಂಬ ಪ್ರಸ್ತಾಪವೂ ಮೂಡಿಬಂತು. ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಎಲ್ಲ ರಾಜಕೀಯ ಮತ್ತು ಧಾರ್ಮಿಕ ನೇತಾರರ ಆಶಯವೂ ಒಂದೇ ಆಗಿತ್ತು. ಸಭೆಯಲ್ಲಿ ಮಂಡಿಸಿದ ನಮ್ಮ ಭಾಷಣದ ಸಾರ: ಭಾರತೀಯರು ಉಪನಿಷತ್ ಕಾಲದಿಂದಲೂ "ಓಂ ಶಾಂತಿಃ ಶಾಂತಿಃ ಶಾಂತಿಃ" ಎಂದು ಶಾಂತಿಮಂತ್ರವನ್ನು ಜಪಿಸುತ್ತಲೇ ಬಂದಿದ್ದಾರೆ. ಆದರೂ ಶಾಂತಿಯೆಂಬುದು ಮರೀಚಿಕೆಯಾಗಿದೆ. ಅದಕ್ಕೆ ಕಾರಣ ಅದೇ ಶಾಂತಿಮಂತ್ರದಲ್ಲಿರುವ "ಮಾ ವಿದ್ವಿಷಾವಹೈ" ಅಂದರೆ ಯಾರನ್ನೂ ದ್ವೇಷಿಸುವುದು ಬೇಡ ಎಂಬುದನ್ನು ಜೀವನದಲ್ಲಿ ಕಾರ್ಯರೂಪಕ್ಕೆ ತರದೇ ಇರುವುದು. ಎಲ್ಲಿ ಹಗೆತನವಿರುತ್ತದೋ ಅಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಜಗತ್ತಿನ ಯಾವ ಧರ್ಮವೂ ಭಯೋತ್ಪಾದನೆಯನ್ನು ಬೋಧಿಸುವುದಿಲ್ಲ. ಧರ್ಮದ ವಿಕೃತ ರೂಪವೇ ಭಯೋತ್ಪಾದನೆ. ಇದನ್ನು ಕೇವಲ ಮಿಲಿಟರಿ ಕಾರ್ಯಾಚರಣೆಯಿಂದ ದಮನಗೊಳಿಸಲು ಸಾಧ್ಯವಿಲ್ಲ. ಸಾವಿಗೆ ಅಂಜದ ಭಯೋತ್ಪಾದಕನನ್ನು ಯಾವ ಸೈನ್ಯ ತಾನೇ ನಿಗ್ರಹಿಸಲು ಸಾಧ್ಯವಾದೀತು? ಧರ್ಮ, ನಾಡು ಮತ್ತು ಭಾಷೆ ನಮ್ಮ ಆಲೋಚನೆ ಮತ್ತು ವರ್ತನೆಯ ಮೇಲೆ ಪ್ರಭಾವ ಬೀರುತ್ತವೆ. ಜನರು ತಾವು ನಂಬಿದ ಧರ್ಮ, ಬಾಳುವ ನಾಡು, ಆಡುವ ಭಾಷೆಯೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ತಮ್ಮ ತಮ್ಮ ಧರ್ಮ, ನಾಡು, ನುಡಿಯ ಬಗ್ಗೆ ಅಭಿಮಾನಪಟ್ಟುಕೊಳ್ಳುವುದು ತಪ್ಪಲ್ಲ. ಆದರೆ ದುರಭಿಮಾನ ಸಲ್ಲ, ಇನ್ನೊಬ್ಬರ ಧರ್ಮ, ನಾಡು ಮತ್ತು ನುಡಿಯನ್ನು ಹಳಿಯುವುದು ತರವಲ್ಲ. ಇದನ್ನು ಗಮನದಲ್ಲಿರಿಸಿಕೊಂಡೇ ನಮ್ಮ ದೇಶದ ಪಾರ್ಲಿಮೆಂಟಿನ ಪ್ರವೇಶ ದ್ವಾರದ ಮೇಲಿರುವ ಸಂಸ್ಕೃತ ಸುಭಾಷಿತ. ಇಂದು ಪ್ರಚಲಿತವಿರುವ global village ಗಿಂತ global family ಎನ್ನುವ ಈ ಸಂದೇಶ ಮೇಲಲ್ಲವೇ?

ಅಯಂ ಪರೋ ನಿಜೋ ವೇತಿ ಗಣನಾ ಲಘುಚೇತಸಾಮ್| 
ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ||
(ಇವನು ನಮ್ಮವನು ಇವನು ನಮ್ಮವನಲ್ಲ ಎನ್ನುವರು ಹುಲು ಮಾನವರು 
ಉದಾರ ಚರಿತರಿಗೆ "ಇಡೀ ವಿಶ್ವವೇ ಒಂದು ಕುಟುಂಬ"!)

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 4.8.2016