ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ
ಜುಲೈ ಮಾಸಾಂತ್ಯದಲ್ಲಿ ಕಠ್ಮಂಡುವಿನ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಮುಗಿಸಿಕೊಂಡು ದೆಹಲಿಗೆ ವಾಪಾಸು ಬಂದಾಗ ಭರ್ಜರಿ ಮಳೆ, ಜಲಾಶಯದ ನಾಲೆಗಳಲ್ಲಿ ತುಂಬಿ ಹರಿಯುವಂತೆ ಮಳೆನೀರು ರಸ್ತೆಗಳ ಮೇಲೆ ಹರಿಯುತ್ತಿತ್ತು. ಜನರು ಆಫೀಸುಗಳಿಂದ ಹಿಂದಿರುಗುವ ಸಂಜೆಯ ಸಮಯ ಬೇರೆ; ವಿಪರೀತ ಟ್ರಾಫಿಕ್. ವಾಹನಗಳು ನೀರಿನಲ್ಲಿ ತೇಲುವ ಹರಿಗೋಲಿನಂತೆ, ಆಮೆ ವೇಗದಲ್ಲಿ ಚಲಿಸುತ್ತಿದ್ದವು. ಮಕ್ಕಳು ತಂತಮ್ಮ ಮನೆಗಳ ಮುಂದೆ ಹರಿಯುತ್ತಿದ್ದ ನೀರಿನಲ್ಲಿ ಈಸುತ್ತಿದ್ದರು, ಪರಸ್ಪರ ನೀರೆರೆಚುತ್ತಿದ್ದರು, ಡೈವ್ ಹೊಡೆಯುತ್ತಿದ್ದರು, ಮುಳುಗೇಳುತ್ತಾ ಖುಷಿಪಡುತ್ತಿದ್ದರು. ಸಿರಿಗೆರೆಗೆ ಫೋನ್ ಮಾಡಿ ವಿಚಾರಿಸಿದಾಗ ಕರ್ನಾಟಕದಲ್ಲಿ ಅಂತಹ ಮಳೆಯೇನೂ ಇಲ್ಲವೆಂದು ತಿಳಿದು ವೇದನೆಯಾಯಿತು.
ದೆಹಲಿಯಿಂದ ಮುಂಬಯಿಗೆ ಬಂದಾಗ ಕುಂಭದ್ರೋಣ ಮಳೆ, ದೆಹಲಿಯನ್ನು ಮೀರಿಸುವಷ್ಟು ವರ್ಷಧಾರೆ. ಹಳೆಯ ಕಾಲದ ಸೇತುವೆಯೊಂದು ಮುರಿದುಬಿದ್ದು ಅಮಾಯಕರ ಪ್ರಾಣವನ್ನು ಅಪಹರಿಸುವಂತಹ ಭೀಕರ ಮಳೆ. ಮಾರನೆಯ ದಿನ ಬೆಂಗಳೂರಿಗೆ ಪ್ರಯಾಣಿಸಲು ಸಾಧ್ಯವಾಗುತ್ತದೋ ಇಲ್ಲವೋ ಎಂಬ ಅನುಮಾನ ಕಾಡಿತು. ವಿಮಾನ ಪ್ರಯಾಣ ಸಾಧ್ಯವಾಗದಿದ್ದರೆ ರೈಲಿನಲ್ಲಾದರೂ ಪ್ರಯಾಣಿಸಬೇಕೆಂದರೆ ಅವೂ ಸಹ ವಿಪರೀತ ಮಳೆಯ ಕಾರಣ ಸ್ಥಗಿತವಾಗಿದ್ದವು. ಸಿರಿಗೆರೆಗೆ ಮತ್ತೆ ಫೋನಾಯಿಸಿದಾಗ ಇಲ್ಲಿ ಮಳೆಯ ಸುಳಿವೇ ಇಲ್ಲವೆಂಬ ಕಹಿಸುದ್ದಿ! ಓಡುವ ಮೋಡಗಳಿಗೆ ಮೊರೆಯಿಡುವ ಭೂಮಿಯ ತಳಮಳವನ್ನು ಚಿತ್ರಿಸುವ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪನವರ ಕವಿತೆ ನೆನಪಾಯಿತು. “ಎಲ್ಲಿ ಹೋಗುವಿರಿ, ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ” ಎಂಬ ಅವರ ಕವಿತೆಯ ಸಾಲುಗಳನ್ನು “ಇಲ್ಲಿ ನಿಲ್ಲದಿರಿ ಸಾಗಿ ಮೋಡಗಳೆ, ನಮ್ಮ ನಾಡ ಕಡೆಗೆ” ಎಂದು ಹೇಳಬೇಕೆನಿಸಿತು! ಅಂತೂ ವಿಮಾನವೇರಿ ಬೆಂಗಳೂರಿಗೆ ಬಂದಿಳಿದಾಗ ಇಲ್ಲಿ ಒಂದು ಹನಿ ಮಳೆಯ ಸುಳಿವೂ ಇರಲಿಲ್ಲ. ಅಲ್ಲಿ ದಟ್ಟವಾದ ಕಡುಕಪ್ಪು ಮೋಡಗಳು ಗಗನವನ್ನು ತುಂಬಿದ್ದರೆ ಇಲ್ಲಿ ನಿಶ್ಯಕ್ತವಾಗಿ ರಕ್ತಹೀನತೆಯಿಂದ ನರಳುವ ರೋಗಿಯಂತೆ ಆಗಸದಲ್ಲಿ ಬೆಳ್ಳಗೆ ಬಿಳಿಚಿಕೊಂಡ ಮೋಡಗಳೇ ತುಂಬಿಕೊಂಡಿದ್ದವು.
ಮಳೆ ಕೇವಲ ರೈತರ ಜೀವನಾಡಿ ಅಷ್ಟೇ ಅಲ್ಲ; ಅದು ದೇಶದ ಜೀವನಾಡಿಯೂ ಹೌದು. ಬೇಸಾಯವು ಮಳೆಯನ್ನು ಅವಲಂಬಿಸಿದರೆ ಇತರ ಉದ್ದಿಮೆಗಳು ಕೃಷಿಯನ್ನು ಆಧರಿಸಿವೆ. ಕೃಷಿಯಿಂದ ಕೇವಲ ರೈತನು ಮಾತ್ರ ಬದುಕನ್ನು ಕಟ್ಟಿಕೊಳ್ಳುವುದಿಲ್ಲ; “ಮೇಟಿಯಿಂ ರಾಟೆ ನಡೆದುದದಲ್ಲದೆ ದೇಶದಾಟವೇ ಕೆಡುಗು” ಎಂದು ಸರ್ವಜ್ಞ ಹೇಳುವಂತೆ ದೇಶದ ಸಮಸ್ತ ಆಗುಹೋಗುಗಳು ಕೃಷಿಯ ಏಳು ಬೀಳುಗಳನ್ನೇ ಅವಲಂಬಿಸಿವೆ. ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಬರಲಿದೆ ಎಂದು ಹವಾಮಾನ ತಜ್ಞರು ಹೇಳಿದ ದಿನವೇ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಗಗನಮುಖಿಯಾಗಿದ್ದು ಇದನ್ನೇ ಸೂಚಿಸುತ್ತದೆ. ಸಕಾಲದಲ್ಲಿ ಮಳೆ ಬಾರದೇ ಹೋದರೆ ರೈತರ ಬವಣೆ ಹೇಳತೀರದು. ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ನಮ್ಮ ದೇಶವು 7 ನೆಯ ಸ್ಥಾನದಲ್ಲಿದೆ. ಕೆನಡಾ, ಆಸ್ಟ್ರೇಲಿಯಾ ಮತ್ತು ಇಟಲಿಗಳದು ಭಾರತದ ನಂತರದ ಸ್ಥಾನ! ಹೀಗಿದ್ದರೂ ನಮ್ಮ ದೇಶದ ಕೃಷಿಕ ಬಡವನೇ ಆಗಿ ಉಳಿದಿರುವುದು ಮಾತ್ರ ದೊಡ್ಡ ವ್ಯಂಗ್ಯ! “India is a rich country inhabited by poor people” ಎಂಬ ಮಾತು ನೆನಪಾಗುತ್ತದೆ.
ತಮ್ಮ ಮಕ್ಕಳನ್ನು ರೈತರನ್ನಾಗಿ ಮಾಡಲು ಯಾವ ರೈತನೂ ಇಷ್ಟಪಡುವುದಿಲ್ಲ. "ಬೇಸಾಯ ಎಂದರೆ ನೀ ಸಾಯ, ನಿನ್ನ ಮಗ ಸಾಯ, ಮನೆಮಂದಿಯೆಲ್ಲ ಸಾಯ" ಎಂಬ ದಾರುಣ ಸ್ಥಿತಿ! ಬೇಸಾಯ ಕಟ್ಟಿಕೊಂಡು ನಾನು ಸಾಯುತ್ತಿರುವುದೇ ಸಾಕು, ನನ್ನ ಮಕ್ಕಳಿಗೆ ಅಂತಹ ದುರವಸ್ಥೆ ಬರುವುದು ಬೇಡ ಎಂಬ ಮನೋಭಾವ ರೈತನದು! ಮಕ್ಕಳನ್ನು ಓದಿಸಿ ಡಾಕ್ಟರೋ, ಎಂಜಿನಿಯರೋ ಆಗುವಂತೆ ಮಾಡಬೇಕೆಂಬುದು ಅವನ ಹಂಬಲ. ಒಂದು ವೇಳೆ ಮಗ ಅವುಗಳಿಗೆ ಲಾಯಕ್ಕಿಲ್ಲದಿದ್ದರೆ ಕಾಲೇಜು ಅಧ್ಯಾಪಕನೋ, ಶಾಲಾ ಮಾಸ್ತರೋ, ಸರಕಾರಿ ಆಫೀಸಿನಲ್ಲಿ ಗುಮಾಸ್ತನೋ, ಅಟೆಂಡರೋ, ಕೊನೆಗೆ ಜವಾನನೋ ಆಗಲಿ ಸಾಕು ಎನ್ನುತ್ತಾನೆ. ಅದಕ್ಕಾಗಿ ತನ್ನ ಜಮೀನನ್ನು ಮಾರಿಯಾದರೂ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಮಕ್ಕಳಿಗೆ ಸರ್ಕಾರೀ ನೌಕರಿ ಕೊಡಿಸಲು ಅವನು ಹಿಂದೆ ಮುಂದೆ ನೋಡುವುದಿಲ್ಲ "ಸರ್ವೇ ಗುಣಾಃ ಕಾಂಚನಮಾಶ್ರಯಂತಿ" ಎನ್ನುವಂತೆ ಎಲ್ಲೆಲ್ಲೂ ಹಣದ ಮಹತ್ವ ಎದ್ದು ಕಾಣುತ್ತಿರುವಾಗ ಬಡತನದಲ್ಲಿ ಹುಟ್ಟಿ, ಬಡತನದಲ್ಲಿ ಬೆಳೆದು ಬಡತನದಲ್ಲಿಯೇ ಸಾಯುವ ಬೇಸಾಯ ಏಕೆ ಬೇಕೆಂದು ರೈತ ಯೋಚಿಸಿದರೆ ತಪ್ಪೇನಿದೆ! ಭಾರತೀಯ ಜನಜೀವನದಲ್ಲಿ ಕೃಷಿ ಎಂಬುದು ಬೌದ್ಧಿಕ ಪ್ರತಿಭೆ ಇಲ್ಲದವರು ಮಾಡುವ ಹೊಟ್ಟೆ ಪಾಡಿನ ಕೆಲಸವೆಂದೇ ಪರಿಗಣಿತವಾಗಿದೆಯೆಂಬುದಕ್ಕೆ ಈ ಮುಂದಿನ ಸಂಸ್ಕೃತ
ಸುಭಾಷಿತವೇ ಸಾಕ್ಷಿ:
ವೇದೈರ್ವಿಹೀನಾಶ್ಚ ಪಠಂತಿ ಶಾಸ್ತ್ರಂ
ಶಾಸ್ತ್ರೇಣ ಹೀನಾಶ್ಚ ಪುರಾಣಪಾಠಾಃ|
ಪುರಾಣಹೀನಾಃ ಕೃಷಿನೋ ಭವಂತಿ
ಭ್ರಷ್ಟಾಸ್ತತೋ ಭಾಗವತಾಃ ಭವಂತಿ!||
ವೇದಗಳನ್ನು ಅಧ್ಯಯನ ಮಾಡುವ ಕ್ಷಮತೆಯಿಲ್ಲದವರು ಶಾಸ್ತ್ರಗಳನ್ನು ಓದುತ್ತಾರೆ. ಶಾಸ್ತ್ರಗಳನ್ನು ಓದುವ ಕ್ಷಮತೆಯಿಲ್ಲದವರು ಪುರಾಣಗಳನ್ನು ಓದುತ್ತಾರೆ. ಪುರಾಣಗಳನ್ನು ಓದುವ ಕ್ಷಮತೆಯೂ ಇಲ್ಲದವರು ಕೃಷಿಕರಾಗುತ್ತಾರೆ. ಕೃಷಿಕರಾಗಲೂ ಯೋಗ್ಯತೆಯಿಲ್ಲದವರು ತಾಳ ತಂಬೂರಿ ಹಿಡಿದು ಭಾಗವತರಾಗುತ್ತಾರೆ ಎನ್ನುತ್ತದೆ ಈ ಸುಭಾಷಿತ!
ಕಳೆದ ಕೆಲವು ದಿನಗಳಿಂದ ಕರ್ನಾಟಕ ಮತ್ತು ತಮಿಳುನಾಡು ಹತ್ತಿ ಉರಿಯುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದು ಅದನ್ನು ನಂದಿಸಲು ಕಾವೇರಿಯಲ್ಲಿ ನೀರಿಲ್ಲ, ಇಂದಿನ ಕೃಷಿ ಮಳೆಯೊಂದಿಗೆ ಆಡುವ ಜೂಜಾಗಿದೆ. ಸಕಾಲದಲ್ಲಿ ಮಳೆಯಿಲ್ಲದೆ, ಅಕಾಲದಲ್ಲಿ ಮಳೆ ಸುರಿದು, ಬೆಳೆ ಚೆನ್ನಾಗಿ ಬಂದರೂ ಬೆಲೆ ಸಿಗದೆ ಬಂದೊದಗುವ ನಷ್ಟಗಳ ಪರಂಪರೆಯಿಂದ ಬೀಜ ಮತ್ತು ಗೊಬ್ಬರಕ್ಕೆ ಮಾಡಿದ ಖರ್ಚೂ ಹುಟ್ಟದೆ ರೈತನು ದಿಕ್ಕುಗಾಣದೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ದೊಡ್ಡ ದುರಂತವಾಗಿದೆ. ಸತ್ತಾಗ ಪರಿಹಾರ ನೀಡುವುದಕ್ಕಿಂತ ರೈತ ನಿರುಮ್ಮಳವಾಗಿ ಸ್ವಾಭಿಮಾನಿಯಾಗಿ ಬದುಕುವ ಅವಕಾಶವನ್ನು ಸರಕಾರ ಒದಗಿಸಿಕೊಡಬೇಕು.
ಈ ನಿಟ್ಟಿನಲ್ಲಿ "ಪ್ರಧಾನ ಮಂತ್ರಿ ಫಸಲ್ ಬಿಮಾ" ಯೋಜನೆ ಜಾರಿಗೆ ಬಂದಿದ್ದರೂ ಪ್ರಧಾನ ಮಂತ್ರಿ ಮೋದಿಯವರ ಭಾಷಣ ಜನರನ್ನು ಮೋಡಿ ಮಾಡಿದಂತೆ, ಈ ಯೋಜನೆ ರೈತರನ್ನು ಮೋಡಿ ಮಾಡುವಲ್ಲಿ ವಿಫಲವಾಗಿದೆ. ಶೇಕಡ 80 ರಷ್ಟು ರೈತರು ಈ ಯೋಜನೆಯಡಿಯಲ್ಲಿ ವಿಮೆ ಮಾಡಿಸಿರುವುದಿಲ್ಲ. ವಿಮೆ ಪಾವತಿಸಿದ ಶೇಕಡ 20 ರಷ್ಟು ರೈತರೂ ಸಹ ಸ್ವಪ್ರೇರಣೆಯಿಂದ ಪಾವತಿಸಿರುವುದಿಲ್ಲ. ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಾಲ ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಮುರಿದುಕೊಂಡಿದ್ದಾರೆ. ಸಣ್ಣಮೊತ್ತದ ಪ್ರೀಮಿಯಂ ಪಾವತಿಸಿ ಬೆಳೆ ನಷ್ಟವಾದರೆ ವಿಮಾ ರಕ್ಷಣೆ ಪಡೆಯುವ ಈ ಸವಲತ್ತನ್ನು ರೈತರು ಸರಿಯಾಗಿ ಬಳಸಿಕೊಳ್ಳದಿರುವುದಕ್ಕೆ ರೈತರ ಉಪೇಕ್ಷೆ ಕಾರಣವೇ ಅಥವಾ ವಿಮಾ ನಿಯಮಗಳಲ್ಲಿ ಏನಾದರೂ ದೋಷವಿದೆಯೇ? ಈ ಯೋಜನೆಯು ರೈತರಿಗಿಂತ ವಿಮಾಕಂಪನಿಗಳಿಗೆ ಹೆಚ್ಚು ಲಾಭದಾಯಕವಾಗಿದೆ ಎನ್ನುವ ರೈತ ಮುಖಂಡರ ಆರೋಪವನ್ನು ತಳ್ಳಿಹಾಕುವಂತಿಲ್ಲ. ವಿಮೆಯ ನಿಯಮಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡುಬಂದರೂ ಕಳೆದ ಏಳು ವರ್ಷಗಳ ಕಾಲಾವಧಿಯಲ್ಲಿ ಬಂದಿರುವ "ಹೊಸ್ತಿಲ ಇಳುವರಿ"ಯ (threshold yield) ಸರಾಸರಿ ಆಧಾರದ ಮೇಲೆ ಶೇಕಡ 33 ರಷ್ಟು ಬೆಳೆ ನಷ್ಟವಾಗಿದ್ದರೆ ಮಾತ್ರ ಬೆಳೆ ಪರಿಹಾರ ನೀಡುವುದಾಗಿ ಮಾಡಿರುವ ನಿಯಮದಿಂದ ರೈತರಿಗೆ ಯಾವ ಪ್ರಯೋಜನವೂ ಇಲ್ಲ. ಕಳೆದ 14 ವರ್ಷಗಳಲ್ಲಿ 11 ವರ್ಷಗಳ ಕಾಲ ಬರಗಾಲದಿಂದ ತತ್ತರಿಸಿದ ರೈತರಿಗೆ ವಿಮಾ ಕಂತು ಕಟ್ಟವುದೆಂದರೆ ಗಾಯದ ಮೇಲೆ ಬರೆ ಎಳೆದಂತೆ! ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಮಾ ಕಂಪನಿಗಳಿಗೆ ಪಾವತಿಸುವ ತಮ್ಮ ಪಾಲಿನ ವಿಮಾ ಹಣವನ್ನೇ ನೇರವಾಗಿ ರೈತರಿಗೆ ಪಾವತಿಸಿದರೆ ರೈತರು ಬದುಕಿಯಾರು. ಈ ಸಂಬಂಧವಾಗಿ ನಮ್ಮ ಲಿಂಗೈಕ್ಯ ಗುರುವರ್ಯರ ಶ್ರದ್ಧಾಂಜಲಿ ಕಾರ್ಯಕ್ರಮದ ಆರಂಭದ ದಿನವಾದ ಇದೇ 19ರಂದು ಸೋಮವಾರ ಸಿರಿಗೆರೆಯಲ್ಲಿ ರಾಜ್ಯದ ಸಚಿವರು, ಕೃಷಿ ಇಲಾಖೆ-ಬ್ಯಾಂಕ್-ವಿಮಾ ಸಂಸ್ಥೆಗಳ ಅಧಿಕಾರಿಗಳು ಹಾಗೂ ರೈತರ ಮಧ್ಯೆ "ಬೆಳೆ ವಿಮೆ - ಸಂವಾದ".
ರೈತನೇ ಈ ದೇಶದ ಬೆನ್ನೆಲುಬು; ನಾಡಿನ ಅನ್ನದಾತ. "ರಾಜ್ಯಗಳಳಿಯಲಿ, ರಾಜ್ಯಗಳುದಿಸಲಿ, ಹಾರಲಿ ಗದ್ದುಗೆ ಮಕುಟಗಳು.ತನ್ನೀ ಕಾರ್ಯವ ಬಿಡನೆಂದೂ" ಎನ್ನುವಂತೆ ತನ್ನ ಕಾಯಕವನ್ನು ಮುಂದುವರಿಸಿಕೊಂಡು ಹೋಗುವ ನೇಗಿಲಯೋಗಿ ಆತ. ನೀರನ್ನು ಕೊಟ್ಟರೆ ಸಾಕು ಬಂಗಾರವನ್ನೇ ಬಿತ್ತಿ ಬೆಳೆಯುವ ಕ್ಷಮತೆ ಈ ನಾಡಿನ ರೈತನಿಗಿದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 15.9.2016