ವಿಶ್ವವಿದ್ಯಾನಿಲಯದ ಡಿಗ್ರಿಗಳು ಅಸಲಿಯೋ ನಕಲಿಯೋ?
ಶಿಕ್ಷಣ ಎಂದರೆ ಏನು? ಸುಶಿಕ್ಷಿತ ಎಂದರೆ ಯಾರು? ವಿದ್ಯಾವಂತ ಅವಿದ್ಯಾವಂತ ಎಂದರೇನು? ಈ ಪ್ರಶ್ನೆಗಳನ್ನು ಕೇಳುವುದು ಸುಲಭ. ಆದರೆ ಉತ್ತರ ಮಾತ್ರ ಅಷ್ಟು ಸುಲಭವಾಗಿ ದೊರೆಯುವಂಥದ್ದಲ್ಲ, ಶಿಕ್ಷಣದ ಮೂಲ ಉದ್ದೇಶ ಜ್ಞಾನದ ಹಸಿವನ್ನು ಹಿಂಗಿಸುವುದು. ಅದು ಇಂದಿನ ವಿದ್ಯಾಭ್ಯಾಸ ಪದ್ದತಿಯಲ್ಲಿ ಸಾಧ್ಯವೇ ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ! ಶಾಲಾ ಕಾಲೇಜುಗಳಲ್ಲಿ ಓದುವವರನ್ನು ವಿದ್ಯಾವಂತರೆಂದೂ ಸುಶಿಕ್ಷಿತರೆಂದೂ ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಅಕ್ಷರ ಬಲ್ಲವನು ಸುಶಿಕ್ಷಿತ; ಅಕ್ಷರ ಬಾರದವನು ಅಶಿಕ್ಷಿತ ಇದು ಸಾಮಾನ್ಯ ಗ್ರಹಿಕೆ. ಆದರೆ ಇದು ಸರಿಯೆ? ಓದು ಬರಹ ಬಲ್ಲವರು ಮಾತ್ರ ಬುದ್ಧಿವಂತರು, ಓದು ಬರೆಹ ಬಾರದ ಹಳ್ಳಿ ಜನರು ದಡ್ಡರು ಎಂಬುದನ್ನು ಒಪ್ಪಲಾಗದು. ಶಾಲಾ ಕಾಲೇಜು ಮೆಟ್ಟಿಲು ಹತ್ತದೇ ಇರುವ ಓದು ಬರೆಹ ಬಾರದಿರುವ ಎಷ್ಟೋ ಜನರು ಸುಸಂಸ್ಕೃತರಾಗಿರುತ್ತಾರೆ. ಅವರ ಮಾತು ಮತ್ತು ನಡವಳಿಕೆಗಳಲ್ಲಿ ಅದು ಎದ್ದು ಕಾಣುತ್ತದೆ. ಓದು ಬರೆಹ ಬರುವುದಿಲ್ಲ ಎಂಬುದೊಂದನ್ನು ಬಿಟ್ಟರೆ ಅವರ ನಡೆ-ನುಡಿ-ವ್ಯಕ್ತಿತ್ವಗಳಲ್ಲಿ ಉತ್ತಮ ಸಂಸ್ಕಾರ ಗೋಚರಿಸುತ್ತದೆ. ಸುಸಂಸ್ಕೃತ ಬದುಕಿನ ಒಂದು "ಝಲಕ್" ಅವರಲ್ಲಿ ಕಾಣ ಸಿಗುತ್ತದೆ. ಅದು ಓದಿನಿಂದ ಬಂದದ್ದಲ್ಲ. ತಂದೆ-ತಾಯಿ, ಅಜ್ಜ-ಅಜ್ಜಿ ಮನೆಯ ವಾತಾವರಣದಿಂದ ಬಂದದ್ದು.
ಓದಿದವರು ಎಷ್ಟೋ ಜನ ಹೆಸರಿಗೆ ಸುಶಿಕ್ಷಿತರೆನಿಸಿದರೂ ಅವರ ವರ್ತನೆ ಮಾತ್ರ ವಿಲಕ್ಷಣವಾಗಿರುತ್ತದೆ. ಹೆಸರಿಗಷ್ಟೇ ಅವರು ಸಾಕ್ಷರರು; ವಾಸ್ತವದಲ್ಲಿ ರಾಕ್ಷಸರು! ಬೆಂಗಳೂರಿನ ಸಂಶೋಧನಾ ವಿಜ್ಞಾನಿಯೊಬ್ಬ ಅಂತಾರಾಷ್ಟ್ರೀಯ ಡ್ರಗ್ ದಂಧೆ ನಡೆಸುತ್ತಿರುವುದಾಗಿ ಇತ್ತೀಚೆಗೆ ಬಂದ ವರದಿ ಸೂಚಿಸುವುದಾದರೂ ಏನನ್ನು! ಇನ್ನೊಂದೆಡೆ ಪೆನ್ ಹಿಡಿದು ಮನುಕುಲದ ಉದ್ಧಾರಕ್ಕೆ ಶ್ರಮಿಸಬೇಕಾದ ಯುವಕರೇ ದಾರಿತಪ್ಪಿ ಗನ್ ಹಿಡಿದು ಮಾನವ ಕುಲಕ್ಕೆ ಕಂಟಕರಾಗುತ್ತಿದ್ದಾರೆ. “ಈಗಿನ ವಿದ್ಯಾವಂತರಿಂದಲೇ ಜಗತ್ತಿಗೆ ಮಹಾ ಹಾನಿಯಾಗುತ್ತಿರುವುದು” ಎಂದು ನಮ್ಮ ಲಿಂಗೈಕ್ಯ ಗುರುವರ್ಯರು 1937 ರಷ್ಟು ಹಿಂದಿನ ತಮ್ಮ ದಿನಚರಿ "ಆತ್ಮನಿವೇದನೆ" ಯಲ್ಲಿ ಬರೆದಿರುವ ಮಾತು ಜಗತ್ ಪ್ರಸಿದ್ಧ ಫ್ರೆಂಚ್ ಪ್ರವಾದಿ ನಾಸ್ಟ್ರೋಡಾಮಸ್ ನ ಭವಿಷ್ಯ ನುಡಿಯಂತೆ ಇದೆ. ಇದಕ್ಕೆ ತದ್ವಿರುದ್ಧವಾಗಿ ವಿದ್ಯಾವಂತರಲ್ಲದ ಹಳ್ಳಿಯ ಬಹುಪಾಲು ನಿರಕ್ಷರ ಕುಕ್ಷಿಗಳು ಸುಸಂಸ್ಕೃತರಾಗಿರುವುದನ್ನು ಕಾಣಬಹುದು. ಆದ್ದರಿಂದ ಓದು ಬರೆಹ ಬಲ್ಲವರು ಸುಶಿಕ್ಷಿತರು, ಬಾರದವರು ಅಶಿಕ್ಷಿತರು ಎಂಬ ಪರಿಕಲ್ಪನೆಯೇ ಸರಿಯಲ್ಲ! ಓದು ಜ್ಞಾನಸಂಪಾದನೆಗೆ ಒಂದು ಸಾಧನ ಮಾತ್ರ. ಓದದವರು ಜ್ಞಾನಿಗಳಲ್ಲವೆಂದು ಹೀಗಳೆಯಲಾಗದು. ಇಲ್ಲದಿದ್ದರೆ “ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್ ಈ ನಾಡವರ್ಗಳ್” ಎಂದು ಕವಿರಾಜಮಾರ್ಗಕಾರನು ಉದ್ಧರಿಸಲು ಬರುತ್ತಿರಲಿಲ್ಲ.
ಮೊನ್ನೆ ಸಿರಿಗೆರೆಯ ನಮ್ಮ ಪದವಿ ಕಾಲೇಜಿನ ವಿದ್ಯಾರ್ಥಿಗಳನ್ನು ಮತ್ತು ಅವರ ಅಧ್ಯಾಪಕರನ್ನು ಕರೆಸಿ ಮಾತಾಡಿಸಿದ ಒಂದು ಪ್ರಸಂಗ. ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಗಣಕ ಯಂತ್ರದಲ್ಲಿ ನಮೂದುಗೊಳಿಸಲಾಗಿತ್ತು. ಗಳಿಸಿದ ಅಂಕಗಳ ಕಾಲಂ ಅನ್ನು ಮರೆಗೊಳಿಸಿ ವಿದ್ಯಾರ್ಥಿಗಳ ಹೆಸರಿನ ಪಟ್ಟಿಯನ್ನಷ್ಟೇ ತೋರಿಸಿ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಲು ಅಧ್ಯಾಪಕರಿಗೆ ಹೇಳಿದೆವು. ಹೀಗೆ ಒಬ್ಬರಲ್ಲ ಇಬ್ಬರು ಅಧ್ಯಾಪಕರಿಂದ ಪ್ರತ್ಯೇಕ ಪ್ರತ್ಯೇಕವಾಗಿ ಉತ್ತಮ ಮತ್ತು ಸಾಧಾರಣ ವಿದ್ಯಾರ್ಥಿಗಳೆಂದು ಗುರುತುಮಾಡಿಸಿದ ಪಟ್ಟಿ ತಾಳೆಯಾಯಿತೇ ಹೊರತು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆದ ಅಂಕಗಳು ತಾಳೆಯಾಗಲಿಲ್ಲ. ಪ್ರತಿಭಾನ್ವಿತರೆಂದು ಗುರುತು ಮಾಡಿದ ಅನೇಕ ವಿದ್ಯಾರ್ಥಿಗಳು ಅಂಕಗಳ ಕಾಲಂ ಅನ್ನು ತೆರೆದು ನೋಡಿದಾಗ "ಸಿ" ಅಥವಾ "ಡಿ" ಶ್ರೇಣಿ ಪಡೆದಿದ್ದರು. ಅದೇ ರೀತಿ ಅಧ್ಯಾಪಕರು ಗುರುತು ಮಾಡಿದ್ದ ಸಾಧಾರಣ ವಿದ್ಯಾರ್ಥಿಗಳು ಕೆಲವರು ಪರೀಕ್ಷೆಯಲ್ಲಿ "ಎ" ಗ್ರೇಡ್ ಅಂಕ ಪಡೆದಿದ್ದರು. ಹಾಗಾದರೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಮರ್ಪಕವಾಗಿ ಆಗಿಲ್ಲವೇ ಎಂಬ ಪ್ರಶ್ನೆಗೆ ಅಧ್ಯಾಪಕರು ಕೊಟ್ಟ ಉತ್ತರ: “ಅವರು ಉರುಹೊಡೆದು ಉತ್ತರ ಬರೆದು ಹೆಚ್ಚಿನ ಅಂಕಗಳನ್ನು ಬಾಚಿಕೊಂಡಿದ್ದಾರೆ”! ಹೀಗೆ ಪರೀಕ್ಷಾ ಅಂಕಗಳಿಗೂ ತರಗತಿಯಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿಯು ಹೇಗೆ ಪ್ರತಿಕ್ರಿಯಿಸುತ್ತಾನೆಂಬ ಅಧ್ಯಾಪಕರ ಸಮೀಕ್ಷೆಗೂ ತಾಳೆಯೇ ಇರಲಿಲ್ಲ, ಆದಕಾರಣ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಗಳಿಸುವ ಅಂಕಗಳು ಆತನ ಬೌದ್ಧಿಕ ಪ್ರತಿಭೆಯ ಮಾನದಂಡ ಅಲ್ಲವೇ ಅಲ್ಲ.
ನಮ್ಮ ಶಾಲಾ ಕಾಲೇಜು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳನ್ನೋ ಗೈಡುಗಳನ್ನೋ ಓದಿ ಉರುಹೊಡೆದು ಪರೀಕ್ಷೆಗಳಲ್ಲಿ ಅದನ್ನು ಭಟ್ಟಿ ಇಳಿಸಿ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸುತ್ತಾರೆ. ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯು ವಿಷಯವನ್ನು ತಲಸ್ಪರ್ಶಿಯಾಗಿ ತಿಳಿದು ಬರೆದಿದ್ದಾನೋ ಉರುಹೊಡೆದು ಬರೆದಿದ್ದಾನೋ ಎಂಬುದು ಮೌಲ್ಯಮಾಪಕರಿಗೆ ಗೊತ್ತಾಗುವುದಿಲ್ಲ. ಪ್ರಶ್ನೆಗೆ ಸರಿಯಾದ ಉತ್ತರವನ್ನು ಹೇಗಾದರೂ ಬರೆದಿರಲಿ ಅಂಕಗಳು ತೆಕ್ಕೆಗೆ ಬಂದು ಬೀಳುತ್ತವೆ. ಹೀಗಾಗಿ ಬುದ್ಧಿಮತ್ತೆಯ ಪರೀಕ್ಷೆ ಈಗಿನ ಪರೀಕ್ಷಾ ಪದ್ಧತಿಯಿಂದ ಸಾಧ್ಯವಿಲ್ಲ. ಟಿ.ಪಿ.ಕೈಲಾಸಂ ಅವರು ನಮ್ಮ ಇಂದಿನ ಪರೀಕ್ಷೆಗಳನ್ನು ವಾಂತಿಕ್ರಿಯೆಗೆ ಹೋಲಿಸುತ್ತಾರೆ. ವರ್ಷಪೂರ್ತಿ ತರಗತಿಗಳಲ್ಲಿ ಅಧ್ಯಾಪಕರು ಕೊಟ್ಟ ನೋಟ್ಸ್ ಗಳನ್ನು ಮತ್ತು ಗೈಡ್ ಗಳನ್ನು ಉರುಹೊಡೆದು ತಲೆಯಲ್ಲಿ ತುಂಬಿಕೊಂಡು ಯಾರು ಉತ್ತರಪತ್ರಿಕೆಯ ಮೇಲೆ ಹೆಚ್ಚು ವಾಂತಿ ಮಾಡಿಕೊಳ್ಳುತ್ತಾರೋ ಅವರಿಗೇ ಹೆಚ್ಚು ಅಂಕಗಳು! ವಾಂತಿ ಮಾಡುವುದು ಆರೋಗ್ಯದ ಲಕ್ಷಣವಲ್ಲ. ಹಾಗೆಯೇ ಉರುಹೊಡೆದು ಬರೆದು ಅಂಕ ಗಳಿಸುವುದು ಆರೋಗ್ಯದ ಲಕ್ಷಣವಲ್ಲ! ಆದಕಾರಣ ಇಂದಿನ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳು ಪಡೆಯುವ ಡಿಗ್ರಿಗಳು ಅಸಲಿಯಾಗಿದ್ದರೂ ಕಲಿಕೆಯ ದೃಷ್ಟಿಯಿಂದ ನಕಲಿ!
ನಮ್ಮ ಮಠದಲ್ಲಿರುವ ೧೮ ಮತ್ತು ೧೯ ನೇ ಶತಮಾನದ ಕೆಲವು ನ್ಯಾಯಾಲಯದ ತೀರ್ಪುಗಳನ್ನು ಇತ್ತೀಚೆಗೆ ಓದುತ್ತಿರುವಾಗ ಗಮನಿಸಿದ ಸಂಗತಿಯೆಂದರೆ ಅಂದಿನ ನ್ಯಾಯಾಧೀಶರುಗಳಿಗೆ ಈಗಿನ ಮಾನದಂಡದ ಪ್ರಕಾರ ಹೆಚ್ಚಿನ ಡಿಗ್ರಿಗಳೇನೂ ಇರಲಿಲ್ಲ. ಕೇವಲ ಬಿ.ಎ. ಬಿ.ಎಲ್ ಅಷ್ಟೇ ಓದಿದವರು. ಆದರೆ ಅವರು ಬರೆದಿರುವಂತಹ ತೀರ್ಪುಗಳಲ್ಲಿರುವ ಇಂಗ್ಲಿಷ್ ಭಾಷಾ ಪ್ರೌಢಿಮೆಯನ್ನು ನೋಡಿದರೆ ಇಂದಿನ ಇಂಗ್ಲಿಷ್ ಎಂ.ಎ ಪಿಎಚ್.ಡಿ ಪದವೀಧರರೂ ಅವರ ಮಟ್ಟಕ್ಕೆ ಏರಲಾರರು! ಆ ಮಟ್ಟದ ಪ್ರೌಢಿಮೆ ಅವರಿಗೆ ಹೇಗೆ ಬಂತು! ಎಸೆಸೆಲ್ಸಿ ಮುಗಿದರೆ ಪಿಯುಸಿ, ಅದು ಮುಗಿದರೆ ಡಿಗ್ರಿ, ಅದರ ನಂತರ ಎಂ.ಎ. ಮುಂದೆ ನೌಕರಿ ಸಿಕ್ಕರೆ ಹೋಗುವುದು, ಸಿಗಲಿಲ್ಲವೆಂದರೆ ಪಿಎಚ್.ಡಿ.ಗೆ ರಿಜಿಸ್ಟರ್ ಮಾಡಿಸುವುದು! ಇಂತಹ ಗೊತ್ತು ಗುರಿಯಿಲ್ಲದ ಇಂದಿನ ಶಿಕ್ಷಣದಿಂದ ಪ್ರಯೋಜನವಿದೆಯೇ? ಎಸೆಸೆಲ್ಸಿ ಅಥವಾ ಪಿ.ಯು.ಸಿ ವರೆಗೆ ಮೂಲಭೂತ ಶಿಕ್ಷಣ ಆವಶ್ಯಕ. ಪಿ.ಯು.ಸಿ ನಂತರ ಬೇಕಿರಲಿ ಬಿಡಲಿ ಡಿಗ್ರಿ ಓದುವುದೇಕೆ ಎಂಬುದು ಅರ್ಥವಾಗುತ್ತಿಲ್ಲ, ಪಿ.ಯು.ಸಿ ನಂತರ ಮುಂದಿನ ಔದ್ಯೋಗಿಕ ಬದುಕಿಗೆ ಅವಶ್ಯವಾದ ಕೋರ್ಸ್ ಯಾವುದೆಂದು ನಿರ್ಧಾರ ಮಾಡಿ ಆಯ್ಕೆ ಮಾಡಿಕೊಳ್ಳಬೇಕು. ಆದರೆ ವಿಷಾದವೆಂದರೆ ಹಾಗೆ ಆಗುತ್ತಿಲ್ಲ.
ಎಪ್ಪತ್ತರ ದಶಕದಲ್ಲಿ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವಾಗ ನಮ್ಮ ಅನುಭವಕ್ಕೆ ಬಂದ ಸಂಗತಿಯೆಂದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಎಲ್ಲರೂ ಸಾರಾಸಗಟಾಗಿ ವಿಶ್ವವಿದ್ಯಾನಿಲಯದ ಶಿಕ್ಷಣಕ್ಕೆ ಮುಂದಾಗುವುದಿಲ್ಲ. ಉನ್ನತ ಶಿಕ್ಷಣದ ನಿಜವಾದ ಹಂಬಲವುಳ್ಳವರು ಮತ್ತು ಕ್ಷಮತೆಯುಳ್ಳವರು ಮಾತ್ರ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯುತ್ತಾರೆ. ಅಂತಹ ಬೌದ್ಧಿಕ ಕ್ಷಮತೆ ಇಲ್ಲದವರು ಮುಂದೆ ಕೈಗೊಳ್ಳುವ ಉದ್ಯೋಗಕ್ಕೆ ಅನುಸಾರವಾಗಿ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರವರ ಅಭಿರುಚಿಗೆ ಅನುಗುಣವಾಗಿ ಮುಂದಿನ ಓದಿನ ನಿರ್ಧಾರವಾಗುತ್ತದೆ. ಅಲ್ಲಿನ ಸರಕಾರಗಳೂ ಸಹ ಪದವೀಧರರ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಿ ಯಾವ ವಿಷಯದಲ್ಲಿ ತಜ್ಞರ ಕೊರತೆಯಿದೆ ಎಂಬುದನ್ನು ಸಮೀಕ್ಷೆ ಮಾಡುತ್ತವೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಕೊರತೆಯಿದೆಯೇ ಎಂಬುದನ್ನು ಸಮೀಕ್ಷೆ ನಡೆಸಿ ಅಂತಹ ಕೋರ್ಸುಗಳನ್ನು ಓದುವವರಿಗೆ ವಿದ್ಯಾರ್ಥಿ ವೇತನಗಳನ್ನು ನೀಡಿ ಪ್ರೋತ್ಸಾಹಿಸುತ್ತವೆ. ಇಡೀ ದೇಶವೇ ಒಂದು ಕುಟುಂಬವೆಂದು ಭಾವಿಸಿ ಕೊರತೆ ಇದ್ದದ್ದನ್ನು ಭರ್ತಿ ಮಾಡಲು ಪ್ರೋತ್ಸಾಹ ಕೊಡುತ್ತಾರೆ. ಕೈತುಂಬ ವೇತನ ಪಡೆಯುವ ಒಳ್ಳೆಯ ನೌಕರಿಯನ್ನು ಹಿಡಿಯಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಇರಲಿ, ಅದು ತಪ್ಪಲ್ಲ. ಆದರೆ ಅಂತಹ ಹುದ್ದೆಗೆ ಬೇಕಾದ ಜ್ಞಾನವನ್ನು ಗಳಿಸುವ ಪ್ರಯತ್ನ ಮಾಡುವವರು ನಮ್ಮಲ್ಲಿ ವಿರಳ. ಇಂದಿನ ಶಿಕ್ಷಣದಲ್ಲಿ ಜ್ಞಾನಪಿಪಾಸೆ ಕಂಡುಬರುತ್ತಿಲ್ಲ, ಬದಲಾಗಿ ಧನಪಿಪಾಸೆ ಎದ್ದು ಕಾಣುತ್ತದೆ. ಅರ್ಹತೆ ಪೂರ್ವಸಿದ್ದತೆಗಳಿಲ್ಲದಿದ್ದರೂ ಹಣಕ್ಕಾಗಿ ಎಲ್ಲರೂ ಹಪಹಪಿಸುವವರೇ! ವಿಶ್ವವಿದ್ಯಾನಿಲಯಗಳ ಲಾಂಛನಗಳಲ್ಲಿ "
"ನಹಿ ಜ್ಞಾನೇನ ಸದೃಶಂ ಪವಿತ್ರಮಿಹವಿದ್ಯತೇ" ಎಂದು ಮುಂತಾದ ಆದರ್ಶದ ಸೂಕ್ತಿಗಳು ಇದ್ದರೂ ಓದುವವರಲ್ಲಿ ಮಾತ್ರ "ಸರ್ವೇ ಗುಣಾಃ ಕಾಂಚನಮಾಶ್ರಯಂತಿ" ಎಂಬಂತಾಗಿದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 13.10.2016