ವೃತ್ತಿಶಿಕ್ಷಣಕ್ಕಿಂತಲೂ ದುಬಾರಿಯಾದ ಸಾಮಾನ್ಯಶಿಕ್ಷಣ!

  •  
  •  
  •  
  •  
  •    Views  

ವ್ಯಕ್ತಿಯ ಬದುಕಿನಲ್ಲಿ ವಿದ್ಯೆ ಕಲಿಯುವ ಹಂತವು ಅತಿ ಮುಖ್ಯವಾದುದು. ಮುಂದಣ ಬದುಕಿಗೆ ಬೇಕಾದ ಪೂರ್ವಸಿದ್ಧತೆ ಆಗಬೇಕಾದುದು ಈ ಹಂತದಲ್ಲಿಯೇ. ಪ್ರಾಚೀನ ಕಾಲದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಎಂಬ ನಾಲ್ಕು ಜೀವನಾವಸ್ಥೆಗಳಲ್ಲಿ ಗೃಹಸ್ಥನೇ ಆಗಲೀ ಸಂನ್ಯಾಸಿಯೇ ಆಗಲೀ ಅದಕ್ಕೆ ತಕ್ಕನಾದ ವಿದ್ಯೆಯನ್ನು ಆರಂಭಿಕ ಹಂತದಲ್ಲಿ ಸಂಪಾದಿಸುವುದು ಜೀವನಾದರ್ಶವಾಗಿತ್ತು. ಹಾಗೆ ನೋಡಿದರೆ ವಿದ್ಯೆಯನ್ನು ಸಂಪಾದಿಸುವುದು ಒಂದು ಜೀವನಾವಸ್ಥೆಗೆ ಸೀಮಿತವಾದುದಲ್ಲ; ಜೀವನದುದ್ದಕ್ಕೂ ಕಲಿಯಬೇಕಾದ್ದು. ಗುರುಕುಲದಲ್ಲಿ ವಿದ್ಯಾರ್ಜನೆಯನ್ನು ಮುಗಿಸಿ ಮನೆಗೆ ತೆರಳುವ ಸ್ನಾತಕನನ್ನು "ಸ್ವಾಧ್ಯಾಯಾನ್ಮಾ ಪ್ರಮದಃ" ಅಂದರೆ ನಿತ್ಯವೂ ತಪ್ಪದೆ ಓದು ಎಂದು ಉಪದೇಶಿಸುತ್ತಿದ್ದ ಗುರುವಿನ ಕಿವಿಮಾತು ತೈತ್ತರೀಯ ಉಪನಿಷತ್ತಿನಲ್ಲಿ ಬರುತ್ತದೆ. ಈಗ ನಿತ್ಯವೂ ವರ್ತಮಾನ ಪತ್ರಿಕೆಗಳನ್ನೇನೋ ಎಲ್ಲರೂ ಓದುತ್ತಾರೆ! ಆದರೆ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಜೀವನಕ್ಕೆ ಬೇಕಾದ ಪೂರ್ವಸಿದ್ಧತೆಯ ಓದು ನಿಜವಾಗಿಯೂ ಆಗುತ್ತಿದೆಯೇ ಎಂಬ ಪ್ರಶ್ನೆಗೆ ದೊರೆಯುವುದು "ಇಲ್ಲ" ಎಂಬ ನಿರಾಶಾದಾಯಕ ಉತ್ತರ.

ಜೀವನದ ಗತಿವಿಧಾನಗಳನ್ನು ರೂಪಿಸಬೇಕಾದ್ದು ಶಿಕ್ಷಣ. ಶಾಲೆಯ ಪಠ್ಯಗ್ರಂಥಗಳಿಂದಲೇ ಜ್ಞಾನ ದೊರೆಯುತ್ತದೆ ಎಂದು ಹೇಳಲಾಗದು. ಅದನ್ನು ಪಡೆಯುವ ವಾಂಛೆ ವಿದ್ಯಾರ್ಥಿಗೇ ಇಲ್ಲವಾದರೆ ಪಠ್ಯಗ್ರಂಥಗಳೇನು ಮಾಡಿಯಾವು! ಅಂತಹ ಜ್ಞಾನವು ವಿದ್ಯಾರ್ಥಿಗೆ ದೊರೆಯಬೇಕೆಂಬ ಧ್ಯೇಯವೂ ನಮ್ಮ ಶಿಕ್ಷಣ ಇಲಾಖೆಗೆ ಇದ್ದಂತಿಲ್ಲ. ಪರೀಕ್ಷಾ ಫಲಿತಾಂಶ ಕಡಿಮೆಯಾಯಿತೆಂದರೆ ಕೃಪಾಂಕಗಳನ್ನು ನೀಡಿ ಉತ್ತೀರ್ಣಗೊಳಿಸಿ ಫಲಿತಾಂಶವನ್ನು ಹೆಚ್ಚಿಸುವುದು ಯಾವ ಪುರುಷಾರ್ಥಕ್ಕಾಗಿ?

ಎಪ್ಪತ್ತರ ದಶಕದಲ್ಲಿ ಆಸ್ಟ್ರಿಯಾ ದೇಶದ ಆಫ್ರೋ-ಏಷ್ಯನ್ ಸಂಸ್ಥೆಯಿಂದ ಫೆಲೋಷಿಪ್ ಪಡೆದು ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಎರಡು ವರ್ಷಗಳ ಕಾಲ ಸಂಶೋಧನೋತ್ತರ ಅಧ್ಯಯನಕ್ಕೆಂದು ತೆರಳಿದ್ದಾಗ ಉದ್ದೇಶಿತ ಸಂಶೋಧನೆಗೆ ಮೊದಲು ಆರು ತಿಂಗಳ ಜರ್ಮನ್ ಭಾಷೆಯ ಒಂದು ಕೋರ್ಸಿಗೆ ಸೇರುವುದು ಕಡ್ಡಾಯವಾಗಿತ್ತು. ಈ ಮೊದಲೇ ಕಾಶಿಯಲ್ಲಿ ಜರ್ಮನ್ ಡಿಪ್ಲೊಮಾ ಮತ್ತು ಪುಣೆಯ ಮ್ಯಾಕ್ಸ್ ಮುಲ್ಲರ್ ಭವನದಲ್ಲಿ ಮೂರು ತಿಂಗಳ ಕಾಲ ಜರ್ಮನ್ ಭಾಷೆಯ ಅಧ್ಯಯನ ಮಾಡಿದ್ದರೂ ನಮ್ಮ ದೇಶದ ಪದವಿಗಳಿಗೆ ಅಲ್ಲಿ ಮಾನ್ಯತೆ ಇರಲಿಲ್ಲ. ಅದರಿಂದಾಗಿ ನಮ್ಮ ಉನ್ನತ ಸಂಶೋಧನಾ ವ್ಯಾಸಂಗದ ಕಾಲಾವಧಿ ಕುಂಠಿತವಾಗುತ್ತಿತ್ತು. ಈಗಾಗಲೇ ಜರ್ಮನ್ ಭಾಷೆಯನ್ನು ಕಲಿತಿರುವ ನಮಗೆ ಮೇಲ್ಕಂಡ ನಿಯಮವನ್ನು ಕಡ್ಡಾಯಗೊಳಿಸಬಾರದೆಂದು ಅಲ್ಲಿಯ ಭಾಷಾವಿಭಾಗದ ಪ್ರೊಫೆಸರನ್ನು ಕೇಳಿಕೊಂಡಾಗ ಅವರು ನಮಗೆ ನೇರವಾಗಿ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ನೀಡಿದರು. ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ಓದಲು ಬೇಕಾದ ಭಾಷಾಜ್ಞಾನ ನಮಗೆ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಅವರು ನಡೆಸಿದ ಪರೀಕ್ಷಾ ಕ್ರಮ ವಿಭಿನ್ನವಾಗಿತ್ತು. ಪೂನಾದಲ್ಲಿ ಓದಿದ ಯಾವ ಪಠ್ಯಪುಸ್ತಕವೂ ಅಲ್ಲಿರಲಿಲ್ಲ. ಪರೀಕ್ಷಾ ಕೊಠಡಿಯಲ್ಲಿ ಕುಳಿತಾಗ ಅವರು ಜರ್ಮನ್ ಭಾಷೆಯಲ್ಲಿರುವ ಯಾವುದೋ ಒಂದು ಪುಸ್ತಕದ ಆಯ್ದಭಾಗದ ಪ್ರತಿಲಿಪಿಯನ್ನು ಕೊಟ್ಟರು. ನಿಗದಿತ ಸಮಯದಲ್ಲಿ ಅದನ್ನು ಓದಿಕೊಳ್ಳಲು ಹೇಳಿ ನಂತರ ಪ್ರಶ್ನೆಪತ್ರಿಕೆಯನ್ನು ಕೊಟ್ಟು ನಮ್ಮಿಂದ ಉತ್ತರ ಪಡೆದರು. ಇದೇ ರೀತಿ ಕಿವಿಗೆ ಶ್ರವಣಯಂತ್ರವನ್ನು ಅಳವಡಿಸಿ ಜರ್ಮನ್ ಭಾಷೆಯಲ್ಲಿರುವ ಒಂದು ಸಂಭಾಷಣೆಯನ್ನು ಕೇಳುವಂತೆ ಮಾಡಿದರು. ನಂತರ ಪ್ರಶ್ನೆಪತ್ರಿಕೆಯನ್ನು ಕೈಯಲ್ಲಿ ಕೊಟ್ಟು ಪ್ರಶ್ನೆಗಳನ್ನು ಓದಿಕೊಳ್ಳಲು ಹೇಳಿ ಮತ್ತೆ ಆ ಸಂಭಾಷಣೆಯನ್ನು ಕೇಳುವಂತೆ ಮಾಡಿ ನಮ್ಮಿಂದ ಉತ್ತರ ಪಡೆದರು.ಹೀಗೆ ಜರ್ಮನ್ ಭಾಷೆಯ ಚಾಕ್ಷುಷ ಮತ್ತು ಶ್ರಾವಣ ಜ್ಞಾನ ಇದೆಯೇ ಎಂಬುದನ್ನು ಪರೀಕ್ಷಿಸಿ ನಮ್ಮನ್ನು ಉತ್ತೀರ್ಣಗೊಳಿಸಿದರು.

ಶಿಕ್ಷಣವು ಮೂರು ಸ್ತರಗಳಲ್ಲಿ ಪ್ರಭಾವವನ್ನು ಬೀರಬೇಕು. ಘನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ದಿನನಿತ್ಯದ ಬದುಕನ್ನು ಕಟ್ಟಿಕೊಡುವಲ್ಲಿ ಜೀವನ ನಿರ್ವಹಣೆಗೆ ಬೇಕಾದ ಉದ್ಯೋಗವನ್ನು ಪಡೆಯುವಲ್ಲಿ ನಮ್ಮ ಲಿಂಗೈಕ್ಯ ಗುರುವರ್ಯರು ವಿದ್ಯಾರ್ಥಿಗಳಿಗೆ “ವ್ಯಾವಹಾರಿಕ, ಔದ್ಯೋಗಿಕ ಮತ್ತು ಆಧ್ಯಾತ್ಮಿಕ” ಶಿಕ್ಷಣ ನೀಡುವ ಅಗತ್ಯವಿದೆ ಎಂದು ಹೇಳುತ್ತಿದ್ದರು. ಈ ಮೂರು ತೆರನಾದ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಶಿಕ್ಷಣದ ಅಗತ್ಯವೂ ಇದೆಯೆಂಬುದು ನಮ್ಮ ಭಾವನೆ. ಇಂದು ಶಾಲಾಕಾಲೇಜುಗಳಲ್ಲಿ ನೀಡುವ ಶಿಕ್ಷಣ ಬದುಕಿಗೆ ಎಳ್ಳಷ್ಟೂ ಸಹಕಾರಿಯಾಗಿಲ್ಲ. ಮುಂದೆ ಪದವೀಧರನಾಗಿ ಕೈಗೊಳ್ಳುವ ಉದ್ಯೋಗಕ್ಕೂ ಬಹಳಮಟ್ಟಿಗೆ ಸಂಬಂಧವಿಲ್ಲ. ಶಿಕ್ಷಣ, ಬದುಕು, ಉದ್ಯೋಗ ಎಂಬ ಅಂಶಗಳು ತ್ರಿಕೋನವಾಗಿ ರೂಪುಗೊಳ್ಳದೆ ಒಂದಕ್ಕೊಂದಕ್ಕೆ ಸಂಬಂಧವಿಲ್ಲದಂತೆ ಸಮಾನಾಂತರ ರೇಖೆಗಳಾಗಿ ಹರಿದು ತಮ್ಮ ಸಾರ್ಥಕ್ಯವನ್ನು ಕಳೆದುಕೊಂಡಿವೆ. ಶಿಕ್ಷಣವು ವ್ಯಕ್ತಿಯ ಮೇಲೆ ತನ್ನ ಛಾಪನ್ನು ಮೂಡಿಸಬೇಕು. ಅದು ಅವನ ದಿನನಿತ್ಯದ ಬದುಕಿನಲ್ಲಿ ಪ್ರತಿಫಲನವಾಗುವಂತಿರಬೇಕು. ಆದರೆ ಈಗ ಅದಾಗುತ್ತಿಲ್ಲ! ‘ಓದಿ ಓದಿ ಮರುಳಾದ ಕೂಚುಭಟ್ಟ" ಎಂಬ ಗಾದೆ ಮಾತಿನಂತಾಗಿದೆ. ದಾರ್ಶನಿಕ ಕವಿ ಸಿದ್ಧಯ್ಯ ಪುರಾಣಿಕರು ಹೇಳುವಂತೆ ಇಂದು “ವಿದ್ಯೆ ಬಂತು ಬುದ್ದಿ ಹೋಯ್ತು ಢುಂ, ಢುಂ" ಎನ್ನುವಂತಾಗಿದೆ. ವಿದ್ಯಾವಂತರು ಬುದ್ಧಿಗೇಡಿಗಳಾಗಿ ಕೈಯಲ್ಲಿ ಕೋವಿ ಹಿಡಿದು “ಢಂ, ಢಂ” ಎಂದು ಅಮಾಯಕರ ಹತ್ಯೆಗೈದು ಜಗತ್ತಿನ ಅಶಾಂತಿಗೆ ಕಾರಣರಾಗುತ್ತಿದ್ದಾರೆ.

ಬುದ್ಧಿಯು ಅರಿವನ್ನು ಪಡೆಯುವುದು ಇಂದ್ರಿಯಗಳ ಮೂಲಕ, ಕಣ್ಣು, ಕಿವಿ, ನಾಲಗೆ, ಮೂಗುಗಳು ನೀಡುವ ಸಂವೇದನೆಗಳ ಮೂಲಕ ಅರಿವು ಬುದ್ದಿಗೆ ಗೋಚರವಾಗುತ್ತದೆ. ಆದರೆ ಇಂದ್ರಿಯ ಜನ್ಯವಾದುದು ಮಾತ್ರ ಜ್ಞಾನವೆಂದು ಹೇಳಲಾಗದು. ಇಂದ್ರಿಯಗಳ ಅರಿವಿಗೆ ಸೀಮಿತ ಗಡಿ ಇರುತ್ತದೆ. ಕಣ್ಣಿಗೆ ಕಾಣದ ಘಟನೆಗಳು ದೂರದಲ್ಲಿ ಘಟಿಸಿದರೂ ಆಪ್ತವ್ಯಕ್ತಿಗಳ ಮೂಲಕವೋ ಮಾಧ್ಯಮಗಳ ಮೂಲಕವೋ ಅಂತಹ ಜ್ಞಾನ ಲಭಿಸುತ್ತದೆ. ಆ ಗಡಿಯಾಚೆಗೂ ಜ್ಞಾನದ ಕ್ಷಿತಿಜ ವಿಸ್ತಾರಗೊಳ್ಳುತ್ತದೆ. ಅಂತಹ ಅರಿವನ್ನು ಗಳಿಸುವ ತುಡಿತವುಳ್ಳ ಮನಃಸ್ಥಿತಿಯನ್ನು ವಿದ್ಯಾರ್ಥಿ ಪಡೆಯುವಂತೆ ಶಿಕ್ಷಣವು ಪ್ರಚೋದಿಸಬೇಕು.

ಹಿಂದೆ ಕುಲಕಸುಬುಗಳು ಕುಟುಂಬದ ನೆಲೆಗಟ್ಟಿನಲ್ಲಿ ಬರುತ್ತಿದ್ದವು. ತಮ್ಮ ತಂದೆ ಮಾಡುತ್ತಿದ್ದ ಕುಲಕಸುಬುಗಳನ್ನು ಮಕ್ಕಳು ನೋಡಿ ಕಲಿಯುತ್ತಿದ್ದರು. ಅದಕ್ಕಾಗಿ ಪ್ರತ್ಯೇಕ ತರಬೇತಿಯ ಅಗತ್ಯವೇ ಇರಲಿಲ್ಲ. ಮೀನಿನ ಮರಿ ಈಜು ಕಲಿಯುವಂತೆ ಸಹಜವಾಗಿ ಕುಲಕಸುಬುಗಳು ಕರಗತವಾಗುತ್ತಿದ್ದವು. ಹೀಗಾಗಿ ವೃತ್ತಿಕೌಶಲ್ಯವು ತಲೆಮಾರಿನಿಂದ ತಲೆಮಾರಿಗೆ ಸಲೀಸಾಗಿ ವರ್ಗಾವಣೆಗೊಳುತ್ತಿತ್ತು. ಬದುಕಿನ ಆರಂಭದಿಂದಲೇ ಉದ್ಯೋಗದ ಪರಿಣತಿ ಬಂದು ಬಿಡುತ್ತಿತ್ತು. ಕುಲಕಸುಬುಗಳಲ್ಲಿ ದೊರೆಯುತ್ತಿದ್ದ ಪರಿಣತಿ ಈಗ ಶಾಲಾ ಕಾಲೇಜುಗಳಲ್ಲಿ ದೊರೆಯುತ್ತಿಲ್ಲ.

ದುಬಾರಿ ವೆಚ್ಚ ಮಾಡಿಯೂ ಕೌಟುಂಬಿಕ ಹಾಗೂ ರಾಷ್ಟ್ರಜೀವನಕ್ಕೆ ಇಂದಿನ ಶಿಕ್ಷಣ ಸಹಾಯಕವಾಗುತ್ತಿದೆಯೇ ಎಂದರೆ ಇಲ್ಲ ಎಂದೇ ಹೇಳಬೇಕು. ಸಾಮಾನ್ಯವಾಗಿ ದುಬಾರಿ ಶಿಕ್ಷಣವೆಂದರೆ ವೈದ್ಯಕೀಯ ಅಥವಾ ತಾಂತ್ರಿಕ ಶಿಕ್ಷಣ ಎಂದು ಜನರು ಭಾವಿಸುತ್ತಾರೆ. ಅದು ಬಡವರಿಗಲ್ಲ, ಶ್ರೀಮಂತರಿಗೆ ಮಾತ್ರ ಎಂಬ ವಾದವಿದೆ. ಆದರೆ ವಾಸ್ತವವಾಗಿ ವೃತ್ತಿ ಶಿಕ್ಷಣಕ್ಕಿಂತಲೂ ಬಿ.ಎ., ಬಿ.ಎಸ್ಸಿ., ಎಂ.ಎ., ಎಂ.ಎಸ್ಸಿ ಮುಂತಾದ ಸಾಮಾನ್ಯ ಶಿಕ್ಷಣ ದುಬಾರಿ ಎಂದರೆ ನೀವು ಆಶ್ಚರ್ಯಗೊಳ್ಳಬಹುದು. ಈ ತರಗತಿಗಳಿಗೆ ಪಾಠ ಮಾಡುವ ಅಧ್ಯಾಪಕರುಗಳಿಗೆ ಕೊಡುವ ಯು.ಜಿ.ಸಿ ಶ್ರೇಣಿಯ ವೇತನ ಹಾಗೂ ಪೋಷಕರು ಮಾಡುವ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿದರೆ ಇದು ಸ್ಪಷ್ಟವಾಗುತ್ತದೆ. ಒಂದು ಕಾಲೇಜಿನಲ್ಲಿ 15 ಜನ ಅಧ್ಯಾಪಕರಿದ್ದಾರೆಂದು ಇಟ್ಟುಕೊಂಡರೂ ಒಬ್ಬರಿಗೆ ಒಂದು ಲಕ್ಷ ವೇತನವೆಂದು ಲೆಕ್ಕ ಹಿಡಿದರೆ ಮೂರು ವರ್ಷಗಳ ಅವಧಿಗೆ ವೇತನವೇ 5.4 ಕೋಟಿ ರೂ. ಗಳಾಗುತ್ತದೆ. ಈಗ ಎಂ.ಎ ಓದಿದವರೂ ಸಹ ಪ್ರಥಮ ದರ್ಜೆ ಗುಮಾಸ್ತ ಹುದ್ದೆಗೋ, ಪೊಲೀಸ್ ಕಾನ್ಸ್ ಟೇಬಲ್  ಹುದ್ದೆಗೋ ಅರ್ಜಿ ಹಾಕುತ್ತಾರೆ. ಉದ್ಯೋಗ ಸಿಕ್ಕರೆ ಸಾಕು ಎಂಬ ವಾಂಛೆಯಿಂದ! ಈ ಕೆಲಸಗಳಿಗೆ ಸೇರಲು ದೊಡ್ಡ ದೊಡ್ಡ ಡಿಗ್ರಿಗಳ ಅಗತ್ಯವಿಲ್ಲ, ಕೇವಲ ಪಿ.ಯು.ಸಿ ಸಾಕಾಗಿತ್ತು. ಅಂದ ಮೇಲೆ ಅವರನ್ನು ತಯಾರು ಮಾಡಲು ಸರಕಾರ ಮಾಡಿದ ಕೋಟ್ಯಂತರ ರೂ. ಗಳ ವೆಚ್ಚ ದುಬಾರಿಯಲ್ಲದೆ ಮತ್ತೇನು? ಈ ಹಿನ್ನೆಲೆಯಲ್ಲಿ ದೇಶದ ಬೊಕ್ಕಸಕ್ಕೆ ಸಾಮಾನ್ಯ ಶಿಕ್ಷಣ ದೊಡ್ಡಮಟ್ಟದಲ್ಲಿಯೇ ಕನ್ನ ಕೊರೆಯುತ್ತಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಕಾರಣಕ್ಕಾಗಿಯೇ ಏನೋ ಕರ್ನಾಟಕ ಸರಕಾರ ಪದವಿಕಾಲೇಜುಗಳ ಖಾಲಿ ಹುದ್ದೆಗಳನ್ನು ಭರ್ತಿಮಾಡಲು ಇನ್ನೂ ಅನುಮತಿ ನೀಡಿಲ್ಲ!

ರಾಷ್ಟ್ರಕವಿ ಕುವೆಂಪು ಹೇಳುವಂತೆ ಇಂದಿನ ನಮ್ಮ ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕೇ ಹೊರತು ಕೇವಲ ಭತ್ತ ತುಂಬಿದ ಚೀಲಗಳಾಗಿದ್ದಾರೆ! ಚೀಲಗಳು ತುಂಬಿದ ಭತ್ತವನ್ನು ಹಿಡಿದಿಟ್ಟುಕೊಳಬಲ್ಲವೇ ಹೊರತು ಸೃಷ್ಟಿಸಲಾರವು! ವಾಸ್ತವವಾಗಿ ನಮ್ಮ ಲಿಂಗೈಕ್ಯ ಗುರುವರ್ಯರು ಹೇಳುವಂತೆ ಇಂದಿನ ಕಾಲೇಜು ವಿದ್ಯಾರ್ಥಿಗಳು ತುಂಬಲೂ ಬಾರದ ತೂತಿನ ಚೀಲಗಳಾಗಿದ್ದಾರೆ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 27.10.2016