ರೈತರ ಬಾಳಿಗೆ ನಿರಾಧಾರವಾದ 'ಆಧಾರ್!'
ಸಿಗರೇಟು ಪ್ಯಾಕಿನ ಮೇಲೆ "Smoking is injurious to health" (ಧೂಮಪಾನ ಆರೋಗ್ಯಕ್ಕೆ ಹಾನಿಕರ) ಎಂಬ ಶಾಸನಬದ್ದ ಎಚ್ಚರಿಕೆಯನ್ನು ಕಂಪನಿಯವರು ಮುದ್ರಿಸಿರುತ್ತಾರೆ. ಈ ರೀತಿ ಮುದ್ರಿಸಬೇಕೆಂಬ ಕಾನೂನನ್ನು ಮಾಡಿರುವುದು ಸರಕಾರ. ತಮ್ಮ ಉದ್ದಿಮೆಗೆ ವಿರುದ್ಧವಾದ ಈ ಎಚ್ಚರಿಕೆಯ ಮಾತನ್ನು ಕಂಪನಿಯವರು ನಿಯಮಪಾಲನೆಗಾಗಿ ಮುದ್ರಿಸುತ್ತಾರೆಯೇ ಹೊರತು ಜನರ ಆರೋಗ್ಯದ ಕಾಳಜಿಯಿಂದ ಅಲ್ಲ. ಸರಕಾರಕ್ಕೂ ಅಂತಹ ಕಾಳಜಿ ಇದೆಯೆಂದು ನಂಬಲು ಸಾಧ್ಯವಿಲ್ಲ. ಧೂಮಪಾನಿಗಳು ಈ ಎಚ್ಚರಿಕೆಯ ನುಡಿಗಟ್ಟನ್ನು ಓದಿದ ಮೇಲೂ ಸಿಗರೇಟು ಸೇದುವುದನ್ನು ಬಿಡುವುದಿಲ್ಲ ಎಂಬುದು ಸಿಗರೇಟ್ ಕಂಪನಿಗೂ ಗೊತ್ತು, ಸರಕಾರಕ್ಕೂ ಗೊತ್ತು!
ಇದೇ ರೀತಿ ಆಧಾರ್ ಕಾರ್ಡ್ ಮೇಲೆ “ಭವಿಷ್ಯದಲ್ಲಿ ಸರಕಾರ ಮತ್ತು ಸರಕಾರೇತರ ಸೇವೆಗಳನ್ನು ಪಡೆಯುವುದಕ್ಕಾಗಿ ಆಧಾರ್ ನಿಮಗೆ ನೆರವಾಗುವುದು” ಎಂದು ಮುದ್ರಿಸಲಾಗಿದೆ. ಈ ಘೋಷಣೆ ಸಿಗರೇಟ್ ಪ್ಯಾಕಿನ ಮೇಲಿನ ಘೋಷಣೆಯಂತೆ "ಶಾಸ್ತ್ರಕ್ಕೆ ಮಾತ್ರ! ಸರಕಾರಕ್ಕೆ ಅದರ ಮೇಲೆ ವಿಶ್ವಾಸವಿದ್ದಂತೆ ತೋರುವುದಿಲ್ಲ. ಇಲಾಖೆಯಿಂದ ಬರಪರಿಹಾರವನ್ನು ಪಡೆಯಲು ರೈತರು ಒಟ್ಟು ಆರು ದಾಖಲೆಗಳನ್ನು ಗ್ರಾಮಲೆಕ್ಕಿಗರಿಗೆ ಸಲ್ಲಿಸಬೇಕು: ಚುನಾವಣಾ ಗುರುತು ಪತ್ರ, ರೇಶನ್ ಕಾರ್ಡು, ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಭಾವಚಿತ್ರ, ಈ ದಾಖಲೆಗಳಲ್ಲದೆ ಕೈ ಬೆಚ್ಚಗೆ ಮಾಡಬೇಕೆಂಬ ಮತ್ತೊಂದು ಮುಖ್ಯವಾದ ಅಲಿಖಿತ ನಿಯಮವಿದೆ! ಈ ದಾಖಲೆಗಳನ್ನು ಪಡೆದ ಗ್ರಾಮಲೆಕ್ಕಿಗರು ಮಾಡುವುದಿಷ್ಟೇ: ಅದರ ಮೇಲೊಂದು ಸೀಲು ಒತ್ತಿ ಕೊಟ್ಟು ರೈತರನ್ನೇ ತಾಲ್ಲೂಕು ಕಛೇರಿಗೆ ಅಟ್ಟುತ್ತಾರೆ. ತಾಲ್ಲೂಕು ಕಛೇರಿಯಲ್ಲಿಯೂ ಸಹ ಇದರ ಪುನಾರಾವರ್ತನೆ. ಹೀಗೆ ಅಧಿಕಾರಿಗಳ ಕೈ ಬೆಚ್ಚಗೆ ಮಾಡಲು, ಜೆರಾಕ್ಸ್ ಮಾಡಿಸಲು, ಫೋಟೋ ತೆಗೆಸಲು, ಇಲಾಖೆಗಳ ಕಂಬದಿಂದ ಕಂಬಕ್ಕೆ ಅಲೆದಾಡಲು ಮಾಡಬೇಕಾದ ವೆಚ್ಚ ಲೆಕ್ಕ ಹಾಕಿದರೆ ರೈತನಿಗೆ ಉಳಿಯುವ ಹಣ "ಅರೆಕಾಸಿನ ಮಜ್ಜಿಗೆ"!
ಆಧಾರ್ ಕಾರ್ಡನ್ನಾಗಲೀ, ಪಹಣಿಯನ್ನಾಗಲೀ ರೈತ ಏಕೆ ಕೊಡಬೇಕು? ಈ ದಾಖಲೆಗಳು ಸರಕಾರದಲ್ಲಿಯೇ ಇರುವಾಗ ತನ್ನಲ್ಲಿಯೇ ಇರುವ ದಾಖಲೆಗಳನ್ನು ನೋಡಿಕೊಳ್ಳದೆ ಅವುಗಳ ದೃಢೀಕೃತ ಪ್ರತಿಗಳನ್ನು ತನಗೆ ಸಲ್ಲಿಸಬೇಕೆಂಬುದು ಅಧಿಕಾರಶಾಹಿಯ ದುರ್ವರ್ತನೆ. ಆಧಾರ್ ಕಾರ್ಡಿನಲ್ಲಿಯೇ ಫೋಟೋ ಇರುವಾಗ ಮತ್ತೇಕೆ ಇನ್ನೊಂದು ಫೋಟೋ ಸಲ್ಲಿಸಬೇಕು? ಸರಕಾರವೇ ಸಿದ್ಧಪಡಿಸಿರುವ "ಭೂಮಿ" ತಂತ್ರಾಂಶದಲ್ಲಿಯೇ ಜಮೀನು ಖಾತೆದಾರನ ಮಾಹಿತಿ ಇರುವಾಗ ರೈತ ಮತ್ತೇಕೆ ಪಹಣಿಯನ್ನು ಸಲ್ಲಿಸಬೇಕು? ಬ್ಯಾಂಕ್ ಖಾತೆಯಲ್ಲಿಯೇ ಆಧಾರ್ ಕಾರ್ಡ್ ನಂಬರ್ ನಮೂದಾಗಿರುವಾಗ ಮತ್ತೇಕೆ ಪಾಸ್ ಬುಕ್ ಪ್ರತಿಯನ್ನು ರೈತ ಸಲ್ಲಿಸಬೇಕು? ಇದೆಲ್ಲಾ ಮೊದಲೇ ಬರದಿಂದ ತತ್ತರಿಸಿದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗುವುದಿಲ್ಲವೇ?
ಸರಕಾರದ ಬಳಿ ಹಿಂದಿನ ಹತ್ತು ವರ್ಷಗಳ ಬೆಳೆ ಮಾಹಿತಿಯೇನೋ ಇದೆ. ಆದರೆ ಇದು ಸಂಪೂರ್ಣ ಬೋಗಸ್ ಎನ್ನುವುದು ಅಧಿಕಾರಿಗಳಿಗೂ ಗೊತ್ತಿದೆ. ಗ್ರಾಮ ಲೆಕ್ಕಿಗರು ನೀಡಿದ ಈ ಮಾಹಿತಿ ರೈತರ ಹೊಲಗಳಿಗೆ ಹೋಗದೆ ಆಫೀಸಿನಲ್ಲಿಯೇ ಕುಳಿತು ಕಾಟಾಚಾರಕ್ಕೆ "ಸಂತೆಯ ಹೊತ್ತಿಗೆ ಮೂರು ಮೊಳ ನೆಯ್ದ ಹರಕಲು ಹಚ್ಚಡದ ನೂಲು!" ಈ ವರ್ಷದ ಮಾಹಿತಿ ಇನ್ನೂ ಸರ್ಕಾರಕ್ಕೆ ತಲುಪಿಲ್ಲ; ತಾಲ್ಲೂಕು ಕಛೇರಿಗಳಲ್ಲೋ, ಜಿಲ್ಲಾಧಿಕಾರಿಗಳ ಕಛೇರಿಗಳಲ್ಲೋ ಧೂಳು ತಿನ್ನುತ್ತಾ ಬಿದ್ದಿದೆ! ಮಾಹಿತಿ ಅಂದಾಕ್ಷಣ ನಮಗೆ ಎಲ್ಲಿಯೋ ಓದಿದ ಒಂದು ಪ್ರಹಸನ ನೆನಪಾಗುತ್ತದೆ.
ಒಮ್ಮೆ ಪಾರ್ಲಿಮೆಂಟಿನಲ್ಲಿ ಸಂಸದರೊಬ್ಬರು ಒಂದು ಪ್ರಶ್ನೆಯನ್ನು ಕೇಳಿದರು: “ನಮ್ಮ ದೇಶದಲ್ಲಿ ಇರುವ ಶೌಚಾಲಯಗಳ ಒಟ್ಟು ಸಂಖ್ಯೆ ಎಷ್ಟು?” ಪ್ರಶ್ನೆ ಬಹಳ ಸರಳ; ಆದರೆ ಬಂದ ಉತ್ತರ ಮಾತ್ರ ಅಚ್ಚರಿ ಮೂಡಿಸುವಂತಹದು. ಕೇಂದ್ರ ಸರಕಾರ ಈ ಮಾಹಿತಿಯನ್ನು ಒದಗಿಸಲು ಎಲ್ಲಾ ರಾಜ್ಯಗಳಿಂದಲೂ ಕೋರಿತು. ರಾಜ್ಯ ಸರಕಾರಗಳು ತಂತಮ್ಮ ರಾಜ್ಯದ ಜಿಲ್ಲಾಧಿಕಾರಿಗಳನ್ನೂ, ಜಿಲ್ಲಾಧಿಕಾರಿಗಳು ತಾಲ್ಲೂಕು ಅಧಿಕಾರಿಗಳನ್ನೂ, ಅವರು ಗ್ರಾಮ ಪಂಚಾಯಿತಿಗಳನ್ನೂ ಮಾಹಿತಿ ಒದಗಿಸುವಂತೆ ಕೋರಿದರು. ತಮ್ಮ ಗ್ರಾಮದಲ್ಲಿ ಒಂದೂ ಶೌಚಾಲಯವಿಲ್ಲದಿದ್ದರೂ ಗ್ರಾಮ ಲೆಕ್ಕಿಗರು ಊರಿನ ಮರ್ಯಾದೆ ಉಳಿಸಲು "ನಮ್ಮೂರಿನಲ್ಲಿ 4 ಶೌಚಾಲಯಗಳಿವೆ" ಎಂದು ವರದಿ ಮಾಡಿದರು. ಹೀಗೆ ಬಂದ ಅಂಕಿಗಳನ್ನು ತಾಲ್ಲೂಕು ಕಛೇರಿ ಅಧಿಕಾರಿಗಳು ತೀರಾ ಕಡಿಮೆ ಸಂಖ್ಯೆಯಾಗುತ್ತದೆಯೆಂದು ದ್ವಿಗುಣಗೊಳಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದರು. ಜಿಲ್ಲೆಯ ಮರ್ಯಾದೆ ಉಳಿಸಲು ಕ್ರೋಢೀಕೃತ ಸಂಖ್ಯೆಯನ್ನು ಹೆಚ್ಚು ಮಾಡಿ ಸರಕಾರಕ್ಕೆ ಕಳಿಸಲಾಯಿತು. ರಾಜ್ಯಮಟ್ಟದಲ್ಲಿಯೂ ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ಆ ಅಂಕಿಸಂಖ್ಯೆಗಳನ್ನು ದ್ವಿಗುಣಗೊಳಿಸಿ ಕೇಂದ್ರಕ್ಕೆ ಕಳಿಸಲಾಯಿತು. ಕೊನೆಗೆ ಪಾರ್ಲಿಮೆಂಟಿನಲ್ಲಿ ಅಂಕಿಸಂಖ್ಯೆ ಪ್ರಕಟಿಸುವಾಗ ಅಶ್ಚರ್ಯ ಕಾದಿತ್ತು. ಅಷ್ಟೊಂದು ಬೃಹತ್ ಸಂಖ್ಯೆಯ ಶೌಚಾಲಯಗಳನ್ನು ಕಟ್ಟಲು ದೇಶದಲ್ಲಿ ಜಾಗವೇ ಇರಲಿಲ್ಲ, ಇಡೀ ದೇಶವೇ ಬೃಹತ್ ಶೌಚಾಲಯವಾಗಿತ್ತು!
ಬರಪೀಡಿತ ಪ್ರದೇಶವೆಂದು ಘೋಷಿಸಲು ತಾಲ್ಲೂಕನ್ನು ಒಂದು ಘಟಕವನ್ನಾಗಿ ಈಗ ಪರಿಗಣಿಸಲಾಗುತ್ತಿದೆ ಇದು ಅವೈಜ್ಞಾನಿಕ. ಆಗಸದಲ್ಲಿ ಸಂಚರಿಸುವ ಮಳೆಯ ಮೋಡಗಳಿಗೆ ತಾಲ್ಲೂಕಿನ ಗಡಿಬಾಂದುಗಳೇನು ಗೊತ್ತು? ಆಡಳಿತದ ಅನುಕೂಲಕ್ಕೆ ತಕ್ಕಂತೆ ಸರಕಾರ ಮಾಡಿಕೊಂಡ ತಾಲೂಕುಗಳನ್ನು ಗಮನದಲ್ಲಿರಿಸಿಕೊಂಡು ಮೋಡಗಳು ಮಳೆ ಸುರಿಸುವುದಿಲ್ಲ, ತಾಲ್ಲೂಕಿನ ಹೆಚ್ಚಿನ ಭಾಗಗಳಲ್ಲಿ ಮಳೆಯಾದರೆ ಮಳೆಯಾಗದ ಹಳ್ಳಿಗಳ ರೈತರಿಗೆ ಪರಿಹಾರ ಸಿಗುವುದಿಲ್ಲ, ಬರಪೀಡಿತ ತಾಲ್ಲೂಕು ಎಂದು ಘೋಷಣೆಯಾದ ತಾಲ್ಲೂಕಿನಲ್ಲಿ ಚೆನ್ನಾಗಿ ಮಳೆಯಾದ ಭೂಭಾಗದ ಹಳ್ಳಿಗರಿಗೂ ಬರಪರಿಹಾರ ನೀಡಬೇಕಾಗುತ್ತದೆ. ತಾಲ್ಲೂಕಿನ ಯಾವುದೋ ಭೂಭಾಗದ ಸ್ಥಿತಿಗತಿಯನ್ನು ಎಲ್ಲ ಹಳ್ಳಿಗಳಿಗೂ ಅನ್ವಯಿಸುವುದು ಸರಿಯಲ್ಲ, ಬರಪೀಡಿತ ಪ್ರದೇಶವೆಂದು ಘೋಷಿಸಲು ವ್ಯಾಪಕ ಪ್ರದೇಶವಾದ ತಾಲ್ಲೂಕನ್ನು ಘಟಕವನ್ನಾಗಿರಿಸಿಕೊಳ್ಳದೆ ಸೀಮಿತ ಪ್ರದೇಶವುಳ್ಳ ಪಂಚಾಯಿತಿಗಳನ್ನು ಮಾನದಂಡವಾಗಿರಿಸಿಕೊಂಡು ಬರಪೀಡಿತ ಪಂಚಾಯಿತಿಯೆಂದು ಘೋಷಿಸುವುದು ಸೂಕ್ತ ಒಂದು ತಾಲೂಕಿನಲ್ಲಿ ಸರ್ವೇ ಸಾಮಾನ್ಯವಾಗಿ 30 ರಿಂದ 35 ಪಂಚಾಯಿತಿಗಳಿರುತ್ತವೆ. ಪಂಚಾಯಿತಿಯನ್ನು ಘಟಕವನ್ನಾಗಿ ಪರಿಗಣಿಸಿ ಈ ಘೋಷಣೆ ಮಾಡುವುದರಿಂದ ಅನವಶ್ಯಕ ಆರ್ಥಿಕ ಹೊರೆ ತಗ್ಗುವುದಲ್ಲದೆ ಬಹುಪಾಲು ಸಂತ್ರಸ್ತ ರೈತರಿಗೆ ನೆರವು ಸಿಕ್ಕಂತಾಗುತ್ತದೆ.
ಬೆಳೆವಿಮೆಯ ನಿಯಮಗಳಲ್ಲಿ ಏಳು ವರ್ಷಗಳ ಸರಾಸರಿ ಇಳುವರಿಯನ್ನು ಲೆಕ್ಕಕ್ಕೆ ಹಿಡಿದು "ಹೊಸ್ತಿಲ ಇಳುವರಿ" (threshold yield) ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತಿದೆ. ಈ ಏಳು ವರ್ಷಗಳಲ್ಲಿ ಬರಗಾಲವೆಂದು ಘೋಷಿಸಿದ ಎರಡು ವರ್ಷಗಳನ್ನು ಮಾತ್ರ ಅದೂ ಸರಾಸರಿ ಇಳುವರಿಗಿಂತ ಕಡಿಮೆ ಇದ್ದರೆ ಕಳೆದು ಲೆಕ್ಕ ಹಾಕಲಾಗುತ್ತಿದೆ. ಎರಡು ವರ್ಷಗಳಿಗಿಂತ ಹೆಚ್ಚು ವರ್ಷಗಳು ಬರಗಾಲ ಬಂದಿದ್ದರೆ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಏಳು ವರ್ಷಗಳಲ್ಲಿ ಐದು ವರ್ಷ ಬರಗಾಲ ಬಂದಿದ್ದರೆ ಎರಡು ವರ್ಷಗಳಿಗೆ ಮಾತ್ರ ವಿನಾಯಿತಿ ನೀಡಿ ಉಳಿದ ವರ್ಷಗಳ ಸರಾಸರಿ ಇಳುವರಿ ಆಧಾರದ ಮೇಲೆ "ಹೊಸ್ತಿಲ ಇಳುವರಿ" ನಿಗದಿಪಡಿಸಿ ಪರಿಹಾರ ನೀಡುವುದು ಹೆಗ್ಗಳಿಕೆಯ ವಿಷಯವೇನೂ ಅಲ್ಲ, ಬರಗಾಲದ ಇಳುವರಿ ಆಧರಿಸಿ ನೀಡುವ ಬೆಳೆಪರಿಹಾರ ರೈತರಿಗೆ ಬರೆ ಎಳೆದಂತಾಗುತ್ತದೆ.
ಬೆಳೆಯ ಮಾಹಿತಿಯನ್ನು ಪಡೆಯಲು ಸರಕಾರ ಗ್ರಾಮಲೆಕ್ಕಿಗರನ್ನು ನಂಬಿ ಕುಳಿತರೆ ಆಗುವುದಿಲ್ಲ. ಅವರು ರೈತರೂ ಅಲ್ಲ, ಕಂಪ್ಯೂಟರ್ ತಜ್ಞರಂತೂ ಮೊದಲೇ ಅಲ್ಲ; ಕಲಿಯಬೇಕೆಂಬ ಉತ್ಸಾಹವೂ ಅವರಲ್ಲಿಲ್ಲ. ಸರಕಾರವು ಈಗಾಗಲೇ ಸಿದ್ದಪಡಿಸಿರುವ "ಭೂಮಿ" ತಂತ್ರಾಂಶದಲ್ಲಿಯೇ ರೈತರ ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿ ಸೇರ್ಪಡೆಯಾಗುವಂತೆ ಮಾಡಬೇಕು. ಈಗ ತಂತ್ರಜ್ಞಾನ ಬಹಳ ಮುಂದುವರಿದಿದ್ದು ಒಬ್ಬ ಭಿಕ್ಷುಕನ ಹತ್ತಿರವೂ ಮೊಬೈಲ್ ಇದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಇತ್ತೀಚೆಗೆ ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಖಾಸಗಿಯಾಗಿ ಸಮಾಲೋಚನೆ ನಡೆಸಿದಂತೆ ಒಂದು ವಿಶೇಷ ಮೊಬೈಲ್ App ಸಿದ್ಧಪಡಿಸಿದರೆ ರೈತನೇ ನೇರವಾಗಿ ತನ್ನ ಮೊಬೈಲಿನಿಂದ ಬೆಳೆ ಮಾಹಿತಿಯನ್ನು ಸರಕಾರಕ್ಕೆ ರವಾನಿಸಬಹುದು. ಹೀಗೆ ಮಾಡುವುದರಿಂದ ಬಿತ್ತನೆ ಹಂಗಾಮು ಮುಗಿಯುವುದರೊಳಗೆ ರಾಜ್ಯದ ಎಲ್ಲ ರೈತರು ಯವ್ಯಾವ ಬೆಳೆಯನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆಂಬ ವಿವರ ಸರಕಾರದ ಬಳಿ ಇರುತ್ತದೆ.
“ಸರ್ವೇ ಜನಾಃ ಸುಖಿನೋ ಭವಂತು" ಎಂಬುದು ಉಪನಿಷತ್ ವಾಣಿ, ಎಲ್ಲರೂ ಸುಖವಾಗಿರಬೇಕೆಂದರೆ ದೇಶದ ಅನ್ನದಾತನಾದ ರೈತ ಮೊದಲು ಸುಖವಾಗಿರಬೇಕು. ರೈತ ಸುಖವಾಗಿದ್ದರೆ ಕೃಷಿಯನ್ನು ಅವಲಂಬಿಸಿದ ದೇಶದ ಬದುಕು ಚೇತರಿಸಿಕೊಳ್ಳುತ್ತದೆ. ರೈತ ಸತ್ತಮೇಲೆ ಪರಿಹಾರ ಕೊಡುವುದಕ್ಕಿಂತ ಅವನು ಬದುಕಿದ್ದಾಗಲೇ ಸುಖವಾಗಿರುವಂತೆ ನೋಡಿಕೊಳ್ಳುವುದು ಸರಕಾರದ ಆದ್ಯ ಕರ್ತವ್ಯ.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 10.11.2016